Sunday, December 11, 2011

ಮಡೇಸ್ನಾನ ನಿಷೇದಕ್ಕೆ ಅಷ್ಟಮಂಗಳ ಪ್ರಶ್ನೆ ಬೇಕಾ?



ರಾಮನಾಥಪುರದ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆಯ ದಿನದಂದು ಎಂಜಲು ಎಲೆ ಮೇಲೆ ಉರುಳುವ ಸೇವೆ ಇದೆ ! ತಕ್ಷಣವೇ ಅದಕ್ಕೊಂದು ಕರೆಕ್ಷನ್ ಹಾಕಿದ ಗೆಳೆಯ "ಆದ್ರೆ ಅಲ್ಲಿ ಬ್ರಾಹ್ಮಣರು ಉಂಡ ಎಲೆಗಳ ಮೇಲೆ, ಬ್ರಾಹ್ಮಣರೇ ಉರುಳುತ್ತಾರೆ" ಎಂದು ನಸುನಕ್ಕ. ಶಾಕ್ ಆಗುವ ಸರದಿ ನನ್ನದು. ಅದೇ ದಿನ ಹಾಸನದ ಮಿತ್ರರೊಬ್ಬರು ಫೋನಾಯಿಸಿ ನಗರದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲೂ ಅಪೇಕ್ಷೆ ಈಡೇರಿಕೆಗಾಗಿ ಬರಿಯ ನೆಲದ ಮೇಲೆ ಊಟ ಮಾಡುವ ಪದ್ದತಿ ಇದೆ ಎಂದರು. ಆಮೇಲೆ ಹುಡುಕುತ್ತಾ ಹೋದರೆ ಇಂತಹ ವಿವಿಧ ಅನಾಗರಿಕ ಪದ್ದತಿಗಳು ನಮ್ಮ ಸುತ್ತಲೂ ಸಂಪ್ರದಾಯದ ಹೆಸರಿನಲ್ಲಿ ಚಾಲ್ತಿಯಲ್ಲಿರುವುದು ಅರಿವಿಗೆ ಬಂದು ದಿಗಿಲಾಯ್ತು. ಇದೆಲ್ಲದಕ್ಕಿಂತ ಹೆಚ್ಚು ವಿಷಾಧಭಾವ ಮೂಡಿಸಿದ ಸಂಗತಿ ಹಿರಿಯ ಸಚಿವ ವಿ ಎಸ್ ಆಚಾರ್ಯ ಹೇಳಿಕೆ. ಮಡೇಸ್ನಾನ ನಿಷೇದಿಸುವ ಕುರಿತು ಅಷ್ಟಮಂಗಳ ಪ್ರಶ್ನೆಯ ನಂತರ ನಿರ್ಧರಿಸಲಾಗುವುದಂತೆ, ಹಾಗೆಯೇ ಸಾಂಪ್ರಾದಾಯಿಕ ಪದ್ದತಿಗಳ ಆಚರಣೆ ಜನರ ಹಕ್ಕು ಅದಕ್ಕೆ ಅಡ್ಡಿ ಉಂಟು ಮಾಡಬಾರದಂತೆ ! ಇದು ಜವಾಬ್ದಾರಿಯುತ ಸಚಿವರುಗಳು  ಹಾಗೂ ಸಿಎಂ ಡೀವಿ ಮಾತನಾಡುವ ಪರಿ. ಕಳೆದ 15ದಿನಗಳಿಂದ ಮಡೇ ಸ್ನಾನ ಪರ/ವಿರೋಧ ಚರ್ಚೆಗಳು ನಡೆಯುತ್ತಿವೆ. ಅವರವರ ಮೂಗಿನ ನೇರಕ್ಕೆ ವಿಚಾರವನ್ನ ಚರ್ಚೆಗೆ ತಂದಿದ್ದಾರೆ. ಇರಲಿ ಇಂತಹದ್ದೊಂದು ಅನಿಷ್ಠ ಸಂಪ್ರದಾಯ ಕುರಿತ ಚರ್ಚೆ ನಾಗರಿಕ ಸಮಾಜದ ನಾಗರೀಕರಿಗೆ ಅಗತ್ಯವೇ ಆಗಿದೆ. 
         ಭಾರತ ದೇಶ ಹೇಳಿ ಕೇಳಿ ಸಾಂಪ್ರದಾಯಿಕ ಆಚರಣೆಗಳನ್ನು ಹೊಂದಿದ, ವಿವಿಧ ಧರ್ಮಗಳನ್ನು ಹೊಂದಿದ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ. ಈ ನಡುವೆಯೇ ನಾಗರಿಕ ಸಮಾಜಕ್ಕೆ ವಿರುದ್ದವಾದ ಆಚರಣೆಗಳನ್ನು ಕಾಲಘಟ್ಟಕ್ಕೆ ತೊರೆಯದೇ ಹಾಗೆಯೇ ಉಳಿಸಿಕೊಂಡು ಬರಲಾಗಿದೆ. ಭಾರತೀಯ ಪರಂಪರೆಯನ್ನು ಅತ್ಯಂತ  ಪುರಾತನವಾದ ನಾಗರಿಕೆತೆಯನ್ನು ಹೊಂದಿದ ರಾಷ್ಟ್ರವೆಂದು ಗುರುತಿಸಲಾಗುತ್ತದೆ. ಭಾರತೀಯ ಪರಂಪರೆಗೆ 8000ವರ್ಷಗಳಷ್ಟು ಹಳೆಯ ಇತಿಹಾಸವಿರುವುದನ್ನು ಕಾಣಬಹುದು. ವರ್ಗಬೇಧ, ಜಾತೀಯತೆ ಮತ್ತಿತರ ಅನಿಷ್ಟ ಸಂಪ್ರದಾಯಗಳ ವಿರುದ್ದ ಅನೇಕ ಸಮಾಜ ಸುಧಾರಕರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಹೀಗಿರುವಲ್ಲಿ ಕಾಲ ಕಳೆದಂತೆ ಒಂದೊಂದೆ ಅನಿಷ್ಠ ಸಂಕೋಲೆಗಳು ಕಳಚುತ್ತಾ ಬಂದಿವೆ. ಹಿಂದಿನ ಕಾಲ ಘಟ್ಟದಲ್ಲಿ ಅರಿವಿನ ಕೊರತೆಯಿಂದಾಗಿ ಅನಾಗರಿಕ ಆಚರಣೆಗಳನ್ನು ಪೋಷಿಸಿಕೊಂಡು ಬರಲಾಗಿತ್ತಾದರೂ ಕಾಲಘಟ್ಟದ ಬದಲಾವಣೆಯಿಂದ ಅಲ್ಲೆಲ್ಲ ಹೊಸತನದ ಅರಿವು ಮೂಡುತ್ತಿದೆ. 
          ಮೊನ್ನೆ ಸುಬ್ರಹ್ಮಣ್ಯ ದೇಗುಲದಲ್ಲಿ ಚಂಪಾ ಷಷ್ಠಿಯಂದು ನಡೆಯುತ್ತಿದ್ದ ಮಡೆಸ್ನಾನವನ್ನು ವಿರೋಧಿಸಿದ ಶಿವರಾಂ ಎಂಬುವವರಿಗೆ ಮನಸ್ಸೋ ಇಚ್ಚೆ ಸಾರ್ವಜನಿಕವಾಗಿಯೇ ಥಳಿಸಲಾಗಿದೆ, ಸಾಲದ್ದು ಎಂಬಂತೆ ದೇಗುಲದ ಮುಂದೆ ಭಕ್ತಾದಿಗಳ ಹೆಸರಿನ ಅನಾಗರಿಕರು ಮಡೇಸ್ನಾನದ ಪರವಾಗಿ ಭಾರಿ ಪ್ರತಿಭಟನೆಯನ್ನು ನಡೆಸಿದ್ದಾರೆ, ರಾಜ್ಯ ಸರ್ಕಾರ ತನ್ನದೇ ಆಡಳಿತದ ಸ್ಥಳೀಯ ಸಹಾಯಕ ಆಯುಕ್ತರು ನಿಷೇದಿಸಿದ ಮಡೇಸ್ನಾನವನ್ನು ಬೆಂಬಲಿಸಲು ಮೀನ ಮೇಷ ಎಣಿಸುತ್ತಾ, ಎಸಿ ಆದೇಶವನ್ನು ರದ್ದುಗೊಳಿಸಿ ಅಧಿಕೃತವಾಗಿ ಮಡೇಸ್ನಾನಕ್ಕೆ ಅವಕಾಶ ಮಾಡಿದೆ. ಮುಖ್ಯಮಂತ್ರಿ ಮತ್ತು ಸಚಿವರುಗಳು ಮಡೇಸ್ನಾನ ನಿಷೇಧಕ್ಕೆ ಅಷ್ಟಮಂಗಳ ಪ್ರಶ್ನೆಯನ್ನು ಕಾಯುವುದಾದರೆ ಅವರು ದೇಶದ ಕಾನೂನಿಗೆ, ಸಂವಿಧಾನಕ್ಕೆ ಕೊಡುವ ಗೌರವವೇನು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಭಾವನಾತ್ಮಕ ವಿಚಾರಗಳು ನಾಗರೀಕತೆಯ ಚೌಕಟ್ಟಿನಲ್ಲಿರಬೇಕೆ ವಿನಹ ಎಲ್ಲೆಯನ್ನು ಮೀರುವಂತಾಗಬಾರದಲ್ಲವೇ?
             ಧೃಶ್ಯ ಮಾಧ್ಯಮವೊಂದರ ವರದಿಗಾರ ಅದೇ ಛಾನಲ್ ಗೆ ಸಂಬಂಧಿಸಿದ ಪತ್ರಿಕೆಯಲ್ಲಿ ಮಡೆ ಸ್ನಾನದ ಪರವಾಗಿ ವಿಚಾರ ಮಂಡಿಸುತ್ತಾ "ಈ ಸಂಪ್ರದಾಯ ಮುಂದುವರಿಯಬೇಕು ಇಲ್ಲವಾದರೆ ನಾವು ರಥ ಕಟ್ಟುವುದಿಲ್ಲ ಅಂತ ಪಟ್ಟು ಹಿಡಿದದ್ದು ಮಲೆಕುಡಿಯ ಜನಾಂಗದವರೇ ಹೊರತು ಮೇಲ್ಜಾತಿಯವರಲ್ಲ ಎನ್ನುತ್ತಾರೆ ಆದರೆ ಆದರೆ ಅನಿಷ್ಠ ಪದ್ದತಿಯನ್ನು ಜೀವಂತವಾಗಿಡುವ ಉದ್ದೇಶದಿಂದ ಮಲೆಕುಡಿಯರಂತಹ ಅಮಾಯಕ ಜನರನ್ನು ಕಾಲ ಕಾಲಕ್ಕೆ ಪಾಲಿಶ್ ಮಾಡಿ ಅನುಕೂಲಕ್ಕೆ ಬಳಸುವಂತಹ ಪಟ್ಟಭದ್ರ ಹಿತಾಸಕ್ತಿಗಳಿಗೆ ನಾಗರೀಕತೆಯ ಅರಿವಿಲ್ಲವೇ?  ಅದೇ ರೀತಿ ನೆಲದ ಮೇಲೆ ಊಟ ಮಾಡುವುದು ಮುಖ್ಯ ಪ್ರಾಣನಿಗೆ ಸಲ್ಲಿಸುವ ಸೇವೆಯಂತೆ ಇದಕ್ಕೆ ಉಡುಪಿ ಮಠದಲ್ಲಿ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲವಂತೆ ಹಾಗೆಂದ ಮಾತ್ರಕ್ಕೆ ಇಂತಹದ್ದನ್ನು ಪುರಸ್ಕರಿಸಬೇಕೆ? ಇದ್ಯಾವ ಸೀಮೆಯ ನಾಗರೀಕ ಪದ್ದತಿ? ಇದಕ್ಕೆ ಶುಲ್ಕ ಬೇರೆ ಬೇಕಿತ್ತಾ?  ಮಡೇಸ್ನಾನ ತೀರಾ ವೈಯುಕ್ತಿಕವಾದ ಸೇವೆ ದೇವರ ಮಾಮೂಲು ಸೇವಾ ಪಟ್ಟಿಯಲ್ಲಿ ಇದು ಸೇರಿಲ್ಲ ಎನ್ನಲಾಗುತ್ತದೆ ಹಾಗಾದರೆ ಚಂದ್ರಗುತ್ತಿಯ ಬೆತ್ತಲೆ ಸೇವೆ ತೀರಾ ವೈಯುಕ್ತಿಕ ಮತ್ತು ಭಾವನಾತ್ಮಕವಾದುದು, ಉತ್ತರ ಕರ್ನಾಟಕದಲ್ಲಿ ಬಸವಿ ಬಿಡುವ ಪದ್ದತಿ ವೈಯುಕ್ತಿಕವಾದುದು ಹೀಗೆ ಹೇಳುತ್ತಾ ಹೋದರೆ ಹಲವಾರು ಅನಿಷ್ಠ ಸಂಪ್ರದಾಯಗಳನ್ನು ಪಟ್ಟಿ ಮಾಡಬಹುದು. ಇವತ್ತು ನಾವೆಲ್ಲ ಯಾವ ಕಾಲ ಘಟ್ಟದಲ್ಲಿದ್ದೇವೆ? ವೈಜ್ಞಾನಿಕ ಅವಿಷ್ಕಾರಗಳು ಕಣ್ಣ ಮುಂದಿವೆ ಹೀಗಿದ್ದರೂ ಇಂತಹ ಮೂಡನಂಬಿಕೆಗಳ ಆಚರಣೆ ಬೇಕಾ ಎಂಬ ಪ್ರಶ್ನೆ ಮೂಡುತ್ತದೆ,. ಇದೇ ಲೇಖನದಲ್ಲಿ ಸದರಿ ವರದಿಗಾರ ಒಂದು ಪ್ರಶ್ನೆ ಮುಂದಿಡುತ್ತಾನೆ ಬಕ್ರಿದ್ ದಿನ ಕುರಿ ಕಡಿಯುವುದು ನಂಬಿಕೆಯ ಬಾಗ, ದೀಪಾವಳಿಗೆ ಕೋಳಿ ಬಲಿ ನೀಡುವುದು ಸಂಪ್ರದಾಯ ಅದೇ ರೀತಿ ಮಡೇಸ್ನಾನ ದಕ್ಷಿಣ ಕನ್ನಡದ ನಂಬಿಕೆ ಎಂದು ವಿತಂಡವಾದವನ್ನು ಮುಂದಿಡುತ್ತಾನೆ. ಕುರಿ-ಕೋಳಿ ಬಲಿ ಅನಾಗರಿಕ ಕೃತ್ಯವೆಂದೇ ಕಾಣಬಹುದು ಆದರೆ ಅದು ಆಹಾರ ಸೇವನೆಯ ಅನಿವಾರ್ಯ ಭಾಗ, ಮಾಂಸಹಾರ ಇಲ್ಲದಿದ್ದರೆ ಜಗತ್ತಿನ ಬಹುತೇಕ ರಾಷ್ಟ್ರಗಳ ಜನರು ಹಸಿವಿನಿಂದ ಸಾಯುವುದನ್ನು ಕಾಣಬೇಕಿತ್ತು, ಅಷ್ಟಕ್ಕೂ ಸಸ್ಯಾಹಾರಿಗಳ ಸೇವಿಸುವ ಗೋವಿನ ಹಾಲು ಮಾಂಸಜನ್ಯವಾದುದೇ ಅಲ್ಲವೇ ಆಗ ಅದು ಸಸ್ಯಾಹಾರ ಹೇಗಾದಿತು ?
       ಅನಾಗರಿಕ ಕೃತ್ಯಗಳನ್ನು ಬೆಂಬಲಿಸುವ ಭರದಲ್ಲಿ ವಿತಂಡ ವಾದಗಳು ಮತ್ತು ಸಮಂಜಸವಲ್ಲದ ತರ್ಕಗಳು ಹಾದಿ ತಪ್ಪಿಸುತ್ತವೆಯೇ ವಿನಹ ಸರಿಯಾದ ಪರಿಹಾರೋಪಾಯ ಕಂಡು ಕೊಳ್ಳಲಾಗುವುದಿಲ್ಲ. ಆರೋಗ್ಯವಂತ ಸಮಾಜದ ನಡೆಗೆ ಆರೋಗ್ಯವಂತ ಚಿಂತನೆಗಳು ಮಾತ್ರ ಬೇಕು ಅದು ನಾಗರೀಕತೆಯ ಲಕ್ಷಣವಾಗುತ್ತದೆ ಆದರೆ ತರ್ಕಕ್ಕೆ ಪ್ರತಿ ತರ್ಕ ಎಂದು ಮುಂದುವರೆದರೆ ಅದಕ್ಕೆ ಸರಿಯಾದ ಪರಿಹಾರ ದೊರಕಲಾರದು. ಸರ್ಕಾರವೂ ಕೂಡ ಮಡೇಸ್ನಾನ ಮತ್ತು ಮಡೇಸ್ನಾನದಂತಹ ಅನಿಷ್ಠ ಆಚರಣೆಗಳನ್ನು ನಿಷೇದಿಸುವಲ್ಲಿ ಸಂವಿದಾನದ ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕೆ ವಿನಹ ಅಷ್ಟಮಂಗಳ ಪ್ರಶ್ನೆಯ ಮೂಲಕ ಅಲ್ಲ ಎಂಬುದನ್ನು ಅರಿಯಬೇಕಲ್ಲವೇ?

Sunday, November 27, 2011

ಭ್ರಷ್ಟಾಚಾರದ ವಿರುದ್ದ, ನಿಮ್ಮೊಂದಿಗೆ ನಾವಿದ್ದೇವೆ!

ದೇಶದ ಒಬ್ಬ ಸಾಮಾನ್ಯ ನಾಗರೀಕ ವ್ಯವಸ್ಥೆಯ ವಿರುದ್ದ ತಿರುಗಿ ಬೀಳುತ್ತಿದ್ದಾನೆ ಪರಿಣಾಮ ಕೇಂದ್ರದ ಮಂತ್ರಿಯಾಗಿರುವ ಶರದ್ ಪವಾರ್ ನಂತಹವರಿಗೆ ಕಪಾಳ ಮೋಕ್ಷವಾಗಿದೆ. ಒಂದು ಕ್ಷಣ ಅವಾಕ್ಕಾಗಿ ನಂತರ ಏನೂ ನಡೆದೆ ಇಲ್ಲವೇನೋ ಎಂಬಂತೆ ಆತನೇನೋ ನಡೆದು ಹೋಗಿದ್ದಾನೆ, ಆದರೆ ವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಆತನ ಕಪಾಳಕ್ಕೆ ಬಾರಿಸಿದ ಹರ್ವಿಂದರ್ ಸಿಂಗ್ ದೇಶದ ಜನರ ಸಧ್ಯದ ಮನಸ್ಥಿತಿಯ ಪ್ರತೀಕವಾಗಿ ಗೋಚರಿಸಲಾರಂಭಿಸಿದ್ದಾನೆ. ಪ್ರಕರಣ ಕುರಿತು ಅಣ್ಣಾ ಹಜಾರೆಯನ್ನು ಪ್ರಶ್ನಿಸಿದರೆ "ಹೌದಾ ! ಒಂದೇ ಕೆನ್ನೆಗೆ ಏಟು ಬಿತ್ತಾ ಎಂದು ಪ್ರಶ್ನಿಸಿದ್ದಾರೆ" ಅಂದರೆ ನಾವೆಲ್ಲಿಗೆ ತಲುಪಿದ್ದೇವೆ ಅಥವಾ ಎಂಥ ಪರಿಸ್ಥಿತಿ ನಮ್ಮೆದುರಿಗಿದೆ ಎಂಬುದರ ದರ್ಶನ ಮಾಡಿಸುತ್ತದೆ.  ಘಟನೆಯನ್ನು ಟೀವಿಯಲ್ಲಿ ನೋಡಿದ ಜನ ಅದನ್ನು ಒಂದು ಪ್ರಹಸನದಂತೆ ವೀಕ್ಷಿಸಿದ್ದರೆ , ದೇಶದ ರಾಷ್ಟ್ರೀಯ ಖಾಸಗಿ ವಾಹಿನಿಗಳು ಗಂಭೀರವಾಗಿ ಚರ್ಚೆಗೂ ತಂದಿವೆ. ಕೆಲವೇ ಮಂದಿ ಪ್ರಜ್ಞಾವಂತರು ಆತಂಕ ವ್ಯಕ್ತಪಡಿಸಿದ್ದಾರೆ, ರಾಜಕೀಯ ಪಕ್ಷಗಳು ತಮಗೆ ಸಂಬಂಧಿಸಿಲ್ಲವೆಂದು ಮುಗುಮ್ಮಾಗಿವೆ. ಇದು ತಳ್ಳಿಹಾಕುವ ವಿಚಾರವಲ್ಲ ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ ಎಂಬುದನ್ನು ಅರಿಯಬೇಕು.

ಈ ದೇಶದ ಸಾಮಾನ್ಯ ಜನತೆ ಗಮನಿಸಬೇಕು, ಜಾಗತೀಕರಣದ ಬಿಸಿ ದೇಶದ ಎಲ್ಲ ವ್ಯಾವಹಾರಿಕ ವಲಯಗಳನ್ನು ಆಪೋಶನ ತೆಗೆದುಕೊಳ್ಳಲಾರಂಭಿಸುತ್ತಿದ್ದಂತೆ ಚಿಲ್ಲರೆ ವಹಿವಾಟು ವಲಯದಲ್ಲೂ ಜಾಗತಿಕ ವ್ಯವಹಾರದ ಅವಕಾಶಗಳನ್ನು ನೀಡಲಾಗುತ್ತಿದೆ. ಅಭಿವೃದ್ದಿಯ ನೆಪದಲ್ಲಿ ದೇಶದ ಬೆನ್ನೆಲುಬಾದ ರೈತರ ಕೃಷಿ ಭೂಮಿಯನ್ನು ಕಿತ್ತು ಉದ್ದಿಮೆ ದಾರರಿಗೆ ಹೂಡಿಕೆದಾರರಿಗೆ ಡಿ ನೋಟೀಫೈ ಮಾಡುತ್ತಿರುವುದಾರಿಂದ ದೇಶದ ಆರ್ಥಿಕ ಪರಿಸ್ಥಿತಿ ಅಯೋಮಯವಾಗುತ್ತಿದೆ.ಆಹಾರ ಪದಾರ್ಥಗಳ ಉತ್ಪಾದನೆ ಕುಂಠಿತವಾಗಿದೆ, ದುಡಿಯುವ ಕೈಗಳಿಗೆ ಉದ್ಯೋಗವಿಲ್ಲದಂತಾಗಿದೆ, ಶಿಕ್ಷಣ,ಆರೋಗ್ಯಸೇವೆಗಳು ಮಾರಾಟದ ಸರಕಾಗಿವೆ,  ರೂಪಾಯಿಯ ಬೆಲೆ ಡಾಲರ್ ಎದುರು ಕುಸಿದಿದೆ. ದಿನಬಳಕೆ ಪದಾರ್ಥಗಳ ಬೆಲೆ ಏರಿಕೆ ಯದ್ವಾ ತದ್ವಾ ಏರಿದೆ, ಪೆಟ್ರೋಲು, ಡಿಸೆಲ್, ಅಡುಗೆ ಅನಿಲದ ಬೆಲೆ ತಿಂಗಳಿಗೆ, 15ದಿನಕ್ಕೆ ದಿಕ್ಕು ದೆಸೆಯಿಲ್ಲದಂತೆ ಏರುತ್ತಿದೆ.ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಅವಕಾಶಗಳು ಬಿಸಿಲ್ಗುದುರೆಯಾಗಿದೆ.ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಜನತೆ ಬದುಕು ಸಾಗಿಸುವುದು ಹೇಗೆ?
         ಜನಸಾಮಾನ್ಯರ ಸಂಕಷ್ಠಗಳನ್ನು ಸರ್ಕಾರಗಳು ಕೇಳುತ್ತಿಲ್ಲ, ವಿರೋಧ ಪಕ್ಷಗಳು ಆಲಿಸುತ್ತಿಲ್ಲ, ಧ್ವನಿಯೆತ್ತುತ್ತಿಲ್ಲ, ಹೀಗಿರುವಾಗ ಜನಸಾಮಾನ್ಯ ತಾನೆ ಏನು ಮಾಡಿಯಾನು? ಹರ್ವಿಂದರ್ ಸಿಂಗ್ ಇಂತಹ ಸಮಸ್ಯೆಗಳ ಪ್ರತಿನಿಧಿಯಾಗಿ ಒಬ್ಬ ಟ್ರಕ್ ಚಾಲಕನಾಗಿ ತನ್ನ ಅಸಹನೆಯನ್ನು ಹೊರಹಾಕಿದ್ದಾನೆ. ಆತ ಹೊರ ಹಾಕಿದ ಆಕ್ರೋಶ ನಾಗರೀಕತೆಯ ಲಕ್ಷಣವಾಗಿಲ್ಲದಿರ ಬಹುದು ಆದರೆ  ಅದು ಅನಿವಾರ್ಯದ ಸಂಕೇತವೂ ಹೌದಲ್ಲವೇ? ಉಸಿರುಗಟ್ಟಿದ ವಾತಾವರಣದಲ್ಲಿ ಸಾಮಾನ್ಯ ನಾಗರಿಕ ಇನ್ನೇನು ತಾನೆ ಮಾಡಲು ಸಾಧ್ಯ?
           ಇಂತಹ ದುಸ್ಥಿತಿಗೆ ಭ್ರಷ್ಟಾಚಾರವೂ ಮೂಲ ಕಾರಣವೆಂಬುದರಲ್ಲಿ  ಎರಡು ಮಾತಿಲ್ಲ, ಸಧ್ಯ ಅಣ್ಣಾ ಹಜಾರೆ ಗೆ ಮಾತು ಕೊಟ್ಟಂತೆ ಕೇಂದ್ರ ಸರ್ಕಾರ ಪರಿಷ್ಕೃತ ಜನಲೋಕಪಾಲ ಮಸೂದೆಯನ್ನು ಈಗ ನಡೆಯುತ್ತಿರುವ  ಸಂಸತ್   ನಲ್ಲಿ ಮಂಡಿಸಲಿದೆ, ಈ ಸನ್ನಿವೇಶದಲ್ಲಿ ಭ್ರಷ್ಟಾಚಾರ ದವಿರುದ್ದ ರಾಜ್ಯದಲ್ಲಿ ಜನರನ್ನು ಸಂಘಟಿಸಿ ನೇತೃತ್ವ ವಹಿಸಿದ್ದ ಮಾಜ  ಿಲೋಕಾಯುಕ್ತಸಂತೋಷ್    ಹೆಗಡೆಯವರ ವಿರುದ್ದ ಬಿಜೆಪಿ ಸೇರಿದಂತೆ ಇತರೆ ರಾಜಕೀಯ ಪಕ್ಷಗ ಳು ಮನೋಸಾಮರ್ತ್ಯ  ಕುಂದಿಸುವರೀತಿಯಲ್ಲಿ ನಡೆದುಕೊಳ್ಳುತ್ತಿವೆ. ವಿನಾಕಾರಣದ ಆಪಾದನೆಗಳನ್ನು ಮಾಜಿ ಸಿ ಎಂ ಯಡಿಯೂರಪ್ಪ ಮಾಡುತ್ತಿದ್ದಾರೆ. ಗಣಿ ದುಡ್ಡು ತಿಂದ ಕೆಲ ಪತ್ರಕರ್ತರು ಸಂತೋಷ್ ಹೆಗಡೆಯವರನ್ನು ವಿನಾಕಾರಣ ಹಳಿಯುವ ವರದಿಗಳನ್ನು ಪ್ರಕಟಿಸುತ್ತಾ ಸಾರ್ವಿಜನಿಕವಾಗಿ ಅಸಹ್ಯ ಸೃಷ್ಟಿಸುತ್ತಿದೆ, ಇಂತಹ ಸನ್ನಿವೇಶದಲ್ಲಿ ಸಂತೋಷ್ ಹೆಗಡೆಗೆ ನೈತಿಕ ಸ್ತ್ಐರ್ಯ ತುಂಬುವ ಕೆಲಸ ಆಗಬೇಕಾಗಿದೆ. ಭ್ರಷ್ಟಾಚಾರದ ವಿರುದ್ದದ ಹೋರಾಟ ಕ್ಕೆ ಬೆಂಬಲಿಸುವ ನಿಟ್ಟಿನಲ್ಲಿ ಹಾಸನ ಪ್ರಗತಿ ಪರ ಚಿಂತಕರು "ಸಂತೋಷ್ ಹೆಗಡೆ ಭಾವಚಿತ್ರಗಳನ್ನು ಸಾರ್ವಜನಿಕ ಸ್ಥಳದಲ್ಲಿ ಹಾಕಿ  ವಿಚಾರಬೆಂಬಲ ಪಡೆಯುವ ಆಂಧೋಲನ ಆರಂಭಿಸಿದ್ದಾರೆ. ಅದೇ ರೀತಿ ನೀವು ನಿಮ್ಮೂರಿನಲ್ಲಿ ಭ್ರಷ್ಟಾಚಾರದ ವಿರುದ್ದ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಘೋಷಣಾ ಫಲಕದ ಸಂತೋಷ್ ಹೆಗಡೆ ಚಿತ್ರವನ್ನು ಹಾಕ ಬಹುದಲ್ಲವೇ?

Sunday, November 6, 2011

ಕನ್ನಡದ ಹಿರಿಮೆ ಗೊತ್ತೇ?ನ್ರಿ

ಕನ್ನ ಡ ಪ್ರೀತಿ ಎಂದರೇನು? ಕನ್ನಡ ಹಾಡು ಕೇಳೋದು, ಸಿನಿಮಾ ನೋಡೋದು, ಪುಸ್ತಕ ಓದೋದು, ಕನ್ನಡ ಮಾತನಾಡೋದು, ಕನ್ನಡದಲ್ಲಿ ಬರೆಯುವುದು ಎಲ್ಲಾ ಸರಿ ಆದರೆ ಕನ್ನಡದಲ್ಲಿ ಕಲಿಯುವುದು ಎಂಬ ಮಾತಿಗೆ ಮಾತ್ರ ಹೆಚ್ಚಿನ ಪುಷ್ಠಿ ಸಿಗುತ್ತಿಲ್ಲ. ಕನ್ನಡ ಭಾಷೆ ಅಳಿವು ಉಳಿವು ಕುರಿತು ಬೆರಳೇಣಿಕೆಯ ಮಂದಿ ಮಾತ್ರ ಪ್ರತಿಭಟನೆಗೆ ಮುಂದಾಗುವುದು, ಆಸಕ್ತಿ ವಹಿಸುವುದು ಕೆಲವರಿಗೆ ಮಾತ್ರ ಸೀಮಿತವಾದಂತಿದೆ. ಕನ್ನಡಿಗರಲ್ಲಿ ನೈಜವಾದ ಸ್ವಾಭಿಮಾನ ಭಾಷೆ-ಸಂಸ್ಕೃತಿಯ ಬಗೆಗೆ ಪ್ರೀತಿ ಇದ್ದಿದ್ದರೆ ಇವತ್ತಿನವರೆಗೂ ಭಾಷೆಯ ಉಳಿವಿಗೆ ಹೋರಾಡಬೇಕಾದಂತಹ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ. ನಮ್ಮ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ 2011ರ ಜುಲೈ ತಿಂಗಳಲ್ಲಿಯೇ ಲಬಿಸಿದ್ದರೂ ಕೊಂಗರ ಕಿತಾಪತಿಯಿಂದ ಪೂರಕ ಚಟುವಟಿಕೆಗ ಳಿಗೆ ಹಿನ್ನೆಡೆ ಉಂಟಾಗಿದೆ.  ಈ ಸಂಧರ್ಭದಲ್ಲಾದರೂ ಈ ಕುರಿತು ಅವಲೋಕನವಾಗ ಬೇಕಾಗಿದೆ.
            ನಮ್ಮ ಅನ್ನದ ಭಾಷೆ ಕಸ್ತೂರಿ ಕನ್ನಡದ ಬಗೆಗೆ ಒಂದಿಷ್ಟು ಅರಿಯೋಣ.ಕನ್ನಡ ಭಾಷೆ ಭಾರತದ ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ಭಾಷೆ, ಸುಮಾರು 50ಮಿಲಿಯನ್ ಜನ ಜಾಗತಿಕವಾಗಿ ಕನ್ನಡ ಭಾಷೆ ಮಾತನಾಡುತ್ತಾರೆ, ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಬಳಸಲ್ಪಡುವ ಭಾಷೆಯಾಗಿ ಕನ್ನಡಕ್ಕೆ 27ನೇ ಸ್ಥಾನವಿದೆ. ಕನ್ನಡ ತನ್ನ ಒಡಲಲ್ಲಿ ತುಳು, ಕೊಡವ, ಬ್ಯಾರಿ ಮತ್ತು ಕೊಂಕಣಿ ಭಾಷೆಗಳಿಗೆ ಮಾತೃ ಸ್ಥಾನದಲ್ಲಿದೆ. 1600ವರ್ಷಗಳಷ್ಟು ಹಳೆಯದಾದ ಇತಿಹಾಸ ಹೊಂದಿರುವ ಕನ್ನಡ ಬಾಷೆಯ ಬರವಣಿಗೆ ಪ್ರಾಕಾರ ಆರಂಭವಾಗಿದ್ದು 5ಮತ್ತು 6ನೇ ಶತಮಾನದಲ್ಲಿ. ಕನ್ನಡದ ಪ್ರಥಮ ಶಾಸನ ಹಲ್ಮಿಡಿ ಶಾಸನ ಸಿಕ್ಕ ಮೇಲೆ ಸುಮಾರು 30000ಸಾವಿರಕ್ಕೂ ಹೆಚ್ಚು ಕನ್ನಡದ ಶಾಸನಗಳು ಸಿಕ್ಕಿದ್ದು ಕನ್ನಡದ ಅಸ್ತಿತ್ವ ಎಷ್ಟು ಹಳೆಯದು ಎಂಬುದನ್ನು ಸಾರಿ ಸಾರಿ ಹೇಳುತ್ತವೆ. ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿದ್ದು 9ಮತ್ತು 10ನೇ ಶತಮಾನದಲ್ಲಿದ್ದ ರಾಷ್ಟ್ರಕೂಟರ ಆಡಳಿತದಲ್ಲಿ. ಕನ್ನಡದಲ್ಲಿ ಬಂದಷ್ಟು ಸಾಹಿತ್ಯ ಪ್ರಾಕಾರಗಳು ಜಗತ್ತಿನ ಯಾವ ಭಾಷೆಯಲ್ಲೂ ಬಂದಿರಲಾರದು. ಕನ್ನಡದಲ್ಲಿ ದ್ವಿಪದಿಗಳು, ತ್ರಿಪದಿಗಳು,ವಚನ ಸಾಹಿತ್ಯ, ರಗಳೆ, ವ್ಯಾಕರಣ, ಜೈನಸಾಹಿತ್ಯ,ಭಕ್ತಿ ಸಾಹಿತ್ಯ, ದಾಸ ಸಾಹಿತ್ಯ, 15ನೇ ಶತಮಾನ ದಲ್ಲಿ ಬಂದ ಕರ್ನಾಟಕ ಸಂಗೀತ ಪರಂಪರೆ ಹೊಸ ಮೈಲುಗಲ್ಲನ್ನೇ ಸೃಷ್ಟಿಸಿದೆ. 20ನೇ ಶತಮಾನದ ಆಧುನಿಕ ಕನ್ನಡ ಪರಂಪರೆಯಲ್ಲಿ ನವೋದಯ ಸಾಹಿತ್ಯ,ನವ್ಯೋತ್ತರ ಸಾಹಿತ್ಯ, ದಲಿತ ಬಂಡಾಯ ಸಾಹಿತ್ಯ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಮತ್ತು ಸಾಮಾಜಿಕ ಪರಂಪರೆಯನ್ನು ಶ್ರೀಮಂತ ಗೊಳಿಸಿರುವುದಷ್ಟೇ ಅಲ್ಲ ಸೂಕ್ಷ್ಮ ಸಂವೇದನೆಯ ಮೂಲಕ ಜಾಗತಿಕ ಭೂಪಟದಲ್ಲಿ "ಕನ್ನಡ" ಹೊಸ ಸಂಚಲನವನ್ನೇ ಉಂಟುಮಾಡಿದೆ. ಕನ್ನಡದ ಸಾಹಿತಿಗಳಿಗೆ ಇತರೆಲ್ಲ ಭಾಷೆಯ ಸಾಹಿತಿಗಳಿಗಿಂತ ಅತೀ ಹೆಚ್ಚಿನ ಎಂದರೆ 8 ಜ್ಞಾನಪೀಠಿಗಳನ್ನು ಪಡೆದಿದೆ. 52ಕ್ಕೂ ಹೆಚ್ಚು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳನ್ನ ಪಡೆದಿದೆ.
              ಕರ್ನಾಟಕ ರಾಜ್ಯದಲ್ಲಿಯೇ ಕನ್ನಡ ಭಾಷೆಯನ್ನು ೨೦ ಶೈಲಿಗಳಲ್ಲಿ ಮಾತನಾಡುವುದನ್ನು ಕಾಣಬಹುದು. ಅವುಗಳಲ್ಲಿ ವಿಶಿಷ್ಠವಾದುದು ಕುಂದಾಪುರದ ಕುಂದಕನ್ನಡ, ನಾಡವ ಕನ್ನಡ, ಹವ್ಯಕರ ಹವಿಗನ್ನಡ, ಅರೆಭಾಷೆ, ಸೋಲಿಗ ಭಾಷೆ, ಬಡಗ, ಗುಲ್ಬರ್ಗ ಕನ್ನಡ, ದಾರವಾಡ ಕನ್ನಡ, ರಾಯಚೂರು ಕನ್ನಡ, ಮೈಸೂರು ಕನ್ನಡ, ಮಂಡ್ಯ ಕನ್ನಡ, ಮಂಗಳೂರು ಕನ್ನಡ, ಚಿತ್ರದುರ್ಗ ಕನ್ನಡ, ಕೊಳ್ಳೆಗಾಲದ ಭಾಷೆ ಹೀಗೆ ವೈವಿಧ್ಯವಿದೆ. ಯಕ್ಷಗಾನ, ಭರತನಾಟ್ಯ, ಕರ್ನಾಟಕ ಸಂಗೀತ ಜಗತ್ತಿಗೆ ಕರ್ನಾಟಕದ ಹೆಮ್ಮೆಯ ಕೊಡುಗೆ. ಬೇಲೂರು-ಹಳೆಬೀಡು,ಹಂಪೆ, ಶ್ರವಣಬೆಳಗೊಳ,ಪಟ್ಟದಕಲ್ಲು-ಐಹೊಳೆ,ಗೋಲಗುಮ್ಮಟ ದಂತಹ ಅಂತರ ರಾಷ್ಟ್ರೀಯ ಸ್ಮಾರಕಗಳು, ಶ್ರೇಷ್ಠ ಕವಿಗಳು,ಅರಸ ಪರಂಪರೆ, ಮುತ್ಸದ್ದಿ ರಾಜಕಾರಣಿಗಳು, ಕ್ರೀಡಾಪಟುಗಳು, ನಟರು,ನಿರ್ದೇಶಕರು, ಕಲಾವಿದರು ನಮ್ಮಲ್ಲಿದ್ದಾರೆ.


           ಇಂತಹದ್ದೊಂದು ಶ್ರೀಮಂತ ಪರಂಪರೆ ಇದ್ದಾಗ್ಯೂ ನಮಗೇಕೇ ಇಂತಹ ದುರ್ಗತಿ? ಕರ್ನಾಟಕ ರಾಜ್ಯ ಪ್ರಾಕೃತಿದತ್ತವಾಗಿ ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದೆ ಹಾಗಾಗಿ ಬಹಳ ಹಿಂದಿನಿಂದಲೂ ಅಕ್ಕಪಕ್ಕದ ರಾಜ್ಯದವರು ಉತ್ತರ ಭಾರತದ ಮಂದಿ ಅಂದರೆ ಆಂಧ್ರ ವಾಳ್ಳುಗಳು,ತಮಿಳು ಕೊಂಗರು,ರಾಜಾಸ್ಥಾನದ ಸೇಟುಗಳು, ಮರಾಠಿಗಳು, ಬಿಹಾರಿಗಳು, ಬಂಗಾಲಿಗಳು, ಮಲೆಯಾಳಿಗಳು, ಉತ್ತರಪ್ರದೇಶದವರು ಹೀಗೆ ಸಮಸ್ತರು ಇಲ್ಲಿ ಬಂದು ನೆಲೆಗೊಂಡರು. ಈ ನಡುವೆ ಜಾಗತೀಕರಣದ ಭೂತದಿಂದಾಗಿ ರಾಜ್ಯದಲ್ಲಿ ಹಲವು ಉದ್ದಿಮೆಗಳು ಸ್ಥಾಪಿಸಲ್ಪಟ್ಟವು. ಬೆನ್ನಲ್ಲೇ ದೇಶ ವಿದೇಶಿಗರ ವಲಸೆಯು ಹೆಚ್ಚಿತು ಪರಿಣಾಮ ನಮ್ಮ ಆಲೋಚನೆಗಳು ಬದುಕಿನ ರೀತಿ ರಿವಾಜುಗಳು ಬದಲಾದವು. ನಮ್ಮ ಸಂಸ್ಕೃತಿಯಲ್ಲಿ ಬದಲಾವಣೆ ಆಯಿತು, ಬಾಷೆಯಿಂದ ವಿಮುಖತೆ ಆಯಿತು ಇದು ಎಷ್ಟರ ಮಟ್ಟಿಗೆ ಇತ್ತೆಂದರೆ ಮಗು ಹುಟ್ಟುತ್ತಲೇ ಅದು ಕನ್ನಡ ಕಲಿತರೆ ತಮಗೆ ಅಪಮಾನ ಎಂದು ತಂದೆತಾಯಿಯರು ಭಾವಿಸುವಂತಾಯಿತು. ಕನ್ನಡೇತರರ ಬಗೆಗಿನ ಅಭಿಮಾನ ಜಾಸ್ತಿಯಾಯಿತು, ಕನ್ನಡ ಶಾಲೆಗಳಿಗಿಂತ ಆಂಗ್ಲಭಾಷೆ ಮಾಧ್ಯಮ ಶಾಲೆಗಳಿಗೆ ಆದ್ಯತೆ ಹೆಚ್ಚಿತು. ರಾಜಕಾರಣಿಗಳು ಮತಬ್ಯಾಂಕಿಗೆ ಇತರೆ ಭಾಷಿಕರನ್ನು ಓಲೈಸಲು ನಿಂತರು. ನಮ್ಮ ನೆಲೆಯಲ್ಲಿ ನಾವೇ ಕನ್ನಡಕ್ಕೆ ಹೋರಾಡುವ ಪರಿಸ್ಥಿತಿಗೆ ಇದೇ ವೇದಿಕೆಯಾಯಿತು. ಕನ್ನಡ ಚಳುವಳಿಯನ್ನು ಇತ್ತೀಚಿನ ದಿನಗಳಲ್ಲಿ ಯಶಸ್ವಿಯಾಗಿ ಪ್ರವರ್ದಮಾನಕ್ಕೆ ತಂದ ನಾರಾಯಣಗೌಡರು ಕನ್ನಡದ ರಕ್ಷಣೆಗೆ ರಕ್ಷಣಾ ವೇದಿಕೆ ಹುಟ್ಟುಹಾಕಿದರೆ, ಇತರರನೇಕರು ಹೊಟ್ಟೆ ಪಾಡಿಗೆ ಅದೇ ಮಾದರಿಯ ಸಂಘಟನೆಗಳನ್ನು ಹುಟ್ಟುಹಾಕಿದರು. ಕನ್ನಡ ರಕ್ಷಣೆಗೆ ಬದಲಾಗಿ ಸುಲಿಗೆಗೆ ನಿಂತು ಆ ಮೂಲಕ ಕನ್ನಡ ಚಳುವಳಿಯನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ರಾಷ್ಟ್ರದಲ್ಲಿ ಶಾಸ್ತ್ರೀಯ ಭಾಷೆಯ ಸ್ತಾನಮಾನವನ್ನು ೩ ಭಾಷೆಗಳಿಗೆ ಮಾತ್ರ ನೀಡಲಾಗಿದೆ. ಈಗ ತಮಿಳುಭಾಷೆಗೆ ಮಾತ್ರ ಶಾಸ್ತ್ರೀಯ ಸ್ಥಾನಮಾನ ಸಿಗುತ್ತಿದೆ. ಕನ್ನಡಕ್ಕೆ 2ವರ್ಷಗಳ ಹಿಂದೆಯೇ ಶಾಸ್ತ್ರೀಯ ಸ್ಥಾನಮಾನವಿದ್ದರೂ ತಮಿಳುನಾಡಿನ ಕೊಂಗರ ಕುಚೇಷ್ಟೇಯಿಂದ ಅದು ನಮಗಿನ್ನು ಬಿಸಿಲ್ಗುದುರೆಯಾಗಿಸಿತ್ತು.
                ರಾಜ್ಯದಲ್ಲಿ ಕಳೆದ 10ವರ್ಷಗಳಿಂದೀಚೆಗೆ 10500ಕ್ಕೂ ಹೆಚ್ಚು ಶಾಲೆಗಳನ್ನು ಮಕ್ಕಳ ಪ್ರವೇಶಾತಿ ಸಂಖ್ಯ ಗಣನೀಯವಾಗಿ ಇಳಿಕೆಯಾಗುತ್ತಿರುವುದರ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ, ಪ್ರಸಕ್ತ ವರ್ಷದಲ್ಲಿ 3500ಕ್ಕೂ ಅಧಿಕ ಶಾಲೆಗಳು ಮುಚ್ಚಲು ಸಿದ್ದತೆ ನಡೆದಿದೆ. ರಾಜ್ಯೋತ್ಸವ ಸಂಧರ್ಭದಲ್ಲಿ ಕನ್ನಡ ಸಂಘಟನೆಗಳ ಪ್ರತಿಭಟನೆಗೆ ಅಂಜಿದ ಸರ್ಕಾರ ಶಾಲೆಗಳನ್ನು ಮುಚ್ಚುತ್ತಿಲ್ಲ ಬದಲಾಗಿ ವಿಲೀನ ಗೊಳಿಸಲಾಗುತ್ತಿದೆ ಎಂದು ಹೇಳಿದೆ ಈ ಹಿನ್ನೆಲೆಯಲ್ಲಿ ವಾದ-ಪ್ರತಿವಾದಗಳು ಅವರವರ ತಿಳುವಳಿಕೆಯ ಮಟ್ಟದಲ್ಲಿ ಜಾರಿಯಲ್ಲಿವೆ.ಆದರೆ ಒಂದು ವಿಚಾರ ಗಮನಿಸಬೇಕು  ರಾಜ್ಯದಲ್ಲಿ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ಕೊಡುವಾಗ ಸರ್ಕಾರ  ಮನಸ್ಸೊಇಚ್ಚೆಅನುಮತಿ ನೀಡಿ ಕಾನೂನು ಉಲ್ಲಂಘಿಸಿದೆ. ಮೊದಲಿನಂತೆ ಶಿಕ್ಷಣ ಕ್ಷೇತ್ರವನ್ನು ಸೇವಾವಲಯದಲ್ಲಿದೆಯೆಂದು ಭಾವಿಸಬೇಕಿಲ್ಲ, ಬದಲಾಗಿ ಅದೊಂದು ವ್ಯವಹಾರದ ಭಾಗವಾಗಿದೆ ಹಾಗಾಗಿ ಬಂಡವಾಳ ಶಾಹಿಗಳು, ರಾಜಕಾರ ಣಿಗಳು ಶಿಕ್ಷಣದ ಅಂಗಡಿಗಳನ್ನು ತೆರೆದು ಕುಳಿತಿರುವುದು ಪ್ರಮಖ ಅಡ್ಡಿ ಎರಡನೇಯದಾಗಿ ಜಾಗತಿಕ ವ್ಯವಸ್ಥೆ ಯಲ್ಲಿ ಇಂಗ್ಲೀಷ್ ವ್ಯಾಮೋಹಕ್ಕೆ ಬಿದ್ದ ಜನ ಕನ್ನಡ ಶಾಲೆ  ಗಳತ್ತ ಆಸಕ್ತಿ ತೋರದಿರುವುದು ಕನ್ನಡ ಶಾಲೆಗಳು ಮುಚ್ಚಲು ಕಾರಣವಾಗಿವೆ. ಪ್ರತೀ ಸರ್ಕಾರಿ ಉದ್ಯೋಗಿ ತಮ್ಮ ಮಕ್ಖಳನ್ನು  ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣವನ್ನು  ಕನ್ನಡ ಶಾಲೆಗಳಲ್ಲಿ  ಕೊಡಿಸಬೇಕು. ನಿಯಮ ಉಲ್ಲಂಘಿಸಿ ಅನು  ಮತಿನೀಡಿರುವ ಖಾಸಗಿ ಶಾಲೆಗಳನ್ನು ಕಡ್ಡಾಯವಾಗಿ  ಮುಚ್ಚಬೇಕು. ಉದ್ಯೋಗದಲ್ಲಿ ಮತ್ತಿತರ ಸವಲತ್ತುಗಳನ್ನು ನೀಡುವಾಗ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡಶಾಲೆಯಲ್ಲಿ ಮುಗಿಸಿದವರಿಗೆ  ಮಾತ್ರ  ಆದ್ಯತೆಸಿಗುವಂತೆ ಆದೇಶ ಹೊರಡಿಸಬೇಕು ಅಲ್ಲವೇ?(ಸಶೇಷ)

Sunday, October 30, 2011

'ನಮ್ಮ ಶಂಕರ'ನೆನಪಿಗೆ 'ನಮ್ಮ ಮೆಟ್ರೋ'!!

ವತ್ತು ಬೆಂಗಳೂರಿನ 'ಮೆಟ್ರೋ ರೈಲು' ಸಂಚಾರ ಉದ್ಘಾಟನೆಯ ದಿನ... ಜನ ಸಂಭ್ರಮದಿಂದ ಟಿಕೆಟ್ ಖರೀದಿಸಿ ಮೆಟ್ರೋ ಪ್ರಯಾಣದ ಸವಿ ಅನುಭವಿಸುವ ಖುಷಿಯಲ್ಲಿದ್ದರು..ನ್ಯೂಸ್ ಛಾನಲ್ ಒಂದು ಅದನ್ನ ಲೈವ್ ಆಗಿ ತೋರಿಸುತ್ತಿತ್ತು..  ಅಂತಹದ್ದೊಂದು ಗುಂಪಿನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಟಿಕೆಟ್ ಧರಿಸಿ ಸಂಭ್ರಮಿಸುತ್ತಿದ್ದ ಒಂದು ಹೆಣ್ಣು ಜೀವ ಕಾಣಿಸಿತು.. ಅದು ಸಂತೋಷವೋ, ಸಂತಸದ ದಿಗಿಲೋ ತಿಳಿಯುತ್ತಿರಲಿಲ್ಲ.. 'ಮೆಟ್ರೋ ನಮ್ಮ ಶಂಕರನ ಕನಸು ಅದು ಇವತ್ತು ನನಸಾಗಿದೆ ಅದಕ್ಕೆ ಟಿಕೆಟ್ ತಗೊಂಡಿದೀನಿ ನೋಡಿ, ಅವನ ನೆನಪಲ್ಲಿ ಪ್ರಯಾಣಿಸ್ತೀನಿ ಅಂತ ಹೇಳಿದ್ದು ಬೇರಾರು ಅಲ್ಲ, ಅವರೇ ಅರುಂಧತಿ ನಾಗ್!!ಒಂದೆಡೆ ಶಂಕರನ ಕನಸು ನನಸಾದ ಸಂಭ್ರಮ ಇನ್ನೊಂದೆಡೆ ಅದೇ ಸಮಯಕ್ಕೆ ಆತನಿಲ್ಲದ ದುಖ: ಅವರ ಮುಖಭಾವದಲ್ಲಿ ಬೇಡವೆಂದರೂ ಎದ್ದು ಕಾಣಿಸುತ್ತಿತ್ತು.  ಒಂದು ಕ್ಷಣ ನನಗೆ ತಿಳಿಯದಂತೆ ಕಣ್ಣಂಚು ಒದ್ದೆಯಾಯಿತು. ಹೌದು 'ನಮ್ಮ ಶಂಕರ'ನ ತಾಕತ್ತೇ ಅಂತಹುದು. 25ವರ್ಷಗಳ ಹಿಂದೆಯೇ ಇಂತಹದ್ದೊಂದು ಕನಸಿನ ಪ್ರಾಜೆಕ್ಟ್ ಸಿದ್ದಪಡಿಸಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ಪ್ರಸ್ತಾಪ ಮಾಡಿದ್ದು ನಮ್ಮ ವರ್ಕಾಲಿಕ್ ನಟ-ನಿರ್ದೇಶಕ-ನಾಟಕಕಾರ ಮಾನವೀಯ ಸೆಲೆಯ ಶಂಕರ್ ನಾಗ್.
         ಶಂಕರ್ ನಾಗ್ ನಮ್ಮನಗಲಿ ಸೆ.30ಕ್ಕೆ ಸರಿಯಾಗಿ 21ವರ್ಷಗಳು, ಆತ ಕೇವಲ ನಟನಾಗಿ, ನಿರ್ದೇಶಕನಾಗಿ ಉಳಿಯದೇ ಸಮಾಜ ಮುಖಿಯಾಗಿ ಚಿಂತಿಸುವ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿ ಅಜರಾಮರ ಎನಿಸಿದ್ದಾರೆ. ಶಂಕರ್ ನಾಗರಕಟ್ಟೆ ಉತ್ತರ ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಹಳ್ಳಿಯಲ್ಲಿ ಜನಿಸಿದ್ದು 9ನೇ ನವೆಂಬರ್ 1954ರಂದು. ಸಹಜಾಭಿನಯಕ್ಕೆ ಖ್ಯಾತಿ ಪಡೆದಿರುವ ಮೇರು ನಟ ಅನಂತ್ ನಾಗ್ ರ ಸಹೋದರಾಗಿದ್ದ ಶಂಕರ್ ನಾಗ್ ವಿದ್ಯಾಭ್ಯಾಸ ಮುಗಿದ ನಂತರ ಪ್ರಯಾಣ ಬೆಳೆಸಿದ್ದು ಮುಂಬೈಗೆ. ಅಲ್ಲಿ ಮರಾಠಿ ಹಾಗೂ ಕೊಂಕಣಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದ ಶಂಕರ ಜೀವನೋಪಾಯಕ್ಕೆ ಬ್ಯಾಂಕ್ ನೌಕರಿಗೂ ಸೇರಿದ್ದರೂ. ಆದರೆ ರಂಗಭೂಮಿಯ ಸೆಳೆತ ಅವರನ್ನು ಕಲಾ ಲೋಕಕ್ಕೆ ಸೆಳೆದು ಬಿಟ್ಟಿತು. ಹೀಗಿರುವಾಗ ಅದೊಂದು ದಿನ ಗಿರಿಶ್ ಕಾರ್ನಾಡರು ದೆಹಲಿಯಲ್ಲಿ ನಡೆದ ಅಂತರ ರಾಷ್ಟ್ರಿಯ ಚಲನಚಿತ್ರೋತ್ಸವದಲ್ಲಿ ಶ್ರೆಷ್ಠ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿ ಪ್ರಶಸ್ತಿ ಪಡೆದ ಅಕಿರಾ ಕುರುಸೋವ ಅವರ ಜಪಾನಿ ಭಾಷೆಯ "ಸೆವೆನ್ ಸಮುರಾಯ್ಸ್" ಚಿತ್ರವನ್ನು ಕನ್ನಡದಲ್ಲಿ ತೆರೆಗೆ ತರಲು ಸಿದ್ದತೆ ನಡೆಸಿದ್ದರು. ಆ ಚಿತ್ರದ ಪ್ರಧಾನ ಪಾತ್ರಕ್ಕೆ ಸೂಕ್ತ ನಾಯಕನನ್ನು ಹುಡುಕುತ್ತಿದ್ದಾಗ ಮರಾಠಿ ರಂಗಭೂಮಿಯಲ್ಲಿ ಗಮನ ಸೆಳೆದಿದ್ದ ಶಂಕರ ಕಣ್ಣಿಗೆ ಬಿದ್ದಿದ್ದ. ಕಾರ್ನಾಡರು ಆಹ್ವಾನ ನೀಡಿದಾಗ ಮೊದಲಿಗೆ ನಿರಾಕರಿಸಿದ್ದ ಶಂಕರ್ ನಂತರ ಸಹೋದರನ ಒತ್ತಾಸೆಯ ಮೇರೆಗೆ 'ಒಂದಾನೊಂದು ಕಾಲದಲ್ಲಿ " ಚಿತ್ರವನ್ನು ಒಪ್ಪಿಕೊಂಡರು. ದೇಸೀ ನೆಲಕ್ಕೆ ಒಗ್ಗಿಸಿದ್ದ ಕಥೆಗೆ ಕೇವಲ ನಟನಾಗದೇ ತಾನೇ ಪಾತ್ರವಾಗಿ ಹೋದ ಶಂಕರ ಸಿನಿಮಾ ರಂಗದಲ್ಲಿ ತನ್ನ ಛಾಪನ್ನು ಮೂಡಿಸಿ ಬಿಟ್ಟಿದ್ದ, ಅಷ್ಟೇ ಅಲ್ಲ ಆ ಚಿತ್ರದ ನಟನೆಗಾಗಿ ಆತನಿಗೆ ರಾಷ್ಟ್ರಪತಿಗಳ ಗೋಲ್ಡನ್ ಪೀಕಾಕ್ ಅವಾರ್ಡ್ ನ ಗರಿಯನ್ನು ಮುಡಿಗೇರಿಸಿಕೊಂಡಿದ್ದ. ನೆನಪಿರಲಿ ಕನ್ನಡದಲ್ಲಿ ಅಂತಹ ಪುರಸ್ಕಾರ ಪಡೆದ ಏಕೈಕ ನಟ ಶಂಕರ್ ನಾಗ್. 1978ರಿಂದ ಆರಂಭವಾದ ಶಂಕರನ ಸಿನಿಮಾಯಾನ 1990ರ ವರೆಗೆ ಸತತವಾಗಿ 12ವರ್ಷ ಮುಂದುವರೆದಿತ್ತು. 90ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಶಂಕರ ಒಂದು ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ. ನಟನಾಗಿ ಜನರನ್ನ ಆಕರ್ಷಿಸಿದ್ದಕ್ಕಿಂತ ನಿರ್ದೇಶಕನಾಗಿ ಹೆಚ್ಚು ಗಮನ ಸೆಳೆದ ಶಂಕರ್ ನಾಗ್ 70 ರ ದಶಕದಲ್ಲೇ ಅಡ್ವಾನ್ಸ್ ಆದ ಆಫ್ ಬೀಟ್ ಸಿನಿಮಾಗಳನ್ನು ನಿರ್ದೆಶಿಸಿದ್ದನಲ್ಲದೇ ಅದಕ್ಕಾಗಿ ಅಂತರ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದರು. ಏಕ ಕಾಲದಲ್ಲಿ ರಂಗಭೂಮಿಗೂ ಗಮನ ನೀಡಿದ ಶಂಕರ್ ವಿದೇಶಿ ನೆಲದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು. ಬಹುಶ: ರಂಗಭೂಮಿಯ ಮೂಲಕ ಶಂಕರ್ ವಿದೇಶಗಳಲ್ಲಿ ನೀಡಿದಷ್ಟು ಪ್ರದರ್ಶನಗಳನ್ನ ಮತ್ಯಾವ ಕಲಾವಿದನೂ ನೀಡಿರಲಾರ. ತನ್ನದೇ ನಿರ್ದೇಶನದ 'ಮಿಂಚಿನ ಓಟ' 'ಆಕ್ಸಿಡೆಂಟ್', 'ಗೀತಾ', 'ನೋಡೀಸ್ವಾಮಿ ನಾವಿರೋದೇ ಹೀಗೆ'  ಯಂತಹ ಹಲವು ವಿಭಿನ್ನ ಧಾಟಿಯ ಸಿನಿಮಾಗಳನ್ನು ನೀಡಿದ ಶಂಕರ್ ನಾಗ್ ತಾಂತ್ರಿಕವಾಗಿ ಅಂದಿನ ದಿನಗಳಲ್ಲಿ ಸವಾಲಾಗಿದ್ದ ಛಾಯಾಗ್ರಹಣದ ಸಾಧ್ಯತೆಗಳನ್ನು ಭಾರತೀಯ ಚಿತ್ರರಂಗದಲ್ಲಿ ಮೊದಲಭಾರಿಗೆ ಬಳಕೆಗೆ ತಂದದ್ದು ಇದೇ ಶಂಕರ್ ನಾಗ್.. 7ರಾಷ್ಟ್ರಗಳಿಗೆ ಭೇಟಿ ನೀಡಿ ತಂತ್ರಜ್ಣಾನದ ಸಾಧ್ಯತೆಗಳನ್ನು ಒಗ್ಗಿಸಿಕೊಂಡು ನಿರ್ದೇಶಿಸಿದ ಆ ಚಿತ್ರ ಡಾ|| ರಾಜ್ ನಟಿಸಿದ್ದ 'ಒಂದು ಮುತ್ತಿನ ಕಥೆ'. 
        ಶಂಕರ್ ಯೋಚಿಸುವ ಪರಿಯನ್ನ ಆತ ನಿರ್ದೇಶಿಸಿ ಚಿತ್ರಗಳನ್ನು ನೋಡಿದರೆ ತಿಳಿಯಬಹುದು, ಸಾಮಾಜಿಕ ಪರಿಣಾಮ ಬೀರುವ ಮತ್ತು ವಾಸ್ತವ ಜಗತ್ತಿನ ಅರಿವು ಮೂಡಿಸುವ ಮೂಲಕ ಚಿಂತನೆಗೆ ಹಚ್ಚುವ ಚಿತ್ರಗಳನ್ನು ನಿರ್ದೇಶಿಸಿದ ಶಂಕರ್, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಧೃಢವಾಗಿ ತಮ್ಮನ್ನು ಪರಿಚಯಿಸಿ ಕೊಂಡದ್ದು 'ಮಾಲ್ಗುಡಿ ಡೇಸ್' ಎಂಬ ಕಿರುತೆರೆ ಸೀರಿಯಲ್ ಮೂಲಕ. ತಾನು ಬೆಳೆಯುವ ಜೊತೆಗೆ ಸಾವಿರಾರು ಕಲಾವಿದರು, ತಂತ್ರಜ್ಞರನ್ನು ಬೆನ್ನು ತಟ್ಟಿ ಉತ್ಸಾಹ ತುಂಬಿ ಬೆಳೆಸಿದ ಶಂಕರ್... ಮಾನವೀಯ ಸೆಲೆಯಿಂದಾಗಿ ಸಾಮಾನ್ಯ ಜನರ ಬದುಕಿನಲ್ಲೂ ಅಮರವಾಗಿ ಉಳಿದಿದ್ದಾರೆ. 'ಆಟೋ ರಾಜ' ಚಿತ್ರದ ನಂತರ ಖಾಯಂ ಆಗಿ ಆಟೋದವರ ಆರಾಧ್ಯ ಧೈವವಾಗಿ ಬೆಳೆದು ನಿಂತ ಶಂಕರ್ ನ ಎತ್ತರವನ್ನು ಎಷ್ಟೋ ಮಂದಿ ನಟರು ಬಂದು ಹೋದರು ಏರಲಾಗಿಲ್ಲವೆಂದರೆ ಅವನ ತಾಕತ್ತನ್ನು ಊಹಿಸಬಹುದು. ಇವತ್ತಿಗೂ ಕನ್ನಡ ಚಿತ್ರರಂಗದಲ್ಲಿ ಹಾಗೂ ಹಿಂದಿ ಸಿನಿಮಾ ರಂಗದಲ್ಲಿ ಶಂಕರ್ ನಿಂದ ಪ್ರೇರಿತರಾಗಿ ಯಶಸ್ಸು ಕಂಡಿರುವ ಹಲವಾರು ಮಂದಿ ಯನ್ನು ವಿವಿಧ ವಿಭಾಗಗಳಲ್ಲಿ ಕಾಣಬಹುದು. 
       ಸ್ವಾಭಿಮಾನದ ಸಂಕೇತದಂತಿದ್ದ ಶಂಕರ್ ನಾಗ್ ಕನ್ನಡ ಚಿತ್ರಗಳ ಧ್ವನಿ ಗ್ರಹಣ ಹಾಗೂ ಸಂಕಲನಕ್ಕಾಗಿ ತಮಿಳುನಾಡಿಗೆ ಹೋಗಬೇಕಾದಂತಹ ದಿನಗಳಲ್ಲಿ ಬೆಂಗಳೂರಿನಲ್ಲಿ ಸಂಕೇತ್ ಸ್ಟುಡಿಯೋ ಸ್ಥಾಪಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಆಸರೆಯಾದವರು ಶಂಕರ್ ನಾಗ್. ಅವತ್ತಿನ ದಿನಗಳಲ್ಲೇ ನಂದಿ ಬೆಟ್ಟಕ್ಕೆ ರೋಪ್ ವೇ, ನಗರದಲ್ಲಿ ಮೆಟ್ರೋ ರೈಲು ಯೋಜನೆ, ಬಡವರಿಗೆ ಕಡಿಮೆ ಬೆಲೆಯಲ್ಲಿ ನಿರ್ಮಿಸಿಬಹುದಾದಂತಹ ಮನೆಗಳನ್ನು ಹಾಲೆಂಡ್ ದೇಶದ ಮಾದರಿಯಲ್ಲಿ ನಿರ್ಮಿಸುವ ಪ್ರಸ್ತಾವ ಮುಂದಿರಿಸಿದ್ದು ಹಾಗು ದೇಶದಲ್ಲಿ ರೆಸಾರ್ಟ್ ಮಾದರಿ ಕಂಟ್ರಿ ಕ್ಲಬ್ ಸ್ತಾಪಿಸಿ ಅಲ್ಲಿ ನಿರಂತರ ರಂಗಭೂಮಿಗೆ ಉತ್ತೇಜನ ನೀಡುವ ಮಹತ್ವದ ಸಂಕಲ್ಪ ಮಾಡಿ ಶ್ರಮಿಸಿದ್ದು ಇದೇ ಶಂಕರ್ ನಾಗ್. 
        ಚಿತ್ರರಂಗದಲ್ಲಿರುವ ತೆರೆಯ ಹಿಂದಿನ ಮತ್ತು ಮೇಲಿನ ಸಾವಿರಾರು ಮಂದಿ ಇವತ್ತಿಗೂ ಶಂಕರ್ ನಾಗ್ ರನ್ನು ನೆನಪಿಸಿಕೊಂಡು ಕಣ್ಣೀರಾಗುತ್ತಾರೆಂದರೆ ಅದಕ್ಕೆ ಶಂಕರ್ ನಾಗ್ ರ ಆಲೋಚನ ಪರಿ ಹಾಗೂ ಆತನ ಕನಸುಗಳ ಮೂಟೆ, ಪ್ರೀತಿ ವಾತ್ಸಲ್ಯ, ಪ್ರೋತ್ಸಾಹ ಕಾರಣ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ತಾನು ಕಂಡ ಕನಸುಗಳ ಸಾಕಾರಕ್ಕೆ ಇನ್ನಿಲ್ಲದ ಶ್ರಮ ಹಾಕುತ್ತಿದ್ದ ಶಂಕರ್ ನಾಗ್ ನಿದ್ರಿಸುತ್ತಿದುದು ತುಂಬಾ ಕಡಿಮೆ. ಅಂದರೆ ಸತ್ತ ಮೇಲೆ ದೀರ್ಘ ನಿದ್ದೆಗೆ ಅವಕಾಶವಿದೆ ಹಾಗಿರುವಾಗ ಬದುಕಿರುವಾಗ ದೀರ್ಘ ನಿದ್ರೆ ಮಾಡಿ ಸಮಯ ಹಾಳು ಮಾಡಬಾರದು ಎಂಬ ನಿಟ್ಟಿನಲ್ಲಿ ಶ್ರಮವನ್ನು ಧಾರೆಯೆರೆಯುತ್ತಿದ್ದ  ಶಂಕರ್ ನಾಗ್ ಯಾವತ್ತಿಗೂ ಜನಮಾನಸದಲ್ಲಿ ಅಜರಾಮರರೇ ಆಗಿದ್ದಾರೆ. ಒಂದು ಉತ್ತಮ ಅಭಿರುಚಿಯನ್ನ, ಅನುಭಾವವನ್ನ ನಮಗೆ ಉಳಿಸಿಹೋಗಿರುವ ಶಂಕರ್ ನಾಗ್ ಸದಾಕಾಲ ನೆನಪಿಗೆ ಅರ್ಹರೇ ಆಗಿದ್ದಾರೆ, ದೈಹಿಕಾವಾಗಿ ಇಲ್ಲದಿದ್ದರೂ ತಮ್ಮ ಕೆಲಸದ ಮೂಲಕ ನಮ್ಮೊಂದಿಗೆ ಇರುವ ಶಂಕರ್ ಹೆಸರನ್ನು 'ನಮ್ಮ ಮೆಟ್ರೋ'ಗೆ ಇಟ್ಟರೆ ಅದು ಸಾರ್ಥಕವಾದೀತು. ಸರ್ಕಾರ ದಿಸೆಯಲ್ಲಿ ಕ್ರಮ ವಹಿಸಬೇಕು, ಸಮಸ್ತ ಅಭಿಮಾನಿಗಳು ಮತ್ತು ಚಿತ್ರರಂಗದ ಒತ್ತಾಸೆ ಈ ನಿಟ್ಟಿನಲ್ಲಿ ಹೊರಹೊಮ್ಮಿದರೆ ಇದು ಸಾಧ್ಯವಾದೀತೇನೋ?

Sunday, October 16, 2011

'ಜ್ಞಾನ'ಪೀಠಕ್ಕೆ ಅಸಹನೆ ಯಾಕೆ?


ಮೊನ್ನೆ ಜಾನಪದ ವಿದ್ವಾಂಸ,ನಾಟಕಕಾರ, ಸಾಹಿತಿ,ನಿರ್ದೇಶಕ ಚಂದ್ರಶೇಖರ ಕಂಬಾರರಿಗೆ 8ನೇ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದ ಸಂಧರ್ಭ..'ಯೋಗ್ಯತೆ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿ ಬರುತ್ತಿದೆ, ಯೋಗ್ಯರು ಭಾಳಾ ಮಂದಿ ಅದಾರೆ ' ಎಂದು ಪ್ರತಿಕ್ರಿಯಿಸಿದ್ದು  ಪಾಟೀಲ ಪುಟ್ಟಪ್ಪ. "ಪ್ರಶಸ್ತಿ ಬಂದಾಗ ಪರ ವಿರೋಧ ಹೇಳಿಕೆ ನೀಡೋದು ಇರ್ತಾವಾ, ಅದು ಅವರವರ ಅಭಿಪ್ರಾಯ. ನಾನು ಅವರ ಹೇಳಿಕೆಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ" ಎಂದು  ಡಾ. ಚಂದ್ರಶೇಖರ ಕಂಬಾರರು ಪ್ರತಿಕ್ರಿಯಿಸಿದ್ದರು. ನಂತರ ಪಾಟೀಲ ಪುಟ್ಟಪ್ಪನವರ ಧಾಟಿಯಲ್ಲೇ ಬೈರಪ್ಪನವರನ್ನು ಬೆಂಬಲಿಸುವ ಅದರಲ್ಲೂ ಜಾತಿಯ ಹಿನ್ನೆಲೆಯಲ್ಲಿ ಕಂಬಾರರ ಶ್ರೇಷ್ಠತೆಯನ್ನು ಪ್ರಶ್ನಿಸಲು ನಿಂತದ್ದು ಒಂದು ಸಮೂಹ! ಇದನ್ನು ವಿರೋಧಿಸುವ ಭರದಲ್ಲಿ ಎಸ್ ಎಲ್ ಬೈರಪ್ಪನವರನ್ನು ಸಾರ್ವತ್ರಿಕವಾಗಿ ತೆಗಳಿದ್ದಲ್ಲದೇ ಅವರಿಗೆ ಜ್ಞಾನಪೀಠ ಸಿಗುವುದೇ ಆದರೆ ಮರಣೋತ್ತರವಾಗಿ ಸಿಗಲಿ  ಎಂದು ನಿಡುಮಾಮಿಡಿ ಸ್ವಾಮೀಜಿ ಹಾಗೂ ಅಗ್ನಿ ಶ್ರೀಧರ್ ಇತರರು ಜರಿದದ್ದು ಕನ್ನಡ ಸಾರಸ್ವತ ಲೋಕದಲ್ಲಿ ಒಳ್ಳೆಯ ಬೆಳವಣಿಗೆಯೇನಲ್ಲ. 
        8ನೇ ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ಭಾರತೀಯ ಭಾಷೆಗಳ ಸಾಹಿತ್ಯ ವಲಯದಲ್ಲಿ ಉನ್ನತ ಸ್ಥಾನಕ್ಕೇರಿರುವ ಕನ್ನಡ ಭಾಷೆಯ ಶ್ರೇಷ್ಠತೆಗೆ ಸಮಸ್ತ ಕನ್ನಡಿಗರೂ ಸಂಭ್ರಮ ಪಡುವ ಕಾಲವಿದು. ಆದರೆ ಇದೇನಿದು? ಅತ್ಯುನ್ನತ ಪುರಸ್ಕಾರ ಲಭಿಸಿದಾಗ ಅದನ್ನು ಜಾತಿಯ ಹಿನ್ನೆಲೆಯಲ್ಲಿ, "ಲಾಬಿ" ಮಾಡಿ ಪಡೆದಿದ್ದಾರೆಂಬ ಅರ್ಥವಿಲ್ಲದ ವ್ಯಾಖ್ಯಾನ ಮಾಡುತ್ತಾ ಒಬ್ಬರ ಮೇಲೊಬ್ಬರು ಕೆಸರೆರಚಾಡುತ್ತಾ ಹಂಗಿಸುವ ಪರಂಪರೆ? ನಾಚಿಕೆಯಾಗ ಬೇಕು ಸದರಿ ಬುದ್ದಿಜೀವಿಗಳಿಗೆ ಮತ್ತು ತಲೆ ಬುಡ ತಿಳಿಯದೇ ಯಾವುದಾದರೊಂದು ಕಾರಣಕ್ಕೆ ಎರಡೂ ಪಕ್ಷಗಳನ್ನು ಬೆಂಬಲಿಸುವ ಮೂರ್ಖರಿಗೆ! ಕನ್ನಡ ಸಾಹಿತ್ಯ ಪರಂಪರೆ ಅತ್ಯಂತ ಶ್ರೀಮಂತವಾದದ್ದು ಇಲ್ಲಿ ಇನ್ನೂ ಹಲವಾರು ಮಂದಿ ಜ್ಞಾನಪೀಠಿಗಳಿದ್ದಾರೆ, ಪ್ರಶಸ್ತಿ ಬಾರದ ಮಾತ್ರಕ್ಕೆ ಅವರೆಲ್ಲ ತೃಣಕ್ಕೆ ಸಮಾನರೆಂದು ಯಾಕಾದರೂ ಭಾವಿಸಬೇಕು. ಕೆಲವು ಪ್ರಶಸ್ತಿಗಳಿಂದ ಯಾರೂ ದೊಡ್ಡವರಾಗುವುದಿಲ್ಲ, ಆದರೆ ಕೆಲವೊಮ್ಮೆ ಪುರಸ್ಕೃತರಾಗುವವರಿಂದ ಪ್ರಶಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕುಬಿಡುತ್ತದೆ. ಈಗ ಜ್ಞಾನ ಪೀಠ ಪಡೆದ 8ಮಂದಿ ಜ್ಞಾನಪೀಠಿಗಳು ಅದ್ವಿತೀಯರೇ ಆಗಿದ್ದಾರೆ. ಆದರೆ ವ್ಯವಸ್ಥೆಯಲ್ಲಿ ದಿಕ್ಕುತಪ್ಪಿದ ಆಲೋಚನೆಗಳು ವಿನಾಕಾರಣ ಅಪಪ್ರಚಾರಕ್ಕೆ ಮುಂದಾಗಿ ಬಿಡುತ್ತವೆ ಇದು ಸಾರಸ್ವತ ಲೋಕಕ್ಕೆ ಅಪಾಯಕಾರಿ. 
       ಜ್ಞಾನಪೀಠ ಪ್ರಶಸ್ತಿ ಕುರಿತು ಚೂರು ಮಾಹಿತಿ ಹೇಳಿ ನಂತರ ಚರ್ಚೆಗೆ ಬರೋಣ, ಜ್ಞಾನಪೀಠ ಪ್ರಶಸ್ತಿ ಯಾವುದೇ ಸರ್ಕಾರ ಕೊಡುವ ಪ್ರಶಸ್ತಿಯಲ್ಲ! ಜ್ಞಾನಪೀಠ ಟ್ರಸ್ಟ್ ಇದನ್ನು ಕೊಡಮಾಡುತ್ತದೆ. ಜ್ಞಾನಪೀಠ ಟ್ರಸ್ಟ್ ನ ನಿರ್ವಹಣೆ ಜೈನ ಕುಟುಂಬ ಮಾಡುತ್ತದೆ, ಜ್ಞಾಪೀಠ ಟ್ರಸ್ಟ್ ನ ಒಡೆತನ ಟೈಂಸ್ ಆಫ್ ಇಂಡಿಯಾ ಗ್ರೂಪ್ ಗೆ ಸೇರಿದೆ. ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ದೇಶದ ಅತ್ಯುತ್ತನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಮೇ ೨೨ ೧೯೬೧ ರಲ್ಲಿ ಸ್ಥಾಪಿಸಲಾಯಿತು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ಐದು ಲಕ್ಷ ರುಪಾಯಿ ನಗದು ಹಾಗು ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.
         ಅಂದ ಹಾಗೆ ಕನ್ನಡಕ್ಕೆ ಮೊದಲ ಜ್ಞಾನ ಪೀಠ ಪ್ರಶಸ್ತಿಯನ್ನು ತಂದು ಕೊಟ್ಟದ್ದು ಕುವೆಂಪು 1967ರಲ್ಲಿ. ಆ ದಿನಗಳಲ್ಲಿ ಇನ್ನೂ ಭಾರತೀಯ ಸಮಗ್ರ ಸಾಹಿತ್ಯಕ್ಕೆ ಕೊಡುಗೆ ನೀಡಿದವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಕೊಡಲು ಆರಂಭಿಸಿರಲಿಲ್ಲ. ಆ ದಿನಗಳಲ್ಲಿ ತಮ್ಮ ಸಾಹಿತ್ಯ ಕೃತಿ ಶ್ರೀ ರಾಮಾಯಣ ದರ್ಶನಂ ಗೆ ಜ್ಞಾನಪೀಠ ಪ್ರಶಸ್ತಿಯನ್ನು ಕುವೆಂಪು ಪಡೆದಾಗ ಬೆಚ್ಚಿ ಬಿದ್ದದ್ದು ಪುರೋಹಿತ ಶಾಹಿ ವರ್ಗ.. ಒಬ್ಬ ಶೂದ್ರ ಜ್ಞಾನಪೀಠಕ್ಕೆ ಅರ್ಹವಾಗುವ ರಾಮಾಯಣ ದರ್ಶನಂ ಬರೆದನೋ ಎನ್ನುವ ಕಿಡಿಗೇಡಿ ಮಾತನ್ನು ಆಡಿ ಬಿಟ್ಟಿತ್ತು. ಅಂದು ಕುವೆಂಪು ತುಂಬ ನೊಂದು ಬಿಟ್ಟಿದ್ದರು. ಜ್ಞಾನಪೀಠ ಪ್ರಶಸ್ತಿ ಆರಂಭವಾದ ಕೆಲವೇ ವರ್ಷಗಳಲ್ಲಿ ಮೊಟ್ಟ ಮೊದಲ ಭಾರಿಗೆ  4ನೇ ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡಕ್ಕೆ ತಂದು ಕೊಟ್ಟ ಹೆಮ್ಮೆ ಕುವೆಂಪು ರವರದ್ದಾಗಿತ್ತು. ಆದರೆ ಜಾತೀಯ ಅಸಹನೇ ಮತ್ತು ಕೀಳು ಮನೋಭಾವ,  ಸಂಕುಚಿತ ಮನೋಭಾವ ಜ್ಞಾನಪೀಠದ ಸಂಭ್ರಮವನ್ನು ಅಂದು ಹೊಸಕಿ ಹಾಕಿತ್ತು. ಇವತ್ತು ಅದೇ ಮನಸ್ಸುಗಳು ಕಂಬಾರರನ್ನು ಜಾತಿಯ ಹಿನ್ನೆಲೆಯಲ್ಲಿ ಅಣಕಿಸಲು ಪ್ರಯತ್ನಿಸುತ್ತಿರುವುದು ವ್ಯವಸ್ಥೆಯ ದುರಂತವೇ ಸರಿ! 
       ಚಂದ್ರ ಶೇಖರ ಕಂಬಾರರಿಗೂ ಇದು ಹೊಸತೇನಲ್ಲ.  ಕಂಬಾರರು ಯುವಕರಾಗಿದ್ದಾಗ ದಾರವಾಡದ ಕವಿ ಸಮ್ಮೇಳನದಲ್ಲಿ ಕವಿತೆಯೊಂದನ್ನು ಓದಿದ್ದರಂತೆ,ಖ್ಯಾತ ಕವಿಗಳೊಬ್ಬರು ಅಧ್ಯಕ್ಷತೆ ವಹಿಸಿದ್ದರು,ಕಂಬಾರರ ಕವಿತೆ ಅಲ್ಲಿ ಓದಿದ ಎಲ್ಲ ಕವಿಗಳಿಗಿಂತ ಭಿನ್ನವಾಗಿದ್ದದ್ದು ಎಲ್ಲರ ಗಮನಕ್ಕೆ ಬಂದಿದ್ದರೂ,ಅದ್ಯಕ್ಷರು ಕಂಬಾರರ ಬಗ್ಗೆ ಕುಹಕದ ಮಾತು ಹೇಳಿದ್ದರು,"ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ " ಎಂಬ ಅಧ್ಯಕ್ಷರ ಮಾತು ಕಂಬಾರರ ಸ್ವಾಭಿಮಾನವನ್ನೇ ಬಡಿದೆಬ್ಬಿಸಿತು,ಅಂದೇ ಕಂಬಾರ ಕಾವ್ಯವನ್ನು ಪಳಗಿಸಿಕೊಳ್ಳಲು ನಿರ್ಧರಿಸಿದರಂತೆ.ಅವರ ಅಚಲ ನಿರ್ಧಾರ ಹಾಗೂ ಪ್ರಯತ್ನಗಳು ಇವತ್ತು ಅವರ ಸಾಧನೆಯನ್ನು ಜ್ಞಾನಪೀಠದ ಅಂಚಿಗೆ ತಂದು ನಿಲ್ಲಿಸಿದೆ. ಚಂದ್ರ ಶೇಖರ ಕಂಬಾರ ಕನ್ನಡದ ವರಕವಿ ದ.ರಾ ಬೇಂದ್ರೆಯವರ ನಂತರ ಕನ್ನಡ ಭಾಷೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ದುಡಿಸಿಕೊಂಡು ಸಾಹಿತ್ಯ ರಚಿಸಿದ ಕೀರ್ತಿ ಕಂಬಾರರಿಗೆ ಸಲ್ಲುತ್ತದೆ. ಮೊಟ್ಟ ಮೊದಲ ಭಾರಿಗೆ ಕನ್ನಡದಲ್ಲಿ ಜಾನಪದ ವಿಶ್ವಕೋಶವನ್ನು ರಚಿಸಿದ ಕಂಬಾರ ಆ ಮೂಲಕ ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷವಾದ ಸ್ಥಾನವನ್ನು ಕಲ್ಪಿಸಿದ್ದಾರೆ. ಜಾನಪದದ ಜೊತೆಗೆ ವೈಚಾರಿಕತೆಯನ್ನು ಬೆಸೆಯುವ ಕಂಬಾರರ ಧಾಟಿ ಅವರಿಗೆ ಸರಿಸಾಟಿಯಾಗುವಂತಿದೆ. ಕಂಬಾರರು ಒಟ್ಟು ೨೨ ನಾಟಕಗಳು, ೮ ಕವನ ಸಂಕಲನಗಳು ಮತ್ತು ೪ ಕಾದಂಬರಿಗಳನ್ನು ರಚಿಸಿದ್ದಾರೆ. ಅಲ್ಲದೆ ಚಕೋರಿ ಎಂಬ ಮಹಾಕಾವ್ಯ, ಜಾನಪದ, ರಂಗಭೂಮಿ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ೧೪ ಸಂಶೋಧನಾ ಕೃತಿಗಳನ್ನೂ ರಚಿಸಿದ್ದಾರೆ.ಏಲ್ಲಾ ಸೇರಿ ಸುಮಾರು ನಲವತ್ತಕ್ಕೂ ಮಿಕ್ಕಿ ಕೃತಿಗಳು ಹೊರಬಂದಿವೆ.ಇವರ ಅನೇಕ ಕೃತಿಗಳು ಹಿಂದಿ, ಇಂಗ್ಲೀಷ್ ಸಹಿತ ಹಲವು ಭಾಷೆಗಳಿಗೆ ಅನುವಾದಗೊಂಡಿವೆ.‘ಬೆಂಬತ್ತಿದ ಕಣ್ಣು’(೧೯೬೧) ಮತ್ತು ‘ನಾರ್ಸಿಸಸ್‌’(೧೯೬೯) ಹೆಸರು ಮಾಡಿದ ಇವರ ನಾಟಕಗಳು.ಪದ್ಮಶ್ರೀ, ನಾಡೋಜ, ಕಬೀರ್ ಸಮ್ಮಾನ್ ಹೀಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಕಂಬಾರರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನನ್ಯವಾದದ್ದು. ಅದೇ ರೀತಿ ಸಂತೆ ಶಿವರ ಲಿಂಗಣ್ಣಯ್ಯ ಬೈರಪ್ಪ ಸಾಹಿತ್ಯ ಲೋಕದಲ್ಲಿ ವಿಶಿಷ್ಠ ರೀತಿಯಲ್ಲಿ ತಮ್ಮ ಅಸ್ತ್ವಿತ್ವ ದಾಖಲಿಸಿದವರು. ಆಧುನಿಕ ದಿನಗಳಲ್ಲಿ ಇವತ್ತಿಗೂ ಹೆಚ್ಚು ಓದಿಸಿಕೊಳ್ಳುವ ನಂ.1 ಸ್ಥಾನ ಅತಿಕ್ರಮಿಸಿದ ಹೆಗ್ಗಳಿಕೆ ಬೈರಪ್ಪನವರಿಗಿದೆ. 2010ರ ಸರಸ್ವತಿ ಸಮ್ಮಾನ್,ಪಂಪ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಬೈರಪ್ಪನವರ ಸಾಹಿತ್ಯ ಉರ್ದು,ಸಂಸ್ಕೃತ,ಇಂಗ್ಲೀಷ್, ಮರಾಠಿ,ಗುಜರಾತಿ, ಬೆಂಗಾಲಿ ಸೇರಿದಂತೆ ಹಲವು ಭಾಷೆಗಳಿಗೆ ತರ್ಜುಮೆ ಗೊಂಡಿದೆ. ಹಿಂದಿ ಭಾಷೆಗೆ ಅನುವಾದಗೊಂಡ ಇವರ ಸಾಹಿತ್ಯ ಅಲ್ಲೂ ಇವರನ್ನು ಅತ್ಯುತ್ತಮ ಬರಹಗಾರರ ಸಾಲಿನಲ್ಲಿ ನಿಲ್ಲಿಸಿದೆ. 24ಕಾದಂಬರಿಗಳು, ಒಂದು ಆತ್ಮ ಕಥನ, 4ತತ್ವಶಾಸ್ತ್ರ ಸಾಹಿತ್ಯವನ್ನು ಬರೆದಿರುವ ಬೈರಪ್ಪ ನವರ "ಆವರಣ"ಮತ್ತು "ಕವಲು" ಕಾದಂಬರಿಗಳು ಬಿಡುಗಡೆಗೆ ಮುನ್ನವೇ ಸಂಚಲನ ಸೃಷ್ಟಿಸಿದವು. ಬಹುಶ: ಕನ್ನಡದ ಬೇರಾವ ಕೃತಿಗಳಿಗೆ ಮತ್ತು ಲೇಖಕರಿಗೆ ಈ ಮಟ್ಟದ ಪ್ರೋತ್ಸಾಹ ದೊರೆತಿರಲಾರದು.   ಸಾಹಿತ್ಯ ಕೃಷಿಗೂ ಮುನ್ನ ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮಕ್ಕೂ ದುಮುಕಿ ದೇಶ ಪ್ರೇಮ ಮೆರೆದ ಅಸೀಮ ವ್ಯಕ್ತಿತ್ವ ಬೈರಪ್ಪನವರದ್ದು.   ಇದು ಅಸಲು ಸಂಗತಿ ಹೀಗಿರುವಾಗ ಕವಿಗಳನ್ನು ಸಾಹಿತಿಗಳನ್ನು ಏಕ ದೃಷ್ಠಿಕೋನದಿಂದ ಅಳೆಯುವುದು ಸರಿಯೇ? 
           ಬೈರಪ್ಪ ಮತ್ತು ಕಂಬಾರ ಅವರವರ ನೆಲೆಗಟ್ಟಿನಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ ಆದರೆ ಅವರ ವೈಯುಕ್ತಿಕ ವಿಚಾರಗಳು, ಜಾತೀಯ ಹಿನ್ನೆಲೆ ಒಂದು ಸಂಭ್ರಮವನ್ನು ಹಾಳು ಮಾಡಬಾರದಲ್ಲವೇ? ಪ್ರಶಸ್ತಿ ದಕ್ಕಿದ ಸಂಧರ್ಭದಲ್ಲಿ ಇವೆಲ್ಲಾ ಬೇಕಾ ಹೇಳಿ? ಇದುವರೆಗೆ ಪ್ರಶಸ್ತಿ ದಕ್ಕಿಸಿಕೊಂಡವರಲ್ಲಿ ಇಂತಹ ಅಸಹಜವಾದ ಮುಜುಗುರಕ್ಕೆ ಒಳಗಾಗಿದ್ದು ಕುವೆಂಪು ಮತ್ತು ಕಂಬಾರ ಮಾತ್ರವಲ್ಲ ಯು ಆರ್ ಅನಂತ ಮೂರ್ತಿ ಹಾಗೂ ಗಿರೀಶ್ ಕಾರ್ನಾಡರಿಗೆ ಪ್ರಶಸ್ತಿ ಬಂದಾಗಲೂ ಹೊಟ್ಟೆಕಿಚ್ಚಿನ ಒಂದು ವರ್ಗ "ಲಾಬಿ" ಮಾಡಿ ಪ್ರಶಸ್ತಿ ಗಿಟ್ಟಿಸಿಕೊಂಡವರೆಂಬ ಹಣೆ ಪಟ್ಟಿ ಕಟ್ಟಿತ್ತು. ಕನ್ನಡಕ್ಕೆ ಇನ್ನೂ ಹೆಚ್ಚಿನ ಜ್ಞಾನಪೀಠಗಳು ಬರಬೇಕಿದೆ ಸಧ್ಯ ಜ್ಞಾನಪೀಠ ಪಡೆದಿರುವವರಲ್ಲಿ 2ನೇ ಸ್ಥಾನದಲ್ಲಿರುವ ಹಿಂದಿಗಿಂತಲೂ  ಕನ್ನಡ 2ಪ್ರಶಸ್ತಿಗಳಿಂದ ಮೇಲಿದೆ, ನಾವಿನ್ನೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ದಕ್ಕಿಸಿಕೊಳ್ಳಲಾಗಿಲ್ಲ, ಇಂತಹ ಸಂಧರ್ಭದಲ್ಲಾದರೂ ಒಗ್ಗೂಡಿ ಶಾಸ್ತ್ರೀಯ ಸ್ಥಾನಮಾನಕ್ಕೆ ಹಕ್ಕೊತ್ತಾಯ ಮಂಡಿಸುವುದನ್ನು ಬಿಟ್ಟು ಇದೆಂಥದು ಕೆಸರೆರಚಾಟ? ಇನ್ನಾದರೂ ಮೂರ್ಖರು ಬುದ್ದಿ ಕಲಿಯಬಾರದೇ?

Sunday, October 9, 2011

ಅಣ್ಣಾಹಜಾರೆ ಮತ್ತು ತಂಡಕ್ಕೆ ಇದೆಲ್ಲಾ ಬೇಕಿತ್ತಾ?

ಒಂದು ಕನಸು, ಒಂದು ನಿರೀಕ್ಷೆ, ಒಂದು ಕೆಚ್ಚು, ಒಂದು ನಂಬಿಕೆ ಹೀಗೆ ಎಲ್ಲವನ್ನೂ ಹುಸಿಗೊಳಿಸುವ ಮತ್ತು ಮನಸ್ಸಿಗೆ ಆಘಾತ ವಾಗುವಂತಹ ವಿದ್ಯಮಾನಗಳು ಈಗ ಘಟಿಸುತ್ತಿವೆ. ಗಾಂಧೀ ಮಾರ್ಗದಲ್ಲಿ ಆರಂಭಗೊಂಡ ಚಳುವಳಿಯೊಂದು ಇಷ್ಟು ಬೇಗ ದಿಕ್ಕು ತಪ್ಪ ಬಹುದೆಂದು ಯಾರೂ ನಿರೀಕ್ಷಿಸಿರಲಿಕ್ಕಿಲ್ಲ ಆದಾಗ್ಯೂ ಜನಲೋಕಪಾಲ ಮಸೂದೆ ಅನುಷ್ಠಾನಕ್ಕೆ ಒತ್ತಾಯಿಸಿ ನಡೆಯುತ್ತಿದ್ದ ಚಳುವಳಿ ಪೀಕ್ ಪಾಯಿಂಟ್ ತಲುಪಿದಾಗ, ಚಳುವಳಿಯ ಅಂತಿಮ ಸ್ವರೂಪ ಏನು? ಅಣ್ಣಾ ಮತ್ತು ತಂಡ ಚಳುವಳಿಗೆ ಸಿಕ್ಕಿರುವ ಅಭೂತಪೂರ್ವ ಬೆಂಬಲವನ್ನ ಹೇಗೆ ಕಾಯ್ದು ಕೊಳ್ಳುತ್ತದೆ? ಎಂಬ ಪ್ರಶ್ನೆಯನ್ನು ಕೆಲವು ಬುದ್ದಿ ಜೀವಿಗಳು ಎತ್ತಿದ್ದರು. ಹಾಗೆಯೇ ಚಳುವಳಿಯೊಂದು ದಿಕ್ಕು ತಪ್ಪಿ ಆಶಯಗಳು ನೆನೆಗುದಿಗೆ ಬೀಳುವ ಬಗ್ಗೆಯೂ ಆತಂಕವಿತ್ತು. ಈಗ ಅಣ್ಣಾ ತಂಡದ ಕ್ರೇಜಿವಾಲ್ ಮತ್ತು ಕಿರಣ್ ಬೇಡಿ ಸಾರ್ವಜನಿಕ ಆತಂಕವನ್ನು ನಿಜವಾಗಿಸುತ್ತಿದ್ದಾರೆ. ಇದರ ಹಿಂದೆ ಜನಸಾಮಾನ್ಯರಿಗೆ ತಿಳಿಯದ ಹುನ್ನಾರವೂ ಸಹಾ ಇರಬಹುದೆಂಬ ಅನುಮಾನ ವ್ಯಕ್ತವಾಗಲಾರಂಬಿಸಿದೆ. ನಮ್ಮ ದೇಶದ ಮಟ್ಟಿಗೆ ಇದು ಭ್ರಷ್ಟಾಚಾರದ ವಿರುದ್ದದ ಚಳುವಳಿ ಇರಬಹುದು ಇತರೆ ಚಳುವಳಿಗಳಿರಬಹುದು , ಎಲ್ಲವುಗಳ ಹಿಂದೆಯೂ ಅಪಾಯಕಾರಿ ಹಾಗೂ ಸರ್ವ ಸಮ್ಮತವಲ್ಲದ ಗುರಿಗಳ ಈಡೇರಿಕೆಗೆ ಕೆಲವು ಚಳುವಳಿಗಳು ಬಳಕೆಯಾಗುತ್ತಿರುವುದು ಅತ್ಯಂತ ವಿಷಾಧನೀಯಕರ ಸಂಗತಿ.
           ದೇಶದ 1,210,193,422ಮಿಲಿಯನ್ ಜನಸಂಖ್ಯೆಯ ಬಹುಪಾಲು ಜನರ ಆಶೋತ್ತರದ ಪ್ರತೀಕವಾಗಿದ್ದ ಅಣ್ಣಾ ತಂಡದ ನಿಲುವು ಈಗ ರಾಜಕೀಯ ಶಕ್ತಿಯಾಗಿ ಬದಲಾಗುವ ಸೂಚನೆ ನೀಡಿದೆ. ರಾಜಕೀಯ ಶಕ್ತಿ ಯಾವುದೇ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂಬುದು ಒಪ್ಪ ತಕ್ಕ ಮಾತೆ ಆಗಿದೆ. ಆದರೆ ರಾಜಕೀಯದ ನೆವದಲ್ಲಿ,ಸದುದ್ದೇಶಕ್ಕೆ ಒಗ್ಗೂಡಿಸಿದ ಶಕ್ತಿಯನ್ನು, ಜನರ ಭಾವನೆಗಳನ್ನು ಒಮ್ಮೆಲೆ ತೂರಿ ಬಿಡುವುದನ್ನು ಅರಗಿಸಿಕೊಳ್ಳಲಾಗದು ಹಾಗೂ ಒಪ್ಪಿಕೊಳ್ಳಲಾಗದು. ಅಣ್ಣಾ ತಂಡ ಜನ್ ಲೋಕಪಾಲ ಮಸೂದೆಯನ್ನು ಒಪ್ಪದ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಎಂಬ ಘೋಷಣೆಯನ್ನು ಹೊರಡಿಸಿದೆ, ಇದಕ್ಕಾಗಿ ಕಿರಣ್ ಬೇಡಿ ಹಾಗೂ ಅರವಿಂದ ಕ್ರೇಜೀವಾಲ್ ಬೇರೆ ಬೇರೆ ರಾಜ್ಯಗಳಿಂದ ಆಂಧೋಲನ ಆರಂಭಿಸಿದ್ದಾರೆ. ಸದರಿ ಆಂಧೋಲನದಲ್ಲಿ ಕಾಂಗ್ರೆಸ್ ತಿರಸ್ಕರಿಸಿ ಎಂದು ಅಣ್ಣಾ ಭಾಷಣ ಮಾಡಿದ್ದಾರೆನ್ನಲಾದ ಧ್ವನಿ ಮುದ್ರಿಕೆಯನ್ನು ಬಳಸಿಕೊಳ್ಳಲಾಗುತ್ತ್ದೆದೆಯಂತೆ! ಕಾಂಗ್ರೆಸ್ ತಿರಸ್ಕರಿಸಿ ಎಂದರೆ ಯಾವುದನ್ನು ಪುರಸ್ಕರಿಸಬೇಕು? ಉತ್ತರ ಬಹಳ ಸರಳ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕಾ? ಚುನಾವಣೆಗಳು ಹತ್ತಿರವಿರುವ ಸಂಧರ್ಭದಲ್ಲೇ ಅತ್ಯಂತ ಕೆಟ್ಟ ಆಡಳಿತ ನೀಡಿ ಕೋಮುವಾದಿ ಭಾವನೆಗಳನ್ನು ಪುರಸ್ಕರಿಸುವ ಮೂಲಕ  ಹೀನ ಚಾರಿತ್ರ್ಯ ಹೊಂದಿರುವ ಗುಜರಾತ್ ನ ಮುಖ್ಯ ಮಂತ್ರಿ ನರೇಂದ್ರ ಮೋದಿ, ತನ್ನ ಹೆಸರು ಪ್ರಧಾನಿ ಪಟ್ಟಕ್ಕೆ ಕೇಳಿ ಬರುತ್ತಿದ್ದಂತೆಯೇ  ಉಪವಾಸದ ಸೋಗಿನಲ್ಲಿ ತಾನೊಬ್ಬ ಸತ್ಪುರುಷನೆಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.ಈ  ಮೂಲಕ ಬಿಜೆಪಿ ಮೋದಿಯನ್ನು ಪ್ರಧಾನಿ ಪಟ್ಟಕ್ಕೆ ಪ್ರಸ್ತಾಪಿಸುತ್ತಾ ಚುನಾವಣೆಗಳನ್ನು ಎದುರು ನೋಡುತ್ತಿದೆ, ಹೀಗಿರುವಾಗ ಅಣ್ಣಾ ಹಜಾರೆಯಂತಹವರೇ ಕಾಂಗ್ರೆಸ್ ತಿರಸ್ಕರಿಸಿ ಎಂದು ಊರೂರು ತಿರುಗಿದರೆ ಇವರ ಆಂಧೋಲನವನ್ನು ಬೆಂಬಲಿಸಿದವರ ಕಥೆ ಏನಾಗಬೇಕು? 
            ಅಸಲಿಗೆ ಜನ ಲೋಕಪಾಲ ಮಸೂದೆಯ ಕರಡನ್ನು ತಯಾರಿಸಿದ್ದು ಶಾಂತಿಭೂಷಣ್ ಆದರೂ ಸಹಾ ಅದನ್ನು ಅಗತ್ಯಕ್ಕೆ ತಕ್ಕಂತೆ ತಿದ್ದಿ ಅಣ್ಣಾ ಹಜಾರೆಯನ್ನು ಹೈಜಾಕ್ ಮಾಡಿದವರು ಅರವಿಂದ ಕ್ರೇಜಿವಾಲ್ ಮತ್ತು ಕಿರಣ್ ಬೇಡಿ, ಅತ್ಯಂತ ನಾಟಕೀಯವಾಗಿ ನಡೆದು ಕೊಳ್ಳುವ ಮೂಲಕ ಸಾರ್ವಜನಿಕ ಅವಗಣನೆಗೂ ತುತ್ತಾಗಿದ್ದರು, ನಂತರದ ಬೆಳವಣಿಗೆಗಳಲ್ಲಿ ತಾವು ಸಂಸತ್ ಗೆ ಸ್ಪರ್ದಿಸುವ ಇಂಗಿತವನ್ನು ವ್ಯಕ್ತಪಡಿಸುವ ಮೂಲಕ ಈಗ ಭ್ರಷ್ಟಾಚಾರ ವಿರೋಧಿ ಆಂಧೋಲನವನ್ನ ಬದಿಗಿರಿಸಿ ಕಾಂಗ್ರೆಸ್ ತಿರಸ್ಕರಿಸಿ ಆಂಧೋಲನವನ್ನು ಮುನ್ನೆಡೆಸಲು ನಿಂತಿದ್ದಾರೆ ಅಂದರೆ ಇವರ ಹಿಂದಿರುವ ಶಕ್ತಿಗಳು ಯಾವುದು ಎಂಬುದು ಯಾರಿಗೂ ತಿಳಿಯದ ಸಂಗತಿಯಲ್ಲ ಅಲ್ಲವೇ? ಅಣ್ಣಾ ಟೀಂ ಈಗ ಒಟ್ಟಾಗಿ ಉಳಿದಿಲ್ಲ ಎಂಬ ಸಂಗತಿಯೂ ಬೇಸರದ ಸಂಗತಿಯೇ ಆಗಿದೆ, ಸ್ಪಷ್ಟ ನಿಲುವಿಲ್ಲದೆ, ಒಗ್ಗೂಡಿದ ಶಕ್ತಿಯನ್ನು ವೈಯುಕ್ತಿಕ ಉದ್ದೇಶಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ? ಅಣ್ಣಾ ಮತ್ತು ಅವರ ತಂಡ ರಾಜಕೀಯ ಶಕ್ತಿಯಾಗಿ ಬದಲಾಗುವುದಾದರೆ ಜನ ಲೋಕಪಾಲ ಮಸೂದೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಲು ಒಮ್ಮತದ ನಿರ್ಣಯ ಕೈಗೊಂಡ ಎಲ್ಲಾ ರಾಜಕೀಯ ಪಕ್ಷಗಳ ವಿರುದ್ದವೂ ಸಮರ ಸಾರಬೇಕಲ್ಲವೇ? ಆದರೆ ವಾಸ್ತವದಲ್ಲಿ ಯಾಕೆ ಅಂತಹ ನಿಲುವು ವ್ಯಕ್ತವಾಗಿಲ್ಲ. ಅಣ್ಣಾ ಹಜಾರೆಯ ಉಪವಾಸದ ಅಂತಿಮ ದಿನಗಳಲ್ಲಿ ಪ್ರಧಾನಿ ಮತ್ತು ನ್ಯಾಯಾಂಗ ವ್ಯವಸ್ಥೆಗಿಂತ ಜನ ಲೋಕಪಾಲ ಸುಪ್ರೀಂ ಆಗುವುದು ಮತ್ತು ಆ ಮೂಲಕ ದೇಶದ ಸಂವಿಧಾನದ ಆಶಯಕ್ಕೆ ಪರ್ಯಾಯವನ್ನು ಸೃಷ್ಠಿಸುವ ಕ್ರಿಯೆಯನ್ನು ಪ್ರಮುಖ ವಿರೋಧ ಪಕ್ಷ ಬಿಜೆಪಿ ಯೂ ಸಹಾ ಒಪ್ಪಿಕೊಳ್ಳಲಿಲ್ಲ. ಅದರಂತೆ ಇತರೆ ರಾಜಕೀಯ ಪಕ್ಷಗಳು ಸಹಾ. ಹೀಗಿರುವಾಗ ಕೇವಲ ಕಾಂಗ್ರೆಸ್ ಒಂದನ್ನೇ ಯಾಕೆ ತಿರಸ್ಕರಿಸಬೇಕು? ಜನ ಲೋಕಪಾಲ ಮಸೂದೆ ತಿರಸ್ಕೃತವಾಗಿ ಪರಿಷ್ಕೃತ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸರ್ವಸಮ್ಮತ ನಿಲುವಿನೊಂದಿಗೆ ಒಪ್ಪಿಕೊಳ್ಳಲಾಗಿದೆ. ಇದನ್ನು ಅಣ್ಣಾ ಮತ್ತವರ ತಂಡವು ಒಪ್ಪಿದೆ ಹೀಗಿರುವಾಗ ಏಕಾಏಕಿ ಪಕ್ಷವೊಂದರ ವಿರುದ್ದ ಆಂಧೋಲನ ನಡೆಸುವುದನ್ನು ಏನೆನ್ನಬೇಕು ಹೇಳಿ? ಅಂದರೆ ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ಕಾಂಗ್ರೆಸ್ ವಿರೋಧಿ ಆಂಧೊಲನವನ್ನ ನಡೆಸಿದಲ್ಲಿ ಈ ಮೊದಲಿನ ಒಪ್ಪಂದದ ಕಥೆ ಏನಾಗುತ್ತೇ ಅನ್ನೋ ಪರಿಜ್ಞಾನವಿದ್ದರೂ ಲೋಕಪಾಲ ಮಸೂದೆ ಜಾರಿಯಾಗಬಾರದು ಎಂಬ ನಿಲುವನ್ನು ಅಣ್ಣಾ ತಂಡವೇ ತಳೆದಂತೆ ಆಗಲಿಲ್ಲವೇ? ಅಲ್ಲಿಗೆ ಕಳೆದ ನಾಲ್ಕು ದಶಕಗಳಿಂದ ನಡೆದುಕೊಂಡು ಬಂದ ಹೋರಾಟಕ್ಕೆ, ಗಾಂಧಿ ಮಾರ್ಗದ ಚಳುವಳಿಗೆ ಯಾವ ಮರ್ಯಾದೆ ಸಿಕ್ಕಂತಾಯಿತು? ಅಣ್ಣಾ ಹಜಾರೆಗೆ ಮತ್ತು ಅವರ ತಂಡಕ್ಕೆ ಇದೆಲ್ಲಾ ಬೇಕಿತ್ತಾ? 
          ಪ್ರಸಕ್ತ ದಿನಗಳಲ್ಲಿ ಚಳುವಳಿಗಳು ಮತ್ತು ಅದರ ಆಶಯಗಳು ಯಾಕೆ ಸಾಯುತ್ತಿವೆ ? ಎಂಬ ಪ್ರಶ್ನೆಗೆ ಅಣ್ಣಾಹಜಾರೆ ನಿಲುವು ಸದ್ಯದ ಪರಿಸ್ಥಿತಿಯಲ್ಲಿ ಉತ್ತರವಾಗ ಬಹುದೇನೋ. ಒಂದು ಪ್ರಾಮಾಣಿಕ ಚಳುವಳಿಯ ಹಿಂದೆ, ಅದನ್ನು ಬೆಂಬಲಿಸುವ ಮನಸ್ಸುಗಳ ಆಶಯವನ್ನು ದಿಕ್ಕುತಪ್ಪಿಸುವ ಪ್ರಕ್ರಿಯೆಗಳು ಯಾವ ಕಾರಣಕ್ಕೂ ನಡೆಯಬಾರದು. ಇದು ಅಭಿವೃದ್ದಿ ಶೀಲ ರಾಷ್ಟ್ರದ ಪ್ರಗತಿಗೂ ಕುಂಠಿತವಾಗುವುದಲ್ಲದೇ ದೇಶದಲ್ಲಿ ಅರಾಜಕತಗೆ ಸೃಷ್ಟಿಯಾಗುತ್ತದೆ ಅಲ್ಲವೇ?

Sunday, September 11, 2011

ದರ್ಶನ್ ಪ್ರಕರಣ;ನೈತಿಕ ಅಧ:ಪತನದ ಸಂಕೇತ!

ಅಪ್ಪ ಚಿತ್ರರಂಗದಲ್ಲಿ ವಿಲನ್ ಆದ್ರೆ ಮಗ ನಿಜ ಜೀವನದಲ್ಲಿ ವಿಲನ್ ! ಹೌದು ಕಳೆದ 2ದಿನಗಳಿಂದ ದೃಶ್ಯ ಮಾದ್ಯಮಗಳಲ್ಲಿ ಇದೇ ಸುದ್ದಿಯ ವೈಭವೀಕರಣ ನಡೆಯುತ್ತಿದೆ. ಸಾರ್ವಜನಿಕ ಜೀವನದಲ್ಲಿರುವ ನಟನೊಬ್ಬನ ಖಾಸಗಿ ಬದುಕಿನ ತಲ್ಲಣ ಬೀದಿಗೆ ಬಿದ್ದಿದೆ, ಚಿತ್ರರಂಗದ ಗಣ್ಯರಿರಲಿ, ಅಭಿಮಾನಿಗಳ ಸಮೂಹದ ಹೆಸರಿನಲ್ಲಿ ಬೊಬ್ಬೆ ಹಾಕುತ್ತಿರುವ ಕೆಲ ಮಂದಿ ಬೇಷರತ್ ಗೆ ಆಗಿ ದರ್ಶನ್ ಬೆಂಬಲಕ್ಕೆ ನಿಂತು ಬಿಟ್ಟಿದ್ದಾರೆ. ದರ್ಶನ್-ವಿಜಯಲಕ್ಷ್ಮಿಯವರ ಖಾಸಗಿ ಬದುಕಿನ ಒಳನೋಟಗಳೇನೆ ಇದ್ದರು ಅದು ಬೀದಿಗೆ ಬೀಳಬಾರದಿತ್ತು. ಇರಲಿ ಇಂತಹವರನ್ನು ಬೆಂಬಲಿಸುವ ಸಮೂಹ ಸನ್ನಿ ಮಾತ್ರ ಅತ್ಯಂತ ವಿಷಾಧನೀಯ ಸಂಗತಿ. ಸೆಲೆಬ್ರಿಟಿ ಗಳಾದವರನ್ನು ಹಿಂದೂ ಮುಂದೇ ನೋಡದೇ ಅಂದಾನುಕರಣೆ ಮಾಡುವುದು, ತೆರೆಯ ಮೇಲೆ ಇರುವ ಆತನ ಬದುಕನ್ನೇ ಆದರ್ಶವೆಂದು ಭ್ರಮಿಸುವುದು ನಮ್ಮ ಜನರ ಟಿಪಿಕಲ್ ಗುಣ. ಇಂತಹ ಸನ್ನಿವೇಶದಲ್ಲಿ ತಪ್ಪು ಸರಿಗಳ ಆಯ್ಕೆಗಿಂತ ಯಾವುದನ್ನು ಬೆಂಬಲಿಸ ಬೇಕು ಎಂಬುದನ್ನು ಸಹಾ ಜನರ ಅರಿಯುವುದು ಒಳಿತೇನೋ.

        ಒಬ್ಬ ವ್ಯಕ್ತಿ ಯಶಸ್ಸು ಸಾಧಿಸಿದಾಗ ಊರ ಮಂದಿಯೆಲ್ಲ ಆತನ ಹಿಂದೆ ಇರುತ್ತಾರಂತೆ, ಹಾಗೆಯೇ ಸೋತಾಗ ಆತನ ನೆರಳು ಸಹಾ ಆತನನ್ನು ಹಿಂಬಾಲಿಸದು ಎಂಬ ಮಾತಿದೆ. ಆದರೆ ಇದಕ್ಕೆ ತದ್ವಿರುದ್ದವಾಗಿ ಇವತ್ತು ದರ್ಶನ್ ಹಿಂದೆ  ಅಭಿಮಾನದ "ಪೊರ್ಕಿ" ದಂಡು ಇದೆ. ದರ್ಶನ್ ಸಾರ್ವಜನಿಕವಾಗಿ ಒಬ್ಬ ಸಭ್ಯ ನಟ, ಕಷ್ಟಪಟ್ಟು ಮೇಲೆ ಬಂದ ಯಶಸ್ವಿ ನಟ. ಇವತ್ತು ಚಿತ್ರರಂಗದಲ್ಲಿ ಮಿಂಚಲು ಹಿಂದಿನಂತೆ ಸಾಧನೆ-ಶ್ರಮ-ಚೆಲುವು ಈ ಮೂರೂ ಬೇಕಿಲ್ಲ.  ಜೇಬು ತುಂಬಾ ದುಡ್ಡು ಇದ್ದರೆ ಮದ್ಯ ವಯಸ್ಕನೂ ಇಲ್ಲಿ ನಾಯಕನಾಗಲೂ ಯಾವ ತಕರಾರೂ ಇಲ್ಲ ಆದರೆ ಪ್ರೇಕ್ಷಕ ಪ್ರಭು ಮಾತ್ರ ತನಗೆ ಇಷ್ಟ ಬಂದದ್ದನ್ನು ಆಯ್ಕೆ ಮಾಡಿಕೊಂಡು ಸರಿಯಾದ ಪಾಠ ಕಲಿಸುತ್ತಾನೆ.  ಇಂಥಹವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ ಈ ನಡುವೆ ಹಳಬರು ತಮ್ಮ  ಛಾರ್ಮನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ, ಈ ಪೈಕಿ ಪುನೀತ್ ರಾಜ್ ಕುಮಾರ್, ಸುದೀಪ್, ಶಿವರಾಜ್ ಕುಮಾರ್, ರವಿಚಂದ್ರನ್,ದರ್ಶನ್ ಮತ್ತು  ಪ್ರೇಮ್ ಮತ್ತಿತರರು ಇದ್ದಾರೆ. 
      
          ಚಿತ್ರರಂಗ ಬೆಳೆದಂತೆಲ್ಲ ತಾರೆಯರ ಸಂಭಾವನೆಯೂ ಏರುತ್ತಿದೆ, ಹೀಗೆ ಹಣ ಬಂದಾಗ ಅದನ್ನೆಲ್ಲ ಐಷಾರಾಮಿ ಜೀವನಕ್ಕೆ ವೆಚ್ಚ ಮಾಡಿಕೊಂಡು ತಮ್ಮದೇ ಸಿನಿಮಾ ತಯಾರಿಕಾ ಸಂಸ್ಥೆಯನ್ನು ಹುಟ್ಟುಹಾಕಿ ನಿರ್ದೇಶನಕ್ಕೆ ಇಳಿದು ಬಿಡುವವರೂ ಇದ್ದಾರೆ. ಹೀಗೆ ದುಡ್ಡು ಹೆಚ್ಚಿದಂತೆ ವೈಯುಕ್ತಿಕ ಮಟ್ಟದ ಈಗೋ ಸಹಾ ಬೆಳೆಯುತ್ತಿದೆ, ಪರಿಣಾಮ ನೈತಿಕ ಅಧ:ಪತನದಂತಹ ವಿಷಯಗಳು ಬೆಳಕಿಗೆ ಬರುತ್ತಿವೆ. ನಾಗತ್ತಿಹಳ್ಳಿ ಚಂದ್ರಶೇಖರ್-ಐಂದ್ರಿತಾ ಪ್ರಕರಣ, ದುನಿಯಾವಿಜಿ-ಶುಭಾಪೂಂಜ ಪ್ರಕರಣ, ದಿವಂಗತ  ಮೈಸೂರು ಲೋಕೇಶ್ ಪುತ್ರ ಆದಿಲೋಕೇಶನ sexual harassment ಪ್ರಕರಣ, ಮುಂಗಾರು ಮಳೆಯ ಗಣೇಶನ ವಿವಾದಾತ್ಮಕ ಮದುವೆ! ಹಾಸ್ಯ ನಟ ಶರಣ್ ಹಾಗೂ ಛಾಯಾಗ್ರಾಹಕ ವೇಣು ತಮ್ಮ ಮದುವೆ ಸಂಧರ್ಭ ಕೇಳಿಬಂದ ರಂಕಿನ ಕಥೆಗಳು,ಶೃತಿ-ಮಹೇಂದರ್ ನಡುವಿನ ವಿಭಜನೆ!ಸಿನಿಮಾ ಶೂಟಿಂಗ್ ಗೆ ತೆರಳಿದ್ದ ದಿಗಂತ್ ಅಮೇರಿಕಾದಲ್ಲಿ ಮಾಡಿಕೊಂಡರೆನ್ನಲಾದ ಅಪಸವ್ಯ, ನಿರ್ದೇಶಕ ನಾರಾಯಣ ತನ್ನ ತಂದೆ-ತಾಯಿಯರನ್ನೇ ಹೊರಗಟ್ಟಿದ್ದಾರೆ  ಹೀಗೆ ಹತ್ತು ಹಲವು ಘಟನೆಗಳು ನಮ್ಮ ಕಣ್ಣ ಮುಂದಿವೆ. ತೆರೆಯ ಮೇಲೆ ಪ್ರೇಕ್ಷಕರಿಗೆ ಸಜ್ಜನಿಕೆಯಿಂದ ಕಾಣಿಸಿಕೊಳ್ಳುವ  ಈ ಮಂದಿ ವೈಯುಕ್ತಿಕ ಬದುಕಿನಲ್ಲಿ ಅವರ ಈಗೋ ಅಥವ ತೆವಲಿನಿಂದಾಗಿ ಅಸಹ್ಯ ಎನಿಸುವಂತೆ ನಡೆದುಕೊಂಡು ಬಿಡುತ್ತಾರೆ. ನಮ್ಮ ಜನರೂ ಅಷ್ಟೇ ತೆರೆಯ ಮೇಲಿನದ್ದೇ ಜೀವನ ನಂಬಿ ಕೊಂಡು ಬದುಕುವ ಮತ್ತು ತಮ್ಮ ಜೀವನದಲ್ಲಿ ಪಾಲಿಸುವ ಹುಕಿಗೆ ಬೀಳುವ ಜನ..

         ಇವತ್ತು ಸಿನಿಮಾಗಳು ಅತ್ಯಂತ ಪರಿಣಾಮಕಾರಿಯಾದ ಸಂವಹನ ಮಾದ್ಯಮ. ಅಲ್ಲಿ ಜನ-ಜೀವನ ಮತ್ತು ಅವರ ಮನಸ್ಥಿತಿಯನ್ನಾಧರಿಸಿದ ಕಥೆಗಳು ಮತ್ತು ಪಾತ್ರಗಳನ್ನೆ ಸೃಜಿಸಿ ತೆರೆಯ ಮೇಲೆ ಅನಾವರಣ ಮಾಡಲಾಗುತ್ತಿದೆ. ಅದು ಈಗಷ್ಟೇ ಅಲ್ಲ ಚಿತ್ರರಂಗದ ಆರಂಭದ ದಿನಗಳಿಂದಲೂ ಇಂತಹ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಒಂದು ಚಿತ್ರ ಎಷ್ಟು ನೈಜವಾಗಿರುತ್ತೆ ಎನ್ನುವುದಕ್ಕಿಂತ ಫ್ಯಾಂಟಸಿ ಬೆರೆತ ಚಿತ್ರಗಳನ್ನೇ ಹೆಚ್ಚು ಇಷ್ಟ ಪಡಲಾರಂಭಿಸುತ್ತಾರೆ. ಆ ಪಾತ್ರಗಳ ಮೂಲಕ ತಮ್ಮ ಪ್ರತಿನಿಧಿಯನ್ನು ಗುರುತಿಸಿಕೊಂಡು ಬಿಡುತ್ತಾರೆ. ದುರಂತವೆಂದರೆ ಅಂತಹವರು ಚುನಾವಣೆಗೂ ಅಭಿಮಾನವನ್ನ ಎನ್ ಕ್ಯಾಶ್ ಮಾಡಿಕೊಂಡು ಬಿಡುತ್ತಾರೆ. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡು ಮತ್ತು ಆಂದ್ರಪ್ರದೇಶದಲ್ಲಿ ಇಂತಹ ಹುಚ್ಚು ಅಭಿಮಾನ ಳಿದ್ದಾರೆ. ಕರ್ನಾಟಕದ ಮಟ್ಟಿಗೆ ಇಂತಹದ್ದೊಂದು ಅಪಾಯಕಾರಿ ಬೆಳವಣಿಗೆ ಆಗದಿದ್ದರೂ ಒಂದು ಚೌಕಟ್ಟಿನೊಳಗೆ ಎರಡು ಪರ್ವಗಳು ಮುಗಿದಿವೆ. ಒಂದು ಡಾ || ರಾಜ್, ಮತ್ತು ವಿಷ್ಣುವರ್ಧನ್. ಈ ಇಬ್ಬರೂ ಸಮಾಜಕ್ಕೆ ಮಾದರಿಯಾಗುವಂತೆ ಬದುಕಿದವರು, ತೆರೆಯ ಮೇಲಿನ ಬದುಕು ಹಾಗೂ ವೈಯುಕ್ತಿಕ ಬದುಕಿಗೆ ಸಾಮ್ಯ ವಿಟ್ಟುಕೊಂಡು ಆದರ್ಶ ಮೆರೆದವರು. ಇಂತಹ ಮೇರು ಆದರ್ಶಗಳ ನಡುವೆ ಪಡ್ಡೆ ಸಂಸ್ಕೃತಿಯನ್ನು ಹುಟ್ಟು ಹಾಕುವ ಸಿನಿಮಾಗಳ ಮೂಲಕ ಜನಪ್ರಿಯತೆಗೆ ಬಂದ ದರ್ಶನ್, ಗಣೇಶ್ ಸಿನಿಮಾ ಬಿಟ್ಟರೆ ತಮ್ಮ ಪಾಡಿಗೆ ತಾವು ಎಂದು ಬದುಕುತ್ತಿದ್ದಾರೆ. ಆದರೆ ದರ್ಶನ್ ತಮ್ಮ ವೈಯುಕ್ತಿಕ ಬದುಕಿನ ವಿಕೃತಿಯನ್ನು ಸಾರ್ವಜನಿಕವಾಗಿ ತೆರೆದಿಡುವ ಮೂಲಕ ದಿಗಿಲು ಹುಟ್ಟುವಂತೆ ನಡೆದುಕೊಂಡಿದ್ದಾರೆ. ಚಿತ್ರರಂಗದಲ್ಲಿ ಇದು ಮಾಮೂಲು ಎಂದು ಅಂದು ಕೊಳ್ಳಬಹುದಾದರೂ ನಾಯಕ ನಟನೊಬ್ಬನ ವಿಲನ್ ನಡವಳಿಕೆಗಳು ರೇಜಿಗೆ ಹುಟ್ಟಿಸುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ಇಂತಹವರನ್ನು ಬೆಂಬಲಿಸುತ್ತಿರುವ ದಂಡು ದರ್ಶನ್ ಪತ್ನಿ ವಿಜಯಲಕ್ಷ್ಮಿಯವರನ್ನ ಸಾರ್ವಜನಿಕವಾಗಿ ತೆಗಳುವ ಮೂಲಕ ಅಪಮಾನಿಸುತ್ತಿರುವುದು ಸರಿಯಲ್ಲ. ಖಾಸಗಿ ಬದುಕು ಇಂದಲ್ಲ ನಾಳೆ ಸರಿಹೋಗಬಹುದು ಎಂಬ ದೂರದ ಆಸೆಯಲ್ಲೇ ವಿಜಯಲಕ್ಷ್ಮಿ ತಮ್ಮ ಹೇಳಿಕೆಗಳನ್ನು ನೋವಿನಲ್ಲೂ ಬದಲಿಸುತ್ತಿದ್ದಾರೆ ಅದು ಅವರ ವಿವೇಚನೆ!. ಆದರೆ ಇಂತಹ ವಿವೇಚನೆ ದರ್ಶನ್ ಅಭಿಮಾನಿಗಳಿಗಿಲ್ಲ, ಮತ್ತು ಆತನನ್ನು ಬೆಂಬಲಿಸುತ್ತಿರುವ ನಟರಿಗೂ ಇಲ್ಲ. 

      ಪ್ರಜ್ನಾವಂತ ವಲಯದಲ್ಲೂ   ಮಹಿಳೆ ಸಾಮಾಜಿಕವಾಗಿ ಇಂದಿಗೂ ಶೋಷಣೆಗೆ ಒಳಗಾಗಿದ್ದಾಳೆ ಮತ್ತು ಅಸಹನೆ ಬದುಕು ಸಾಗಿಸುತ್ತಿದ್ದಾಳೆ ಎಂಬುದಕ್ಕೆ ಈ ಪ್ರಕರಣ ಕೂಡ ಉದಾಹರಣೆ ಆಗಬಹುದು. ದರ್ಶನ್ ಪ್ರೀತಿಸಿ ಮದುವೆಯಾಗಿದ್ದರೂ ಕೂಡಾ ಪ್ರೀತಿಸಿದವಳ ಮೇಲೆಯೇ ಹಲ್ಲೆ ಮಾಡಿ ಚಪ್ಪಲಿಯಲ್ಲಿ ಹೊಡೆದು ಅಪಮಾನಿಸುವುದು ಎಂತಹ ನಾಗರೀಕತೆ? ಏನೂ ಅರಿಯದ ಮುಗ್ದ ಕಂದಮ್ಮನನ್ನು ಸಾಯಿಸಲು ಯತ್ನಿಸಿದರೆಂದು ದೂರಿನಲ್ಲಿ ತಿಳಿಸಲಾಗಿದೆ. ಒಂದು ವೇಳೆ ಸದರಿ ಘಟನೆಯಲ್ಲಿ ಅನಾಹುತ ಸಂಭವಿಸಿದ್ದರೆ ದರ್ಶನ್ ಏನಾಗುತ್ತಿದ್ದ ಹೇಳಿ? ಇಂತಹದ್ದನ್ನೆಲ್ಲ ಅಭಿಮಾನಿ ವರ್ಗ ಯಾಕೆ ಬೆಂಬಲಿಸುತ್ತದೆ? ಅವರ ಖಾಸಗಿ ಬದುಕಿನ ಅನಾಹುತಗಳಿಗೆ ಅಭಿಮಾನಿ ಹೆಸರಿನ ಜವಾಬ್ದಾರಿ ಏಕೆ? ದರ್ಶನ್ ಇನ್ನೂ ಹಲವು ಚಿತ್ರಗಳಿಗೆ ಸಹಿ ಹಾಕಿದ್ದು ಕೆಲವು ಪೂರ್ಣಗೊಂಡಿವೆ ಮತ್ತೆ ಕೆಲವು  ಅರ್ಧ ಚಿತ್ರೀಕರಣವಾಗಿವೆ. ಹೇಗಿರುವಾಗ ಸದರಿ ಚಿತ್ರಗಳ ನಿರ್ಮಾಪಕರುಗಳೇ ದರ್ಶನ್ ಪರವಾದ ಟ್ರೆಂಡ್ ಹುಟ್ಟು ಹಾಕುವ ಮೂಲಕ ಜನರನ್ನು ಮಾದ್ಯಮಗಳ ಮೂಲಕ 'ಮಂಗ' ಮಾಡುತ್ತಿದ್ದಾರೆಯೇ ಎಂಬ ಅನುಮಾನವೂ ಮೂಡದಿರದು. ಒಟ್ಟಾರೆ ನೈತಿಕ ಅಧ:ಪತನದ ಈ ಅಂಶಗಳು ವಿನಾಕಾರಣ ಪ್ರಚಾರ ಪಡೆದುಕೊಳ್ಳ ತೊಡಗಿದೆಂತೆಲ್ಲಾ ಜನ ಅದಕ್ಕೆ ಮುಗಿಬಿದ್ದು ಸ್ಪಂದಿಸುವುದು ಸಾಂಸ್ಕೃತಿಕ ಪ್ರಜ್ಞೆಯ ದುರಂತವಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...