Sunday, January 31, 2010

ನೀನಾರಿಗಾದೆಯೋ ಎಲೆ ಮಾನವ........?


"ನಮ್ಮನೆ ಹತ್ತಿರ ಕಸದ ರಾಶಿ ಇದೆ, ಈ ವಾರ ಅಲ್ಲಿಗೆ ಬಂದ್ಬಿಡಿ ಸಾರ್ ....!, "ಅದೇ ಆ ರಸ್ತೆ ತಿರುವು ಇದೆಯಲ್ಲ ಅಲ್ಲಿ ಗುಂಡಿ ಬಿದ್ದಿದೆ,ನಾನು ಸುಮಾರ್ ದಿವಸದಿಂದ ಓಡಾಡ್ತೀದಿನಿ.ಈ ನಗರ ಸಭೆಯವರಿಗೆ ಕಣ್ಣಿಲ್ವಾಂತ? ನನಗಂತೂ ಓಡಾಡೋಕೆ ಆಗ್ತಿಲ್ಲ ಸ್ವಾಮಿ... ಈ ಸಲಿ ಏನಾದ್ರು ಆ ಕಡೆ ಬರ್ತೀರೋ..? ಇಂತಹ ಕೊಂಕು ನುಡಿಯನ್ನು ಬಹಳ ಜನರ ಬಾಯಲ್ಲಿ ಕೇಳಿ ಬಿಟ್ಟಿದೀವಿ ಸಾರ್ , ಏನ್ಮಾಡೋದು ಹೇಳಿ ನಮ್ ಕೈಲಿ ಸುಮ್ನೆ ನೋಡಿಕೊಂಡು ಕೂರೋಕೆ ಆಗಲ್ಲ ಮೊದಲು ನಾಗರಿಕೆ ವೇದಿಕೆ ಹೆಸರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಗುಡಿಸೋದು, ಗಿಡ ನೆಡೋದು, ಸ್ವಚ್ಚತೆ ಕಾಯೋದು ಎಲ್ಲಾ ನಡೀತಿತ್ತು ಆದರೆ ಒಂದು ನಿರಂತರತೆ ಅಂತ ಸಿಕ್ಕಿದ್ದು ಮಾತ್ರ 'ನಮ್ಮೂರ ಸೇವೆ' ಅಂತ ಒಂದು ಸೇವಾ ಗುಂಪು ಸೃಷ್ಟಿಯಾದಾಗಲೇ ನೋಡಿ ಎಂದವರು ಹಾಸನ ನಗರದ 'ನಮ್ಮೂರ ಸೇವೆ'ಯ ಸಂಚಾಲಕರಾದ ಎಸ್ ಪಿ ರಾಜೀವ್ ಗೌಡ. ಹೌದು "ನಮ್ಮೂರ ಸೇವೆ" 154 ತುಂಬಿ ಮುನ್ನಡೆಯುತ್ತಿದೆ ಅಂದರೆ ಸತತ 3ವರ್ಷಗಳ ಸೇವೆಯಲ್ಲಿದೆ. ಕೇವಲ 12ಮಂದಿ ಸಮಾನಾಸಕ್ತ ಗೆಳೆಯರು ಸೇರಿ ಆರಂಭಿಸಿದ ಸೇವೆಗೆ ಜೊತೆಯಾದವರ ಸಂಖ್ಯೆ ಈಗ ಹತ್ತಿರ ಹತ್ತಿರ 200! ಯಾವುದೇ ಫಲಾಪೇಕ್ಷೆ ಇಲ್ಲದೇ ತಮ್ಮ ಪಾಡಿಗೆ ತಾವು ಸಾರ್ವಜನಿಕ ಸೇವೆಯಲ್ಲಿ ತೊಡಗುವುದಿದೆಯಲ್ಲ ಅದಕ್ಕಿಂತ ದೊಡ್ಡ ಸೇವೆ ಬೇರೆ ಯಾವುದು ಇರಲಾರದು.ನಮ್ಮೂರ ಸೇವೆ ಯ 'ನಾಗರೀಕರು' ಇದುವರೆಗೆ 5000ಕ್ಕೂ ಹೆಚ್ಚು ಗಿಡ ಮರಗಳನ್ನು ನೆಟ್ಟಿದ್ದಾರೆ, ಸಹಕಾರದ ಕೊರತೆಯಿಂದ ಅವುಗಳ ಪೈಕಿ 2500-3000 ಗಿಡ ಮರಗಳು ಮಾತ್ರ ಅಸ್ತಿತ್ವ ಉಳಿಸಿಕೊಂಡಿವೆ.ನಮ್ಮೂರ ಸೇವೆಯಿಂದ ಹಲವು ಬಡಾವಣೆಗಳು, ಕೊಳಗೇರಿಗಳು, ಮುಖ್ಯ ರಸ್ತೆಗಳು, ಇತರೆ ರಸ್ತೆಗಳು ಸ್ವಚ್ಚವಾಗುತ್ತಿವೆ, ಅನಗತ್ಯ ಗುಂಡಿಗಳು ಮುಚ್ಚಲ್ಪಟ್ಟಿವೆ, ನಗರದ ಹತ್ತು ಹಲವು ಸಂಘಟನೆಗಳು,ಪತ್ರಕರ್ತರು, ಗಣ್ಯರು, ವೃದ್ದ ಜೀವಗಳು, ಮಕ್ಕಳು ,ಮಹಿಳೆಯರೆನ್ನದೇ ಹಲವು ಮಂದಿ ಪ್ರಜ್ಞಾವಂತ ನಾಗರೀಕರು ಇಂದಿಗೂ ನಮ್ಮೂರ ಸೇವಾ ಆಂಧೋಲನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಲ್ಲಿ ಯಾರೂ ಮುಖ್ಯರಲ್ಲ, ನಿರಾಪೇಕ್ಷ ಸೇವೆ ಮಾತ್ರವೇ ಮುಖ್ಯ. ಆದರೆ ಇಂತಹ ಪ್ರಯತ್ನ ಕಣ್ಣ ಮುಂದಿದ್ದರೂ ಸಾರ್ವಜನಿಕ ಜವಾಬ್ದಾರಿಯಿಂದ ನುಣುಚಿಕೊಂಡು ಬೀಜ ಒಡೆಸಿಕೊಂಡ ಹೋರಿಯಂತಾಗಿರುವ ಅಧಿಕಾರಶಾಹಿ ವ್ಯವಸ್ಥೆ ಮಾತ್ರ ಇನ್ನು ಜಾಗೃತಿಯ ದೀವಿಗೆ ಕಂಡಿಲ್ಲದಿರುವುದು ದುರಂತದ ಸಂಗತಿ.
ಅದು ತಕ್ಕಮಟ್ಟಿಗೆ ಮೂಲಭೂತ ಸೌಲಭ್ಯ ಹೊಂದಿದ ಗ್ರಾಮ, ಅಲ್ಲಿ ಆಧುನಿಕತೆಯ ಪರಿಣಾಮ ಸುಸಜ್ಜಿತ ಚರಂಡಿ, ರಸ್ತೆ ,ಬಸ್ ನಿಲ್ಧಾಣ,ಶಾಲೆ, ಅಂಗನವಾಡಿ ವಿದ್ಯುತ್ ಹೀಗೆ ಏನೆಲ್ಲಾ ಬಂದಿದ್ದರು ಜನರ ತುಕ್ಕು ಹಿಡಿದ ಮನಸ್ಥಿತಿಯಿಂದಾಗಿ, ಹಾಳು ರಾಜಕೀಯದಿಂದಾಗಿ ಬದಲಾಗದೇ ಉಳಿದು ಬಿಟ್ಟಿದ್ದಾರೆ. ಇದು ನನ್ನೂರು ಸ್ವಚ್ಚವಾಗಿರಬೇಕು, ನನ್ನ ಜನಕ್ಕೆ ಒಳ್ಳೆಯ ಗಾಳಿ, ಬೆಳಕು,ನೀರು, ಪರಿಸರ ಬೇಕು ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಬದುಕಿದರೆ ಸಾಲದು ಎಲ್ಲರೂ ಬದುಕಬೇಕು ಅನ್ನುವ ಮನಸ್ಥಿತಿ ಇರಬೇಕು.ಆದರೆ ಅಂತಹುದನ್ನೆಲ್ಲ ಸುಲಭದಲ್ಲಿ ನಿರೀಕ್ಷಿಸಲು ಸಾಧ್ಯವೇ ಇಲ್ಲ ಬಿಡಿ. ನನ್ನೂರಿನ ಪಕ್ಕದ ಗ್ರಾಮ ಪೇಟೆ ಮಾಚಗೌಡನ ಹಳ್ಳಿ ಪಟ್ಟಣದಿಂದ 1-2ಕಿಮಿಗಳ ಸನಿಹದಲ್ಲಿದೆ. ಅಲ್ಲಿ ಒಬ್ಬ ಪ್ರಜ್ಞಾವಂತ ರೈತ ಯುವಕ ಪ್ರತಿನಿತ್ಯ ದಿನಬೆಳಗಾಗೆದ್ದು ಗ್ರಾಮ ಸ್ವಚ್ಚತೆಗೆ ಮುಂದಾಗುತ್ತಾನೆ. ಊರಿನ ಬೀದಿಗಳನ್ನು ಸ್ವಚ್ಚವಾಗಿ ಗುಡಿಸಿ, ಚರಂಡಿಯನ್ನು ಸ್ವಚ್ಚಮಾಡಿ ನೀರು ಹಾಕಿ, ತಿಪ್ಪೆ ಸ್ಥಳಾಂತರಿಸಿ,ಊರ ಶಾಲೆಯ ಅಂಗಳ ಶುಚಿಮಾಡಿ ಮರಗಿಡಗಳಿಗೆ ಪೋಷಣೆ ನೀಡಿ , ಅನಗತ್ಯ ಗಿಡಗಂಟಿ ತರಿದು ಹಾಕಿ ನಂತರವಷ್ಠೇ ತನ್ನ ಕಾಯಕ್ಕಕ್ಕೆ ಹೊರಡುತ್ತಾನೆ. ನೀರು ಬಂದ ಸಮಯಕ್ಕೆ ಅನಗತ್ಯ ನೀರು ಪೋಲಾಗುವುದನ್ನು ತಡೆಯುತ್ತಾನೆ, ಬಣ್ಣ ಮಾಸಿದ ಸರ್ಕಾರಿ ಕಟ್ಟಡಗಳಿಗೆ ಸ್ವತಹ ಆಸಕ್ತಿ ವಹಿಸಿ ಬಣ್ಣ ಕಾಣಿಸುತ್ತಾನೆ, ಕಾಲ ಕಾಲಕ್ಕೆ ಕೃಷಿ ಮಾಹಿತಿ ನೀಡುವ ಭಿತ್ತಿ ಪತ್ರಗಳನ್ನು ನಿಗದಿ ಪಡಿಸಿದ ಜಾಗೆ ಗುರುತಿಸಿ ಬಸ್ ನಿಲ್ದಾಣದಲ್ಲಿ ಹಾಕುತ್ತಾನೆ,ಗಿಡ ನೆಡುತ್ತಾನೆ, ಸಾವಯವ ಕೃಷಿಯ ಮಹತ್ವ ಹೇಳುತ್ತಾನೆ ಹೀಗೆ ಜನೋಪಯೋಗಿ ಕಾಯಕದಲ್ಲಿ ತೊಡಗುವ ಈತ ಜನರ ಕಣ್ಣಲ್ಲಿ "ಹುಚ್ಚ". ಯಾರ ಮಾತಿಗೂ ಕಿವಿ ಗೊಡದ ಆತ ಮಾತ್ರ ಎಂದಿನಂತೆ ತನ್ನ ಕೆಲಸವನ್ನು ಯಾವುದೇ ಪ್ರಚಾರವಿಲ್ಲದೇ ಮಾಡುತ್ತಲೇ ಇದ್ದಾನೆ, ಆತನ ಹೆಸರು ಅಪ್ನಾದೇಶ್ ಆನಂದ್. ದಶಕಗಳ ಹಿಂದೆ ಐಎಎಸ್ ಅಧಿಕಾರಿ ಈಗಿನ ಬೆಂಗಳೂರು ಬಿಬಿಎಂಪಿ ಆಯುಕ್ತ ಭರತ್ ಲಾಲ್ ಮೀನಾ ಹೊಸದಾಗಿ ಸಾರ್ವಜನಿಕ ಸೇವೆಗೆ ಕಾಲಿರಿಸಿದ ಸಂಧರ್ಭದಲ್ಲಿ ಸರ್ಕಾರಗಳನ್ನು ನೆಚ್ಚಿ ಕೂರದೇ ಜನರು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವ 'ಅಪ್ನಾದೇಶ್' ನಂತಹ ಸೇವಾ ಗುಂಪುಗಳನ್ನು ಸ್ವಯಂ ಪ್ರೇರಿತವಾಗಿ ಹುಟ್ಟುಹಾಕಿದ್ದರು, ಆ ಬಗ್ಗೆ ರೇಡಿಯೋದಲ್ಲಿ ಕೇಳಿ ತನ್ನನ್ನು ತಾನೇ ಸೇವೆಗೆ ಅರ್ಪಿಸಿಕೊಂಡವರು ಈ ಅಪ್ನಾದೇಶ್ ಆನಂದ್.
ಇಂತಹ ಸೇವೆಗಳ ನಡುವೆ ಪಶ್ಚಿಮ ಘಟ್ಟ ಹಾಗೂ ಅಲ್ಲಿನ ಜೀವ ವೈವಿದ್ಯ ಉಳಿಸಲು ಗುಂಡ್ಯಾ ಯೋಜನೆ ವಿರೋದಿಸುವ ಹಾಸನದ ಕಿಶೋರ್ ಮತ್ತು ಗೆಳೆಯರ ತಂಡ, ಜಿಲ್ಲೆಯ ರೈತರು ಆಲೂಗಡ್ಡೆ ಬೆಳೆಯಿಂದ ಕೋಟ್ಯಾಂತರ ನಷ್ಟ ಅನುಭವಿಸಿದ ಸಂಧರ್ಭದಲ್ಲಿ ಕೃಷಿ ಸಂವಾದ, ಜಾಗೃತಿ, ಕೃಷಿ ಸಹಾಯಕ್ಕಾಗಿ ಯೋಗಾರಮೇಶ್ ಹುಟ್ಟುಹಾಕಿದ ಪೊಟ್ಯಾಟೊ ಕ್ಲಬ್ ,ಪರಿಸರ ಜಾಗೃತಿಗಾಗಿ ತನ್ನನ್ನೇ ಅರ್ಪಿಸಿಕೊಂಡ ಚನ್ನರಾಯ ಪಟ್ಟಣದ ಅಶೋಕ್ ಕುಮಾರ್, ಹಳೆಬೀಡಿನ ಉಮೇಶ್,ಸಾಲುಮರದ ತಿಮ್ಮಕ್ಕ, ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವ ಟಿ ಎಚ್ ಅಪ್ಪಾಜಿಗೌಡ ಹೀಗೆ ಹತ್ತು ಹಲವು ಮಂದಿ ಸೂಕ್ಷ್ಮ ಸಂವೇದನೆಯ ಸಮಾಜ ಸೇವಕರು ನಮ್ಮ ನಡುವೆಯೇ ಇದ್ದಾರೆ. ಆದರೆ ಇದಕ್ಕೆ ತದ್ವಿರುದ್ದವಾಗಿ ಕಿಡಿಗೇಡಿಗಳು ಅಡ್ಡಿಮಾಡುವ ಪ್ರಕ್ರಿಯೆಗಳನ್ನು ನಡೆಸಿದರು ಅವರ'ಸಂವೇದನೆ'ಯ ಗಟ್ಟಿತನ ಸಡ್ಡು ಹೊಡೆದು ನಿಲ್ಲುತ್ತದೆ.
ಸೇವೆ ಎಂಬ ಪದ ಜಾಗತೀಕರಣದ ಸಂಧರ್ಭದಲ್ಲಿ ಅರ್ಥವನ್ನೇ ಕಳೆದುಕೊಂಡಿದೆ ಎಲ್ಲಿ ಸ್ಥಳೀಯ ಸಂಸ್ಥೆಗಳು, ಸರ್ಕಾರಗಳು, ಅನಾಗರಿಕ ಮಂದಿ ತಮ್ಮ ಹೊಣೆಗೇಡಿತನದಿಂದ ವರ್ತಿಸಲಾರಂಭಿಸುತ್ತಾರೋ ಅಲ್ಲೆಲ್ಲಾ 'ಸಮಾಜ ಸೇವೆ' ಯ ಮೂಲಕ ಸಮಾಜ ಸೇವಕರು ಹುಟ್ಟುತ್ತಾರೆ. ಗಾಂಧೀಜಿ,ಬಾಬಾ ಆಮ್ಟೆ, ಮದರ್ ಥೆರೆಸಾ ಇನ್ನು ಹಲವು ಮಂದಿ ಸಮಾಜ ಸೇವೆಯ ಸಾಕ್ಷಿ ಪ್ರಜ್ಞೆಯಂತೆ ನಮ್ಮ ನಡುವೆ ಇಂದಿಗೂ ಜೀವಂತವಾಗಿದ್ದಾರೆ. ಒಂದು ಸಾರ್ಥಕ ಬದುಕಿಗೆ ಸ್ವಲ್ಪವಾದರೂ ಸೇವಾ ಮನೋಭಾವ ಮತ್ತು ಜಾಗೃತ ಮನಸ್ಥಿತಿ ಬೇಕಾಗುತ್ತದೆ ಅದು ಸಾಧ್ಯವಾಗದಿದ್ದರೆ ಕೆಲವು ರೀತಿಯ ಸೇವೆಗಳಿವೆ, ಶ್ರೀಮಂತರು, ಸಂಘ-ಸಂಸ್ಥೆಗಳು ಸೇರಿಕೊಂಡು ಮಾಡುವ ತೋರಿಕೆಯ ಸಮಾಜ ಸೇವೆ.ಸ್ವಾರ್ಥ ಹಿತಾಸಕ್ತಿಯಿಂದ ಮಾಡುವ ಸೇವೆ, ಕೃಷಿಕರ ಉದ್ದಾರದ ನೆಪದಲ್ಲಿ ಮಾಡುವ ಸೇವಾ ವಂಚನೆ, ಬಡರೋಗಿಗಳನ್ನು ಆದರಿಸುವ ನೆಪದಲ್ಲಿ ಹಿತಾಸಕ್ತಿ ಸಾದಿಸುವ ಸೇವೆ, ಉದ್ಯಮಗಳನ್ನು ವಿಸ್ತರಿಸುವ, ವ್ಯವಹಾರ ವಹಿವಾಟುಗಳನ್ನು ವೃದ್ದಿಸಿಕೊಳ್ಳಲು ಮಾಡುವ ಸೇವೆ, ದುಡ್ಡಿಗಾಗಿಯೇ ಮಾಡುವ ಸೇವೆ, ರಾಜಕೀಯ ಹಿತಾಸಕ್ತಿಗೆ ಸೇವೆ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಸಮಾಜ 'ಸೇವೆ'ಗಳು ಜಾಗೃತ ಸ್ಥಿತಿಯಲ್ಲಿವೆ.ಇದು ಸಮಾಜದ ದುರಂತ, ಏನಿದ್ದರೇನು ಯಾರಿಗೂ ಉಪಯೋಗವಿಲ್ಲ ಎಂಬಂತೆ ಬದುಕುವುದಕ್ಕಿಂತ ಕೊಂಚವಾದರೂ ಸಾರ್ಥಕ ಬದುಕಿನ ನೀತಿಗಳನ್ನು ಅನುಸರಿಸಿ ಜೀವನವನ್ನು ಸಮಾಜ ಸೇವೆಗೆ ಅಲ್ಪ ಮಟ್ಟಿಗಾದರೂ ಮುಡುಪಿಡಿ ಅದು ನಿಮ್ಮನ್ನು ಅಜರಾಮರವಾಗಿಸುವುದು. ಅದಕ್ಕೆ ನಿಮ್ಮನ್ನೆ ನೀವು ಪ್ರಶ್ನೆ ಮಾಡಿಕೊಳ್ಳುವ, ವಿಶ್ಲೇಷಿಸುವ ಮನೋಧರ್ಮ, ಒಳಿತು ಕೆಡಕುಗಳನ್ನು ಅರಿಯುವ ಜಾಗೃತ ಪ್ರಜ್ಞೆ ಬೆಳೆಸಿಕೊಳ್ಳಿ ಹತ್ತು ಜನರಿಗೆ ಬೇಕಾದವರಾಗಿ ಬದುಕಿ,ಒಳ್ಳೆಯ ಕೆಲಸ ಮಾಡುವವರನ್ನು ಪ್ರೋತ್ಸಾಹಿಸಿ, ಗೇಲಿ ಪ್ರವೃತ್ತಿ ಕೈಬಿಡಿ ನಾನು ಏನು ಮಾಡಿದ್ದೇನೆ ಎಂಬುದನ್ನು ವಿಮರ್ಶಿಸಿಕೊಳ್ಳಿ 'ಅನಾಗರಿಕ'ರಾಗಿ ಉಳಿಯದಿರಿ ನಾಗರೀಕರಾಗಿರಿ. ಸೇವೆ ಸ್ವಾರ್ಥ ಒಳ್ಳೆಯ ಉದ್ದೇಶಕ್ಕಿರಲಿ ದುರುದ್ದೇಶಕ್ಕಲ್ಲ ನೆನಪಿರಲಿ.

Sunday, January 17, 2010

ಚಕ್ರವ್ಯೂಹ ಇದು ಚಕ್ರವ್ಯೂಹ, ನ್ಯಾಯ ಎಲ್ಲಿದೆ ....?



ಸಂಕ್ರಾಂತಿಯ ಮರುದಿನ ದೀರ್ಘಾವಧಿಯ ಸೂರ್ಯಗ್ರಹಣ, ಏನಪ್ಪಾ ನಾಳಿನ ಕಾರ್ಯಕ್ರಮ ಅಂದುಕೊಂಡು ಮುಸುಕೆಳೆಯುವ ವೇಳೆಗೆ ಸುದ್ದಿ ಬಂತು. ಕಾಡಾನೆಗೆ ವರುಷದ ಮೊದಲ 'ಮಾನವಬಲಿ'ಯ ಸುದ್ದಿ ಜಿಲ್ಲೆಯ ಗಡಿಗ್ರಾಮದಿಂದ ಬಂದಪ್ಪಳಿಸಿತು. ಹಾಸನ ಜಿಲ್ಲೆಯಲ್ಲಿ ಕಾಡಾನೆಗೆ ಈ ದಶಕದಲ್ಲಿ 15ಮಾನವ ಬಲಿ ಆಗಿದೆ, 14 ಆನೆಗಳು ಮಾನವರಿಂದ ಜೀವತೆತ್ತಿವೆ. ಸುಗ್ಗಿಯ ಸಮಯದಲ್ಲಿ, ಬೆಳೆಯ ಸಂಧರ್ಭ ಆನೆಗಳ ದಾಂಗುಡಿ ರೈತರನ್ನು ನಿಸ್ಸಹಾಯಕರನ್ನಾಗಿ ಮಾಡಿದೆ. ಅಂತೆಯೇ ಮನುಷ್ಯರ ದೋಷದಿಂದಾಗಿ ಅನೆಗಳು ಜೀವಭಯದಿಂದ ಬದುಕುವಂತಾಗಿದೆ. ಆನೆ ಮತ್ತು ಮನುಷ್ಯ ರನಡುವಣ ಸಂಘರ್ಷ ಮಲೆನಾಡ ಬದುಕನ್ನು ಸಂಕಷ್ಟಮಯವಾಗಿಸಿದೆ. ಆಡಳಿತಶಾಹಿ ಈ ಕುರಿತು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಈ ಭಾಗದ ಆನೆಗಳು ಮತ್ತು ರೈತರ ಕೂಗು ಅರಣ್ಯರೋದನವಾಗಿದೆ. ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ ಯಾಕೆ ಹೀಗೆ?
ಕಳೆದ ನಾಲ್ಕು ದಶಕಗಳಿಂದೀಚೆಗೆ ಆನೆಗಳು-ರೈತರು ಅತಿ ಹೆಚ್ಚು ಸಂಕಟಕ್ಕ ಸಿಲುಕುವಂತಾಗಿದೆ. ದಕ್ಷಿಣದಲ್ಲಿರುವ ಸುಮಾರು 9109 ಹೆಕ್ಟೇರು ದಟ್ಟಾರಣ್ಯದ ಪಶ್ಚಿಮ ಘಟ್ಟದ ಸಾಲಿನಲ್ಲಿ ನೂರಾರು ಜಾತಿಯ ಕಾಡಿನ ಜೀವರಾಶಿಗಳು ಅಪಾಯದ ಅಂಚಿಗೆ ಸರಿದಿವೆ. ಮಲೆನಾಡ ಪರಿಸರದಲ್ಲಿ ಕಾಣಸಿಗುತ್ತಿದ್ದ ಪ್ರಾಣಿ ಪಕ್ಷಿಗಳು ಕಣ್ಮರೆಯಾಗಿವೆ. ಅಭಿವೃದ್ದಿಯ ಹೆಸರಿನಲ್ಲಿ ಅಣೆಕಟ್ಟೆಗಳು, ಜಲವಿದ್ಯುತ್ ಯೋಜನೆಗಳು ಅಲ್ಲಲ್ಲಿ ಜಾರಿಗೆ ಬರುತ್ತಿದ್ದಂತೆ ಸಮಸ್ಯೆಗಳ ಸರಮಾಲೆ ಧುತ್ತೆಂದು ಪ್ರತ್ಯಕ್ಷವಾಗುತ್ತಿವೆ. ಯೋಜನಾ ನಿರಾಶ್ರಿತರಾದವರಿಗೆ ಸರ್ಕಾರಗಳು ಸರಿಯಾದ ಪುನರ್ವಸತಿ ಒದಗಿಸದಿರುವುದು, ಪರಿಸ ರಸಮತೋಲನಕ್ಕೆ ಪೂರಕವಾದ ಯೋಜನೆಗಳ ಅನುಷ್ಠಾನದಲ್ಲಿ ಹಿನ್ನೆಡೆ ಸಾಧಿಸಿರುವುದು ಸಮಸ್ಯೆಗೆ ಕಾರಣವಲ್ಲವೆ?
ಅಣೇಕಟ್ಟು ಗಳಿಂದ ನಿರಾಶ್ರಿತರಾದ ಮಾನವರಿಗೆ ಪುನರ್ವಸತಿ ಇರುವುದಾದರೆ, ಇಂತಹ ಯೋಜನೆಗಳಿಂದ ತೊಂದರೆ ಅನುಭವಿಸುವ ಪ್ರಾಣಿಗಳಿಗೇಕೆ ಪುನರ್ವಸತಿ ಇಲ್ಲ. ? ಎಲ್ಲಾ ಮನುಷ್ಯರಿಗೂ ಬದುಕುವ ಹಕ್ಕಿರುವಂತೆ ಕಾಡಿನ ಮೂ ಕಪ್ರಾಣಿಗಳಿಗೂ ಬದುಕುವ ಸ್ವತಂತ್ರವಾಗಿ ಜೀವಿಸುವ ಹಕ್ಕಿಲ್ಲವೇ? ಅಭಿವೃದ್ದಿಯ ನೆಪದಲ್ಲಿ ಯಾಕಾದರೂ ಜಲವಿದ್ಯುತ್ ಯೊಜನೆಗಳಿಗೆ, ಕಾಡಿನ ಮಧ್ಯೆ ರಸ್ತೆ ನಿರ್ಮಾಣಕ್ಕೆ, ಮನುಷ್ಯರ ಸುಳಿದಾಟಕ್ಕೆ ಯಾಕೆ ಅವಕಾಶ ಮಾಡಬೇಕು? ಇತ್ತೀಚೆಗೆ ನಾಗರಹೊಳೆ ಅಭಯಾರಣ್ಯದಲ್ಲಿ 10ಕಿಮಿ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಪಶ್ಚಿಮಘಟ್ಟದ ಸಾಲಿನಲ್ಲಿ 18ಕ್ಕೂ ಹೆಚ್ಚು ಜಲವಿದ್ಯುತ್ ಯೋಜನೆಗಳಿಗೆ ಅನುಮೋದನೆ ನೀಡಿದೆ, ದಟ್ಟಾರಣ್ಯದಲ್ಲಿ ರೆಸಾರ್ಟ್ ಸಂಸ್ಕೃತಿಯನ್ನು ಪ್ರೊತ್ಸಾಹಿಸುತ್ತಿದೆ, ಪ್ರವಾಸಿ ಸ್ಥಳಗಳನ್ನಾಗಿ ಅಭಿವೃದ್ದಿಪಡಿಸಲಾಗುತ್ತಿದೆ. ಸಾಮಾಜಿಕ ನ್ಯಾಯದ ಹಂಚಿಕೆ ಸರಿಯಾಗಿಲ್ಲದ ಕಾರಣ ಮಲೆನಾಡು ಪ್ರದೇಶದ ಅರಣ್ಯಗಳ ಒತ್ತುವರಿ ಆಗುತ್ತಿದೆ, ಕಾಂಕ್ರಿಟ್ ಸಂಸ್ಕೃತಿ ತಲೆಎತ್ತಿದೆ ಪರಿಣಾಮ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ.
ಮಲೆನಾಡು ಪ್ರದೇಶಗಳು ಹೇಗೆ ಬದಲಾವಣೆಯಾಗುತ್ತಿವೆ ಎಂಬುದಕ್ಕೆ ಸಣ್ಣದೊಂದು ಉದಾಹರಣೆಯನ್ನು ನೀಡಬಯಸುತ್ತೇನೆ. ಸಕಲೇಶಪುರ ತಾಲೂಕಿನಲ್ಲಿರುವ ಗಡಿಗ್ರಾಮ 'ವನಗೂರು-ಕೂಡುರಸ್ತೆ'ನನ್ನೂರು.3ದಶಕಗಳ ಹಿಂದೆ ತಂದೆಯ ಉದ್ಯೋಗದ ನಿಮಿತ್ತ ಊರನ್ನು ತೊರೆಯುವ ಅನಿವಾರ್ಯತೆ ಇತ್ತು. ಅತ್ತ ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತು ಇತ್ತ ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಈ ಊರು ದಟ್ಟಹಸಿರಿನ ನಿತ್ಯಹರಿದ್ವರ್ಣದ ಕಾಡಿನ ಪರಿಸರದಲ್ಲಿತ್ತು. ಈಗ್ಯೆ 30ವರ್ಷಗಳ ಹಿಂದೆ ಗ್ರಾಮಕ್ಕೆ ಆಧುನೀಕರಣದ ಗಾಳಿ ಬೀಸಿದಾಗ ಮೊದಲಬಾರಿಗೆ ಗ್ರಾಮಕ್ಕೆ ಡಾಂಬರು ಬಂದಿದ್ದು, ವಿದ್ಯುತ್ ಸಂಪರ್ಕ ಬಂದಿದ್ದು, ರೈತ ಸಂಘಟನೆಯ ಉತ್ತುಂಗದ ದಿನಗಳಿಗೆ, ಮಲೆನಾ ಡಸಂಸ್ಕೃತಿಗೆ ಮೆರುಗು ನೀಡುವ ಆಚರಣೆಗಳು, ವಿರಳವಾಗಿದ್ದ ಮನೆಗಳು, ಕಾಸರಗೋಡಿನ ರಾಯಭಾರಿಗಳಂತಿದ್ದ ಬ್ಯಾರಿಗಳು, ಊರಿನ ಆಸುಪಾಸಿನಲ್ಲಿದ್ದ ದಟ್ಟಾರಣ್ಯ ಎಲ್ಲದಕ್ಕೂ ನಾನೆ ಸಾಕ್ಷಿಯಾಗಿದ್ದೆ. ಕಳೆದ ಶನಿವಾರ ಊರು ಹೇಗಿದೆ ನೋಡೋಣ ಎಂದು ಹೊರಟ ನನಗೆ ಅಚ್ಚರಿ, ಆಘಾತ ಎರಡು ಒಟ್ಟಿಗೆ ಆಯಿತು. ಗ್ರಾಮಕ್ಕೀಗ ಆಧುನೀಕರಣದ ಸೋಂಕು ತಗುಲಿದೆ. ಹಸುರಿದ್ದ ಜಾಗವೀಗ ಒಣಗಿದ ಬಯಲಾಗಿದೆ. ಹಲವೆಡೆ ಕಾಡು ಬರಿದಾಗಿದೆ. ದೊಡ್ಡ ಪರ್ವತ ಗಳಲ್ಲಿ ಹರಳು ಕಲ್ಲನ್ನು ಮನಬಂದಂತೆ ಲೂಟಿ ಮಾಡಲಾಗಿದೆ. ಅರಣ್ಯದಲ್ಲಿದ್ದ ಬಿದಿರು ಕೊಳ್ಳೆಹೊಡೆಯಲಾಗಿದೆ, ಸರ್ಕಾರಿ ಜಾಗವನ್ನೆಲ್ಲಾ ಅತಿಕ್ರಮಿಸಿ ರಸ್ತೆಯುದ್ದಕ್ಕೂ ಖಾಸಗಿ ತೋಟ ಮಾಡಿದ್ದಾರೆ, ಗಿಡ-ಮರಗಳಿದ್ದ ಜಾಗದಲ್ಲಿ ಬೃಹತ್ತಾದ ಕಾಂಕ್ರೀಟ್ ಕಟ್ಟಡಗಳು ಬಂದಿವೆ, ಕಾಸರಗೋಡಿನ ಸಂಸ್ಕೃತಿಕ ರಾಯಭಾರಿಗಳು ನಾಮಾವಶೇಷವಾಗಿದ್ದಾರೆ, ಸನಿಹದಲ್ಲಿರುವ ಬೆಟ್ಟಗಳಿಗೆ ರಸ್ತೆಯಾಗಿದೆ, ಅಲ್ಲಿರುವ ಮರಮುಟ್ಟುಗಳನ್ನು ಕಡಿದು ಸಾಗಿಸಲಾಗಿದೆ, ಪರಿಚಯದ ಮುಖಗಳು ಮಾಯವಾಗಿವೆ ಅಪರಿಚಿತ ಮುಖಗಳು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದಿವೆ, ನನ್ನೂರಿನಲ್ಲಿ ನಾನೇ ಅನಾಥ ಪ್ರಜ್ಞೆ ಅನುಭವಿಸುವಂತಾಗಿದೆ. ಊರಿನ ಸನಿಹದ ಹೊಂಗಡಹಳ್ಳದ ಪರಿಸರದಲ್ಲಿ ಗುಂಡ್ಯಾ ಜಲವಿದ್ಯುತ್ ಯೋಜನೆ ದೆವ್ವದಂತೆ ಬಂದು ನಿಂತಿದೆ. ಈಗ ಅಲ್ಲಿ ಪರಿಸರ ಜಾಗೃತಿಯ ಹೋರಾಟ ಜಾಗೃತಾವಸ್ಥೆಯಲ್ಲಿದೆ! ಇದಲ್ಲವೇ ದುರಂತ.
ಯಾಕೆ ಇಂತಹ ಪರಿಸ್ಥಿತಿಗಳಿಗೆ ನಮ್ಮನ್ನೇ ನಾವು ಒಡ್ಡಿಕೊಳ್ಳುವ ದುಸ್ತಿತಿ ಬಂದಿದೆ? ಕಳೆದ ಹತ್ತು ವರ್ಷಗಳ ಹಿಂದೆ ಸುಪ್ರೀಂ ಕೋರ್ಟು ಮಹತ್ವದ ತೀರ್ಪ ನೀಡಿ ಅರಣ್ಯ ಪ್ರದೆಶವನ್ನು ಒತ್ತುವರಿ ಮಾಡಿದವರ ವಿರುದ್ದ ಕ್ರಮ ಕೈಗೊಂಡು ತೆರವು ಗೊಳಿಸುವಂತೆ ಸ್ಪಷ್ಟ ಆದೇಶ ನೀಡಿತ್ತು. ಅಂತಹ ಸಂಧರ್ಭದಲ್ಲಿ ಒತ್ತುವರಿ ತೆರವುಗೊಳಿಸು ವಕಾರ್ಯಾಚರಣೆಗೆ ಅರಣ್ಯಾಧಿಕಾರಿಗಳು ಮತ್ತು ಕಂದಾಯ ಇಲಾಖೆಯವರ ಜೊತೆ ಪತ್ರಕರ್ತನಾಗಿ ಹೋಗುವ ಅವಕಾಶ ಒದಗಿಬಂದಿತ್ತು. ಆದರೆ ನಮ್ಮನ್ನು ಕರೆದೊಯ್ದ ಅಧಿಕಾರಿಗಳನ್ನು ಒತ್ತುವರಿಮಾಡಿದ ಜನರು ಪುನರ್ವಸತಿ (ಯೋಜನಾ ನಿರಾಶ್ರಿತರು)ಒದಗಿಸುವಂತೆ ಕೇಳಿದಾಗ ನಿರುತ್ತರರಾದರಲ್ಲದೇ ತೆರವುಗೊಳಿಸಿದ ನಾಟಕವಾಡಿ ದಾಖಲೆಗಳನ್ನು ಸೃಜಿಸಿ ವಾಪಾಸಾದರು! ಅದೇ ಬೃಹತ್ ಪ್ರಮಾಣದಲ್ಲಿ ಕಾಪಿ ಪ್ಲಾಂಟರುಗಳು ಮಾಡಿ ದ ಅರಣ್ಯ ಒತ್ತುವರಿಯುನ್ನ ತೆರವು ಗೊಳಿಸುವ ತಾಕತ್ತು ಸರ್ಕಾರಿ ಬಿಳಿಯಾನೆಗಳಿಗೆ ಇರಲಿಲ್ಲವೆಂಬುದು ವಿಷಾಧಕರ ಸಂಗತಿ. ಹೀಗೆ ನಮ್ಮಲ್ಲೇ ದೋಷವಿಟ್ಟುಕೊಂಡು ಪ್ರಾಣಿಗಳ ಮೇಲೆ ನಿರಂತರವಾಗಿ ಸಿಟ್ಟು ಪ್ರದರ್ಶಿಸಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ದಶಕದಲ್ಲಿ ಗ್ರಾಮಗಳಿಗೆ ಆನೆಗಗಳು ಹಾಡುಹಗಲೇ ದಾಂಗುಡಿ ಇಟ್ಟಿವೆ, ಕರಡಿಗಳು ಬಂದಿವೆ, ಚಿರತೆಗಳು ಇಂದಿಗೂ ಬರುತ್ತಲೇ ಇವೆ, ಮಂಗಗಳ ಹಾವಳಿ ಹೆಚ್ಚಿದೆ, ಕಾಡು ಜೇನುಗಳು ಊರಿಗೆ ಬರುತ್ತಿವೆ. ನವಿಲುಗಳು ಆಹಾರ ನೀರು ಅರಸಿ ಬರುತ್ತಿವೆ, ಮಲೆನಾಡ ಪರಿಸರದ ಕಾಳಿಂಗ ಸರ್ಪಗಳು ನಾಡಿಗೆ ಬಂದು ಜೀವ ಬಿಡುತ್ತಿವೆ. ಇದಕ್ಕೆ ಪರಿಹಾರ ಒಂದೇ, ಅದೇ 'ಸಾಮಾಜಿಕ ನ್ಯಾಯ'. ಸಧ್ಯ ಜಿಲ್ಲೆಯಲ್ಲೀಗ 38ಕ್ಕೂ ಹೆಚ್ಚು ಆನೆಗಳಿವೆ, ಅವುಗಳನ್ನು ಹಿಡಿದು ನಾಗರಹೊಳೆ ಅರಣ್ಯಕ್ಕೆ ಸಾಗಿಸು ವನಾಟಕ ನಡೆಯುತ್ತಿದೆ. ತೊಂದರೆ ಎದುರಾದಾಗಲೆಲ್ಲ ಒಂದು ಇಲ್ಲವೇ ಎರಡು ಆನೆಗಳನ್ನ ಹಿಡಿಯುವ ಪ್ರಸ್ತಾವನೆ ಬರುತ್ತಿದೆ. ಈ ನಾಟಕವಾಡಲು ಅರಣ್ಯ ಇಲಾಖೆ ಅಧಿಕಾರ ಶಾಹಿ ನಿಯತ್ತಿನಿಂದ ಕಾರ್ಯ ನಿರ್ವಹಿಸದೇ ವಾರ್ಷಿಕವಾಗಿ ಕೋಟ್ಯಾಂತರ ರೂಗಳ ವೆಚ್ಚ ತೋರಿಸಿ ದುಂಡಗಾಗುತ್ತಿದೆ. ಪ್ರಾಣಿಗಳಿಂ ದಹಾನಿಗೀಡಾದ ಬೆಳೆಗಳಿಗೆ 2ಅಂಕಿಯ ಪರಿಹಾರ ಪಡೆಯಲು ಲಂ ಚನೀಡಬೇಕಾದ ಪರಿಸ್ಥಿತಿ ಇದೆ. ಈ ದರಿದ್ರ ಚಕ್ರವ್ಯೂಹದ ವ್ಯವಸ್ಥೆಯಲ್ಲಿ ನ್ಯಾಯ ಎಲ್ಲಿದೆ ? ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮನುಷ್ಯ-ಮಾನವ ಇಬ್ಬರಿಗೂ ಉಳಿಗಾಲವಿಲ್ಲ ನೆನಪಿರಲಿ.

Sunday, January 10, 2010

ಇದೇನು ಸಭ್ಯತೆ? ಇದೇನು ಸಂಸ್ಕೃತಿ?

" ವನ್ಯಾವನ್ರಿ ಅವನು ಯಡಿಯೂರಪ್ಪ? ಬೋಸುಡಿ ಮಗ. ಮಂತ್ರಿಯಾಗ ಬೇಕು ಅಂತ ಶೋಭಕರೆಂದ್ಲಾಜೆನಾ ಕಳಿಸಿದ್ದ, ಬ್ಲಡಿ ಬಾಸ್ಟರ್ಡ್ ಅವನೇನು ಅಂತ ನನಗೆ ಗೊತ್ತು. ಇವನ್ಯಾರ್ರಿ?ಗೌಡರ ವಿರುದ್ದ ರೈತರ ರಣ ಕಹಳೆ ಅಂತೆ ಅವನ ಪೇಪರ್ ನಲ್ಲಿ ಏನೋ ಬರ್ಕೋಂಡಿದ್ದಾನೆ(ಹಾರನಹಳ್ಳಿ ಅಶೋಕ್), ಅವನೊಬ್ಬ ಸಂಡೇ ಲಾಯರ್, ಇನ್ನೊಬ್ಬ ಇದ್ದಾನೆ ಶಿವಮೊಗ್ಗದವನು ಲೀಗಲ್ ಅಡ್ವೈಸರು, ಓಡಾಡೋಕೆ ಗೂಟದ ಕಾರು ಬೇಕು........." ಹೀಗೆ ಅಳತೆ ಮೀರಿ ಒಬ್ಬ ಮಾಜಿ ಪ್ರಧಾನಿ, ಹಿರಿಯ ಮುತ್ಸದ್ದಿ ಎಚ್ ಡಿ ದೇವೇಗೌಡ ಮಾತಾಡಿದ್ದು ಇಡೀ ದೇಶವೇ ನೋಡಿದೆ. ನೈಸ್ ಕಾರಿಡಾರ್ ಸಂಸ್ಥೆ ನಿರ್ಮಿಸಿರುವ ರಸ್ತೆಯ ಇಕ್ಕೆಲಗಳಲ್ಲಿ ಟೌನ್ ಶಿಪ್ ಯೋಜನೆಗಾಗಿ ರೈತರಿಂದ ವಶಪಡಿಸಿಕೊಂಡ ಭೂಮಿಯನ್ನು ಕೋಟಿ ಗಳ ಲೆಕ್ಕದಲ್ಲಿ ಮಾರಿಕೊಳ್ಳುತ್ತಿರುವುದನ್ನು ವಿರೋಧಿಸಿ ಕಳೆದ 3ದಿನಗಳಿಂದ ಆ ಭಾಗದಲ್ಲಿ ಭೂಮಿ ಕಳೆದು ಕೊಂಡ ರೈತರು ನಡೆಸುತ್ತಿದ್ದ ಹೋರಾಟಕ್ಕೆ ದೇವೇಗೌಡ ಧುಮುಕ್ಕುತ್ತಾರೆ ಎನ್ನುವಾಗಲೇ ಏನಾದರೂ ಎಡವಟ್ಟು ಗ್ಯಾರಂಟಿ ಎಂಬ ನಿರೀಕ್ಷೆಯಿತ್ತು. ಆದರೆ ಅದು ಅಸಂವಿಧಾನಿಕ ಪದಗಳ ಬಳಕೆಯಲ್ಲಿ ತೀವ್ರ ಸ್ವರೂಪ ಪಡೆಯಬಹುದು ಎಂಬುದನ್ನು ಯಾರೂ ನಿರೀಕ್ಷಿಸಿರಲಿಲ್ಲ.
ರಾಜಕೀಯ ತಿಕ್ಕಾಟದಲ್ಲಿ ಇಂತಹ ಘಟನೆಗಳು ಇದೇ ಮೊದಲೇನಲ್ಲ, ಆದರೆ ಒಂದು ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿಯೊಬ್ಬ ಸ್ಥಾನ ಗೌರವ ಮರೆತು, ತನ್ನ ರಾಜಕೀಯ ಮುತ್ಸದ್ದಿತನವನ್ನು ಮರೆತು ಕೀಳು ಭಾಷೆಯಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿಯನ್ನು ನಿಂದಿಸುವುದು ದೊಡ್ಡತಪ್ಪು. ಇದು ದೇವೇಗೌಡರ ದುಂಡಾವರ್ತನೆಯೇ ಸರಿ. ರಾಜಕೀಯದಲ್ಲಿ ದೇವೇಗೌಡ ಮಾತ್ರ ಇಂತಹ ಅವಾಚ್ಯ ಶಬ್ದ ಗಳನ್ನು ಬಳಕೆ ಮಾಡಿದ ಮೊದಲಿಗರೇನಲ್ಲ. ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪನವರಿಗೆ ಅಧಿಕಾರ ಸಿಗದಿದ್ದಾಗ ದೇವೇಗೌಡ-ಕುಮಾರಸ್ವಾಮಿಯವರ ನಾಲಿಗೆಯಿದ್ದ ಜಾಗದಲ್ಲಿ ಎಕ್ಕಡ-ಹಾವು ಚಿತ್ರ ಬರೆದು ಚಪ್ಪಲಿ ಸೇವೆ ಮಾಡಿ ಕಾಲಿನಿಂದ ತುಳಿದು ಅತೀ ಕೀಳು ದರ್ಜೆಯ ಶಬ್ದ ಗಳನ್ನು ಬಳಸಿದ ಅನಾಗರಿಕ ಪ್ರತಿಭಟನೆಯ ನೇತೃತ್ವವನ್ನು ಅಂದು ವಹಿಸಿದ್ದವರು ಇದೇ ಯಡಿಯೂರಪ್ಪ. ಈಗ ಮತ್ತದೇ ಪುನರಾವರ್ತನೆಯಾಗಿದೆ ಈ ಅನಿಷ್ಟ ಮಂದಿಗೆ ಕನಿಷ್ಠ ನಾಗರೀಕತೆಯ ಪ್ರಜ್ಞೆಯೂ ಇಲ್ಲದಂತಾಗಿರುವುದು ದುರಂತ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಮಾತಿದೆ, ಹಿಂದಿನ ದಿನಗಳಲ್ಲಾದರೆ ಎಲೆಕ್ಟ್ರಾನಿಕ್ ಮೀಡಿಯಾಗಳಿರಲಿಲ್ಲ, ಪತ್ರಿಕೆಗಳಲ್ಲಿ ಬಂದ ಮಾತುಗಳನ್ನು ತಿರುಚಿದ್ದಾರೆ ಎಂದು ತಪ್ಪಿಸಿ ಕೊಳ್ಳುತ್ತಿದ್ದ ರಾಜಕಾರಣಿಗಳು ಈಗ ತಪ್ಪಿಸಿ ಕೊಳ್ಳಲು ಸಾಧ್ಯವೇ ಇಲ್ಲ, ಪ್ರತಿಯೋದು ನೇರವಾಗಿ ಲೈವ್ ಆಗುತ್ತೆ, ಹೀಗಿರುವಾಗ ತಾವೇನು ಮಾತಾಡುತ್ತಿದ್ದೇವೆ ಎಂಬ ಪರಿಜ್ಞಾನ ಇಟ್ಟುಕೊಳ್ಳದೇ ಮಾತನಾಡುವುದು ಸಮಾಜದ ಮೇಲೆ ಎಂತಹ ಪರಿಣಾಮ ಬೀರೀತು?
ಅಷ್ಟಕ್ಕೂ ಈ ದೇವೇಗೌಡರಿಗೇನಾಗಿದೆ? ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ರಾಜಕೀಯದಲ್ಲಿರುವ ಇವರು ದೇಶದ ಅತ್ಯುತ್ತನ್ನತ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ. ನೂರಾರು ಚಳುವಳಿಗಳಲ್ಲಿ ಪಾಲ್ಗೊಂಡಿದ್ದಾರೆ, ವೇದಿಕೆಗಳಲ್ಲಿ ತುಂಬಾ ದೊಡ್ಡ ಮಾತುಗಳನ್ನು ಸಮಯಾನು ಸಂಧರ್ಭ ಮಾತನಾಡುತ್ತಾರೆ ಆದರೆ ಪ್ರಯೋಜನವೇನು? ಸ್ಥಿಮಿತ ಕಳೆದು ಕೊಂಡು ಮನ ಬಂದಂತೆ ಮಾತನಾಡಿದರೆ ಇವರ ಯಾವ ಘನತೆ-ಗೌರವವಿದ್ದರೆಷ್ಟು, ಬಿಟ್ಟರೆಷ್ಟು? 1995ರಲ್ಲಿ ಹೆಚ್ ಡಿ ದೇವೇಗೌಡ ಮುಖ್ಯಮಂತ್ರಿಯಾಗಿದ್ದ ದಿನಗಳಲ್ಲೇ ನೈಸ್ ಕಾರಿಡಾರ್ ಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಜೆ ಎಚ್ ಪಟೇಲರು ಮುಖ್ಯಮಂತ್ರಿಯಾದಾಗ ರಸ್ತೆಗಾಗಿ ಜಮೀನು ನೀಡಿದ್ದಾರೆ, ಟೌನ್ ಶಿಪ್ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ನೂರು ಚಿಲ್ಲರೆಯಷ್ಟು ಭೂಮಿಯನ್ನು ಮಂಜೂರು ಮಾಡಿದೆ. ಸದರಿ ನೂರು ಚಿಲ್ಲರೆ ಭೂಮಿಯನ್ನು ಸ್ಥಳೀಯ ರೈತರಿಂದ ಕೊಳ್ಳುವಾಗ ಕೇವಲ 80ಸಾವಿರದಿಂದ 3ಲಕ್ಷಗಳವರೆಗೆ ಎಕರೆಯೊಂದಕ್ಕೆ ಖರೀದಿ ಮಾಡಿದ ಸರ್ಕಾರ ನೈಸ್ ಸಂಸ್ಥೆಗೆ ನೀಡಿದೆ. ಈಗ ಅದೇ ನೈಸ್ ಸಂಸ್ಥೆ ಸದರಿ ಜಮೀನನ್ನು ಎಕರೆಗೆ 3ರಿಂದ7ಕೋಟಿ ಪ್ರತೀ ಎಕರೆಗೆ ಮಾರುತ್ತಿದೆ. ಈ ಬೆಳವಣಿಗೆಯಿಂದ ಕಂಗಾಲಾದ ರೈತರು ತಮಗೆ ನ್ಯಾಯವಾದ ಬೆಲೆ ನೀಡಿ ಜಮೀನು ಖರೀದಿಸುವಂತೆ ಹೋರಾಟ ಮಾಡುತ್ತಿರುವುದು ಖರೆ. ಈ ಹೋರಾಟಕ್ಕೆ ಡಿವೈಎಫ್ ವೈ ಮತ್ತು ಜೆಡಿಎಸ್ ಬೆಂಬಲ ನೀಡಿದೆ. ಸ್ವತಹ ದೇವೇಗೌಡರು ಈ ಹೋರಾಟಕ್ಕೆ ಧುಮುಕಿದ್ದಾರೆ, ಒಂದೆಡೆ ರೈತರಿಗೆ ಬೆಂಬಲ ನೀಡಿದಂತೆ ಆಗಬೇಕು ಮತ್ತೊಂದೆಡೆ ಅಶೋಕ್ ಖೇಣಿಯ ಅಟ್ಟಹಾಸ ಮುರಿಯಬೇಕು, ಆದರೆ ಈ ನಡುವೆ ಮುಖ್ಯ ಮಂತ್ರಿ ಯಡಿಯೂರಪ್ಪನವರ ವೈಯುಯಕ್ತಿಕ ಮತ್ತು ಸಾರ್ವಜನಿಕ ತೇಜೋವಧೆಯಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ ಪತ್ರಿಕೆಯೊಂದರಲ್ಲಿ ಬಂದ ಮುಖಪುಟದ ಸುದ್ದಿಯಲ್ಲಿ ದೇವೇಗೌಡರ ಜೊತೆಗಿರುವವರು ನಿಜವಾದ ರೈತರಲ್ಲ, ಅವರೆಲ್ಲ ಬಾಡಿಗೆ ಗೂಂಡಾಗಳು ಎಂದು ಬರೆಯಲಾಗಿದೆಯಲ್ಲದೇ ದೇವೇಗೌಡರ ವಿರುದ್ದ ರೈತರ ರಣಕಹಳೆ ಎಂಬ ಶೀರ್ಷಿಕೆ ನೀಡಲಾಗಿದೆ, ಅಸಲಿಗೆ ಗೌಡರನ್ನು ಕೆರಳಿಸಿರುವುದೇ ಈ ಸಂಗತಿ. ಅಷ್ಟೇ ಅಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಇಂದು (ಜ.೧೦)ಬೆಳಿಗ್ಗೆ ದೇವೇಗೌಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಕುರಿತು ಖಾರವಾಗಿ ಮಾತನಾಡಿದ್ದು, ಮಂಗಳೂರಿನಲ್ಲಿ ಬಿಜೆಪಿ ಅಧ್ಯಕ್ಷ ಸದಾನಂದ ಗೌಡ ಮುಖ್ಯಮಂತ್ರಿಯ ಮಾತಿಗೆ ಇಂಬು ನೀಡಿ 'ಮಣ್ಣಿನ ಮಗ ರಾಜಕೀಯ ಸರ್ವನಾಶಕ್ಕೆ ಹುಟ್ಟಿದ್ದಾರೆ' ಎಂದದ್ದನ್ನು ಮಾಧ್ಯಮ ಮಿತ್ರರು ಮುಗಿಬಿದ್ದು ದೇವೇಗೌಡರನ್ನು ಪ್ರಶ್ನಿಸುತ್ತಿದ್ದಂತೆ ಅಡೆತಡೆ ಇಲ್ಲದೇ ಮಾತುಗಳನ್ನು ಹರಿಯಬಿಟ್ಟದ್ದು ಒಬ್ಬ "ಮುತ್ಸದ್ದಿ" ರಾಜಕಾರಣಿ.
ಈ ಹಿಂದೆ ದೇವೇಗೌಡ ರಾಜ್ಯದ ಮುಖ್ಯಮಂತ್ರಿಯಾಗುವ ಸಂಧರ್ಭ ಬಂದಾಗ ರಾಮಕೃಷ್ಣ ಹೆಗಡೆಗೆ ಬೆಂಬಲಿಗರಿಂದ ಚಪ್ಪಲಿ ಸೇವೆ ಮಾಡಿದಸಿದ್ದು, ಮಾಜಿ ಮುಖ್ಯಮಂತ್ರಿ ದಿವಂಗತ ವಿರೇಂದ್ರಪಾಟೀಲರು, ಚಿತ್ರ ನಟರಾದ ಶಂಕರ್ ನಾಗ್ - ಅನಂತನಾಗ್ ಚುನಾವಣಾ ಪ್ರಚಾರಕ್ಕೆ ಬಂದಾಗ ಕಲ್ಲು ಹೊಡೆಸಿದ್ದು, ಒಮ್ಮೆ ಲಿಂಗಾಯಿತರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದು ಹೀಗೆ ದೇವೇಗೌಡ ಮಾಡಿಕೊಂಡ ಅವಾಂತರಗಳು ಒಂದೆರೆಡಲ್ಲ. ಅಪ್ಪನಿಗಿಂತ ಮಕ್ಕಳೇನು ಕಮ್ಮಿ ಇಲ್ಲ ಎನ್ನುವಂತೆ ಮಾಜಿ ಮುಖ್ಯಕುಮಾರಸ್ವಾಮಿ ಕೂಡ ವಿಧಾನ ಪರಿಷತ್ ಚುನಾವಣೆ ಮುಗಿಯುತ್ತಿದ್ದಂತೆ ಹೊಂದಾಣಿಕೆ ಮಾಡಿಕೊಂಡಿದ್ದ ಕಾಂಗ್ರೆಸ್ ಪಕ್ಷದ ವಿರುದ್ದವೇ ಮಾತಾಡಿದ್ದಾರೆ, ಯಡಿಯೂರಪ್ಪನ ಸಂಬಳದಲ್ಲಿ ಬದುಕುತ್ತಿದ್ದಾರೆ ಎಂಬ ಕ್ಷುಲ್ಲುಕ ಮಾತಾಡುತ್ತಾರೆ. ೨-೩ ದಿನಗಳ ಹಿಂದೆ ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ದೇವೇಗೌಡ ಹಾಸನದಲ್ಲಿರುವ ಅವರ ಕಛೇರಿಗೆ ಬರದಿದ್ದರು ಲಕ್ಷಾಂತರ ರೂ ವೆಚ್ಚಲ್ಲಿ ಕೊಠಡಿ ನವೀಕರಣವಾಗುತ್ತಿದೆ, ಗೌಡರು ಜಿಲ್ಲೆಗೆ ಬಂದು ಮತದಾರನ ಬವಣೆ ಕೇಳುತ್ತಿಲ್ಲ, ಬೆಂಗಳೂರಿಗೆ ಹೋದರೆ ಅಲ್ಲು ದರ್ಶನ ಭಾಗ್ಯ ಸಿಕ್ಕರೆ ಅದೃಷ್ಟ ಎಂದು ವಸ್ತು ನಿಷ್ಟವಾಗಿ ಬರೆದರೆ ಅದನ್ನು ಅರಗಿಸಿಕೊಳ್ಳಲಾಗದ ಇನ್ನೊಬ್ಬ ಪುತ್ರ ರೇವಣ್ಣ ಪತ್ರಕರ್ತರ ವಿರುದ್ದವೇ ಕಿಡಿಕಾರುತ್ತಾರೆ. ಯಾಕೆ ಹೀಗೆ ? ಈ ಅಪ್ಪ ಮಕ್ಕಳಿಗೇನು ಕೇಡುಗಾಲ ಬಂದಿದೆ? ಸದಾ ಜಿಲ್ಲೆಯ ಅಭಿವೃದ್ದಿ ಬಗ್ಗೆ ಮಾತಾಡುವ ಇವರು ವಿವೇಚನಾಯುಕ್ತ ನಡವಳಿಕೆ ಕಲಿಯೋದು ಯಾವಾಗ? ಹೋಗಲಿ ದೇವೇಗೌಡರಿಗಾದರೂ ಸ್ಥಿಮಿತ ಯಾಕೆ ಕಳೆದುಕೊಳ್ಳಬೇಕು?, ಅವರ ಸ್ಥಾನಮಾನಕ್ಕನುಗುಣವಾಗಿ ಮಾತನಾಡಲು ಅಡ್ಡಿಏನು? ಇದರಿಂದ ಸಮಾಜಕ್ಕೆ ಎಂತಹ ಸಂದೇಶ ರವಾನೆಯಾದೀತು ಎಂಬ ಎಚ್ಚರ ಬೇಡವೇ? ಇದ್ಯಾವ ಸಭ್ಯತೆ? ಇದ್ಯಾವ ಸಂಸ್ಕೃತಿ?

Sunday, January 3, 2010

'ಆಪ್ತಮಿತ್ರ' ಆಪ್ತನಾಗಿದ್ದೇಕೆ ಗೊತ್ತಾ?

1972ನೇ ಇಸವಿ ಅದು, ಖ್ಯಾತ ನಿರ್ದೇಶಕ ದಿವಂಗತ ಕಣಗಾಲ್ ಪುಟ್ಟಣ್ಣ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ ಚಿತ್ರಗಳನ್ನು ಒಂದರಮೇಲೊಂದರಂತೆ ನಿರ್ದೇಶಿಸುತ್ತಿದ್ದರು. ಡಾ ರಾಜ್ ಅಭಿನಯದ ಕರುಳಿನ ಕರೆ, ಸಾಕ್ಷಾತ್ಕಾರ,ಆರತಿ-ಕಲ್ಪನಾ ಅಭಿನಯದ ಬೆಳ್ಳಿಮೋಡ,ಗೆಜ್ಜೆಪೂಜೆ, ಶರಪಂಜರದಂತರ ದಂತಹ ಅವಿಸ್ಮರಣೀಯ ಚಿತ್ರ ಗಳನ್ನು ನೀಡಿದ ನಂತರ ಆಂಗ್ರಿ ಯಂಗ್ ಮ್ಯಾನ್ ಕಥೆಯುಳ್ಳ ಸಾಮಾಜಿಕ ತಾಕಲಾಟಕ್ಕೆ ಅವಕಾಶ ಮಾಡುವ ಚಿತ್ರ ನಿರ್ದೇಶಿಸಲು ನಿರ್ದರಿಸಿದ್ದರು. ಅದಕ್ಕಾಗಿ ಆಂಗ್ರಿ ಯಂಗ್ ಮ್ಯಾನ್ ಪಾತ್ರಕ್ಕಾಗಿ ಹುಡುಕಾಟದಲ್ಲಿದ್ದರು. ಅದು ಪುಟ್ಟಣ್ಣ ಕಣಗಾಲ್ ನಿರ್ದೇಶನದ 8ನೇ ಚಿತ್ರವಾಗಿತ್ತು. ಹಲವು ಮುಖಗಳನ್ನು ಸಂದರ್ಶಿಸಿದರು ಪುಟ್ಟಣ್ಣನವರಿಗೆ ಯಾರೂ ಹೊಂದುವಂತಹ ನಟ ಸಿಕ್ಕಿರಲಿಲ್ಲ. ಅಂತಹ ಒಂದು ದಿನ ಪುಟ್ಟಣ್ಣ ವಾಸ್ತವ್ಯ ಹೂಡಿದ್ದ ಹೋಟೆಲ್ ಗೆ ಆಸೆಕಂಗಳಿಂದ ಧಾವಿಸಿ ಬಂದವನು 22ಹರೆಯದ ಉತ್ಸಾಹದ ಚಿಲುಮೆಯಂತಿದ್ದ ಯುವಕ. ಆತ ಕಣ್ಣುಗಳ ಸೆಳೆತ, ಮುಖದ ಭಾವನೆ, ಡೈಲಾಗ್ ಡೆಲಿವರಿ ಪುಟ್ಟಣ್ಣನಂತಹ ಪುಟ್ಟಣ್ಣನವರನ್ನೆ ಮರುಳು ಮಾಡಿಬಿಟ್ಟಿತು. ಹಾಗೇ ಬಂದ ಹುಡುಗ ಕೈಯಲ್ಲಿ ನಾಗರ ಹಾವನ್ನು ಹಿಡಿದು "ಹಾವಿನ ರೋಷ 12ವರುಷ/ನನ್ನ ನೂರು ವರುಷ/ ಈ ರಾಮನು ಇಟ್ಟ ಬಾಣದ ಗುರಿಯು ಎಂದೂ ತಪ್ಪಿಲ್ಲ//ಈ ರಾಮಾಚಾರಿಯ ಕೆಣಕೋ ಗಂಡು ಇನ್ನೂ ಹುಟ್ಟಿಲ್ಲ// ಆ ಭೀಮನ ಬಲದವನು/ ಚಾಣಕ್ಯನ ಛಲದವನು/ಈ ದುರ್ಗದ ಹುಲಿ ಇವನು// ಎಂದು ಅಡಿಯಿಟ್ಟ ರಾಮಾಚಾರಿ ಜನಮನದಲ್ಲಿ ಭದ್ರವಾಗಿ ಬೇರೂರಿ ನಿಂತುಬಿಟ್ಟ.ಅಂದು ಕೊಂಡಿದ್ದನ್ನು ಸಾಧಿಸುವ ಛಲ ಇಟ್ಟುಕೊಂಡೆ ಬೆಳೆದು ಬಿಟ್ಟ, ಜನಸಾಮಾನ್ಯರ ಕಣ್ಮಣಿಯಾಗಿಬಿಟ್ಟ. ಅವನೇ ಸಂಪತ್ ಕುಮಾರ್ ಅಲಿಯಾಸ್ ಡಾ ವಿಷ್ಣುವರ್ದನ್!!
ಹೀಗೆ ಜನಮಾನಸದಲ್ಲಿ ಆಳವಾಗಿ ನೆಲೆನಿಂತ ವಿಷ್ಣು ಯಾರಿಗೂ ತಿಳಿಯದಂತೆ ಒಂದೂ ಮಾತು ಆಡದೇ ಹೊರಟೇ ಹೋದರು. ವಂಶವೃಕ್ಷ ಚಲನ ಚಿತ್ರದಿಂದ ಆರಂಭಗೊಂಡ ವಿಷ್ಣುವಿನ ಚಿತ್ರ ಯಾತ್ರೆ ಅಂತ್ಯಗೊಂಡಿದ್ದು 200ನೇ ಚಿತ್ರ ಆಪ್ತರಕ್ಷಕ ದಲ್ಲಿ. ಚಿತ್ರರಂಗದಲ್ಲಿ ಯಾರಿಗೂ ಕೇಡು ಬಯಸದ, ಸರ್ವ ಜನಾಂಗದ ಒಳಿತು ಬಯಸುತ್ತಿದ್ದ, ಎಡಗೈಲಿ ಕೊಟ್ಟದ್ದು ಬಲಗೈಗೆ ತಿಳಿಯದಂತೆ ಸಹಾಯ ಹಸ್ತ ಚಾಚುತ್ತಿದ್ದ ಆಪ್ತಮಿತ್ರ ಇಂದು ನಮ್ಮೊಡನಿಲ್ಲ. ಆದರೆ ಆವರು ಉಳಿಸಿ ಹೋದ ನೆನಪುಗಳು, ಮಾಡಿದ ಕಾರ್ಯಗಳು ನಮ್ಮೊಂದಿಗಿವೆ. ಇಂತಹ ವಿಷ್ಣುವರ್ಧನ್ ಬಗ್ಗೆ ಅವರ ಸಾವಿನ ಸಂಧರ್ಭದಲ್ಲಿ ಅಭಿಮಾನಿಗಳ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಅನಾಗರೀಕವಾಗಿ ನಡೆದುಕೊಂಡರು. ವಿಷ್ಣುವಿನ ಶವಸಂಸ್ಕಾರದ ನಂತರ ವಾಹನಗಳಿಗೆ ಬೆಂಕಿ ಇಟ್ಟ ಪ್ರಕರಣ, ಆಸ್ತಿಪಾಸ್ತಿಗಳ ಮೇಲೆ ಕಲ್ಲುತೂರಿ ಹಾನಿಮಾಡಿದ್ದು, ಪೊಲೀಸರು ಅನಿವಾರ್ಯವಾಗಿ ಗಾಳಿಯಲ್ಲಿ ಗುಂಡು ಹಾರಿಸುವಂತೆ ಪ್ರಚೋದಿಸಿದ್ದು ಅಂತಿಮ ಕ್ಷಣದ ಕಪ್ಪು ಚುಕ್ಕೆ.
ಇಷ್ಟಕ್ಕೂ ಹೇಗೆ ಬೆಳೆದರು, ಯಾಕೆ ಚಿತ್ರರಸಿಕರ ಕಣ್ಮಣಿಯಾದರು ಎನ್ನುವುದೇ ಒಂದು ಇಂಟರೆಸ್ಟಿಂಗ್ ಕಥಾನಕ. ವಿಷ್ಣು ಹುಟ್ಟಿದ್ದು ಸೆ. 18ನೇ, 1950ರಲ್ಲಿ ತಂದೆ ನಾರಾಯಣರಾವ್ ಅಂದಿನ ದಿನಗಳಲ್ಲಿ ಪ್ರಸಿದ್ದ ರಂಗ ನಟ, ಚಿತ್ರ ಸಂಭಾಷಣೆಕಾರ, ಓರ್ವ ಸಹೋದರಿ ರಮಾರಾಮಚಂದ್ರ ಖ್ಯಾತ ಕಥಕ್ ನೃತ್ಯಗಾತಿ ಮೈಸೂರಿನ ಚಾಮುಂಡಿ9ಪುರಂನಲ್ಲಿ ನೆಲೆಸಿದ ವಿಷ್ಣು ಅಲ್ಲಿಯೇ ವಿದ್ಯಾಭ್ಯಾಸ ಪೂರೈಸಿದರು. ರಂಗನಾಟಕಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಬಾಲ್ಯದಲ್ಲಿಯೇ ವಂಶವೃಕ್ಷ ಚಿತ್ರದಲ್ಲಿ ಕಾಣಿಸಿಕೊಂಡರಾದರೂ ಅಂದಿನ ಸಂಪತ್ ಕುಮಾರ್ ಗೆ ಬ್ರೇಕ್ ನೀಡಿದ್ದು ಮಾತ್ರ ಪುಟ್ಟಣ್ನ ಕಣಗಾಲ್ ರ ನಾಗರಹಾವು ಚಲನ ಚಿತ್ರ.ನಾಯಕನಾಗಿ ಅಭಿನಯಿಸಿದ ಮೊತ್ತಮೊದಲ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದ ವಿಷ್ಣು ನಂತರದ ದಿನಗಳಲ್ಲಿ ಕರ್ಣ, ಬಂಧನ, ಹೃದಯಗೀತೆ, ಮಲಯಮಾರುತ, ಬಂಗಾರದ ಜಿಂಕೆ, ಸುಪ್ರಭಾತ ದಂತಹ ನೂರಾರು ಚಿತ್ರಗಳಲ್ಲಿ ಅವಿಸ್ಮರಣೀಯ ಅಭಿನಯ ನೀಡುವ ಮೂಲಕ ಜನಮನ ಸೂರೆಗೊಂಡರು. ವಿಷ್ಣು ಚಿತ್ರ ಬದುಕಿಗೆ ಒಂದು ಹಂತದಲ್ಲಿ ತಿರುವು ನೀಡಿದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೆಶನದ ನಾಗರಹೊಳೆ ಚಿತ್ರದಲ್ಲಿ ಮೊದಲ ಹಾಡು ಹಾಡುವ ಮೂಲಕ ಹಾಡುಗಾರರಾಗಿಯೂ ದಾಖಲಾದರು. ಈ ಚಿತ್ರದಲ್ಲಿ ವಿಷ್ಣು ಗೆ ನಾಯಕಿಯಾಗಿ ನಟಿಸಿದ್ದು ಅವರ ಮನದನ್ನೆ ಭಾರತಿ ವಿಷ್ಣುವರ್ದನ್!
ಅದು ರಾಜ್ ಕುಮಾರ್ ಯುಗ, ರಾಜ್ ಕುಮಾರ್ ಒಂದರ ಮೇಲೊಂದರಂತೆ ಹಿಟ್ ಆಗುತ್ತಿದ್ದವು, ರಾಜ್ ಚಿತ್ರ ನಿರ್ಮಾಣ ಸಂಸ್ಥೆ ಸಹಾ ಸೃಷ್ಟಿಯಾಗಿತ್ತು ಎಲ್ಲೆಲ್ಲೂ ರಾಜ್ ಅಲೆ ಸೃಷ್ಟಿಯಾಗಿತ್ತು. ಇಂತಹ ಸನ್ನಿವೇಶದಲ್ಲಿ ಬಂದ 'ರಾಮಾಚಾರಿ' ರಾಜ್ ಕುಮಾರ್ ಅಲೆಯ ನಡುವೆಯೂ 2ನೇ ಸ್ಥಾನಕ್ಕೆ ನೆಲೆನಿಂತರು. ವಾಸ್ತವ ನೆಲೆಗಟ್ಟಿನಲ್ಲಿ ರಾಜ್-ವಿಷ್ಣು ನಡುವೆ ಪೈಪೋಟಿ ಇಲ್ಲದಿದ್ದರು , ಅಭಿಮಾನಿಗಳ ಅತಿರೇಕ ಅವರಿಬ್ಬರನ್ನು ಚಿತ್ರರಂಗದ ಅಂಗಳದಲ್ಲಿ ಎದುರಾಳಿಗಳಂತೆಯೇ ಬಿಂಬಿಸಿತು. ಇಂತಹ ಸನ್ನಿವೇಶದಲ್ಲಿಯೇ ರಾಜ್ ಮತ್ತು ವಿಷ್ಣು ಜೊತೆಯಾಗಿ ನಟಿಸಿದ ಗಂಧದ ಗುಡಿ ಚಿತ್ರದ ಕ್ಲೈಮಾಕ್ಷ್ ಚಿತ್ರೀಕರಣದ ವೇಳೆ ಅನಾಮಿಕ ಕಿರಾತಕರ ಕಿತಾಪತಿಯಿಂದಲೋ, ದ್ವೇಷ ಸೃಷ್ಟಿಸುವ ಹುನ್ನಾರದಿಂದಲೋ ಬಂದೂಕಿನೊಳಗೆ ನೈಜ ಗುಂಡು ಸೇರಿತ್ತು. ವಿಶ್ರಾಂತಿಯ ವೇಳೆ ಬಾಲಣ್ಣನ ಕೈಲ್ಲಿದ್ದ ಬಂದೂಕಿನಿಂದ ಅಕಸ್ಮಿಕವಾಗಿ ನಿಜವಾದ ಗುಂಡು ಹಾರಿಯೇ ಬಿಟ್ಟಿತು.ಆಗ ವಿಷ್ಣು ಮತ್ತು ಇಡೀ ಚಿತ್ರ ತಂಡ ಸ್ತಂಬೀಬೂತವಾಯ್ತು, ಅಣ್ಣ ರಾಜ್ ಕುಮಾರ್ ಕೂದಲೆಳೆಯ ಅಂತರದಿಂದ ಪಾರಾದರು. ಈ ಘಟನೆ ಇಡೀ ಚತ್ರರಂಗದಲ್ಲಿ ದಿಗ್ಮೂಡರನ್ನಾಗಿಸಿತು. ಪರಿಣಾಮ ಹುಚ್ಚೆದ್ದ ಅಭಿಮಾನಿಗಳಿಂದ ವಿಷ್ಣು ಮನೆಯ ಮೇಲೆ ಕಲ್ಲು ತೂರಾಟವಾಯಿತು. ಹಲ್ಲೆಯ ಯತ್ನ ವಾಯಿತು. ಮನನೊಂದ ವಿಷ್ಣು ಮದ್ರಾಸ್ ಗೆ ತೆರಳಿ ಕೆಲಕಾಲ ಅಲ್ಲೆ ಉಳಿಯುವ ಅನಿವಾರ್ಯತೆ ಸೃಷ್ಟಿಯಾಯಿತು. ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಮತ್ತು ಸಚಿವ ಜೀವರಾಜ್ ಆಳ್ವ ಅಲ್ಲಿಗೆ ತೆರಳಿ ವಿಷ್ಣುರವರ ಮನವೊಲಿಸಿ ಕರೆತಂದರು. ಅಂದು ವಿಷ್ಣು ಆಡಿದ ಮಾತು ಹೀಗಿತ್ತು. ಬಾಲಕನೋರ್ವ ಮನೆಬಿಟ್ಟು ಹೋಗಿದ್ದಾನೆ, ಅವನು ಯಾವಾಗಲಾದರೂ ಮನೆಗೆ ಹಿಂತಿರುಗಲೇ ಬೇಕಲ್ಲವೇ ಹಾಗೆಯೇ ನಾನೂ ಸಹ ಅಂದರಲ್ಲದೇ ರಾಜ್ಯಕ್ಕೆ ವಾಪಾಸಾದರು. ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ನಿರ್ದೇಶಕ ಭಾರ್ಗವ, ರಾಜೇಂದ್ರ ಸಿಂಗ್ ಬಾಬು, ದ್ವಾರಕೀಶ್, ದಿನೇಶ್ ಬಾಬು ರಂತಹವರ ಗರಡಿಯಲ್ಲಿ ವಿಷ್ಣು, ವಿಷ್ಣುವಿಗೆ ಸಾಟಿಯಾಗುವಂತೆ ನಟಿಸಿಬಿಟ್ಟರು.
ವಿಷ್ಣುವಿಗೆ ಅಭಿಮಾನಿ ಸಂಘವಿದ್ದರೂ ಇತರೆ ನಟರಂತೆ ಅತಿರೇಕದ ವರ್ತನೆಗಳು ಕಾಣಬರಲಿಲ್ಲ. ಅಭಿಮಾನಿ ಸಂಘಗಳು ಕೇವಲ ವಿಷ್ಣುವಿನ ಚಿತ್ರ ಬಿಡುಗಡೆಯಾದಾಗ ಸ್ಟಾರ್ ಹೊತ್ತು ಮೆರವಣಿಗೆ ಮಾಡದೇ ಸಮಾಜ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡವು. ವಿಷ್ಣು ಅಂತಹ ಬೆಳವಣಿಗೆಗೆ ನೇರ ಕಾರಣವಾಗಿದ್ದರು. ರಾಜ್ಯಾಧ್ಯಂತ ನಡೆದ ಅತೀ ಹೆಚ್ಚು ರಕ್ತ ದಾನ ಶಿಬಿರಗಳು, ವೈದ್ಯಕೀಯ ಸಹಾಯ, ಮದುವೆಗಳು, ಶಿಕ್ಷಣ ಸಹಾಯ, ಾಟಗಾರರಿಗೆ ಪ್ರೋತ್ಸಾಹ, ಸಹ ಕಲಾವಿದರ ಪ್ರೋತ್ಸಾಹ ಹೀಗೆ ಹತ್ತು ಹಲವು ಕೆಲಸಗಳ ಮೂಲಕ ವಿಷ್ಣು ನೆಲೆ ನಿಂತರೂ. ಕೇವಲ ಒಂದೇ ಮಾದರಿಯ ಚಿತ್ರಗಳಲ್ಲಿ ನಟಿಸದೇ ವಿಭಿನ್ನ ಚಿತ್ರಗಳಲ್ಲಿ ವಿಭಿನ್ನ ನಟನೆ ನೀಡುವ ಮೂಲಕ ಮನೆಮಾತಾದರು. ಕೆಲ ಚಿತ್ರಗಳು ಸೋತರು ವಿಚಲಿತರಾಗದ ವಿಷ್ಣು ಮತ್ತೆ ಮತ್ತೆ ಅಂತಹ ನಿರ್ದೇಶಕರ ಚಿತ್ರಗಳಲ್ಲಿ ನಟಿಸಿ ಅವರಿಗೆ ಗೆಲುವಿನ ಹರ್ಷದ ಸವಿಯನ್ನು ತಂದು ಕೊಟ್ಟರು. ಅಂಬಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ವಿಷ್ಣು ಅವರಿಗಾಗಿಯೇ ತಮ್ಮ ಮನೆಯಲ್ಲಿ ವಿಶೇಷ ಬಾರ್ ತೆರೆದಿದ್ದರಂತೆ. ಅಂಬಿ ಮಾತ್ರವಲ್ಲ ತಮ್ಮ ಅನೇಕ ಸ್ನೇಹಿತರಿಗೂ ಅದೇ ರೀತಿಯ ಪ್ರೀತಿ ಸ್ನೇಹವನ್ನು ತೋರಿಸುತ್ತಿದ್ದರು. ನೊಂದವರಿಗೆ ಸದಾ ನೆರವಿನ ಹಸ್ತ ಚಾಚುತ್ತಿದ್ದರು. ಸಹ ಕಲಾವಿದರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಇಂತಹ ವಿಷ್ಣುವಿನ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆ ಆಧಾರವಿಲ್ಲದ ವರದಿಯನ್ನು ಅವರ ಅಂತ್ಯದ ನಂತರದಲ್ಲಿ ಪ್ರಕಟಿಸಿ ಭಾರೀ ಅಸಹ್ಯ ಸೃಷ್ಟಿಸಿತು. ರಾಜ್ಯ ಸರ್ಕಾರ ವಿಷ್ಣು ನೆನಪಿಗೆ ಫಿಲಂ ಸಿಟಿ ನಿರ್ಮಿಸುವ ಘೋಷಣೆ ಮಾಡಿದೆ, ಮತ್ತು ಅದಕ್ಕಾಗಿ 10ಕೋಟಿ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದೆ. ಅದು ಶೀಘ್ರವಾಗಿ ಜಾರಿಗೆ ಬರಬೇಕಿದೆ. ರಾಜ್ ಸ್ಮಾರಕ್ಕೆ ಬಂದ ಗತಿ ವಿಷ್ಣು ಸ್ಮಾರಕ್ಕೆ ಬಾರದಿರಲಿ. ರಾಜ್ ಹಾಗೂ ವಿಷ್ಣು ಕನ್ನಡ ಚಿತ್ರರಂಗದ ಎರಡು ಕಣ್ಣುಗಳು ಅವರ ಸ್ಮಾರಕಗಳು ವಿಳಂಬವಿಲ್ಲದಂತೆ ಆಗಬೇಕಿದೆ ಅಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...