Thursday, October 8, 2009

ಮಳೆ ನಿಂತು ಹೋದ ಮೇಲೆ.... ಬದುಕು ಬಾಡಿ ಹೋಗಿದೆ.

ಕಳೆದ ವಾರ ಉತ್ತರಕನ್ನಡದ 11ಜಿಲ್ಲೆಗಳಲ್ಲಿ ಸತತವಾಗಿ ಸುರಿದ ಮಳೆ ಅಲ್ಲಿನ ಜನರ ಬದುಕುಗಳನ್ನೆ ಒರೆಸಿ ಹಾಕಿದೆ! ಬಹುಶ: ಆ ಭಾಗದ ಮಂದಿ ಯಾವತ್ತಿಗೂ ನಿರೀಕ್ಷಿಸಿರದ ಮಳೆ ಅನಿರೀಕ್ಷಿತವಾಗಿ ಬಂದೆರಗಿ ಜನರನ್ನು ಬೀದಿ ಪಾಲು ಮಾಡಿದೆ. 1992ರಲ್ಲಿ ಈ ಭಾಗದಲ್ಲಿ ಇದೇ ರೀತಿಯ ಮಳೆ ಸುರಿದಿತ್ತಾದರು ಇಷ್ಟೊಂದು ಪ್ರಮಾಣದ ಅನಾಹುತ ಸಂಭವಿಸಿರಲಿಲ್ಲ. ರಾಜ್ಯದಲ್ಲಿ ಸೂಕ್ತ ರೀತಿಯ ನೀರಾವರಿ ಯೋಜನೆಗಳನ್ನು ಜಾರಿಗೊಳಿಸದಿರುವುದು (ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ) ಮತ್ತು ನಿರಾವರಿ ಇಲಾಖೆಯ ಇಂಜಿನಿಯರುಗಳ ಮೇಲೆ ಸರ್ಕಾರ ಸಮರ್ಥ ಹಿಡಿತ ಹೊಂದದಿರುವುದು ಇವತ್ತಿನ ಅವಘಡಗಳಿಗೆ ಕಾರಣ ಎಂಬುದರಲ್ಲಿ ಸಂದೇಹವೇ ಇಲ್ಲ.
ಬರದ ಜಿಲ್ಲೆಗಳಿಗೆ ಸುಧಾರಣೆ ಹಾಗೂ ಅಭಿವೃದ್ದಿಗೆ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ(ಅದು ಎಷ್ಟರ ಮಟ್ಟಿಗೆ ಜನರಿಗೆ ತಲುಪುತ್ತಿದೆ ಎಂಬುದು ಬೇರೆ ಮಾತು!) ಆದರೆ ಅಭಿವೃದ್ದಿ ಶೂನ್ಯ. ಈ ನಡುವೆ ಪ್ರಳಯ ಸ್ವರೂಪಿಯಾಗಿ ಕಾಡಿದ ವರುಣ ದೇವನ ಮುನಿಸಿನಿಂದ ಜನರ ಮನೆ,ಮಠ,ಆಸ್ತಿ-ಪಾಸ್ತಿ,ಜನ-ಜಾನುವಾರು, ರಸ್ತೆ-ಸೇತುವೆ, ಕೃಷಿ ಭೂಮಿ ಎಲ್ಲವೂ ನಾಶವಾಗಿದೆ. ೪-೫ ದಿನಗಳ ಕಾಲ ಸುರಿದ ಮಳೆಗೆ 200ಕ್ಕೂ ಹೆಚ್ಚುಮಂದಿ ಜೀವ ಕಳೆದುಕೊಂಡಿದ್ದರೆ, 2ಲಕ್ಷ ಮನೆಗಳು ನಾಶವಾಗಿವೆ. ಇನ್ನೂ ಒಂದು ಲಕ್ಷದಷ್ಟು ಮನೆಗಳು ಆಗಲೋ ಈಗಲೋ ಎಂಬ ಸ್ಥಿತಿಯಲ್ಲಿವೆ. 30ಲಕ್ಷ ಕೃಷಿ ಸಾಗುವಳಿ ಭೂಮಿ-ಬೆಳೆ ಸಂಪೂರ್ಣ ಹಾಳಾಗಿದೆ. ವಿದ್ಯುತ್ ವ್ಯವಸ್ಥೆ ಹದಗೆಟ್ಟಿದೆ. ಒಟ್ಟಾರೆ 17000ಕೋಟಿಯಷ್ಟು ನಷ್ಟ ಸಂಭವಿಸಿದೆ, 18ಮಿಲಿಯನ್ ಜನ ಸಂಕಷ್ಟಕ್ಕೆ ಈಡಾಗಿದ್ದಾರೆ.
ಮಳೆಯಿಂದ ನೆರೆ ಬಂದು 2ದಿನದ ನಂತರ ಎಚ್ಚೆತ್ತುಕೊಂಡು ರಾಜ್ಯ ಸರ್ಕಾರ ಮಠದಿಂದ ಆಚೆಗೆ ಬಂದಿದೆ.ಪರಿವಾರ ಸಮೇತ ಮಠದಲ್ಲಿ ಬಿಡಾರ ಹೂಡಿ ಗುಜರಾತ್ ರಾಜ್ಯದ ಮೋದಿಯಿಂದ ಪಾಠ ಹೇಳಿಸಿಕೊಳ್ಳುತ್ತಿದ್ದ ಶಾಸಕರು-ಮಂತ್ರಿ ಮಹೋದಯರು ನಿದ್ರೆಯಿಂದ ಎಚ್ಚೆತ್ತವರಂತೆ ಆಚೆ ಬಂದರಾದರೂ ಅವರು ನಡೆದು ಕೊಳ್ಳುತ್ತಿರುವ ರೀತಿಯಾದರೂ ಎಂತಹುದು? ಮುಖ್ಯಮಂತ್ರಿ ಯಡಿಯೂರಪ್ಪ ತರಾತುರಿಯಲ್ಲಿ ಸಭೆ ನಡೆಸಿ ನೆರೆ ಸಂತ್ರಸ್ತರಿಗೆ 200ಕೋಟಿ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ. ನೆರೆ ಪೀಡಿತ ಪ್ರದೇಶಗಳಿಗೆ ಒಂದು ಸುತ್ತು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಈಗ ನಿಧಿ ಸಂಗ್ರಹಕ್ಕೆ ಬೀದಿಗಿಳಿದಿದ್ದಾರೆ, ಅದಕ್ಕೂ ಮುನ್ನ ನೆರೆಹೊರೆಯ ರಾಜ್ಯಗಳಿಗೆ ಸಹಾಯಕೋರಿ ಪತ್ರ ಬರೆದಿದ್ದಾರೆ. ಅತ್ತ ಅಧಿಕಾರಿಗಳನ್ನು ಮಾನಿಟರ್ ಮಾಡುವ , ತತ್ ಕ್ಷಣದ ಪರಿಹಾರವನ್ನು ಸಮರೋಪಾದಿಯಲ್ಲಿ ಮಾಡಿಸುವವರು, ಇಲ್ಲದಂತಾಗಿದ್ದಾರೆ...! ಇದು ಸಧ್ಯದ ಸ್ಥಿತಿ.
4-5 ದಿನಗಳ ಹಿಂದೆಯಷ್ಟೇ ಗುಲ್ಬರ್ಗಾ ದಲ್ಲಿರುವ ನನ್ನ ಹಿರಿಯ ಅಧಿಕಾರಿ ಮಿತ್ರೊಬ್ಬರು ದೂರವಾಣಿಯಲ್ಲಿ ಮಾತಿಗೆ ಸಿಕ್ಕಿದ್ದರು. ವಿಪರೀತವಾದ ಮಳೆಯಿಂದ ನೆರೆ ಬಂದಿದ್ದರಿಂದ ತುರ್ತು ಕಾರ್ಯಾಚರಣೆ ನಡೆಸಲು ಉನ್ನತಾಧಿಕಾರಿಗಳಿಗೆ ಸ್ವಯಂ ಅಧಿಕಾರವಿದ್ದರೂ ಅವರನ್ನು ಮಾನಿಟರ್ ಮಾಡುವ ಜಿಲ್ಲಾಧಿಕಾರಿಗಳ ಬೇಜವಾಬ್ದಾರಿ ತನದಿಂದಾಗಿ ರಕ್ಷಣಾ ಪಡೆ ಕರೆಸುವಲ್ಲಿ, ಲೈಫ್ ಬೋಟ್ ತರಿಸುವಲ್ಲಿ ವಿಳಂಬವಾಯ್ತಂತೆ.. ಇದು ಗುಲ್ಬರ್ಗಾ ಜಿಲ್ಲೆಯ ಕಥೆ ಮಾತ್ರವಲ್ಲ ಅಕ್ಕಪಕ್ಕದ ಜಿಲ್ಲೆಗಳ ಕಥೆಯೂ ಅದೇ ಆಗಿತ್ತಂತೆ. ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್ ನಿರ್ಮಾಣವಾದ ನಂತರ ಅವರಿಗೆ ಬಟ್ಟೆ ಬರೆ, ಔಷದ, ಇತರೆ ಪದಾರ್ಥಗಳನ್ನು ಕೊಂಡುಕೊಳ್ಳಲು ಹಣವನ್ನು ನೇರವಾಗಿ ವಿತರಿಸುವ ಬದಲಿಗೆ ಚೆಕ್ ವಿತರಿಸಲು ಹೇಳಲಾಯ್ತಂತೆ... ಹೀಗಾದಾಗ ಯಾವ ಸಂತ್ರಸ್ತ ಬ್ಯಾಂಕಿಗೆ ಹೋಗಿ ಖಾತೆ ತೆರೆದು ನಗದು ಮಾಡಿಸಿಕೊಳ್ಳಲು ಸಾಧ್ಯ ಅಲ್ಲಿಯವರೆಗೂ ಅವನ ಸಹನೆ ಇರುವುದೇ? ಎಂದು ಅಳಲು ತೋಡಿಕೊಂಡರು ನನ್ನ ಅಧಿಕಾರಿ ಮಿತ್ರರು.
ಇನ್ನು ವಿರೋಧ ಪಕ್ಷಗಳು ರಾಜ್ಯದಲ್ಲಿ ಸಂಕಷ್ಟ ಸ್ಥಿತಿ ಇರುವಾಗ ಆಡಳಿತದೊಂದಿಗೆ ಒಗ್ಗೂಡಿ ಸಹಾಯಕ್ಕೆ ಧಾವಿಸುವ ಬದಲಿಗೆ ಬಿಜೆಪಿಗಳನ್ನು ತೀಕ್ಷ್ಣ ಮಾತುಗಳಿಂದ ಟೀಕಿಸುತ್ತಾ "ನೆರೆ"ಯಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ, ದೇಶಪಾಂಡೆ ಇವರೆಲ್ಲ ಹೊಣೆಗೇಡಿತನದಿಂದ ವರ್ತಿಸುತ್ತಿದ್ದಾರೆ. ಆಡಳಿತ ಸರ್ಕಾರ ೀ ಸಂಧರ್ಭದಲ್ಲಿ ಏನೇ ತಪ್ಪು ಮಾಡಿರಲಿ ಅದನ್ನು ಚರ್ಚಿಸಲು ಇದು ಸಕಾಲವಲ್ಲ ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಕೂಡಿ ಏನು ಮಾಡಬಹುದು. ಸಂತ್ರಸ್ತರ ಬದುಕುಗಳನ್ನು ಕಟ್ಟುವುದು ಹೇಗೆ ಎಂಬುದನ್ನು ಯೋಚಿಸಿ ಕಾರ್ಯೋನ್ಮುಖವಾಗಬೇಕಿದೆ. ಯಡಿಯೂರಪ್ಪನ ಸರ್ಕಾರ ಅನುಭವಿಗಳಿಲ್ಲದ , ಅನುಭವವಿಲ್ಲದ ಸರ್ಕಾರ. ಅದಾಗ್ಯೂ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರಕ್ಕೆ 10000ಕೋಟಿ ರೂಪಾಯಿಗಳ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಇಲ್ಲಿ 17ಸಾವಿರ ಕೋಟಿಯಷ್ಟು ಹಾನಿಯಾಗಿದೆ . ಇಂತಹ ಸನ್ನಿವೇಶದಲ್ಲಿ ಪಕ್ಕದ ತಮಿಳುನಾಡಿನ ರಾಜಕಾರಣಿಗಳು ನಮ್ಮ ರಾಜ್ಯದ ರಾಜಕಾರಣಿಗಳಿಗೆ ಮಾದರಿಯಾಗ ಬೇಕಾಗಿದೆ..!
ಸಂತ್ರಸ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜೋಳಿಗೆ ಹಿಡಿದು ಬೀದಿಗೆ ಇಳಿದಿರುವ ಯಡಿಯೂರಪ್ಪ ಮತ್ತು ಅವರ ಸರ್ಕಾರದ ಸಚಿವರು ಶಾಸಕರುಗಳು ಬೆಂಗಳೂರೊಂದರಲ್ಲಿ ಕೇವಲ 2ದಿನದಲ್ಲಿ ಸುಮಾರು 700ಕೋಟಿ ರೂಗಳಷ್ಟು ಹಣ ಸಂಗ್ರಹಣೆ ಮಾಡಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಸ್ಪಂದಿಸಿರುವ ಜನರ ಮಾನವೀಯತೆಯನ್ನು ಕಂಡು ಯಡೀಯೂರಪ್ಪ ಉಬ್ಬ ಬೇಕಿಲ್ಲ. ಏಕೆಂದರೆ . ಒಂದು ಜವಾಬ್ದಾರಿಯುತವಾದ ಸರ್ಕಾರದ ಅಧಿಪತಿಯಾಗಿದ್ದು ಜನರಿಂದ ಬಿಕ್ಷೆ ಎತ್ತುವುದಕ್ಕಿಂತ ಆಡಳಿತದಲ್ಲಿ ಬಿಗಿ ಇಟ್ಟುಕೊಂಡು 5ಡಜನ್ ನಷ್ಟಿರುವ ತನ್ನ ಸಚಿವರುಗಳನ್ನು ಒಬ್ಬೊಬ್ಬರಬ್ಬನ್ನು ಒಂದೊಂದು ಜಿಲ್ಲೆಯ ನೆರೆಸಂತ್ರಸ್ತರ ನೆರವಿಗೆ ಉಸ್ತುವಾರಿಗೆ ಕಳುಹಿಸಿದಿದ್ದರೆ ಅದರ ತೂಕವೇ ಬೇರೆ ಇರುತಿತ್ತು. ಮಂತ್ರಾಲಯದಲ್ಲಿ ಸಾವಿರಾರು ಮಂದಿ ಭಕ್ತರು ಸಿಕ್ಕಿ ಜೀವಭಯದಿಂದ ನಡುಗುತ್ತಿದ್ದರೆ. ಮಂತ್ರಾಲಯದ ಸ್ವಾಮೀಜಿಯೊಬ್ಬರನ್ನು ರಕ್ಷಣೆ ಮಾಡಿ ಕೃತಾರ್ಥತೆ ಅನುಭವಿಸಿದರಲ್ಲ? ಇತರೆ ಭಕ್ತಾದಿಗಳ ಜೀವ ಜೀವವಲ್ಲವೇ? ಇದು ಎಂಥ ಸಂದೇಶವನ್ನು ನೀಡಿದಂತಾಯಿತು.? ನೆರೆ ಪೀಡಿತ ಪ್ರದೆಶಗಳಿಗೆ ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಹುರಿದುಂಬಿಸ ಬೇಕಾದ ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ತನ್ನನ್ನು ಸೀಮಿತ ಮಾಡಿಕೊಂಡರೆ ಇವರನ್ನ್ನು ಜನ ಕ್ಷಮಿಸುತ್ತಾರೆಯೇ? ಉತ್ತರಕರ್ನಾಟಕದ ಭೀಮಾ ನದಿ, ಕೃಷ್ಣಾ ನದಿ , ಬ್ಯಾರೇಜುಗಳು, ಎಲ್ಲ ಅಣೆಕಟ್ಟುಗಳಿಂದಲೂ ಇಂಜಿನಿಯರುಗಳು ಯಾವುದೇ ಷೆಡ್ಯೂಲ್ ಇಟ್ಟುಕೊಳ್ಳದೇ ಏಕಾಏಕಿ ಬಾಗಿಲು ತೆರೆದು ನೀರು ಹರಿಯ ಬಿಟ್ಟರೇ ನೆರೆ ಬರದೇ ಇನ್ನೇನಾದೀತು? ಹೆಚ್ಚು ಅಂದರೆ 35 ರಿಂದ 45ಸಾವಿರ ಕ್ಯೂಸೆಕ್ಷ್ ನೀರು ಹೊರ ಬಿಡಬೇಕಾದ ಜಾಗದಲ್ಲಿ ಏಕಾಏಕಿ 5ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಷ್ ನೀರು ಹೊರಗೆ ಹರಿದಿದೆ. ಕಾಲಾನುಕಾಲಕ್ಕೆ ಒಳ ಹರಿವು ಮತ್ತು ಹೊರ ಹರಿವನ್ನು ನಿಭಾಯಿಸದ ನೀರಾವರಿ ಇಲಾಖೆಯ ಇಂಜಿನಿಯರುಗಳು ಇವತ್ತಿನ ದುಸ್ಥಿತಿಗೆ ಕಾರಣ ಎಂಬುದರಲ್ಲಿ ಸಂಶಯವೇ ಇಲ್ಲ. ಇವರ ಮೇಲೇ ಯಾವ ತನಿಖೆಯೂ ಇಲ್ಲ ಕ್ರಮವೂ ಇಲ್ಲ , ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲವೇಕೆ? ಹೆಚ್ಚುವರಿ ನೀರನ್ನು ಹರಿಯ ಬಿಟ್ಟದ್ದರಿಂದ ಇವತ್ತು ಪಕ್ಕದ ಆಂಧ್ರದಲ್ಲಿ ಲೆಕ್ಕಕ್ಕೆ ಸಿಗದಷ್ಟು ನಷ್ಟ ಹಾಗೂ ಸಾವು-ನೋವು ಸಂಭವಿಸಿದೆ, ಇದಕ್ಕೆ ನಮ್ಮ ಇಂಜಿನಿಯರುಗಳ ಕೊಡುಗೆ ಇದೆಯಲ್ಲವೇ?
ಉತ್ತರ ಕರ್ನಾಟಕದ ಶಾಸಕರೊಬ್ಬರು ವೈಯುಕ್ತಿಕವಾಗಿ 10ಕೋಟಿ ರೂಪಾಯಿಗಳನ್ನು ನೀಡಿ ಮಾದರಿಯಾಗಿದ್ದಾರೆ. ಇವತ್ತು ಸರ್ಕಾರದ ಒಬ್ಬೊಬ್ಬ ಸಚಿವನೂ, ಶಾಸಕನೂ ಸಾವಿರಾರು ಕೋಟಿಗೆ ಬೆಲೆ ಬಾಳುತ್ತಾರೆ. ವಿರೋಧ ಪಕ್ಷದ ಮುಖಂಡರು ಇದರಲ್ಲಿ ಕಡಿಮೆ ಏನಿಲ್ಲ. ಇವರಿಗೆ ಪಕ್ಷದ ಟಿಕೆಟ್ ಪಡೆಯಲು ಚುನಾವಣೆಗೆ ಖರ್ಚು ಮಾಡಲು ಶಾಸಕರನ್ನು ಕೊಳ್ಳಲು ಕೋಟ್ಯಾಂತರ ರೂ ಹಣ ವಿದೆ ಆದರೆ ನೆರೆ ಸಂತ್ರಸ್ತರಿಗೆ ಉದಾರವಾಗಿ ಕೊಡಲು ಯಾಕೆ ಮುಂದಾಗುತ್ತಿಲ್ಲ? ಜನರ ಬಳಿ ಯಾಕೆ ಬಿಕ್ಷೆ ಎತ್ತಲು ಬರಬೇಕು ? ಮೊದಲು ರಾಜ್ಯದ ಶಾಸಕರೇ, ಮಂತ್ರಿ ಮಹೋದಯರೇ ನಿಮ್ಮ ಖಜಾನೆ ತೆರೆದಿಡಿ, ಜನಸಾಮಾನ್ಯರನ್ನು ಕೇಳುವ ಅವಶ್ಯಕತೆಯಿಲ್ಲ ಅವರಿಗೂ ಮನುಷ್ಯತ್ವವಿದೆ ಅವರ ಕೆಲಸ ಅವರು ಮಾಡುತ್ತಾರೆ ಮೊದಲು ನಿಮ್ಮ ಮುಖವಾಡ ಕಳಚಿ! ಜನರಿಗೆ ನೆರವಿನ ಹಸ್ತ ಚಾಚಿ. ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ಕೆಲವು ಜಿಲ್ಲೆಗಳಿಗೆ ಮಲತಾಯಿ ಧೋರಣೆ ತೋರುವಂತೆ ನೆರೆ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪಕ್ಕದ ಆಂಧ್ರಕ್ಕೆ 156.84 ಕೋಟಿ ಹಣ ನೀಡಿದ್ದರೆ ರಾಜ್ಯಕ್ಕೆ ಕೇವಲ 52.26ಕೋಟಿ ಹಣ ನೀಡಿದೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ರಾಜ್ಯದ 4-5ಮಂದಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ದೇವೇಗೌಡ, ಅನಂತಕುಮಾರ್ ರಂತಹ ಘಟಾನುಘಟಿಗಳಿದ್ದಾರೆ ಅದಾಗ್ಯೂ ಅವರು ರಾಜ್ಯಕ್ಕೆ ನೆರವು ತರುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಇದೇ ರೀತಿಯ ನಿರ್ಲಿಪ್ತ ಧೋರಣೆ ಮುಂದುವರೆದರೆ ಜನತೆ ಇವರನ್ನು ಯಾವತ್ತಿಗೂ ಕ್ಷಮಿಸಲಾರರು.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...