Sunday, October 25, 2009

2012ಕ್ಕೆ ಪ್ರಳಯ ನಿಜಾನಾ ? ಎನಿದೆಲ್ಲಾ?

2012ಕ್ಕೆ ಪ್ರಳಯ ಅಂತೇ ಹೌದಾ ಎಂಬ ಪ್ರಶ್ನೆಗಳು ಈಗ ಎಲ್ಲೆಡೆ ಹರಿದಾಡುತ್ತಿದೆ. ಇಂಟರ್ ನೆಟ್ ಗಳಲ್ಲಿ , ಹಾಲಿವುಡ್ ನಸಿನಿಮಾಗಳಲ್ಲಿ , ಆಂಗ್ಲ ಸಾಹಿತ್ಯದಲ್ಲಿ , ದೃಶ್ಯ ಮಾದ್ಯಮಗಳಲ್ಲಿ, ದಿನಪತ್ರಿಕೆಗಳಲ್ಲಿ ಪ್ರಳಯದ ಬಗ್ಗೆ ಮಾಹಿತಿ ಬರುತ್ತಿದ್ದಂತೆ, ಆ ಬಗೆಗಿನ ಕುತೂಹಲವೂ ಜಾಸ್ತಿಯಾಗುತ್ತಿದೆ. ಎಲ್ಲಿ ಧಾರ್ಮಿಕ ನಂಬಿಕೆಗಳು ಪ್ರಬಲವಾದ ಅಸ್ತಿತ್ವವನ್ನು ಹೊಂದಿರುತ್ತವೆಯೋ ಅಲ್ಲೆಲ್ಲ ಅವುಗಳ ಪರಿಣಾಮವೂ ಸಹಾ ತೀವ್ರವಾಗಿಯೇ ಆಗುತ್ತಿದೆ. ನಮಗೆತಿಳಿದೋ ತಿಳಿದಯದೆಯೋ ಇಂತಹದ್ದೊಂದು ಪ್ರಶ್ನೆ ನಮ್ಮೆಲ್ಲರೆದುರು ಬಂದು ಧುತ್ತನೆ ಪ್ರತ್ಯಕ್ಷವಾಗಿರುವಾಗ ಆತಂಕ/ಕುತೂಹಲ ಸಹಜವೇ ಈ ನಿಟ್ಟಿನಲ್ಲಿ ಒಂದುಷ್ಟು ವಿಚಾರಗಳನ್ನು ನೋಡೋಣ.
ಅಸಲಿಗೆ ಇಂತಹದ್ದೊಂದು ಪ್ರಶ್ನೆ ನಿನ್ನೆ ಮೊನ್ನೆಯದೇನಲ್ಲ, ಭೂ ಮಂಡಲದ ಮೇಲೆ ಜೀವ ವೈವಿದ್ಯ ಬಂದ ಮೇಲೆ ಮಾನವ ಜೀವಿಯ ಅಸ್ತಿತ್ವ ಹುಟ್ಟಿಕೊಂಡ ಮೇಲೆ ಟಿಸಿಲೊಡೆದ ಮೂಟೆ ಹಲವು ಕುತೂಹಲಗಳನ್ನು ವಿಸ್ಮಯಗಳನ್ನು ತೆರೆದಿಡುತ್ತಾ ಬಂದಿದೆ. ಇಂತಹ ವಿಸ್ಮಯಗಳು ಮತ್ತು ಆತಂಕಗಳನ್ನು ಪರಿಗ್ರಹಿಸಲು ಮತ್ತು ವಿಶ್ಲೇಷಿಸಲು ಜಾಗತಿಕ ಮಟ್ಟದಲ್ಲಿ" ನಾಸಾ " ಸಂಸ್ಥೆ ನಿರಂತರ ಸಂಶೋಧನೆಗಳನ್ನು ಮಾಡುತ್ತಲೆ ಬಂದಿದೆ. ಈ ಪೈಕಿ ಶೇ.10ರಷ್ಟಕ್ಕೆ ಅದು ಖಚಿತವಲ್ಲದ ಆದರೆ ಸತ್ಯಕ್ಕೆ ಹತ್ತಿರವಾದ ಉತ್ತರಗಳನ್ನು ಸಹಾ ಕಂಡು ಕೊಂಡಿದೆ. ಇನ್ನೂ ಹತ್ತು ಹಲವು ವಿಸ್ಮಯಗಳಿಗೆ ಉತ್ತರ ಸಿಗಬೇಕಾಗಿದೆ. ಇಂತಹವುಗಳಲ್ಲಿ ಆಕಾಶದಲ್ಲಿ ಕಂಡು ಬಂದ ಹಾರುವ ತಟ್ಟೆ, ದೇಗುಲದ ಮೇಲೆ ಬಿದ್ದ ಬೆಳಕಿನ ಕಿರಣಗಳು, ದೂರದ ಸಮುದ್ರದಲ್ಲೆಲ್ಲೋ ದಡದಲ್ಲಿ ಕಂಡು ಬಂದ ಇತ್ತ ಮನುಷ್ಯನೂ ಅಲ್ಲದ ಅತ್ತ ಪ್ರಾಣಿಯೂ ಅಲ್ಲದ ಜೀವಿ, ಮಂಗಳ ಗ್ರಹದಿಂದ ಬಂದ ಜೀವಿಯಂತೆ ಕಾಣುವ ಪುಟ್ಟ ಮಗುವಿನಾಕಾರದ ದೊಡ್ಡಕಣ್ಣುಗಳುಳ್ಳ ಜೀವಿ ಹೀಗೆ 1000ಕ್ಕೂ ಹೆಚ್ಚು ವಿಸ್ಮಯಗಳು ನಂಬಲು ಸಾಧ್ಯವಾಗದ ವಿಚಾರಗಳು ನಾಸಾ ದ ಸಂಶೋಧನೆಯಲ್ಲಿವೆ. ಈ ಸಂಧರ್ಭದಲ್ಲಿ ಕಳೆದ ನಾಲ್ಕೈದು ವರ್ಷಗಳ ಹಿಂದೆ ಪ್ರಳಯದ ಬಗ್ಗೆ ಜಗತ್ತಿನಾಧ್ಯಂತ ಕಲ್ಪಿತ ವಿಚಾರಗಳ ಸಂಗ್ರಹ ಮಾಧ್ಯಮಗಳಲ್ಲಿ, ಸಾಹಿತ್ಯದಲ್ಲಿ ಪ್ರಕಟವಾಗಿತ್ತು. ಪಾಶ್ಚಾತ್ಯ ಕಾದಂಬರಿಕಾರರಲ್ಲಿ ಪ್ರಸಿದ್ದರಾದ ಸರ್ ಟನ್ ಆರ್ಥರ್ ಕಾನನ್ ಡಾಯ್ಲ್ "ದಿ ಲಾಸ್ಟ್ ವರ್ಲ್ಡ್ " ಕೃತಿಯಲ್ಲಿ ಸಾದ್ಯಂತವಾಗಿ ಚಿತ್ರಿಸಿದ್ದರು. ತಾಂತ್ರಿಕ ವಿಚಾರ ಚಿಂತನೆಯಲ್ಲಿ ದೇಶೀಯರಿಗಿಂತ 100ವರ್ಷಗಳಷ್ಟು ಮುಂದಿರುವ ಪಾಶ್ಚಾತ್ಯರು ಸಿನಿಮಾಗಳಲ್ಲಿ ಪ್ರಪಂಚ ನಾಶದ ಬಗ್ಗೆ , ಅನ್ಯಗ್ರಹ ಜೀವಿಗಳ ಬಗ್ಗೆ ಕಪೋಲ ಕಲ್ಪಿತ ಚಿತ್ರಗಳನ್ನು ಬೂಮಂಡಲದಲ್ಲಿ ಸಾವಿರಾರು ವರ್ಷಗಳಷ್ಟು ಹಿಂದೆ ಜೀವಿಸದ್ದವೆನ್ನಲಾದ ಡೈನೋಸಾರಸ್ ಗಳ ಬಗ್ಗೆ ನೈಜ ರೀತಿಯಲ್ಲಿ ಚಿತ್ರಿಸಿದ್ದು, ಪ್ರಪಂಚವಿನಾಶದ ಕಲ್ಪನೆಗೆ ಜೀವ ತುಂಬಿತು.
ಇದನ್ನೆ ಬಂಡವಾಳ ಮಾಡಿಕೊಂಡ ಜ್ಯೋತಿಷಿಗಳು,ಪಾದ್ರಿಗಳು, ಧಾರ್ಮಿಕ ಸಂಸ್ಥೆಗಳು ಅದಕ್ಕೆ ಇನ್ನಷ್ಟು ಕಟ್ಟುಕಥೆಗಳನ್ನು ತುಂಬಿ ತಮ್ಮ ಧರ್ಮ ಪ್ರಚಾರಕ್ಕನುಗುಣವಾಗಿ ಮತ್ತು ಧಾರ್ಮಿಕ ನಂಬಿಕೆಗಳನ್ನು ಹಣಗಳಿಸುವ ವಿಚಾರ ಮಾಡಿಕೊಂಡು ಜಾಗತಿಕ ಪ್ರಳಯವನ್ನು ಕಣ್ಣಂಚಿಗೆ ತಂದು ನಿಲ್ಲಿಸಿದೆ. ಇದು ಧಾರ್ಮಿಕ ನಂಬಿಕೆ ಇರಿಸಿಕೊಂಡ ಮಿಲಿಯನ್ ನಷ್ಟು ಜನರ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಎಷ್ಟೋ ಮಂದಿ ತಮ್ಮ ಬದುಕಿನ ಆಧಾರವಾದ ಉದ್ದಿಮೆಯನ್ನು ಒಳ್ಳೊಳ್ಳೆ ನೌಕರಿಗಳನ್ನು ತ್ಯಜಿಸಿ ಆಧ್ಯಾತ್ಮಿಕ ಬದುಕಿಗೆ ಶರಣು ಹೋಗುತ್ತಿದ್ದಾರೆ. ಕ್ರೈಸ್ತರ ಮಾಯನ್ ಕನ್ನಡಿ ಕ್ಯಾಲೆಂಡರ್ ಇಂತಹದ್ದಕ್ಕೆ ಪುಷ್ಟಿ ನೀಡಿದೆ. ಈಗ ಭಾರತದಲ್ಲೂ ಇಂತಹ ಅಲೆ ಬಂದಿದೆ. ಹೇಳಿಕೇಳಿ ಭಾರತ ಅಪ್ಪಟ ದೈವಿಕ ಸಂಸ್ಕ್ರತಿ, ಮತ್ತು ನಂಬಿಕೆಗಳ ಮೇಲೆ ಆಧಾರವಾಗಿರುವ ಜನರನ್ನು ಹೊಂದಿರುವ ದೇಶ. ಇಂತಹ ನಂಬಿಕೆಗಳನ್ನು ಬಂಡವಾಳ ಮಾಡುವ ನಿಟ್ಟಿನಲ್ಲಿ ಮಾಂತ್ರಿಕರು, ಜ್ಯೋತಿಷಿಗಳು ಪ್ರಪಂಚದ ವಿವಿದೆಡೆ ಸಂಭವಿಸುತ್ತಿರುವ ಅವಘಡಗಳನ್ನು ತಮ್ಮ ಆಧಾರವಾಗಿ ತೋರಿಸಿಕೊಂಡು ನಮ್ಮ ಜನರನ್ನು ಇನ್ನಷ್ಟು ಆತಂಕಗಳಿಗೆ ತಳ್ಳುತ್ತಿದ್ದಾರೆ. ಏಸು ಹುಟ್ಟಿಬರುತ್ತಾನೆ, ಕಲ್ಕಿಯ ಜನ್ಮವಾಗುತ್ತದೆ, ಪೈಗಂಬರ್ ಅವತಾರ ತಾಳುತ್ತಾನೆ ಎಂಬೆಲ್ಲ ಬೊಗಳೆಗಳು ಪ್ರಳಯದ ತೀಕ್ಷಣತೆಯ ಅರಿವು ಮುಡಿಸುವುದರೊಂದಿಗೆ ಜನರ ನಂಬಿಕೆಯನ್ನು ತಮ್ಮ ಹಿಡಿತಕ್ಕೆ ತಂದು ಕೊಳ್ಳುತ್ತಿವೆ. ಆ ಮೂಲಕ ಧರ್ಮ ಪ್ರಚಾರ, ಇಲ್ಲವೇ ತಮ್ಮ ಬಂಡವಾಳಶಾಹಿ ಮನೋಧರ್ಮವನ್ನು ಜನರಿಗೆ ತಿಳಿಯದಂತೆ ಬಿತ್ತಲಾಗುತ್ತಿದೆ.ಧಾರ್ಮಿಕ ಕೇಂದ್ರಗಳು ಈ ನೆಪದಲ್ಲಿ ಜನರ ಆಕರ್ಷಣೆಯ ಕೇಂದ್ರಗಳಾಗಿ ಮಾಡಿಕೊಳ್ಳಲು ಮುಂದಾಗಿವೆ. ಜನರ ಹಪಾಹಪಿತನ, ಭ್ರಷ್ಠಾಚಾರ, ಕೊಲೆ, ಸುಲಿಗೆ ವಂಚನೆ, ಮೋಸ ಇವುಗಳಲ್ಲಿ ಏನಾದರೂ ಪ್ರಳಯದ ಕಾರಣಕ್ಕಾಗಿ ಬದಲಾದೀತೆ ಎಂದು ನೋಡುವುದಾದರೂ ನಮ್ಮ ಜನರ ಮನಸ್ಥಿತಿ ಆ ರೀತಿ ಇಲ್ಲ. ಬದುಕಿದಷ್ಟು ದಿನ ಸಿಕ್ಕಷ್ಟು ದೋಚಿಕೊಂಡು ಸಮೃದ್ದವಾಗಿ ನಾನು ಬದುಕಬೇಕು ಅಂದು ಕೊಳ್ಳುವವರದ್ದೇ ಹೆಚ್ಚಿನ ಸಂಖ್ಯೆ. ಪ್ರಳಯ ಹತ್ತಿರದಲ್ಲಿದೆ ಎಂದರೆ ಪ್ರಪಂಚದ ಎಲ್ಲ ಸುಖಕ್ಕಾಗಿ ಏನು ಬೇಕಾದರೂ ಮಾಡುವ ಮನಸ್ಥಿತಿ ಇದೆ. ಈ ನಡುವೆ ಆದ್ಯಾತ್ಮಿಕ ಚಿಂತನೆಯೆಡೆಗೆ ಸಾಗುವವರು ಈಗಾಗಲೇ ಎಲ್ಲವನ್ನು ಮಾಡಿ ಮುಗಿಸಿದ ಮಂದಿ.
ಹಾಗಾದರೆ ಪ್ರಳಯವಾಗೋದು ಸುಳ್ಳ? ಅದಕ್ಕೆ ವೈಜ್ಞಾನಿಕ ಕಾರಣಗಳಿವೆಯಲ್ಲ ಎನ್ನಬಹುದು. ಪ್ರಳಯವಾಗೋದು ನಿಜ ಮಾದ್ಯಮಗಳಲ್ಲಿ ಪ್ರಚಾರವಾಗುತ್ತಿರುವಂತೆ ಪ್ರಳಯದ ವರ್ಷ ಮತ್ತು ದಿನಾಂಕಗಳೆಲ್ಲ ಶುದ್ದಾಂಗ ಸುಳ್ಳು. ಏಕೆ ಅಂತೀರಾ ಸೌರವ್ಯೂಹದ ಬಗ್ಗೆ ಇನ್ನು ಸಂಶೋಧನೆಗಳು ನಡೆಯುತ್ತಿವೆ ಅವು ಭೂಮಿ ಗುರುತ್ವಾಕರ್ಷಣೆ ಕಳೆದು ಕೊಳ್ಳುವ ಬಗ್ಗೆ ತನ್ನ ಕಕ್ಷೆಯನ್ನು ಬದಲಿಸುವ ಬಗ್ಗೆ ಎಲ್ಲಿಯೂ ನಿಖರವಾಗಿ ತಿಳಿಸಿಲ್ಲ. ಆದರೆ ಒಂದಂತೂ ನಿಜ ನಾವು ಪ್ರಳಯಕ್ಕೆ ಹತ್ತಿರವಾಗುತ್ತಿದ್ದೇವೆ, ಅದು ಹೇಗೆ???ಅಮೇರಿಕದಲ್ಲಿ ಹರಿಕೇನ್ ನಂತಹ ಚಂಡಮಾರುತ, ಜಗತ್ತಿನೆಲ್ಲೆಡೆ ಸುನಾಮಿಯಂತಹ ಭಯಾನಕ ಸಮುದ್ರ ಅಲೆಗಳು, ಆಮ್ಲ ಮಳೆಗಳು, ಜ್ವಾಲಾಮುಖಿಗಳು, ಭೂಕಂಪನಗಳು, ಉಲ್ಕಾಪಾತಗಳು, ಮಹಾ ಯುದ್ದಗಳು, ಕಂಡೂ ಕೇಳರಿಯದ ಮಹಾಮಾರಿ ಕಾಯಿಲೆಗಳು, ಪ್ರಪಂಚದ ಜಾಗತಿಕ ತಾಪಮಾನ ಏರಿಕೆ, ನೀರಿನ ಪ್ರಮಾಣದ ಏರಿಕೆ, ಮಳೆಕಾಡುಗಳ ನಾಶ, ಪರಿಸರ ಅಸಮತೋಲನ, ಓಜೋನ್ ಪದರದ ನಾಶ ಇವು ಮಾತ್ರ ಜಗತ್ತಿನ ನಾಶದ ಸ್ಪಷ್ಟ ಚಿತ್ರಣಗಳು. ಜಗತ್ತಿನಲ್ಲಿ ಬೆಳೆಯುತ್ತಿರುವ ಅತಿಯಾದ ಔದ್ಯೋಗಿಕರಣ,ಅಣೆಕಟ್ಟುಗಳು, ರಾಸಾಯನಿಕ ಉದ್ದಿಮೆಗಳು, ಅಣು ಸ್ಥಾವರಗಳು ನಮ್ಮ ಬದುಕಿನ ವಿನಾಶದ ಕ್ಷಣಗಳನ್ನು ಕಣ್ಣ ಮುಂದೆಯೇ ತಂದು ನಿಲ್ಲಿಸಿವೆ. ಇದು ಕಣ್ಣೆದುರಿನ ಸತ್ಯ. ಈ ಸತ್ಯಕ್ಕೆ ಉತ್ತರವೂ ಇಲ್ಲಿಯೇ ಇದೆ, ನಮ್ಮ ಜನ ವಿಚಾರ ಜಾಗೃತಿ ಬೆಳೆಸಿಕೊಳ್ಳಬೇಕು, ಪರಿಸರದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು, ಜಾಗತಿಕ ನಾಶಕ್ಕೆ ಕಾರಣವಾಗುವಂತಹ ಕ್ರಿಯೆಗಳ ನಿಯಂಯತ್ರಣ ಮನುಷ್ಯನಿಂದಲೇ ಸಾಧ್ಯ ಅದಕ್ಕಾಗಿ ಸಂಘಟಿತ ಪ್ರಯತ್ನವಾಗಬೇಕು, ಹೀಗಾದಾಗ ಯಾವ ಪ್ರಳಯವೂ ನಮ್ಮ ಮುಂದೆ ಸುಳಿಯಲಾರದಲ್ಲವೇ? ದಿನಬೆಳಗಾದರೆ ಟಿವಿ ಗಳಲ್ಲಿ ಪತ್ರಿಕೆಗಳಲ್ಲಿ ಒಂದಿಲ್ಲೊಂದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ಯೋತಿಷಿಗಳು ತಮ್ಮ ಪ್ರವರಗಳನ್ನು ಮುಂದಿಡುತ್ತಿದ್ದಾರೆ. ಸದರಿ ವಿಚಾರದ ಕಾರ್ಯಕ್ರಮಗಳ ಟಿ ಆರ್ ಪಿ ಏರುತ್ತಿದೆ. ಮುಲ್ಟಿನ್ಯಾಷನಲ್ ಕಂಪನೆಗಳು ಆ ಸಮಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಜಾಹೀರಾತುಗಳನ್ನು ಹಾಕುತ್ತಿವೆ, ಕೆಲಸಕ್ಕೆ ಬಾರದ ತಮ್ಮ ಉತ್ಪನ್ನಗಳನ್ನು ನಮ್ಮ ಮನೆಯಂಗಳಕ್ಕೆ ತಂದು ಹಾಕುತ್ತಿವೆ. ಆ ಮೂಲಕ ನಮ್ಮ ನಂಬಿಕೆಯ ಅಸ್ತಿತ್ವಕ್ಕೆ , ಧಾರ್ಮಿಕ ಭಾವನೆಗೆ, ಸಂಸ್ಕ್ರತಿಗೆ ಕೊಡಲಿ ಏಟು ನೀಡುತ್ತಿವೆ, ಒನ್ಸ್ ಎಗೈನ್ ಇದು ಜಾಗತೀಕರಣದ ಮತ್ತೊಂದು ಕೊಡುಗೆ!
ಹೀಗಿರುವಾಗ ಯಾವನೋ ಪಾದ್ರಿ, ಸೈತಾನ,ಮೌಲ್ವಿ,ಸ್ವಾಮೀಜಿ, ಜ್ಯೋತಿಷಿ ನಮ್ಮ ನಂಬಿಕೆಗಳ ಮೇಲೆ ಸವಾರಿ ಮಾಡಲು ಬಿಡಬೇಕೆ? ಆ ಮೂಲಕ ವಸಾಹತು ಶಾಹಿ ವಿಜೃಂಬಿಸಲು ಅವಕಾಶ ಮಾಡಬೇಕೆ? ಹೋಗಲಿ ಪ್ರಳಯದಿಂದ ತಪ್ಪಿಸಿಕೊಳ್ಳಲು ಅವರು ಸೂಚಿಸುವ ಮಾರ್ಗವೇನು? ಯಾರೋ ಧಾರ್ಮಿಕ ಪುರುಷನೊಬ್ಬ ಅವತರಿಸುತ್ತಾನಂತೆ, ಹಾಗಾಗಿ ಅವರು ಹೇಳಿದಂತೆ ನಾವು ಮತಾಂತರವಾಗಬೇಕಂತೆ,ಅವನಿಂದ ಹೊಸ ಜಗತ್ತು ಸೃಷ್ಟಿಯಾಗುತ್ತಂತೆ ಕೆಟ್ಟವರು ನರಕಕ್ಕೆ ಹೋಗುತ್ತಾರಂತೆ ಇಂತವೆಲ್ಲ ಚಂದಮಾಮ ಕಥೆಗಳಿಗೆ ಫುಲ್ ಸ್ಟಾಪ್ ಇಡಿ ಸ್ವಾಮಿ,ವಾಸ್ತವ ನೆಲೆಗಟ್ಟಿನಲ್ಲಿ ವಿಚಾರ ಮಾಡಿ, ಈ ಬಗ್ಗೆ ಈ ನಿಟ್ಟಿನಲ್ಲಿ ಆರೋಗ್ಯಕರ ಚರ್ಚೆಗಳಾಗಲೀ ಮತ್ತು ಕಾರ್ಯರೂಪಕ್ಕೂ ಬರುವುದು ಉಚಿತವಲ್ಲವೇ ನೀವೇ ಹೇಳಿ????

Wednesday, October 14, 2009

ಕ್ಯಾಂಪಸ್ ನತ್ತ ಭಟ್ಟರ "ಮನಸಾರೆ" ಸವಾರಿ







ಮನಸಾರೆ ತಂಡ ಚಿತ್ರದ ಪ್ರಮೋಷನ್ ಗಾಗಿ ಊರೂರು ಸುತ್ತುತ್ತಿದೆ. "ಮನಸಾರೆ" ಚಿತ್ರದ ಕಥಾವಸ್ತು ಉತ್ತರ ಕರ್ನಾಟಕದ ಪರಿಸರದಲ್ಲಿ ನಡೆಯುವ ಒಂದು ಸುಂದರ ಪ್ರೇಮ ಕಾವ್ಯ. ಬದುಕಿನ ನೈಜ ಸತ್ಯಗಳನ್ನು ಫಿಲ್ಟರ್ ಇಲ್ಲದಂತೆ ಹೊರಹಾಕುವ ಸಂಭಾಷಣೆ. ಕಣ್ಣಿಗೆ ತಂಪೆನಿಸುವ ಸುಂದರ ಛಾಯಾಗ್ರಹಣ, ಉತ್ತಮ ಸಂಕಲನ, ದಿಗಂತ್ ಹಾಗೂ ಅಂದ್ರಿತಾ ರೇ ಯವರ ಅತ್ಯುತ್ತಮವೆನಿಸುವ ಅಭಿನಯವಿರುವ ಮನಸಾರೆ ಒಂದು ಉತ್ತಮ ಅಭಿರುಚಿಯ ಚಿತ್ರ. ಈ ಚಿತ್ರ ಬಿಡುಗಡೆಯಾದ ಸಂಧರ್ಭದಲ್ಲಿಯೇ ಉತ್ತರ ಕರ್ನಾಟಕದ ೧೨ ಜಿಲ್ಲೆಗಳು ನೆರೆಗೆ ಸಿಲುಕಿ ನಲುಗಿದೆ. ಅದರೂ ಚಿತ್ರದ ಓಟಕ್ಕೇನೂ ಅಡ್ಡಿಯಾಗಿಲ್ಲ ಎನ್ನುತ್ತಾರೆ ಭಟ್ಟರು, ಅಲ್ಲಿನ ಜನ ನೆರೆಯಲ್ಲೂ ಚಿತ್ರ ನೋಡಿ ಸಂತಸ ಪಡುತ್ತಿದ್ದಾರಂತೆ. ಮನಸಾರೆ ರಾಜ್ಯಾಧ್ಯಂತ 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡು ಸದ್ದಿಲ್ಲದೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಚಿತ್ರ ನಿಧಾನವಾಗಿ ಟೆಂಪೋ ತೆಗೆದುಕೊಳ್ಳುತ್ತಿದೆ ಇದನ್ನು ಇನ್ನೂ ಉತ್ತೇಜಿಸಲು ಚಿತ್ರದ ನಿರ್ದೇಶಕ ಯೋಗರಾಜಭಟ್, ನಾಯಕ ದಿಗಂತ್ ಮತ್ತು ನಾಯಕಿ ಐಂದ್ರಿತಾ ರೇ ಮತ್ತು ಇತರ ನಟರೊಂದಿಗೆ ರಾಜ್ಯಾಧ್ಯಂತ ಪ್ರವಾಸ ಕೈಗೊಂಡಿದ್ದಾರೆ. ಯುವ ಸಮೂಹವನ್ನು ಚಿತ್ರದೆಡೆಗೆ ಆಕರ್ಷಿಸುವುದು ಮನಸಾರೆ ಯ ಮುಖ್ಯ ಅಜೆಂಡಾ ಅಂತೆ. ಯಾಕ್ರಿ ಭಟ್ರೆ ಕ್ಯಾಂಪಸ್ ಕಡೆಗೆ ಹೊರಟ್ರೀ ? ಅಂತಾ ಪ್ರಶ್ನಿಸಿದರೆ, ಇದು ಯುವ ಸಮೂಹದ ಚಿತ್ರ ಇಲ್ಲಿ ಸಂದೇಶ ವಿದೆ ವಿಚಾರವಿದೆ ಅದು ಅವರನ್ನು ತಲುಪಬೇಕು ಹಾಗಾಗಿ ಇವೆಲ್ಲಾ ಎಂದು ಮುಗುಳ್ನಕ್ಕರು ಭಟ್ಟರು.
ಮೊದಲ ಹಂತದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿದ್ದ ಮನಸಾರೆ ತಂಡ ಮೊನ್ನೆ ಹಾಸನಕ್ಕೆ ಬಂದಿತ್ತು. ಬಂದವರೇ ಸೀದಾ ಹೆಣ್ಣುಮಕ್ಕಳ ಎವಿಕೆ ಕಾಲೇಜಿಗೆ ಭೇಟಿ ನೀಡಿತು. ಮನಸಾರೆಯ ಉತ್ಸಾಹ ಕಂಡು ಹಿಗ್ಗಿ ಹೀರೇಕಾಯಿ ಆದ ಭಟ್ಟರು ಕಾಲೇಜು ವಿದ್ಯಾರ್ಥಿಗಳಿಗೆ ಒಂದು ಪ್ರದರ್ಶನವನ್ನು ಒಮ್ಮೆ ಮಾತ್ರ ಉಚಿತವಾಗಿ ತೋರಿಸಲಾಗುವುದು ಎಂದು ಘೋಷಿಸಿದರು. ಹೀಗೆ ತಂಡ ರಾಜ್ಯಾಧ್ಯಂತ ತನ್ನ ಪ್ರವಾಸವನ್ನು ಮುಂದುವರೆಸಿದೆ. ಈ ಸಂಧರ್ಭದಲ್ಲಿ ಅವರನ್ನು ಮಾತಿಗೆಳೆದಾಗ ಭಟ್ಟರು ತಮ್ಮ ಅನುಭವಗಳನ್ನು ಹಂಚಿಕೊಂಡರು.
  • ಮನಸಾರೆ ಪ್ರದರ್ಶನ ರಾಜ್ಯಾಧ್ಯಂತ ಹೇಗಿದೆ?

-ಅದ್ಭುತವಾಗಿದೆ... ಇಂತಹದ್ದನ್ನು ನಾನು ನಿರೀಕ್ಷಿಸಿರಲಿಲ್ಲ. ಉತ್ತರಕರ್ನಾಟಕದ ಜನ ನೆರೆಯಲ್ಲೂ ಚಿತ್ರ ನೋಡ್ತೀದಾರೆ ಇದು ಅಚ್ಚರಿಯ ಸಂಗತಿ. ಮಳೆ ಬಂದಾಗ ಸ್ವಲ್ಪ ಕಡಿಮೆಯಾಗಿತ್ತಾದರೂ ನಂತರದ ಫಲಿತಾಂಶ ನನ್ನ ನಿರೀಕ್ಷೆ ಮೀರಿದ್ದು.

  • ಕಾಲೇಜು ಕ್ಯಾಂಪಸ್ ಕಡೆ ಮೊದಲ ಸಲ ಹೋಗ್ತದೀರಿ, ಪ್ರತಿಕ್ರಿಯೆ ಹೇಗಿದೆ?

- ಕ್ಯಾಂಪಸ್ ಕಡೆ ಹೋಗ್ತಿರೋದು ಇದೇ ಮೊದಲಲ್ಲ, ಈ ಹಿಂದೆ ಮುಂಗಾರು ಮಳೆ ಸಿನಿಮಾ ಬಂದಾಗ ನಾನು, ಗಣೇಶ
ಇಬ್ರೂ ಹೋಗಿದ್ವಿ, ನಂತರದಲ್ಲಿ ನಾನೊಬ್ಬನೇ ತಾಲ್ಲೂಕು ಕೇಂದ್ರಗಳಿಗೂ ಹೋಗಿದ್ದೇನೆ. ಅವಾಗಿನ ಕ್ರೌಡು ಬೇರೆ, ಈಗಿನದ್ದೇ ಬೇರೆ. ಯುವ ಸಮೂಹದ ಪ್ರತಿಕ್ರಿಯೆ ಸಖತ್ತಾಗಿದೆ. ಯೂತ್ಸ್ ಇಷ್ಟೊಂದು ರೆಸ್ಪಾನ್ಸ್ ಮಾಡ್ತಾರೆ ಅಂದಕೊಂಡಿರಲಿಲ್ಲ. ಹೊದಕಡೆಯೆಲ್ಲ ಹುಡುಗೀರು ದಿಗಂತ ನನ್ನು ಮುತ್ತಿಗೆ ಹಾಕಿದ್ರೆ ಐಂದ್ರಿತಾ ರನ್ನು ಹುಡುಗರು ಮುತ್ತಿಕೊಳ್ತಾರೆ , ಅವರ ಅಭಿನಯವನ್ನು ಮತ್ತು ಚಿತ್ರವನ್ನು ಪ್ರಶಂಸಿಸುತ್ತಿದ್ದಾರೆ.ಮನಸಾರೆ ಗೆ ಹುಡುಗ-ಹುಡುಗಿಯರ ದೊಡ್ಡ ಆಶೀರ್ವಾದವಿದೆ.

  • ಮಾಸ್ ಪ್ರತಿಕ್ರಿಯೆ ಹೇಗಿದೆ?

-ನೋಡಿ ನನ್ನ ಪ್ರಕಾರ ಮಾಸ್ ಅಂತೇನಿಲ್ಲ, ಅದು ಅವತ್ತಿಗೂ ಇಲ್ಲ, ಇವತ್ತಿಗೂ ಇಲ್ಲ. ನನ್ನ ಕನ್ನಡದ ಜನರು ಮತ್ತು ಇತರರು ಅವರ ಪ್ರತಿಕ್ರಿಯೆ ಚೆನ್ನಾಗಿದೆ ಅವರು ನಮ್ಮನ್ನು ಆಶೀರ್ವದಿಸುತ್ತಿದ್ದಾರೆ. ನಮ್ಮ ಜನ ನೋಡ್ತೀದಾರೆ ಅನ್ನೊದೆ ಒಂದು ಖುಷಿ. ಇದನ್ನೆಲ್ಲ ನೋಡ್ತಾ ನಾವು ಮಜಾ ತಗೋತೀದೀವಿ.

  • ಎಲ್ಲೆಲ್ಲಿ ಭೇಟಿ ನೀಡಿದ್ದೀರಿ? ಕಲೆಕ್ಷನ್ ಹೇಗಿದೆ ?

ಈ ಗಾಗಲೆ ರಾಜ್ಯದ ೧೨ ಜಿಲ್ಲೆಗಳಲ್ಲಿ ಭೇಟಿ ನೀಡಿದ್ದೇವೆ ಇನ್ನೂ ಪ್ರವಾಸ ಮಾಡಬೇಕಿದೆ. ಚಿತ್ರ ನಿಧಾನವಾಗಿ ಟೆಂಪೋ ತೆಗೆದುಕೊಳ್ತಿದೆ. ನನ್ನ ಹಿಂದಿನ ಚಿತ್ರಗಳು ಸಹಾ ಹಾಗೆಯೇ ನಿಧಾನವಾಗಿ ಮೇಲೆ ಬಂದವು. ಆದರೆ ಮನಸಾರೆ ಸ್ಪೀಡ್ ಜಾಸ್ತಿಯಾಗಿದೆ. ಒಳ್ಲೇ ಪವರ್ ಫುಲ್ ನಿರ್ಮಾಪಕರು ಇದ್ದಾರೆ ಹಾಗಾಗಿ ಚಿತ್ರಮಂದಿರಗಳಲ್ಲಿ ಚಿತ್ರದ ಓಟಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಚಿತ್ರ 50ದಿನ, 100ದಿನ ಓಡುವ ಸಂಧರ್ಭಕ್ಕೆ ನಿರ್ಮಾಪಕರು ಬಿಡುವು ಮಾಡಿಕೊಂಡು ಜೊತೆಯಾಗಲಿದ್ದಾರೆ. ಎಲ್ಲ ಕೇಂದ್ರಗಳಲ್ಲು ಕಲೆಕ್ಷನ್ ಚೆನ್ನಾಗಿದೆ.

  • ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ನಿರೀಕ್ಷೆ ಏನು?

-ಇನಿಷಿಯಲ್ ಗೆ ಇಷ್ಟೊಂದು ಯಶಸ್ಸು ಆಗುತ್ತೇ ಅಂತಾ ಖಂಡಿತಾ ಗೊತ್ತಿರಲಿಲ್ಲ, ಇದು ಎಲ್ಲಿಗೆ ಹೋಗಿ ಮುಟ್ಟುತ್ತೊ ಗೊತ್ತಿಲ್ಲ. ಜನರ ಹಾರೈಕೆ ಆಶೀರ್ವಾದ ಹೀಗೆ ಇರಲಿ ಎಂದು ಆಶಿಸುತ್ತೇನೆ ಎಂದು ಮಾತು ಮುಗಿಸಿದರು ಭಟ್ಟರು.



Thursday, October 8, 2009

ಮಳೆ ನಿಂತು ಹೋದ ಮೇಲೆ.... ಬದುಕು ಬಾಡಿ ಹೋಗಿದೆ.

ಕಳೆದ ವಾರ ಉತ್ತರಕನ್ನಡದ 11ಜಿಲ್ಲೆಗಳಲ್ಲಿ ಸತತವಾಗಿ ಸುರಿದ ಮಳೆ ಅಲ್ಲಿನ ಜನರ ಬದುಕುಗಳನ್ನೆ ಒರೆಸಿ ಹಾಕಿದೆ! ಬಹುಶ: ಆ ಭಾಗದ ಮಂದಿ ಯಾವತ್ತಿಗೂ ನಿರೀಕ್ಷಿಸಿರದ ಮಳೆ ಅನಿರೀಕ್ಷಿತವಾಗಿ ಬಂದೆರಗಿ ಜನರನ್ನು ಬೀದಿ ಪಾಲು ಮಾಡಿದೆ. 1992ರಲ್ಲಿ ಈ ಭಾಗದಲ್ಲಿ ಇದೇ ರೀತಿಯ ಮಳೆ ಸುರಿದಿತ್ತಾದರು ಇಷ್ಟೊಂದು ಪ್ರಮಾಣದ ಅನಾಹುತ ಸಂಭವಿಸಿರಲಿಲ್ಲ. ರಾಜ್ಯದಲ್ಲಿ ಸೂಕ್ತ ರೀತಿಯ ನೀರಾವರಿ ಯೋಜನೆಗಳನ್ನು ಜಾರಿಗೊಳಿಸದಿರುವುದು (ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ) ಮತ್ತು ನಿರಾವರಿ ಇಲಾಖೆಯ ಇಂಜಿನಿಯರುಗಳ ಮೇಲೆ ಸರ್ಕಾರ ಸಮರ್ಥ ಹಿಡಿತ ಹೊಂದದಿರುವುದು ಇವತ್ತಿನ ಅವಘಡಗಳಿಗೆ ಕಾರಣ ಎಂಬುದರಲ್ಲಿ ಸಂದೇಹವೇ ಇಲ್ಲ.
ಬರದ ಜಿಲ್ಲೆಗಳಿಗೆ ಸುಧಾರಣೆ ಹಾಗೂ ಅಭಿವೃದ್ದಿಗೆ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ(ಅದು ಎಷ್ಟರ ಮಟ್ಟಿಗೆ ಜನರಿಗೆ ತಲುಪುತ್ತಿದೆ ಎಂಬುದು ಬೇರೆ ಮಾತು!) ಆದರೆ ಅಭಿವೃದ್ದಿ ಶೂನ್ಯ. ಈ ನಡುವೆ ಪ್ರಳಯ ಸ್ವರೂಪಿಯಾಗಿ ಕಾಡಿದ ವರುಣ ದೇವನ ಮುನಿಸಿನಿಂದ ಜನರ ಮನೆ,ಮಠ,ಆಸ್ತಿ-ಪಾಸ್ತಿ,ಜನ-ಜಾನುವಾರು, ರಸ್ತೆ-ಸೇತುವೆ, ಕೃಷಿ ಭೂಮಿ ಎಲ್ಲವೂ ನಾಶವಾಗಿದೆ. ೪-೫ ದಿನಗಳ ಕಾಲ ಸುರಿದ ಮಳೆಗೆ 200ಕ್ಕೂ ಹೆಚ್ಚುಮಂದಿ ಜೀವ ಕಳೆದುಕೊಂಡಿದ್ದರೆ, 2ಲಕ್ಷ ಮನೆಗಳು ನಾಶವಾಗಿವೆ. ಇನ್ನೂ ಒಂದು ಲಕ್ಷದಷ್ಟು ಮನೆಗಳು ಆಗಲೋ ಈಗಲೋ ಎಂಬ ಸ್ಥಿತಿಯಲ್ಲಿವೆ. 30ಲಕ್ಷ ಕೃಷಿ ಸಾಗುವಳಿ ಭೂಮಿ-ಬೆಳೆ ಸಂಪೂರ್ಣ ಹಾಳಾಗಿದೆ. ವಿದ್ಯುತ್ ವ್ಯವಸ್ಥೆ ಹದಗೆಟ್ಟಿದೆ. ಒಟ್ಟಾರೆ 17000ಕೋಟಿಯಷ್ಟು ನಷ್ಟ ಸಂಭವಿಸಿದೆ, 18ಮಿಲಿಯನ್ ಜನ ಸಂಕಷ್ಟಕ್ಕೆ ಈಡಾಗಿದ್ದಾರೆ.
ಮಳೆಯಿಂದ ನೆರೆ ಬಂದು 2ದಿನದ ನಂತರ ಎಚ್ಚೆತ್ತುಕೊಂಡು ರಾಜ್ಯ ಸರ್ಕಾರ ಮಠದಿಂದ ಆಚೆಗೆ ಬಂದಿದೆ.ಪರಿವಾರ ಸಮೇತ ಮಠದಲ್ಲಿ ಬಿಡಾರ ಹೂಡಿ ಗುಜರಾತ್ ರಾಜ್ಯದ ಮೋದಿಯಿಂದ ಪಾಠ ಹೇಳಿಸಿಕೊಳ್ಳುತ್ತಿದ್ದ ಶಾಸಕರು-ಮಂತ್ರಿ ಮಹೋದಯರು ನಿದ್ರೆಯಿಂದ ಎಚ್ಚೆತ್ತವರಂತೆ ಆಚೆ ಬಂದರಾದರೂ ಅವರು ನಡೆದು ಕೊಳ್ಳುತ್ತಿರುವ ರೀತಿಯಾದರೂ ಎಂತಹುದು? ಮುಖ್ಯಮಂತ್ರಿ ಯಡಿಯೂರಪ್ಪ ತರಾತುರಿಯಲ್ಲಿ ಸಭೆ ನಡೆಸಿ ನೆರೆ ಸಂತ್ರಸ್ತರಿಗೆ 200ಕೋಟಿ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ. ನೆರೆ ಪೀಡಿತ ಪ್ರದೇಶಗಳಿಗೆ ಒಂದು ಸುತ್ತು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಈಗ ನಿಧಿ ಸಂಗ್ರಹಕ್ಕೆ ಬೀದಿಗಿಳಿದಿದ್ದಾರೆ, ಅದಕ್ಕೂ ಮುನ್ನ ನೆರೆಹೊರೆಯ ರಾಜ್ಯಗಳಿಗೆ ಸಹಾಯಕೋರಿ ಪತ್ರ ಬರೆದಿದ್ದಾರೆ. ಅತ್ತ ಅಧಿಕಾರಿಗಳನ್ನು ಮಾನಿಟರ್ ಮಾಡುವ , ತತ್ ಕ್ಷಣದ ಪರಿಹಾರವನ್ನು ಸಮರೋಪಾದಿಯಲ್ಲಿ ಮಾಡಿಸುವವರು, ಇಲ್ಲದಂತಾಗಿದ್ದಾರೆ...! ಇದು ಸಧ್ಯದ ಸ್ಥಿತಿ.
4-5 ದಿನಗಳ ಹಿಂದೆಯಷ್ಟೇ ಗುಲ್ಬರ್ಗಾ ದಲ್ಲಿರುವ ನನ್ನ ಹಿರಿಯ ಅಧಿಕಾರಿ ಮಿತ್ರೊಬ್ಬರು ದೂರವಾಣಿಯಲ್ಲಿ ಮಾತಿಗೆ ಸಿಕ್ಕಿದ್ದರು. ವಿಪರೀತವಾದ ಮಳೆಯಿಂದ ನೆರೆ ಬಂದಿದ್ದರಿಂದ ತುರ್ತು ಕಾರ್ಯಾಚರಣೆ ನಡೆಸಲು ಉನ್ನತಾಧಿಕಾರಿಗಳಿಗೆ ಸ್ವಯಂ ಅಧಿಕಾರವಿದ್ದರೂ ಅವರನ್ನು ಮಾನಿಟರ್ ಮಾಡುವ ಜಿಲ್ಲಾಧಿಕಾರಿಗಳ ಬೇಜವಾಬ್ದಾರಿ ತನದಿಂದಾಗಿ ರಕ್ಷಣಾ ಪಡೆ ಕರೆಸುವಲ್ಲಿ, ಲೈಫ್ ಬೋಟ್ ತರಿಸುವಲ್ಲಿ ವಿಳಂಬವಾಯ್ತಂತೆ.. ಇದು ಗುಲ್ಬರ್ಗಾ ಜಿಲ್ಲೆಯ ಕಥೆ ಮಾತ್ರವಲ್ಲ ಅಕ್ಕಪಕ್ಕದ ಜಿಲ್ಲೆಗಳ ಕಥೆಯೂ ಅದೇ ಆಗಿತ್ತಂತೆ. ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್ ನಿರ್ಮಾಣವಾದ ನಂತರ ಅವರಿಗೆ ಬಟ್ಟೆ ಬರೆ, ಔಷದ, ಇತರೆ ಪದಾರ್ಥಗಳನ್ನು ಕೊಂಡುಕೊಳ್ಳಲು ಹಣವನ್ನು ನೇರವಾಗಿ ವಿತರಿಸುವ ಬದಲಿಗೆ ಚೆಕ್ ವಿತರಿಸಲು ಹೇಳಲಾಯ್ತಂತೆ... ಹೀಗಾದಾಗ ಯಾವ ಸಂತ್ರಸ್ತ ಬ್ಯಾಂಕಿಗೆ ಹೋಗಿ ಖಾತೆ ತೆರೆದು ನಗದು ಮಾಡಿಸಿಕೊಳ್ಳಲು ಸಾಧ್ಯ ಅಲ್ಲಿಯವರೆಗೂ ಅವನ ಸಹನೆ ಇರುವುದೇ? ಎಂದು ಅಳಲು ತೋಡಿಕೊಂಡರು ನನ್ನ ಅಧಿಕಾರಿ ಮಿತ್ರರು.
ಇನ್ನು ವಿರೋಧ ಪಕ್ಷಗಳು ರಾಜ್ಯದಲ್ಲಿ ಸಂಕಷ್ಟ ಸ್ಥಿತಿ ಇರುವಾಗ ಆಡಳಿತದೊಂದಿಗೆ ಒಗ್ಗೂಡಿ ಸಹಾಯಕ್ಕೆ ಧಾವಿಸುವ ಬದಲಿಗೆ ಬಿಜೆಪಿಗಳನ್ನು ತೀಕ್ಷ್ಣ ಮಾತುಗಳಿಂದ ಟೀಕಿಸುತ್ತಾ "ನೆರೆ"ಯಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ, ದೇಶಪಾಂಡೆ ಇವರೆಲ್ಲ ಹೊಣೆಗೇಡಿತನದಿಂದ ವರ್ತಿಸುತ್ತಿದ್ದಾರೆ. ಆಡಳಿತ ಸರ್ಕಾರ ೀ ಸಂಧರ್ಭದಲ್ಲಿ ಏನೇ ತಪ್ಪು ಮಾಡಿರಲಿ ಅದನ್ನು ಚರ್ಚಿಸಲು ಇದು ಸಕಾಲವಲ್ಲ ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಕೂಡಿ ಏನು ಮಾಡಬಹುದು. ಸಂತ್ರಸ್ತರ ಬದುಕುಗಳನ್ನು ಕಟ್ಟುವುದು ಹೇಗೆ ಎಂಬುದನ್ನು ಯೋಚಿಸಿ ಕಾರ್ಯೋನ್ಮುಖವಾಗಬೇಕಿದೆ. ಯಡಿಯೂರಪ್ಪನ ಸರ್ಕಾರ ಅನುಭವಿಗಳಿಲ್ಲದ , ಅನುಭವವಿಲ್ಲದ ಸರ್ಕಾರ. ಅದಾಗ್ಯೂ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರಕ್ಕೆ 10000ಕೋಟಿ ರೂಪಾಯಿಗಳ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಇಲ್ಲಿ 17ಸಾವಿರ ಕೋಟಿಯಷ್ಟು ಹಾನಿಯಾಗಿದೆ . ಇಂತಹ ಸನ್ನಿವೇಶದಲ್ಲಿ ಪಕ್ಕದ ತಮಿಳುನಾಡಿನ ರಾಜಕಾರಣಿಗಳು ನಮ್ಮ ರಾಜ್ಯದ ರಾಜಕಾರಣಿಗಳಿಗೆ ಮಾದರಿಯಾಗ ಬೇಕಾಗಿದೆ..!
ಸಂತ್ರಸ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜೋಳಿಗೆ ಹಿಡಿದು ಬೀದಿಗೆ ಇಳಿದಿರುವ ಯಡಿಯೂರಪ್ಪ ಮತ್ತು ಅವರ ಸರ್ಕಾರದ ಸಚಿವರು ಶಾಸಕರುಗಳು ಬೆಂಗಳೂರೊಂದರಲ್ಲಿ ಕೇವಲ 2ದಿನದಲ್ಲಿ ಸುಮಾರು 700ಕೋಟಿ ರೂಗಳಷ್ಟು ಹಣ ಸಂಗ್ರಹಣೆ ಮಾಡಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಸ್ಪಂದಿಸಿರುವ ಜನರ ಮಾನವೀಯತೆಯನ್ನು ಕಂಡು ಯಡೀಯೂರಪ್ಪ ಉಬ್ಬ ಬೇಕಿಲ್ಲ. ಏಕೆಂದರೆ . ಒಂದು ಜವಾಬ್ದಾರಿಯುತವಾದ ಸರ್ಕಾರದ ಅಧಿಪತಿಯಾಗಿದ್ದು ಜನರಿಂದ ಬಿಕ್ಷೆ ಎತ್ತುವುದಕ್ಕಿಂತ ಆಡಳಿತದಲ್ಲಿ ಬಿಗಿ ಇಟ್ಟುಕೊಂಡು 5ಡಜನ್ ನಷ್ಟಿರುವ ತನ್ನ ಸಚಿವರುಗಳನ್ನು ಒಬ್ಬೊಬ್ಬರಬ್ಬನ್ನು ಒಂದೊಂದು ಜಿಲ್ಲೆಯ ನೆರೆಸಂತ್ರಸ್ತರ ನೆರವಿಗೆ ಉಸ್ತುವಾರಿಗೆ ಕಳುಹಿಸಿದಿದ್ದರೆ ಅದರ ತೂಕವೇ ಬೇರೆ ಇರುತಿತ್ತು. ಮಂತ್ರಾಲಯದಲ್ಲಿ ಸಾವಿರಾರು ಮಂದಿ ಭಕ್ತರು ಸಿಕ್ಕಿ ಜೀವಭಯದಿಂದ ನಡುಗುತ್ತಿದ್ದರೆ. ಮಂತ್ರಾಲಯದ ಸ್ವಾಮೀಜಿಯೊಬ್ಬರನ್ನು ರಕ್ಷಣೆ ಮಾಡಿ ಕೃತಾರ್ಥತೆ ಅನುಭವಿಸಿದರಲ್ಲ? ಇತರೆ ಭಕ್ತಾದಿಗಳ ಜೀವ ಜೀವವಲ್ಲವೇ? ಇದು ಎಂಥ ಸಂದೇಶವನ್ನು ನೀಡಿದಂತಾಯಿತು.? ನೆರೆ ಪೀಡಿತ ಪ್ರದೆಶಗಳಿಗೆ ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಹುರಿದುಂಬಿಸ ಬೇಕಾದ ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ತನ್ನನ್ನು ಸೀಮಿತ ಮಾಡಿಕೊಂಡರೆ ಇವರನ್ನ್ನು ಜನ ಕ್ಷಮಿಸುತ್ತಾರೆಯೇ? ಉತ್ತರಕರ್ನಾಟಕದ ಭೀಮಾ ನದಿ, ಕೃಷ್ಣಾ ನದಿ , ಬ್ಯಾರೇಜುಗಳು, ಎಲ್ಲ ಅಣೆಕಟ್ಟುಗಳಿಂದಲೂ ಇಂಜಿನಿಯರುಗಳು ಯಾವುದೇ ಷೆಡ್ಯೂಲ್ ಇಟ್ಟುಕೊಳ್ಳದೇ ಏಕಾಏಕಿ ಬಾಗಿಲು ತೆರೆದು ನೀರು ಹರಿಯ ಬಿಟ್ಟರೇ ನೆರೆ ಬರದೇ ಇನ್ನೇನಾದೀತು? ಹೆಚ್ಚು ಅಂದರೆ 35 ರಿಂದ 45ಸಾವಿರ ಕ್ಯೂಸೆಕ್ಷ್ ನೀರು ಹೊರ ಬಿಡಬೇಕಾದ ಜಾಗದಲ್ಲಿ ಏಕಾಏಕಿ 5ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಷ್ ನೀರು ಹೊರಗೆ ಹರಿದಿದೆ. ಕಾಲಾನುಕಾಲಕ್ಕೆ ಒಳ ಹರಿವು ಮತ್ತು ಹೊರ ಹರಿವನ್ನು ನಿಭಾಯಿಸದ ನೀರಾವರಿ ಇಲಾಖೆಯ ಇಂಜಿನಿಯರುಗಳು ಇವತ್ತಿನ ದುಸ್ಥಿತಿಗೆ ಕಾರಣ ಎಂಬುದರಲ್ಲಿ ಸಂಶಯವೇ ಇಲ್ಲ. ಇವರ ಮೇಲೇ ಯಾವ ತನಿಖೆಯೂ ಇಲ್ಲ ಕ್ರಮವೂ ಇಲ್ಲ , ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲವೇಕೆ? ಹೆಚ್ಚುವರಿ ನೀರನ್ನು ಹರಿಯ ಬಿಟ್ಟದ್ದರಿಂದ ಇವತ್ತು ಪಕ್ಕದ ಆಂಧ್ರದಲ್ಲಿ ಲೆಕ್ಕಕ್ಕೆ ಸಿಗದಷ್ಟು ನಷ್ಟ ಹಾಗೂ ಸಾವು-ನೋವು ಸಂಭವಿಸಿದೆ, ಇದಕ್ಕೆ ನಮ್ಮ ಇಂಜಿನಿಯರುಗಳ ಕೊಡುಗೆ ಇದೆಯಲ್ಲವೇ?
ಉತ್ತರ ಕರ್ನಾಟಕದ ಶಾಸಕರೊಬ್ಬರು ವೈಯುಕ್ತಿಕವಾಗಿ 10ಕೋಟಿ ರೂಪಾಯಿಗಳನ್ನು ನೀಡಿ ಮಾದರಿಯಾಗಿದ್ದಾರೆ. ಇವತ್ತು ಸರ್ಕಾರದ ಒಬ್ಬೊಬ್ಬ ಸಚಿವನೂ, ಶಾಸಕನೂ ಸಾವಿರಾರು ಕೋಟಿಗೆ ಬೆಲೆ ಬಾಳುತ್ತಾರೆ. ವಿರೋಧ ಪಕ್ಷದ ಮುಖಂಡರು ಇದರಲ್ಲಿ ಕಡಿಮೆ ಏನಿಲ್ಲ. ಇವರಿಗೆ ಪಕ್ಷದ ಟಿಕೆಟ್ ಪಡೆಯಲು ಚುನಾವಣೆಗೆ ಖರ್ಚು ಮಾಡಲು ಶಾಸಕರನ್ನು ಕೊಳ್ಳಲು ಕೋಟ್ಯಾಂತರ ರೂ ಹಣ ವಿದೆ ಆದರೆ ನೆರೆ ಸಂತ್ರಸ್ತರಿಗೆ ಉದಾರವಾಗಿ ಕೊಡಲು ಯಾಕೆ ಮುಂದಾಗುತ್ತಿಲ್ಲ? ಜನರ ಬಳಿ ಯಾಕೆ ಬಿಕ್ಷೆ ಎತ್ತಲು ಬರಬೇಕು ? ಮೊದಲು ರಾಜ್ಯದ ಶಾಸಕರೇ, ಮಂತ್ರಿ ಮಹೋದಯರೇ ನಿಮ್ಮ ಖಜಾನೆ ತೆರೆದಿಡಿ, ಜನಸಾಮಾನ್ಯರನ್ನು ಕೇಳುವ ಅವಶ್ಯಕತೆಯಿಲ್ಲ ಅವರಿಗೂ ಮನುಷ್ಯತ್ವವಿದೆ ಅವರ ಕೆಲಸ ಅವರು ಮಾಡುತ್ತಾರೆ ಮೊದಲು ನಿಮ್ಮ ಮುಖವಾಡ ಕಳಚಿ! ಜನರಿಗೆ ನೆರವಿನ ಹಸ್ತ ಚಾಚಿ. ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ಕೆಲವು ಜಿಲ್ಲೆಗಳಿಗೆ ಮಲತಾಯಿ ಧೋರಣೆ ತೋರುವಂತೆ ನೆರೆ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪಕ್ಕದ ಆಂಧ್ರಕ್ಕೆ 156.84 ಕೋಟಿ ಹಣ ನೀಡಿದ್ದರೆ ರಾಜ್ಯಕ್ಕೆ ಕೇವಲ 52.26ಕೋಟಿ ಹಣ ನೀಡಿದೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ರಾಜ್ಯದ 4-5ಮಂದಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ದೇವೇಗೌಡ, ಅನಂತಕುಮಾರ್ ರಂತಹ ಘಟಾನುಘಟಿಗಳಿದ್ದಾರೆ ಅದಾಗ್ಯೂ ಅವರು ರಾಜ್ಯಕ್ಕೆ ನೆರವು ತರುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಇದೇ ರೀತಿಯ ನಿರ್ಲಿಪ್ತ ಧೋರಣೆ ಮುಂದುವರೆದರೆ ಜನತೆ ಇವರನ್ನು ಯಾವತ್ತಿಗೂ ಕ್ಷಮಿಸಲಾರರು.

Friday, October 2, 2009

ನಮ್ಮ "ಶಂಕರ"ನ ನೆನಪು.. ರಂಗನಮನ,ಸಿನಿಮಾ ಇತ್ಯಾದಿ



ಫೋಟೋಗಳು ವಿಸ್ಮಯ ಶಿವೂ




ಶಂಕರ್ ನಾಗ್ ಜೀವಿತದ ಅಲ್ಪ ಕಾಲದಲ್ಲಿಯೇ ಊಹೆಗೂ ನಿಲುಕದ ಮಹತ್ಸಾಧನೆಯನ್ನು ಮಾಡಿದ ಸಾಧಕ,ಸಾಹಸಿ ಮತ್ತು ಕ್ರಿಯಾಶೀಲ. ಚಲನ ಚಿತ್ರ, ನಾಟಕ ಮತ್ತಿತರ ವಿಭಾಗಗಳಲ್ಲಿ ತಾನು ಕಂಡ ಕನಸುಗಳನ್ನು ನಿಜವಾಗಿಸುವೆಡೆಗೆ ತುಡಿತವಿರಿಸಿಕೊಂಡಿದ್ದ ಶಂಕರ್ ಒಂದು ಪ್ರಬುದ್ದ ಮನಸ್ಥಿತಿಯ ವ್ಯಕ್ತಿತ್ವ. ತಾನೂ ಎತ್ತರಕ್ಕೆ ಬೆಳೆಯುವ ಜೊತೆಗೆ ತನ್ನೊಂದಿಗೆ ದುಡಿಯುವ ಒಬ್ಬ ಸಾಮಾನ್ಯನನ್ನು ಸಹಾ ಅತ್ಯಂತ ಗೌರವದಿಂದ ಕಾಣುತ್ತಿದ್ದ ಶಂಕರ್ ನಾಗ್ , ಅವರನ್ನು ತನ್ನ ಜೊತೆಗೆ ಬೆಳೆಸುತ್ತಿದ್ದ! ಬಹುಶ: ಶಂಕರ್ ನಾಗ್ ಒಬ್ಬ ಕ್ರಿಯಾಶೀಲ ನಿರ್ದೇಶಕನಾಗಿ ನಟನಾಗಿ ಮಾತ್ರ ನಮ್ಮ ಬಹುತೇಕ ಜನರಿಗೆ ಗೊತ್ತೇ ವಿನಹ ಆತ ಸಮಾಜದ ಅಭಿವೃದ್ದಿಗೆ ಚಿಂತಿಸುತ್ತಿದ್ದುದು, ಮತ್ತು ನಾವು ಈಗ ಕಾಣುತ್ತಿರುವ ಕನಸನ್ನು ಅವರು ಬಹಳ ಹಿಂದೆಯೇ ಸಾಕಾರ ಗೊಳಿಸಲು ಯತ್ನಿಸಿದ್ದರು ಮತ್ತು ಆ ಮೂಲಕ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ಅವರು ನೀಡಿದ್ದರು ಎಂಬು ಬಹುತೇಕ ಮಂದಿಗೆ ತಿಳಿದಿರಲಾರದು. ಶಂಕರ್ ವಿಧಿವಶರಾಗಿದ್ದು 35ನೇ ವಯಸ್ಸಿನಲ್ಲಿ, ಇಂದಿಗೆ ಅವರು ಗತಿಸಿ 19ವರ್ಷ 10ತಿಂಗಳು 21ದಿನಗಳು ಸಂದಿವೆ.
ವಿಧಿಯೇ ಹಾಗೇ ಒಳ್ಳೆಯವರನ್ನು, ಸಾಧಕರನ್ನು ಇನ್ನೂ ಬದುಕಿರಬೇಕಿತ್ತು ಎಂದು ಕೊಳ್ಳುವಾಗಲೇ ಕರೆದುಕೊಂಡು ಹೋಗಿ ಬಿಡುತ್ತದೆ. ಶಂಕರ್ ಸಹಾ ಹಾಗೇಯೇ 'ಒಂದಾನೊಂದು ಕಾಲದಲ್ಲಿ' ಬಂದು 'ಮಿಂಚಿನ ಓಟ' ಗಾರನಾಗಿ 'ಆಕ್ಸಿಡೆಂಟ್ 'ಮೂಲಕ ಅಂತರ ರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿ 'ಸುಂದರ ಕಾಂಡ' ಬರೆದು 'ನಿಗೂಡ ರಹಸ್ಯ' ಲೋಕಕ್ಕೆ ಹೊರಟು ಹೋದರು. ಶಂಕರ್ ನಾಗ್ ಬಗ್ಗೆ ಯಾಕೆ ಇಷ್ಟೆಲ್ಲಾ ಬರೆಯಬೇಕು? ಅವರೇನು ಸಮಾಜ ಸುಧಾರಕರೇ? ಯ:ಕಶ್ಚಿತ್ ಒಬ್ಬ ನಟ ನಿರ್ದೇಶಕ-ನಟ ಅಷ್ಟೇ ಎಂದು ಮೂಗೆಳೆಯುವವರು ಉಂಟು. ಹೌದಲ್ವಾ ಯಾಕೆ ಶಂಕರ್ ನಾಗ್ ನೆನಪಾಗ ಬೇಕು ? ಇಂತಹದ್ದೊಂದು ಪ್ರಶ್ನೆ ಎದುರಾಗಿದ್ದು ಸಮಾನ ಮನಸ್ಕ ಗೆಳೆಯರೆಲ್ಲ ಸೇರಿ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ "ಶಂಕರನ ನೆನಪು..." ಕಾರ್ಯಕ್ರಮ ಮಾಡಲು ಹೊರಟಾಗ.
ಮೊದಲಿಗೆ ಹೇಳಿ ಬಿಡ್ತೀನಿ ಅಸಲಿಗೆ ನಾವು ಶಂಕರ್ ನಾಗ್ ಅಭಿಮಾನಿ ಸಂಘದವರಲ್ಲ.., ಆದರೆ ಶಂಕರ್ ಅಲ್ಪ ಕಾಲದಲ್ಲಿ ಬಿಟ್ಟು ಹೋದ ತಾನೇ ಸೃಜಿಸಿದ ರಂಗ ಪರಂಪರೆಯನ್ನು,ಹೊಸ ದಿಕ್ಕಿನಲ್ಲಿ ಯೋಚಿಸುವ ಚಿತ್ರಗಳನ್ನಅತ್ಯಂತ ಆಧುನಿಕವಾದ ಅಭಿವೃದ್ದಿ ಚಿಂತನೆಯ ಪ್ರಯತ್ನಗಳನ್ನು ಬಲ್ಲವರು. ಹಾಗಾಗಿಯೇ ಶಂಕರನ ನೆನಪು ಜೊತೆಗೆ ಒಂದು ಸಾಂಸ್ಕೃತಿಕ ಪರಂಪರೆಯನ್ನು ಮುಂದುವರೆಸುವ ಪ್ರಯತ್ನವಷ್ಟೇ ಆಗಿತ್ತು. ಇದಕ್ಕೆ ಕಾರಣಗಳು ಇಲ್ಲದಿಲ್ಲ, ನಮ್ಮೂರಿನಲ್ಲಿ ರಾಜಕೀಯ ಹಾಸಿ ಹೋದ್ದು ಮಲಗುವಂತಹ ಸ್ಥಿತಿ ಇದೆ. ಯಾವುದೇ ಕಾರ್ಯಕ್ರಮಕ್ಕೆ ರಾಜಕೀಯ ಥಳುಕು ಹಾಕಿ ಕೊಂಡಿರುತ್ತದೆ. ಇಂತಹ ವಾತಾವರಣದಿಂದ ಹೊರತಾದ ಕಾರ್ಯಕ್ರಮ ಮಾಡುವುದಷ್ಟೇ ಗುರಿಯಾಗಿತ್ತು. ಇರಲಿ ಇಲ್ಲಿ ವಿಷಯ ಅದಲ್ಲ. ಕಳೆದ ಒಂದು ವರ್ಷದ ಹಿಂದೆ ನಮ್ಮ ಪತ್ರಿಕೆಯ ಸಂಪಾದಕರಾದ ಆರ್ ಪಿ ವಿ ಯವರಿಗೆ ಶ್ರೇಷ್ಠ ಪತ್ರಕರ್ತ ಪ್ರಶಸ್ತಿ ಬಂದಾಗ ಝಿ ಕನ್ನಡದ ಮುಖ್ಯ ಛಾಯಾಗ್ರಾಹಕ ರಾಮ್ ಕಿ ಎಂಬುವವರ ಪರಿಚಯವಾಗಿತ್ತು, ಆತ ಶಂಕರ್ ನಾಗ್ ಶಿಷ್ಯ ರಂತೆ. ಮಂಡ್ಯ ಜಿಲ್ಲೆಯವರಾದ ರಾಮಕ್ರಿಷ್ಣ ಪದವಿ ಮುಗಿಸಿ ನಿರುದ್ಯೋಗಿ ಯಾಗಿದ್ದ ದಿನಗಳಲ್ಲಿ ರಂಗ ತಾಲೀಮು ನೋಡಲು ಹೋಗುತ್ತಿದ್ದರಂತೆ. ಅಂತಹ ದಿನಗಳಲ್ಲಿ ಈತನ ಆಸಕ್ತಿಯನ್ನು ಗುರುತಿಸಿದ ಶಂಕರ್ ನಾಗ್ ಆತನ ಹೆಗಲ ಮೇಲೆ ಕೈ ಇರಿಸಿ "ಬಾ ಗೆಳೆಯ ನಮ್ಮ ತುತ್ತಿನಲ್ಲಿ ನಿನಗೂ ಒಂದು ತುತ್ತಿದೆ" ಎಂದರಲ್ಲದೇ ನಾಟಕದ ಎಲ್ಲ ವಿಭಾಗಗಳಲ್ಲೂ ಆತನನ್ನು ಯಶಸ್ವಿಯಾಗಿ ಬೆಳೆಸಿದರಂತೆ. ಹಾಗೆಯೇ ರಾಮಕ್ರಷ್ಟ , ಶಂಕರ್ ನಾಗ್ ರ ಸಹಚರ್ಯದಿಂದ ಅವರ ಬಾಯಲ್ಲೇ ರಾಮ್ ಕಿ ಯಾದರಂತೆ ಇಷ್ಟು ಹೇಳಿ ಕಣ್ಣೀರಾದರು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಧೋರಣೆ ಬೆಳೆಸಿಕೊಂಡಿದ್ದ ಶಂಕರ್ ನಾಗ್ ಮರಾಠಿ ರಂಗಭೂಮಿಯ ಮೂಲಕ ಬೆಳಕಿಗೆ ಬಂದರಾದರೂ ಅಪ್ರತಿಮ ಸಾಧನೆಗೈದಿದ್ದು ಎತ್ತರಕ್ಕೆ ಬೆಳೆದು ನಿಂತದ್ದು ಮಾತ್ರ ಕನ್ನಡದಲ್ಲಿ. ತನ್ನದೇ ಆದ ಸಂಕೇತ್ ತಂಡ ಕಟ್ಟಿದ ಶಂಕರ್ ಕನ್ನಡ ನಾಟಕ ಪರಂಪರೆಯನ್ನು ಬೆಳೆಸಿದ ರೀತಿ ಎಂತಹವರು ಹುಬ್ಬೇರಿಸುವಂತಹದ್ದು. ಕನ್ನಡದ ನಾಟಕಗಳನ್ನು ಸಪ್ತ ಸಾಗರದಾಚೆಗೂ ತೆಗೆದುಕೊಂಡು ಹೋದ ಶಂಕರ್ ೭-8ರಾಷ್ಟ್ರಗಳಲ್ಲಿ ನಾಟಕಗಳ ಪ್ರದರ್ಶನ ನೀಡಿದ್ದರು. ಸ್ವಾಭಿಮಾನದ ಪ್ರತೀಕದಂತಿದ್ದ ಶಂಕರ್ ನಾಗ್ ನಮ್ಮವರು ಚಲನ ಚಿತ್ರದ ಧ್ವನಿ ಗ್ರಹಣಕ್ಕಾಗಿ ತಮಿಳುನಾಡಿಗೆ ಹೋಗುತ್ತಿದ್ದಂತಹ ದಿನಗಳಲ್ಲಿ ನಮ್ಮದೇ ಆದ ಧ್ವನಿಗ್ರಹಣ ಕೇಂದ್ರವನ್ನು ಮೊದಲಿಗೆ ಆರಂಭಿಸಿದರು. ನಮಗೆ ಸಂಪೂರ್ಣ ಅಪರಿಚಿತವಾಗಿದ್ದ ರೆಸಾರ್ಟ್ ಮಾದರಿಗಳನ್ನು ವಿದೇಶಗಳಲ್ಲಿ ಸುತ್ತಿ ಬಂದಿದ್ದ ಶಂಕರ್ ಕೋಟ್ಯಾಂತರ ರೂಪಾಯಿ ಸಾಲ ಮಾಡಿ ಇಡೀ ಭಾರತ ದೇಶದಲ್ಲಿಯೇ ಅಪರೂಪವೆನಿಸುವಂತಹ ಮತ್ತು ಮೊದಲ ಕಂಟ್ರಿಕ್ಲಬ್ ನಿರ್ಮಾಣಕ್ಕೆ ಮುಂದಾದರು. ಅಲ್ಲಿ ರಂಗ ಚಟುವಟಿಕೆ, ಸಿನಿಮಾ, ವಸತಿ, ಹೋಟೆಲ್, ಕಾರ್ಯಕ್ರಮ ಸಭಾಂಗಣ, ಹಳ್ಳಿ ಮಾದರಿಯ ಮನೆಗಳು ಮತ್ತು ಈಜುಕೊಳ ಹೀಗೆ ಎಲ್ಲವನ್ನು ಸೃಜಿಸಿದರು.ನಂದಿ ಬೆಟ್ಟಕ್ಕೆ ರೋಪ್ ವೇ ಹಾಕುವ ಯೋಜನೆಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಸಮಾಜದಲ್ಲಿನ ಬಡವರಿಗೆ ಅತ್ಯಂತ ಕಡಿಮ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಹಾಲೆಂಡ್ ದೇಶದ ತಂತ್ರಜ್ಙಾನವನ್ನು ಭಾರತಕ್ಕೆ ತರುವ ಮಹತ್ವದ ಕನಸು ಕಂಡಿದ್ದರು. ನಾವು ಈಗ ಕಾಣುತ್ತಿರುವ ಮಲ್ಟಿಪ್ಲೆಕ್ಷ್ ಚಿತ್ರಮಂದಿರಗಳು ಮತ್ತು ಮೆಟ್ರೋ ರೈಲ್ವೇ ಯೋಜನೆಯ ನೀಲಿ ನಕಾಶೆಯನ್ನು 20ವರ್ಷಗಳ ಹಿಂದೆ ಮೊದಲಿಗೆ ಸಿದ್ದಪಡಿಸಿದ್ದು ಇದೇ ಶಂಕರ್ ನಾಗ್.
ನಮ್ಮ "ಶಂಕರನ ನೆನಪು" ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದ ಪ್ರಜಾವಾಣಿಯ ಹಿರಿಯ ಪತ್ರಕರ್ತರು ಹಾಗೂ ಸಿನಿಮಾಗಳಲ್ಲಿ ತೊಡಗಿಕೊಂಡಿರುವ, ಶಂಕರ್ ನಾಗ್ ಒಡನಾಟವಿರಿಸಿಕೊಂಡಿದ್ದ ಎಂ ಕೆ ಭಾಸ್ಕರ್ ರಾವ್ ಹೇಳಿದ ಮಾತು ಸಹ ಶಂಕರ್ ನಾಗ್ ವ್ಯಕ್ತಿತ್ವಕ್ಕೆ ಇನ್ನೂ ಹೆಚ್ಚಿನ ಹೊಳಪು ಸಿಗುವಂತೆ ಮಾಡಿತು. "ಅದು ಎರ್ಜೆನ್ಸಿ ಸಂಧರ್ಭ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದ್ದ ಸಮಯದಲ್ಲಿ ಜೆಪಿ ಚಳುವಳಿಯ ಅಲೆ ಸೃಷ್ಟಿಯಾಗಿತ್ತು, ಆಗ ಶಂಕರ್ ನಾಗ್ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ವಿರುದ್ದ ದೊಡ್ಡ ಧ್ವನಿ ಎತ್ತಿದ್ದರು", "ತನ್ನ ನಾಟಕದ ತಂಡದ ಮೂಲಕ "ಸತ್ತವರ ನೆರಳು" ನಾಟಕವನ್ನು ಆಡಿ ಸರ್ಕಾರದ ವಿರುದ್ದ ತಮ್ಮ ಅಸಹನೆ ವ್ಯಕ್ತಪಡಿಸಿದ್ದರು, ತಮ್ಮ ನಿರ್ದೇಶನದ ಸಿನಿಮಾಗಳಲ್ಲೂ ಅದನ್ನು ಒಡಮೂಡಿಸಿದರು, ಆದರೆ ವಿರೋಧ ಪಕ್ಷದ ಮಂದಿ ಅವರನ್ನು ಜನತಾ ಪಕ್ಷದ ಬೆಂಬಲಿಗನೆಂದು ಗುರುತಿಸಿದರು, ಇದು ಅತ್ಯಂತ ನೋವಿನ ಸಂಗತಿ ಎಂದರು. ಶಂಕರ್ ಯಾವತ್ತಿಗೂ ರಾಜಕೀಯ ಪಕ್ಷದ ಬೆಂಬಲಿಗನಾಗಿರಲಿಲ್ಲ ಆದರೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಬೆಂಬಲಿಗರಾಗಿದ್ದರು. ಆದರೆ ಯಾವತ್ತೂ ಪಕ್ಷ ರಾಜಕಾರಣಕ್ಕೆ ಮತ್ತು ಸ್ವತ: ರಾಜಕೀಯಕ್ಕೆ ಧುಮುಕುವುದಕ್ಕೆ ಅವರು ಆಸಕ್ತರಾಗಿರಲಿಲ್ಲವೆವೆಂಬುದು ಗಮನಾರ್ಹ. ಶಂಕರನ ನೆನಪು.. ರೂವಾರಿ ಶಶಿಧರಗೇರುಕುಪ್ಪೆ ಇದಕ್ಕೆ ಸಾಥ್ ನೀಡಿದ್ದು ನಾನು, ಪತ್ರಕರ್ತ ಮಿತ್ರರಾದ ಚಂದ್ರಶೇಖರ್, ಸುಬ್ಬರಾವ್, ಶ್ರೀಕಾಂತ್,ಶಂಕರ್,ಝೀ ಕನ್ನಡದ ಮದುಸೂಧನ ಮತ್ತು ಇತರರು. ಶಂಕರ್ ನಾಗ್ ರೊಂದಿಗೆ ಬೆಳೆದ, ಶಂಕರ್ ಬೆಳೆಸಿದ ಅನೇಕರು ಇವತ್ತು ಚಿತ್ರರಂಗದಲ್ಲಿದ್ದಾರೆ. ಈ ಪೈಕಿ ಪಂಚಮ ವೇದ ಚಿತ್ರದ ನಿರ್ದೇಶಕ ಪಿ ಎಚ್ ವಿಶ್ವನಾಥ್, ನಿರ್ಧೇಶಕ ನಾಗಾಭರಣ, ಶಿವಮಣಿ,ಸುನಿಲ್ ಕುಮಾರ್ ದೇಸಾಯಿ ನಟರಾದ ರಮೇಶ್ ಭಟ್, ಮನದೀಪ್ ರಾಯ್, ಸಂಕೇತ್ ಕಾಶಿ ಮಾಸ್ಟರ್ ಮಂಜುನಾಥ್ ಹೀಗೆ ಎಷ್ಟೋ ಮಂದಿ ಶಂಕರ್ ಗರಡಿಯಲ್ಲಿ ಪಳಗಿದವರು. ಶಂಕರ್ ನಿಧನದ ನಂತರ ಅವರ ಸಹೋದರ ಅನಂತ್ ನಾಗ್ ಮತ್ತು ಅರುಂಧತಿ ಸೇರಿದಂತೆ ಎಲ್ಲರೂ ದಿಕ್ಕಾಪಾಲಾಗಿ ಚದುರಿಹೋಗಿದ್ದಾರೆ. ಸಂಕೇತ್ ಧ್ವನಿಗ್ರಹಣ ಕೇಂದ್ರ ಮುಚ್ಚಿ ಹೋಗಿದೆ, ಶಂಕರ್ ಕನಸಿನ ಕಂಟ್ರಿಕ್ಲಬ್ ಮಾರಾಟವಾಗಿದೆ, ಸಂಕೇತ್ ತಂಡದ ರಂಗಚಟುವಟಿಕೆ ನಿಂತ ನೀರಾಗಿದೆ, ಅಲ್ಲೀಗ Hi-Profile ಜನರಿಗೆ ಟೆಕ್ಕಿಗಳಿಗೆ ಪಾಶ್ಚಿಮಾತ್ಯ ರಂಗನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಶಂಕರ್ ನೆನಪು ಮಾಡಿಕೊಳ್ಳುವ ಕಾರ್ಯಕ್ರಮಕ್ಕೂ ಕಾಲ್ ಶೀಟ್ ಮನಿ ನಿರೀಕ್ಷೆ ಮಾಡುವ ಮಟ್ಟಕ್ಕೆ ಅವರಿಂದ ಬೆಳೆದವರು ತಲುಪಿದ್ದಾರೆ. ಯಾರಿಗೂ ಈಗ ಶಂಕರನ ನೆನಪಾಗುತ್ತಿಲ್ಲವೇಕೆ? ಕೇವಲ 35ವರ್ಷಗಳ ಕಾಲ ಬದುಕಿದ್ದ ಶಂಕರ್ ನಾಗ್ ಕ್ರಿಯಾಶೀಲತೆಗೆ ಮತ್ತೊಂದು ಹೆಸರು.ಆತನ ವರ್ಕಾಲಿಕ್ ನೇಚರ್, ಆತನ ಕನಸು, ಛಲ ಹಿಡಿದು ಸಾಧಿಸಿದ ಕೆಲಸ, ಬೆಳೆದ ಎತ್ತರವನ್ನು ಯಾರೂ ಸರಿಗಟ್ಟಲಾರರು ಆ ಕಾರಣಕ್ಕಾದರೂ ಶಂಕರನ ನೆನಪಾಗಬೇಕು.ಈಗ ಹೇಳಿ ಶಂಕರ್ ನಮ್ಮ ನಡುವಿನ ಸಾಕ್ಷಿ ಪ್ರಜ್ಞೆಯಲ್ಲವೇ.. ಆತನ ನೆನಪು ಮಾಡಿಕೊಳ್ಳುವುದು ಸೂಕ್ತವೆನಿಸುವುದಿಲ್ಲವೇ. ಒಂದು ಚಲನಶೀಲತೆಯನ್ನು ಹುಟ್ಟುಹಾಕಿದ ಶಂಕರ್ ಒಮ್ಮೆ ಹೀಗೆ ಹೇಳಿದ್ದರು "ಸತ್ತ ಮೇಲೆ ಗೋರಿಯಲ್ಲಿ ಹಾಯಾಗಿ ನಿದ್ರೆ ಮಾಡಲು ಬೇಕಾದಷ್ಟು ಸಮಯವಿರುತ್ತೆ, ಆದ್ದರಿಂದ ಸೋಮಾರಿಗಳಾಗಬೇಡಿ, ಸಮಯ ಹಾಳುಮಾಡಬೇಡಿ ಕ್ರಿಯಾಶೀಲರಾಗಿರಿ" ಅದು ಅಂದಿಗೂ, ಇಂದಿಗೂ ಮತ್ತು ಮುಂದೆಂದಿಗೂ ಸಮಾಜಕ್ಕೆ ಆದರ್ಶ, ಅನುಕರಣೀಯ ಆ ಮೂಲಕ ಶಂಕರ್ ನಮ್ಮೊಂದಿಗೆ ಜೀವಂತವಾಗಿದ್ದಾರೆ ಅಲ್ಲವೇ?



ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...