ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಬರೋಬ್ಬರಿ 100ವರ್ಷ! ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ಉಳಿವಿಗೆ, ಅಭಿವೃದ್ದಿಗೆ ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ಆಯಾಮಗಳಲ್ಲಿ ಕೆಲಸ ಮಾಡಿಕೊಂಡು ಬಂದಿದೆ, ಆದಾಗ್ಯೂ ಅನೇಕ ಟೀಕೆ ಟಿಪ್ಪಣಿಗಳು ಪರಿಷತ್ ಕುರಿತು ಇದ್ದೇ ಇದೆ. ಕೆಲ ವರ್ಷಗಳ ಹಿಂದೆ ಪರಿಷತ್ ಅಧ್ಯಕ್ಷ ಗಿರಿಗೆ ಕಿತ್ತಾಡಿಕೊಂಡು ಗಾದಿಯಿಂದ ವಂಚಿತಗೊಂಡ ಅತೃಪ್ತ ಆತ್ಮಗಳು ಕನ್ನಡ ಸಾಹಿತ್ಯ ಪರಿಷತ್ ಗೆ ಪರ್ಯಾಯ ಸಂಸ್ಥೆ ಕಟ್ಟುವ ವ್ಯರ್ಥ ಪ್ರಯತ್ನವನ್ನು ಮಾಡಿದ್ದುಂಟು. ಇಂಥವೆಲ್ಲ ಕ್ರಿಯೆಗಳ ಮದ್ಯೆ ಕನ್ನಡ ಸಾಹಿತ್ಯ ಪರಿಷತ್ ಯಾವ ಹಿತಾಸಕ್ತಿಗಳಿಗೂ ಮನ್ನಣೆ ಕೊಡದೇ ತನ್ನ ಕೆಲಸವನ್ನ ಸದ್ದಿಲ್ಲದೇ ಮಾಡಿಕೊಂಡು ಹೋಗುತ್ತಿದೆ. ಬಹುಶ: ಆ ಕಾರಣಕ್ಕಾಗಿಯೇ ಪರಿಷತ್ ಸ್ವತಂತ್ರ ಸಂಸ್ಥೆಯಾಗಿ ತನ್ನ ತನವನ್ನು ಉಳಿಸಿಕೊಂಡಿದೆ, ಹಾಗೂ ಹಿಂದೆಂದಿಗಿಂತಲೂ ಈ ಕಾಲಘಟ್ಟಕ್ಕೆ ಬದಲಾದ ಪರಿಸರದಲ್ಲಿ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಸಾಹಿತ್ಯ ಸೇವೆಯನ್ನ, ಭಾಷೆಯನ್ನು, ಸಂಸ್ಕೃತಿಯನ್ನ ಉಳಿಸುವ ಪ್ರಯತ್ನ ಮಾಡುತ್ತಿದೆ.
ಮೈಸೂರು ಸಂಸ್ಥಾನದ ನಾಲ್ಕನೇ ಕೃಷ್ಣರಾಜ ಒಡೆಯರ ಕಾಲದಲ್ಲಿ ದಿವಾನರಾಗಿದ್ದ ಮೋಕ್ಷಗುಂಡುಂ ವಿಶ್ವೇಶ್ವರಯ್ಯ, ಒಡೆಯರ್ ಮಾರ್ಗದರ್ಶನದಲ್ಲಿ ಮೇ 3, 1915ರಂದು ಕನ್ನಡ ಭಾಷೆಯ ಉಳಿವು ಮತ್ತು ಅಭಿವೃದ್ದಿಗಾಗಿ ಹೆಚ್ ವಿ ನಂಜುಂಡಯ್ಯ ನೇತೃತ್ವದಲ್ಲಿ ಉಪಸಮಿತಿಯನ್ನು ರಚನೆ ಮಾಡಿದರು. ಹೆಚ್ ವಿ ನಂಜುಂಡಯ್ಯ ಮೈಸೂರು ವಿವಿಯ ಪ್ರಥಮ ಕುಲಪತಿಯಾಗಿದ್ದರು, ಕೆಲ ಕಾಲ ಒಡೆಯರ್ ಸಂಸ್ಥಾನದಲ್ಲಿ ಕಾರ್ಯನಿರ್ವಾಹಕ ದಿವಾನರಾಗಿಯೂ ಕೆಲಸ ಮಾಡಿದ್ದರೂ ಅಷ್ಠೇ ಅಲ್ಲ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಂದಿ ಹಾಡಿದ ಪ್ರಮುಖರೂ ಆಗಿದ್ದಾರೆ. ಅವತ್ತಿಗೆ ಕನ್ನಡದ ಸಲುವಾಗಿ ರಚನೆಯಾಗಿದ್ದ ಉಪಸಮಿತಿಯ ಉದ್ದೇಶ ರಾಜ್ಯ ಮತ್ತು ರಾಜ್ಯದ ಹೊರಗೆ ಹಂಚಿಹೋಗಿರುವ ಕನ್ನಡಿಗರಲ್ಲಿ ಏಕತೆ ತರುವುದು, ಪ್ರಾದೇಶಿಕ ಕನ್ನಡದ ಅಭಿವೃದ್ದಿಗೆ ಸಲಹೆಗಳನ್ನು ಸ್ವೀಕರಿಸುವುದು, ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಕನ್ನಡ ಭಾಷೆ ಪಠ್ಯವನ್ನು ಓದುವಂತೆ ಮಾಡುವುದು, ಕನ್ನಡ ಭಾಷಾ ಜ್ಞಾನಾಭಿವೃದ್ದಿಗೆ ಕನ್ನಡ ಪುಸ್ತಕಗಳ ಪ್ರಕಟಣೆ, ಬೇರೆ ಭಾಷೆಗಳಲ್ಲಿ ಬಳಕೆಯಾಗುವ ಪದಗಳ ಕನ್ನಡೀಕರಣ ಮುಖ್ಯವಾಗಿ ವಿಜ್ಞಾನದಲ್ಲಿ ಕನ್ನಡ ಬಳಕೆ ಅವತ್ತಿನ ಪ್ರಮುಖ ಆದ್ಯತೆಯಾಗಿತ್ತು.
ಉಪಸಮಿತಿ ಸಾರ್ವಜನಿಕ ಸಂವಹನ ನಡೆಸಿ ನೀಡಿದ ವರದಿಯ ಮೇರೆಗೆ ಬೆಂಗಳೂರಿನ ಸರ್ಕಾರಿ ಹೈಸ್ಕೂಲು ಆವರಣದಲ್ಲಿ ಸೇರಿದ್ದ ಸಾಹಿತಿಗಳು, ಕವಿಗಳು, ಪ್ರಗತಿ ಪರರು, ಕನ್ನಡಾಭಿಮಾನಿಗಳು, ಪತ್ರಕರ್ತರು, ಬುದ್ದಿಜೀವಿಗಳು ಕನ್ನಡ ಸಾಹಿತ್ಯ ಪರಿಷತ್ತು ರಚನೆಗೆ ಸಾಮೂಹಿಕ ಅನುಮೋದನೆ ನೀಡಿದರು ಹಾಗೆಯೇ ಹೆಚ್ ವಿ ನಂಜುಂಡಯ್ಯ ಸರ್ವಾನುಮತದಿಂದ ಮತ್ತು ಅವಿರೋಧವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಪ್ರಥಮ ಅಧ್ಯಕ್ಷರಾಗಿ ಚುನಾಯಿತರಾದರು. ಹೀಗೆ ಆರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಏಕಕಾಲದಲ್ಲಿ ಮದ್ರಾಸ್, ಮುಂಬೈ, ಹೈದ್ರಾಬಾದ್ ಮತ್ತು ಕೊಡಗು ನಲ್ಲಿ ಕಾರ್ಯ ಆರಂಬಿಸಿತು. ಹೀಗೆ ಪ್ರಥಮವಾಗಿ 5ವರ್ಷಗಳ ಅವಧಿಗೆ ಅಧಿಕಾರ ನಡೆಸಿದ ಹೆಚ್ ವಿ ನಂಜುಂಡಯ್ಯ ಮೊದಲ ಅಕ್ಷರ ಜಾತ್ರೆಗೆ ನಾಂದಿ ಹಾಡಿದರು. ನಂತರ ಕರ್ಪೂರ ಶ್ರೀನಿವಾಸ್ ರಾವ್ ಅಧ್ಯಕ್ಷರಾಗಿದ್ದ ಅವಧಿಗೆ ಈಗಿನ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡಕ್ಕೆ ಶಂಕು ಸ್ಥಾಪನೆಯಾಗಿ ಕೆಲಸವೂ ಆರಂಭಗೊಂಡಿತು, ಕಟ್ಟಡ ಒಂದೇ ವರ್ಷದಲ್ಲಿ ಪೂರ್ಣಗೊಂಡು ಶ್ರೀ ಕೃಷ್ಣರಾಜ ಪರಿಷನ್ಮಂದಿರವೆಂದು ನಾಮಕರಣಗೊಂಡಿತು. ಮುಂದೆ ಬಿ ಎಂ ಶ್ರೀಕಂಠಯ್ಯ ಅಧ್ಯಕ್ಷರಾಗಿದ್ದಾಗ ಅದುವರೆಗೂ ಕರ್ನಾಟಕ ಸಾಹಿತ್ಯ ಪರಿಷತ್ತು ಆಗಿದ್ದುದು ಶ್ರೀಕಂಠಯ್ಯನವರ ಸಲಹೆ ಮೇರೆಗೆ ಕನ್ನಡ ಸಾಹಿತ್ಯ ಪರಿಷತ್ತು ಎಂದು 1938ರಲ್ಲಿ ಹೆಸರು ಬದಲಿಸಿಕೊಂಡಿತು.
ಸಾಹಿತ್ಯ ಪರಿಷತ್ತಿನ ಕಾರ್ಯ ವಿಸ್ತರಣೆಗೊಂಡು ಪ್ರತೀ ತಾಲೂಕು ಕೇಂದ್ರಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವ ಕಂಡು ಕೊಂಡಿತು. ಪ್ರತೀ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ, ಪುಸ್ತಕಗಳ ಪ್ರಕಟಣೆ, ದತ್ತಿ ಸ್ಥಾಪನೆ, ಸಾಹಿತಿಗಳ, ಕನ್ನಡ ಹೋರಾಟಗಾರರ ಪುರಸ್ಕಾರ, ಕಟ್ಟಡಗಳ ನಿರ್ಮಾಣ ಹೀಗೆ ಪರಿಷತ್ತು ತನ್ನದೇ ಆದ ರೀತಿಯಲ್ಲಿ ಅಂದಿನಿಂದ ಕಾರ್ಯ ನಿರ್ವಹಿಸಿಕೊಂಡು ಬಂದಿದೆ. ಅನೇಕ ಮಂದಿ ಘಟಾನುಘಟಿಗಳು ಸಾಹಿತಿಗಳು, ಸಾಹಿತ್ಯಾಸಕ್ತರು, ಸರ್ಕಾರಿ ಅಧಿಕಾರಿಗಳಾಗಿದ್ದವರು, ನೌಕರರಾಗಿದ್ದವರು, ಕನ್ನಡಾಭಿಮಾನಿಗಳು ಕೇಂದ್ರ ಪರಿಷತ್ತಿನ ಗದ್ದುಗೆಗೆ ಬಂದಿದ್ದಾರೆ. ಪರಿಷತ್ತಿನ ಚಟುವಟಿಕೆಗಳಿಗೆ ಸರ್ಕಾರವೂ ಸಹಾ ಪ್ರತೀ ವರ್ಷ ಆರ್ಥಿಕ ಸಹಾಯವನ್ನು ಮಾಡುತ್ತಾ ಬಂದಿದೆ. ಈ ನಡುವೆ 1987ರಲ್ಲಿ ಲೆಕ್ಕ ಪತ್ರಗಳ ವ್ಯತ್ಯಾಸವಾದಾಗ ಸರ್ಕಾರ ಪರಿಷತ್ತಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು 1989ರಲ್ಲಿ ಆಡಳಿತಾಧಿಕಾರಿಯನ್ನು ವಾಪಾಸ್ ಪಡೆಯಿತು.
ಪರಿಷತ್ತಿಗೆ ಅಧ್ಯಕ್ಷರಾಗಿ ಬಂದವರೆಲ್ಲ ಒಂದಲ್ಲ ಒಂದು ರೀತಿ ಹೊಸ ಕಾರ್ಯಕ್ರಮಗಳ ಮೂಲಕ ಒಳ್ಳೆ ಕೆಲಸಗಳನ್ನೇ ಮಾಡಿ ಹೋಗಿದ್ದಾರೆ, ಈ ನಡುವೆ ರಾಜಕಾರಣಿಗಳು ಇಲ್ಲವೇ ಸರ್ಕಾರ ಪರಿಷತ್ತನ್ನು ಅಂಕೆಯಲ್ಲಿಟ್ಟುಕೊಳ್ಳುವ ವ್ಯರ್ಥ ಪ್ರಯತ್ನವನ್ನು ಹಲವು ಸಲ ಮಾಡಿದ್ದರೂ ಅದನ್ನು ಮೀರಿ ಪರಿಷತ್ತು ಬೆಳೆಯುತ್ತಿದೆಯೆಂಬುದು ಹೆಮ್ಮೆಯ ಸಂಗತಿ. ಪರಿಷತ್ತಿಗೆ ಆರ್ಥಿಕ ಶಕ್ತಿ ಮತ್ತು ರಚನಾತ್ಮಕವಾದ ಕೆಲಸಗಳಾಗಿದ್ದು ಡಾ ನಲ್ಲೂರು ಪ್ರಸಾದ್ ಅವರ ಅವಧಿಯಲ್ಲಿ. ಅತ್ಯಂತ ಕಡಿಮೆ ಅನುದಾನದಲ್ಲಿ ಕುಂಟುತ್ತಾ ಸಾಗಿದ್ದ ಕೆಲಸಗಳು ಇವರ ಅವಧಿಯಲ್ಲಿ ಚೈತನ್ಯ ಪಡೆದು ಪರಿಷತ್ತು ಸೆಟೆದು ನಿಲ್ಲುವಂತಾಗಿದ್ದು ಹೆಮ್ಮೆಯ ಸಂಗತಿ. ನಲ್ಲೂರು ಕನ್ನಡ ಸಾಹಿತ್ಯ ಪರಿಷತ್ತಿಗೆ ಹೆಚ್ಚಿನ ಅನುದಾನವನ್ನು ರಾಜ್ಯದ ಬಜೆಟ್ ನಲ್ಲಿ ಮೀಸಲಿಡುವಂತ ಮಾಡಿದ್ದು ಮತ್ತು ಪ್ರತೀ ತಾಲೂಕುಗಳಿಗೆ ಸಾಹಿತ್ಯ ಸಮ್ಮೇಳನ ನಡೆಸಲು ಅನುದಾನ, ಪರಿಷತ್ತು ಘಟಕಗಳ ನಿರ್ವಹಣೆಗೆ ಅನುದಾನ ಒದಗಿಸಿದೆ ಕೀರ್ತಿಗೆ ಭಾಜನರಾಗುತ್ತಾರೆ. ಪ್ರಸಕ್ತ ಸಾಲಿನಲ್ಲಿ ಅಧ್ಯಕ್ಷರಾಗಿರುವ ಪುಂಡಲೀಕ ಹಾಲಂಬಿ ಕೂಡ ಒಳ್ಳೆಯ ಸಂಘಟನಾ ಚಾತುರ್ಯ ಉಳ್ಳವರು ಜೊತೆಗೆ ಪರಿಷತ್ತಿಗೆ ಶಾಶ್ವತವಾದ ಕೆಲಸಗಳನ್ನು ಮಾಡುವ ಉತ್ಸಾಹದಲ್ಲಿದ್ದಾರೆ. ಆದ್ದರಿಂದಲೆ ಶತಮಾನೋತ್ಸವಕ್ಕೆ ಮಹತ್ವದ ಕಾರ್ಯಕ್ರಮಗಳು ರೂಪಿಗೊಂಡಿವೆ.
ಇದೆಲ್ಲಾ ಸರಿ ಆದರೆ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಕಣ್ಮುಚ್ಚುತ್ತಿರುವ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗಟ್ಟಿಯಾದ ಪ್ರಯತ್ನ ಮಾಡುತ್ತಿಲ್ಲ, ಗಡಿನಾಡ ಕನ್ನಡಿಗರ ಹಿತಾಸಕ್ತಿ ಮತ್ತು ಅಲ್ಲಿನ ಕನ್ನಡ ಶಾಲೆಗಳ ಕುರಿತು ಗಮನ ಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎನ್ನುವ ಗಂಭೀರ ಆರೋಪಗಳಿವೆ. ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಸಮಾಜದ ಎಲ್ಲ ಸ್ಥರದ ಜನರನ್ನು ಒಂದೇ ಮುಖ್ಯ ವಾಹಿನಿಯಲ್ಲಿ ಕರೆದೊಯ್ಯುವ ಗುರುತರ ಜವಾಬ್ದಾರಿಯೂ ಇದೆ ಇದನ್ನು ನಿರ್ವಹಿಸುವಲ್ಲಿ ಎಡವಿದೆ, ಕನ್ನಡ ಸಂಸ್ಕೃತಿಯ ಅಭಿವೃದ್ದಿಗೆ, ಭಾಷೆಯ ಬೆಳವಣಿಗೆಗೆ ಸಮುದಾಯದ ಎಲ್ಲ ಜನರನ್ನು ಒಳಗೊಳ್ಳಬೇಕು ಎಂಬುದು ಅಳಲು. ರಾಜಕೀಯ ರಹಿತವಾದ ಮತ್ತು ಸರ್ಕಾರಗಳ ಹಸ್ತಕ್ಷೇಪವಿಲ್ಲದೇ ಪರಿಷತ್ತು ನಡೆಯುತ್ತಿದೆ ಮುಂದೆಯೂ ಇದು ಇನ್ನಷ್ಟು ಸಬಲೀಕರಣಗೊಂಡು ಕನ್ನಡಿಗರ ಹಿತಕಾಯುವ ಪ್ರಾತಿನಿಧಿಕ ಸಂಸ್ಥೆಯಾಗಿ ಮುಂದುವರೆಯಲಿ ಎಂಬುದು ಆಶಯ