Sunday, May 22, 2011

ಯಾರಿಗೆ ಬೇಕಾಗಿದೆ ಈ 'ರಾಜಕೀಯ'?

ಅಗಸನಿಗೆ ಅರಿವೆ ಚಿಂತೆ ಆದ್ರೆ ಮಗಳಿಗೆ ಮಿಂಡನ ಚಿಂತೆ ಅಂತೆ ಹಾಗೆ ರಾಜ್ಯದಲ್ಲಿ ಪ್ರಸಕ್ತ ರಾಜಕೀಯ ವಿಧ್ಯಮಾನಗಳು ರೇಜಿಗೆ ಹುಟ್ಟಿಸುವಂತೆ ನಡೆಯುತ್ತಿವೆ. ರಾಜ್ಯದ ಮುಖ್ಯ ಮಂತ್ರಿ ಯಡಿಯೂರಪ್ಪ ಮಾಡಿಕೊಂಡ  ಅವಾಂತರಗಳು ಆತನ ರಾಜಕೀಯ ನಡೆ, ವಿರೋಧ ಪಕ್ಷದ ಸ್ಥಿರವಿಲ್ಲದ ನಿಲುವುಗಳು ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಅಯೋಮಯವನ್ನಾಗಿ ಮಾಡಿವೆ. ಈ ನಡುವೆ ಸಾಮಾನ್ಯ ಜನತೆ ತಲ್ಲಣಗೊಂಡಿದ್ದಾರೆ.ರೈತರು ಕಂಗೆಡುವ ಪರಿಸ್ತಿತಿ ಇದೆ, ಶಿಕ್ಷಣದ ಕವಲು ಹಾದಿಯಲ್ಲಿರುವ ಯುವ ಶಕ್ತಿ ದಿಕ್ಕು ತೋರದೇ ನಿಂತಿದ್ದಾರೆ.ಆದರೆ ರಾಜಕಾರಣಿಗಳಿಗೆ ಜನಸಾಮಾನ್ಯರ ಹಿತಾಸಕ್ತಿ ಬೇಕಿಲ್ಲ. ಇಂತಹ ಸನ್ನಿವೇಶದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಯಾರಿಗೆ ಬೇಕಿತ್ತು? ಜನಸಾಮಾನ್ಯರ ಹಿತಾಸಕ್ತಿ ಯಾವ ರಾಜಕಾರಣಿಗೆ ಬೇಕಾಗಿದೆ? ಇಂತಹವರು ಅಧಿಕಾರದಲ್ಲಿರಬೇಕಾ? ಅನಗತ್ಯ ರಾಜಕೀಯ ಚರ್ಚೆಗಳು ಬದುಕು ಕಟ್ಟಲು ಸಹಕರಿಸುತ್ತವಾ? ಸಧ್ಯ ನಮಗೆ ಎಂತಹ ಸನ್ನಿವೇಶ ಬರಬೇಕಾಗಿದೆ ಎಂಬುದು ಸಧ್ಯದ ಪ್ರಸ್ತಾವನೆ.
            ಕಳೆದ ವರ್ಷ ಹೆಚ್ಚು ಕಡಿಮೆ ಇದೇ ಸಮಯಕ್ಕೆ ರಾಜ್ಯದಲ್ಲಿ ನಕಲಿ ಬೀಜ ಮಾರಾಟ ಹಗರಣ ಬೆಳಕಿಗೆ ಬಂದಿತ್ತು, ಗೊಬ್ಬರ ಹಾಹಾಕಾರ ಇತ್ತು, ರಾಜ್ಸ ಸರ್ಕಾರ ರೆಡ್ಡಿಗಳ ಹೊಡೆತಕ್ಕೆ ಸಿಲುಕಿ ನಲುಗುತ್ತಿತ್ತು.ಬೀಜ ಕಂಪನಿಗಳೊಂದಿಗೆ ಕಮೀಷನ್ ವ್ಯವಹಾರ ಮಾಡಿಕೊಂಡ ಕೃಷಿ ಇಲಾಖೆಯ ಆಯುಕ್ತರು, ಅಧಿಕಾರಿಗಳೂ ರೈತರ ಹಿತ ಮರೆತು ಚೀನಾ ಪ್ರವಾಸಕ್ಕೆ ಹೋಗಿದ್ದರು. ಆದರೆ ಒಬ್ಬ ಮಾಜಿ ಶಾಸಕ ಎ ಟಿ ರಾಮಸ್ವಾಮಿ, ರಾಜ್ಯದ ರೈತರಿಗೆ ವಂಚಿಸುವ ಬೀಜ ಮಾರಾಟ ಕಂಪನಿಗಳ ಕುರಿತು ಧ್ವನಿಯೆತ್ತಿದ್ದರು.ಸರ್ಕಾರಕ್ಕೆ ಪತ್ರ ಬರೆದು ಬೀಜ ಕಂಪನಿಗಳೊಂದಿಗೆ ಅಧಿಕಾರಿಗಳ ಮಾಡಿಕೊಂಡ ಕಮಿಷನ್ ವ್ಯವಹಾರ, ನಕಲಿ ಬೀಜ, ಹೆಚ್ಚಿನ ಬೆಲೆಯ ಬೀಜದಿಂದಾಗುತ್ತಿರುವ ತೊಂದರೆಯನ್ನು ಸರ್ಕಾರಕ್ಕೆ ಎಳೆ ಎಳೆಯಾಗಿ ವಿವರಿಸಿದ್ದರು. ಆದರೆ ಸರ್ಕಾರ ಏನು ಕ್ರಮ ಕೈಗೊಂಡಿತು? ರೈತರ ಹಿತಾಸಕ್ತಿಯನ್ನು ಯಾವರೀತಿ ಕಾಪಾಡಿತು ಎಂಬುದು ಮಾತ್ರ ತಿಳಿಯಲಿಲ್ಲ, ಅದು ರಾಜ್ಯದ ರೈತರ ಮಟ್ಟಿಗೆ ದುರಂತದ ಸಂಗತಿಯೂ ಹೌದು. ಇದಕ್ಕೂ ಮುನ್ನ ಇದೇ ಮಾಜಿ ಶಾಸಕ ಎಟಿಆರ್ ಸರ್ಕಾರ ರೈತರ ಬಡ್ಡಿ ಮನ್ನಾ ಮಾಡಲು ನೀಡಿದ ಅವಕಾಶವನ್ನು ಬ್ಯಾಂಕ್ ಅಧಿಕಾರಿಗಳು ಮತ್ತು ಸ್ಥಳೀಯ ಪ್ರತಿನಿಧಿಗಳು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಹೇಗೆ ಬಡರೈತರನ್ನು ವಂಚಿಸಿದ್ದಾರೆ ಎಂಬ ಬಗ್ಗೆಯೂ ದಾಖಲೆಗಳ ಸಮೇತ ಬಹಿರಂಗ ಪಡಿಸಿದ್ದರೂ ಏನೂ ಕ್ರಮ ಕೈಗೊಳ್ಳದ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿತು. ರೈತರ ಹೆಸರು ಹೇಳಿ ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿದ ಮುಖ್ಯ ಮಂತ್ರಿ ಬಿಎಸ್ ವೈ ಎಂದು ಹೇಳಿಕೊಳ್ಳುವ ಮೂಲಕ ರೈತರ ಹಿತಾಸಕ್ತಿಯ ನಾಟಕ ಪ್ರದರ್ಶಿಸಿದರು. ಅಸಲಿಗೆ ಜ್ಯೋತಿಷಿಯೊಬ್ಬ ಹೇಳಿದ ಮಾತಿನಂತೆ ಹಸಿರು ಶಾಲು ಹೊದ್ದು ಕಂಟಕ ನಿವಾರಣೆಗೆ ಹಾಗೆ ಮಾಡಿದರೆಂಬುದು ಈಗ ಎಲ್ಲರಿಗೂ ತಿಳಿದ ಸತ್ಯ. ಇಂತಹವರು ಬಂದು ಮಾಡಿದ್ದೇನು? ರೈತರಿಗೆ ಎತ್ತು-ಗಾಡಿ ಯೋಜನೆ, ಬಿತ್ತನೆ ಬೀಜ ಕೊಳ್ಳಲು ರೈತರಿಗೆ ಧನ ಸಹಾಯ, ಈಗ ಲಾಟರಿ ಮಾದರಿಯ ಸುವರ್ಣ ಭೂಮಿ ಯೋಜನೆ ಎಂಬ ಸತ್ವವಿಲ್ಲದ ಬಣ್ಣದ ಯೋಜನೆಗಳನ್ನು ಹೇಳುವ ಮೂಲಕ ವಂಚಿಸುತ್ತಿದ್ದಾರೆ. ಈ ಪೈಕಿ ಯಾವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲದಿರುವುದು ಕಣ್ಣೆದುರಿಗಿರುವ ಸತ್ಯ. 
          ಇವತ್ತು ರಾಜ್ಯದಲ್ಲಿ ಮತ್ತೆ ಗೊಬ್ಬರದ ಸಮಸ್ಯೆ ತಲೆ ಎತ್ತಿದೆ, ಧೃಢೀಕೃತ ಬಿತ್ತನೆ ಬೀಜ ಇಲ್ಲ,ಕೃಷಿ/ತೋಟಗಾರಿಕೆ/ಮೀನುಗಾರಿಕೆ/ರೇಷ್ಮೆ/ಜಲಾನಯನ/ನೀರಾವರಿ/ಪಶು ಇಲಾಖೆಗಳು ನರಸತ್ತಂತಿವೆ, ರೈತರಿಗೆ ತಾಂತ್ರಿಕ ಮಾರ್ಗದರ್ಶನವನ್ನು ಕಾಲ ಕಾಲಕ್ಕೆ ಒದಗಿಸುವ, ಸೌಕರ್ಯ ಕಲ್ಪಿಸುವ  ಬದಲು ಅಧಿಕಾರಿಗಳು  ಇಲಾಖೆಯ ಮಾರ್ಗಸೂಚಿಗಳನ್ನು ಕಾಯುತ್ತಾ, ಅನುದಾನದ ಕಡೆಗೆ ಕೈ ತೋರಿಸುತ್ತಾ ನಿಸ್ತೇಜವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಲ್ಲಿ ರೈತರಿಗೆ , ಕೂಲಿ ಕಾರ್ಮಿಕರಿಗೆ ಕೆಲಸ ಸಿಕ್ಕಿಲ್ಲ,ಅಧಿಕಾರಿಗಳು ಮತ್ತು  ಜನಪ್ರತಿನಿಧಿಗಳು ಕೋಟ್ಯಾಂತರ ರೂಪಾಯಿ ವಂಚಿಸಿದ್ದಾರೆ.ಸರ್ಕಾರ ಮಾತ್ರ ಕ್ರಮ ಕೈಗೊಳ್ಳದೇ ನಿರುಮ್ಮಳವಾಗಿದೆ.   ತೋರಿಕೆಯ 'ಕೃಷಿ ಬಜೆಟ್' ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.ಹೀಗಾಗಿ ರಾಜ್ಯದ ರೈತ ಆಕಾಶ ನೋಡುವಂತಾಗಿದೆ.
              ಇನ್ನು ವೃತ್ತಿಪರ ಶಿಕ್ಷಣದ ಕುರಿತು ಸರಿಯಾದ್ದೊಂದು ನೀತಿ ಪ್ರಕಟಿಸದ ರಾಜ್ಯ ಸರ್ಕಾರದ ಧೋರಣೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಕಂಗಾಲಾಗುವಂತೆ ಮಾಡಿದೆ. ಸರ್ಕಾರಿ ಶಾಲೆಗಳಿಗೆ ಮಿತಿ ಮೀರಿದ ಸವಲತ್ತುಗಳಿದ್ದರೂ ಸರಿಯಾಗಿ ನಿರ್ವಹಿಸಲಾಗದೇ ಅನೇಕ ಶಾಲೆಗಳು ಮುಚ್ಚುವಂತಾಗುತ್ತಿದೆ, ಸರ್ಕಾರ ನೀತಿ ನಿಯಮಗಳನ್ನು ಬದಿಗಿರಿಸಿ ಹೊಸ  ಶಿಕ್ಷಣ ಸಂಸ್ಥೆಗಳಿಗೆ ನಾಯಿಕೊಡೆಗಳಂತೆ ತಲೆ ಎತ್ತಲು ಅವಕಾಶ ಮಾಡುತ್ತಿದೆ. ವೃತ್ತಿಪರ ಶಿಕ್ಷಣ ಕೇಂದ್ರಗಳು ವಸೂಲಿ ಕೇಂದ್ರಗಳಾಗಿ ಪರಿಣಮಿಸಿವೆ ಅವಕ್ಕೊಂದು ಅಂಕುಶ ಹಾಕುವ ಸಣ್ಣ ಪ್ರಯತ್ನವನ್ನು ಸರ್ಕಾರ ಮಾಡುತ್ತಿಲ್ಲ.
             ಆರೋಗ್ಯ ಇಲಾಖೆಯಲ್ಲಿ 108 ಅಂಬ್ಯುಲೆನ್ಸ್ ಸೇವೆ ಒದಗಿಸದ್ದೇವೆಂದು ಎದೆಯುಬ್ಬಿಸಿ ಹೇಳುವ ಸರ್ಕಾರ ಅದರ ನಿರ್ವಹಣೆ ಹಾಗೂ ಪ್ರತೀ ಕಿಮೀ ಗೆ ಅಳತೆ ಮೀರಿ ಸಾರ್ವಜನಿಕರ ಎಷ್ಟು ಹಣ ಪಾವತಿಸುತ್ತಿದೆ ಎಂಬುದನ್ನು ಮಾತ್ರ ಹೇಳುತ್ತಿಲ್ಲ, ಅದರ ಗುತ್ತಿಗೆ ಅವಧಿ ಇನ್ನೊಂದು ತಿಂಗಳಿಗೆ ಅಂತ್ಯಗೊಳ್ಳಲಿದೆ ನಂತರ ಸರ್ಕಾರಿ ಹೆಗ್ಗಣಗಳು ಅದನ್ನು ಸುಪರ್ದಿಗೆ ತೆಗೆದುಕೊಳ್ಳಲಿವೆ ಅಲ್ಲಿಗೆ ಅದರ ಪರಿಸ್ಥಿತಿ ಊಹಿಸಬಹುದು. ಅದೇ ರೀತಿ ಕಂಪ್ಯೂಟರ್ ಶಿಕ್ಷಣಕ್ಕೆ ಆದ್ಯತೆ ನೀಡಿ ಎಸ್ ಎಂ ಕೃಷ್ಣರ ಅವಧಿಯಲ್ಲಿ ಆರಂಭಿಸಿದ ಕೋಟ್ಯಾಂತರ ರೂಪಾಯಿ ವೆಚ್ಚದ ಕಂಪ್ಯೂಟರ್ ಗಳು ಸರ್ಕಾರದ ನಿಲುವುಗಳಿಂದಾಗಿ ಮಕ್ಕಳ ಶಿಕ್ಷಣಕ್ಕೆ ಲಬ್ಯವಾಗದೇ ಧೂಳು ತಿನ್ನುತ್ತಿವೆ .ನಾರಿಯರಿಗೆ ವಿತರಿಸಿದ ಭಾಗ್ಯಲಕ್ಷ್ಮಿ ಸೀರೆ ಯಲ್ಲಿ ಸರ್ಕಾರದ ಮಂದಿ ಪಡೆದ ಬಾಬತ್ತು ಎಷ್ಟೆಂಬುದರ ಲೆಕ್ಕ ಜನರಿಗೆ ತಿಳಿದಿದೆ. ರೈತರನ್ನು ವಂಚಿಸಿ ಪಡೆದ ಭೂಮಿಯನ್ನು ಮಾಜಿ ಸಚಿವನೋರ್ವ ಯಾವ ಮೊತ್ತಕ್ಕೆ ಮಾರಿ ದುಡ್ಡು ಮಾಡಿದ?ಬಣ್ಣ ಬಣ್ಣದ ಯೋಜನೆಗಳು ಮತ್ತು ಬಾಬತ್ತುಗಳಿಗೆ ಕೋಟಿಗಳ ಲೆಕ್ಕದಲ್ಲಿ ಹಣ ಪ್ರಕಟಿಸಿದ ಸರ್ಕಾರ ನಂತರ ಅದನ್ನೇ ವ್ಯಾಪಾರ ಮಾಡಿಕೊಂಡಿದ್ದು ಈಗ ಇತಿಹಾಸ.ಜಾಗತೀಕರಣದ ಹೆಬ್ಬಾಗಿಲು ತೆರೆದು ಅನಾಮತ್ತು 8ಕಂಪನಿಗಳಿಗೆ ಕೃಷಿಗೆ ಸಂಬಂಧಿಸಿದಂತೆ ಉದ್ದಿಮೆ ಸ್ಥಾಪಿಸಲು ಅನುವು ಮಾಡಿಕೊಡುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಬಿಎಸ್ ವೈ ಕೃಷಿ ಬಜೆಟ್ ನಾಟಕವಾಡಿದ್ದು ಈಗ ಬಹಿರಂಗವಾಗುತ್ತಿರುವ ಸತ್ಯ.ತನ್ನ ಸಚಿವ ಸಂಪುಟದ ಶಾಸಕರುಗಳು ಸಚಿವರುಗಳ ಲಂಪಟತನ, ಭ್ರಷ್ಟಾಚಾರ, ಅಪ್ರಾಮಾಣಿಕತೆಗಳನ್ನು ಸಮರ್ಥಿಸಿಕೊಳ್ಳುವ, 800ಕೋಟಿ ಮೌಲ್ಯದ ಡಿನೋಟಿಫಿಕೇಶನ್ ಹಗರಣದ ಸೂತ್ರದಾರನಾದ ಮುಖ್ಯಮಂತ್ರಿ ಯಾವ ಎಗ್ಗು ತಗ್ಗಿಲ್ಲದೇ ಸತ್ಯ ಪ್ರಾಮಾಣಿಕತೆಯ ಮಾತುಗಳನ್ನಾಡುವುದು ಎಷ್ಟು ಸರಿ? ದೇಶದ ರಾಜಕಾರಣದ ಇತಿಹಾಸದಲ್ಲೇ ಕಂಡೂ ಕೇಳರಿಯದ ಪ್ರಮಾಣದಲ್ಲಿ ಶಾಸಕರುಗಳ ಕೊಳ್ಳುವಿಕೆ, ಆಮಿಷದಂತಹ ಅನಾಹುತಕಾರಿ ಬೆಳವಣಿಗೆಗೆ ನಾಂದಿ ಹಾಡಿದ ಇಂತಹ ಸರ್ಕಾರ ಬೇಕಾ ಸ್ವಾಮಿ? 
         ಇದೆಲ್ಲ ಸರಿ ಆದರೆ ಇವತ್ತು ರಾಜ್ಯ ಸರ್ಕಾರದ ಪತನಕ್ಕೆ ಸಂಚು ಹಾಕಿ ಕುಳಿತಿರುವ ವಿರೋಧ ಪಕ್ಷಗಳು ಪ್ರಸಕ್ತ ಸಂಧಿಗ್ಧ ಸನ್ನಿವೇಶದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಅಸಹ್ಯ ಹುಟ್ಟಿಸುವಂತಿದೆ. ರಾಜ್ಯಪಾಲ ಮುಕ್ತವಾಗಿ ಕಾರ್ಯ ನಿರ್ವಹಿಸದೇ ಪಕ್ಕಾ ಕಾಂಗ್ರೆಸ್ ಏಜೆಂಟನಾಗಿ ನಡೆದುಕೊಳ್ಳುತ್ತಿರುವದು ರಾಜ್ಯಾಂಗದ ಮೇಲಿನ ಗೌರವವನ್ನು ಕಡಿಮೆ ಮಾಡುತ್ತಿದೆ. ಜನಸಾಮಾನ್ಯರ ಸಮಸ್ಯೆಗಳ ಬಗೆಗೆ ಧ್ವನಿಯೆತ್ತದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರುಗಳು ಅಧಿಕಾರದ ಹವಣಿಕೆಗೆ ಬಿದ್ದು ಬಟ್ಟೆ ಹರಿದುಕೊಳ್ಳುತ್ತಿದ್ದಾರೆ.. ಒಳಗೊಳಗೆ ಬಿಎಸ್ ವೈ ವಿರುದ್ದ ಒಳಸಂಚು ನಡೆಸುತ್ತಿರುವ ಬಿಜೆಪಿಗಳು ಪ್ರತಿ ಹೋರಾಟ ನಡೆಸುತ್ತಿದ್ದಾರೆ. ಇವರಿಗೆಲ್ಲ ಜನರ ಹಿತಾಸಕ್ತಿ  ಬೇಕಿಲ್ಲ ಹೀಗಿರುವಾಗ ರಾಜ್ಯಪಾಲರನ್ನು ಮನೆಗೆ ಕಳುಹಿಸಿ ಸರ್ಕಾರವನ್ನು ವಿಸರ್ಜಿಸಿ ರಾಜಕೀಯ ಪಕ್ಷಗಳಿಗೆ ಪಾಠ ಕಲಿಸದಿದ್ದರೆ ರಾಜ್ಯದ ಜನತೆ ನೆಮ್ಮದಿಯಿಂದ ಇರಲಾಗದು ಅಲ್ಲವೇ?

Sunday, May 15, 2011

ಪಲಿತಾಂಶದಲ್ಲಿ ಸರ್ಕಾರಿ ಶಾಲೆಗಳೇಕೆ ಹಿಂದೆ?

ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳಿಗಿಂತ ಫಲಿತಾಂಶದಲ್ಲಿ ಯಾಕೆ ಹಿಂದುಳಿದಿವೆ ? "ಖಾಸಗಿ ಶಾಲೇಲಿ ಬುದ್ದಿವಂತರನ್ನೇ ಆಯ್ದುಕೊಂಡು ಪರೀಕ್ಷೆಗೆ ಕೂರಿಸ್ತಾರೆ, ಸರ್ಕಾರಿ ಶಾಲೆ ಅಂದ್ರೆ ಹಾಗಲ್ಲ ನೋಡಿ ಯಂಕ,ನಾಣಿ,ಸೀನಾ ಎಲ್ಲರಿಗೂ ಸೀಟು ಕೊಡ್ಬೇಕು  ಓದಿಸ್ಬೇಕಲ್ವಾ? ಆಯ್ತು ನಿಮ್ಮ ಮಾತು ಒಪ್ಕೊತೀನಿ ಮಕ್ಕಳ ಮಾತು ಹಂಗಿರ್ಲಿ ಸರ್ಕಾರಿ ಶಾಲೆಗೆ ಶಿಕ್ಷಕರಾಗಿ ಆಯ್ಕೆ ಆಗೋರು ಯಾರು ? ಎಲ್ಲರೂ ಪ್ರತಿಭಾವಂತರು, ಡಿಸ್ಟಿಂಕ್ಷನ್ ತಗೊಂಡಿರೋರು ಅಲ್ವಾ ? ಖಾಸಗಿ ಶಾಲೆ ಅಂದ್ರೆ ಅಲ್ಲಿ ಇರೋರು ಬಹುತೇಕ ಸರ್ಕಾರಿ ಕೆಲಸದ ಅವಕಾಶದಿಂದ ರಿಜೆಕ್ಟ್ ಆದೋರು, ಹೊಸದಾಗಿ ಶಿಕ್ಷಣ ಮುಗಿಸಿದವರು ಇತ್ಯಾದಿಗಳು ಹೀಗಿರುವಾಗ ಎಂಥಾ ಮಕ್ಕಳನ್ನಾದರೂ ಬುದ್ದಿವಂತರನ್ನಾಗಿ ಮಾಡೋ ಅವಕಾಶ ಇರುತ್ತಲ್ವಾ? ಅಂದೆ ಎದುರಿಗೆ ಕೂತ ಬಿಇಓ ಮೆತ್ತಗಾದ್ರು.  ನೋಡಿ ಸಾರ್ ಇದು ಆಫ್ ದಿ ರೆಕಾರ್ಡ್ ಹೇಳ್ತಿದಿನಿ ನಮ್ಮ ಶಿಕ್ಷಕರಿಗೆ ಅರ್ಪಣಾ ಮನೋಭಾವ ಇಲ್ಲ ಅದಕ್ಕೆ ಹೀಗೆ ಎಂದು ಅಸಹಾಯಕತೆ ತೋಡಿಕೊಂಡರು. ಇದು ಒಂದು ತಾಲೂಕಿನ ಪರಿಸ್ಥಿತಿ ಅಲ್ಲ ಇಡೀ ರಾಜ್ಯದ ಸ್ಥಿತಿ ! ಒಂದು ಕ್ಷಣ ನೀವೇ ಯೋಚನೆ ಮಾಡಿ ಇವತ್ತು ಸರ್ಕಾರಿ ಶಾಲೆಗಳು ಹೇಗಿವೆ? ಹಿಂದಿನ ಸರ್ಕಾರಿ ವ್ಯವಸ್ಥೆ ಹೇಗಿತ್ತು? ಸರ್ಕಾರಿ ಶಾಲೆಗಳಿಗೆ ಇರುವ ಸವಲತ್ತುಗಳೇನು? ಶಿಕ್ಷಕರ ಅನುಕೂಲತೆಗಳೇನು? ಖಾಸಗಿ ಶಾಲೆಗಳು ಹೇಗಿವೆ? ಅಲ್ಲಿನ ಗುಣಮಟ್ಟ ಏನು? ಪೋಷಕರ ಮನಸ್ತಿತಿ ಯಾಕೆ ಬದಲಾಗುತ್ತಿದೆ? ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಿರುವ ಅನುಕೂಲತೆಗಳಾವುವು? ಗ್ರಾಮೀಣ ಮತ್ತು ನಗರ ಪರಿಸರದ ವಿದ್ಯಾರ್ಥಿಗಳಿಗೆ ಇರುವ ವ್ಯತ್ಯಾಸವೇನು?ಇವೆಲ್ಲಾ ಒಟ್ಟು ಸೇರಿ SSLC/PUCಯಲ್ಲಿ ಸರ್ಕಾರಿ/ಖಾಸಗಿ  ಶಾಲೆಗಳಲ್ಲಿ  ಫಲಿತಾಂಶಗಳ ಮೇಲೆ ಎಂತಹ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬುದು ಗಹನವಾಗಿ ಚರ್ಚೆಯಾಗ ಬೇಕಿದೆ.

          ಇವತ್ತು ಶಿಕ್ಷಣದ ವ್ಯಾಪಾರೀಕರಣವಾಗುತ್ತಿದೆ, ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ಶಾಲೆಗಳೆಂಬ ವ್ಯಾಪಾರದ ಅಡ್ಡೆಗಳು ಹೆಜ್ಜೆಗೊಂದರಂತೆ ತಲೆಯೆತ್ತುತ್ತಿವೆ. ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಶಿಕ್ಷಣಕ್ಕಾಗಿ ಮೀಸಲಿಡುವ ಜೊತೆಗೆ ವಿಶ್ವ ಬ್ಯಾಂಕ್ ಯೋಜನೆಯಿಂದಲೂ ಶಿಕ್ಷಣದ ಸುಧಾರಣೆಗೆ ಮುಂದಾಗಿದೆ. 
ರಾಜ್ಯ ಸರ್ಕಾರದೊಡನೆ ಸೇರಿ 30-40 ಯೋಜನೆಗಳನ್ನು ಅನುಷ್ಟಾನ ಗೊಳಿಸುತ್ತಿದೆ. ಬಹುಶ: ಇವತ್ತಿನ ಸರ್ಕಾರಿ  ಶಿಕ್ಷಣ ಸಕಲ ವ್ಯವಸ್ಥೆಗಳು ಅತ್ಯಾಧುನಿಕವಾಗಿವೆ ಮತ್ತು ಹೆಚ್ಚು ಸೌಲಭ್ಯಗಳಿಂದ ಕೂಡಿದುದಾಗಿದೆ. ಆದರೆ ನಿರೀಕ್ಷಿತ ರೀತಿಯ ಗುಣಾತ್ಮಕ ಫಲಿತಾಂಶವನ್ನು ಕಾಣಲು ಸಾದ್ಯವಾಗದಿರುವುದು ಅತ್ಯಂತ ವಿಷಾಧನೀಯ ಸಂಗತಿ. ಅದು 70-80ರ ದಶಕದ ಸಂಧರ್ಭ ಸರ್ಕಾರಿ ಶಾಲೆಗಳ ಶಿಕ್ಷಣ ಗುಣಾತ್ಮಕವಾಗಿ ಮತ್ತು ಶಾಲೆ/ಶಿಕ್ಷಣ/ಗುರುಗಳ ಬಗೆಗೆ ಗೌರವ ಪೂರ್ವಕವಾಗಿ ನಡೆದುಕೊಳ್ಳುವಂತಹ  ಪರಿಸ್ತಿತಿ ಇತ್ತು ಆದರೆ ಇವತ್ತೇನಾಗಿದೆ? ಶಾಲೆಗಳು ಅತ್ಯಂತ ಪರಿಪೂರ್ಣವಾದ ಸೌಲಭ್ಯಗಳನ್ನ ಪಡೆದಿವೆ, ಶಿಕ್ಷಣದ ಗುಣಮಟ್ಟ ಸುಧಾರಣೆಗೆ ವ್ಯಾಪಕ ಯೋಜನೆಗಳಿವೆ, ಶಿಕ್ಷಕರಿಗೆ ತರಬೇತಿ ಯೋಜನೆಗಳಿವೆ ಆದಾಗ್ಯೂ ಕಲಿಸುವ ಪ್ರಕ್ರಿಯೆ ತೃಪ್ತಿಕರವಾಗಿಲ್ಲ, ಪರಿಣಾಮ ಸರ್ಕಾರಿ ಶಾಲೆಗಳ ಫಲಿತಾಂಶದ ಮೇಲೆ ಆಗುತ್ತಿದೆ. 

           ಹೌದು ಇವತ್ತು ಸರ್ಕಾರಿ ಶಾಲೆಗೆ ಕುಡಿಯುವ ನೀರು ಬಂದಿದೆ, ಸುಸಜ್ಜಿತ ಕಟ್ಟಡ ಬಂದಿದೆ, ಬಿಸಿಊಟ, ಸಮವಸ್ತ್ರ, ಉಚಿತ ಪಠ್ಯ ಪುಸ್ತಕ, ಉಚಿತ ಶೈಕ್ಷಣಿಕ ಪ್ರವಾಸ, ಪಾಠೋಪಕರಣ, ಪೀಠೋಪಕರಣ, ಕ್ರೀಡೋಪಕರಣ, ವಿಜ್ಞಾನದ ಪ್ರಯೋಗಕ್ಕೆ ಪ್ರೋತ್ಸಾಹಧನ, ಸೈಕಲ್ಲು, ಸೆಮಿಸ್ಟರ್ ಪದ್ದತಿಯ ಪರೀಕ್ಷೆಗಳು, ಬಯೋಮೆಟ್ರಿಕ್ ಪದ್ದತಿ ಇತ್ಯಾದಿ ಇತ್ಯಾದಿ ಜೊತೆಗೆ ಬುದ್ದಿವಂತ ಶಿಕ್ಷಕರುಗಳು, ಕೊರತೆಯಾಗದಂತೆ ಕಾಯ್ದಿರಿಸಿದ ನಿಧಿ. ಅದೇ ಖಾಸಗಿ ಶಾಲೆಗಳಲ್ಲಿ ಉತ್ತಮ ದರ್ಜೆಯ (ಉತ್ತಮ ಅಂಕ ಪಡೆದವರು) ವಿದ್ಯಾರ್ಥಿಗಳು! ಕಡಿಮೆ ಅಂಕ ಪಡೆದ/ಹೊಸದಾಗಿ ಶಿಕ್ಷಣ ಪೂರೈಸಿದ/ಅರ್ಹ ಶಿಕ್ಷಣ ಪಡೆಯದ ಅಂದರೆ ಸಾಧಾರಣ ಪದವಿ ಪಡೆದ ಶಿಕ್ಷಕರು; ದುಬಾರಿ ಡೊನೇಷನ್, ಫೀಸು, ಪುಸ್ತಕ,ಸಮವಸ್ತ್ರ ಇವೆ. ಇಲ್ಲಿ ಶಿಕ್ಷಕರನ್ನ ಕತ್ತೆಗಳಂತೆ ದುಡಿಸಿಕೊಳ್ಳಲಾಗುತ್ತದೆ, ನಿಗದಿತ ಅವಧಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡಬೇಕಾಗುತ್ತದೆ, ಮ್ಯಾನೇಜ್ ಮೆಂಟ್ ಆಶೋತ್ತರಗಳಿಗೆ ಪೂರಕವಾಗಿ ನಡೆಯುವ ಅನಿವಾರ್ಯತೆ  ಇರುತ್ತದೆ. ಮಕ್ಕಳ ಮೇಲೆ ಮತ್ತು ಪಾಲಕರ ಮೇಲೆ ಒತ್ತಡ ಹಾಕಲಾಗುತ್ತದೆ.ಹೀಗಾಗಿ ಖಾಸಗಿ ಶಾಲೆಗಳು ನಿರಾತಂಕವಾಗಿ ಫಲಿತಾಂಶದಲ್ಲಿ ಮುನ್ನೆಡೆ ಪಡೆಯುತ್ತವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಮಾನವ ಸಂಪನ್ಮೂಲ, ನಿಯಮಗಳು, ಹಣಕಾಸು, ಸೌಕರ್ಯಗಳು ಇದ್ದಾಗ್ಯೂ ಅವುಗಳನ್ನು ನಿರ್ವಹಿಸುವ ಮತ್ತು ನಿಬಾಯಿಸುವವರ ಹೊಣೆಗೇಡಿತನದಿಂದಾಗಿ ಪಲಿತಾಂಶದಲ್ಲಿ ಹಿಂದೆ ಬೀಳುವಂತಾಗಿದೆ. 

       ಇನ್ನು ಪೋಷಕರು, ತಮ್ಮ ಮಕ್ಕಳನ್ನು ಶತಾಯ ಗತಾಯ ಇಂಜಿನಿಯರುಗಳು , ಡಾಕ್ಟರುಗಳನ್ನಾಗಿ ಮಾಡಬೇಕು ಎಂಬ ಹಪಾಹಪಿಗೆ ಬಿದ್ದು ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಸೆಂಟ್ರಲ್ ಸಿಲಬಸ್ ಮತ್ತು ಇಂಗ್ಲೀಷ್ ವ್ಯಾಮೋಹ ಅವರನ್ನ ಹಗಲು ಕನಸು ಕಾಣುವಂತೆ ಮಾಡಿದೆ. ಮಕ್ಕಳ ಮೇಲೆ ಆಗುವ ಪರಿಣಾಮಗಳನ್ನ ಲೆಕ್ಕಿಸದೇ ಒತ್ತಡದ ಶಿಕ್ಷಣ ನೀಡಲು ರೆಡಿಯಾಗಿ ಬಿಡುತ್ತಾರೆ. ದುಬಾರಿ ಶುಲ್ಕ ತೆತ್ತು ಖಾಸಗಿ ಶಾಲೆ/ಕಾಲೇಜು ಗಳಿಗೆ ಸೇರಿಸುತ್ತಾರೆ.ಸದರಿ ಶಾಲೆ/ಕಾಲೇಜುಗಳಿಗೆ ಸೇರಿಸುವಾಗಲೇ ಮನೆ ಪಾಠಕ್ಕೆ ಅಂತ ಸಾವಿರಾರು ರೂಪಾಯಿ ಶುಲ್ಕವನ್ನು ಪಡೆಯಲಾಗುತ್ತದೆ. ಒಂದಕ್ಕೆ ಹತ್ತು ಪಟ್ಟು ಖರ್ಚಾದರೂ ಪರವಾಗಿಲ್ಲ ಎಂದು ಭಾವಿಸುವ ಪೋಷಕರು ಒಡವೆ-ಅಸ್ತಿ ಮಾರಿ, ತಾವು ಗಳಿಸಿಟ್ಟದ್ದನ್ನು ತಂದು ಖಾಸಗಿ ಶಿಕ್ಷಣಕ್ಕೆ ಸುರಿಯುತ್ತಾರೆ.ಇತರೆ ಪೋಷಕರಿರಲಿ ಶಿಕ್ಷಣ ಇಲಾಖೆಯ ಶಿಕ್ಷಕರುಗಳು/ಉಪನ್ಯಾಸಕರುಗಳು/ಅಧಿಕಾರಿಗಳು ಸಹಾ ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿಸಲು ಮುಗಿ ಬೀಳುತ್ತಾರೆ. ಪರಿಣಾಮ ಇವತ್ತು ಕಳೆದ ಒಂದು ದಶಕದಿಂದ ಸಾವಿರಾರು   ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. 

       ಗ್ರಾಮೀಣ ಪರಿಸರದ ಮಕ್ಕಳಿಗೆ ಇವತ್ತಿಗೂ ನಗರ ಪ್ರದೇಶದ ಮಕ್ಕಳಂತೆ ಸಮಾನವಾಗಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮೊದಲ ಕಾರಣ ಶಿಕ್ಷಕರು ಮತ್ತು ಅಧಿಕಾರಿಗಳೇ ಆಗಿದ್ದಾರೆ. ರಾಜ್ಯದ ಪ್ರಾಥಮಿಕ/ಮಾಧ್ಯಮಿಕ ಶಿಕ್ಷಣದಲ್ಲಿ, ನಲಿಕಲಿ ಎಂಬ ಪ್ಲಾಪ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಹಳ್ಳ ಹಿಡಿಯುವಂತೆ ಮಾಡಲಾಗಿದೆ. ಪ್ರೌಢಶಾಲೆ/ಕಾಲೇಜುಗಳಲ್ಲಿ ಶಿಕ್ಷಕ/ಉಪನ್ಯಾಸಕರ ಇಚ್ಚಾಶಕ್ತಿ ಕೊರತೆಯಿಂದಾಗಿ ನಿರೀಕ್ಷಿತ ಪಲಿತಾಂಶ ದಕ್ಕುತ್ತಿಲ್ಲ. ಪ್ರತೀ ವಿದ್ಯಾರ್ಥಿಗೂ ಸಿಗಬೇಕಾದ ಪ್ರಾಮುಖ್ಯತೆ ಸಿಗುತ್ತಿಲ್ಲ. ಹಳ್ಳಿಯ ಮಕ್ಕಳು ಮನೆಕೆಲಸದ ಜೊತೆಗೆ ಹಾದಿ ಸವೆಸಿ ಓದುತ್ತಿದ್ದಾರಾದರು ಗುಣಾತ್ಮಕ ಪಲಿತಾಂಶವಿಲ್ಲ. ಈಗ ರಾಜ್ಯಕ್ಕೆ ಪ್ರಥಮ, ದ್ವಿತಿಯ, ತೃತೀಯ ಸ್ಥಾನ ಬರುತ್ತಿರುವವರಾದರೂ ಯಾರು ನಗರ ಪ್ರದೇಶದ ನೌಕರರು/ಅಧಿಕಾರಿಗಳ ಮಕ್ಕಳು, ಇವರಿಗೆ ಎಲ್ಲಾ ಸೌಕರ್ಯಗಳು ಇರುತ್ತವೆ ನಮ್ಮ ಗ್ರಾಮೀಣ ಪರಿಸರದ ಮಕ್ಕಳಿಗೆ ಅಂತಹ ಸವಲತ್ತಿಲ್ಲ ಹಾಗಾಗಿ ಅವರ ಸಾಧನೆಗಳು ಗ್ರಾಮೀಣ ಮಕ್ಕಳ ಸಾಧನೆಯ ಮುಂದೆ ನಗಣ್ಯ ಹೌದಲ್ಲವೇ? ಸರ್ಕಾರ ಸಂಪನ್ಮೂಲ/ನಿರ್ವಹಣೆ ಯನ್ನು ಸರಿಯಾಗಿ ನಿರ್ವಹಿದ್ದೇ ಆದಲ್ಲಿ ಸರ್ಕಾರಿ ಶಾಲೆಗಳು ಮುಂದೆ ಬರುವಲ್ಲಿ ಯಾವುದೇ ಸಂಶಯವಿಲ್ಲ, ಮೊದಲೇ ಹೇಳಿದಂತೆ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮುಖ್ಯವಾಗಿ ಅರ್ಪಣಾ ಮನೋಭಾವ ಬರಬೇಕು ಅಲ್ಲವೇ??

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...