Sunday, June 21, 2009

'ಸಿದ್ಧಾಂತ' ಗಳ ಗಂಟುಮೂಟೆ ಮತ್ತು ಚಳುವಳಿಗಳು

"ಯಾವುದೇ ತತ್ವ, ಸಿದ್ಧಾಂತಗಳೆಲ್ಲವೂ ಎಲ್ಲಿಯವರೆಗೆ ಎಂದರೆ ಅದು ತನ್ನ ಸ್ವಹಿತಾಸಕ್ತಿಗೆ ಧಕ್ಕೆ ಬರುವವರೆಗೂ ಮಾತ್ರ ಆನಂತರ ತತ್ವ ಸಿದ್ದಾಂತಗಳೆಲ್ಲವೂ ಮಣ್ಣು ಪಾಲಾಗುತ್ತವೆ".
-ಡಾ ಬಿ ಆರ್ ಅಂಬೇಡ್ಕರ್
ಅದು ೬೦-70ರ ದಶಕ, ಸಾಮಾಜಿಕ ಚಳುವಳಿಗಳಿಗೆ, ಸ್ವಾಭಿಮಾನದ ಚಳುವಳಿಗಳಿಗೆ ಕಾವು ಕೊಟ್ಟ, ಬಿರುಸು ಕೊಟ್ಟ, ಚಿಂತನ-ಮಂಥನಕ್ಕೆ ನಾಂದಿ ಹಾಡಿದ ಮೇರು ದಿನಗಳು. ಅಂತೆಯೇ ದಮನಿತರ ಧ್ವನಿಯಾದ, ಭ್ರಷ್ಟ ವ್ಯವಸ್ಥೆಯ ವಿರುದ್ಧ ಬೀದಿಗಿಳಿದ ಹೋರಾಟಕ್ಕೊಂದು ಅರ್ಥ ಮತ್ತು ದಿಕ್ಕು ದಕ್ಕಿಸಿಕೊಂಡ ದಿನಗಳು. ಆದರ್ಶ-ಸಿದ್ದಾಂತ-ಬದ್ದತೆಗೆ ಛಾಪು ಸಿಕ್ಕ ದಿನಗಳವು. ಆದರೆ ಈಗೇನಾಗಿದೆ? 90ರ ದಶಕದ ನಂತರದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸ್ವಾಭಿಮಾನದ ಹೋರಾಟಗಳು ದಿಕ್ಕು ದೆಸೆಯಿಲ್ಲದೇ ಗಟಾರ ಸೇರಿಕೊಂಡಿವೆ! ಮೊನ್ನೆ ನನ್ನ ಝೀ ಕನ್ನಡ ವಾಹಿನಿಯ ಸಮಾನ ಮನಸ್ಕ ಮಿತ್ರ ಮಧುಸೂಧನ್ ಮತ್ತು ಅಧಿಕಾರಿ ಮಿತ್ರ ಆನಂದ್ ಜೊತೆ ಪ್ರಸಕ್ತ ಸಂಧರ್ಭದ ಚಳುವಳಿಗಳ ಬಗ್ಗೆ ಮಾತನಾಡಿದೆ, ದೀರ್ಘ ಚರ್ಚೆಯ ನಂತರ ಮಂಥನವಾದ ಅಂಶಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಇಲ್ಲಿನ ಕಟು ವಾಸ್ತವಗಳನ್ನು ಓದಿ ಕೊಂಡ ಮೇಲೆ ನಿಮಗನಿಸಿದ್ದನ್ನು ನೀವು ಹೇಳಲು ಸ್ವತಂತ್ರರು...!
ಬಹುಶ3-4ದಶಕಗಳ ಹಿಂದಿನ ಕಾಲಘಟ್ಟ ಮತ್ತು ಪರಿಸರ ಅಲ್ಲಿನ ವಿಚಾರಗಳು ಯಾವುದೇ ಒಂದು ಚಳುವಳಿಯ ಸ್ಥಿರತೆಗೆ ಬುನಾದಿಯಾಗಿದ್ದವು, ಇಂತಹ ಸನ್ನಿವೇಶದಲ್ಲಿ ಹುಟ್ಟಿ ಬಂದದ್ದೇ ಪ್ರಗತಿ ಪರವಾದ ಚಳುವಳಿಗಳು. ಅಂತಹ ಚಳುವಳಿಗಳ ನಾಯಕತ್ವ ವಹಿಸಿದವರ ನೀತಿ-ನೆಲೆಗಟ್ಟು ಕೂಡ ಚಳುವಳಿಗಳ ಗಟ್ಟಿತನಕ್ಕೆ ಸಾಥ್ ನೀಡಿದ್ದವು. ವ್ಯವಸ್ಥೆಯಿಂದ ನೈಜವಾಗಿ ನೊಂದವರು, ದಮನಿತರು ತಮ್ಮ ಹಕ್ಕುಗಳಿಗೆ, ನ್ಯಾಯಕ್ಕೆ ಪ್ರತಿಭಟನೆ ಮಾಡುತ್ತಿದ್ದರು. ಅಂದಿನ ನಾಯಕರ ಬದ್ಧತೆ, ಸಿದ್ದಾಂತಗಳ ಗಣನೆ ಅಂದಿನ ಕಾಲ ಘಟ್ಟಕ್ಕೆ ಸರಿಯಾಗಿಯೇ ಇತ್ರು. ಪರಿಣಾಮ ರೈತ ಚಳುವಳಿ, ದಲಿತ ಚಳುವಳಿ, ಕಾರ್ಮಿಕರ ಚಳುವಳಿಗಳು ಸಂಘಟನಾತ್ಮಕವಾಗಿ ಬಲಿಷ್ಠ ನೆಲೆ ಪಡೆದುಕೊಂಡಿದ್ದವು. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಏನಾಗಿದೆ? ಸಿದ್ದಾಂತಗಳ ನೆಲೆಗಟ್ಟು ಇರಲಿ ಸೈದ್ದಾಂತಿಕ ನೆಲೆಗಟ್ಟು ಇಲ್ಲದ ಚಳುವಳಿಗಳು ಸಮಯಾನುಕೂಲಕ್ಕೆ ತಕ್ಕಂತೆ ನಡೆಯುತ್ತಿವೆ. ಗಮನಿಸಬೇಕಾದ ಸೂಕ್ಷ್ಮ ಎಂದರೆ. ಸ್ವಾಭಿಮಾನದ ಚಳುವಳಿ, ಸಾಮಾಜಿಕ ಚಳುವಳಿಗಳು ನಮ್ಮ ದೇಶದಲ್ಲಿ ಜಾಗತೀಕರಣದ ಬಿರುಗಾಳಿ ಬೀಸಿದ ನಂತರ ಕಣ್ಮರೆಯಾಗಿವೆ. ಬದ್ದತೆ-ಸಿದ್ದಾಂತ ಮಣ್ಣುಪಾಲಾಗಿವೆ. ಅಲ್ಲೊಂದು ಇಲ್ಲೊಂದು ಕೇಳಿ ಬರುವ ಧ್ವನಿಗಳ ಶಕ್ತಿ ಅಡಗಿಸುವ ವ್ಯವಸ್ಥಿತ ಕ್ರಿಯೆ ಸದಾ ಜಾರಿಯಲ್ಲಿವೆ. ಹಾಗಾಗಿಯೇ ಸಾಹಿತ್ಯ-ವಿಚಾರಗಳ ಮೂಲಕ ಹೊಸತೊಂದು ಲೋಕವನ್ನೇ ಸೃಷ್ಟಿಸಿದ ಪೂರ್ಣಚಂದ್ರ ತೇಜಸ್ವಿ ಹೇಳಿದ ಮಾತು ಈ ಸಂಧರ್ಭದಲ್ಲಿ ನೆನಪಿಗೆ ಬರುತ್ತದೆ. " ಈ ದೇಶದಲ್ಲಿ ಗಾಂದಿ, ಅಂಬೇಡ್ಕರ್ ಮತ್ತಿತರ ದಾರ್ಶನಿಕರ ತತ್ವ ಸಿದ್ದಾಂತಗಳು ಎಂದೋ ಕಸದ ಬುಟ್ಟಿ ಸೇರಿವೆ" ಎಂದು ನಿರ್ಭಿಡೆಯಿಂದ ಹೇಳುವ ಮೂಲಕ ಸಂಧಿಗ್ದಕ್ಕೆ ಸಿಲುಕಿದವರು ತೇಜಸ್ವಿ. ಇಂದಿನ ಚಳುವಳಿಗಳ ನಾಯಕರಿಗೆ ಸಿದ್ದಾಂತಗಳ ನೆರಳು ಬೇಕು ಆದರೆ ಅದರಡಿಯಲ್ಲಿ ಸ್ವಾರ್ಥದ ಹಿತಾಸಕ್ತಿ ಕಡ್ಡಾಯವಾಗಿರಬೇಕು ಎಂಬಂತಿದೆ, ಆದ್ದರಿಂದ ಇಂದಿನ ಚಳುವಳಿಗಳ ಗಟ್ಟಿತನಕ್ಕೆ ಹೊಡೆತ ಬಿದ್ದಿದೆ. ಸಾರ್ವಜನಿಕವಾದ ವಿಷಯಗಳಿಗೆ ಬೀದಿಗಿಳಿಯುವುದಕ್ಕಿಂತ ವೈಯುಕ್ತಿಕ ಹಿತಾಸಕ್ತಿಗಳಿಗೆ ಪೂರಕವಾಗುವ ಹೋರಾಟಗಳು ಜಾಗೃತಾವಸ್ಥೆಯಲ್ಲಿವೆ, ಇದು ನಮ್ಮ ನೈತಿಕ ಅಧ:ಪತನಕ್ಕೆ ಸಾಕ್ಷಿಯಾಗುತ್ತದೆ. ದೇಶದ ಆಡಳಿತ ವ್ಯವಸ್ಥೆಯ ವಿರುದ್ದ ಧ್ವನಿಯೆತ್ತಲೂ ಈಗ ಆಧುನಿಕ ಹೋರಾಟಗಳು ಬಂದಿವೆ ಅವುಗಳ ಪೈಕಿ ಮಾಹಿತಿ ಹಕ್ಕು ಕಾಯ್ದೆ ಎಂಬುದು ಒಂದು. ಇಂದಿನ ವೇಗದ ಬದುಕಿನಲ್ಲಿ ಬೀದಿಗಿಳಿದು ಪ್ರತಿಭಟಿಸಲು ತಾಕತ್ತು ಇಲ್ಲ ಎನ್ನುವುದಕ್ಕಿಂತ ತನ್ನ ಹಿಂದೆ ಪ್ರತಿಭಟನೆಗೆ ಅಗತ್ಯವಿರುವ ತಲೆಗಳ ಸಂಖ್ಯೆ ಇಲ್ಲ ತಿಳಿದಾಗ ಏಕಾಂಗಿ ಹೋರಾಟಕ್ಕೆ ಈ ಮಾದರಿಯ ಚಳುವಳಿ ಸಹಾಯ ಮಾಡುತ್ತಿದೆ.
ತನ್ನ ಪಾಡಿಗೆ ತಾನು ಪರಿಸರ ಸಂರಕ್ಷಣೆಯ ಚಟುವಟಿಕೆಗಳಲ್ಲಿ ತೊಡಗುವ ಸಾಲು ಮರದ ತಿಮ್ಮಕ್ಕ, ಹಾಸನದ ಗೆಳೆಯರ ನಮ್ಮೂರ ಸೇವೆ, ರಂಗ ಚಟುವಟಿಕೆಗಳ ಮೂಲಕ ವ್ಯವಸ್ಥೆಯ ಅಣಕ ಹೀಗೆ ಹತ್ತು ಹಲವು ಸ್ವಯಂಸ್ಫೂರ್ತಿಯ ಚಟುವಟಿಕೆಗಳು ಚಳುವಳಿಯ ಭಾಗಗಳೇ ಆಗಿವೆ. ಹಿಂದೆ ಸಿದ್ದಾಂತ ನಂಬಿಕೊಂಡು ಬೀದಿಗಿಳಿದ ಹೋರಾಟಗಾರರ ಪರಿಸ್ಥಿತಿ ಏನಾಗಿದೆ? ಈ ಪೈಕಿ ಒಂದು ವರ್ಗದ ಜನ ಭ್ರಷ್ಠ ವ್ಯವಸ್ಥೆಯಲ್ಲಿ ಸೇರಿಕೊಂಡು ಹೋರಾಟದ ನೆಪದಲ್ಲಿ ನಂಬಿಕೊಂಡ ಜನರನ್ನು ವಂಚಿಸುತ್ತ ಐಷಾರಾಮಿ ಬದುಕಿನಲ್ಲಿ ಕಾಲಕಳೆದರೆ ಮತ್ತೊಂದು ವರ್ಗದ ಜನ ಸಿದ್ದಾಂತ ನಂಬಿಕೊಂಡು ಹೋರಾಟಕ್ಕಿಳಿದು ಬದುಕನ್ನೇ ಕಳೆದುಕೊಂಡು ದಿಕ್ಕು ದೆಸೆಯಿಲ್ಲದೇ ಬರಿಬಾದಾಗಿ ಹೋಗಿದ್ದಾರೆ, ಆದರ್ಶದ ಕನಸಿನಲ್ಲಿ ತಮ್ಮ ನ್ನು ನಂಬಿಕೊಂಡವರ ಬದುಕನ್ನು ಬರಿದು ಮಾಡಿದ್ದಾರೆ. ಯಾಕೆ ಹೀಗೆ ? ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವೇ? ಹಾಗಾದರೆ ನಂಬಿಕೊಂಡ ಸಿದ್ದಾಂತಗಳ ಮೂಟೆಯನ್ನು ಏನು ಮಾಡಬೇಕು ? ಕೆಲವೊಮ್ಮೆ ವ್ಯವಸ್ಥೆಯ ವೈರುದ್ಯದ ವಿರುದ್ದ ನೇರವಾಗಿ ಪ್ರತಿಭಟಿಸಲು ಆಗದಿದ್ದಾಗ ಸಿದ್ದಾಂತಗಳ ನೆಪದಲ್ಲೆ ನಕ್ಸಲಿಸಂ ಅನ್ನು ಮಾಡುವುದುಂಟು, ಅದು ನಮ್ಮ ಸಮಸ್ಯಗಳ ಪರಿಹಾರಕ್ಕೆ ಉತ್ತರವಾದೀತೆ, ಅಂತಹ ಎಷ್ಟು ಹೋರಾಟಗಳು ಯಶಸ್ಸು ಕಂಡಿವೆ ಎಂಬುದಕ್ಕೆ ನಮ್ಮ ಕಣ್ಮುಂದೆಯೇ ಇತಿಹಾಸವಿದೆ. ಇಂತಹ ವಾಸ್ತವ ಸತ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾರಣವೇನು? ವ್ಯವಸ್ಥೆಯ ಲೋಪದೋಷಕ್ಕೆ ಸೈದ್ದಾಂತಿಕ ನೆಲಗಟ್ಟು ಇಟ್ಟುಕೊಂಡು ಚಳುವಳಿಗಳು ರೂಪಿತವಾಗಬೇಕು. ಆದರೆ ಈಗ ಆಗುತ್ತಿರುವುದೇನು? ಒಂದು ಚಳುವಳಿಯ ಹೆಸರಿನ ಸಂಘಟನೆಗೆ ಕೂಲಿ ಕಾರ್ಯಕರ್ತರು ಇರುತ್ತಾರೆ, ಅವರಷ್ಟೇ ಮಂದಿ ಬೇಕಾದ ಸಂಧರ್ಭದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾರೆ. ಅಂದಿನ ಕೂಲಿ ಸಿಕ್ಕರೆ, ಹೆಂಡ ಬಾಡು ಸಿಕ್ಕರೆ ಅಂದಿನ ಚಳುವಳಿ ಮುಕ್ತಾಯ! ಅಷ್ಟೇ ಅಲ್ಲ ಸಮಾಜದ ದಮನಿತ ಜನರ, ವಿದ್ಯಾರ್ಥಿಗಳ ಹಿತ ಕಾಯುವ , ಕನ್ನಡ ಸಂಸ್ಕೃತಿ ರಕ್ಷಣೆ ನೆಪದಲ್ಲಿ ಹಲವಾರು ಸಂಘಟನೆಗಳು ತಮ್ಮ ಸಂಘಟನೆಗಳ ಭದ್ರತೆಗೆ ಬುನಾದಿ ಹಾಕಿಕೊಳ್ಳುತ್ತಿವೆ ಅಂದರೆ ಉರಿಯುವ ಮನೆಯ ಗಳ ಹಿರಿದಂತೆ ಅಲ್ಲವೇ? ನೈಜ ಆಶಯ, ಬದ್ದತೆ ಅಲ್ಲಿ ಉಳಿದಿಲ್ಲ. ಇನ್ನು ಸ್ವಾಭಿಮಾನದ ಚಳುವಳಿಗಳು ನರಸತ್ತ ಮಂದಿಯ (ಕ್ಷಮಿಸಿ) ನಿರ್ಲಿಪ್ತ ಧೋರಣೆಯಿಂದ ಸತ್ತೇ ಹೋಗಿವೆ. ಈ ಸಂಧರ್ಭ 1950ರಲ್ಲಿ ಅಂಬೇಡ್ಕರ್ ಹೇಳಿದ ಮಾತು ಮತ್ತೆ ನೆನಪಾಗುತ್ತಿದೆ. "ಈ ದೇಶದ ಸಾಮಾಜಿಕ ಚಳುವಳಿಗಳು ಹಾಗೂ ಸ್ವಾಭಿಮಾನದ ಹೋರಾಟಗಳು ಏಕೆ ನಿಷ್ಕ್ರಿಯಗೊಂಡಿವೆ ಎಂದರೆ, ಚಳುವಳಿಯ ಮಂಚೂಣಿಯಲ್ಲಿರಬೇಕಾದವರುಬೀಜ ಒಡೆಸಿಕೊಂಡ ಹೋರಿಗಳಂತೆ ಮೂಗುದಾರದ ಅಂಕುಶದಲ್ಲಿದ್ದಾರೆ ಅಥವಾ ಕುತ್ತಿಗೆ ಬೆಲ್ಟ್ ಹಾಕಿಸಿಕೊಂಡು ಮಾಲೀಕ ಎಸೆಯುವ ಬಿಸ್ಕತ್ತಿಗೆ ಬಾಯಿ ಚಪ್ಪರಿಸುವವರಿದ್ದಾರೆ. ಅವರು ಚಳುವಳಿ ಮಾಡುವುದಿರಲಿ, ಬಾಯಿ ಬಿಡಲೂ ಆಗದ ಸ್ಥಿತಿಯಲ್ಲಿದ್ದಾರೆ".
ಮಾರ್ಟಿನ್ ಲೂಥರ್ ಹೇಳಿದಂತೆ ದುರ್ಜನರ ದುಷ್ಟತನಕ್ಕಿಂತ ಸಜ್ಜನರ ಮೌನ ಸಮಾಜಕ್ಕೆ ಅತ್ಯಂತ ಅಪಾಯಕಾರಿ, ಆದ್ದರಿಂದ ಮಿತ್ರರೇ ನಿಮಗೂ ಸ್ವಾಭಿಮಾನ ವಿದೆ ಎಂಬುದನ್ನು ಮರೆಯದಿರಿ ನಿಮ್ಮಲ್ಲಿನ ಜಡತ್ವ ತೊರೆದು ವ್ಯವಸ್ಥೆಯ ದೋಷಗಳ ವಿರುದ್ದ ಪ್ರತಿಭಟಿಸಿ, ಸಿದ್ದಾಂತ ಗಳಿರುವುದು ಗಂಟು ಮೂಟೆ ಕಟ್ಟುವುದಕ್ಕಲ್ಲ ಸೈದ್ದಾಂತಿಕ ಬದುಕಿಗೆ ನೆನಪಿರಲಿ..

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...