Sunday, October 16, 2011

'ಜ್ಞಾನ'ಪೀಠಕ್ಕೆ ಅಸಹನೆ ಯಾಕೆ?


ಮೊನ್ನೆ ಜಾನಪದ ವಿದ್ವಾಂಸ,ನಾಟಕಕಾರ, ಸಾಹಿತಿ,ನಿರ್ದೇಶಕ ಚಂದ್ರಶೇಖರ ಕಂಬಾರರಿಗೆ 8ನೇ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದ ಸಂಧರ್ಭ..'ಯೋಗ್ಯತೆ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿ ಬರುತ್ತಿದೆ, ಯೋಗ್ಯರು ಭಾಳಾ ಮಂದಿ ಅದಾರೆ ' ಎಂದು ಪ್ರತಿಕ್ರಿಯಿಸಿದ್ದು  ಪಾಟೀಲ ಪುಟ್ಟಪ್ಪ. "ಪ್ರಶಸ್ತಿ ಬಂದಾಗ ಪರ ವಿರೋಧ ಹೇಳಿಕೆ ನೀಡೋದು ಇರ್ತಾವಾ, ಅದು ಅವರವರ ಅಭಿಪ್ರಾಯ. ನಾನು ಅವರ ಹೇಳಿಕೆಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ" ಎಂದು  ಡಾ. ಚಂದ್ರಶೇಖರ ಕಂಬಾರರು ಪ್ರತಿಕ್ರಿಯಿಸಿದ್ದರು. ನಂತರ ಪಾಟೀಲ ಪುಟ್ಟಪ್ಪನವರ ಧಾಟಿಯಲ್ಲೇ ಬೈರಪ್ಪನವರನ್ನು ಬೆಂಬಲಿಸುವ ಅದರಲ್ಲೂ ಜಾತಿಯ ಹಿನ್ನೆಲೆಯಲ್ಲಿ ಕಂಬಾರರ ಶ್ರೇಷ್ಠತೆಯನ್ನು ಪ್ರಶ್ನಿಸಲು ನಿಂತದ್ದು ಒಂದು ಸಮೂಹ! ಇದನ್ನು ವಿರೋಧಿಸುವ ಭರದಲ್ಲಿ ಎಸ್ ಎಲ್ ಬೈರಪ್ಪನವರನ್ನು ಸಾರ್ವತ್ರಿಕವಾಗಿ ತೆಗಳಿದ್ದಲ್ಲದೇ ಅವರಿಗೆ ಜ್ಞಾನಪೀಠ ಸಿಗುವುದೇ ಆದರೆ ಮರಣೋತ್ತರವಾಗಿ ಸಿಗಲಿ  ಎಂದು ನಿಡುಮಾಮಿಡಿ ಸ್ವಾಮೀಜಿ ಹಾಗೂ ಅಗ್ನಿ ಶ್ರೀಧರ್ ಇತರರು ಜರಿದದ್ದು ಕನ್ನಡ ಸಾರಸ್ವತ ಲೋಕದಲ್ಲಿ ಒಳ್ಳೆಯ ಬೆಳವಣಿಗೆಯೇನಲ್ಲ. 
        8ನೇ ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ಭಾರತೀಯ ಭಾಷೆಗಳ ಸಾಹಿತ್ಯ ವಲಯದಲ್ಲಿ ಉನ್ನತ ಸ್ಥಾನಕ್ಕೇರಿರುವ ಕನ್ನಡ ಭಾಷೆಯ ಶ್ರೇಷ್ಠತೆಗೆ ಸಮಸ್ತ ಕನ್ನಡಿಗರೂ ಸಂಭ್ರಮ ಪಡುವ ಕಾಲವಿದು. ಆದರೆ ಇದೇನಿದು? ಅತ್ಯುನ್ನತ ಪುರಸ್ಕಾರ ಲಭಿಸಿದಾಗ ಅದನ್ನು ಜಾತಿಯ ಹಿನ್ನೆಲೆಯಲ್ಲಿ, "ಲಾಬಿ" ಮಾಡಿ ಪಡೆದಿದ್ದಾರೆಂಬ ಅರ್ಥವಿಲ್ಲದ ವ್ಯಾಖ್ಯಾನ ಮಾಡುತ್ತಾ ಒಬ್ಬರ ಮೇಲೊಬ್ಬರು ಕೆಸರೆರಚಾಡುತ್ತಾ ಹಂಗಿಸುವ ಪರಂಪರೆ? ನಾಚಿಕೆಯಾಗ ಬೇಕು ಸದರಿ ಬುದ್ದಿಜೀವಿಗಳಿಗೆ ಮತ್ತು ತಲೆ ಬುಡ ತಿಳಿಯದೇ ಯಾವುದಾದರೊಂದು ಕಾರಣಕ್ಕೆ ಎರಡೂ ಪಕ್ಷಗಳನ್ನು ಬೆಂಬಲಿಸುವ ಮೂರ್ಖರಿಗೆ! ಕನ್ನಡ ಸಾಹಿತ್ಯ ಪರಂಪರೆ ಅತ್ಯಂತ ಶ್ರೀಮಂತವಾದದ್ದು ಇಲ್ಲಿ ಇನ್ನೂ ಹಲವಾರು ಮಂದಿ ಜ್ಞಾನಪೀಠಿಗಳಿದ್ದಾರೆ, ಪ್ರಶಸ್ತಿ ಬಾರದ ಮಾತ್ರಕ್ಕೆ ಅವರೆಲ್ಲ ತೃಣಕ್ಕೆ ಸಮಾನರೆಂದು ಯಾಕಾದರೂ ಭಾವಿಸಬೇಕು. ಕೆಲವು ಪ್ರಶಸ್ತಿಗಳಿಂದ ಯಾರೂ ದೊಡ್ಡವರಾಗುವುದಿಲ್ಲ, ಆದರೆ ಕೆಲವೊಮ್ಮೆ ಪುರಸ್ಕೃತರಾಗುವವರಿಂದ ಪ್ರಶಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕುಬಿಡುತ್ತದೆ. ಈಗ ಜ್ಞಾನ ಪೀಠ ಪಡೆದ 8ಮಂದಿ ಜ್ಞಾನಪೀಠಿಗಳು ಅದ್ವಿತೀಯರೇ ಆಗಿದ್ದಾರೆ. ಆದರೆ ವ್ಯವಸ್ಥೆಯಲ್ಲಿ ದಿಕ್ಕುತಪ್ಪಿದ ಆಲೋಚನೆಗಳು ವಿನಾಕಾರಣ ಅಪಪ್ರಚಾರಕ್ಕೆ ಮುಂದಾಗಿ ಬಿಡುತ್ತವೆ ಇದು ಸಾರಸ್ವತ ಲೋಕಕ್ಕೆ ಅಪಾಯಕಾರಿ. 
       ಜ್ಞಾನಪೀಠ ಪ್ರಶಸ್ತಿ ಕುರಿತು ಚೂರು ಮಾಹಿತಿ ಹೇಳಿ ನಂತರ ಚರ್ಚೆಗೆ ಬರೋಣ, ಜ್ಞಾನಪೀಠ ಪ್ರಶಸ್ತಿ ಯಾವುದೇ ಸರ್ಕಾರ ಕೊಡುವ ಪ್ರಶಸ್ತಿಯಲ್ಲ! ಜ್ಞಾನಪೀಠ ಟ್ರಸ್ಟ್ ಇದನ್ನು ಕೊಡಮಾಡುತ್ತದೆ. ಜ್ಞಾನಪೀಠ ಟ್ರಸ್ಟ್ ನ ನಿರ್ವಹಣೆ ಜೈನ ಕುಟುಂಬ ಮಾಡುತ್ತದೆ, ಜ್ಞಾಪೀಠ ಟ್ರಸ್ಟ್ ನ ಒಡೆತನ ಟೈಂಸ್ ಆಫ್ ಇಂಡಿಯಾ ಗ್ರೂಪ್ ಗೆ ಸೇರಿದೆ. ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ದೇಶದ ಅತ್ಯುತ್ತನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಮೇ ೨೨ ೧೯೬೧ ರಲ್ಲಿ ಸ್ಥಾಪಿಸಲಾಯಿತು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ಐದು ಲಕ್ಷ ರುಪಾಯಿ ನಗದು ಹಾಗು ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.
         ಅಂದ ಹಾಗೆ ಕನ್ನಡಕ್ಕೆ ಮೊದಲ ಜ್ಞಾನ ಪೀಠ ಪ್ರಶಸ್ತಿಯನ್ನು ತಂದು ಕೊಟ್ಟದ್ದು ಕುವೆಂಪು 1967ರಲ್ಲಿ. ಆ ದಿನಗಳಲ್ಲಿ ಇನ್ನೂ ಭಾರತೀಯ ಸಮಗ್ರ ಸಾಹಿತ್ಯಕ್ಕೆ ಕೊಡುಗೆ ನೀಡಿದವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಕೊಡಲು ಆರಂಭಿಸಿರಲಿಲ್ಲ. ಆ ದಿನಗಳಲ್ಲಿ ತಮ್ಮ ಸಾಹಿತ್ಯ ಕೃತಿ ಶ್ರೀ ರಾಮಾಯಣ ದರ್ಶನಂ ಗೆ ಜ್ಞಾನಪೀಠ ಪ್ರಶಸ್ತಿಯನ್ನು ಕುವೆಂಪು ಪಡೆದಾಗ ಬೆಚ್ಚಿ ಬಿದ್ದದ್ದು ಪುರೋಹಿತ ಶಾಹಿ ವರ್ಗ.. ಒಬ್ಬ ಶೂದ್ರ ಜ್ಞಾನಪೀಠಕ್ಕೆ ಅರ್ಹವಾಗುವ ರಾಮಾಯಣ ದರ್ಶನಂ ಬರೆದನೋ ಎನ್ನುವ ಕಿಡಿಗೇಡಿ ಮಾತನ್ನು ಆಡಿ ಬಿಟ್ಟಿತ್ತು. ಅಂದು ಕುವೆಂಪು ತುಂಬ ನೊಂದು ಬಿಟ್ಟಿದ್ದರು. ಜ್ಞಾನಪೀಠ ಪ್ರಶಸ್ತಿ ಆರಂಭವಾದ ಕೆಲವೇ ವರ್ಷಗಳಲ್ಲಿ ಮೊಟ್ಟ ಮೊದಲ ಭಾರಿಗೆ  4ನೇ ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡಕ್ಕೆ ತಂದು ಕೊಟ್ಟ ಹೆಮ್ಮೆ ಕುವೆಂಪು ರವರದ್ದಾಗಿತ್ತು. ಆದರೆ ಜಾತೀಯ ಅಸಹನೇ ಮತ್ತು ಕೀಳು ಮನೋಭಾವ,  ಸಂಕುಚಿತ ಮನೋಭಾವ ಜ್ಞಾನಪೀಠದ ಸಂಭ್ರಮವನ್ನು ಅಂದು ಹೊಸಕಿ ಹಾಕಿತ್ತು. ಇವತ್ತು ಅದೇ ಮನಸ್ಸುಗಳು ಕಂಬಾರರನ್ನು ಜಾತಿಯ ಹಿನ್ನೆಲೆಯಲ್ಲಿ ಅಣಕಿಸಲು ಪ್ರಯತ್ನಿಸುತ್ತಿರುವುದು ವ್ಯವಸ್ಥೆಯ ದುರಂತವೇ ಸರಿ! 
       ಚಂದ್ರ ಶೇಖರ ಕಂಬಾರರಿಗೂ ಇದು ಹೊಸತೇನಲ್ಲ.  ಕಂಬಾರರು ಯುವಕರಾಗಿದ್ದಾಗ ದಾರವಾಡದ ಕವಿ ಸಮ್ಮೇಳನದಲ್ಲಿ ಕವಿತೆಯೊಂದನ್ನು ಓದಿದ್ದರಂತೆ,ಖ್ಯಾತ ಕವಿಗಳೊಬ್ಬರು ಅಧ್ಯಕ್ಷತೆ ವಹಿಸಿದ್ದರು,ಕಂಬಾರರ ಕವಿತೆ ಅಲ್ಲಿ ಓದಿದ ಎಲ್ಲ ಕವಿಗಳಿಗಿಂತ ಭಿನ್ನವಾಗಿದ್ದದ್ದು ಎಲ್ಲರ ಗಮನಕ್ಕೆ ಬಂದಿದ್ದರೂ,ಅದ್ಯಕ್ಷರು ಕಂಬಾರರ ಬಗ್ಗೆ ಕುಹಕದ ಮಾತು ಹೇಳಿದ್ದರು,"ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ " ಎಂಬ ಅಧ್ಯಕ್ಷರ ಮಾತು ಕಂಬಾರರ ಸ್ವಾಭಿಮಾನವನ್ನೇ ಬಡಿದೆಬ್ಬಿಸಿತು,ಅಂದೇ ಕಂಬಾರ ಕಾವ್ಯವನ್ನು ಪಳಗಿಸಿಕೊಳ್ಳಲು ನಿರ್ಧರಿಸಿದರಂತೆ.ಅವರ ಅಚಲ ನಿರ್ಧಾರ ಹಾಗೂ ಪ್ರಯತ್ನಗಳು ಇವತ್ತು ಅವರ ಸಾಧನೆಯನ್ನು ಜ್ಞಾನಪೀಠದ ಅಂಚಿಗೆ ತಂದು ನಿಲ್ಲಿಸಿದೆ. ಚಂದ್ರ ಶೇಖರ ಕಂಬಾರ ಕನ್ನಡದ ವರಕವಿ ದ.ರಾ ಬೇಂದ್ರೆಯವರ ನಂತರ ಕನ್ನಡ ಭಾಷೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ದುಡಿಸಿಕೊಂಡು ಸಾಹಿತ್ಯ ರಚಿಸಿದ ಕೀರ್ತಿ ಕಂಬಾರರಿಗೆ ಸಲ್ಲುತ್ತದೆ. ಮೊಟ್ಟ ಮೊದಲ ಭಾರಿಗೆ ಕನ್ನಡದಲ್ಲಿ ಜಾನಪದ ವಿಶ್ವಕೋಶವನ್ನು ರಚಿಸಿದ ಕಂಬಾರ ಆ ಮೂಲಕ ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷವಾದ ಸ್ಥಾನವನ್ನು ಕಲ್ಪಿಸಿದ್ದಾರೆ. ಜಾನಪದದ ಜೊತೆಗೆ ವೈಚಾರಿಕತೆಯನ್ನು ಬೆಸೆಯುವ ಕಂಬಾರರ ಧಾಟಿ ಅವರಿಗೆ ಸರಿಸಾಟಿಯಾಗುವಂತಿದೆ. ಕಂಬಾರರು ಒಟ್ಟು ೨೨ ನಾಟಕಗಳು, ೮ ಕವನ ಸಂಕಲನಗಳು ಮತ್ತು ೪ ಕಾದಂಬರಿಗಳನ್ನು ರಚಿಸಿದ್ದಾರೆ. ಅಲ್ಲದೆ ಚಕೋರಿ ಎಂಬ ಮಹಾಕಾವ್ಯ, ಜಾನಪದ, ರಂಗಭೂಮಿ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ೧೪ ಸಂಶೋಧನಾ ಕೃತಿಗಳನ್ನೂ ರಚಿಸಿದ್ದಾರೆ.ಏಲ್ಲಾ ಸೇರಿ ಸುಮಾರು ನಲವತ್ತಕ್ಕೂ ಮಿಕ್ಕಿ ಕೃತಿಗಳು ಹೊರಬಂದಿವೆ.ಇವರ ಅನೇಕ ಕೃತಿಗಳು ಹಿಂದಿ, ಇಂಗ್ಲೀಷ್ ಸಹಿತ ಹಲವು ಭಾಷೆಗಳಿಗೆ ಅನುವಾದಗೊಂಡಿವೆ.‘ಬೆಂಬತ್ತಿದ ಕಣ್ಣು’(೧೯೬೧) ಮತ್ತು ‘ನಾರ್ಸಿಸಸ್‌’(೧೯೬೯) ಹೆಸರು ಮಾಡಿದ ಇವರ ನಾಟಕಗಳು.ಪದ್ಮಶ್ರೀ, ನಾಡೋಜ, ಕಬೀರ್ ಸಮ್ಮಾನ್ ಹೀಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಕಂಬಾರರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನನ್ಯವಾದದ್ದು. ಅದೇ ರೀತಿ ಸಂತೆ ಶಿವರ ಲಿಂಗಣ್ಣಯ್ಯ ಬೈರಪ್ಪ ಸಾಹಿತ್ಯ ಲೋಕದಲ್ಲಿ ವಿಶಿಷ್ಠ ರೀತಿಯಲ್ಲಿ ತಮ್ಮ ಅಸ್ತ್ವಿತ್ವ ದಾಖಲಿಸಿದವರು. ಆಧುನಿಕ ದಿನಗಳಲ್ಲಿ ಇವತ್ತಿಗೂ ಹೆಚ್ಚು ಓದಿಸಿಕೊಳ್ಳುವ ನಂ.1 ಸ್ಥಾನ ಅತಿಕ್ರಮಿಸಿದ ಹೆಗ್ಗಳಿಕೆ ಬೈರಪ್ಪನವರಿಗಿದೆ. 2010ರ ಸರಸ್ವತಿ ಸಮ್ಮಾನ್,ಪಂಪ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಬೈರಪ್ಪನವರ ಸಾಹಿತ್ಯ ಉರ್ದು,ಸಂಸ್ಕೃತ,ಇಂಗ್ಲೀಷ್, ಮರಾಠಿ,ಗುಜರಾತಿ, ಬೆಂಗಾಲಿ ಸೇರಿದಂತೆ ಹಲವು ಭಾಷೆಗಳಿಗೆ ತರ್ಜುಮೆ ಗೊಂಡಿದೆ. ಹಿಂದಿ ಭಾಷೆಗೆ ಅನುವಾದಗೊಂಡ ಇವರ ಸಾಹಿತ್ಯ ಅಲ್ಲೂ ಇವರನ್ನು ಅತ್ಯುತ್ತಮ ಬರಹಗಾರರ ಸಾಲಿನಲ್ಲಿ ನಿಲ್ಲಿಸಿದೆ. 24ಕಾದಂಬರಿಗಳು, ಒಂದು ಆತ್ಮ ಕಥನ, 4ತತ್ವಶಾಸ್ತ್ರ ಸಾಹಿತ್ಯವನ್ನು ಬರೆದಿರುವ ಬೈರಪ್ಪ ನವರ "ಆವರಣ"ಮತ್ತು "ಕವಲು" ಕಾದಂಬರಿಗಳು ಬಿಡುಗಡೆಗೆ ಮುನ್ನವೇ ಸಂಚಲನ ಸೃಷ್ಟಿಸಿದವು. ಬಹುಶ: ಕನ್ನಡದ ಬೇರಾವ ಕೃತಿಗಳಿಗೆ ಮತ್ತು ಲೇಖಕರಿಗೆ ಈ ಮಟ್ಟದ ಪ್ರೋತ್ಸಾಹ ದೊರೆತಿರಲಾರದು.   ಸಾಹಿತ್ಯ ಕೃಷಿಗೂ ಮುನ್ನ ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮಕ್ಕೂ ದುಮುಕಿ ದೇಶ ಪ್ರೇಮ ಮೆರೆದ ಅಸೀಮ ವ್ಯಕ್ತಿತ್ವ ಬೈರಪ್ಪನವರದ್ದು.   ಇದು ಅಸಲು ಸಂಗತಿ ಹೀಗಿರುವಾಗ ಕವಿಗಳನ್ನು ಸಾಹಿತಿಗಳನ್ನು ಏಕ ದೃಷ್ಠಿಕೋನದಿಂದ ಅಳೆಯುವುದು ಸರಿಯೇ? 
           ಬೈರಪ್ಪ ಮತ್ತು ಕಂಬಾರ ಅವರವರ ನೆಲೆಗಟ್ಟಿನಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ ಆದರೆ ಅವರ ವೈಯುಕ್ತಿಕ ವಿಚಾರಗಳು, ಜಾತೀಯ ಹಿನ್ನೆಲೆ ಒಂದು ಸಂಭ್ರಮವನ್ನು ಹಾಳು ಮಾಡಬಾರದಲ್ಲವೇ? ಪ್ರಶಸ್ತಿ ದಕ್ಕಿದ ಸಂಧರ್ಭದಲ್ಲಿ ಇವೆಲ್ಲಾ ಬೇಕಾ ಹೇಳಿ? ಇದುವರೆಗೆ ಪ್ರಶಸ್ತಿ ದಕ್ಕಿಸಿಕೊಂಡವರಲ್ಲಿ ಇಂತಹ ಅಸಹಜವಾದ ಮುಜುಗುರಕ್ಕೆ ಒಳಗಾಗಿದ್ದು ಕುವೆಂಪು ಮತ್ತು ಕಂಬಾರ ಮಾತ್ರವಲ್ಲ ಯು ಆರ್ ಅನಂತ ಮೂರ್ತಿ ಹಾಗೂ ಗಿರೀಶ್ ಕಾರ್ನಾಡರಿಗೆ ಪ್ರಶಸ್ತಿ ಬಂದಾಗಲೂ ಹೊಟ್ಟೆಕಿಚ್ಚಿನ ಒಂದು ವರ್ಗ "ಲಾಬಿ" ಮಾಡಿ ಪ್ರಶಸ್ತಿ ಗಿಟ್ಟಿಸಿಕೊಂಡವರೆಂಬ ಹಣೆ ಪಟ್ಟಿ ಕಟ್ಟಿತ್ತು. ಕನ್ನಡಕ್ಕೆ ಇನ್ನೂ ಹೆಚ್ಚಿನ ಜ್ಞಾನಪೀಠಗಳು ಬರಬೇಕಿದೆ ಸಧ್ಯ ಜ್ಞಾನಪೀಠ ಪಡೆದಿರುವವರಲ್ಲಿ 2ನೇ ಸ್ಥಾನದಲ್ಲಿರುವ ಹಿಂದಿಗಿಂತಲೂ  ಕನ್ನಡ 2ಪ್ರಶಸ್ತಿಗಳಿಂದ ಮೇಲಿದೆ, ನಾವಿನ್ನೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ದಕ್ಕಿಸಿಕೊಳ್ಳಲಾಗಿಲ್ಲ, ಇಂತಹ ಸಂಧರ್ಭದಲ್ಲಾದರೂ ಒಗ್ಗೂಡಿ ಶಾಸ್ತ್ರೀಯ ಸ್ಥಾನಮಾನಕ್ಕೆ ಹಕ್ಕೊತ್ತಾಯ ಮಂಡಿಸುವುದನ್ನು ಬಿಟ್ಟು ಇದೆಂಥದು ಕೆಸರೆರಚಾಟ? ಇನ್ನಾದರೂ ಮೂರ್ಖರು ಬುದ್ದಿ ಕಲಿಯಬಾರದೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...