Sunday, March 22, 2015

ವಕೀಲ ರಶೀದ್ ಹತ್ಯೆಯೂ, ರವಿ ಸಾವಿನ ಪ್ರಕರಣವೂ!


ಅದು 3ದಶಕಗಳ ಹಿಂದೆ ಭಾರೀ ಕುತೂಹಲ ಹುಟ್ಟಿಸಿದ ಮರ್ಡರ್ ಕಥನ! ಅವತ್ತು ಆಗಸ್ಟ್ 17, 1987 ಕೇರಳದ ವಕೀಲ ಅಬ್ದುಲ್ ರಶೀದ್ ರನ್ನು ಬರ್ಭರವಾಗಿ ಹತ್ಯೆಗೈದು ರೈಲ್ವೇ ಹಳಿಗಳ ಮೇಲೆ ದುಷ್ಕರ್ಮಿಗಳು ಬಿಸಾಡಿ ಹೋಗಿದ್ದರು. ಶವ ಪತ್ತೆಯಾಗಿದ್ದು ತಮಿಳು ನಾಡಿನ ಡ್ಯಾನಿಶ್ ಪೇಟೆಯ ರೈಲ್ವೇ ಹಳಿಗಳ ಪಕ್ಕ, ಸೇಲಂ ಪೋಲೀಸರು ಹತ್ಯೆಯನ್ನು ದಾಖಲು ಮಾಡಿಕೊಂಡಿದ್ದರು, ಕೊಲೆಯಾಗಿದ್ದ ವಕೀಲನ ಮೇಲೆ ಕರ್ನಾಟಕ ರಾಜ್ಯದಲ್ಲಿ ಅತ್ಯಾಚಾರದ ಪ್ರಕರಣ ದಾಖಲಾಗಿ ವಿಚಾರಣೆ ನ್ಯಾಯಾಲಯದಲ್ಲಿತ್ತು.ಆ ವಕೀಲ, ಅವತ್ತಿಗೆ ರಾಜ್ಯದಲ್ಲಿ ಗೃಹ ಸಚಿವರಾಗಿದ್ದ ಪ್ರಭಾವಿ ರಾಜಕಾರಣಿಯೊಬ್ಬರ ಅಪೇಕ್ಷೆಗೆ ವಿರುದ್ದವಾಗಿ ಮೆಡಿಕಲ್ ವಿದ್ಯಾಸಂಸ್ಥೆ ತೆರೆಯುವ  ಎದುರು ಪಾರ್ಟಿದಾರರ ಪರ ವಕಾಲತ್ತು ಹಾಕಿ ಆರಂಭದಲ್ಲೆ ಯಶಸ್ವಿಯಾಗಿ ಬಿಟ್ಟಿದ್ದ. ರಶೀದ್ ಶವವಾಗಿ ಪತ್ತೆಯಾಗುತ್ತಲೇ ರಾಷ್ಟ್ರಾಧ್ಯಂತ ಸುದ್ದಿಯಾಗಿದ್ದ ಆ ಪ್ರಕರಣದ ಅನುಮಾನದ ಎಳೆಗಳು ವೃತ್ತಿ ಪರ ವಿದ್ಯಾಸಂಸ್ಥೆಗಳ ಒಡೆಯ, ಪ್ರಭಾವಿ ರಾಜಕಾರಣಿ, ಸರ್ಕಾರದ ಗೃಹ ಸಚಿವ ಆರ್ ಎಲ್ ಜಾಲಪ್ಪ ಕಡೆಗೆ ತಿರುಗಿತ್ತು. 
   ರಾಜ್ಯ ಸರ್ಕಾರದ ಗೃಹ ಸಚಿವರು ಮತ್ತು ಪೋಲೀಸರ ವಿರುದ್ದವೇ ಅನುಮಾನಗಳು ಸಾರ್ವತ್ರಿಕವಾಗಿ ಹೊಗೆಯಾಡಲಾರಂಭಿಸಿ ವಕೀಲರು, ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇಕ್ಕಟ್ಟಿಗೆ ಸಿಲುಕಿದ್ದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಪ್ರಕರಣವನ್ನು ಸಿಬಿಐ ಗೆ ವರ್ಗಾಯಿಸಿದ್ದರು. ಅಸಲಿಗೆ ಅವತ್ತು ಆ ಪ್ರಕರಣದಲ್ಲಿ ಆಗಿದ್ದೇನು? 
ಈಡಿಗ ಸಮುದಾಯದ ಪ್ರಭಾವಿ ರಾಜಕಾರಣಿ ವೃತ್ತಿ ಪರ ಶಿಕ್ಷಣ ಸಂಸ್ಥೆಗಳ ಒಡೆಯರಾಗಿದ್ದ ಗೃಹ ಸಚಿವ ಆರ್ ಎಲ್ ಜಾಲಪ್ಪ ಕೋಲಾರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ತೆರೆಯಲು ಅರ್ಜಿ ಗುಜರಾಯಿಸಿದ್ದರು.ಅದೇ ವೇಳೆಗೆ ಕೇರಳ ರಾಜ್ಯದ ಉದ್ಯಮಿ ಪಿ ಸದಾಶಿವನ್ ಕೂಡ ಕೋಲಾರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ತೆರೆಯಲು ಅರ್ಜಿ ಹಾಕಿದ್ದರು. ಇದು ಗೃಹ ಸಚಿವ ಆರ್ ಎಲ್ ಜಾಲಪ್ಪನವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.  ಈ ಸಂಧರ್ಭದಲ್ಲಿ ಸದಾಶಿವನ್ ರ ಟ್ರಸ್ಟ್ ನಲ್ಲಿ ಉಂಟಾಗಿದ್ದ ವ್ಯಾಜ್ಯವೊಂದನ್ನು ನಿಭಾಯಿಸಲು ವಕೀಲ ಅಬ್ದುಲ್ ರಶೀದ್ ನನ್ನು ರಾಜ್ಯಕ್ಕೆ ಕರೆಸಲಾಗಿತ್ತು. 
         ಜವಾಹರ್ ಭಾರತಿ ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಸದಾಶಿವನ್ ನಡೆಸುತ್ತಿದ್ದ ರಾಜೀವ್ ಗಾಂಧಿ ಎಜುಕೇಶನ್ ಕಾಲೇಜಿನ ಬಿಎಡ್ ಸಂಸ್ಥೆಯ ಪ್ರಾಂಶುಪಾಲೆಯಾಗಿದ್ದ ಮಹಿಳೆ ರತ್ನ. ಸದಾಶಿವನ್ ಟ್ರಸ್ಟ್ ನಲ್ಲಿ ಉಂಟಾದ ಭಿನ್ನಮತದಿಂದ ಸದಸ್ಯರಾದ ಮರಿಯಪ್ಪ ಮತ್ತು ಶ್ರೀನಿವಾಸನ್, ಸದಾಶಿವನ್ ವಿರುದ್ದ ವ್ಯಾಜ್ಯ ದಾಖಲಿಸಿದ್ದರು. ಇದೇ ವೇಳೆಗೆ ರತ್ನಳನ್ನು ಸದಾಶಿವನ್ ಪ್ರಾಂಶುಪಾಲೆ ಹುದ್ದೆಯಿಂದ ತೆರವು ಗೊಳಿಸಿ ಬಿಟ್ಟರು. ಆದರೆ ಶ್ರೀನಿವಾಸನ್ ಮತ್ತು ಮರಿಯಪ್ಪ ಪ್ರಾಂಶುಪಾಲೆ ಹುದ್ದೆಯಿಂದ ತೆರವಾದ ರತ್ನಳ ಪರವಾಗಿ ನಿಂತರು. ಸಹಾಯಕ್ಕಾಗಿ ಯಾಚಿಸಿ ಎದುರಾಳಿಯಾಗಿದ್ದ ಗೃಹ ಸಚಿವ ಆರ್ ಎಲ್ ಜಾಲಪ್ಪ ಬಳಿ ಕರೆದೊಯ್ದು  ಅಳಲು ತೋಡಿಕೊಂಡರು, ಸಹಾಯಕ್ಕಾಗಿ ಕೋರಿದರು. ವೃತ್ತಿ ಶಿಕ್ಷಣ ಕಾಲೇಜು ತೆರೆಯಲು ಪ್ರತಿಸ್ಪರ್ಧಿಯಾಗಿದ್ದ ಸದಾಶಿವನ್ ರನ್ನು ಹಿಮ್ಮೆಟ್ಟಿಸಲು ಇದನ್ನು ದಾಳವಾಗಿ ತೆಗೆದುಕೊಂಡ ಜಾಲಪ್ಪ, ಅಂದಿನ ಬೆಂಗಳೂರು ಡಿಸಿಪಿ ನಾರಾಯಣನ್ ರನ್ನು ಕರೆದು ಸದಾಶಿವನ್ ಪರ ವಕಾಲತ್ತು ವಹಿಸಿರುವ ವಕೀಲ ರಶೀದ್ ಗೆ ಸರಿಯಾದ ಪಾಠ ಕಲಿಸಲು ಸೂಚಿಸಿ ಬಿಟ್ಟರು. ಡಿಸಿಪಿ ನಾರಾಯಣನ್ ಆ ಕೆಲಸವನ್ನು ಸಬ್ ಇನ್ಸ್ ಪೆಕ್ಟರ್ ಉತ್ತಪ್ಪ ಎಂಬಾತನಿಗೆ ವಹಿಸಿದರು. 
         ಸದಾಶಿವನ್ ರ ವಿದ್ಯಾ ಸಂಸ್ಥೆಯಲ್ಲಿ ಹೊಸದಾಗಿ ನೇಮಕಗೊಂಡಿದ್ದ ಪ್ರಾಂಶುಪಾಲರಿಗೆ ಅಧಿಕಾರ ವಹಿಸುವಂತೆ ರತ್ನ ರಿಗೆ ಒತ್ತಡ ಹೇರುತ್ತಿದ್ದ ವಕೀಲ ರಶೀದ್ ನನ್ನು ಪೋಲೀಸರು ಬಂಧಿಸಿ ಕರೆದೊಯ್ದರು ಮತ್ತು ಆತನ ಮೇಲೆ ಅತ್ಯಾಚಾರ ಮತ್ತು ಹಿಂಸೆ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಬಿಟ್ಟರು. ಅಂದಿನ ನ್ಯಾಯಾಧೀಶ ಗೋಪಾಲಗೌಡರ ಮುಂದೆ ಹಾಜರು ಪಡಿಸಿದ್ದರು. ಆಗ ಪೋಲೀಸರಿಂದ ತನಗಾದ ಹಿಂಸೆಯನ್ನು ವಿವರಿಸಿದ ರಶೀದ್ ತನಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು. ಸದಾಶಿವನ್ ತನ್ನ ವಕೀಲನಿಗೆ ಬೈಲ್ ಕೊಡಿಸುವಲ್ಲಿ ಯಶಸ್ವಿಯಾದರು. ಆಗಸ್ಟ್ 16,1987 ಬೆಂಗಳೂರು ನಗರದ ಸಂದ್ಯಾ ಲಾಡ್ಜ್ ನ್ಲಲಿ ತಂಗಿದ್ದ ವಕೀಲ ರಶೀದ್ ನನ್ನು ಮತ್ತೆ ಅನಾಮತ್ತಾಗಿ ವಶಕ್ಕೆ ತೆಗೆದುಕೊಂಡ ಪೋಲೀಸರ್ ಸ್ವಸ್ತಿಕ ಸಿನಿಮಾ ಥಿಯೇಟರ್ ನ ಸಮೀಪದ ಸತ್ಯಪ್ರಕಾಶ್ ವಸತಿ ಗೃಹದ ಕೊಠಡಿ ಸಂಖ್ಯೆ 11ರಲ್ಲಿ ಕೂಡಿ  ಹಾಕಿ ಮನಬಂದಂತೆ ಥಳಿಸಿದರು, ಪೋಲೀಸರ ಹೊಡೆತಕ್ಕೆ ಸಿಲುಕಿ ನಲುಗಿದ ವಕೀಲ ರಶೀದ್ ಸ್ಥಳದಲ್ಲೇ ಸತ್ತು ಹೋಗಿ ಬಿಟ್ಟ.ಮದ್ಯ ರಾತ್ರಿಯ  ನಂತರ ರಶೀದ್ ನ ಶವವನ್ನು ಅಂದಿನ ರೌಡಿ ಶೀಟರ್ ಗಳಾದ ಗೋವಿಂದ ಪ್ರಸಾದ್, ಪಾಂಡಿಯನ್, ಶಿವಕುಮಾರ್ ಮತ್ತು ರಂಗನಾಥ್ ಜೊತೆ ಪೋಲೀಸರು  ಕಾರಿನಲ್ಲಿ ಹಾಕಿಕೊಂಡು ಸೇಲಂ ಜಿಲ್ಲೆಯ ಡ್ಯಾನಿಶ್ ಪೇಟೆಯ ರೈಲ್ವೇ ಹಳಿಗಳ ಬಳಿ ಬಿಸಾಡಿ ಬಿಟ್ಟರು. 
       ಮರುದಿನ ಸೇಲಂ ಪೋಲೀಸರು ಶವವನ್ನು ಕಂಡು ಪ್ರಕರಣ ದಾಖಲಿಸಿದರು, ಶವ ರಶೀದ್ ನದ್ದೇ ಎಂಬುದು ಅಷ್ಟೊತ್ತಿಗಾಗಲೇ  ಗೊತ್ತಾಗಿ ಹೋಗಿತ್ತು. ಆತನ ವಿರುದ್ದ ಅತ್ಯಾಚಾರ ಪ್ರಕರಣ ಇದ್ದುದು, ಪೋಲೀಸ್ ಕಸ್ಟಡಿಯಿಂದ ಬಿಡುಗಡೆ ಹೊಂದಿದ್ದ ರಶೀದ್ ಬರ್ಭರವಾಗಿ ಕೊಲೆಯಾಗಿ ಹೋದಾಗ ಇಡೀ ವಕೀಲ ಸಮೂಹವೇ ಬೆಚ್ಚಿ ಬಿದ್ದಿತ್ತು. ಇಡೀ ಪ್ರಕರಣದ ಕೇಂದ್ರ ಬಿಂದು ಪೋಲೀಸರೇ ಆಗಿದ್ದರು. ವಕೀಲರು ಸಭೆ ಸೇರಿ ರಾಜ್ಯದಾಧ್ಯಂತ ಹರತಾಳ, ಪ್ರತಿಭಟನೆ ಶುರು ಮಾಡಿದರು. ರಾಷ್ಟ್ರ ಮಟ್ಟದಲ್ಲಿ ಪ್ರಕರಣ ಪ್ರತಿಧ್ವನಿಸಿತು. ದಿನಗಳು ಕಳೆದಂತೆ ಪ್ರಕರಣ ಗೃಹ ಸಚಿವರ ಆರ್ ಎಲ್ ಜಾಲಪ್ಪನವರನ್ನೆ ಸುತ್ತಿಕೊಂಡಿತು. ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಇಡೀ ಪ್ರಕರಣವನ್ನು ಸಿಬಿಐ ಗೆ ವಹಿಸಿತು. ಹಲವು ವರ್ಷಗಳ ನಂತರ ಪ್ರಕರಣ ಸಾಬೀತಾಗಿ ಅಂತ್ಯ ಕಂಡಿತು. 
       ಇವತ್ತು ನಮ್ಮ ಮುಂದೆ ಹೆಚ್ಚು ಕಡಿಮೆ ಅದೇ ಮಾದರಿಯ ಪ್ರಕರಣವೊಂದು ರಾಜ್ಯದಲ್ಲಿ ಜರುಗಿದೆ. ದಕ್ಷ ಹಾಗೂ ಪ್ರಾಮಾಣಿಕ ಅದಿಕಾರಿಯೆಂದೇ ಹೆಸರು ಮಾಡಿದ್ದ ಐ ಎ ಎಸ್ ಅದಿಕಾರಿ ಡಿ ಕೆ ರವಿಯ ಸಾವು ಸದ್ಯಕ್ಕೆ ಉತ್ತರ ಸಿಗದ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ರವಿಯ ಸಾವಿನ ನಂತರದ ಅಷ್ಟೂ ಘಟನೆಗಳು ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಿವೆ. ಪ್ರಕರಣದ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಹಿತಾಸಕ್ತಿ ರಾಜಕೀಯ ಮಾಡುತ್ತಿವೆ. ರಾಜ್ಯ ಸರ್ಕಾರ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುವ ಮೂಲಕ ಸಾರ್ವತ್ರಿಕ ವಿಶ್ವಾಸವನ್ನು ಕಳೆದು ಕೊಳ್ಳುತ್ತಿದೆ. ಅನಮಾನಸ್ಪದವಾಗಿ ಸತ್ತ ರವಿಯ ತೇಜೋವಧೆಗೆ ಸರ್ಕಾರ ಮುಂದಾಗಿದೆ. ವ್ಯಕ್ತಿಯೋರ್ವನ ಸಾವಿಗೆ ಸಂಬಂಧಿಸಿದ ಸಂಗತಿಗಳು ತನಿಖೆಯ ನಂತರ ಹೊರಬೀಳಬೇಕು ಆದರೆ ಅದಕ್ಕೆ ಮುನ್ನವೇ ಮಾಧ್ಯಮಗಳ ಮೂಲಕ ತನಿಖಾ ವರದಿಗಳು ಮತ್ತಿತರ ವಿವರಗಳು ಹೊರಬೀಳುತ್ತಿವೆಯೆಂದರೆ ರಾಜ್ಯದ ಪೋಲೀಸ್ ವ್ಯವಸ್ಥೆಯ ಮೇಲೆ ಅದಿನ್ನೆಂತಹ ವಿಶ್ವಾಸ ಇಡುತ್ತಾರೆ ರಾಜ್ಯದ ಜನತೆ? ರವಿಯ ಖಾಸಗಿ ಬದುಕು ಏನೇ ಆಗಿರ ಬಹುದು ಆದರೆ ಅದಕ್ಕೂ ಸಾವಿಗೂ ಸಂಪರ್ಕಿಸುವ ಮೂಲಕ ಅಸಲಿ ಅನುಮಾನದ ದಿಕ್ಕುಗಳನ್ನು ಸರ್ಕಾರ ತಪ್ಪಿಸಲು ಹೊರಟಂತಿದೆ. ಇವತ್ತು (ಮಾ.23,2015) ರಾಜ್ಯ ಸರ್ಕಾರ ಅಧಿವೇಶನದಲ್ಲಿ ಸಿಓಡಿ ತನಿಖೆಯ ಮದ್ಯಂತರ ವರದಿಯನ್ನು ಪ್ರಕಟಿಸಲಿದೆ ನಂತರ ಸಿಬಿಐ ಗೆ ಪ್ರಕರಣವನ್ನು ದಾಟಿಸಲಿದೆ. 
       ಪ್ರಕರಣದ ನೈಜತೆ ತಿಳಿಯಬೇಕಾದರೆ ಸರ್ಕಾರ ಸಿಓಡಿ ವರದಿಯನ್ನು ಸದನದಲ್ಲಿ ಮಂಡಿಸದೇ ತತ್ ಕ್ಷಣದಿಂದಲೇ ಪ್ರಕರಣವನ್ನು ಬೇಷರತ್ತಾಗಿ ಸಿಬಿಐ ಗೆ ವಹಿಸಿದರೆ ಸರ್ಕಾರದ ಮೇಲಿನ ಗೌರವ ಉಳಿಯುತ್ತದೆ ಇಲ್ಲವೇ ಸರ್ಕಾರವೂ ಕೂಡ ರವಿ ಸಾವಿನ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡ ಅಪಕೀರ್ತಿಗೆ ಪಾತ್ರವಾಗಲಿದೆ ಅಲ್ಲವೇ? 

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...