ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತಿದೆ. ಹೀಗೆ ತೆಗೆಯುವಾಗ ಬಯಾಸ್ಡ್ ಆಗಿಯೂ ತೆಗೆಯಲಾಗುತ್ತಿದೆ ಎಂಬ ಮಾಹಿತಿ ಇದೆ. ಟೀಂ ಜೊತೆ ಗುರುತಿಸಿಕೊಂಡು ಬಂದವರ ಕಥೆ ಅಷ್ಟೇ!
ಮಾಧ್ಯಮ ಉದ್ಯಮದ ಸ್ವರೂಪ ಪಡೆದು ಕೊಂಡಿದೆ, ಆದರೆ ಉದ್ದಿಮೆಗಳು ಕಡ್ಡಾಯವಾಗಿ ಪಾಲಿಸ ಬೇಕಾದ ಕಾನೂನು ನಿಯಮಗಳನ್ನು ಪಾಲಿಸದಿರುವುದು ಪತ್ರಕರ್ತರ ಅಸ್ಥಿರತೆಗೆ ಕಾರಣವಾಗಿದೆ. ರಾಜಕಾರಣಿಗಳು, ಬೃಹತ್ ಬಂಡವಾಳಷಾಹಿಗಳು, ರಿಯಲ್ ಎಸ್ಟೇಟ್ ಕುಳಗಳು ಸ್ವಾರ್ಥ ಹಿತಾಸಕ್ತಿ ಸಾಧನೆಗಾಗಿ ಮಾಧ್ಯಮದ ಅಂಗಡಿಗಳನ್ನು ತೆರೆದು ಪತ್ರಿಕೋಧ್ಯಮಕ್ಕೆ ಕಳಂಕ ತಂದಿರುವುದು ಗುಟ್ಟಾಗಿ ಉಳಿದಿರುವ ಸಂಗತಿಯೇನಲ್ಲ. ಅವರಿಗೆ ಬೇಡವೆನಿಸಿದಾಗ ಮಾಧ್ಯಮದ ಅಂಗಡಿಯ ಬಾಗಿಲೆಳೆದು ಬಿಡುತ್ತಾರೆ, ಪತ್ರಕರ್ತ ಅಸಹಾಯಕನಾಗಿ ಬೀದಿಗೆ ನಿಲ್ಲುತ್ತಾನೆ. ಒಂದು ಮೋಟಾರ್ ಕಂಪನಿ, ವಾಚ್ ಕಂಪನಿ ಬಾಗಿಲು ಹಾಕಿಕೊಂಡರೆ ಅಲ್ಲಿನ ಕಾರ್ಮಿಕರಿಗೆ ಸ್ವಾವಲಂಬನೆಯ ಕಸುಬುದಾರಿಕೆ ಕೈ ಹಿಡಿಯುತ್ತದೆ. ಆದರೆ ವರ್ತಮಾನದ ಪತ್ರಕರ್ತ ಅಕ್ಷರಶಃ ನಡು ರಸ್ತೆಯಲ್ಲಿ ನಿಂತ ಬಾಲಕರಾಗಿ ಬಿಡುತ್ತಾರೆ.
ಈ ಹೊತ್ತಿನಲ್ಲಿ ಅಪಾಯಕ್ಕೆ ಸಿಲುಕಿದವನು ಮಾತ್ರ ಪತ್ರಕರ್ತನೇ ಆಗಿದ್ದಾನೆ. ಊರಿನ ಉಸಾಬರಿಗೆ ತಲೆ ಕೆಡಿಸಿಕೊಂಡು ನ್ಯಾಯ ಒದಗಿಸಲು ಪರದಾಡುವವನಿಗೆ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅಸಹಾಯಕನಾಗಿ ಬಿಡುತ್ತಾನೆ. ಒಂದು ದಶಕದಲ್ಲಿ ಪತ್ರಕರ್ತ ವೃತ್ತಿಗೆ ತಿಲಾಂಜಲಿ ಹಾಡಿ ಕರಿಕೋಟು ಹಾಕುವ ವಕೀಲರಾಗಿ, ಎಂಎನ್ ಸಿಗಳಲ್ಲಿ, ಸರ್ಕಾರಿ ವ್ಯವಸ್ಥೆಯಲ್ಲಿ ವೃತ್ತಿ ಸಂಬಂದಿತ ಉದ್ಯೋಗ ಹುಡುಕಿಕೊಂಡ ಬುದ್ದಿವಂತ ಪತ್ರಕರ್ತರನ್ನು ಗಮನಿಸಿದ್ದೇನೆ.
ಆದರೆ ಹಳೇ ತಲೆಮಾರು, ಹೊಸ ತಲೆಮಾರುಗಳ ವರದಿಗಾರ/ಸಂಪಾದಕ/ಕಾಪಿ ಎಡಿಟರ್/ನ್ಯೂಸ್ ಹೆಡ್ ಎಂಬ ಪದನಾಮಗಳಿಂದ ಆಚೆಗೆ ನೋಡಿಲ್ಲ. ಪತ್ರಕರ್ತ ತನ್ನ ಸಾಮರ್ಥ್ಯ ಕ್ಕೆ ಅನುಗುಣವಾಗಿ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳ ಬೇಕಾಗಿದೆ. ಜರ್ನಲಿಸಂ ಎಂದಾಕ್ಷಣ ಅದು ಟಿವಿ ರಿಪೋರ್ಟಿಂಗ್, ಕೆಮರಾಮ್ಯಾನ್, ಪತ್ರಿಕೆ ವರದಿಗಾರನೇ ಆಗಬೇಕಿಲ್ಲ ಅಲ್ಲವೇ? ನನ್ನ ಅನುಭವದ ಪ್ರಕಾರ ಇದಿಷ್ಟೆ ಚಿಂತಿಸುವ ಕ್ರಮವನ್ನು ಬಾವಿಯೊಳಗಿನ ಕಪ್ಪೆಯ ಮನಸ್ಥಿತಿ ಎನ್ನಬಹುದು.
ಕಾಲಕ್ಕನುಗುಣವಾಗಿ ಆಗುತ್ತಿರುವ ಬದಲಾವಣೆಗಳು, ಮಾರುಕಟ್ಟೆಯ ಆದ್ಯತೆ, ಅಲ್ಲಿ ಸೃಷ್ಟಿಯಾಗುತ್ತಿರುವ ಅವಕಾಶಗಳನ್ನು ಗ್ರಹಿಸುವ ಶಕ್ತಿಯನ್ನು ಪತ್ರಕರ್ತರು ಕಳೆದು ಕೊಂಡಿದ್ದಾರೆ. ಇದು ನವೋದ್ಯಮಗಳ ಕಾಲ, ಈ ಸಂದರ್ಭದಲ್ಲಿ ಪತ್ರಕರ್ತ ಕಣ್ಣೋಟ ಏನಿರ ಬೇಕು, ಪರ್ಯಾಯಗಳನ್ನು ಹುಡುಕುವುದು ಹೇಗೆ ಎಂಬುದನ್ನು ಕಂಡುಕೊಳ್ಳದ ಹೊರತು ಪತ್ರಕರ್ತರು ಖಂಡಿತಾ ಉದ್ದಾರ ಅಗುವುದಿಲ್ಲ.
ಮುದ್ರಣ ಮಾಧ್ಯಮ/ದೃಶ್ಯ ಮಾಧ್ಯಮಗಳು (ಸುದ್ದಿ ಮಾಧ್ಯಮಗಳು ಮಾತ್ರ) ಲಾಭದಾಯಕವಾಗಿ ನಡೆಯುತ್ತಿಲ್ಲ. ಅವು ಅಸ್ತಿತ್ವ ಉಳಿಸಿಕೊಳ್ಳಲು ಏನು ಮಾಡುತ್ತಿವೆ ಸೂಕ್ಷ್ಮ ವಾಗಿ ಗಮನಿಸಿ. ಪ್ರಜಾವಾಣಿ/ಡೆಕ್ಕನ್ ಹೆರಾಲ್ಡ್, ಟೈಮ್ಸ್ ಆಫ್ ಇಂಡಿಯಾ, ಪಬ್ಲಿಕ್ ಟಿವಿಯಂತಹ ಬೆರಳೇಣಿಕೆಯ ಕಂಪನಿ ಗಳು ಮಾತ್ರ ಶತಾಯ ಗತಾಯ ಉಳಿವಿಗೆ ಈಗಾಗಲೆ ಇಂತಹ ಪ್ರಯತ್ನ ಮಾಡುತ್ತಿವೆ. ಅವರ ಪ್ರಯತ್ನಕ್ಕೆ ಸಾಥ್ ನೀಡುವ ಸಂಪನ್ಮೂಲವಿದೆ ಆದರೆ ಸಂಪನ್ಮೂಲ ವ್ಯಕ್ತಿಗಳೇ ಸಿಗುತ್ತಿಲ್ಲ. ಅಲ್ಲಿ ನವೋದ್ಯಮದ ಕೆಲಸಗಳು ಖಾಲಿ ಇವೆ! ಇದು ಎಷ್ಟು ಜನರ ಅರಿವಿಗೆ ಬಂದಿದೆ?
ಎಂ ಎನ್ ಸಿ ಗಳು, ಸರ್ಕಾರಿ ಇಲಾಖೆಗಳು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳಲು ಪ್ರಯತ್ನಿಸುತ್ತಿವೆ, ಹೊಸ ಹೊಸ ವೃತ್ತಿ ಅವಕಾಶಗಳು ತೆರೆದು ಕೊಂಡಿವೆ. ಎಷ್ಟು ಮಂದಿಗೆ ಇದು ಗೊತ್ತಿದೆ? ನಾವೇ ಸೃಷ್ಟಿಸುವ ಸೃಜನಶೀಲ ಕಸುಬುದಾರಿಕೆಗಳು ಇವೆ. ವೃತ್ತಿ ಜೀವನದಲ್ಲಿ ಬರಿಯ ಜಾಹೀರಾತು, ಶಹಬ್ಬಾಸ್ ಗಿರಿ, ಗೌರವ ಇಟ್ಟುಕೊಂಡು ಏನ್ ಮಾಡ್ತೀರಿ? ಬದುಕಿಗೆ ಅದು ಸ್ಥಿರತೆ ಒದಗಿಸುತ್ತಾ? ಸಹದ್ಯೋಗಿಗಳನ್ನೆ ಗೇಲಿಮಾಡಿಕೊಂಡು, ಬದುಕುವುದನ್ನೆ ಸಹಿಸದೇ ಅಸೂಯೆ ಬೆಳೆಸಿಕೊಂಡು, ದ್ವೇಷಿಸಿಕೊಂಡು, ಬಕೆಟ್ ಹಿಡಿದುಕೊಂಡು ಬದುಕುವ ಬದುಕು ಒಂದು ಬದುಕೆ? ಈಗಲಾದರೂ ಎಚ್ಚೆತ್ತುಕೊಳ್ಳಿ ವೃತ್ತಿ ಜೀವನಕ್ಕೆ ಪರ್ಯಾಯ ಕಂಡುಕೊಳ್ಳಿ, ಯೋಜನೆ ಮಾಡಿ.
ಪತ್ರಕರ್ತರ ಕ್ಷೇಮಾಭಿವೃದ್ದಿಗೆ ಚಿಂತಿಸುವ ಕೆಲಸವನ್ನು, ಪರ್ಯಾಯ ಸಾಧ್ಯತೆಗಳನ್ನು ತಿಳಿಸುವ ಕೆಲಸವನ್ನು ಮಾಧ್ಯಮ ಅಕಾಡೆಮಿ ಮಾಡಬೇಕು. ಆದರೇನು ಮಾಡುವುದು ಅಲ್ಲಿ ಬಂದು ಕೂರುವವರಲ್ಲಿಯೇ ಹೊಸ ಹೊಳಹುಗಳಿಲ್ಲ, ಇಚ್ಛಾಶಕ್ತಿ ಕೊರತೆ. ಹೀಗಿರುವಾಗ ಪತ್ರಕರ್ತರನ್ನ ಅವರವರು ನಂಬಿಕೊಂಡ ದೇವರೇ ಕಾಪಾಡ ಬೇಕಷ್ಟೇ!