Friday, November 20, 2009

ಪೊಲೀಸರ ರಕ್ಷಣೆಯಲ್ಲಿ ಪತ್ರಕರ್ತ ಇರಬೇಕಾ??

ಕಳೆದ ಕೆಲವು ತಿಂಗಳಿಂದ 'ವಿಜಯ ಕರ್ನಾಟಕ' ದಿನಪತ್ರಿಕೆಯಲ್ಲಿ, ವೃತ್ತಿಯಲ್ಲಿ ನಾನು ಕೈಗೊಂಡಿರುವ ಕ್ರಮ ಮತ್ತು ಬೆಂಗಳೂರು ಪೊಲೀಸ್ ಇಲಾಖೆಯ ಕಾರ್ಯ ನಿರ್ವಹಣೆ ಕುರಿತು ಹಲವಾರು ಪ್ರತಿಕೂಲ ವರದಿಗಳು ಪ್ರಕಟವಾಗಿರುತ್ತವೆ. ಬೆಂಗಳೂರು ಆವೃತ್ತಿಯ(ದಿ:17/11/2009 ರ ವಿ.ಕ) ಪುಟಗಳಲ್ಲಿ "ಕಾನೂನು ಎಷ್ಟಕ್ಕೆ ಬಿಕರಿಯಾಗಿತ್ತು ಹೇಳಿ ಬಿದರಿಯವರೇ? ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿರುವ ಲೇಖನವನ್ನು ಗಮನಿಸಿದ್ದೇನೆ. ನೀವು ದಿ.30/06/2009 ರಂದು ತಮ್ಮ ಅಂಗರಕ್ಷಕರನ್ನಾಗಿ ಪೊಲೀಸರನ್ನು ನಿಯೋಜಿಸಲು ಅರ್ಜಿ ಸಲ್ಲಿಸಿರುವುದು ಸರಿಯಷ್ಟೇ. ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಿ , ವರದಿಯ ಆಧಾರದ ಮೇಲೆ ನಿಮಗೆ ಪೊಲೀಸ್ ಅಂಗರಕ್ಷಕರನ್ನು ನಿಯೋಜಿಸುವುದು ಸರಿಯಲ್ಲ ಎಂಬ ನಿರ್ದಾರಕ್ಕೆ ನಾನು ಬಂದಿರುವ ವಿಷಯ ನಿಮಗೆ ಗೊತ್ತಿದೆ. ಈ ಬಗ್ಗೆ ತಮ್ಮ ಪತ್ರಿಕಾ ವರದಿಗಾರರು ಮತ್ತು ಹಲವು ಉನ್ನತ ಮೂಲಗಳಿಂದ ಸಾಕಷ್ಟು ಒತ್ತಡ ಬಂದಿದ್ದರೂ ನಾನು ನನ್ನ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಈ ಕಾರಣದಿಂದಲೇ ಕೆಲವು ತಿಂಗಳಿನಿಂದ ನಾನು ಕೈಗೊಂಡ ವೃತ್ತಿಪರ ಕ್ರಮಗಳ ಬಗ್ಗೆ ಮತ್ತು ಬೆಂಗಳೂರು ಪೊಲೀಸ್ ಕಾರ್ಯ ನಿರ್ವಹಣೆಯ ಕುರಿತು ಹಲವಾರು ಪ್ರತಿಕೂಲ ವರದಿಗಳು 'ವಿಕ'ದಲ್ಲಿ ಪ್ರಕಟವಾಗಿರುತ್ತವೆ. ಮತ್ತು ಈ ಲೇಖನವೂ ಸಹಾ ಅದೇ ಕಾರಣದಿಂದ ಪ್ರಕಟವಾಗಿದೆ ಎಂದು ನಾನು ನಂಬಲು ಬಲವಾದ ಕಾರಣಗಳಿವೆ. ಆದರೂ ಸಹಿತ ಪತ್ರಿಕಾ ಧರ್ಮವನ್ನು ತಿಳಿದಿರುವ ತಾವು, ಈ ತರಹದ ಕೃತ್ಯವನ್ನು ಎಸಗುವುದಿಲ್ಲ ಎಂದು ನಂಬಲು ಪ್ರಯತ್ನಿಸುತ್ತಿದ್ದೇನೆ.
ಈ ನನ್ನ ಪ್ರತಿಕ್ರಿಯೆಯಿಂದ ತಮ್ಮ ಪತ್ರಿಕೆಯಲ್ಲಿ ತಾವು ಸಾಕಷ್ಟು ವಿವಾದಗಳನ್ನು ಸೃಷ್ಟಿಸುವ ಮತ್ತು ಪ್ರತಿಕೂಲ ವರದಿಗಳನ್ನು ಬರೆಯುವ ಸಾಧ್ಯತೆ ಇದೆ ಎಂಬ ಅರಿವು ನನಗೆ ಇದೆ. ಎಂತಹುದೇ ಪ್ರಬಲವಾದ ಪತ್ರಿಕೆಯಾದರೂ ಸಹಿತ ಎಷ್ಟೇ ಪ್ರತಿಕೂಲ ವರದಿಗಳನ್ನು ಪ್ರಕಟಿಸಿದರೂ , ರಾಜ್ಯದ ಜನತೆಯು ಸಾಕಷ್ಟು ವಿವೇಚನೆಯಿಂದ ಮತ್ತು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸತ್ಯವನ್ನು ತಿಳಿಯಲು ಶಕ್ತರಾಗಿದ್ದಾರೆ ಎಂದು ನಾನು ನಂಬಿದ್ದೇನೆ.
ಹಲವಾರು ಕಾರಣಗಳಿಂದಾಗಿ 'ವಿಕ' ದಿನಪತ್ರಿಕೆಯು ಇಂದು ರಾಜ್ಯದ ಪ್ರಮುಖ ದಿನಪತ್ರಿಕೆಯಾಗಿ ಹೊರಹೊಮ್ಮಿದೆ. ಈಗ ಅದು ಶತ ಶತಮಾನಗಳಿಂದ ಪತ್ರಿಕಾ ಧರ್ಮವನ್ನು ಪಾಲಿಸಿಕೊಂಡು ಬಂದಿರುವ ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಸೇರಿದೆ. ಪ್ರತಿಷ್ಟಿತ ಮತ್ತು ಗೌರವಾನ್ವಿತ ಪತ್ರಿಕಾ ಸಮೂಹವಾದ ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಸೇರಿರುವ 'ವಿಕ' ಪತ್ರಿಕೆ ಪತ್ರಿಕಾ ಧರ್ಮಕ್ಕೆ ಅನುಗುಣವಾಗಿ ನಡೆಯಲಿ ಎಂದು ಆಶಿಸುತ್ತೇನೆ. ಹೀಗೊಂದು ಸುದೀರ್ಘ ಪತ್ರವನ್ನು 'ವಿಕ'ದ ಸಂಪಾದಕ ವಿಶ್ವೇಶ್ವರ ಭಟ್ ಗೆ ಬರೆದದ್ದು ಬೆಂಗಳೂರು ನಗರದ ಪೊಲೀಸ್ ಆಯುಕ್ತ ಶಂಕರ ಬಿದರಿ. ಎಲ್ಲರಿಗೂ ತಿಳಿದಂತೆ ಪತ್ರಿಕಾ ಲೋಕದಲ್ಲಿ ಸಂಚಲನ ಹುಟ್ಟಿಸಿದ್ದು, ಕಾಲಾನುಕೂಲಕ್ಕೆ ಬದಲಾಗುತ್ತಾ(ಮುಖಪುಟ, ವಿನ್ಯಾಸ, ಸುದ್ದಿಗಳು ಲೇಖನಗಳು) ಓದುಗರಿಗೆ ಹೊಸತನದ ಮುದ ನೀಡಿತು. ಆ ಮೂಲಕ ಜಡ್ಡು ಕಟ್ಟಿದ ಕನ್ನಡ ಪತ್ರಿಕೋಧ್ಯಮಕ್ಕೂ ಚುರುಕು ಮುಟ್ಟಿಸಿತು. ಪರಿಣಾಮ ಪ್ರಜಾವಾಣಿಯಂತಹ ಪತ್ರಿಕೆ ಕೂಡ ಬದಲಾವಣೆಗೆ ಸಿದ್ಧವಾಯಿತು. ಶತಮಾನದ ಕುರುಹುವಾಗಿರುವ 'ಸಂಯುಕ್ತ ಕರ್ನಾಟಕ' ಪತ್ರಿಕೆ ಸಹಾ ಹೊಸ ವಿನ್ಯಾಸ ಪಡೆಯಿತು. 'ಕನ್ನಡ ಪ್ರಭ'ದ ಮುಖಪುಟದ ಸುದ್ದಿ ಬಿಟ್ಟು ಒಳಗಿನದೆಲ್ಲಾ ಅಜೀರ್ಣವೇ ಸರಿ. ಇಂತಹ ಸನ್ನಿವೇಶದಲ್ಲಿ 'ಟೈಮ್ಸ್ ಆಫ್ ಇಂಡಿಯಾ' ದ ಬೆಂಗಳೂರು ಟೈಮ್ಸ್ ಪುಟದ ಅನುಕರಣೆ ಲವಲವಿಕೆಯೊಂದಿಗೆ 'ವಿಜಯ ಕರ್ನಾಟಕ' ಮತ್ತೊಮ್ಮೆ ಹೊಸ ರೂಪ ತಂದಿದೆ, ಪತ್ರಿಕೆಯ ಅಂಕಣಗಳು ಸುದ್ದಿ ವಿಶ್ಲೇಷಣೆಗಳು ಚೆನ್ನಾಗಿವೆ. ಆದರೆ 'ವಿಕ' ಎಲ್ಲೋ ಒಂದು ಕಡೆ ಇನ್ನೂ ಸಂಘ ಪರಿವಾರದ ಮುಖವಾಣಿಯಂತಿದೆ.
ವಿಶ್ವೇಶ್ವರ ಭಟ್ ಚಿಕ್ಕ ವಯಸ್ಸಿಗೆ ಮೀರಿದ ಹಲವು ಸ್ಥಾನಗಳನ್ನೇ ಅಲಂಕರಿಸಿದವರು ನಿರೀಕ್ಷೆಗೂ ಮೀರಿದ ವೇಗದಲ್ಲಿ ಬೆಳೆದವರು ಪತ್ರಿಕೆಯನ್ನು ಬೆಳೆಸಿದ್ದಾರೆ. ಆದರೆ ಪತ್ರಕರ್ತನಿಗಿರುವ ಇಗೋ ಜಾಗೃತಗೊಂಡರೆ ಆಗಬಹುದಾದ ಅನಾಹುತ ಮತ್ತು ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿರಲಾರದು. ನಮ್ಮ ಭಟ್ಟರ ವಿಷಯದಲ್ಲೂ ಇಂತಹ ಇಗೋ ಕೆಲಸ ಮಾಡಿರುವ ಸಾಧ್ಯತೆ ಇದೆ. ಕೇಂದ್ರದಲ್ಲಿ ಮಂತ್ರಿಯಾಗಿದ್ದ ಅನಂತಕುಮಾರ್ ಗೆ ಮಾಧ್ಯಮ ಸಲಹೆಗಾರರಾಗಿದ್ದ ಭಟ್ಟರು, ರಾಷ್ಟ್ರಪತಿ ಅಬ್ದುಲ್ ಕಲಾಂ ಜೊತೆ ವಿದೇಶ ಪ್ರವಾಸದಲ್ಲೂ ಜೊತೆಯಾಗಿದ್ದರಲ್ಲದೇ ಹಲವು ಉತ್ತಮ ಬರಹಗಳನ್ನು, ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಹೆಮ್ಮೆ ಅವರಿಗಿದೆ, ಓದಿದ ಖುಷಿ ನಮಗೂ ಇದೆ!. ಇಂತಿಪ್ಪ ಭಟ್ಟರು ಒಮ್ಮೆ ಅಡ್ವಾಣಿಯವರು ರಾಜ್ಯಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿ ನಡವಳಿಕೆ ಹೇಗಿರಬೇಕು, ಹೇಗೆ ನಡೆದುಕೊಳ್ಳಬೇಕು, ನಮ್ಮವರು ಹೇಗೆ ಸಿಡುಕುತ್ತಾರೆ ಏನೆಲ್ಲ ತಪ್ಪು ಮಾಡುತ್ತಾರೆ ಅದರ ಅಡ್ಡ ಪರಿಣಾಮವೇನು? ಎಂದೆಲ್ಲಾ ವಿವರವಾಗಿ ಬರೆದಿದ್ದರು. ಇದು ಪರೋಕ್ಷಾಗಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಉರಿಹತ್ತುವಂತೆ ಮಾಡಿತ್ತು. ಯಾಕೆಂದರೆ ಭಟ್ಟರ 'ಪೂರ್ವಾಪರ'ಗಳ ಸ್ಪಷ್ಟ ಅರಿವಿದ್ದ ಯಡ್ಡಿ ಸದರಿ ವರದಿಯಿಂದ ಕಂಗೆಟ್ಟು ಭಟ್ಟರಿಗೆ ಫೋನಾಯಿಸಿ ಜನ್ಮ ಜಾಲಾಡಿದ್ದರು. ಭಟ್ಟರಿಗೆ ಬೆವರಿಳಿದಿತ್ತು,(ಭಟ್ಟರು ಅನಂತಕುಮಾರ ಬೆಂಬಲಿಗರು ಅದಕ್ಕೆ ಹೀಗೆಲ್ಲ ಬರೆಯುತ್ತಿರಬಹುದು ಎಂಬು ಅವರ ಸಿಟ್ಟಿಗೆ ಕಾರಣವಾಗಿತ್ತು) ಆದರೆ ವಾಸ್ತವದಲ್ಲಿ ಭಟ್ಟರ ಉದ್ದೇಶ ಆ ರೀತಿ ಇರಲಿಲ್ಲ.
ಕೆಲ ವರ್ಷಗಳ ಹಿಂದೆ 'ಟೈಮ್ಸ್' ಗ್ರೂಪಿಗೆ ಸೇರ್ಪಡೆಗೊಂಡ ನಂತರ 'ವಿಕ'ದ ಖದರ್ರು ಬೇರೆಯಾಗಿದೆ. ಅಂತೆಯೇ ಭಟ್ಟರ ಖದರ್ರು ಸಹಾ. ಆದ್ದರಿಂದಲೇ ಅವರಿಗೆ ಅಂಗರಕ್ಷಕರನ್ನು ಹೊಂದುವ ಐಡಿಯಾ ಹೊಳೆದಿದೆ. ಸರಿ ಅದನ್ನು ಕಾರ್ಯರೂಪಕ್ಕೆ ತರಲು ಶತಾಯ ಗತಾಯ ಪ್ರಯತ್ನಿಸಿದ್ದಾರೆ. ಆದರೆ ಶಿಸ್ತು ಹಾಗೂ ದಿಟ್ಟತನಕ್ಕೆ ಹೆಸರಾದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶಂಕರ ಬಿದರಿಯವರು ಭಟ್ಟರ ಕೋರಿಕೆಯನ್ನು ಸಾರಾ ಸಗಟಾಗಿ ತಿರಸ್ಕರಿಸಿದ್ದಾರೆ. ಇದರಿಂದ ಭಟ್ಟರು ವಿಚಲಿತರಾದಂತಿದೆ. ರವಿಬೆಳಗೆರೆಯಂತಹ ಪತ್ರಕರ್ತರೇ ಆತ್ಮರಕ್ಷಣೆಗಾಗಿ ಪರವಾನಗಿ ಹೊಂದಿದ ಪಿಸ್ತೂಲು ಮತ್ತು ತಮ್ಮ ಪತ್ರಿಕಾ ಕಛೇರಿಗೆ ತಮ್ಮದೇ ಆದ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹಾಗಿರುವಾಗ ಭಟ್ಟರಿಗೆ ಅಂಗರಕ್ಷಕರನ್ನು ಹೊಂದುವ ಅವಸರ ಮತ್ತು ಅವಶ್ಯಕತೆ ಏನಿತ್ತೋ ತಿಳಿಯುತ್ತಿಲ್ಲ. ವಿಶ್ವೇಶ್ವರಭಟ್ಟರು ಪ್ರಾಜ್ಞ ಮನಸ್ಥಿತಿಯ, ಸಂವೇದನಾ ಶೀಲ ಗುಣವುಳ್ಳವರು ಹಾಗಿದ್ದೂ ಹೀಗೇಕೆ ಮಾಡಿಕೊಂಡರೋ ? ಜನಮಾನಸದಲ್ಲಿ ಸ್ಥಾನ ಪಡೆದ ಪತ್ರಿಕೆಗೆ ಜನತೆಯ ಬೆಂಬಲವೂ ಸದಾ ಇರುತ್ತದೆ. ಇಂತಹ ಸನ್ನಿವೇಶದಲ್ಲಿ ಪತ್ರಕರ್ತ ಗಟ್ಟಿಗೊಳ್ಳುತ್ತಾನೆ. ಆತನಿಗೆ ಸಂವಿಧಾನ ರಕ್ಷಣೆ ಬೇಕು. ಅದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಚಿಂತನೆ ನಡೆಯಬೇಕು. ಪತ್ರಕರ್ತರಿಗೆ ಕಾನೂನು ಬೆಂಬಲ ದಕ್ಕಿಸಿಕೊಳ್ಳುವ ಬಗ್ಗೆ ಪ್ರಯತ್ನವಾಗಬೇಕು. ಆದರೆ ತೀರಾ ಪೊಲೀಸ್ ರಕ್ಷಣೆಯಲ್ಲಿ, ಅಂಗರಕ್ಷಕರನ್ನಿಟ್ಟುಕೊಂಡು ಪತ್ರಕರ್ತರು ಓಡಾಡುವಂತಾಗ ಬಾರದು. ಅದು ಪತ್ರಿಕಾ ಧರ್ಮಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯೇ ಸರಿ. ಹಾಗಂತ ಒಂದು ಜನಮಾನಸದ ಪತ್ರಿಕೆಯನ್ನು ವೈಯುಕ್ತಿಕ ವಿಚಾರಕ್ಕೆ ಬಳಸಿಕೊಳ್ಳುವುದು ಖಂಡಿತಾ ಸರಿಯಾದುದಲ್ಲ ಹೌದಲ್ವಾ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...