Sunday, October 28, 2012

ಸ್ವಾಭಿಮಾನವಿದ್ದರೆ ಕನ್ನಡಿಗರಾಗಿ ಬದುಕಿ!


ಮತ್ತೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಬಂದಿದೆ, ಆದರೆ ಸಂಭ್ರಮ ಪಡುವ ಸ್ಥಿತಿಯಲ್ಲಿ ಕನ್ನಡಿಗರಿಲ್ಲ.! ಕನ್ನಡದ ಬಗೆಗಿನ ಪ್ರೀತಿಯಿದ್ದರೂ   ಯಾಂತ್ರಿಕ ಬದುಕಿನಲ್ಲಿ ಅವೆಲ್ಲ ಕಳೆದು ಹೋಗುತ್ತವೆ ಎಂಬುದು ಸತ್ಯ ವಾದರೂ ಅದು ಕನ್ನಡಿಗರ ಪಾಲಿನ ದೌರ್ಬಾಗ್ಯವೂ ಹೌದು.  ದೇಶದಲ್ಲಿ ಒಕ್ಕೂಟ ರಾಜ್ಯ ವ್ಯವಸ್ಥೆ ಬಂದು ಅನಾಮತ್ತು 62ವರ್ಷ ಕಳೆದಿದೆ, ಮೈಸೂರು ಪ್ರಾಂತ್ಯ ಕರ್ನಾಟಕ ರಾಜ್ಯವಾಗಿ ಅಜಮಾಸು 38ವರ್ಷಗಳಾಗಿವೆ ಆದರೆ ಇಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ನೆಲ, ಜಲಕ್ಕೆ ಇನ್ನೂ ನಮ್ಮ ಹೋರಾಟ ಮುಂದುವರೆದಿದೆ! ಇಂತಹ ಪರಿಸ್ಥಿತಿ ನಮಗೆ ಬೇಕಾ? ಯಾಕೆ ಹೀಗಾಯ್ತು ? ಇದನ್ನೆಲ್ಲಾ ನೆನಪಿಸಿಕೊಳ್ಳೋಕೆ ಪ್ರತೀ ಸಲವೂ ಕನ್ನಡ ರಾಜ್ಯೋತ್ಸವವೇ ಬರಬೇಕಾ?ಎಲ್ಲಿಗೆ ಬಂದು ನಿಂತಿದ್ದೇವೆ ನಾವು? ಹೀಗೊಂದು ಪ್ರಶ್ನೆ ನಮ್ಮಲ್ಲಿ ಸಹಜವೇ?

ಪ್ರತೀ ಸಲವೂ ಪ್ರಶ್ನೆಗಳೇನೋ ಇರುತ್ತವೆ ಆದರೆ ಆ ಕ್ಷಣಕ್ಕೆ ಮಾತ್ರ , ಸ್ವಾಭಿಮಾನದ ಕೊರತೆಯೋ ಗೊತ್ತಿಲ್ಲ ಆದರೆ ಜಾಗತೀಕರಣದ ಪ್ರಭಾವ ಕನ್ನಡದ ನೆಲದ ಕಗ್ಗಂಟಿಗೆ ಕಾರಣ ವಾಗಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಉಳಿದಿಲ್ಲ. ಜಾಗತೀಕರಣವೇ ಹಾಗೆ ಕಾಲು ಚಾಚಿದೆಡೆ ಸಂಸ್ಕೃತಿಯ ಮೂಲ ಬೇರನ್ನೆ ಅದು ಕತ್ತು ಹಿಸುಕಿ ಬಿಡುತ್ತದೆ ಮತ್ತು ಒಂದು ದಿನ ಸದ್ದಿಲ್ಲದಂತೆ ಜಾಗ ಖಾಲಿ ಮಾಡಿಬಿಡುತ್ತದೆ. ದೇಶೀಯ ಸಾಂಸ್ಕೃತಿಕ ನೆಲೆಗಟ್ಟನ್ನ ಮಲೀನ ಗೊಳಿಸುತ್ತಿರುವ ಉದಾರೀಕರಣದ ಪ್ರಭಾವ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಾಗಿದ್ದರೆ ಅದು ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ. ಅಲ್ಲೀಗ ಶೇ.30-35 ರಷ್ಟು ಮಾತ್ರ ಕನ್ನಡದ ಮಂದಿ ಸಿಗಲು ಸಾಧ್ಯ ಉಳಿದಂತೆ ವಿವಿಧ ರಾಜ್ಯಗಳ, ದೇಶಗಳ ಮಂದಿ ವಿವಿಧ ಕಾರಣಗಳಿಗಾಗಿ ಎಲ್ಲಡೆಯೂ ನೆಲೆಸಿದ್ದಾರೆ. ಕನ್ನಡ ಭಾಷೆಗೆ 20ಸಾವಿರ ವರ್ಷಗಳ ಪ್ರಾಚೀನ ಇತಿಹಾಸವಿದೆ ರಾಜ್ಯದಲ್ಲಿ ಕನ್ನಡ ಮಾತನಾಡುವ 70ಮಿಲಿಯನ್ ಕನ್ನಡಿಗರಿದ್ದಾರೆಂಬ ಅಂದಾಜಿದೆ, ಹಾಗೆಯೇ ಜಾಗತಿಕವಾಗಿ ಅತೀ ಹೆಚ್ಚು ಮಾತನಾಡುವ 40ಪ್ರಮುಖ ಭಾಷೆಗಳಲ್ಲಿ ಕನ್ನಡಕ್ಕೆ ಮಹತ್ವದ ಸ್ಥಾನವಿದೆ. ಅಂತಹ ಸಮೃದ್ದ ನುಡಿ ಕನ್ನಡಕ್ಕೆ ಇವತ್ತು ರಾಜ್ಯದಲ್ಲಿ ನೆಲೆ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಸಂಧರ್ಭ ಸೃಷ್ಟಿಯಾಗಿದೆ, ಇದು ದುರಂತ ಅಲ್ಲವೇ?

1952ರಲ್ಲಿ ನಡೆದ ಮಾತೃಭಾಷಾ ಚಳುವಳಿಯ ತೀವ್ರತೆ ಇವತ್ತು ಪ್ರಾದೇಶಿಕವಾಗಿ ರಚನೆಯಾಗಿರುವ ಒಕ್ಕೂಟ ವ್ಯವಸ್ಥೆಯಲ್ಲಿ ಭಾಷೆಯ ಉಳಿವಿಗೆ ಅವಕಾಶ ನೀಡಿದೆಯಾದರೂ ಜಾಗತೀಕರಣದ ಬಿಸಿ ಎಲ್ಲ ಹಂತದಲ್ಲೂ ಕನ್ನಡದ ಉಳಿವಿಗೆ ಅಡ್ಡಿಯಾಗಿದೆ. ಆದರೂ 70ಮಿಲಿಯನ್ ಗೂ ಅಧಿಕ ಮಂದಿ ಮಾತನಾಡುವ ಕನ್ನಡ ಭಾಷೆಯನ್ನು ಯಾರೂ ಸುಲಭವಾಗಿ ಅಳಿಸಲು ಸಾಧ್ಯವಿಲ್ಲ ಎಂಬ ಭಾವನೆ ಇದೆಯಾದರೂ ಬೇರು ಮಟ್ಟದಲ್ಲ ಆಗುತ್ತಿರುವ ಸಂಚಲನಗಳು ಮುಂದೊಂದು ದಿನ ಕನ್ನಡ ಭಾಷಿಕರಿಗೆ ಮತ್ತು ಸಂಸ್ಕೃತಿಗೆ ಅಪಾಯವೇ ಆಗಿದ್ದಾರೆ.1952ರ ಫೆಬ್ರುವರಿ 21ರಲ್ಲಿ  ಬೆಂಗಾಲಿಗಳು ಪೂರ್ವ ಪಾಕಿಸ್ತಾನ(ಈಗಿನ ಭಾಂಗ್ಲಾದೇಶ)ದ ಢಾಕಾ ನಗರದಲ್ಲಿ ನಡೆಸಿದ ಮಾತೃಭಾಷಾ ಚಳುವಳಿಮಾದರಿಯಾಗಬೇಕಿದೆ. ಬದಲಾಗುತ್ತಿರುವ ವಿದ್ಯಮಾನಗಳನುಸಾರ ಪರೋಕ್ಷವಾಗಿ ಕನ್ನಡಕ್ಕೆ ಅಡ್ಡಿಯಾಗುವಂತಹ ಕ್ರಿಯೆಯನ್ನು ಸ್ವತ: ರಾಜ್ಯ ಸರ್ಕಾರವೇ ಮಾಡುತ್ತಿದೆ.  ಮತ್ತು ಬಲಿದಾನ ಮಾತೃಭಾಷೆಯ ಮಹತ್ವನ್ನು ಜಗತ್ತಿಗೆ ಸಾರಿವೆ. ಇದೇ ಇವತ್ತು ಕನ್ನಡ ಭಾಷಿಕರಿಗೆ ರಾಜ್ಯದಲ್ಲಿ ಶಾಲಾ ಶಿಕ್ಷಣದ ಸಂರಚನೆಯ ಉನ್ನತೀಕರಣ ಮತ್ತು ಪುನರ್ ಸಂಘಟನೆಯ ನೆಪದಲ್ಲಿ ಕನ್ನಡ ಮಾತೃಭಾಷೆಯ ಕುರಿತು ಕಾಳಜಿಯಿಲ್ಲದ ಅದ್ಯಾರೋ ತಲೆಮಾಸಿದ ದೆಹಲಿಯ ಆಡಳಿತ ಮತ್ತು ಯೋಜನೆಯ ರಾಷ್ಟ್ರೀಯ ವಿವಿ ಕುಲಪತಿ ಡಾ || ಆರ್ ಗೋವಿಂದ ಎಂಬುವವರ ನೇತೃತ್ವದಲ್ಲಿ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ 6ಮಂದಿ ಸೇರಿ  ವರದಿಯೊಂದನ್ನು ಸಿದ್ದಪಡಿಸಿ 1-7ನೇ ತರಗತಿಯ 30ಕ್ಕಿಂತ ಕಡಿಮೆ ಮಕ್ಕಳಿರುವ  12740ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಈ ಸಮಿತಿಯಲ್ಲಿ ಕರ್ನಾಟಕ ರಾಜ್ಯ ಮಾನವ ಸಂಪನ್ಮೂಲಾಭಿವೃದ್ದಿ ಕೇಂದ್ರದ ಪ್ರತಿನಿಧಿಯಾಗಿ ಸುರೇಶ್ ಅಂಗಡಿ ಸಹಾ ಇದ್ದಾರೆ. ವರದಿಯಲ್ಲಿ ಸಮಿತಿ ಹೇಳಿರುವುದಾದರೂ ಏನು ಮಕ್ಕಳ ಜನನ ಪ್ರಮಾಣ ಕಡಿಮೆಯಾಗಿದ್ದು ಶಾಲೆಗಳಿಗೆ ಅಗತ್ಯ ಸಂಖ್ಯೆಯ ಮಕ್ಕಳು ಲಭ್ಯರಿಲ್ಲ ಆದ್ದರಿಂದ ಶಾಲೆಗಳನ್ನು ಮುಚ್ಚುವ ಕ್ರಿಯೆಗೆ ಚಾಲನೆ ಕೊಡಲು ಮುಂದಾಗಿದೆ. ವಾಸ್ತವದಲ್ಲಿ ಶಿಕ್ಷಣ ಇಲಾಖೆ ನೀಡುವ ಮಾಹಿತಿಯನುಸಾರವೇ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ 68301. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಪ್ರಮಾಣ ಶೇ.85, ಬಡತನ ಮತ್ತು ಸಾಮಾಜಿಕ ಅಸಮಾನತೆಯ ಕಾರಣಗಳಿಗಾಗಿ ಬಹಳಷ್ಟು ಮಕ್ಕಳು ಶಿಕ್ಷಣದಿಂದ ವಂಚಿತವಾಗಿವೆ ಹೀಗಿರುವಾಗ ಈ ವಾಸ್ತವವನ್ನು ಮರೆಮಾಚಿ ಗೋವಿಂದ ವರದಿಯ ಪ್ರಕಾರ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಕ್ರಿಯೆಯನ್ನು ಒಪ್ಪಲು ಸಾಧ್ಯವೇ, ಇದನ್ನು ನೀವು ಅರಿಯಬೇಕು, ಸೂಕ್ಷ್ಮ ಸಂವೇದನೆಯ ಮನಸ್ಸಿನವರಾಗಿದ್ದರೆ, ಸ್ವಾಭಿಮಾನವಿದ್ದರೆ ಗೋವಿಂದ ವರದಿಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಕ್ರಿಯೆಗಳು ಆಗಬೇಕು. 

ಕರುನಾಡಿಗೆ ಗಡಿ ಸಮಸ್ಯೆ ಇಂದು ನೆನ್ನೆಯದಲ್ಲ, ಒಂದೆಡೆ ಬೆಳಗಾವಿಯಲ್ಲಿ ಮರಾಠಿಗರ ದುಂಡಾವರ್ತನೆ, ಕಾಸರಗೋಡಿನಲ್ಲಿ ಮಲೆಯಾಳಿಗಳು ಕಿರುಕುಳ ನೀಡುತ್ತಿದ್ದರೆ ಬಳ್ಳಾರಿ, ಚಾಮರಾಜ ನಗರದ ಗಡಿ ಪ್ರದೇಶಗಳಲ್ಲಿ ಕ್ರಮವಾಗಿ ತೆಲುಗು ಮತ್ತು ತಮಿಳು ಭಾಷಿಕರಿಂದ ಆತಂಕಕಾರಿ ಕ್ರಿಯೆಗಳು ಆಗಿಂದ್ದಾಗ್ಯೆ ನಡೆಯುತ್ತಲೇ ಇವೆ. ಪರಿಸ್ಥಿತಿ ಹೀಗಿರುವಾಗಲೇ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಯಾಗಿರುವ ಉಮೇಶ್ ಕತ್ತಿ, ವಿಧಾನ ಸಭೆಯ ಸ್ಪೀಕರ್ ಕೆ ಜಿ ಬೋಪಯ್ಯನಂತಹವರು ಪ್ರತ್ಯೇಕ ರಾಜ್ಯದ ಕೂಗಿಗೆ ಒತ್ತಾಸೆಯಾಗಿ ನಿಲ್ಲುವ ಮೂಲಕ ಆಂತರಿಕವಾಗಿಯೇ ಸಮಸ್ಯೆ ಸೃಷ್ಟಿಗೆ ಕಾರಣವಾಗಿದ್ದಾರೆ. ಮೊನ್ನೆ ಮೊನ್ನೆ ಉಮೇಶ್ ಕತ್ತಿ ಒಬ್ಬ ಸಚಿವರಾಗಿ ತನ್ನ ಹುದ್ದೆಯ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ವಿಷಬೀಜ ಬಿತ್ತುವ ಹೇಳಿಕೆ ನೀಡಿದ್ದಾರೆ. ಆ ಮೂಲಕ ಆತ ರಾಜ್ಯದ ಸಚಿವನಾಗಿ ಉಳಿಯಲು ಯೋಗ್ಯನಲ್ಲ. ಆದಾಗ್ಯೂ ಈತನ ಹೇಳಿಕೆಯನ್ನು ಸಮರ್ಥಿಸಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಡೆಯೂ ಸಂಶಯಾಸ್ಪದವೇ ಆಗಿದೆ. ಶೆಟ್ಟರ್ ಕೂಡಾ ಉ.ಕ.ಭಾಗದವರೇ ಆಗಿದ್ದು ಇದಕ್ಕೆ ಪೂರಕವಾಗಿದೆ. ಕೊಡಗು ಜಿಲ್ಲೆಯ ಪ್ರತ್ಯೇಕತೆಯ ಹೋರಾಟಕ್ಕೆ ವಿಧಾನ ಸಭಾ ಸ್ಪೀಕರ್ ಆಗಿರುವ ಕೆ ಜಿ ಬೋಪಯ್ಯ ಸಹಮತ ವ್ಯಕ್ತ ಪಡಿಸಿದ್ದು, ಸಚಿವ ಅಸ್ನೋಟಿಕರ್ ಕಾರಾವಾರ ಜಿಲ್ಲೆಯನ್ನು ಗೋವಾಕ್ಕೆ ಸೇರಿಸಿ ಎಂದು ಬೊಬ್ಬೆ ಇಟ್ಟದ್ದು ಇವೆಲ್ಲ ಬೇಕಾ? ಇಷ್ಟೆಲ್ಲ ಆದ ಮೇಲೂ ಉಮೇಶ ಕತ್ತಿ ಕನ್ನಡ ಹೋರಾಟಗಾರರ ಮೇಲೆ ಎಲುಬಿಲ್ಲದ ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ. ಒಂದು ವಿಷಯ ತಿಳಿದಿರಲಿ  ಬೆಳಗಾವಿ ಮಹಾನಗರ ಪಾಲಿಕೆ ಮರಾಠಿಗರ ಪಾಲಾಗಬಾರದು ಆ ಮೂಲಕ ಕನ್ನಡಿಗರ ಹಿತಾಸಕ್ತಿಗೆ ಧಕ್ಕೆಯಾಗಬಾರದು ಎಂಬ ದೂರದೃಷ್ಟಿಯಿಂದ ಶ್ರಮಿಸಿ ಕನ್ನಡಿಗರೇ ಬಹುಮತದಿಂದ ಗೆದ್ದು ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಿದ ಶ್ರೇಯಸ್ಸು ಕರ್ನಾಟಕ ರಕ್ಷಣಾ ವೇದಿಕೆಯ ಟಿ ಎ ನಾರಾಯಣ ಗೌಡರಿಗೆ ಸಲ್ಲುತ್ತದೆ. ಬೆಳಗಾವಿಯ ಮೇಯರ್ ಆಗಿದ್ದಾಕೆ ಕನ್ನಡ ಧ್ವಜಕ್ಕೆ ಅಪಮಾನ ಮಾಡಿದಾಗ ಅದನ್ನು ತೀವ್ರವಾಗಿ ಪ್ರತಿಭಟಿಸಿದ್ದು,, ಉ.ಕ. ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನ ವಿಧಿಯ ಜಾರಿಗೆ ಬೀದಿಗಿಳಿದು ಹೋರಾಟ ನಡೆಸಿದ್ದು, ಗೋವಾದ ಮಹದಾಯಿ ಯೋಜನೆಯಿಂದ ಕನ್ನಡಿಗರಿಗೆ ತೊಂದರೆಯಾದಾಗ ಪ್ರತಿಭಟಿಸಿದ್ದು, ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗ ಪ್ರಬಲವಾದ ಹೋರಾಟಕ್ಕೆ ಚಾಲನೆ ನೀಡಿದ್ದು, ಕೇಂದ್ರ ಸರ್ಕಾರದ ರೈಲ್ವೇ ಇಲಾಖೆಯಲ್ಲಿ ಕನ್ನಡಿಗರೇ ಇಲ್ಲದಿದ್ದಾಗ ಮಾತೃಭಾಷೆಯಲ್ಲಿ ರೈಲ್ವೇ ಪರೀಕ್ಷೆ ನಡೆಸಲು ಹೋರಾಟ ನಡೆಸಿದ್ದು ಕರ್ನಾಟಕ ರಕ್ಷಣಾ ವೇದಿಕೆ, ಎಲ್ಲದಕ್ಕಿಂತ ಹೆಚ್ಚಾಗಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಕಲ್ಪಿಸುವ ಸಲುವಾಗಿ ಹೋರಾಟಗಾರರು ಮತ್ತು ಮಠಾಧೀಶರನ್ನು ದೆಹಲಿಗೆ ಕರೆದೊಯ್ದು ಬೃಹತ್ ಪ್ರದರ್ಶನ ನಡೆಸಿದ್ದು, ಬೆಂಗಳೂರಿನಲ್ಲಿ ನೆಲೆಯೂರಿರುವ ಅನ್ಯ ಭಾಷಿಕರ ಸಂಸ್ಥೆಗಳಲ್ಲಿ ದುಡಿಯುವ ಕನ್ನಡಿಗರಿಗೆ ತೊಂದರೆಯಾದಾಗ ನೆರವಿಗೆ ಧಾವಿಸುವುದು ಕರವೇ ನಾರಾಯಣ ಗೌಡರೆ ವಿನಹ ಉಮೇಶ ಕತ್ತಿಯಲ್ಲ. ಸಾರ್ವಜನಿಕವಾಗಿಯೂ ಕೆಟ್ಟ ನಡವಳಿಕೆಗಳನ್ನು ಹೊಂದಿರುವ ಕತ್ತಿ ತನ್ನ ನಡತೆಯನ್ನು ಮತ್ತು ವಿಚಾರವನ್ನು ತಿದ್ದುಕೊಂಡರೆ ಅದು ರಾಜ್ಯಕ್ಕೆ ಒಳಿತಾದೀತು. 

ಇವತ್ತು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಜನರಿಗೆ ಜಮೀನು ಮನೆಗಳಿದ್ದರೂ ಹೊಟ್ಟೆ ಪಾಡಿನ ಕೂಲಿಯನ್ನರಸಿ ದಕ್ಷಿಣದೆಡೆಗೆ ಬರುತ್ತಾರೆ ಅಷ್ಟೆ ಅಲ್ಲ ಅಕ್ಕ ಪಕ್ಕದ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. ಹೀಗೆ ಪಕ್ಕದ ಗೋವಾ ರಾಜ್ಯಕ್ಕೆ ತೆರಳಿದ ಕನ್ನಡದ ಕೂಲಿ ಕಾರ್ಮಿಕರನ್ನು ಕೆಲ ವರ್ಷಗಳ ಹಿಂದೆ ಎತ್ತಂಗಡಿ ಮಾಡಿ ಕಿರುಕುಳ ನೀಡಿದ್ದನ್ನು ಮರೆಯುವಂತಿಲ್ಲ. ಆದರೆ ಇಲ್ಲಿ ಕನ್ನಡಿಗರಿಂದ ಯಾವುದೇ ಕಿರುಕುಳವಾಗದಿದ್ದರೂ ಗಾಳಿ ಸುದ್ದಿಗಳಿಗೆ ಹೆದರಿ ಊರು ಬಿಟ್ಟ ಈಶಾನ್ಯ ರಾಜ್ಯಗಳ ಜನರನ್ನು ಕರೆದು ತರಲು ಸ್ವತ: ರಾಜ್ಯದ ಗೃಹ ಸಚಿವ ಅಶೋಕ ಹೋಗಿದ್ದಲ್ಲದೇ ಅವರಿಗೆ ಬೆಂಗಳೂರಿಗೆ ಮರಳಲು ವಿಶೇಷ ರೈಲನ್ನು ವ್ಯವಸ್ಥೆ ಮಾಡಲಾಗಿತ್ತು, ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ತಮಿಳೀಗರ ವಿಶ್ವಾಸ ಗಳಿಸಲು (ಮತ ಬ್ಯಾಂಕ್ ದುರಾಸೆಗೆ) ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲಾಯಿತು. ಇದು ಕನ್ನಡಿಗರ ಔದಾರ್ಯ!. ಆದರೆ ಬೇರೆ ರಾಜ್ಯಗಳಲ್ಲಿ ವಾಸಿಸುವ ಕನ್ನಡಿಗರ ಪರಿಸ್ಥಿತಿ ಈ ರೀತಿ ಇಲ್ಲ, ಇತ್ತೀಚೆಗೆ ಗುಜರಾತಿನಿಂದ ಬಂದಿದ್ದ ಕಿರಿಯನೊಬ್ಬ ಹೇಳುತ್ತಿದ್ದ ದಕ್ಷಿಣದವರು ಅದರಲ್ಲೂ ಕರ್ನಾಟಕದವರೆಂದರೆ ಒದೆ ಗ್ಯಾರಂಟಿ ಹಾಗಾಗಿ ಅಲ್ಲಿಯ ಭಾಷೆ ಕಲಿತು ಅಲ್ಲಿಯವರಾಗಿಯೇ ಬದುಕೋದು ಅನಿವಾರ್ಯವಾಗಿದೆ ಅಂತ. ಆದರೆ ನಮ್ಮಲ್ಲಿ ಹಾಗಿಲ್ಲ ಇಲ್ಲಿಗೆ ಆಗಮಿಸುವ ಯಾವುದೇ ಭಾಷಿಕರೊಂದಿಗೆ ಅವರದ್ದೆ ಭಾಷೆ ಕಲಿತು ವ್ಯವಹರಿಸವಷ್ಟು ನಿಪುಣರು. ಇರಲಿ ಇಂತಹುದೆ ನಿಲುವುಗಳು ಮಾತೃಭಾಷೆಯ ಉಳಿವಿಗೂ ಅರಿವಿನೊಂದಿಗೆ ಆಗಬೇಕಾಗಿದೆಯಲ್ಲವೇ??

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...