Sunday, October 9, 2011

ಅಣ್ಣಾಹಜಾರೆ ಮತ್ತು ತಂಡಕ್ಕೆ ಇದೆಲ್ಲಾ ಬೇಕಿತ್ತಾ?

ಒಂದು ಕನಸು, ಒಂದು ನಿರೀಕ್ಷೆ, ಒಂದು ಕೆಚ್ಚು, ಒಂದು ನಂಬಿಕೆ ಹೀಗೆ ಎಲ್ಲವನ್ನೂ ಹುಸಿಗೊಳಿಸುವ ಮತ್ತು ಮನಸ್ಸಿಗೆ ಆಘಾತ ವಾಗುವಂತಹ ವಿದ್ಯಮಾನಗಳು ಈಗ ಘಟಿಸುತ್ತಿವೆ. ಗಾಂಧೀ ಮಾರ್ಗದಲ್ಲಿ ಆರಂಭಗೊಂಡ ಚಳುವಳಿಯೊಂದು ಇಷ್ಟು ಬೇಗ ದಿಕ್ಕು ತಪ್ಪ ಬಹುದೆಂದು ಯಾರೂ ನಿರೀಕ್ಷಿಸಿರಲಿಕ್ಕಿಲ್ಲ ಆದಾಗ್ಯೂ ಜನಲೋಕಪಾಲ ಮಸೂದೆ ಅನುಷ್ಠಾನಕ್ಕೆ ಒತ್ತಾಯಿಸಿ ನಡೆಯುತ್ತಿದ್ದ ಚಳುವಳಿ ಪೀಕ್ ಪಾಯಿಂಟ್ ತಲುಪಿದಾಗ, ಚಳುವಳಿಯ ಅಂತಿಮ ಸ್ವರೂಪ ಏನು? ಅಣ್ಣಾ ಮತ್ತು ತಂಡ ಚಳುವಳಿಗೆ ಸಿಕ್ಕಿರುವ ಅಭೂತಪೂರ್ವ ಬೆಂಬಲವನ್ನ ಹೇಗೆ ಕಾಯ್ದು ಕೊಳ್ಳುತ್ತದೆ? ಎಂಬ ಪ್ರಶ್ನೆಯನ್ನು ಕೆಲವು ಬುದ್ದಿ ಜೀವಿಗಳು ಎತ್ತಿದ್ದರು. ಹಾಗೆಯೇ ಚಳುವಳಿಯೊಂದು ದಿಕ್ಕು ತಪ್ಪಿ ಆಶಯಗಳು ನೆನೆಗುದಿಗೆ ಬೀಳುವ ಬಗ್ಗೆಯೂ ಆತಂಕವಿತ್ತು. ಈಗ ಅಣ್ಣಾ ತಂಡದ ಕ್ರೇಜಿವಾಲ್ ಮತ್ತು ಕಿರಣ್ ಬೇಡಿ ಸಾರ್ವಜನಿಕ ಆತಂಕವನ್ನು ನಿಜವಾಗಿಸುತ್ತಿದ್ದಾರೆ. ಇದರ ಹಿಂದೆ ಜನಸಾಮಾನ್ಯರಿಗೆ ತಿಳಿಯದ ಹುನ್ನಾರವೂ ಸಹಾ ಇರಬಹುದೆಂಬ ಅನುಮಾನ ವ್ಯಕ್ತವಾಗಲಾರಂಬಿಸಿದೆ. ನಮ್ಮ ದೇಶದ ಮಟ್ಟಿಗೆ ಇದು ಭ್ರಷ್ಟಾಚಾರದ ವಿರುದ್ದದ ಚಳುವಳಿ ಇರಬಹುದು ಇತರೆ ಚಳುವಳಿಗಳಿರಬಹುದು , ಎಲ್ಲವುಗಳ ಹಿಂದೆಯೂ ಅಪಾಯಕಾರಿ ಹಾಗೂ ಸರ್ವ ಸಮ್ಮತವಲ್ಲದ ಗುರಿಗಳ ಈಡೇರಿಕೆಗೆ ಕೆಲವು ಚಳುವಳಿಗಳು ಬಳಕೆಯಾಗುತ್ತಿರುವುದು ಅತ್ಯಂತ ವಿಷಾಧನೀಯಕರ ಸಂಗತಿ.
           ದೇಶದ 1,210,193,422ಮಿಲಿಯನ್ ಜನಸಂಖ್ಯೆಯ ಬಹುಪಾಲು ಜನರ ಆಶೋತ್ತರದ ಪ್ರತೀಕವಾಗಿದ್ದ ಅಣ್ಣಾ ತಂಡದ ನಿಲುವು ಈಗ ರಾಜಕೀಯ ಶಕ್ತಿಯಾಗಿ ಬದಲಾಗುವ ಸೂಚನೆ ನೀಡಿದೆ. ರಾಜಕೀಯ ಶಕ್ತಿ ಯಾವುದೇ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂಬುದು ಒಪ್ಪ ತಕ್ಕ ಮಾತೆ ಆಗಿದೆ. ಆದರೆ ರಾಜಕೀಯದ ನೆವದಲ್ಲಿ,ಸದುದ್ದೇಶಕ್ಕೆ ಒಗ್ಗೂಡಿಸಿದ ಶಕ್ತಿಯನ್ನು, ಜನರ ಭಾವನೆಗಳನ್ನು ಒಮ್ಮೆಲೆ ತೂರಿ ಬಿಡುವುದನ್ನು ಅರಗಿಸಿಕೊಳ್ಳಲಾಗದು ಹಾಗೂ ಒಪ್ಪಿಕೊಳ್ಳಲಾಗದು. ಅಣ್ಣಾ ತಂಡ ಜನ್ ಲೋಕಪಾಲ ಮಸೂದೆಯನ್ನು ಒಪ್ಪದ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಎಂಬ ಘೋಷಣೆಯನ್ನು ಹೊರಡಿಸಿದೆ, ಇದಕ್ಕಾಗಿ ಕಿರಣ್ ಬೇಡಿ ಹಾಗೂ ಅರವಿಂದ ಕ್ರೇಜೀವಾಲ್ ಬೇರೆ ಬೇರೆ ರಾಜ್ಯಗಳಿಂದ ಆಂಧೋಲನ ಆರಂಭಿಸಿದ್ದಾರೆ. ಸದರಿ ಆಂಧೋಲನದಲ್ಲಿ ಕಾಂಗ್ರೆಸ್ ತಿರಸ್ಕರಿಸಿ ಎಂದು ಅಣ್ಣಾ ಭಾಷಣ ಮಾಡಿದ್ದಾರೆನ್ನಲಾದ ಧ್ವನಿ ಮುದ್ರಿಕೆಯನ್ನು ಬಳಸಿಕೊಳ್ಳಲಾಗುತ್ತ್ದೆದೆಯಂತೆ! ಕಾಂಗ್ರೆಸ್ ತಿರಸ್ಕರಿಸಿ ಎಂದರೆ ಯಾವುದನ್ನು ಪುರಸ್ಕರಿಸಬೇಕು? ಉತ್ತರ ಬಹಳ ಸರಳ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕಾ? ಚುನಾವಣೆಗಳು ಹತ್ತಿರವಿರುವ ಸಂಧರ್ಭದಲ್ಲೇ ಅತ್ಯಂತ ಕೆಟ್ಟ ಆಡಳಿತ ನೀಡಿ ಕೋಮುವಾದಿ ಭಾವನೆಗಳನ್ನು ಪುರಸ್ಕರಿಸುವ ಮೂಲಕ  ಹೀನ ಚಾರಿತ್ರ್ಯ ಹೊಂದಿರುವ ಗುಜರಾತ್ ನ ಮುಖ್ಯ ಮಂತ್ರಿ ನರೇಂದ್ರ ಮೋದಿ, ತನ್ನ ಹೆಸರು ಪ್ರಧಾನಿ ಪಟ್ಟಕ್ಕೆ ಕೇಳಿ ಬರುತ್ತಿದ್ದಂತೆಯೇ  ಉಪವಾಸದ ಸೋಗಿನಲ್ಲಿ ತಾನೊಬ್ಬ ಸತ್ಪುರುಷನೆಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.ಈ  ಮೂಲಕ ಬಿಜೆಪಿ ಮೋದಿಯನ್ನು ಪ್ರಧಾನಿ ಪಟ್ಟಕ್ಕೆ ಪ್ರಸ್ತಾಪಿಸುತ್ತಾ ಚುನಾವಣೆಗಳನ್ನು ಎದುರು ನೋಡುತ್ತಿದೆ, ಹೀಗಿರುವಾಗ ಅಣ್ಣಾ ಹಜಾರೆಯಂತಹವರೇ ಕಾಂಗ್ರೆಸ್ ತಿರಸ್ಕರಿಸಿ ಎಂದು ಊರೂರು ತಿರುಗಿದರೆ ಇವರ ಆಂಧೋಲನವನ್ನು ಬೆಂಬಲಿಸಿದವರ ಕಥೆ ಏನಾಗಬೇಕು? 
            ಅಸಲಿಗೆ ಜನ ಲೋಕಪಾಲ ಮಸೂದೆಯ ಕರಡನ್ನು ತಯಾರಿಸಿದ್ದು ಶಾಂತಿಭೂಷಣ್ ಆದರೂ ಸಹಾ ಅದನ್ನು ಅಗತ್ಯಕ್ಕೆ ತಕ್ಕಂತೆ ತಿದ್ದಿ ಅಣ್ಣಾ ಹಜಾರೆಯನ್ನು ಹೈಜಾಕ್ ಮಾಡಿದವರು ಅರವಿಂದ ಕ್ರೇಜಿವಾಲ್ ಮತ್ತು ಕಿರಣ್ ಬೇಡಿ, ಅತ್ಯಂತ ನಾಟಕೀಯವಾಗಿ ನಡೆದು ಕೊಳ್ಳುವ ಮೂಲಕ ಸಾರ್ವಜನಿಕ ಅವಗಣನೆಗೂ ತುತ್ತಾಗಿದ್ದರು, ನಂತರದ ಬೆಳವಣಿಗೆಗಳಲ್ಲಿ ತಾವು ಸಂಸತ್ ಗೆ ಸ್ಪರ್ದಿಸುವ ಇಂಗಿತವನ್ನು ವ್ಯಕ್ತಪಡಿಸುವ ಮೂಲಕ ಈಗ ಭ್ರಷ್ಟಾಚಾರ ವಿರೋಧಿ ಆಂಧೋಲನವನ್ನ ಬದಿಗಿರಿಸಿ ಕಾಂಗ್ರೆಸ್ ತಿರಸ್ಕರಿಸಿ ಆಂಧೋಲನವನ್ನು ಮುನ್ನೆಡೆಸಲು ನಿಂತಿದ್ದಾರೆ ಅಂದರೆ ಇವರ ಹಿಂದಿರುವ ಶಕ್ತಿಗಳು ಯಾವುದು ಎಂಬುದು ಯಾರಿಗೂ ತಿಳಿಯದ ಸಂಗತಿಯಲ್ಲ ಅಲ್ಲವೇ? ಅಣ್ಣಾ ಟೀಂ ಈಗ ಒಟ್ಟಾಗಿ ಉಳಿದಿಲ್ಲ ಎಂಬ ಸಂಗತಿಯೂ ಬೇಸರದ ಸಂಗತಿಯೇ ಆಗಿದೆ, ಸ್ಪಷ್ಟ ನಿಲುವಿಲ್ಲದೆ, ಒಗ್ಗೂಡಿದ ಶಕ್ತಿಯನ್ನು ವೈಯುಕ್ತಿಕ ಉದ್ದೇಶಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ? ಅಣ್ಣಾ ಮತ್ತು ಅವರ ತಂಡ ರಾಜಕೀಯ ಶಕ್ತಿಯಾಗಿ ಬದಲಾಗುವುದಾದರೆ ಜನ ಲೋಕಪಾಲ ಮಸೂದೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಲು ಒಮ್ಮತದ ನಿರ್ಣಯ ಕೈಗೊಂಡ ಎಲ್ಲಾ ರಾಜಕೀಯ ಪಕ್ಷಗಳ ವಿರುದ್ದವೂ ಸಮರ ಸಾರಬೇಕಲ್ಲವೇ? ಆದರೆ ವಾಸ್ತವದಲ್ಲಿ ಯಾಕೆ ಅಂತಹ ನಿಲುವು ವ್ಯಕ್ತವಾಗಿಲ್ಲ. ಅಣ್ಣಾ ಹಜಾರೆಯ ಉಪವಾಸದ ಅಂತಿಮ ದಿನಗಳಲ್ಲಿ ಪ್ರಧಾನಿ ಮತ್ತು ನ್ಯಾಯಾಂಗ ವ್ಯವಸ್ಥೆಗಿಂತ ಜನ ಲೋಕಪಾಲ ಸುಪ್ರೀಂ ಆಗುವುದು ಮತ್ತು ಆ ಮೂಲಕ ದೇಶದ ಸಂವಿಧಾನದ ಆಶಯಕ್ಕೆ ಪರ್ಯಾಯವನ್ನು ಸೃಷ್ಠಿಸುವ ಕ್ರಿಯೆಯನ್ನು ಪ್ರಮುಖ ವಿರೋಧ ಪಕ್ಷ ಬಿಜೆಪಿ ಯೂ ಸಹಾ ಒಪ್ಪಿಕೊಳ್ಳಲಿಲ್ಲ. ಅದರಂತೆ ಇತರೆ ರಾಜಕೀಯ ಪಕ್ಷಗಳು ಸಹಾ. ಹೀಗಿರುವಾಗ ಕೇವಲ ಕಾಂಗ್ರೆಸ್ ಒಂದನ್ನೇ ಯಾಕೆ ತಿರಸ್ಕರಿಸಬೇಕು? ಜನ ಲೋಕಪಾಲ ಮಸೂದೆ ತಿರಸ್ಕೃತವಾಗಿ ಪರಿಷ್ಕೃತ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸರ್ವಸಮ್ಮತ ನಿಲುವಿನೊಂದಿಗೆ ಒಪ್ಪಿಕೊಳ್ಳಲಾಗಿದೆ. ಇದನ್ನು ಅಣ್ಣಾ ಮತ್ತವರ ತಂಡವು ಒಪ್ಪಿದೆ ಹೀಗಿರುವಾಗ ಏಕಾಏಕಿ ಪಕ್ಷವೊಂದರ ವಿರುದ್ದ ಆಂಧೋಲನ ನಡೆಸುವುದನ್ನು ಏನೆನ್ನಬೇಕು ಹೇಳಿ? ಅಂದರೆ ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ಕಾಂಗ್ರೆಸ್ ವಿರೋಧಿ ಆಂಧೊಲನವನ್ನ ನಡೆಸಿದಲ್ಲಿ ಈ ಮೊದಲಿನ ಒಪ್ಪಂದದ ಕಥೆ ಏನಾಗುತ್ತೇ ಅನ್ನೋ ಪರಿಜ್ಞಾನವಿದ್ದರೂ ಲೋಕಪಾಲ ಮಸೂದೆ ಜಾರಿಯಾಗಬಾರದು ಎಂಬ ನಿಲುವನ್ನು ಅಣ್ಣಾ ತಂಡವೇ ತಳೆದಂತೆ ಆಗಲಿಲ್ಲವೇ? ಅಲ್ಲಿಗೆ ಕಳೆದ ನಾಲ್ಕು ದಶಕಗಳಿಂದ ನಡೆದುಕೊಂಡು ಬಂದ ಹೋರಾಟಕ್ಕೆ, ಗಾಂಧಿ ಮಾರ್ಗದ ಚಳುವಳಿಗೆ ಯಾವ ಮರ್ಯಾದೆ ಸಿಕ್ಕಂತಾಯಿತು? ಅಣ್ಣಾ ಹಜಾರೆಗೆ ಮತ್ತು ಅವರ ತಂಡಕ್ಕೆ ಇದೆಲ್ಲಾ ಬೇಕಿತ್ತಾ? 
          ಪ್ರಸಕ್ತ ದಿನಗಳಲ್ಲಿ ಚಳುವಳಿಗಳು ಮತ್ತು ಅದರ ಆಶಯಗಳು ಯಾಕೆ ಸಾಯುತ್ತಿವೆ ? ಎಂಬ ಪ್ರಶ್ನೆಗೆ ಅಣ್ಣಾಹಜಾರೆ ನಿಲುವು ಸದ್ಯದ ಪರಿಸ್ಥಿತಿಯಲ್ಲಿ ಉತ್ತರವಾಗ ಬಹುದೇನೋ. ಒಂದು ಪ್ರಾಮಾಣಿಕ ಚಳುವಳಿಯ ಹಿಂದೆ, ಅದನ್ನು ಬೆಂಬಲಿಸುವ ಮನಸ್ಸುಗಳ ಆಶಯವನ್ನು ದಿಕ್ಕುತಪ್ಪಿಸುವ ಪ್ರಕ್ರಿಯೆಗಳು ಯಾವ ಕಾರಣಕ್ಕೂ ನಡೆಯಬಾರದು. ಇದು ಅಭಿವೃದ್ದಿ ಶೀಲ ರಾಷ್ಟ್ರದ ಪ್ರಗತಿಗೂ ಕುಂಠಿತವಾಗುವುದಲ್ಲದೇ ದೇಶದಲ್ಲಿ ಅರಾಜಕತಗೆ ಸೃಷ್ಟಿಯಾಗುತ್ತದೆ ಅಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...