Sunday, September 4, 2011

ಶಿಕ್ಷಕರ ದಿನಾಚರಣೆಯ ಪರಿಪೂರ್ಣತೆ ಹೇಗೆ?

ಇಂದು ಶಿಕ್ಷಕರ ದಿನ, ಶಿಕ್ಷಕ ಸ್ಥಾನಕ್ಕೆ ತನ್ನದೇ ಆದ ಘನತೆ-ಗೌರವಗಳಿವೆ. ಸಮಾಜದಲ್ಲಿ ತಂದೆ-ತಾಯಿಗಳ ನಂತರ ನೆನೆಯಬಹುದಾದ ಪ್ರಾತ:ಸ್ಮರಣೀಯರೆಂದರೆ ಶಿಕ್ಷಕರೇ ಆಗಿರುತ್ತಾರೆ. ಸದರಿ ಹುದ್ದೆಗೆ ಘನತೆ-ಗೌರವದ ಜೊತೆಗೆ ತನ್ನದೇ ಆದ ಔನ್ನತ್ಯವೂ ಸಹಾ ಇದ್ದರಷ್ಟೇ ವೃತ್ತಿಯ ಪಾವಿತ್ರ್ಯತೆ ಉಳಿಯಬಹುದು. ಸಮಾಜದಲ್ಲಿ ಶಿಕ್ಷಕ ಹುದ್ದೆಯೂ ಸಹಾ ಕಳಂಕಿತವಾಗುತ್ತಿರುವುದು ವಿಷಾಧನೀಯಕರ ಸಂಗತಿ. ನೈತಿಕ ಅಧ:ಪತನ ಹೊಂದಿದವರು, ವೃತ್ತಿಯ ಹೊಣೆಗಾರಿಕೆ ಅರಿವಿಲ್ಲದೇ ಹೊಟ್ಟೆ ಹೊರೆಯಲು ಶಿಕ್ಷಕ/ಕಿ ಯರಾಗಿ ಸೇರ್ಪಡೆಗೊಳ್ಳುತ್ತಿರುವುದು ಇದಕ್ಕೆ ಕಾರಣ ವಿರಬಹುದು. ಈ ನಡುವೆಯೇ ವೃತ್ತಿಯ ಪಾವಿತ್ರ್ಯ ಕಾಪಾಡುವ ಪ್ರಾಮಾಣಿಕರೂ ಇದ್ದಾರೆ. ಆದರೆ ಸಮುದಾಯದಲ್ಲಿ ಯಾರಾದರೊಬ್ಬ ಸಹದ್ಯೋಗಿ ಮಾಡುವ ಅನಾಚಾರಗಳಿಗೆ ಇಡೀ ಶಿಕ್ಷಕ ಸಮುದಾಯವನ್ನೇ ಪ್ರಶ್ನಾರ್ಥಕವಾಗಿ ನೋಡುವ ಪರಿಪಾಠ ಬೆಳೆಯುತ್ತಿರುವುದು ಒಳ್ಳೆಯ ಬೆಳವಣಿಗೆಯೇನಲ್ಲ. ಈ ಸಂಧರ್ಭ ಇಂತಹ ತಪ್ಪು-ಒಪ್ಪುಗಳ ಮಂಥನ ಅಗತ್ಯವಾಗಿದೆ.




ಸಮಾಜದಲ್ಲಿ ಶಿಕ್ಷಕ ಕೆಟ್ಟರೆ ಇಡೀ ವ್ಯವಸ್ಥೆಯೇ ಕೆಟ್ಟಂತೆ ಹಾಗಾಗಿ ತನ್ನ ತಪ್ಪು ದೊಡ್ಡದೇ ಇತರರು ತಪ್ಪು ಮಾಡುವುದಿಲ್ಲವೇ ಎಂದು ಕೈತೋರಿಸುವ ಹುಂಬ ಶಿಕ್ಷಕರುಗಳು ಇವತ್ತು ನಮ್ಮ ನಡುವೆಯೇ ಇದ್ದಾರೆ. ಇರಲಿ ಇದಕ್ಕೂ ಮುನ್ನ ಶಿಕ್ಷಕರ ದಿನ ಆಚರಣೆಯ ಕುರಿತ ಕೆಲವು ಕುತೂಹಲದ ಸಣ್ಣ ರಿಪೋರ್ಟು ನಿಮಗಾಗಿ. ಭಾರತದ ದೇಶದಲ್ಲಿ ಶಿಕ್ಷಕರ ದಿನಾಚರಣೆ ಆಚರಣೆಗೆ ಬಂದು ಇಲ್ಲಿಗೆ 49ವರ್ಷಗಳಾಗಿವೆ. ಇದು 50ನೇ ಶಿಕ್ಷಕರ ದಿನಾಚರಣೆ. ಎಲ್ಲರಿಗೂ ತಿಳಿದ ಹಾಗೆ ಭಾರತದ ರಾಷ್ಟ್ರಪತಿಯವರಾಗಿದ್ದ ಶ್ರೇಷ್ಠ ದಾರ್ಶನಿಕ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನವನ್ನೇ ದೇಶದಲ್ಲಿ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ರಾಧಾಕೃಷ್ಣನ್ ಒಬ್ಬ ಶ್ರೇಷ್ಠ ದಾರ್ಶನಿಕರಾಗಿ,ಆದರ್ಶನೀಯ ಶಿಕ್ಷಕರಾಗಿ ಸೇವೆ ಸಲ್ಲಿಸುವ ಹಂತದಲ್ಲೇ ರಾಷ್ಟ್ರದ ಅತ್ಯುನ್ನತ ಹುದ್ದೆಗೇರಿದವರು. ಮತ್ತು ಆ ಮೂಲಕ ಶಿಕ್ಷಕ ಹುದ್ದೆಯ ಸಾಧ್ಯತೆಗಳನ್ನು ಜಗತ್ತಿಗೆ ತೆರೆದಿಟ್ಟವರು. ಅಂದರೆ 'ಶಿಕ್ಷಕ' ಸ್ಥಾನಕ್ಕೆ ಇರುವ ಶ್ರೇಷ್ಠತೆಗಿಂತ ಬೇರೊಂದು ಸ್ಥಾನವಿಲ್ಲ ಆತ ವ್ಯವಸ್ಥೆಯ ನಿರ್ಮಾತೃ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನಗಳು ಸಿಗಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ರಾಧಾಕೃಷ್ಣನ್ ರ ಜನ್ಮದಿನದಂದು ಶಿಕ್ಷಕ ದಿನ ಆಚರಿಸುವಂತೆಯೇ ಅರ್ಜೆಂಟಿನಾ ದೇಶದಲ್ಲಿ ದೊಮಿಂಗೊ ಫಾಸ್ಟಿನೋ ಎಂಬ ಶಿಕ್ಷಕ ನಿಧನರಾದ ದಿನ ಅಂದರೆ ಸೆ.11ರಂದು ಆಚರಿಸಲಾಗುತ್ತದೆ. ಅಂದರೆ 1915ರಿಂದಲೇ ಅಲ್ಲಿ ಶಿಕ್ಷಕ ದಿನಾಚರಣೆ ನಡೆಯುತ್ತದೆ. ಜಗತ್ತಿನ 70ಕ್ಕೂ ಹೆಚ್ಚು ದೇಶಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಶಿಕ್ಷಕರನ್ನು ನೆನೆಯುವ ದಿನಗಳಿವೆ. ಆದರೆ ವಿಶ್ವ ಸಂಸ್ಥೆಯ UNESCO ವಿಶ್ವ ಶಿಕ್ಷಕರ ದಿನಾಚರಣೆಯನ್ನು ಅಕ್ಟೋಬರ್ 5ರಂದು ಆಚರಿಸುತ್ತದೆ. ತೀರಾ ಇತ್ತೀಚೆಗೆ ಅಂದರೆ 1994ರಿಂದ ಇದು ಜಾರಿಗೆ ಬಂದಿದೆ.



ಮೊನ್ನೆ ಕಾಲೇಜೊಂದರ ಸಮಾರಂಭದ ವರದಿಗಾಗಿ ತೆರಳಿದ್ದೆ . ಠಾಕು ಠೀಕಾಗಿ ಡ್ರೆಸ್ ಮಾಡಿಕೊಂಡು ಟೈ ಬಿಗಿದು ಕೊಂಡು ನಿಂತಿದ್ದ ಒಬ್ಬ ಯುಜಿಸಿ ಉಪನ್ಯಾಸಕ ನಿರೂಪಣೆ ಮಾಡುತ್ತಿದ್ದರು. ಅವರು 'ಅ' ಕಾರ ಇರುವೆಡೆ 'ಹ'ಕಾರ, 'ಶ' ಕಾರವನ್ನು 'ಸ'ಕಾರವೆಂದು ಸಂಭೋಧಿಸುತ್ತಿದ್ದರು ಅಂದರೆ 'ಬಾಸಣ', 'ಸ್ರೀಯುತರು', 'ಹಬಿನಂದನೆಗಳು', ಸಂಯುಕ್ತ ಎಂಬುದನ್ನು 'ಸಯುಕ್ತ' ಇತ್ಯಾದಿ. ಅವರ ಪ್ರತೀ ಉಚ್ಚಾರಕ್ಕೂ ವಿದ್ಯಾರ್ಥಿಗಳು ಗೊಳ್ಳೆಂದು ನಗುತ್ತಿದ್ದರು ಆ ಪುಣ್ಯಾತ್ಮನಿಗೆ ಅದರ ಅರಿವಾಗಲಿಲ್ಲ ಅಷ್ಟೇ ಏಕೆ ವೇದಿಕೆಯಲ್ಲಿದ್ದ ಉಪನ್ಯಾಸಕರು/ಪ್ರಾಂಶುಪಾಲರು ಅದನ್ನು ಗಮನಿಸಿ ತಿಳಿ ಹೇಳುವ ಕೆಲಸ ಮಾಡಲಿಲ್ಲ. ಇನ್ನೊಂದು ಘಟನೆ ಹಳ್ಳಿಯೊಂದರೆ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರೋರ್ವರ ವಿರುದ್ದ ಶಾಲಾ ಮಕ್ಕಳು-ಪೋಷಕರು ಪ್ರತಿಭಟನೆ ನಡೆಸುತ್ತಿದ್ದರು, ಸ್ಥಳಕ್ಕೆ ಹೋದಾಗ ಸದರಿ ಮುಖ್ಯ ಶಿಕ್ಷಕನನ್ನು ಶಾಲಾ ಕೊಠಡಿಯೊಂದರಲ್ಲಿ ಕೂಡಿಹಾಕಲಾಗಿತ್ತು.ಹೆಣ್ಣು ಮಕ್ಕಳೊಂದಿಗೆ ಅನೈತಿಕವಾಗಿ ನಡೆದುಕೊಳ್ಳುತ್ತಾರೆ, ಆಶ್ಲೀಲ ಸಂಭಾಷಣೆ ಮಾಡುತ್ತಾರೆ, ಅಡುಗೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬುದು ಪ್ರಮುಖ ಆಪಾದನೆ. ಆತನ ಮುಖದಲ್ಲಿ ಕೊಂಚವೂ ಪಶ್ಚತ್ತಾಪ ಇರಲಿಲ್ಲ ಮತ್ತು ಅಂಜಿಕೆಯೂ ಇರಲಿಲ್ಲ ತನ್ನ ಹಿಂದೆ ಜಾತಿಯ ಬೆಂಬಲ ಮತ್ತು ರಾಜಕೀಯ ನಾಯಕರ ಬೆಂಬಲ ಇದೆ ಎಂಬುದೇ ಆತನ ಹುಂಬತನಕ್ಕೆ ಕಾರಣವಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಶಾಲಾವರಣದಲ್ಲಿ ಶಿಕ್ಷಕಿಯೊಬ್ಬಾಕೆಯೊಂದಿಗೆ ಲಲ್ಲೆಗೆರೆಯುತ್ತಾ ಪೋರ್ಕಿಯಂತೆ ವೇಷಭೂಷಣ ಧರಿಸಿದ್ದ ಯುವಕನೊಬ್ಬ ಕಂಡ, ಮತ್ತೊಬ್ಬ ಕೈಗೆ ರೌಡಿ ಬಳೆಯಂತಹದ್ದೇನೋ ಕಟ್ಟಿಕೊಂಡು ಕ್ಯಾಪು ಹಾಕಿಕೊಂಡು ಹೆಣ್ಣು ಮಕ್ಕಳ ಮೈಮೇಲೆ ಕೈಯಾಡಿಸುತ್ತಾ ಸಾಗುತ್ತಿದ್ದ. ಶಾಲಾ ಕಛೇರಿಗೆ ಬಂದರೆ ಆಗಷ್ಟೇ ಬ್ಯೂಟಿಪಾರ್ಲರ್ ನಿಂದ ಬಂದಿದ್ದಾರೋ ಎನ್ನುವಂತೆ ಆಫ್ ತೋಳಿನ ಬ್ಲೌಸ್, ಪಾರದರ್ಶಕ ಉಡುಗೆ ಧರಿಸಿ, ಢಾಳಾಗಿ ಕೆಂಪು ಬಣ್ಣವನ್ನ ತುಟಿಗೆ ಮೆತ್ತಿಕೊಂಡ ಒಬ್ಬಾಕೆ ಕಂಡರು. ಜೊತೆಯಲ್ಲಿದ್ದ ಅಧಿಕಾರಿಯನ್ನು ಕೇಳಿದೆ ಯಾರಿವರು? ಇವರೆಲ್ಲ ಶಿಕ್ಷಕರು ಎಂದು ಆತ ಮೌನಕ್ಕೆ ಶರಣಾದರು. ಇನ್ನೊಂದು ಪ್ರಕರಣ ಹೇಳಲೇ ಬೇಕು ಅದು ಸಾರಿಗೆ ವ್ಯವಸ್ಥೆಯೂ ಇಲ್ಲದ ಹಳ್ಳಿಯೊಂದರ ಶಾಲೆ. ಅಲ್ಲಿಗೆ ಆ ಶಿಕ್ಷಕ ಬಂದಾಗ ಶಾಲಾವರಣದಲ್ಲಿ ಸೊಂಪಾಗಿ ಬೆಳೆದಿದ್ದ ಹುಲ್ಲನ್ನು ಮೇಯಲು ದನಗಳನ್ನು ಬಿಟ್ಟಿದ್ದರು. ಪ್ರತೀ ವರ್ಷ ಅಲ್ಲಿ ಬೆಳೆಯುವ ಹುಲ್ಲನ್ನು ಗ್ರಾಮಸ್ಥರು ಹರಾಜು ಹಾಕಿಕೊಳ್ಳುತ್ತಿದ್ದರಂತೆ. ಈ ಶಿಕ್ಷಕರು ಬಂದ ದಿನದಿಂದಲೇ ಶಾಲಾ ಪರಿಸರದಲ್ಲಿ ಬದಲಾವಣೆ ತಂದರು. ತಮ್ಮ ವಾಸ ಸ್ಥಳದ ದೇಗುಲವೇನೋ ಎಂಬಂತೆ ಒಪ್ಪ ಓರಣವಾಗಿ ಪರವರ್ತಿಸಿದರು. ಶಾಲೆಯ ಮುಖ ಕಾಣದೇ ದಿಕ್ಕು ತಪ್ಪಿದ್ದ ಮಕ್ಕಳನ್ನು ಶಾಲೆಗೆ ಕರೆದು ತಂದರು. ಸಮಯದ ಪರಿಗಣನೆ ತೆಗೆದುಕೊಳ್ಳದೇ ಬೆಳಿಗ್ಗೆ 7ಗಂಟೆಗೆಲ್ಲ ಶಾಲೆಗೆ ಹಾಜರಾಗುತ್ತಿದ್ದ ಆ ಉಪಾಧ್ಯಾಯ ಪ್ರತೀ ಮನೆಗೂ ಹೋಗಿ ಮಕ್ಕಳನ್ನು ಹುರಿದುಂಬಿಸಿ ಕರೆತರುತ್ತಿದ್ದರು, ಕೈ ತೋಟದ ಮಹತ್ವ, ಔಷಧ ಗಿಡಗಳ ಮಹತ್ವ ಹೇಳುತ್ತಾ, ಹಾಡು ಸಂಭಾಷಣೆಗಳ ಮುಖಾಂತರವೇ ಮಕ್ಕಳ ಮನಗೆದ್ದು ಅಧ್ಯಯನಕ್ಕೆ ತೊಡಗಿಸುತ್ತಿದ್ದರು. ಮೊದಲಿಗೆ ಶಿಕ್ಷಕರ ಜಾತಿಯ ಕಾರಣಕ್ಕೆ ಊರಿನಲ್ಲಿ ಹನಿ ನೀರನ್ನು ಕೊಡಲು ನಿರಾಕರಿಸುತ್ತಿದ್ದ ಗ್ರಾಮದ ಜನ ಕ್ರಮೇಣ ಮೇಸ್ಟ್ರ ಕಾರ್ಯ ತತ್ಪರತೆಗೆ ತಲೆದೂಗಿದರು. ಇವತ್ತು ಅಲ್ಲಿ ಕಲಿತ ಮಕ್ಕಳು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ. ಇವತ್ತಿಗೂ ಪ್ರಾಥಮಿಕ ಶಾಲೆಯಲ್ಲಿ ತನ್ನನ್ನು ತಿದ್ದಿ ತೀಡಿದ ಆ ಶಿಕ್ಷಕರನ್ನ ನೆನೆಯುತ್ತಾರೆ.



ಆದರೆ ಎಷ್ಟು ಶಾಲೆಗಳಲ್ಲಿ ಇಂತಹ ವಾತಾವರಣವಿದೆ. ಇಷ್ಟು ಜನ ಶಿಕ್ಷಕರಿಗೆ ತಾವು ಮಾಡುವ ವೃತ್ತಿಯಲ್ಲಿ ಬದ್ದತೆಯಿದೆ ಎಂಬುದು ಇಲ್ಲಿ ಮುಖ್ಯವಾಗುತ್ತಿದೆ. ಭಾರತೀಯ ಶಿಕ್ಷಣ ವ್ಯವಸ್ಥೆ ಸರಿಯಿಲ್ಲ, ಇದರಲ್ಲಿ ಬದಲಾವಣೆ ಬೇಕು ಎಂಬಿತ್ಯಾದಿ ಆರೋಪಗಳನ್ನ ಮಾಡಲಾಗುತ್ತದೆ ಆದರೆ ನಮ್ಮ ಶಿಕ್ಷಣದಲ್ಲಿ ನೈತಿಕತೆಯ ಅಂಶಗಳಿವೆ, ವ್ಯಕ್ತಿಗಳ ಪರಿಪೂರ್ಣ ವಿಕಾಸಕ್ಕೆ ಅಗತ್ಯವಿರುವ ಅವಕಾಶಗಳಿವೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಇಲ್ಲಿ ಕೊರತೆಗಳನ್ನು ದೊಡ್ಡದು ಮಾಡುವುದಕ್ಕಿಂತ ಇರುವ ಅವಕಾಶಗಳು ಹೇಗೆ ಸದ್ವಿನಿಯೋಗವಾಗುತ್ತಿದೆ ಎಂಬುದು ಮುಖ್ಯವಾಗುತ್ತದೆ. ಈಗಿನಂತೆ ಹಿಂದೆ ಶಿಕ್ಷಣಕ್ಕೆ ಹೆಚ್ಚಿನ ಮೂಲಭೂತ ಸವಲತ್ತುಗಳು ಇರಲಿಲ್ಲ ಆದರೆ ಇವತ್ತು ಸಾಕು ಎನಿಸುವಷ್ಟು ಸವಲತ್ತುಗಳಿವೆ, ಗುಣಮಟ್ಟದ ಶಿಕ್ಷಣ ಕಾಯ್ದು ಕೊಳ್ಳಲು ಉನ್ನತ ದರ್ಜೆ ಯಲ್ಲಿ ಉತ್ತೀರ್ಣರಾದವರನ್ನೇ ಶಿಕ್ಷಕರನ್ನಾಗಿ ಆಯ್ಕೆ ಮಾಡಲಾಗುತ್ತಿದೆ. ಹೆಚ್ಚುವರಿ ವೇತನ,ರಜೆ, ತರಬೇತಿ ಇತ್ಯಾದಿಗಳನ್ನು ಕೊಡಮಾಡಿದೆ ಆದರೆ ಫಲಿತಾಂಶ ಶೂನ್ಯ. ಸರ್ಕಾರಗಳು ಕೂಡ ವ್ಯತಿರಿಕ್ತ ಪರಿಣಾಮಗಳಿಗೆ ಕಾರಣವಾಗಿದೆ ಅಂದರೆ ವಿಶ್ವ ಬ್ಯಾಂಕ್ ಯೋಜನೆ, ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತಂದು ದುಡ್ಡು ಮಾಡಿಕೊಳ್ಳುವ ಹಪಾಹಪಿಗೆ ಬಿದ್ದು ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣ ಮಾಡುವ ಮೂಲಕ ಅನಗತ್ಯವಾಗಿ ವಿವಿಧ ಹುದ್ದೆಗಳನ್ನು ಸೃಜಿಸುವ ಮೂಲಕ ಪಾಠ ಮಾಡಿಕೊಂಡಿರಬೇಕಾದ ಶಿಕ್ಷಕರುಗಳನ್ನು ತಂದು ಕೂರಿಸುತ್ತಿದೆ. ಇದು ಮೊದಲ ಯಡವಟ್ಟು. ಶಿಕ್ಷಕರುಗಳು ಪಾಠ ಮಾಡುವುದನ್ನು ಬಿಟ್ಟು ಅನ್ಯ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಇದು ಕಾರಣವಾಗುತ್ತದೆ. ಇನ್ನು ಬಹುತೇಕ ಶಿಕ್ಷಕರುಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಶಾಲೆಯ ಪಾಠಕ್ಕಿಂತ ಮನೆ ಪಾಠದ ವ್ಯಾಪಾರಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ರಾಜಕೀಯ ದಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಬಿಡುತ್ತಾರೆ. ಪ್ರಶ್ನಿಸುವ ಮೇಲಧಿಕಾರಿಗಳ ವಿರುದ್ದ ಸ್ಥಳೀಯ ವ್ಯವಸ್ಥೆಯನ್ನೆ ಎತ್ತಿ ಕಟ್ಟಿಬಿಡುತ್ತಾರೆ. ಎಲ್ಲದಕ್ಕಿಂತ ದುರಂತವೆಂದರೆ ಶಿಕ್ಷಕರುಗಳು ಜಾತಿವಾರು ಶಿಕ್ಷಕ ಸಂಘಗಳನ್ನು ಮಾಡಿಕೊಳ್ಳುವುದು! ಹೀಗಾದರೆ ಸಮಾಜ ಕಟ್ಟುವುದು ಸಾಧ್ಯವೇ ? ಶಿಕ್ಷಕ ಸ್ಥಾನದ ಘನತೆ ಉಳಿಸಲು ಸಾಧ್ಯವೇ ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...