Sunday, June 28, 2009

ಪತ್ರಕರ್ತರು ಮತ್ತು ಗೃಹಸಚಿವ ಆಚಾರ್ಯರ ಪ್ರೆಸ್ ಒಂಬುಡ್ಸ್ ಮೆನ್ ಪ್ರಸ್ತಾಪ

ಇದು ಪತ್ರಿಕಾ ದಿನಾಚರಣೆಯ ಮಾಸ, ಸಮಾಜದ ಆಗು-ಹೋಗುಗಳಲ್ಲಿ ಮುಳುಗಿ ಹೋಗುವ ಪತ್ರಕರ್ತ ತನ್ನನ್ನಷ್ಟೇ ಅಲ್ಲ ತನ್ನ ಕುಟುಂಬವನ್ನು ಮರೆತು ಸಮಯದ ಮಿತಿ ಇಡದೇ ಕಳೆದು ಹೋಗುತ್ತಾನೆ. ಒಮ್ಮೊಮ್ಮೆ ಇದು ಎಷ್ಟು ಅತಿಯಾಗುತ್ತದೆ ಎಂದರೆ ಸಮಾಜದ ಅಂಕು ಡೊಂಕು ಗಳನ್ನು, ಇತರರ ಬದುಕು-ಬವಣೆಗಳನ್ನು ವರದಿ ಮಾಡುವ ಭರದಲ್ಲಿ ತನ್ನ ಕುಟುಂಬದ ಬೇಕು-ಬೇಡಗಳನ್ನೇ ಗಮನಿಸದೇ ನಿರ್ಲಕ್ಷ್ಯ ಧೋರಣೆ ತಳೆದಿರುತ್ತಾರೆ.! ಹೊತ್ತಲ್ಲದ ಹೊತ್ತಿನಲ್ಲಿ, ಸಂಧಿಗ್ಧದ ಸನ್ನಿವೇಶಗಳಲ್ಲಿ, ಅಪಾಯಕಾರಿ ಸಂಧರ್ಭಗಳಲ್ಲಿ ಎಂತಹ ಅಡೆತಡೆಗಳನ್ನು ಲೆಕ್ಕಿಸದೇ ವರದಿಗಾರಿಕೆ ನಡೆಸುವ ಮತ್ತು ಅದನ್ನು ಪ್ರಕಟಿಸುವ ಸಾರ್ವಜನಿಕ ಹಿತಾಸಕ್ತಿ ಹೊಂದಿದ ವ್ಯಕ್ತಿ ಸದಾ ನೆತ್ತಿಯ ಅಲುಗಿನಲ್ಲೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸಮಾಜದಲ್ಲಿ ಕಾಣಬರುವ ಲೋಪದೋಷಗಳಿಗಳಿಗೆ ಸಂಬಂಧಿಸಿದಂತೆ ಸರ್ಕಾರದ, ಸಮಾಜದ ಗಮನ ಸೆಳೆಯಲು ಪತ್ರಿಕೆ ಬೇಕು, ಜನರಿಗೆ ಮಾಹಿತಿ ತಲುಪಿಸಲು ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ಆಡಳಿತ ರೂಢರಿಗೆ ಪತ್ರಿಕೆಗಳ, ದೃಶ್ಯವಾಹಿನಿಗಳ,ಪತ್ರಕರ್ತರು ಬೇಕೇ ಬೇಕು. ಇಂತಹವರಿಗೆ ಸೇವಾ ಭದ್ರತೆ, ಜೀವ ಭದ್ರತೆ, ಸ್ಥಿರತೆ ಕಡಿಮೆಯೇ. ಸ್ವಾತಂತ್ರ್ಯ ನಂತರ ಎಷ್ಟೋ ಸರ್ಕಾರಗಳು ಬಂದು ಹೋಗಿವೆ, ಸಮಾಜದ ಸರ್ವಾಂಗೀಣ ಅಭಿವೃದ್ದಿಗೆ ನೂರಾರು ಯೋಜನೆಗಳು, ಆರ್ಥಿಕ ಭದ್ರತೆಯ ಯೋಜನೆಗಳು ಜಾರಿಯಲ್ಲಿವೆ. ಆದರೆ ಯಾವುದೇ ಸರ್ಕಾರ ಅಥವ ಸಮಾಜದ ಮುಖ್ಯವಾಹಿನಿಯ ಮಂದಿ ಇದುವರೆಗೂ ಪತ್ರಕರ್ತರಅಭಿವೃದ್ದಿಯ ಬಗೆಗೆ ಕಿಂಚಿತ್ತು ಗಮನ ಹರಿಸಿಲ್ಲ. ಸ್ವತ: ಪತ್ರಕರ್ತರೇ ಒಗ್ಗೂಡಿ ಸರ್ಕಾರದ ಗಮನಕ್ಕೆ ಆಗಬೇಕಾದ ಕಾರ್ಯಗಳನ್ನು ಗಮನಕ್ಕೆ ತಂದರೂ ಅದಕ್ಕೆ ತೃಣ ಮಾತ್ರದ ಬೆಲೆ ಇಲ್ಲ. ಈಗ್ಯೆ ಕೆಲ ವರ್ಷಗಳ ಹಿಂದೆ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀತಿ ಪ್ರಕಟಿಸಲಾಗಿದೆ. ಕೇವಲ ೫೦೦-೧೦೦೦ ರೂಪಾಯಿಗಳ ಟಿಕೆಟ್ಗಳನ್ನು ಒಂದೆರೆಡು ವರ್ಷ ನೀಡಿ ಕೈತೊಳೆದು ಕೊಂಡ ಸರ್ಕಾರ ಇದುವರೆಗೂ ಬಸ್ ಪಾಸ್ ಸೌಲಭ್ಯ ಇರಲಿ ಬಜೆಟ್ ನಲ್ಲಿ ಘೋಷಿಸಿದ ಯಶಸ್ವಿನಿ ಯೋಜನೆಯನ್ನು ಜಾರಿಗೆ ತಂದಿಲ್ಲ. ಸಣ್ಣ ಪತ್ರಿಕೆಗಳ ಬೆಳವಣಿಗೆಗೆ ಆದ್ಯತೆ ನೀಡುವ ಜಾಹಿರಾತುಗಳಿಗೆ ಓಬೀರಾಯನ ಕಾಲದ ದರಪಟ್ಟಿಯನ್ನೆ ಮುಂದುವರೆಸಿಕೊಂಡು ಬಂದಿದೆ, ರಿಯಾಯ್ತಿ ದರದ ಮುದ್ರಣ ಹಾಳೆ, ಸರ್ಕಾರಿ ಜಾಹೀರಾತು ನೀಡುವಲ್ಲಿ ನಿರ್ಲಿಪ್ತ ಧೋರಣೆ ಪ್ರದರ್ಶಿಸುತ್ತಿದೆ. ಪತ್ರಕರ್ತರ ಮೇಲೆ ರಾಜ್ಯದ ವಿವಿದೆಡೆ ನಿರಂತರ ಹಲ್ಲೆ ನಡೆಯುತ್ತಿದೆ, ಯಾವ ಪ್ರಕರಣದಲ್ಲೂ ಪತ್ರಕರ್ತರಿಗೂ ರಕ್ಷಣೆ-ನ್ಯಾಯ ಸಿಕ್ಕಿಲ್ಲ. ಬದಲಿಗೆ ಜವಾಬ್ಧಾರಿ ಸ್ಥಾನದಲ್ಲಿರುವ ರಾಜ್ಯದ ಗೃಹ ಸಚಿವರು ಪತ್ರಕರ್ತರನ್ನು ಹಣಿಯುವ ಮಾತನಾಡುತ್ತಾರೆ, ಮಾತೆತ್ತಿದರೆ ಪ್ರೆಸ್ ಒಂಬುಡ್ಸ್ ಮನ್ ಜಾರಿಗೆ ತರುವ ಮಾತನಾಡುತ್ತಾರೆ. ಅಷ್ಟಕ್ಕೂ ಒಂಬುಡ್ಸ್ ಮನ್ ಅಂದರೇನು? ಹಿರಿಯ ನ್ಯಾಯಾಧೀಶರನ್ನೊಳಗೊಂಡ ಸ್ವತಂತ್ರ ತನಿಖಾ ಸಮಿತಿ. ವರದಿಗಳಿಂದ ಯಾರಿಗಾದರು ನೋವಾದರೆ, ವರದಿ ಸತ್ಯಕ್ಕೆ ದೂರ ಎನಿಸಿದರೆ ಯಾವುದೇ ಶುಲ್ಕವಿಲ್ಲದೇ ದೂರು ದಾಖಲಿಸುವ ವ್ವಸ್ಥೆ ಇದು. ಪತ್ರಿಕೆಗಳ ವಿರುದ್ದ, ಪತ್ರಕರ್ತರ ವಿರುದ್ದ ದೂರು ದಾಖಲಿಸಲು ನ್ಯಾಯಾಂಗ ವ್ಯವಸ್ಥೆ ಇದೆ, ಪ್ರಸ್ ಕೌನ್ಷಿಲ್ ಇದೆ, ಪತ್ರಕರ್ತರಿಗೆ ಸ್ವಯಂ ನಿಯಂತ್ರಣದ ಹಕ್ಕು ಇದೆ. ಹೀಗಿರುವಾಗ ಇನ್ನೊಂದು ಪ್ರೆಸ್ ಒಂಬುಡ್ಸ್ ಮನ್ ಅಗತ್ಯತೆಇಲ್ಲ. ಇಂತಹದ್ದೊಂದು ಸಣ್ಣ ವಿಷಯ ಅರಿಯದ ಸಚಿವ ಅಚಾರ್ಯ ಗೃಹ ಸಚಿವ ಸ್ಥಾನವನ್ನು ನಿರ್ವಹಿಸುತ್ತಿರುವ ರೀತಿ ಜನರಿಗೆ ತಿಳಿಯದ್ದೇನಲ್ಲ, ಹಲವಾರು ಸಂಧರ್ಭಗಳಲ್ಲಿ ಆ ಅಂಶ ಸಾಬೀತಾಗಿದೆ! ಸಮಾಜದ ಒಳಿತಿಗೆ ರಾಜಕೀಯ ವ್ಯಕ್ತಿಗಳು, ಸಚಿವರು ಮುಖ್ಯಮಂತ್ರಿಗಳು, ಸರ್ಕಾರಿ ಅಧಿಕಾರಿಗಳ ನಿಯಂತ್ರಣಕ್ಕೆ ಒಂಬುಡ್ಸ್ ಮನ್ ಅವಶ್ಯಕತೆ ಇದೆ. ಈ ಬಗೆಗೆ ಅಚಾರ್ಯ ಮೊದಲು ತಿಳಿದು ಕೊಳ್ಳಲಿ. ಖಾಸಗಿ ಬ್ಲಾಗ್ ನಿರ್ವಹಿಸುವ .drvsacharya.blogspot.com ಸಚಿವರು ನಿಯಮಕ್ಕೆ ವಿರುದ್ದವಾಗಿ ತನ್ನ ಬ್ಲಾಗಿನಲ್ಲಿ ಸರ್ಕಾರಿ ಲಾಂಛನ ಪ್ರದರ್ಶಿಸಿದ್ದಾರೆ. ಪತ್ರಿಕೆಗಳಲ್ಲಿ ಬರುವ ಪ್ರತಿ ವರದಿಗು ಇದರಲ್ಲಿ ವಿರುದ್ದವಾದ ಅಭಿಪ್ರಾಯ ಬರೆಯುತ್ತಾರೆ. ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟವಾದಾಗ ಸ್ಥಳಕ್ಕೆ ಭೇಟಿ ನೀಡಲಿಲ್ಲ ಎಂದು ಪತ್ರಿಕೆಗಳು ಬರೆದರೆ, ಗೃಹಸಚಿವರು ಅಲ್ಲಿಗೆ ಹೋಗಿ ಮಾಡುವುದಾದರೂ ಏನು ಎಂಬ ಧಾಟಿಯ ಹೇಳಿಕೆ ಪ್ರಕಟಿಸುತ್ತಾರೆ. ಇವರ ವಿರುದ್ದ ಕ್ರಮ ಜರುಗಿಸಲು ಯಾವ ಒಂಬುಡ್ಸ್್ ಮನ್ ರಚನೆಯಾಗಬೇಕೋ? ಅವರೇ ಹೇಳಬೇಕು. ಪೋಲೀಸರು ಪತ್ರಕರ್ತರಿಗೆ ಮಾಹಿತಿ ನೀಡದಂತೆ ನಿರ್ಬಂದಿಸುವ ಕ್ರಿಯೆಯು ಅಲ್ಲಲ್ಲಿ ಜಾರಿಯಲ್ಲಿದೆ. ಇದು ಎಲ್ಲ ಸಂಧರ್ಭಕ್ಕೂ ಪಥ್ಯವಾಗಲಾರದು ಎಂಬುದನ್ನು ತಿಳಿದರೆ ಒಳಿತು. ಇದು ವಿಪರ್ಯಾಸದ ಸಂಗತಿಯಲ್ಲದೇ ಮತ್ತೇನು? ಇವತ್ತು ಉತ್ತರದ ರಾಜ್ಯಗಳು ಸೇರಿದಂತೆ ದಕ್ಷಿಣದ ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ಪತ್ರಿಕೆಗಳು ರಾಜಕೀಯ ಪಕ್ಷಗಳ, ಉಳ್ಳವರ ಸ್ವತ್ತಾಗಿವೆ. ಅವರವರ ಹಿತಾಸಕ್ತಿಗೆ ಅನುಗುಣವಾಗಿ ಅವು ವರದಿ ಪ್ರಕಟಿಸುತ್ತವೆ. ಇದು ಸಮಾಜಕ್ಕೆ ಒಳಿತಲ್ಲ. ನಮ್ಮ ರಾಜ್ಯದಲ್ಲಿ ಸಧ್ಯ ಅಂತಹ ಪರಿಸ್ಥಿತಿ ಇಲ್ಲ.! ಸಧ್ಯದ ಮಟ್ಟಿಗೆ ಒಂದು ನಿಯತ್ತು, ಸಿದ್ದಾಂತದ ನೆರಳಿನಲ್ಲೇ ಪತ್ರಿಕೆಗಳ ಪತ್ರಕರ್ತರ ಕಾರ್ಯ ನಿರ್ವಹಣೆಯಿದೆ. ಎಲ್ಲ ಕಡೆ ಇರುವಂತೆ ಇಲ್ಲೂ ಕೆಲವು ಹೀನ ಸುಳಿಯ ಮಂದಿ ಪತ್ರಿಕೋಧ್ಯಮದ ಸೋಗಿನಲ್ಲಿ ಪತ್ರಕರ್ತರೆಂಬ ಹೊಂದಿದ್ದಾರಾದರು ಅವುಗಳಿಗೆ ತಾತ್ವಿಕ ಉಳಿಗಾಲವಿಲ್ಲ. ಹಾಗಾಗಿ ಭಯ ಪಡುವ ಅಗತ್ಯತೆ ಇಲ್ಲ.
ನಿಮಗೆ ಗೊತ್ತೇ ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚಿನ ಪತ್ರಿಕೆಗಳು, ಮತ್ತು ಪತ್ರಕರ್ತರು ಇರುವುದು ಭಾರತದಲ್ಲಿ, ಪ್ರಜಾಪ್ರಭುತ್ವದಲ್ಲಿ ಕಾವಲು ನಾಯಿಯ ಕೆಲಸವನ್ನು ನಿರ್ವಹಿಸುವ ಪತ್ರಕರ್ತರು ಒಟ್ಟು ಸಮುದಾಯದ ಭಾವನೆಗಳನ್ನು ಕ್ರೋಢಿಕರಿಸುವ ಕೆಲಸವನ್ನು ಮಾಡುತ್ತಿವೆ. ಇತರೆ ಎಲ್ಲ ದೇಶಗಳಿಗಿಂತ ಅತ್ಯಂತ ಹೆಚ್ಚು ಸಮರ್ಥವಾಗಿ ಯಾವ ವಿಷಯವನ್ನು ಕಡೆಗಣಿಸದೆ, ಎಲ್ಲ ರೀತಿಯ ವಿಚಾರಗಳಿಗೂ ವೇದಿಕೆ ಒದಗಿಸುತ್ತಿದೆ. ಹಾಗಾಗಿಯೇ ಪತ್ರಿಕೆಗಳು ದೇಶದ ಜನರ ಜನಜೀವನದ ಭಾಗವಾಗಿ ಕಾರ್ಯನಿರ್ವಹಿಸುತ್ತಿವೆ, ಆದರೆ ವಿದೇಶದಲ್ಲಿ ಪತ್ರಿಕೆಗಳ ಆದ್ಯತೆಗಳು ಸೀಮಿತವಾಗಿರುತ್ತವೆ. ಜಾಗತಿಕ ಮಟ್ಟದಲ್ಲಿ ಪತ್ರಿಕೆಗಳ ಹುಟ್ಟಿಗೆ ಚಾಲನೆ ದೊರೆತದ್ದು 17ನೇ ಶತಮಾನದಲ್ಲಿ. 17ನೇ ಶತಮಾನದ ಅಂತ್ಯದಲ್ಲಿ ಭಾರತದಲ್ಲಿ ಜೇಮ್ಸ್ ಆಗಸ್ಟಸ್ ಹಿಕಿ ಎಂಬಾತ ಭಾರತೀಯ ಪತ್ರಿಕೋಧ್ಯಮಕ್ಕೆ ಮುನ್ನುಡಿ ಬರೆದ. ದೇಶದ ಪ್ರಥಮ ಪತ್ರಿಕೆ ಜನವರಿ ೧೭೮೦ ರಂದು ಕಲ್ಕತ್ತಾ ನಗರದಿಂದ 'ಕಲ್ಕತ್ತಾ ಜನರಲ್ ಅಡ್ವರ್ಟೈಸ್" ಅಥವ "ಬೆಂಗಾಲ್ ಗೆಜೆಟ್" ಹೆಸರಿನಲ್ಲಿ ಹೊರಬಂತು. 1789ರಲ್ಲಿ ಬಾಂಬೆ ಮಹಾನಗರದಿಂದ ಬಾಂಬೆ ಹೆರಾಲ್ಢ್ ಬಂತು, ನಂತರ ಬಾಂಬೆ ಕೊರಿಯರ್ , ಟೈಮ್ಸ್ ಆಪ್ ಇಂಡಿಯಾ ಪತ್ರಿಕೆ ಪ್ರಕಾಶನ ಆರಂಬಿಸಿತು. ಭಾರತೀಯ ಭಾಷಾ ಪತ್ರಿಕೆಯಾಗಿ ಚಲಾವಣೆಗೆ ಬಂದದ್ದು ಬಂಗಾಳಿ ಭಾಷೆಯ ಸಮಾಚಾರ್ ದರ್ಪಣ್ . 1854ರ ನಂತರ ಇತರೆ ಭಾರತೀಯ ಭಾಷೆಯ ಪತ್ರಿಕೆಗಳು ಜನ್ಮ ತಳೆದವು. 1950ರಲ್ಲಿ ೨೧೪ ದಿನಪತ್ರಿಕೆಗಳಿದ್ದರೆ, ಆ ಪೈಕಿ ೪೪ ಆಂಗ್ಲಭಾಷಾ ಪತ್ರಿಕೆಗಳು ಇದ್ದವು.ಈಗ ಆ ಸಂಖ್ಯೆ ದುಪ್ಪಟ್ಟಾಗಿದೆ. ಸುಮಾರು 99ಮಿಲಿಯನ್ ನಷ್ಟು ಪತ್ರಿಕಾ ಪ್ರತಿಗಳನ್ನು ಜನ ಓದುತ್ತಿದ್ದಾರೆ. ಸಮಾಜದಲ್ಲಿ ಜಾಗೃತಿಯ ಅಲೆಯನ್ನು ಪತ್ರಿಕೆಗಳು ಸಮರ್ಥವಾಗಿ ಹುಟ್ಟುಹಾಕಿವೆ. ಕೇರಳದಂತಹ ರಾಜ್ಯದಲ್ಲಿ ಪತ್ರಿಕೆಗಳ ಒಡನಾಟವಿಲ್ಲದೇ ಜನರ ಬದುಕೇ ಇಲ್ಲ ಎಂಬಷ್ಟರ ಮಟ್ಟಿಕೆ ಪತ್ರಿಕಾ ಓದುಗರ ಸಂಖ್ಯೆ ಇದೆ. ಇದು ಪತ್ರಿಕೆಗಳ ಮಾಯಾ ಜಗತ್ತು.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...