Sunday, June 24, 2012

ಕನ್ನಡ ಅನ್ನದ ಭಾಷೆಯಾಗದಿದ್ದರೆ... ಹೀಗೆ!


ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಸಂಧರ್ಭದಲ್ಲೇ,ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಆರಂಭಿಸಬಾರದೆಂದು ಕನ್ನಡ ಸಾಹಿತ್ಯ ಪರಿಷತ್ತು ನಿರ್ಣಯ ಕೈಗೊಂಡಿದೆ. ಈ ನಡುವೆ ಪರ-ವಿರೋಧದ ಚಟುವಟಿಕೆಗಳು ಚಾಲ್ತಿಗೆ ಬಂದಿವೆ.ಆದರೆ ಬದಲಾದ ಕಾಲಘಟ್ಟದಲ್ಲಿ ಆಂಗ್ಲ ಮಾಧ್ಯಮ ಎಷ್ಟು ಪ್ರಸ್ತುತ ಮತ್ತು ಅಪ್ರಸ್ತುತ ಇದರಿಂದ ಯಾರಿಗೆ ಅನುಕೂಲ ಮತ್ತು ಅನಾನುಕೂಲ ? ಈ ನಡುವೆ ಕನ್ನಡ ಅನ್ನದ ಭಾಷೆಯಾಗಲು ಇರುವ ಅಡ್ಡಿ ಏನು ಎಂಬುದರ ವಿಸ್ತೃತ ಚರ್ಚೆ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಪರವೂ ಅಲ್ಲದ ವಿರೋಧವೂ ಅಲ್ಲದ ವಸ್ತು ನಿಷ್ಠವಾದ ವಿಚಾರದ ಅವಲೋಕನದ ಅಗತ್ಯತೆ ಇದೆ.
ಪ್ರಾಥಮಿಕ ಶಾಲಾ ಹಂತದಲ್ಲಿ ಆಂಗ್ಲ ಭಾಷಾ ಕಲಿಕೆಗೆ ಒತ್ತು ನೀಡಿದ ಸರ್ಕಾರ ಇದೀಗ ಆಂಗ್ಲ ಮಾಧ್ಯಮ ಆರಂಭಿಸುವ ಉತ್ಸಾಹದಲ್ಲಿದೆ. ರಾಜ್ಯದಲ್ಲಿ ಕಳೆದ 3-4ವರ್ಷಗಳಲ್ಲಿ 10000ಕ್ಕೂ ಹೆಚ್ಚು ಕನ್ನಡ ಶಾಲೆಗಳು ಕಣ್ಮುಚ್ಚಿವೆ ಈ ಕುರಿತು ಸಾಹಿತಿಗಳು ಮತ್ತು ಚಿಂತಕರು ಆಂಧೋಲನವನ್ನೇ ಆರಂಬಿಸಿದ್ದಾರೆ ಹೀಗಿರುವಾಗ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಬಿಸಿದರೆ ಕನ್ನಡ ಶಾಲೆಗಳ ಕತ್ತು ಹಿಸುಕಿದಂತಾಗುತ್ತದೆ ಅಲ್ಲವೇ, ಕನ್ನಡ ಭಾಷೆಗೆ ಆಧ್ಯತೆ ಕೊಡಬೇಕಾದ ಸರ್ಕಾರವೇ ಮುಂದಾಗಿ ಕನ್ನಡ ಶಾಲೆಗಳನ್ನು ಕೊಲ್ಲುವ ಕೆಲಸ ಯಾಕೆ ಮಾಡುತ್ತಿದೆ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಕನ್ನಡ ಅತ್ಯಂತ ಪ್ರಾಚೀನ ಭಾಷೆ ಅದಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ ಮೊಗೆದಷ್ಟು ಉಕ್ಕುವ ಉತ್ಸಾಹವೂ ಇದೆ, ಆದರೆ ಕಾಲ ಬದಲಾದಂತೆ ಜನರ ಮನಸ್ಥಿತಿಗಳು ಮತ್ತು ಆಧ್ಯತೆಗಳು ಬದಲಾಗುತ್ತಿವೆ. ಬದಲಾದ ಸಂಸ್ಕೃತಿ ಮತ್ತು ಆರ್ಥಿಕತೆ, ಬದುಕಿನ ಸ್ಥಿರತೆಗಾಗಿ ಕನ್ನಡದ ಆಯ್ಕೆಯ ಬದಲಿಗೆ ಇಂಗ್ಲೀಷ್ ಮಾಧ್ಯಮದೆಡೆಗೆ ಆಕರ್ಷಿಸುವಂತೆ ಮಾಡಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ, ಅನುಷ್ಠಾನದ ಹಂತದಲ್ಲಿದೆ, ಅದಕ್ಕಾಗಿ ಸಮ್ಮೇಳನಗಳು ಮತ್ತು ನಿರ್ಣಯಗಳು , ಕನ್ನಡ ಹಬ್ಬಗಳು, ಚಳುವಳಿಗಳು ನಡೆಯುತ್ತಿವೆ ಆದರೆ ಬದುಕನ್ನು ಕಟ್ಟಿಕೊಡುವ ಭಾಷೆಯನ್ನಾಗಿ ಕನ್ನಡವನ್ನು ರೂಪಿಸುವಲ್ಲಿ ಅಡ್ಡಿ ಉಂಟಾಗಿದೆ. ಅದಕ್ಕೆ ಸ್ಥಳಿಯ ಕಾರಣಗಳು ಇಲ್ಲವಾದರೂ ಜಾಗತಿಕ ಮಟ್ಟದ ನಿರ್ಣಯಗಳು ಅನಿವಾರ್ಯವೆನಿಸುವ ಅಭಿವೃದ್ದಿ ಪ್ರಕ್ರಿಯೆಗಳು ಕನ್ನಡದ ಬದುಕು ಕಟ್ಟಲು ನಮ್ಮ ನೆಲದಲ್ಲಿಯೇ ತಡೆವೊಡ್ಡಿರುವುದು ವಿಷಾಧನೀಯಕರ ಸಂಗತಿ. 
ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ಮಾತನಾಡಲ್ಪಡುವ 40ಭಾಷೆಗಳ ಪೈಕಿ ಕನ್ನಡಕ್ಕೂ ಒಂದು ಸ್ಥಾನವಿದೆ ಎಂಬುದನ್ನು ಮರೆಯುವಂತಿಲ್ಲ, ಜಗತ್ತಿನಾಧ್ಯಂತ 38ಮಿಲಿಯನ್ ಮಂದಿ ಕನ್ನಡ ಭಾಷಿಕರಿದ್ದಾರೆಂಬುದು ಅಷ್ಟೆ ಸಂತಸದಾಯಕವಾದ ವಿಚಾರ. 5ನೇ ಶತಮಾನದಲ್ಲಿ ಕನ್ನಡ ಭಾಷೆಯ ಬೆಳವಣಿಗೆಯನ್ನು ಕಾಣಬಹುದು, ಇವತ್ತು ರಾಜ್ಯದಲ್ಲಿ ಪ್ರತೀ 20ಕಿ.ಮಿಗೆ ಕನ್ನಡದ ಭಾಷೆಯ ವೈವಿದ್ಯವನ್ನು ಕಾಣಬಹುದು ರಾಜ್ಯಾದಾಧ್ಯಂತ 22ಕ್ಕೂ ಹೆಚ್ಚು ರೀತಿಯ ವಿಭಿನ್ನ ಶೈಲಿಯ ಕನ್ನಡ ಭಾಷೆ ಮಾತನಾಡುವುದನ್ನು ಕಾಣಬಹುದು. ಭಾವನೆಗಳ ಹಂಚಿಕೆಗೆ ಮತ್ತು ಚಿಂತನಾಕ್ರಮಕ್ಕೆ ಸಾಥ್ ನೀಡುವ ಕನ್ನಡದ ಕೃತಿಗಳು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲೂ ತನ್ನ ಛಾಪನ್ನು ಮೂಡಿಸಿವೆ. ಸಾಹಿತ್ಯ, ಸಿನಿಮಾ, ಕಾರ್ಪೋರೇಟ್ ಕ್ಷೇತ್ರ ಹಾಗೂ ರಾಜಕೀಯ, ಸಾಪ್ಟ್ ವೇರ್ ಉದ್ಯಮ ಎಲ್ಲೆಡೆಯೂ ಕನ್ನಡಿಗರ ಕೀರ್ತಿ ಪತಾಕೆ ಇದೆ ಆದರೆ ಅದು ವ್ಯಕ್ತಿಗತವಾಗಿ ಅವರು ಕನ್ನಡಿಗರು ಎಂಬಷ್ಟಕ್ಕೆ ಮಾತ್ರ ಸೀಮಿತವಾಗಿದೆ. ಪರಿಮಿತ ವಲಯವನ್ನು ಮೀರಿ ಜಾಗತಿಕ ಸ್ಥಾನ ಗಳಿಸಿಕೊಳ್ಳುವಲ್ಲಿ ಸ್ಥಾನಿಕ ಭಾಷೆ ಕನ್ನಡಕ್ಕೆ ಸಾಧ್ಯವಾಗಿಲ್ಲ ಬಹುಶ ಈ ಕಾರಣಕ್ಕೆ ಅನೇಕ ಮಂದಿ ಆಂಗ್ಲ ಮಾಧ್ಯಮದೆಡೆಗೆ ತಮ್ಮ ಒಲವು ತೋರಿಸಲಾರಂಬಿಸಿದ್ದಾರೆ. 
ಒಂದೆಡೆ ಖಾಸಗಿ ಲಾಬಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವುದಕ್ಕೆ ಅಡ್ಡಿಯಾಗಿದ್ದರೆ ಮತ್ತೊಂದೆಡೆ ದೇಶದಲ್ಲಿ ಜಾರಿಯಲ್ಲಿರುವ ಆರ್ಥಿಕ ಉದಾರೀಕರಣ ನೀತಿ ನಮ್ಮ ಮೂಲ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುತ್ತಿರುವುದಲ್ಲದೇ ಭಾಷೆಯ ಬೆಳವಣಿಗೆಯ ಮೇಲೂ ಅಡ್ಡ ಪರಿಣಾಮ ಬೀರಿದೆ, ಹಾಗಾಗಿ ಕನ್ನಡ ಭಾಷಿಕರಿಗೆ ಅಲ್ಲಿ ಅವಕಾಶಗಳು ಕಡಿಮೆಯಾಗಿವೆ. ಈ ಆಧುನಿಕ ಜಗತ್ತಿನಲ್ಲಿ ಬದುಕಲು ಹಣದ ಹಿಂದೆ ಓಡಬೇಕಾದ ಅನಿವಾರ್ಯ ಸ್ಥಿತಿ ಸೃಷ್ಠಿಯಾಗಿರುವುದು ಕನ್ನಡದ ತೀವ್ರೆತೆಯನ್ನು ಕಡಿಮೆ ಮಾಡಿದೆ ಎನ್ನಲಡ್ಡಿಯಿಲ್ಲ ಅಲ್ಲವೇ. ಒಬ್ಬ ಕೂಲಿ ಕಾರ್ಮಿಕನ ಮಗನೂ ಸಹಾ ಕೂಡಿಟ್ಟ ಜೋಳಿಗೆಯನ್ನು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಲು ವೆಚ್ಚ ಮಾಡುತ್ತಾನೆಂದರೆ ಆತನ ಮನಸ್ಥಿತಿ ಹೇಗಿದೆ? ತನ್ನ ತಲೆಮಾರಿಗೆ ಶ್ರಮದ ದುಸ್ಥಿತಿಯ ಜೀವನ ಸಾಕು ತನ್ನ ಮಕ್ಕಳಾದರೂ ಉನ್ನತ ಸ್ಥಾನಗಳನ್ನು ಗಳಿಸಲಿ ದುಡಿದು ಬದುಕಲಿ ಎಂಬ ಅಪೇಕ್ಷೆ ಹೊಂದುವುದು ಅದಕ್ಕೆ ಕಾರಣವಿರಬಹುದು. ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದಾಗ ಶ್ರಮಿಕ ವರ್ಗಕ್ಕೆ, ಕಾರ್ಮಿಕ ವರ್ಗಕ್ಕೆ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ಅಂದರೆ ಕನ್ನಡದಲ್ಲಿ ಶಿಕ್ಷಣದ ಗುಣಮಟ್ಟವಿಲ್ಲವೆ ಎಂಬ ಪ್ರಶ್ನೆ ಏಳಬಹುದು? ಕನ್ನಡದ ಗುಣಾತ್ಮಕತೆ ಇದ್ದರೂ ಅದು ಅನ್ನದ ಭಾಷೆ ಆಗಬೇಕಲ್ಲವೇ ? ಅದು ಅನ್ನದ ಭಾಷೆಯಾಗ ಬೇಕಾದರೆ ಪೂರಕ ವಾತಾವರಣ ಬೇಕಲ್ಲವೇ ಅದೇ ಇಲ್ಲದ ಮೇಲೆ ಯಾವ ಗುಣಾತ್ಮಕ ಶಿಕ್ಷಣ ನೀಡಿದರೂ ಪ್ರಯೋಜನವೇನು? ಇಂಗ್ಲೀಷ್ ಜಾಗತಿಕ ಭಾಷೆ, ಅದರ ವಿಸ್ತೃತತೆ ಜಾಗತಿಕವಾಗಿ ಎಲ್ಲಾ ಆಯಾಮಗಳನ್ನು ಮೀರಿ ಸಾಗಿದೆ ಹೀಗಿರುವಾಗ ಅದನ್ನು ಅನಿವಾರ್ಯವೆನ್ನುವಂತೆ ಅಪ್ಪಿಕೊಂಡರು ಕನ್ನಡತನಕ್ಕೆ ಧಕ್ಕೆಯಾಗದಂತೆ ವೈಯುಕ್ತಿಕ ನೆಲೆಗಟ್ಟಿನಲ್ಲಿ ಕಾಪಾಡಿಕೊಂಡಲ್ಲಿ ಸೂಕ್ತ ವಾಗಬಹುದೇನೋ.
ಈ ಲೇಖನವನ್ನು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪತ್ರಕರ್ತ ಮಿತ್ರರಾದ ಪ್ರಿಯ ಚಾಮರಾಜಸವಡಿ ಯವರು ಪ್ರಕಟಿಸಿದ್ದಾರೆ ಅದನ್ನು ಈ ಲಿಂಕ್ ನಲ್ಲಿ ನೋಡಬಹುದು ಅವರಿಗೆ ಧನ್ಯವಾದಗಳು
http://www.rediffmail.com/cgi-bin/red.cgi?red=http%3A%2F%2Fepaper%2Esamyukthakarnataka%2Ecom%2F44198%2FSamyuktha%2DKarnataka%2Fjune%2D26%2D2012%2DHU%23page%2F13%2F1&isImage=0&BlockImage=0&rediffng=0

Tuesday, June 5, 2012

ಆಚಾರವಿಲ್ಲದ ನಾಲಿಗೆ ನಿನ್ನ ನೀಚಬುದ್ದಿಯ.....!

ಳೆದ ಕೆಲವು ತಿಂಗಳುಗಳಿಂದ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಕೆಲವು ಮಂದಿ ಮನಬಂದಂತೆ ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗದ ಮಾತುಗಳನ್ನು ಸ್ಥಾನದ ಘನತೆಯನ್ನು ಮೀರಿ ಆಡುತ್ತಿದ್ದಾರೆ. ಸಮಾಜದ ವಿವಿಧ ಸ್ಥರಗಳಲ್ಲಿರುವ ಜನರ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಮತ್ತು ಸಂಘರ್ಷಮಯ ವಾತಾವರಣವನ್ನು ಸೃಷ್ಟಿಸುತ್ತಿದೆ. ಸೈದ್ಧಾಂತಿಕ ತಳಹದಿಯ ಮೇಲೆ ಆಚಾರ-ವಿಚಾರಗಳು ಸಮಾನಂತರದಲ್ಲಿದ್ದರೆ ಮಾತ್ರ ಅದಕ್ಕೆ ಮನ್ನಣೆ ಇಲ್ಲದಿದ್ದರೆ ಸಾಮಾಜಿಕ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲವಾಗುವುದು ಖಚಿತ. ಅಂತಹ ಪ್ರಮುಖ ವಿದ್ಯಮಾನಗಳತ್ತ ಒಂದು ಮೆಲುಕು ನೋಟ ಇಲ್ಲಿದೆ.
ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ನಕ್ಸಲೈಟರಾಗುತ್ತಾರೆ ಎಂದು ಈಗ್ಯೆ ಕೆಲ ತಿಂಗಳ ಹಿಂದೆ ಅಪ್ಪಣೆ ಕೊಡಿಸಿದ್ದು ರವಿಶಂಕರ್ ಗುರೂಜಿ ಎಂಬ ಹೆಣ್ಣು ಕಂಠದ ಸ್ವಾಮೀಜಿ. ಧಾರ್ಮಿಕ ಪ್ರವಚನಗಳ ಮೂಲಕ ಹೆಸರು ಮಾಡಿರುವ ಈತ ಆಧ್ಯಾತ್ಮಿಕ ವಿಚಾರಗಳ ಜೊತೆಗೆ ವ್ಯಾಯಾಮವನ್ನು ಮಾಡಿಸುವುದುಂಟು. ಕಾರ್ಪೋರೇಟ್ ಶಕ್ತಿಗಳ ಮೂಲಕ ಆಧ್ಯಾತ್ಮಿಕ ಶಿಬಿರಗಳನ್ನು ನಡೆಸುವ ರವಿಶಂಕರ್ ಗುರೂಜಿ ತನ್ನದೇ ಆದ ಶಕ್ತಿ ವಲಯವನ್ನು ಪ್ರತಿಷ್ಠಾಪಿಸಿಕೊಂಡಿರುವಾತ. ಅನೇಕ ಗಣ್ಯರ ನಡುವೆ ಇವರಿಗೂ ಆಧ್ಯತೆ ಉಂಟು. ನಮ್ಮಲ್ಲಿ 'ಮಠಾಧೀಶರು' ಗಳನ್ನು ಬಾಬಾ ಗಳನ್ನು ನಂಬುವ ಮತ್ತು ಆರಾಧಿಸುವ ಮೂಡಸಂಸ್ಕೃತಿ ಇನ್ನೂ ಜಾರಿಯಲ್ಲಿರುವುದರಿಂದ (ಈ ಪೈಕಿ ಸುಶಿಕ್ಷಿತರೆನಿಸಿಕೊಂಡ ಪ್ರಜ್ಞಾವಂತರೇ ಹೆಚ್ಚು ಎನ್ನುವುದು ಇನ್ನೂ ದುರಂತದ ಸಂಗತಿಯೇ ಹೌದು!) ಇವರು ಹೇಳಿದ್ದನ್ನೆ ಸತ್ಯವೆಂದು ನಂಬುವ ಸಮೂಹವೇ ಇದೆ. ಹೀಗಿರುವಾಗ ಅದ್ಯಾವ ದೃಷ್ಟಿಕೋನದಲ್ಲಿ ಈ ಸ್ವಾಮೀಜಿ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ನಕ್ಸಲೈಟರು ಗಳಾಗುತ್ತಾರೆ ಎಂದರೋ ತಿಳಿಯದು. ಕಾರ್ಪೋರೇಟ್ ಶಕ್ತಿಗಳ ಮುಖವಾಡವಾಗಿರುವ ಈತ ಖಾಸಗಿ ಶಿಕ್ಷಣದ ಅಡ್ಡೆಗಳನ್ನು ಪ್ರೋತ್ಸಾಹಿಸಲು ಈ ಮಾತನ್ನು ಆಡಿದಂತಿದೆಯಲ್ಲವೇ?
            ನಡೆದಾಡುವ ದೇವಮಾನವ ಎಂಬ ಬಿರುದಿಗೆ ಪಾತ್ರರಾಗಿರುವ ತುಮಕೂರು ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿ ಸಮಾಜೋದ್ದಾರಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವ ಅರ್ಪಣಾ ಭಾವ, ಸಾಧನೆ ಯಾವತ್ತಿಗೂ ನೆನಪಿನಲ್ಲಿಡುವಂತಹದ್ದು. ಸ್ವಾಮಿಗಳು ಶಿಸ್ತಿನ ಮತ್ತು ನ್ಯಾಯದ ಪ್ರತೀಕ ಹಾಗೆಯೇ ಧಾರ್ಮಿಕ ಕೈಂಕರ್ಯದಲ್ಲೂ ಆರಾಧಿಸ ಬಹುದಾದ ವ್ಯಕ್ತಿತ್ವ ಹೊಂದಿದವರು. ಇಂತಹ ಸ್ವಾಮೀಜಿ, ಮುಖ್ಯ ಮಂತ್ರಿ ಸದಾನಂದ ಗೌಡ ತುಮಕೂರಿಗೆ ತೆರಳಿ ಮಠದ ಆವರಣದಲ್ಲಿ ಕೋಟಿ ಲಿಂಗ ಸ್ಥಾಪನೆಗೆ ಕಾರ್ಯಕ್ರಮ ನೆರವೇರಿಸಿ ಹೋದ ಮರುದಿನಕ್ಕೆ ಅದನ್ನು ನಿರಾಕರಿಸಿದ್ದು ಅವರ ವ್ಯಕ್ತಿತ್ವಕ್ಕೆ ಘನತೆ ತರುವಂತಹದ್ದೇ? ಆರೋಪಿಯಾಗಿ ಆಸ್ಪತ್ರೆಯ ಜೈಲಿನಲ್ಲಿದ್ದ ಮಾಜಿ ಸಿಎಂ ಬಿಎಸ್ ವೈ ಯನ್ನು ಖುದ್ದಾಗಿ ಹೋಗಿ ಆಶೀರ್ವದಿಸಿ ಬಂದದ್ದು ಶೋಭೆ ತರುವ ವಿಷಯವೇ? ಸಿಎಂ ಸದಾನಂದ ಗೌಡ ತನ್ನ ಹುಟ್ಟುಹಬ್ಬದ ದಿನದಂದು ಮಠಕ್ಕೆ ಹೋಗಿ ಆಶೀರ್ವಾದ ಬೇಡಿದರೆ ಮೌನವಾಗಿ ಕುಳಿತದ್ದು ಸಾರ್ವತ್ರಿಕ ವಲಯದಲ್ಲಿ ಸ್ವಾಮೀಜಿಯವರ ಬಗೆಗೆ ಎಂತಹ ಭಾವನೆಯನ್ನು ಮೂಡಿಸುತ್ತದೆ ಅಲ್ಲವೇ?
ಮೊನ್ನೆ ಮೊನ್ನೆ ಹಾಸನದಲ್ಲಿ ನಡೆದ ಜಾತಿ ಸಮಾರಂಭವೊಂದಕ್ಕೆ ಆಗಮಿಸಿದ್ದ ಊರಗುಂಡ ಪೆದ್ದಲಿಂಗನೆಂಬ ವಿಚಿತ್ರ ಹೆಸರಿನ ಸ್ವಾಮೀಜಿಯೊಬ್ಬ ಸಾರ್ವಜನಿಕ ವೇದಿಕೆಯಲ್ಲಿ ನಿಂತು ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಹಳಿಯುವ ಭರದಲ್ಲಿ ಭಾರತ ನೀಚ ದೇಶ ಎಂದು ಜರಿದನಲ್ಲಾ ಆತ ಜನಿಸಿದ್ದು ಮತ್ತು ಸಂಸ್ಕಾರ ಪಡೆದದ್ದು ವಿದೇಶದಲ್ಲಾ? ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ದೇಶದ ಸಾಂವಿಧಾನಿಕ ವ್ಯವಸ್ಥೆಯನ್ನು ಗೌರವಿಸುವ ಬದಲಿಗೆ ವರ್ಣ ವ್ಯವಸ್ಥೆಯ ಸಲುವಾಗಿ ದೇಶವನ್ನು ಜರಿಯಲು ನಿಂತವನ ವಿರುದ್ದ ಜಿಲ್ಲಾಡಳಿತ ತುಟಿಪಿಟಕ್ಕೆನ್ನದೇ ಹೋದದ್ದು ಮಾತ್ರ ಮತ್ತೂ ದುರಂತ ಅಲ್ಲವೇ? ಯೋಗಾಸನ ಮಾಡಿಸುವ ಬಾಬಾ ರಾಮದೇವ ತನ್ನದೇ ಒಡೆತನದ ಸಂಸ್ಥೆಗಳಲ್ಲಿ ನಡೆಯುವ ವಂಚನೆ ಮತ್ತು ಶೋಷಣೆಗಳನ್ನು ಇಟ್ಟುಕೊಂಡು ಭ್ರಷ್ಟಾಚಾರದ ವಿರುದ್ದ ಸೆಣಸಲು ನಿಂತು ಬಿಡುತ್ತಾರೆ, ಸಮಯಕ್ಕೆ ತಕ್ಕಂತೆ ಮತೀಯ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಿಡುತ್ತಾರೆ ಒಂದು ವರ್ಗದ ಜನ ಅವರ ಬೆಂಬಲಕ್ಕೆ ನಿಂತು ಬಿಡುತ್ತಾರೆ. ಇಂತಹ ಬಾಬಾಗಳಿಂದ ಅದೆಂತಹ ನಾಯಕತ್ವ ಸಿಕ್ಕೀತು ಈ ದೇಶದ ಪ್ರಮುಖ ಹೋರಾಟಕ್ಕೆ ? ದೇಶದ ಸಮುಷ್ಠಿಯೇ ಬೆನ್ನಿಗೆ ನಿಂತು ಬೆಂಬಲಿಸಿದರೆ ಅಣ್ಣಾ ಹಜಾರೆಯಂತಹ ಗಾಂಧೀವಾದಿ ಹೋರಾಟಗಾರ ಸ್ವಾಸ್ಥ್ಯ ಕಳೆದುಕೊಂಡವನಂತೆ ಒಂದು ಹಂತದಲ್ಲಿ ಕಾಂಗ್ರೆಸ್ ಅನ್ನು ತಿರಸ್ಕರಿಸಿ, ಕುಡುಕರಿಗೆ ಹೊಡೆಯಿರಿ ಎಂದು ಬೊಬ್ಬೆ ಇಟ್ಟರೆ ನಂಬಿ ಹಿಂದೆ ಬಂದ ಸಮುದಾಯ ಮತ್ತು ಅವರ ಭಾವನೆಗಳಿಗೆ ಕಿಮ್ಮತ್ತು ಸಿಗೋದಾದರೂ ಹೇಗೆ? ಲೋಕಪಾಲ್ ಬಿಲ್ ಅಣ್ಣಾ ಹಜಾರೆ ಹೇಳಿದಂತೆ ಆಗಬೇಕೆನ್ನುವುದಕ್ಕೆ ಬಿಜೆಪಿ ಪಕ್ಷವೂ ಸಹಾ ಸಂಸತ್ ನಲ್ಲಿ ವ್ಯಾಪಕ ವಿರೋದ ವ್ಯಕ್ತಪಡಿಸಿದೆ ಹೀಗಿರುವಾಗ ಬರಿಯ ಕಾಂಗ್ರೆಸ್ ಏಕೆ ಬಿಜೆಪಿಯನ್ನು ತಿರಸ್ಕರಿಸಲು ಅಣ್ಣಾ ಹಜಾರೆ ಮತ್ತು ತಂಡ ಕರೆ ನೀಡಬೇಕಲ್ಲವೇ? ತನ್ನ ಪ್ರಾಮಾಣಕತೆಗೆ ಮತ್ತು ಸುಧಾರಣೆಗಳಿಗೆ ಹೆಸರು ವಾಸಿಯಾದ ಮಾಜಿ ಪೋಲೀಸ್ ಅಧಿಕಾರಿ ಕಿರಣ್ ಬೇಡಿ ದೇಶದ ಪಾವಿತ್ರ್ಯತೆಯ ಸಂಕೇತವಾಗಿರುವ ಸಂಸತ್ ನ ಸದಸ್ಯರ ಕುರಿತು (ಎಲ್ಲರನ್ನೂ ಸೇರಿಸಿಕೊಂಡು) ಅವಹೇಳನಕಾರಿಯಾದ ಮಾತುಗಳನ್ನಾಡುವುದು ಹೊಣೆಯರಿತವರ ಲಕ್ಷಣವೇ?
           ಇನ್ನು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಉಡುಪಿಯ ಪೇಜಾವರ ಶ್ರೀಗಳು, ಮೊನ್ನೆ ವಿಪ್ರ ಸಮಾವೇಶದಲ್ಲಿ ಪಂಕ್ತಿ ಸಹಬೋಜನ ವಿರೋಧಿಸಿ ನೀಡಿದರೆನ್ನಲಾದ ಹೇಳಿಕೆ ಮತ್ತು ಅದರ ಕುರಿತು ನಡೆಯುತ್ತಿರುವ ಪರ-ವಿರೋಧದ ಚರ್ಚೆಗಳು ವ್ಯಕ್ತಿಗತವಾಗಿ ನಡೆಯುತ್ತಿವೆ. ಉಡುಪಿಯ ಪೇಜಾವರರ ಮನಸ್ಥಿತಿ ಯಾರಿಗೂ ತಿಳಿಯದ್ದೇನಲ್ಲ, ಅವರ ಜಾತೀಯ ಮನೋಭಾವಕ್ಕೆ ಶಿವಮೊಗ್ಗದ ಭಾಷಣದ ಆಧಾರವೇ ಬೇಕಿಲ್ಲ, ಇದಕ್ಕೂ ಮುನ್ನ ಶ್ರೀಗಳು ತಮ್ಮ ಶ್ರೇಷ್ಠತೆಗೆ ಕುಂದುಂಟು ಬರುವ ರೀತಿಯಲ್ಲೇ ಹಲವು ಸಂಧರ್ಭಗಳಲ್ಲಿ ನಡೆದುಕೊಂಡಿದ್ದಾರೆ. ದಲಿತ ಕೇರಿಯ ಸಹಭೋಜನಕ್ಕೆ ಕರೆದಾಗ ಕಣ್ಮರೆಯಾಗುತ್ತಾರೆ, ಮಾಂಸ ಹಾರಿಗಳ ಜೊತೆ ಸಹಪಂಕ್ತಿ ಭೋಜನ ಮಾಡಬೇಡಿ ಎನ್ನುತ್ತಾರೆ ಹಾಗಾದರೆ ಹಿಂದೆಲ್ಲಾ ಅದನ್ನು ರೂಡಿಸಿಕೊಂಡಿದ್ದವರು ಯಾರು ಎಂಬ ಪ್ರಶ್ನೆಯನ್ನು ಯತಿಗಳು ಕೇಳಿಕೊಂಡರೆ ಒಳ್ಳೆಯದು. ಹೋಗಲಿ ಹಸುವಿನ ಹಾಲು ಮಾಂಸಜನ್ಯವಾದ ಪದಾರ್ಥವಲ್ಲವೇ? ಸಕ್ಕರೆಯಲ್ಲಿ ಮೂಳೆಯ ಅಂಶವಿಲ್ಲವೇ? ಡಾಲ್ಡಾದಲ್ಲಿ ಏನು ಬಳಕೆಯಾಗುತ್ತದೆಂದು ತಿಳಿದಿಲ್ಲವೇ? ಕಾಲ ಬದಲಾಗಿದೆ ಜನ ವಿಚಾರ ಮಾಡುವ ಶಕ್ತಿ ಬೆಳೆಸಿಕೊಂಡಿದ್ದಾರೆ ತಮ್ಮ ಬೇಳೆ ಹೆಚ್ಚು ದಿನ ಬೇಯದು , ತಾವು ಹೇಳಿದ್ದೆಲ್ಲ ವೇದವಾಕ್ಯ ಎಂಬ ಹುಂಬತನವನ್ನು ಬಿಡದಿದ್ದರೆ ಮುಂದೊಂದು ದಿನ ಜನರೇ ಸರಿಯಾದ ಪಾಠ ಕಲಿಸುವರು ಅಲ್ಲವೇ? ಆಚಾರವಿಲ್ಲದ ನಾಲಿಗೆಗೆ ಕಡಿವಾಣ ಬೀಳದಿದ್ದರೆ ಪ್ರತಿಷ್ಠೆಗಳು ಮುರಿದು ಬೀಳುತ್ತವೆನ್ನುವುದನ್ನು ನೆನಪಿಡಬೇಕಷ್ಟೇ.



ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...