Sunday, March 30, 2014

ಯುವಜನರ ಮತ ದೇಶಕ್ಕೆ ಹಿತ!

ಆರೋಗ್ಯಕರ ಭಾರತಕ್ಕೆ ಯುವ ಜನತೆ ಎಂಬ ಸಂಗತಿ ಸದ್ಯದ ಸ್ಥಿತಿಯಲ್ಲಿ ಬಹು ಮುಖ್ಯವಾದುದು. ವಿದ್ಯಾವಂತ ಯುವಜನರಲ್ಲಿ ಪ್ರಜ್ಞಾವಂತಿಕೆಯ ಕೊರತೆಯಿಂದ ದೇಶದ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಪೂರಕವಾದ ಸಂಗತಿಗಳು ಜರುಗುತ್ತಿಲ್ಲ. ಯುವಜನರ ಹತಾಶ ಮನೋಸ್ತಿತಿ ದೇಶದ ಭದ್ರತೆಗೆ ಶಾಂತಿ ಸುವ್ಯವಸ್ಥೆಗೆ ಅಡ್ಡಿಯಾಗಿದೆ ಎಂಬುದು ಸಧ್ಯದ ವಿಷಾಧನೀಯ ಸಂಗತಿ. ಶಿಕ್ಷಣ ಮಾತ್ರ ನಮ್ಮ ಬದುಕಿನ ಭಾಗವಲ್ಲ ಬದಲಿಗೆ ಪರಿಸರದ ಸಂಗತಿಗಳು, ನೈತಿಕತೆಯ ಅಂಶಗಳು ಮತ್ತು ಬದ್ದತೆ ಇಂದು ಯುವಜನರಿಗೆ ತೀರಾ ಅತ್ಯಗತ್ಯವಾಗಿ ಬೇಕಾಗಿದೆ.
           ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವು ಎಷ್ಟು ಜನರಿಗಿದೆ? ಸುಮಾರು 130ದೇಶಗಳಿಗೆ ಮಾದರಿಯಾದ ನಮ್ಮ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಜಗತ್ತಿಗೆ ಮಾದರಿ. ಇಲ್ಲಿ ವಿವಿಧ ಸಮುದಾಯಗಳ ವಿವಿಧ ಧಾರ್ಮಿಕ ಪಂಥಗಳ ಜನರಿದ್ದಾರೆ ಆದಾಗ್ಯೂ ಇದನ್ನೆಲ್ಲ ಸರಿದೂಗಿಸಿಕೊಂಡು ಹೋಗಬೇಕಾದರೆ ಉತ್ತಮ ಪ್ರಜಾಪ್ರತಿನಿಧಿಗಳು ನಮಗೆ ಬೇಕು ಮತ್ತು ಅವರು ಪ್ರಾಮಾಣಿಕವಾಗಿ ಜನಸೇವೆ ಮಾಡುವವರಾಗಿರಬೇಕು ಎಂದರೆ ಅದಕ್ಕೆ ಚುನಾವಣೆಯಲ್ಲಿ ಮತಹಾಕುವುದು ಮುಖ್ಯವಾಗುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಉದ್ಯೋಗ-ಆರ್ಥಿಕತೆಯ ಕಡೆಗೆ ಗಮನ ಕೊಟ್ಟಷ್ಟು ಪ್ರಜಾತಂತ್ರ ವ್ಯವಸ್ಥೆಯನ್ನು ರೂಪಿಸುವ ಚುನಾವಣೆಗೆ ಮಹತ್ವ ಕೊಟ್ಟದ್ದು ಕಡಿಮೆಯೇ. ಚುನಾವಣಾ ರಜೆ ಬಂದರೆ ಪಿಕ್ನಿಕ್, ಟ್ರಿಪ್, ಆಟ, ನೋಟ, ಮೋಜು ಇತ್ಯಾದಿಗಳಲ್ಲಿ ತೊಡಗಿ ಮತಹಾಕುವುದನ್ನು ಮರೆಯುವವರೆ ಹೆಚ್ಚು. 
        ಅಷ್ಠೆ ಏಕೆ ಎಷ್ಟೋ ಮಂದಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ವಿವಿಧ ಹಂತಗಳು ಮತ್ತು ಅಧಿಕಾರಸ್ಥರ ಜವಾಬ್ದಾರಿಗಳು ಏನೆಂದು ಅರಿವು ಇರೊಲ್ಲ, ಸ್ಥಳೀಯ ಸರ್ಕಾರ ಎಂದರೆ ಏನು? ಅಲ್ಲಿರುವವರ ಜವಾಬ್ದಾರಿಗಳೇನು? ಎಂಎಲ್ ಎ ವ್ಯಾಪ್ತಿ ಏನು, ಎಂಪಿ ಏನು ಕೆಲಸ ಮಾಡುತ್ತಾನೆ, ಪ್ರಧಾನಿಯನ್ನು ಆರಿಸುವವರು ಯಾರು ಇತ್ಯಾದಿ ಸಾಮಾನ್ಯ ಸಂಗತಿಗಳು ತಿಳಿಯದ ವ್ಯಕ್ತಿ ಮತದಾನ ಮಾಡಲು ಯೋಗ್ಯನಾಗಿರುವುದಿಲ್ಲ, ಆಗ ಅಧಿಕಾರ ಹಿಡಿಯ ಬಯಸುವ ರಾಜಕಾರಣಿಗಳು ತಮಗೆ ಬೇಕಾದವರನ್ನು ಓಲೈಸುತ್ತಾ ಆಮಿಷಗಳನ್ನು ಒಡ್ಡುತ್ತಾ, ಜಾತೀ ರಾಜಕಾರಣ, ಕೋಮುರಾಜಕಾರಣ ಮತ್ತು ತೋಳ್ಬಲದ ರಾಜಕಾರಣದ ಮೂಲಕ ಅಧಿಕಾರಕ್ಕೆ ಬಂದು ಬಿಡುತ್ತಾರೆ. ಮೈಮರೆತು ಕುಳಿತ ಜನರನ್ನು ತಮಗೆ ಬೇಕಾದಂತೆ ಆಳುತ್ತಾರೆ, ಭ್ರಷ್ಟಾಚಾರ ತಾಂಡವವಾಡುತ್ತದೆ, ಸಾಮಾನ್ಯ ಜನ ಅಸಹಾಯಕತೆಯ ಬದುಕನ್ನು ಸವೆಸುತ್ತಾರೆ, ಸಮಸ್ಯೆಗೆ ಪರಿಹಾರವಿಲ್ಲ ಎಂದು ಕುಳಿತು ಬಿಡುತ್ತಾರೆ. ಇಂತಹ ಪರಿಸ್ಥಿತಿ ಬೇಕಾ? 

       ನೋಡಿ ಭಾರತದ ಚುನಾವಣೆ ವಿಶ್ವದಲ್ಲೆ ಅತೀ ದೊಡ್ಡ ಪ್ರಮಾಣದ್ದು! ಸಂಖ್ಯೆ ವಿಸ್ತಾರ ಮತ್ತು ಪ್ರಮಾಣ ಗಮನಿಸಿದಾಗ ಇದೊಂದು ವಿಸ್ಮಯ ಎನಿಸಿ ಬಿಡುತ್ತದೆ. ಯೂರೋಪ್, ಅಮೇರಿಕಾ, ಕೆನಡಾ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ಚುನಾವಣೆಯನ್ನು ಒಟ್ಟಾಗಿ ಸೇರಿಸಿದರೂ ಭಾರತದ ಒಂದು ಚುನಾವಣೆಯನ್ನು ಮೀರುವುದು ಅಸಾಧ್ಯ. 2009ರಲ್ಲಿ ನಡೆದ ಲೋಕಸಭಾ ಚುನಾವಣೆಯ ಅಂಕಿ ಅಂಶಗಳನ್ನು ಗಮನಿಸಿದಾಗ ಅದರ ಬೃಹದಾಕಾರ ತಿಳಿಯುತ್ತದೆ. ದೇಶದಾಧ್ಯಂತ ಸುಮಾರು 829000 ಮತಗಟ್ಟೆಗಳನ್ನು ನಿರ್ಮಿಸಲಾಗಿತ್ತು. ಮತಪಟ್ಟಿಯಲ್ಲಿ 714ದಶಲಕ್ಷ ಮತದಾರರ ಹೆಸರು ದಾಖಲಾಗಿತ್ತು ಮತ್ತು ಅಂದಿನ ಚುನಾವಣೆಗೆ ಮೀಸಲಿಟ್ಟ ಹಣ ರೂ.1120ಕೋಟಿ. ಈ ಮೊತ್ತವನ್ನು ದೇಶದ ಪ್ರತಿಯೊಬ್ಬ ಪ್ರಜೆ ತಾವು ಪಾವತಿಸುವ ತೆರಿಗೆ ಹಣದಿಂದ ಭರಿಸುತ್ತಾರೆ ಎಂಬುದು ಇಲ್ಲಿ ಗಮನಾರ್ಹ. 

       ಭಾರತ ಸಂವಿಧಾನದ 15ನೇ ಭಾಗದಲ್ಲಿರುವ 324 ರಿಂದ 320ರ ವರೆಗಿನ ವಿಧಿಗಳು ಚುನಾವಣಾ ಆಯೋಗದ ಸಂರಚನೆ, ಅಧಿಕಾರ, ಕರ್ತವ್ಯ ಇತ್ಯಾದಿ ವಿಷಯಗಳನ್ನು ಒಳಗೊಂಡಿವೆ. ಜನವರಿ 25, 1950ರಂದು ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿದೆ. ಇನ್ನು ಮತದಾನ ವಿಚಾರ, ಪ್ರಜಾಪ್ರಭುತ್ವ, ಚುನಾವಣೆ ಮತ್ತು ಮತದಾನ ನಿಕಟವಾದ ಸಂಪರ್ಕ ಹೊಂದಿರುವ ತ್ರಿಕೋನ ವ್ಯವಸ್ಥೆ. ಒಂದಿಲ್ಲದೇ ಮತ್ತೊಂದು ಇರಲು ಸಾಧ್ಯವಿಲ್ಲ. ಮತದಾನ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ, ಹಾಗೆ ಆಯ್ಕೆಯಾದ ಪ್ರಜಾಪ್ರತಿನಿಧಿಗಳು ಈ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುತ್ತಾರೆ. ಆದ್ದರಿಂದ ಮತದಾನ ಮಾಡುವುದು ಕಡ್ಡಾಯ ಎಂಬುದನ್ನು ಅರಿಯಬೇಕು. ಆದರೆ ಭಾರತದ ಕಾನೂನು ವ್ಯವಸ್ಥೆಯಲ್ಲಿ ಮತದಾನ ಕಡ್ಡಾಯವಲ್ಲ. ಒಂದು ವೇಳೆ ನಾಗರಿಕರು ತಮ್ಮ ಮತ ಚಲಾಯಿಸದಿದ್ದರೂ ಅವರಿಗೆ ಯಾವುದೇ ಶಿಕ್ಷೆ ಇಲ್ಲ, ಈ ಸಲ ಮತವನ್ನು ಯಾವುದೇ ಅಭ್ಯರ್ಥಿಗೆ ಚಲಾಯಿಸದೇ ತಿರಸ್ಕರಿಸುವ ಅವಕಾಶವನ್ನು ನೀಡಲಾಗುತ್ತಿದೆ. ಆದರೆ ಪ್ರಜಾತಂತ್ರ ಮಾದರಿ ಆಡಳಿತವನ್ನು ಆಯ್ಕೆ ಮಾಡಿಕೊಂಡಿರುವ ನಾವು ಖಂಡಿತವಾಗಿಯೂ ಮತದಾನದಲ್ಲಿ ಭಾಗವಹಿಸಬೇಕು. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ನೀಡಿರುವ ಹಕ್ಕುಗಳಲ್ಲಿ ಮತದಾನವೂ ಒಂದು ಆ ಹಕ್ಕನ್ನು ಚಲಾಯಿಸಿದಾಗ ಮಾತ್ರ ಪ್ರಜಾತಂತ್ರಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಒಂದು ಅರ್ಥ ಇರುತ್ತದಲ್ಲವೇ?

           ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಕ್ತಿ ತುಂಬಲು ಯುವ ಜನರು ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಯೋಗ್ಯತೆ, ಕೆಲಸ ಮಾಡುವ ಸಾಮರ್ಥ್ಯ ಹಾಗೂ ಪ್ರಾಮಾಣಿಕತನಗಳು ಆಯ್ಕೆಗೆ ಮಾನದಂಡ ವಾಗಬಹುದು. ಅಭ್ಯರ್ಥಿಗಳ ಆಮಿಷಗಳಿಗೆ ಬಲಿಯಾಗಿ ಕುರಿಗಳಾಗದೇ ಅರಿವಿನ ಪ್ರಜ್ಞೆ ಬೆಳೆಸಿಕೊಳ್ಳಿ, ಚುನಾವಣೆಗಳೆಡೆಗೆ ಇರುವ ಅಸಡ್ಡೆಯನ್ನು ಬಿಟ್ಟು ಜಾಗೃತರಾಗಿ. ನಿಮ್ಮ ಹಿರಿಯರು ಯಾವುದೋ ಆಸೆ ಆಮಿಷಕ್ಕೆ ಬಲಿಯಾಗಿ, ಕಟ್ಟುಬಿದ್ದು ಅನುಸರಿಸುವ ಮಾರ್ಗಗಳ ಕುರಿತು ಅವರನ್ನು ಜಾಗೃತರನ್ನಾಗಿ ಮಾಡಿ ಯುವ ಜನರ ಮತ ದೇಶಕ್ಕೆ ಹಿತ ಎಂಬುದನ್ನು ಮರೆಯದಿರಿ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...