ಮೊನ್ನೆಯಷ್ಟೆ ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಗುಲ್ಬರ್ಗಾ ಜಿ.ಪಂ. ಸಭೆಯಲ್ಲಿ ಗಂಡಂದಿರ ಮಾತಿಗೆ ಸೊಪ್ಪು ಹಾಕದ ಅಧಿಕಾರಿಗಳ ವಿರುದ್ದ ಪ್ರತಿಭಟಿಸಿ ಮಹಿಳಾ ಸದಸ್ಯೆಯರು ಹಚಾ ಅಂದು ಎದ್ದು ಹೋದ ಘಟನೆಯನ್ನು ಸ್ವಾರಸ್ಯಕರವಾಗಿ ಪ್ರಕಟಿಸಲಾಗಿತ್ತು.ದೇಶಕ್ಕೆ ಸ್ವಾತಂತ್ರ್ಯ ಬಂದು 64ವರ್ಷಗಳು ಸರಿದು ಹೋಗಿವೆ, ಆ ನಂತರ ಮಹಿಳೆಯರಿಗೆ ಅನುಕಂಪ ತೋರುತ್ತ ಮಹಿಳಾ ಸಬಲೀಕರಣದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಅನೇಕ ರಾಜಕೀಯ ಪಕ್ಷಗಳು ಅಧಿಕಾರವನ್ನಷ್ಟೇ ಅನುಭವಿಸಿ ಹೋಗಿವೆ. ಸಾಮಾಜಿಕ-ಧಾರ್ಮಿಕ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಹಿತಾಸಕ್ತಿಗಳು ಮಹಿಳೆಯರಿಗೆ ಸಿಕ್ಕ ಅಲ್ಪಸ್ವಲ್ಪ ಅವಕಾಶಗಳನ್ನು ಮುಕ್ತವಾಗಿ ಚಲಾಯಿಸಲು ಬಿಡದೇ 'ಸಬಲೀಕರಣ'ದ ವ್ಯರ್ಥ ಪ್ರಯತ್ನಗಳನ್ನ ಅಣಕಿಸುತ್ತಾ ಬಂದಿವೆ. ಇದು ಎಷ್ಟರ ಮಟ್ಟಿಗೆ ಸರಿ? ಸರಿ-ತಪ್ಪುಗಳ ಹೊಯ್ದಾಟದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯದ್ದೇ ಮೇಲುಗೈ ಯಾಕಾಗುತ್ತೆ? ಮಹಿಳೆ ಸಬಲೆಯಾಗುವುದು ಎಂದರೆ ಅಂಕೆಯಿಲ್ಲದ ಬಿಡು ಬೀಸು ವರ್ತನೆಯೇ? ರಾಜಕೀಯ ಮಹಿಳಾ ಮೀಸಲು ಎಂತಹವರಿಗೆ ಸಿಗುತ್ತಿದೆ? ಅಸಲಿಗೆ ಮಹಿಳಾ ಮೀಸಲು ಹೇಗಿರಬೇಕು? ಇತ್ಯಾದಿ ಪ್ರಶ್ನೆಗಳು ಕಾಡುತ್ತವೆ.
ಭಾರತ ಸನಾತನ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದ ದೇಶ, ವೇದಗಳ ಕಾಲದ ನಂತರವಷ್ಟೇ ಇಲ್ಲಿ ಮಹಿಳೆಯರಿಗೆ ಕಟ್ಟುಪಾಡುಗಳನ್ನ ವಿಧಿಸುವ ಹಾಗೂ ವ್ಯವಸ್ಥಿತವಾಗಿ ಶೋಷಿಸುವ ಪದ್ದತಿ ಬೆಳೆದು ಬಂದಿದೆ. 'ಸ್ತ್ರೀ' ಎಂದರೆ ದೇವತೆ, ಅದೊಂದು ಅತೀಂದ್ರಿಯ ಶಕ್ತಿಯ ಸ್ವರೂಪ ಎಂಬೆಲ್ಲ ಉಪಮೇಯಗಳ ಮೂಲಕ ಹೇಳಲಾಗುತ್ತದೆಯಾದರು ಭಾರತದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯದ್ದೆ ಮೇಲುಗೈ ಆಗಿರುವುದು ಎಲ್ಲರಿಗೂ ತಿಳಿದ ಸಂಗತಿ. ರಾಜಕೀಯ, ಉದ್ಯೋಗ, ಶಿಕ್ಷಣ, ಹಾಗೂ ಕೌಟುಂಬಿಕ ಪರಿಸರದಲ್ಲಿ ಮಹಿಳೆಯರಿಗೆ ಸಿಗಬೇಕಾದ ಆದ್ಯತೆಗಳು ಹಿಂದಿಗಿಂತ ಈಗ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿದೆ ಅನಿಸುತ್ತದೆಯಾದರೂ ಅಲ್ಲಿ ಗಂಡಸಿನ ಮರ್ಜಿ ಕಾಣಬರುತ್ತದೆ. ಒಂದು ಹೆಣ್ಣು ಎಷ್ಟೇ ವಿದ್ಯಾವಂತಳಾದರೂ, ತಿಳುವಳಿಕೆಯುಳ್ಳವಳಾದರೂ, ಪ್ರಬುದ್ದ ಮನಸ್ಥಿತಿಯವಳಾದರೂ ಸಾಂಸಾರಿಕ ವಿಚಾರಗಳಲ್ಲಿ ಪುರುಷನೇ ಮೇಲುಗೈ ಸಾಧಿಸುತ್ತಾನೆ. ವೇದಗಳ ಕಾಲಕ್ಕಿಂತ ಮೊದಲು ಮಹಿಳೆಯರಿಗೆ ಅತ್ಯಂತ ಹೆಚ್ಚಿನ ಗೌರವಾದರಗಳು ಮತ್ತು ಸಮಾನ ಅವಕಾಶಗಳು ಮುಕ್ತವಾಗಿರುತ್ತಿತ್ತು, ಈಗಲೂ ಅದು ಹೆಸರಿಗಷ್ಟೇ ಇದೆ ಮತ್ತು ಅನುಕಂಪದ ದಾಟಿಯಲ್ಲಿ ಅದನ್ನು ಕೊಡುತ್ತಿದ್ದೇವೆ ಅಂದುಕೊಳ್ಳಲಾಗುತ್ತಿದೆ. ಆದರೆ ಇದು ತಪ್ಪು ಸಮಾನ ಅವಕಾಶಗಳನ್ನ ಯಾರಿಗೂ ಯಾರೂ ಕೊಡಬೇಕಾದ ಅವಶ್ಯಕತೆ ಇಲ್ಲ, ಅದು ವ್ಯಕ್ತಿಗತವಾಗಿ ಅನುಭವಕ್ಕೆ ಬರುವಂತಹದ್ದು ಹಾಗೂ ಚೌಕಟ್ಟಿನ ಎಲ್ಲೆ ಮೀರದಂತೆ ನಡೆದುಕೊಳ್ಳುವಂತಹದ್ದು, ಹೀಗಿರುವಾಗ ಮಹಿಳಾ ಸಮಾನತೆ ಎನ್ನುವುದೇ ಹಾಸ್ಯಾಸ್ಪದವಲ್ಲವೇ? ಆದರೂ ಸಮಾನತೆಯ ಮತ್ತು ಸಬಲೀಕರಣದ ಅಂಶಗಳು ಚರ್ಚೆಗೆ ಬರಲು ಸಧ್ಯದ ಅನಿಷ್ಟ ವ್ಯವಸ್ತೆ ಕಾರಣ ಎಂಬುದು ಅತ್ಯಂತ ವಿಷಾಧನೀಯಕರ.
ಚರ್ಚೆ ಗಂಭೀರ ದಾಟಿಯಿಂದ ಹೊರಳುವುದಾದರೆ ವಾಸ್ತವ ನೆಲೆಗಟ್ಟಿನಲ್ಲಿ ಮಹಿಳೆಯರ ಸ್ಥಿತಿಗತಿ ಹೇಗಿದೆಯೆಂದು ಅವಲೋಕಿಸಬಹುದು. ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬರಲು ಆಧುನಿಕತೆಯ ಸಂಸ್ಕೃತಿ ಮಹಿಳೆಯರಿಗೆ ಸಹಾಯ ಮಾಡಿರಬಹುದಾದರೂ ಅದು ನೈತಿಕತೆಯ ಎಲ್ಲೆಯನ್ನು ಮೀರಿ ನಿಂತಿದೆ ಎಂಬುದು ಅಷ್ಟೇ ಸತ್ಯ. ಮಹಿಳಾ ಸಂವೇದನೆಗಳು ಜಾಗತೀಕರಣದ ಭರಾಟೆಯಲ್ಲಿ ಹಿಂದಕ್ಕೆ ಸರಿದಿವೆ, ಪ್ರಭಾವಶಾಲಿಯಾಗಿ ಅದನ್ನು ಅಭಿವ್ಯಕ್ತಿಸುವ ಸಾಮರ್ತ್ಯ ಮಾತ್ರವೇ ಮಹಿಳೆಯರ ಹಿತಕಾಪಾಡಬಲ್ಲವು. ಮಹಿಳೆಯರ ಜಾಗೃತಿಗೆ, ಹಕ್ಕಿನ ಹೋರಾಟಕ್ಕೆ ರಾಜಕೀಯ ಪ್ರಧಾನ ಅವಕಾಶ ಎಂದೇ ಭಾವಿಸಲಾಗಿದೆ, ಹಾಗಾಗಿ ಶೇ.33.3 ಮಹಿಳಾ ಮೀಸಲು ವಿಧೇಯಕವನ್ನು ಮೊದಲ ಭಾರಿಗೆ ಇತ್ತೀಚಿನ ದಿನಗಳಲ್ಲಿ ಅಂದರೆ 1996ರಲ್ಲಿ ಹೆಚ್ ಡಿ ದೇವೇಗೌಡ ಪ್ರಧಾನಿಯಾಗಿದ್ದ ಕಾಲದಲ್ಲಿ ಮಂಡಿಸಲಾಗಿತ್ತು. ಸದರಿ ವಿಧೇಯಕದ ಅನುಷ್ಠಾನ ಕೊಂಚ ಮಟ್ಟಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಾತ್ರ ಜಾರಿಗೆ ಬಂದಿದೆ. ಶಾಸಕರು ಮತ್ತು ಸಂಸದರಾಗುವ ಅವಕಾಶಗಳು ಮಹಿಳೆಯವರಿಗೆ ಇದೆಯಾದರೂ ದೇಶದಲ್ಲಿರುವ ಸುಮಾರು 750ಕ್ಕೂ ಮಿಕ್ಕಿದ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಪೂರ್ಣಪ್ರಮಾಣದ ಅವಕಾಶಗಳನ್ನು ನಿರಾಕರಿಸಿವೆ. ಇದ್ದುದರಲ್ಲಿ ರಾಜ್ಯ ಸಭಾ ಸ್ಥಾನಕ್ಕೆ ಆಯ್ಕೆಯಾಗುವ ಬಹುತೇಕ ಮೀಸಲು ಸ್ಥಾನಗಳಿಗೆ ರಾಜಕಾರಣಿಗಳ ಗೆಣೆಕಾರ್ತಿಯರು, ಬಹುಗಳು ಬರುತ್ತಿದ್ದಾರಾದರೂ ಅವರು ಕೇವಲ ಶೋಕೇಸ್ ಗೊಂಬೆಗಳಂತೆ ಇದ್ದು ಹೋಗುತ್ತಾರಷ್ಟೇ. ಕೆಳ ಸ್ಥರದಿಂದ ಬಂದವರಿಗೆ, ಮದ್ಯಮವರ್ಗದವರಿಗೆ,ಸುಶಿಕ್ಷಿತ ಮಹಿಳೆಯರಿಗೆ ಅವಕಾಶ ದೊರೆತರೆ ನಿಜವಾದ ಮಹಿಳಾ ಪ್ರಾತಿನಿಧ್ಯ ಮತ್ತು ಹಕ್ಕುಗಳ ರಕ್ಷಣೆ ಸಾಧ್ಯವಾಗಬಹುದು. ಅದೇ ರೀತಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಇವತ್ತಿಗೂ ಮಹಿಳೆಯರ ಮೇಲೆ ಪುರುಷರ ಪ್ರಾತಿನಿಧ್ಯ ಇರುವುದರಿಂದ, ಸ್ತ್ರೀಯರು ಅವಕಾಶ ದೊರೆತರೂ ಕೂಡ ಗಂಡಸಿನ ಅಣತಿಯಂತೆ ಅಧಿಕಾರ ಚಲಾಯಿಸುತ್ತಿರುವುದು ದುರಂತದ ಸಂಗತಿಯಲ್ಲವೇ? ಇಷ್ಟೇ ಏಕೆ ಆಕೆ ಸದಸ್ಯಳಾಗುತ್ತಿದ್ದಂತೆಯೇ ತನ್ನ ಪುರುಷ ಪುಂಗವನ ಹೆಸರನ್ನು ತನ್ನ ಹೆಸರಿನ ಮುಂದೆ ಚಲಾವಣೆಗೆ ತರಬೇಕಾಗುತ್ತದೆ, ಆಕೆ ಅಧಿಕಾರಿಯಾದರೂ ಅಷ್ಟೆ ಹೆಸರಿನ ಮುಂದೆ ಅಥವಾ ಹಿಂದೆ ಗಂಡನ ಹೆಸರನ್ನು ತಗುಲಿಸಕೊಳ್ಳಬೇಕು ಇದು ಮಹಿಳೆಯರಿಗೆ ಅನಿವಾರ್ಯವೇ?
ಆದರೆ ಕೌಟುಂಬಿಕ ವ್ಯವಸ್ಥೆಯಲ್ಲಿ ಎಂತಹುದೇ ಹೀನ ನಿರ್ಬಂದಿಸುವ ಕ್ರಮಗಳು ಮಹಿಳೆಯರ ಪಾಲಿಗಿದ್ದರೂ ಕೆಲವು ಸಂಸಾರಗಳನ್ನು ಹೊರತು ಪಡಿಸಿದರೆ ಬಹುತೇಕ ಕುಟುಂಬಗಳಲ್ಲಿ ಮಹಿಳೆಯರ ಅಧಿಕಾರ ಚಲಾವಣೆ ಇರುವುದನ್ನು ಕಾಣಬಹುದು, ಘಟವಾಣಿಯರ ಕಾರುಬಾರು ಪುರುಷರನ್ನು ಕಟ್ಟಿಹಾಕಿದರು ಹೊರಗಿನ ಜಗತ್ತಿಗೆ ಬಂದಾಗ ಮಾತ್ರ ಅದೇ ಗಂಡಸಿನ ಅಂಕೆಗೆ ಅಂಟಿಕೊಳ್ಳುವುದು ಕಾಣುತ್ತದೆ. ಮಹಿಳೆಯರ ಸಬಲೀಕರಣಕ್ಕೆ ನೈಜವಾದ ಚಿಂತನೆಗಳು ಪ್ರಾಮಾಣಿಕವಾಗಿ ಆಗಬೇಕಿದೆ, ಮಹಿಳೆಯರ ಒಗ್ಗೂಡುವಿಕೆ, ಶಿಕ್ಷಣ ಮುಂತಾದ ಅಂಶಗಳು ಪರಿಣಾಮಕಾರಿಯಾಗಿ ಇದಕ್ಕೆ ಬೆನ್ನೆಲುಬಾಗುತ್ತವೆ ಆದರೆ ಪ್ರಯತ್ನ ಆಗಬೇಕಷ್ಟೆ.. ಅದು ಯಾವಾಗ ಅನ್ನೋದನ್ನ ಕಾದು ನೋಡಬೇಕು.