"Nature has given women so much power that the law has very wisely given them little," said Samuel ಜಾನ್ಸನ್ ಕಳೆದ ವಾರ ಸಂಸತ್ ನಲ್ಲಿ ಮಹಿಳಾ ಮೀಸಲು ವಿಧೇಯಕದ ಗದ್ದಲವೇರ್ಪಟ್ಟಿತ್ತು ಈ ಸಂಧರ್ಭ ಸ್ಯಾಮುಯೆಲ್ ಜಾನ್ಸನ್ ರ ಮಾತು ನೆನಪಿಗೆ ಬಂತು ಮಹಿಳೆಯರನ್ನು ಸಮಾನವಾಗಿ ಕಾಣುವ ಅವರಿಗೂ ನಮ್ಮಷ್ಟೇ ಹಕ್ಕುಗಳಿವೆ ಎನ್ನುವ ಮಾತುಗಳಿಗೇನು ಕಡಿಮೆ ಇಲ್ಲ. ಇದು ಶತಮಾನಗಳಿಂದಲೂ ಬಂದಿದೆ. 12ನೇ ಶತಮಾನದ ಬಸವೇಶ್ವರರು ಇಂತಹದ್ದೊಂದು ತಾರತಮ್ಯವನ್ನು ವಿರೋಧಿಸಿ ಸಿಡಿದೆದ್ದು ಬ್ರಾಹ್ಮಣ್ಯವನ್ನು ತ್ಯಜಿಸಿ ಹೊಸ ಧರ್ಮವನ್ನು ಆರಂಭಿಸಿದರು (ಈಗ ಅದೇ ಧರ್ಮ,ಕೆಲವುಅವಿವೇಕಿ ಗಳಿಂದ ಜಾತಿಯಾಗಿ ಬದಲಾಗಿರುವುದು ಬೇರೆ ಮಾತು ಬಿಡಿ!) ಹೊಸ ಸಮಾಜದ ಕನಸುಗಳನ್ನು ಬಿತ್ತಿದರು, ಆದರ್ಶವಾಗಿಯೇ ಬದುಕಿ ಗತಿಸಿಹೋದರು. ಅವರ ನಂತರ ಎಷ್ಟೋ ಮಂದಿ ಮಹಿಳೆಯರ ಸಮಾನತೆಗಾಗಿ ಧ್ವನಿಯೆತ್ತಿದರು. ಆದರೆ ಅದನ್ನು ಶಾಸನಾತ್ಮಕವಾಗಿ ರೂಪಿಸಲು ಮೊದಲ ಧ್ವನಿಯೆತ್ತಿದ್ದು ಮಾತ್ರ ಡಾ. ಬಿ ಆರ್ ಅಂಬೇಡ್ಕರ್. ಭಾರತೀಯ ಸಮಾಜ ಸನಾತನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಹೊಂದಿದೆ, ಈ ನಡುವೆ ಹಲವು ಕಳಂಕಿತ ಸಾಮಾಜಿಕ ವೈರುಧ್ಯಗಳನ್ನು ತನ್ನ ಉಡಿಯಲ್ಲಿ ತುಂಬಿಕೊಂಡಿದೆ. ಅವು ಪ್ರತಿನಿತ್ಯ ನಮ್ಮ ನಡುವೆ ಕಾಣ ಸಿಕ್ಕರೂ ಪ್ರಸಕ್ತ ಪರಿಸರದಲ್ಲಿ ಮಾಮೂಲು ಸಂಗತಿಗಳಾಗಿ ಪರಿಗಣಿತವಾಗಿರುವುದರಿಂದ ಮಹಿಳೆಯರಿಗೆ ಮತ್ತು ಶೋಷಿತ ಸಮುದಾಯದ ದುರ್ಬಲರಿಗೆ ನಿರಂತರ ಅನ್ಯಾಯ ನಡೆಯುತ್ತಲೇ ಇದೆ. ಎತ್ತರದಲ್ಲಿ ನಿಂತು ಇಂತಹ ವಿಚಾರಗಳ ಬಗ್ಗೆ ಯೋಚಿಸುವ ಧಾಟಿಯೇ ಬೇರೆ, ಅದೇ ರೀತಿ ಸಮಾನತೆ ಹಕ್ಕು ಕಳಕೊಂಡವರ ನಡುವೆ ಒಬ್ಬರಾಗಿ ಚಿಂತಿಸುವ ಧಾಟಿಯೇ ಬೇರೆ. ಎತ್ತರದಲ್ಲಿ ಮೇಲ್ನೋಟದ ಥಳಕು ಕಂಡು ಬಂದರೆ, ತಳ ಮಟ್ಟದಲ್ಲಿ ಅಂತರ್ಗತವಾದ ವಿಚಾರ ಕಾಣಬರುತ್ತದೆ. ಹಾಗಾಗಿ ತಳಮಟ್ಟದಲ್ಲಿ ಕಾಣಬರುವ ಎತ್ತರದ ಚಿಂತನೆ ಮಾತ್ರ ಸಮಾನತೆಯ ವಿಚಾರವನ್ನು ಸಮರ್ಥವಾಗಿ ಬಿಂಬಿಸಬಲ್ಲದು. ಈ ಮಾತು ಯಾಕೆ ಹೇಳ ಬೇಕಾಯಿತೆಂದರೆ. ಕಳೆದ ವರ್ಷದ ನವೆಂಬರ್ 2008ರಲ್ಲಿ ಇದೇ ಯುಪಿಎ ಸರ್ಕಾರ 2ಮಹತ್ವದ ಬಿಲ್ ಗಳನ್ನು ಸಂಸತ್ ಮುಂದೆ ತಂದಿತ್ತು. ಅವುಗಳ ಪೈಕಿ ಒಂದು ಮಹಿಳೆಯರಿಗೆ ರಾಜಕೀಯ ಮೀಸಲಾತಿ,ಇನ್ನೊಂದು ಸರ್ಕಾರಿ ಸ್ವಾಮ್ಯದ ಕಾರ್ಪೊರೇಟ್ ವಲಯದಲ್ಲಿ ದಲಿತ ಮೀಸಲಾತಿಯನ್ನು ನಿರ್ಬಂದಿಸುವುದು. ಆದರೆ ಇವೆರಡಕ್ಕೂ ವಿರೋಧಿ ಅಲೆ ಕಂಡು ಬಂದಿದ್ದರಿಂದ ಮತ್ತು ಲೋಕಸಭಾ ಚುನಾವಣೆ ಘೋಷಣೆ ಯಾಗಿದ್ದರಿಂದ ರಾಜ್ಯ ಸಭೆಗೆ ಸದರಿ ವಿಧೇಯಕ ಕಳುಹಿಸಲ್ಪಟ್ಟಿತ್ತು. ಈಗ ಅದೇ ಯುಪಿಎ ಸರ್ಕಾರ ಮತ್ತೆ ಕೆಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿದೆ. ಮೊದಲ ಕಂತಾಗಿ ಆರಂಭದ ಅಧಿವೇಶನದಲ್ಲಿಯೇ ಮಹಿಳೆಯರಿಗೆ ರಾಜಕೀಯವಾಗಿ ಶೇ.50ರ ಮೀಸಲಾತಿ ನೀಡುವ ವಿಧೇಯಕ ಮಂಡಿಸುವ ಮಾತನಾಡಿದೆ. ಸಂಸದ ಶರದ್ ಯಾದವ್ ಮೊದಲ ದಿನವೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ, ಸದರಿ ವಿಧೇಯಕ ಅನುಮೋದನೆಯಾದರೆ ವಿಷ ಕುಡಿಯುವ ಮಾತನಾಡಿದ್ದಾರೆ. ಇದೆಲ್ಲ ಎಷ್ಟು ಸರಿ ಮಹಿಳೆಯರಿಗೆ ಮೀಸಲಾತಿ ಕೊಡುವುದು ಎಂದರೇನು? ಅದೇನು ರಾಜಕಾರಣಿಗಳ ಮುತ್ತಾತಂದಿರ ಸ್ವತ್ತೆ? ತಾನು ಜನಿಸಿದ್ದು ಒಬ್ಬ ಮಾತೆಯಿಂದ, ಸಮಾಜದೊಂದಿಗೆ ತೆರೆದುಕೊಳ್ಳುವ ಮೊದಲ ಪಾಠ ಕಲಿಸುವ ಅಮ್ಮನಿಗೆ ಮೀಸಲಾತಿಯ ನಿರ್ಬಂದ ಬೇಕೆ? ನೋಡಿ ನಮ್ಮ ಧಾರ್ಮಿಕ ನಿಬಂಧನೆಗಳೇನೇ ಇರಲಿ ಪ್ರತಿ ಹೆಣ್ಣಿಗೂ ಒಂದು ಇತಿಮಿತಿಯಲ್ಲಿ ಮುಕ್ತ ವಾತಾವರಣಕ್ಕೆ ತೆರೆದು ಕೊಳ್ಳುವ ಅವಕಾಶವಿದ್ದೇ ಇದೆ. ಇಂತಹದ್ದಕ್ಕೆ ಪುರುಷ ಸಮಾಜ ವ್ಯವಸ್ಥಿತವಾದ ರೀತಿಯಲ್ಲಿ ಮೂಗುದಾರ ಹಾಕುವುದು ನಿರ್ಬಂದಿಸುವುದು ತಪ್ಪಾಗುತ್ತದೆ. ಸಮಾಜದ ಮುಖ್ಯವಾಹಿನಿಯಲ್ಲಿ ಮಹಿಳೆಯರು ಪಾಲ್ಗೊಳ್ಳಲು ಮುಕ್ತ ಅವಕಾಶ ಲಭ್ಯವಾಗಬೇಕಿದೆ. ಸದರಿ ಅವಕಾಶದ ಬಳಕೆಯಾಗಬೇಕಾದರೆ ರಾಜಕೀಯ ಶಕ್ತಿ ಅತ್ಯಗತ್ಯ. ಆದರೆ ಅಲ್ಲಿಯೂ ಅಧಿಕಾರ ಹಿಡಿವ ಹೆಣ್ಣಿನ ಹಿಂದೆ ಪುರುಷ ಪರೋಕ್ಷವಾಗಿ ಅಧಿಕಾರ ಚಲಾಯಿಸುವುದನ್ನು ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಕಾಣಬಹುದು. ಆದಾಗ್ಯೂ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಸರಿಯಾದ ಪ್ರಾತಿನಿದ್ಯ ಸಿಗುತ್ತಿಲ್ಲ. ಇವತ್ತು ಶಾಸನ ಸಭೆಗಳಲ್ಲಿ ಮಹಿಳೆ ಮೀಸಲಾತಿಗೆ ಬೊಬ್ಬೆ ಹಾಕುತ್ತಿರುವ ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷಗಳಲ್ಲಿ ಹಾಗೂ ಟಿಕೆಟ್ ಹಂಚಿಕೆವೇಳೆ ಎಷ್ಟು ಮಂದಿ ಮಹಿಳೆಯರಿಗೆ ಮಣೆ ಹಾಕಿದ್ದಾರೆ ಎನ್ನುವ ಪ್ರಶ್ನೆಯೂ ಮುಖ್ಯವಾಗುತ್ತದೆ. ಕನಿಷ್ಟ ಶೇ.5ರಷ್ಟು ಸಹಾ ಪ್ರಾತಿನಿದ್ಯ ನೀಡದ ರಾಜಕೀಯ ಪಕ್ಷಗಳಿಗೆ ಮತ್ತು ಮುಖಂಡರಿಗೆ ಶೇ.50ರ ಮೀಸಲು ಪ್ರತಿಪಾದಿಸುವ ಹಕ್ಕಿದೆಯೇ? ಶೇ.33ರ ಮೀಸಲು ಕೊಡಲು ಹಲವು ದಶಕಗಳಿಂದ ಹಿಂಜರಿದವರು ಶೇ.50ರ ಮೀಸಲು ಕೊಟ್ಟಾರೆಯೇ? ಇನ್ನೊಂದು ವಿಚಾರ ಮಹಿಳಾ ಮೀಸಲು ವಿಧೇಯಕ ಅನುಮೋದನೆ ಗೊಳ್ಳುವಾಗ ಸದರಿ ಮೀಸಲಾತಿ ಅರ್ಹರಿಗೆ ತಲುಪುವಂತೆ ಹಾಗೂ ದುರ್ಬಲ ವರ್ಗದವರಿಗೂ ಸ್ಥಾನ ಲಭಿಸುವಂತೆ ಪರಿಷ್ಕರಣೆ ಯಾಗಬೇಕು. ಇಲ್ಲದಿದ್ದಲ್ಲಿ ತಲೆಮಾಸಿದ ರಾಜಕಾರಿಣಿಯರು, ರಾಜಕೀಯ ಮುಖಂಡರ ಅಂತಪುರದ ಗೆಳತಿಯರು , ಮೇಲ್ವರ್ಗೆದ ಶೋಕಿವಾಲಿಗಳು ಮಹಿಳಾ ಮೀಸಲು ಅತಕ್ರಮಿಸುವ ಅಪಾಯವಿದೆ.
ಇನ್ನು ದಲಿತ ಮೀಸಲಾತಿಯ ವಿಚಾರಕ್ಕೆ ಬರೋಣ. ಕಳೆದ ವಾರ ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಯಡಿಯೂರಪ್ಪ ಜಾತಿ ಸಮಾವೇಶವೊಂದರಲ್ಲಿ ಮಡಿವಾಳ ಜನಾಂಗವನ್ನು ಎಸ್ಸಿ ಪಟ್ಟಿಗೆ ಸೇರಿಸುವ ಮಾತನಾಡಿದ್ದಾರೆ, ಈಗ್ಯೆ 2ವರ್ಷಗಳ ಹಿಂದೆ ಪಕ್ಕದ ರಾಜ್ಯವೊಂದರ ಉದಾಹರಣೆ ನೀಡಿ ಉಪ್ಪಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸುವ ಮಾತುಗಳು ಕೇಳಿಬಂದಿತ್ತು. ನಿಮಗೆ ತಿಳಿದಿರಲಿ ಸಂವಿದಾನಾತ್ಮಕವಾಗಿ ಇರುವ ಒಟ್ಟು ಮೀಸಲಾತಿಯಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಶೇ.೨೭ ಹಾಗೂ ಪರಿಶಿಷ್ಟ ಜಾತಿಗೆ ಶೇ.೧೫, ಪರಿಶಿಷ್ಠ ಪಂಗಡಕ್ಕೆ ಶೇ.೭ ರ ಮೀಸಲಾತಿಯನ್ನು ರಾಜಕೀಯ, ಶಿಕ್ಷಣ, ಉದ್ಯೋಗದಲ್ಲಿ ಕೊಡಮಾಡಿದೆ. ಈ ಪೈಕಿ ಸಂಘಟಿತ ಪ.ಜಾತಿಯವರು ನಿರಂತರ ಹೋರಾಟದ ಮೂಲಕ ಶೇ.೭.5ರ ಮೀಸಲಾತಿ, ಪ.ಪಂಗಡದವರು ಶೇ.೨.5ರ ಮೀಸಲು ಅನುಭವಿಸುತ್ತಿದ್ದರೆ. ಒಟ್ಟು ಸಮಾಜವಾಗಿ ಸಂಘಟಿತರಾಗದ ಹಿಂ.ವರ್ಗಗಳು ಶೇ.2ರ ಮೀಸಲಾತಿ ಮಾತ್ರ ಗಳಿಸುವಲ್ಲಿ ಯಶಸ್ವಿಯಾಗಿವೆ. ಪಕ್ಕದ ಆಂದ್ರ ಹಾಗು ತಮಿಳುನಾಡಿನಲ್ಲಿ ಮಾತ್ರ ಹಿಂ.ವ. ದವರ ಮೀಸಲು ಪೂರ್ಣಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಅದಕ್ಕಾಗಿ ಸುಗ್ರೀವಾಜ್ನೆ ಮೂಲಕ ವಿಧೇಯಕ ತರಲಾಗಿದೆ. ದೇಶದ ೊಟ್ಟು ಜನಸಂಖ್ಯೆ ಶೇ.52ರಷ್ಟು ಪ್ರಮಾಣದಲ್ಲಿ ಹಿಂ.ವ. ಮಂದಿ ಇದ್ದಾರೆ. ಹೀಗಿರುವಾಗ ಎಸ್ಸಿ ಪಟ್ಟಿಒಂದರಲ್ಲೇ ಸುಮಾರು ೧೦೧ ಜಾತಿಗಳು ಸೇರ್ಪಡೆಯಾಗಿವೆ. ಹರಿಜನರ ಮೀಸಲು ಇತರೆ ಜನಾಂಗದೊಂದಿಗೆ ಹರಿದು ಹಂಚಿ ಹೋಗಿದೆ. ಹೀಗಿರುವಲ್ಲಿ ಮತ್ತೆ ಮತ್ತೆ ಈ ಪಟ್ಟಿಗೆ ನಾನಾ ಕಾರಣಗಳಿಂದ ಸೇರ್ಪಡೆಯಾಗುವವರ ಪಟ್ಟಿ ಬೆಳೆಯುತ್ತಲೇ ಇದೆ. ಅದೇ ರೀತಿ ಹಿಂ.ವ. ಪಟ್ಟಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ೨೩೯೯ ಜಾತಿಗಳಿದ್ದರೆ, ರಾಜ್ಯದಲ್ಲಿ ೧೮೫ ಜಾತಿಗಳಿವೆ. ಸದರಿ ಪಟ್ಟಿಗೂ ಮೇಲ್ಪದರದಲ್ಲಿ ಬರುವ ಸಾದರ ಲಿಂಗಾಯಿತರ ಸೇರ್ಪಡೆಯಾಗುತ್ತಿದೆ. ಹೀಗೆ ಎಲ್ಲ ಜಾತಿಗಳನ್ನು ಹಿಂದುಳಿದವರ್ಗಗಳ ಪಟ್ಟಿಗೆ ಎಸ್ಸಿ ಪಟ್ಟಿಗೆ ಸೇರಿದರೆ ಮೀಸಲಾತಿಯ ಅರ್ಥ ಉಳಿದೀತೆ? ಒಂದು ಮೀಸಲಾತಿ ಹಣ್ಣನ್ನು 100ಮಂದಿ ಹಂಚಿ ತಿನ್ನಲಾದಿತೇ? ಹೀಗಾದರೆ ಸಾಮಾಜಿಕ ನ್ಯಾಯ ಎಲ್ಲಿ ಸಿಕ್ಕೀತು. ಇನ್ನೂ ರಾಜಕೀಯ ಮೀಸಲಾತಿ ವಿಚಾರ, ದಲಿತ ಮೀಸಲಾತಿಯನ್ನು ಮೊದಲಿಗೆ 330ರ ಪರಿಚ್ಛೆದದ ಪ್ರಕಾರ ಮೊದಲ 20ವರ್ಷಗಳಿಗೆ ಮಾತ್ರ ನೀಡಲಾಗಿತ್ತು. ಆದರೆ ಈಗ ಎಷ್ಟು ವರ್ಷಕಳೆದಿದೆ? ಯಾಕಿನ್ನೂ ರಾಜಕೀಯ ಮೀಸಲಾತಿ ನೀಡಲಾಗುತ್ತಿದೆ. ರಾಜಕೀಯ ಮೀಸಲಾತಿ ಪಡೆದವರು ಅವರನ್ನು ನಂಬಿಕೊಂಡವರಿಗೆ ಮಾಡಿದ್ದೇನು? ಇವತ್ತು ಏನೇ ಮೀಸಲಾತಿ ಇದ್ದರೂ ಪ.ಜಾ/ಪ.ಪಂ ಮತ್ತು ಹಿಂ.ವ.ಮಂದಿಗೆ ಸರ್ಕಾರಿ ನೌಕರಿ ಇದ್ದರೆ, 1ಲಕ್ಷದಷ್ಟು ವಾರ್ಷಿಕ ಆದಾಯ ಹೊಂದಿರುವವರಿಗೆ ಮೀಸಲಾತಿ ಇಲ್ಲ ಅಂತಹವರು ಮುಲಾಜಿಲ್ಲದೇ ಮೇಲ್ಪದರಕ್ಕೆ ಬರುತ್ತಾರೆ. ಆದರೆ ರಾಜಕಾರಣಿಗಳಿಗೆ ಹಾಗಿಲ್ಲ ಯಾವುದೇ ಆದಾಯದ ಇತಿಮಿತಿಯಿಲ್ಲದೇ ಕೋಟ್ಯಾಧಿಶರಾಗಿದ್ದರೂ ಸಹಾ ರಾಜಕೀಯ ಮೀಸಲಾತಿ ನೀಡಲಾಗುತ್ತಿದೆ. ಇದು ಸರಿಯೇ? ಹಾಗೆ ರಾಜಕೀಯ ಮೀಸಲು ಸ್ಥಾನಗಳಿಂದ ಗೆದ್ದು ಬಂದವರು ಆಯಾ ಕ್ಷೇತ್ರದ ಜನರಿಗೆ ಮಾತ್ರ ಸೇವೇ ನೀಡುತ್ತಾರೆಯೇ ವಿನಹ ತನ್ನ ವ್ಯಾಪ್ತಿಗೊಳಪಡುವ ಇತರೆ ಪ್ರದೇಶಗಳ ಜನರ ಕಷ್ಟ ಸುಖ ಕೇಳಲಾರರು. ಉದಾಹರಣೆಗೆ ಒಂದು ಜಿಲ್ಲೆ ಅಂದರೆ ಅಲ್ಲಿನ ಹತ್ತು ಸ್ಥಾನಗಳ ಪೈಕಿ ಒಂದು ಮೀಸಲು ಕ್ಷೇತ್ರವಾಗುತ್ತದೆ. ಅಲ್ಲಿ ಗೆದ್ದವನು ಇಡೀ ಜಿಲ್ಲೆಯ ಸಮುದಾಯದ ಹಿತಕಾಯಬೇಕಲ್ಲವೇ? ಹೀಗೆ ಪ.ಜಾ/ಪ.ಪಂ. ಮತ್ತು ಹಿಂ.ವ.ಗಳಿಗೆ ನೀಡಿರುವ ಮೀಸಲಾತಿ ಬಗ್ಗೆ ಮಹತ್ವದ ಚರ್ಚೆ ಯಾಗಬೇಕಿದೆ. ಮೀಸಲಾತಿಯ ಮೂಲ ಆಶಯ ದಿಕ್ಕು ತಪ್ಪುವುದಾದರೆ ಅದರ ಅಗತ್ಯವಾದರೂ ಏನು?