ಮಹಾಜನ್ ವರದಿಯ ನಂತರ ಮುಗಿದ ಅಧ್ಯಾಯವೆಂದೆ ಬಣ್ಣಿಸಲಾಗುತ್ತಿರುವ ವಿವಾದವನ್ನ ಮಹಾರಾಷ್ಟ್ರ ಸರ್ಕಾರ ಕೆದಕುವ ಮೂಲಕ ಭಾಷಿಕ ಸಮುದಾಯಗಳಲ್ಲಿ ಗೋಂದಲ ಮೂಡಿಸುತ್ತಿದೆಯಲ್ಲದೇ ಕನ್ನಡಿಗರ ಭಾವನಾತ್ಮಕವಾದ ನೆಲೆಗಟ್ಟಿಗೆ ಕಿರಿ ಕಿರಿ ಉಂಟು ಮೂಡುತ್ತಿದೆ. ಇವತ್ತು ಕರ್ನಾಟಕ ರಾಜ್ಯದಲ್ಲಿ ಮಕುಟ ಪ್ರಾಯದಂತಿರುವ ಬೆಳಗಾವಿ ಮತ್ತು ಕೇರಳದಲ್ಲಿರುವ ಕಾಸರಗೋಡು ಮತ್ತು ಅಲ್ಲಿನ ಕನ್ನಡಿಗರು ಆತಂಕದಲ್ಲಿ ಬದುಕುವ ಸ್ಥಿತಿಯನ್ನು ಸೃಷ್ಟಿಸುತ್ತಿದೆ. ಕಾನೂನಾತ್ಮಕವಾಗಿ ಪ್ರಾದೇಶಿಕ ಬಾಷಾ ರಾಜ್ಯಗಳ ವಿಂಗಡಣೆ ಆಯಾ ಪ್ರಾಂತ್ಯದ ಜನ ಸಾಮಾನ್ಯರ ಒಪ್ಪಿಗೆಯನುಸಾರವಾಗಿ ಆಗಿದ್ದರೂ ಸಹಾ ರಾಜಕೀಯ ಹಿತಾಸಕ್ತಿಗಳು ಮತ್ತು ಕೋಮು ಸಂಘಟನೆಗಳ ಅವಿವೇಕತನದಿಂದ ರಾದ್ದಾಂತವಾಗುತ್ತಿದೆ. ಕರ್ನಾಟಕದ ಬೆಳಗಾವಿ ಕುರಿತು ಮಹರಾಷ್ಟ್ರ ದ ನಿಲುವು ಭಾರತದ ಕಾಶ್ಮೀರ ಹಾಗೂ ಪಾಕೀಸ್ಥಾನದ ನಡುವಣ ಸ್ಥಿತಿ ಇರುವಂತೆಯೇ ಇದೆ. ಆದರೆ ವ್ಯತ್ಯಾಸ ಒಂದೇ ಮಹರಾಷ್ಟ್ರ ಮತ್ತು ಕರ್ನಾಟಕ ಬೇರೆ ದೇಶಗಳಲ್ಲ ಎರಡೂ ಭಾರತ ದೇಶದ ರಾಜ್ಯಗಳು! ಹೀಗಿರುವಾಗ ಪದೇ ಪದೇ ಗಡಿನಾಡ ವಿವಾದ ಯಾಕೆ ಭುಗಿಲೇಳುತ್ತಿದೆ? ಇದರ ಹಿನ್ನೆಲೆ ಏನು? ಎಂಬ ಕುರಿತು ಅರಿಯುವ ಸಂಧರ್ಭ ಇದು.
1947ರಲ್ಲಿ ಭಾರತಕ್ಕೆ ಸ್ವತಂತ್ರ ಬಂದ ಮೇಲೆ ಬೆಳಗಾಂ ಜಿಲ್ಲೆ ಬಾಂಬೆ ರಾಜ್ಯದ ಭಾಗವಾಗಿತ್ತು.1948ರಲ್ಲಿ ಬೆಳಗಾಂ ಮುನಿಸಿಪಲ್ಟಿ ಮಾಡಿಕೊಂಡ ಮನವಿ ಮೇರೆಗೆ ಗಣರಾಜ್ಯಗಳ ಒಕ್ಕೂಟಗಳ ಸಂಯುಕ್ತ ಮಹರಾಷ್ಟ್ರಕ್ಕೆ ಸೇರ್ಪಡೆಯಾಯಿತು. ಆದರೆ 1956ರಲ್ಲಿ ಗಣರಾಜ್ಯಗಳ ವಿಂಗಡಣೆಯಾದಾಗ ರಾಜ್ಯಗಳ ಪುನರ್ ಸಂಯೋಜನೆ ಕಾಯ್ದೆಯಡಿ ಮೈಸೂರು ಸಂಸ್ಥಾನಕ್ಕೆ ಸೇರ್ಪಡೆಯಾಯಿತು. ಅಂದರೆ ಇಂದಿನ ಕರ್ನಾಟಕ ರಾಜ್ಯ.ಹಾಗೆಯೇ ನಮ್ಮ ರಾಜ್ಯದ ಪರಿಮಿತಿಯಲ್ಲಿದ್ದ ಹಲವು ಪ್ರದೇಶಗಳು ಮಹರಾಷ್ಟ್ರ ರಾಜ್ಯಕ್ಕೆ ಸೇರ್ಪಡೆಯಾಯಿತು. ಈ ಸಂಧರ್ಭದಲ್ಲಿ ಭಾಷಿಕರು ಹಾಗೂ ಆಡಳಿತಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳಗಾಂ ಜಿಲ್ಲೆಯ ಸೇರ್ಪಡೆಯಾಯಿತಾದರೂ ಬೆಳಗಾಂ ನಲ್ಲಿ ಮಾತ್ರ ಮರಾಠಿ ಭಾಷಿಕರ ಸಂಖ್ಯೆಯದ್ದೇ ಮೇಲುಗೈ ಮತ್ತು ಅವರದ್ದೇ ದರ್ಬಾರು ಎನ್ನುವಂತಾಯಿತು.
ಐತಿಹಾಸಿಕವಾಗಿ ಬೆಳಗಾಂ ಕನ್ನಡಿಗರ ಪಾಲಿನ ಆಸ್ತಿಯಾಗಿತ್ತು ಮತ್ತು ಅನೇಕ ಅರಸರ ಸಂಸ್ಥಾನಕ್ಕೆ ಒಳಪಟ್ಟಿತ್ತು ಆದರೆ 18ನೇ ಶತಮಾನದಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಈ ಭಾಗ ಮರಾಠರ ದಾಳಿಗೆ ಸಿಲುಕಿ ಪೇಶ್ವೆಗಳ ಆಡಳಿತಕ್ಕೆ ಸೇರ್ಪಡೆಯಾಯಿತಲ್ಲದೇ "ದಕ್ಷಿಣ ಮರಾಠ ದೇಶ" ಎಂದು ಕರೆಯಲ್ಪಟ್ಟಿದ್ದು ನಮ್ಮ ಉತ್ತರ ಕರ್ನಾಟಕದ ಭಾಗದ ದುರಂತ ಕಥನಗಳಲ್ಲೊಂದು.ಬ್ರೀಟೀಷರು ಭಾರತವನ್ನ ಅತಿಕ್ರಮಣ ಮಾಡಿದ ಮೇಲೆ ಜಹಗೀರುಗಳಾಗಿ ಅದನ್ನು ಹರಿದು ಹಂಚಿದರು, ಅಲ್ಲೆಲ್ಲ ಬಹುತೇಕ ಕನ್ನಡಿಗ ಭಾಷಿಕರ ಸಂಖ್ಯೆಯೆ ಹೆಚ್ಚಿತ್ತು.ಮುಂದೆ ಭಾಷಾ ಒಕ್ಕೂಟ ರಾಜ್ಯಗಳು ರಚನೆಯಾದ ಮೇಲೆ ಬೆಳಗಾವಿ ಜಿಲ್ಲೆ ಕನ್ನಡಕ್ಕೆ ಸೇರ್ಪಡೆಗೊಂಡಿದ್ದು ಇತಿಹಾಸ. ಆದರೆ ಮಹರಾಷ್ಟ್ರ ರಾಜ್ಯದ ತಂಟೆ ತಕರಾರನ್ನು ಸಲ್ಲಿಸಿದ ಮೇಲೆ ಭಾರತ ಸರ್ಕಾಗ ಗಡಿ ವಿವಾದ ಬಗೆಹರಿಸಲು 5ನೇ ಜೂನ್ 1960ರಂದು 4ಜನ ಸದಸ್ಯರುಗಳನ್ನೊಳಗೊಂಡ ಮಹಾಜನ್ ಆಯೊಗದ ರಚನೆ ಮಾಡಿ ವರದಿ ನೀಡುವಂತೆ ಹೇಳಿತು. ಈ ಸಮಿತಿಯಲ್ಲಿ ಮೈಸೂರು ರಾಜ್ಯದ ಇಬ್ಬರು ಸದಸ್ಯರು ಹಾಗೂ ಮಹರಾಷ್ಟ್ರದ ಇಬ್ಬರು ಪ್ರತಿನಿಧಿಗಳಿದ್ದರು. ಮಹರಾಷ್ಟ್ರದ ಕ್ಯಾತೆಯಿಂದಾಗಿ ಈ ಸಮಿತಿ ವರದಿ ನೀಡುವಲ್ಲಿ ವಿಫಲವಾಯಿತು. ಹಾಗಾಗಿ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸೂಚಿಸಲಾಗಿತ್ತು.
ಮುಂದೆ ಮತ್ತೆ ಮತ್ತೆ ಗಡಿ ವಿವಾದವನ್ನು ಕೆದಕುತ್ತಿದ್ದ ಮಹಾರಾಷ್ಟ್ರದಲ್ಲಿ ಸೇನಾಪತಿ ಬಾಪಟ್ ಎಂಬ ಜನನಾಯಕನೊಬ್ಬ ಗಡಿ ವಿವಾದ ಬಗೆ ಹರಿಸುವಂತೆ ಉಪವಾಸ ಸತ್ಯಾಗ್ರಹ ನಡೆಸಿ ಒತ್ತಡ ಹೇರಿದ್ದರಿಂದ ಭಾರತ ಸರ್ಕಾರ ಮತ್ತೊಮ್ಮೆ 1966ರಲ್ಲಿ ಮಹಾಜನ್ ಆಯೊಗವನ್ನು ಪುನರ್ ರಚಿಸಿತು. 1967ರಲ್ಲಿ ಈ ಆಯೋಗವನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಭಾರತ ದೇಶದ ಸುಪ್ರೀಂ ಕೊರ್ಟಿನ 3ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮೆಹರ್ ಚಂದ್ ಮಹಾಜನ್ ಆಯೋಗದ ಅಧ್ಯಕ್ಷರಾಗಿದ್ದರಿಂದ ಆಯೋಗದ ವರದಿಗೆ ಮಹಾಜನ್ ಆಯೊಗದ ವರದಿ ಎಂದೆ ಹೆಸರಾಗಿದೆ. ಆಯೋಗವೂ ಎರಡು ರಾಜ್ಯಗಳ ವಾದ ವಿವಾದವನ್ನು ಆಲಿಸಿ ಪರಿಶೀಲಿಸಿ ಪ್ರದೇಶಗಳ ಅದಲು ಬದಲು ಮಾಡಿಕೊಳ್ಳಲು ಸೂಚಿಸಿತಲ್ಲದೇ ಮಹರಾಷ್ಟ್ರ ಕೇಳಿದ್ದ ಬೆಳಗಾಂ ಕೇಂದ್ರ ಸ್ಥಾನ ನಗರವನ್ನು ಬದಲಿಸಲು ಸ್ಪಷ್ಠವಾಗಿ ನಿರಾಕರಿಸಿತು. ಇದಕ್ಕಾಗಿ ಆಯೋಗವು 2240ಕ್ಕೂ ಹೆಚ್ಚು ಮನವಿಗಳನ್ನು ಆಲಿಸಿತು, 7572ಕ್ಕೂ ಹೆಚ್ಚು ಜನರನ್ನು ಖುದ್ದಾಗಿ ಮಾತನಾಡಿಸಿತು ನಂತರವಷ್ಟೇ ತನ್ನ ವರದಿಯನ್ನು ಕೆಂದ್ರಕ್ಕೆ ಸಲ್ಲಿಸಿತು. ಈ ಸಂಧರ್ಭದಲ್ಲಿ ಮಹರಾಷ್ಟ್ರ ಬೆಳಗಾಂ ಸೇರಿದಂತೆ 814ಪ್ರದೇಶಗಳನ್ನು ಕೇಳಿದ್ದಕ್ಕೆ ದಕ್ಕಿದ್ದು ನಿಪ್ಪಾಣಿ, ಖಾನಾಪುರ ಮತ್ತು ನಂದಗಢ್ ಸೇರಿದಂತೆ 262ಗ್ರಾಮಗಳು, ಮೈಸೂರು ಸಂಸ್ಥಾನವೂ ಬಯಸಿದ್ದ 516 ಹಳ್ಳಿಗಳ ಪೈಕಿ ಸಿಕ್ಕಿದ್ದು ಕೇವಲ 247. ಹೀಗೆ ಮಹಾಜನ್ ಆಯೋಗ ತನ್ನ ವರದಿ ನೀಡಿದ ಸಂಧರ್ಭದಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಹೇಳಿತ್ತು. 1920ರಲ್ಲಿ ಕಾಸ್ಮೋಪಾಲಿಟನ್ ಸಿಟಿಯಾಗಿದ್ದ ಬೆಳಗಾಂ ನಗರದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಹಾ ಸಭೆ ನಡೆದಾಗ ಯಾವೊಬ್ಬ ಮರಾಠಿ ನಾಯಕನೂ ಬೆಳಗಾಂ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಹೇಳಿರಲಿಲ್ಲ, ಬೆಳಗಾಂ ನಗರ ಹೊರತು ಪಡಿಸಿ ಜಿಲ್ಲೆಯ ಎಲ್ಲಾ ಪಟ್ಟಣಗಳು ಮತ್ತು ಹಳ್ಳಿಗಳು ಅಪ್ಪಟ ಕನ್ನಡಿಗರಿಂದಲೇ ಕೂಡಿರುವುದರಿಂದ ಬೆಳಗಾಂ ಮೈಸೂರು ಸಂಸ್ಥಾನದ ಭಾಗ ಎಂದು ಸಾರಿತ್ತು. ಮುಂದೆ ಆಯೋಗದ ಅಂತಿಮ ವರದಿ ಸಲ್ಲಿಕೆಯಾದಾಗ ಅಂದಿನ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಮಹಾಜನ್ ಆಯೋಗದ ಶಿಫಾರಸ್ಸುಗಳಿಗೆ ಅನುಮೋದನೆ ನೀಡಿದ್ದರು.
ಆದರೆ ಮಹರಾಷ್ಟ್ರ ಸರ್ಕಾರ ಸುತರಾಂ ಒಪ್ಪದೇ ಮಹಾಜನ್ ಆಯೋಗದ ವರದಿಯನ್ನ ತಿರಸ್ಕರಿಸಿತ್ತು. ಆದಾಗ್ಯೂ ವಿವಾದ ನ್ಯಾಯಾಲಯದ ಮೆಟ್ಟಿಲೇರಿದಾಗ ನ್ಯಾಯಾಲಯವೂ ಸಹಾ ಮಹಾಜನ್ ಆಯೋಗದ ವರದಿ ಅಂತಿಮ ಎಂದೇ ಸಾರಿದೆ. ಆದರೆ ಬೆಂಬಿಡದೇ ತಕರಾರು ತೆಗೆಯುತ್ತಿರುವ ಮಹರಾಷ್ಟ್ರ ನ್ಯಾಯಾಲಯದ ಆದೇಶಗಳನ್ನ ಉಲ್ಲಂಘಿಸಿ ಪ್ರಾದೇಶಿಕ ಭಾಷಿಗರ ಭಾವನಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿದೆ. ಅದರ ಪರಿಣಾಮವೇ ಬೆಳಗಾವಿ ಜಿಲ್ಲೆಯ ಯಳ್ಳೂರ ಘಟನೆ. ಇದ್ದಕ್ಕಿಂದತೆಯೇ ರಾತ್ರೋ ರಾತ್ರಿ ಕರ್ನಾಟಕಕ್ಕೆ ಸೇರಿದ ಹಳ್ಳಿಯೊಂದರಲ್ಲಿ ಮಹರಾಷ್ಟ್ರ ರಾಜ್ಯ ಯಳ್ಳುರು ಎಂದು ನಾಮಫಲಕ ಹಾಕಿದರೆ ಅದನ್ನ ಒಪ್ಪಿಕೊಳ್ಳಬೇಕೆ? ಈ ಘಟನೆಯನ್ನ ನ್ಯಾಯಾಲಯ ಪರಿಮಿತಿಗೆ ತಂದು ಜಿಲ್ಲಾಡಳಿತದ ಮೂಲಕ ತೆರವು ಮಾಡಿಸಿದರೆ ತಪ್ಪೇ? ಇದನ್ನೇ ದೊಡ್ಡ ಸಮಸ್ಯೆಯಂತೆ ಬಿಂಬಿಸಿದ ಶಿವಸೇನಾ ಎಂಬ ಕೋಮು ಕಪಿಗಳ ತಂಡ ರಾಜ್ಯದ ಬಸ್ ಗಳ ಮೇಲೆ ಕಲ್ಲು ತೂರಿ ಕನ್ನಡ ಭಾಷಿಕರ ಮೇಲೆ ದೌರ್ಜನ್ಯ ಎಸಗಿದರೆ ಸಹಿಸಬೇಕೆ? ನಾಮಫಲಕ ತೆರವು ಗೊಳಿಸುವ ಸಂಧರ್ಭದಲ್ಲಿ ಗಲಭೆ ಉಂಟಾಯಿತೆಂಬ ಕುಂಟು ನೆಪ ಹೇಳಿ ಮಹರಾಷ್ಟ್ರ ಸರ್ಕಾರ ತನ್ನ ಜಿಲ್ಲಾಧಿಕಾರಿಯನ್ನು ಬೆಳಗಾವಿಗೆ ಕಳುಹಿಸುವುದನ್ನು ಸಹಿಸಬೇಕೆ? ಎಂಇಎಸ್ ಎಂಬ ಪುಂಡರ ತಂಡ ಮರಾಠಿ ಮೇಳ, ಸಭೆ ಇತ್ಯಾದಿಗಳನ್ನು ಮಾಡಿ ನಮ್ಮ ಶಾಂತಿಗೆ ಭಂಗ ತರುವುದನ್ನು ಎಷ್ಟು ದಿನ ನೋಡಿಕೊಂಡಿರಲು ಸಾಧ್ಯ? ಎಂಇಎಸ್ ಎಂಬ ಪುಂಡರ ಪಡೆ ಚುನಾವಣೆಗಳಲ್ಲಿ ಮರಾಠಿಗರನ್ನೇ ಆಯ್ಕೆ ಮಾಡಿಕೊಂಡು ಕನ್ನಡಿಗರಿಗೆ ಆಡಳಿತ ದಕ್ಕದಂತೆ ಮಹಾನಗರಪಾಲಿಕೆಯಲ್ಲಿ ಪುಂಡಾಟಿಕೆ ನಡೆಸುತ್ತದೆ. ಕನ್ನಡದ ಮೇಯರ್ ಗಳಿಗೆ ಸದಸ್ಯರುಗಳಿಗೆ ಚಪ್ಪಲಿ ಸೇವೆ ಹಿಯಾಳಿಕೆ ಮಾಡುತ್ತದೆ ಎಂಬುದನ್ನು ಸಹಿಸಬೇಕೆ? ಕರ್ನಾಟಕ ರಕ್ಷಣ ವೇದಿಕೆಯ ನಾರಾಯಣಗೌಡರಿಗೆ ಈ ವಿಚಾರದಲ್ಲಿ ಹ್ಯಾಟ್ಸ್ ಆಫ್ ಹೇಳಲೇ ಬೇಕು, ರಾಜ್ಯ ಸರ್ಕಾರ ಮೈ ಮರೆತು ಕೂತಾಗ ಗಡಿನಾಡ ಜನರ ರಕ್ಷಣೆಗೆ ದಾವಿಸಿ ಹೋರಾಟದ ಮೂಲಕ ಬಿಸಿ ಮುಟ್ಟಿಸಿ ಕನ್ನಡಿಗರು ಆಡಳಿತ ಚುಕ್ಕಾಣಿ ಹಿಡಿಯುವಂತಹ ಕಾರ್ಯ ಮಾಡಿದ್ದು ಒಬ್ಬ ಹೋರಾಟಗಾರ ಎಂಬುದು ಸಾಮಾನ್ಯ ಸಂಗತಿಯಲ್ಲ.
ಇವತ್ತು ಮತ್ತೆ ತಕರಾರು ಭುಗಿಲೆದ್ದಿದೆ, ಅಲ್ಲಿ ಶಾಸಕನಾಗಿರುವ ಎಂಇಎಸ್ ಪಡೆಯ ಶಾಸಕ ಸಂಭಾಜಿ ಪಾಟೀಲ ಪುಂಡಾಟಿಕೆಗೆ ಕುಮ್ಮಕ್ಕು ನೀಡುತ್ತ ಪರೋಕ್ಷವಾಗಿ ಯಳ್ಳೂರು ಸಮಸ್ಯೆಗೆ ಕಾರಣಕರ್ತನಾಗಿದ್ದಾನೆ. ಮಹರಾಷ್ಟ್ರ ಭಾಗದಲ್ಲಿ ಇನ್ನೆರೆಡು ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ತನ್ನ ಕಡೆಯ ಎಂಇಎಸ್ ಪುಂಡನೊಬ್ಬನಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಭಾವನೆಗಳನ್ನು ಕೆದಕುವ ಕೆಲಸ ಮಾಡಿದ್ದಾನೆ. ತಕ್ಷಣದಿಂದ ಈತನ ವಿಧಾನ ಸಭಾ ಸದಸ್ಯತ್ವ ರದ್ದಾಗುವಂತೆ ಕ್ರಮ ಜರುಗಿಸ ಬೇಕಾದಂತ ಅಗತ್ಯವಿದೆ. ರಾಜ್ಯ ಸರ್ಕಾರ ಸಧ್ಯ ಪರಿಸ್ಥಿತಿಯನ್ನು ನಿಭಾಯಿಸಲು ಹೇಮಂತ್ ನಿಂಬಾಳ್ಕರ್ ಎಂಬ ಐಪಿಎಸ್ ಅಧಿಕಾರಿಯನ್ನು ಕಳುಹಿಸಿದೆ ಆತನೊ ಮಹರಾಷ್ಟ್ರೀಯ ಅಲ್ಲಿ ಎಂತಹ ನ್ಯಾಯ ನಿರೀಕ್ಷಿಸಲು ಸಾಧ್ಯ? ಸರ್ಕಾರ ಕೋಟ್ಯಾಂತ ವೆಚ್ಚ ಮಾಡಿ ವಿಧಾನ ಸೌಧ ನಿರ್ಮಿಸಿ ಅಲ್ಲಿ ವರ್ಷಕ್ಕೊಂದು ಸಲ ಪಿಕ್ ನಿಕ್ ಹೋಗಿ ಸದನ ನಡೆಸಿದರೆ ಸಾಲದು ಕಠಿಣ ನಿರ್ದಾರಗಳನ್ನು ಗಡಿ ರಕ್ಷಣೆ ಕುರಿತು ತೆಗೆದುಕೊಳ್ಳಬೇಕಿದೆ. ಗಡಿನಾಡ ಶಾಲೆಗಳ ಸ್ಥಾಪನೆ, ಮೂಲ ಸೌಕರ್ಯಗಳು, ಜನಸಾಮಾನ್ಯರ ಬದುಕುಗಳನ್ನು ಹಸನಾಗಿಸುವ ಯೋಜನೆಗಳನ್ನು ಜಾರಿಗೆ ತರಬೇಕಿದೆ. ಎಂಇಎಸ್ ಪುಂಡಾಟಿಕೆಯನ್ನು ನಿರ್ನಾಮ ಮಾಡುವ ಜೊತೆಗೆ ರಾಜ್ಯದಲ್ಲಿ ಆ ಸಂಘಟನೆಯನ್ನೆ ನಿಷೇದಿಸ ಬೇಕಿದೆ. ಬೆಳಗಾಂ ನಲ್ಲಿ ಕನ್ನಡಿಗರ ಕಾರ್ಯಕ್ರಮಗಳು, ಹೋರಾಟಗಳು ನಡೆಯಲು ಅವಕಾಶವನ್ನು ಕಲ್ಪಿಸಬೇಕು, ವಿವಾದ ಭುಗಿಲೆದ್ದಾಗ ಮಾತ್ರ ಎಚ್ಚರವಿದ್ದು ಬಾಕಿಯ ಸಮಯದಲ್ಲಿ ನಿದ್ರಿಸುವುದನ್ನು ಬಿಡಬೇಕು. ಗಡಿನಾಡ ಕನ್ನಡಿಗರ ಪರವಾಗಿ ಹೋರಾಟ ನಡೆಸುವ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರುಗಳ ಗಣ್ಯರ ವಿರುದ್ದ ಯಾವ ದೂರುಗಳನ್ನು ಹಾಕಬಾರದು ಮತ್ತು ಗಡಿ ನಾಡ ಹೋರಾಟಗಳಿಗೆ ಹಾಕಿರುವ ಎಲ್ಲ ಮೊಕದ್ದಮೆಗಳನ್ನು ಹಿಂಪಡೆದು ಮಹರಾಷ್ಟ್ರದ ಶಿಖಂಡಿ ಕದನಕ್ಕೆ ಬ್ರೇಕ್ ಹಾಕುವ ಇಚ್ಚಾಶಕ್ತಿಯನ್ನು ಕರ್ನಾಟಕ ರಾಜ್ಯ ಪ್ರದರ್ಶಿಸಲಿ.