
ವ್ಯಾಲೆಂಟೈನ್ಸ್ ಡೇ ಆಚರಿಸಬೇಕೋ ? ಬೇಡವೋ ? ಎಂಬ ಪ್ರಶ್ನೆ ಇಟ್ಟುಕೊಂಡು ವೃಥಾ ಕಾಲಹರಣದ ಚರ್ಚೆ ಮಾಡಿಕೊಂಡು, ಕಿತ್ತಾಡಿಕೊಂಡು ನೆಮ್ಮದಿ ಹಾಳು ಮಾಡುತ್ತಿದ್ದರಲ್ಲ ಈ ಅವಿವೇಕಿಗಳು ಬಹುಶ: ಇದಕ್ಕಿಂತ ಅವಿವೇಕದ ಸಂಗತಿ ಮತ್ತೊಂದಿರಲಾರದೇನೊ ಅನಿಸಲಾರಂಭಿಸಿದ್ದು ಕಳೆದ ಎರಡು ಮೂರು ದಿನಗಳ ಬೆಳವಣಿಗೆಯಿಂದ. ಕೆಲವು ಅವಿವೇಕಿಗಳ ವಿಚಾರ ಹೀನತೆಯಿಂದ, ಭೌದ್ದಿಕ ಶಕ್ತಿಯ ಕೊರತೆಯಿಂದ ರಾಜ್ಯದಲ್ಲಿ ಅನಗತ್ಯವಾಗಿ ಗಲಭೆ, ಗುಂಪು ಘರ್ಷಣೆ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಯಂತಹ ಕೃತ್ಯಗಳು ಯಾವ ಎಗ್ಗುತಗ್ಗು ಇಲ್ಲದೇ ನಡೆಯುತ್ತಿವೆ.ಬಂದ್, ಗಲಭೆ ಮೂಲಕ ಶಾಂತಿ ಕದಡುವ ಮತ್ತು ಜನರ ನೆಮ್ಮದಿ ಕೆಡಿಸುವ ಖೂಳರ ಅಂಡಿನ ಮೇಲೆರೆಡು ಬಿಗಿದು ಮಟ್ಟಹಾಕುವ ಬದಲು ಮುಖ್ಯಮಂತ್ರಿ ಯಡಿಯೂರಪ್ಪ ಇದೆಲ್ಲಾ ವಿರೋಧ ಪಕ್ಷದವರ ಪ್ರೀ ಪ್ಲಾನು, ಪ್ರೇಮಿಗಳಿಗೆ ರಕ್ಷಣೆ ಕೊಡ್ತೀವಿ ಅನ್ನೋ ಮಾತಾಡಿದ್ದಾರೆ.ಇದನ್ನೆಲ್ಲಾ ಕೇಳಿಸಿಕೊಳ್ಳಬೇಕಾದ ದುರ್ಗತಿ ನಮ್ಮ ಜನರಿಗೆ, ಇಂಥಹದ್ದೆಲ್ಲ ಬೇಕಿತ್ತೇನ್ರಿ?
ಯಾವುದ್ರೀ ಅದು ವ್ಯಾಲೆಂಟೈನ್ಸ್ ಡೇ?? ಬಲವಂತವಾಗಿ ಅದನ್ನೇನು ಸಮಾಜದ ಮೇಲೆ ಹೇರಿದ್ದಾರ? ಈ ಮೂರ್ಖರಿಗೇನಾಗಿದೆ? ಹಿಂದೂ ಧರ್ಮದ ಹೆಸರಿನಲ್ಲಿ ಇಲ್ಲದ ರಾಡಿ ಎಬ್ಬಿಸಲು ಇವರಿಗೇನು ಹಕ್ಕಿದೆ? ಯಾವ ಪುರುಷಾರ್ಥಕ್ಕೆ ಈ ಕ್ಷುಲ್ಲುಕ ವಿಚಾರಕ್ಕೆ ಬಡಿದಾಡಬೇಕು? ಎಂಬೆಲ್ಲಾ ಪ್ರಶ್ನೆಗಳು ನಿಮ್ಮಲ್ಲೂ ಬಂದಿರಲಿಕ್ಕೆ ಸಾಕು. ಹೌದು ಯಾಕೆ ಈ ವಿಚಾರ ಇಷ್ಟೊಂದು ಮಹತ್ವ ಪಡೆಯಬೇಕು ? ಇದನ್ನು ಚರ್ಚಿಸುವ ಮುನ್ನ ಈ ವ್ಯಾಲೆಂಟೈನ್ ಡೇ ಬಗ್ಗೆ ಸಂಕ್ಷಿಪ್ತವಾಗಿ ಒಂದಷ್ಟು ವಿಚಾರ ತಿಳಿಯೋಣ.
ವ್ಯಾಲೆಂಟೈನ್ ಡೇ ಅರ್ಥಾತ್ 'ಪ್ರೇಮಿಗಳ ದಿನ'ಕ್ಕೆ ಒಬ್ಬೊಬ್ಬರು ಒಂದೊಂದು ಕಥೆ ಹೇಳುತ್ತಾರೆ, ವ್ಯಾಲೆಂಟೈನ್ ಒಬ್ಬ ಸಂತ ಆತನ ಪ್ರೇಮ ವಿಚಾರ ಬಹಿರಂಗವಾದಾಗ ಆತನನ್ನು ಗಲ್ಲಿಗೆ ಹಾಕಲಾಯಿತು ಎಂಬ ಕಥೆ ಸಾಧಾರಣವಾದುದು. ಆದರೆ ಇಂಥ ನೂರಾರು ಕಥೆಗಳು ವ್ಯಾಲೆಂಟೈನ್ ಡೇ ಹಿನ್ನಲೆಯಲ್ಲಿ ಕಾಣ ಸಿಗುತ್ತವೆ. ಕ್ರಿಸ್ತ ಪೂ.496ರಲ್ಲಿ ಇಂತಹದ್ದೊಂದು ಆಚರಣೆ ಚಲಾವಣೆಯಲ್ಲಿದ್ದ ಬಗ್ಗೆ ಮಾಹಿತಿ ಇದೆ. ಬೇರೆ ಬೇರೆ ದೇಶಗಳಲ್ಲಿ ಬೇರೆಯದೇ ರೀತಿಯ ಆಚರಣೆಗಳು ಮತ್ತು ಅರ್ಥಗಳು ಸಿಗುತ್ತವೆ, ಹಾಗಾಗಿ ನಿಖರವಾಗಿ ಇಂತಹದ್ದೇ ಕಥೆಯ ಹಿನ್ನೆಲೆಯಿದೆ ಎಂದು ಹೇಳಲಾಗದು. 15ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಅಲ್ಲಲ್ಲಿ ಇಂತಹ ಆಚರಣೆಗಳು ಕಂಡು ಬಂದರೂ, ಇದು ಒಂದು ಫ್ಯಾಶನ್ ಆಗಿ ಪರಿಚಯವಾಗಿದ್ದು 19ನೇ ಶತಮಾನದಲ್ಲೇ. ಬ್ರಿಟೀಶರು ತಮ್ಮ ವ್ಯಾಪಾರ ವಸಾಹತುಗಳನ್ನು ಜಗತ್ತಿನ ವಿವಿದೆಡೆ ತೆಗೆದುಕೊಂಡು ಹೋದಾಗಲೇ ಈ ವ್ಯಾಲೆಂಟೈನ್ ಎಲ್ಲೆಡೆಯೂ ಹಬ್ಬಿದೆ. ಅಷ್ಟಕ್ಕೂ ಇದು ಕ್ರಿಸ್ಚಿಯನ್ ಕಲ್ಚರ್ ಆಗಿರುವುದರಿಂದ ಜಾಗತಿಕವಾಗಿ ಪಸರಿಸಿದೆ ಎನ್ನಲಡ್ಡಿಯಿಲ್ಲ. ವಯಸ್ಸಿಗೆ ಬಂದ ಹುಡುಗ-ಹುಡುಗಿ,ಮದುವೆಯಾದ ನವ ವಧು-ವರರು,ಗಂಡ-ಹೆಂಡತಿ ಹೀಗೆ ಭಾವನೆಗಳು ಗಾಡವಾಗಿ ಹರಿದಾಡುವ ಸಂಬಂಧಗಳಲ್ಲಿ ಪರಸ್ಪರರಿಗೆ ಪ್ರೀತಿ ವ್ಯಕ್ತಪಡಿಸುವ, ಮೌನವಾಗಿ ನಿವೇದಿಸುವ ಅವಕಾಶವೇ ಈ ವ್ಯಾಲೆಂಟೈನ್ ಡೇ. ಇಲ್ಲಿ ಪರಸ್ಪರರ ನಡುವೆ ಗ್ರೀಟಿಂಗ್ ಕಾರ್ಡು ವಿನಿಮಯ, ಗುಲಾಬಿ ವಿನಿಮಯ, ಗಿಪ್ಟ್ ವಿನಿಮಯ, ಚಾಕೋಲೇಟ್ ವಿನಿಮಯ ಮಿತಿಮೀರಿದರೆ ಮುತ್ತಿನ ವಿನಿಮಯ.... ಹೀಗೆ ಅವರವರ ಭಾವಕ್ಕೆ ತಕ್ಕಂತೆ ಏನೇನೋ ಇವೆ. ಒಂದು ಹೊಸ ವರ್ಷಕ್ಕೆ ಹೇಗೆ ಜಾಗತಿಕ ದಿನ ಇದೆಯೋ ಅದೇ ರೀತಿ ಪ್ರೇಮಿಗಳ ದಿನವೂ ಕೂಡ. ಇಡೀ ಜಗತ್ತಿಗೆ ಫೆಬ್ರುವರಿ 14 ವ್ಯಾಲೆಂಟೈನ್ ದಿನವಾದರೆ ಬ್ರೆಜಿಲ್ ದೇಶದಲ್ಲಿ ಮಾತ್ರ ಜೂನ್ 12ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ.ಯಾವುದಾದರೂ ಒಂದು ದಿನ ಅಂತ ಇರುವುದಾದರೂ ಯಾತಕ್ಕೆ ಹೇಳಿ ? ಒಂದು ಮರೆಯಲಾಗದ ಕ್ಷಣದ ನೆನಪು, ಭಾವದ ನೆನಪಿಗೆ ಅಲ್ಲವೇ? ಅದನ್ನು ಬೇಕು ಎಂದರೆ ಆಚರಿಸಿಕೊಳ್ಳಲಿ ಬೇಡವೆಂದರೆ ಬಿಡಲಿ. ಆದರೆ ಈಗ ಆಗುತ್ತಿರುವುದೇನು? ಪ್ರೇಮಿಗಳ ದಿನದ ನೆಪ ಮಾಡಿಕೊಂಡು ಹುಡುಗ-ಹುಡುಗಿ ಸ್ವೇಚ್ಚಾಚಾರದ ಲೈಂಗಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಇದು ಭಾರತದಂತಹ ದೇಶದಲ್ಲಿ ಸಂಪ್ರದಾಯವಾದಿ ಮನೋಧರ್ಮಕ್ಕೆ ನೋವು ಉಂಟುಮಾಡಿದೆ.ಪ್ರೀತಿಯ ಹೆಸರಿನಲ್ಲಿ ನಡೆಯುವ ಇಂತಹ ಚಟುವಟಿಕೆಗಳನ್ನು ತಡೆಯಲು ಪೋಷಕರು ಜವಾಬ್ದಾರಿ ಹೊರಬೇಕೆ ವಿನಹ ಪ್ರೇಮಿಗಳ ದಿನ ವಿರೋಧಿಸುವುದರಲ್ಲಿ ಅರ್ಥವಿಲ್ಲ. ಇಡೀ ಜಗತ್ತೇ ಪ್ರೀತಿ-ಪ್ರೇಮದ ಮೇಲೆ ನಿಂತಿದೆ ಹಾಗೆಂದ ಮಾತ್ರಕ್ಕೆ ಅದು ಸ್ವಾರ್ಥದ ಆಕರ್ಷಣೆಯಾಗಬಾರದು, ಹಾಗಾದಾಗ ಮಾತ್ರ ಸಮಾಜದಲ್ಲಿ ಕ್ಷೋಭೆ ಖಚಿತ. ಸೌದಿ ಅರೆಬಿಯಾದಲ್ಲಿ , ಪಾಕಿಸ್ತಾನದಲ್ಲಿ ಹಾಗೂ ಇತರೆ ಮುಸ್ಲಿಂ ರಾಷ್ಟ್ರಗಳಲ್ಲಿ ಪ್ರೇಮಿಗಳ ದಿನ ಆಚರಣೆಗೆ ಕಟ್ಟುನಿಟ್ಟಿನ ನಿಷೇಧವಿದೆ. ಧಾರ್ಮಿಕ ಮತಾಂಧತೆ ಮಿತಿಮೀರಿರುವ ಅಲ್ಲಿ ಇದು ಸಾಮಾನ್ಯವಾದರೂ ನಮ್ಮಲ್ಲಿ ಯಾಕೆ ಇದನ್ನು ವಿರೋಧಿಸಬೇಕೋ ಅರ್ಥವಾಗುತ್ತಿಲ್ಲ. ನೋಡಿ ಈ ದಶಕದ ಆರಂಭದಲ್ಲಿ 2001ರಲ್ಲಿ ಮೊದಲ ಭಾರಿಗೆ ಭಾಳ ಠಾಕ್ರೆಯ ಶಿವಸೇನಾ ವ್ಯಾಲೆಂಟೈನ್ ದಿನವನ್ನು ವಿರೋಧಿಸುವ ಹೇಳಿಕೆ ನೀಡಿತು,ಅದನ್ನು ಬೆಂಬಲಿಸಿದವರು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ನವರು.ಅಲ್ಲಿಯವರೆಗೂ ವ್ಯಾಲೆಂಟೈನ್ ಡೇ ತೀವ್ರತೆ ಪಡೆದುಕೊಡಿರಲಿಲ್ಲ, ಯಾವಾಗ ವಿರೋಧಗಳು ಬಂದವೊ ಆಗ ಬಹುತೇಕ ಮಂದಿಗೆ ಅಂತಹದ್ದೊಂದು ದಿನವಿದೆ ಎಂದು ಗೊತ್ತಾಗುತ್ತಿದ್ದಂತೆ ಆಚರಣೆಗೆ ತೀವ್ರತೆ ದಕ್ಕಿತು. ಕಳೆದ ವರ್ಷ ಪ್ರಮೋದ್ ಮುತಾಲಿಕ್ ಪ್ರೇಮಿಗಳ ದಿನದಂದು ಸಿಕ್ಕಿ ಬೀಳುವ ಜೋಡಿಗಳಿಗೆ ಮದುವೆ ಮಾಡಿಸುವ ಬೆದರಿಕೆ ಒಡ್ಡುತ್ತಿದ್ದಂತೆ ಅದರ ಕಾವು ಇನ್ನಷ್ಟು ಹೆಚ್ಚಿತು. ಆತನಿಗೆ ಪಿಂಕ್ ಚಡ್ಡಿಗಳ ಮಹಾಪೂರವೇ ಹರಿದು ಬಂತು, ಪ್ರೇಮಿಗಳ ದಿನದ ಮುನ್ನಾದಿನ ಆತನನ್ನು ಬಂಧಿಸಲಾಗಿತ್ತು.ಈ ವರ್ಷವೂ ಪ್ರೇಮಿಗಳ ದಿನ ಹತ್ತಿರವಾಗುತ್ತಿದ್ದಂತೆ ಟಿವಿ ಚಾನಲ್ ಗಳು ಪೈಪೋಟಿಯ ಮೇಲೆ ಈ ಸುದ್ದಿಗೆ ಮಹತ್ವ ನೀಡಿದುವಲ್ಲದೇ ಗಂಭೀರತೆ ಪಡೆಯುತ್ತಿರುವ ವಿಷಯವೊಂದರ ಬಗ್ಗೆ ಸಾರ್ವಜನಿಕವಾಗಿ ಸಂವಾದದ ಹೆಸರಿನಲ್ಲಿ ಸುವರ್ಣ ಛಾನಲ್ ಶೋ ನಡೆಸಿತು. ಬಹುಶ ವಿಷಯದ ತೀವ್ರತೆಯ ಅರಿವಿದ್ದಿದ್ದರೆ ಮತ್ತು ಅದನ್ನು ನಿರ್ವಹಿಸುತ್ತಿದ್ದ ನಿರೂಪಕ ರಂಗನಾಥ ಭಾರದ್ವಾಜ್ ಗೆ ಸ್ವಲ್ಪ ಮಟ್ಟಿನ ತಿಳುವಳಿಕೆ ಇದ್ದಿದ್ದರೆ ಇವೆಲ್ಲ ರಗಳೆಗೆ ಆಸ್ಪದವಿರುತ್ತಿರಲಿಲ್ಲವೇನೋ. ಅಲ್ಲಿ ವೇದಿಕೆಯ ಮೇಲೆ ಗಂಭೀರ ಚರ್ಚೆಯಾಗುತ್ತಿದ್ದರೆ ಕೆಳಗಿಳಿದು ಬಂದ ಆತ ವೇದಿಕೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ನಾಲ್ಕು ಮಂದಿಯ ಬೆಂಬಲಿಗರ ಪ್ರತಿಕ್ರಿಯೆ ಕೇಳಲಾರಂಬಿಸಿದ್ದು ಕೆಲವರ ಅಸಹನೆಗೆ ಕಾರಣವಾಗಿತ್ತು, ಇದೇ ಸಂಧರ್ಭವನ್ನು ಬಳಸಿಕೊಂಡ ಕೆಲವು ಕಿಡಿಗೇಡಿಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಮುತಾಲಿಕ್ ರನ್ನು ಕಡವಿಕೊಂಡು ಇಂಕ್ ಸುರಿದರು. ಇದು ಖಂಡನಾರ್ಹ ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಎಚ್ ಕೆ ಪಾಟೀಲರ ಪುತ್ಥಳಿಗೆ ಚಪ್ಪಲಿ ಹಾರ ಹಾಕೋದು, ಬಸ್ ಗಳಿಗೆ ಬೆಂಕಿ ಇಡೋದು, ಮನೆಗಳ ಮೇಲೆ ಕಲ್ಲು ತೂರುವುದು, ಕಛೇರಿಗಳಿಗೆ ಬೆಂಕಿ ಇಡುವುದು, ಕಂಡವರ ಮೇಲೆ ಹಲ್ಲೆ ನಡೆಸುವುದು ಯಾಕೆ? ನೋಡಿ ಪ್ರೇಮಿಗಳ ದಿನದಂದು ನಡೆಯುವ ಅನಾಚಾರ ವಿರೋಧಿಸುವುದಕ್ಕೆ ಸಮಸ್ತರ ವಿರೋಧವೂ ಇದೆ ಅದೇ ರೀತಿ ಮುತಾಲಿಕನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಯಾದುದಕ್ಕೂ ವಿಷಾದವಿದೆ.ಸಂಸ್ಕೃತಿ ರಕ್ಷಣೆ ಅಂದರೆ ಪ್ರೇಮಿಗಳ ದಿನ ವಿರೋಧಿಸುವುದಲ್ಲ, ಸಾಂಸ್ಕೃತಿಕ ಧಕ್ಕೆ ಆಗುವ ಸ್ವೇಚ್ಚಾಚಾರದ ಬಗೆ ಅರಿವು ಮೂಡಿಸುವು. ಆದರೆ ಮುತಾಲಿಕ್ ಹಿಂದೂ ಧರ್ಮದ ಗುತ್ತಿಗೆದಾರರಂತೆ ವರ್ತಿಸುತ್ತಾ ತನ್ನ ಒಡಲಲ್ಲೇ ಅಸಹ್ಯವನ್ನಿಟ್ಟುಕೊಂಡು ಶಾಂತಿ ಕದಡುವ ಕ್ರಿಯೆ ನಡೆಸಬೇಕೆ? ಇವತ್ತಿನ ಅಹಿತಕರ ಘಟನೆಗಳಿಗೆ ಕಾರಣರಾದ ಶ್ರೀರಾಮ ಸೇನೆ ಮತ್ತು ಕಾಂಗ್ರೆಸ್ ನವರೆಂದು ಹೇಳಿಕೊಂಡ ಜನರಿಗೆ ಬಡಿದಾಡಲು ಬೇರೆ ವಿಚಾರಗಳು ಸಿಗಲಿಲ್ಲವೇ? ನಮ್ಮ ಬದುಕನ್ನೇ ಕುಂಠಿತಗೊಳಿಸುವ ಬಿಟಿ ಬದನೆ ಕುರಿತು ಸಾರ್ವಜನಿಕವಾಗಿ ಒಂದು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿಲ್ಲ, ಪ್ರತಿಭಟನೆ ಹಮ್ಮಿಕೊಳ್ಳಲಿಲ್ಲ, ಎಸ್ ಇ ಜೆಡ್ ಗೆ ರೈತರ ಭೂಮಿ ಕಸಿಯುವ ಪ್ರಕ್ರಿಯೆಗೆ ಅಡ್ಡಿ ಪಡಿಸುವ ಪ್ರಯತ್ನ ವಾಗಲಿಲ್ಲ,ಅರಣ್ಯ ಮತ್ತು ಅಲ್ಲಿನ ಜೀವಜಾಲದ ನಾಶದ ಬಗೆಗಿನ ಹೋರಾಟ ತೀವ್ರಗೊಳ್ಳಲಿಲ್ಲ, ರೈತರ ಸಂಕಷ್ಟಗಳ ಬಗೆಗೆ ಆಂಧೋಲನ ನಡೆಯಲಿಲ್ಲ, ದೇಶದ ಬಡಜನರ ಸಂಕಷ್ಟಗಳ ಬಗ್ಗೆ ಚರ್ಚೆ ಯಾಗಲಿಲ್ಲ, ನಿರುದ್ಯೋಗದ ಬಗ್ಗೆ ಚರ್ಚಯಾಗಲಿಲ್ಲ, ದೇಶದಲ್ಲಿ ಇನ್ನೂ ಜಾಗೃತವಾಗಿರುವ ಸಾಮಾಜಿಕ ಪಿಡುಗುಗಳ ಬಗೆಗೆ ಹೋರಾಟ ನಡೆಯುತ್ತಿಲ್ಲ ಆದರೆ ಪ್ರೇಮಿಗಳ ದಿನದ ಬಗೆಗೆ ಕ್ಷುಲ್ಲುಕವಾಗಿ ಹೊಡೆದಾಡಿಕೊಂಡು ನೆಮ್ಮದಿ ಹಾಳುಮಾಡಲಾಗುತ್ತಿದೆ. ಈ ಮೂರ್ಖ ಮಂದಿಗೆ ಬುದ್ದಿ ಯಾವಾಗ ಬರುತ್ತೋ ? ಎಲ್ಲಿಯವರೆಗೂ ಫ್ಯಾಸಿಸ್ಟ್ ಧೋರಣೆ ಜಾರಿಯಲ್ಲಿರುತ್ತೋ ಅಲ್ಲಿಯವರೆಗೆ ಇಂತಹದ್ದೆಲ್ಲ ಇದ್ದೇ ಇರುತ್ತೆ ಅಂತಹ ಶಕ್ತಿಗಳನ್ನು ಮಟ್ಟಹಾಕುವ ಕೆಲಸವಾಗಬೇಕು , ಸಮಾಜವಾದದ ಹೊಸ ಅಲೆ ಬರಬೇಕು ಆಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಅಲ್ಲವೇ?