ಅದು ಫೆಬ್ರುವರಿ ಮಾಹೆ ೧೯೯೯ ಭಾರತದ ಪ್ರಧಾನಿ ಎ ಬಿ ವಾಜಪೇಯಿ, ಎರಡೂ ದೇಶಗಳ ಗಡಿಯಲ್ಲಿ ಅನಗತ್ಯವಾದ ಸೇನಾ ಜಮಾವಣೆ ಶೀತಲ ಸಮರಕ್ಕೆ ಕಾರಣವಾಗಿತ್ತು. ದೇಶದ ಗಡಿನಿಯಂತ್ರಣ ರೇಖೆಯಲ್ಲಿ ಜಮಾವಣೆಯಾಗುತ್ತಿದ್ದ ಮುಜಾಹಿದ್ದಿನ್ ಗಳ ನಿಯಂತ್ರಣ ಸಹಾ ಮಾತುಕತೆಯ ಒಂದು ಭಾಗವಾಗಿತ್ತು. ಹಲವು ದಶಕಗಳಿಂದ ಎರಡೂ ದೇಶಗಳ ನಡುವೆ ಸ್ಥಗಿತವಾಗಿದ್ದ ಸಾರಿಗೆ ಸಂಚಾರ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಚಾಲನೆಗೊಳಿಸಿದ್ದರು. ನಂತರ ಲಾಹೋರ್ ಗೆ ತೆರಳಿ ಶಾಂತಿ ಮಾತುಕತೆಯ ಲಾಹೋರ್ ಒಪ್ಪಂದಕ್ಕೆ ಸಹಿಯನ್ನು ಹಾಕಿದ್ದರು. ಎರಡೂ ದೇಶಗಳ ನಡುವಿನ ಭಿನ್ನಮತ ಸರಿದಾರಿಗೆ ಬರುತ್ತಿದೆ ಎಂದು ಭಾವಿಸುವ ಹೊತ್ತಿಗೆ ಬೆನ್ನಲ್ಲೇ ಚೂರಿ ಇರಿಯುವ ಕೆಲಸ ಮಾಡಿದ ಪಾಕೀಸ್ತಾನ, ಪಾಕ್ ಉಗ್ರರನ್ನು ಪಾಕ್ ಅಕ್ರಮಿತ ಕಾಶ್ಮೀರದ ಲೈನ್ ಆಫ್ ಕಂಟ್ರೋಲ್ ನ ವಲಯಕ್ಕೆ ಕಳುಹಿಸುವ ಹೇಯ ಮತ್ತು ಹೇಡಿತನದ ಕೃತ್ಯಕ್ಕೆ ಕೈಹಚ್ಚಿತ್ತು. ಸಾಕಷ್ಟು ಮದ್ದು, ಗುಂಡು, ಆಯುಧಗಳನ್ನು ಸರಬರಾಜು ಮಾಡಿದ ಪಾಕೀ(ಪೀ)ಸ್ತಾನ ಮುಜಾಹಿದ್ದಿನ್ ಗಳ ಬೆಂಬಲಕ್ಕೆ ಪಾಕೀ ಸೈನಿಕರನ್ನು ಮಫತ್ತಾಗಿ ಕಳುಹಿಸಿತ್ತು.!
ಮೇ-ಜೂನ್ ತಿಂಗಳಲ್ಲಿ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಆಸುಪಾಸಿನ ವಲಯದಲ್ಲಿ ಮೈಕೊರೆಯುವ ಹಿಮಪಾತ, ಚಳಿ ಇರುತ್ತದೆ. ಕಷ್ಠವೋ ಸುಖವೋ ದೇಶ ಕಾಯುವ ಗಡಿ ಭದ್ರತಾ ಪಡೆಯ ಯೋಧರು ಅಲ್ಲಿ ನಿರ್ಮಿಸಲಾಗಿರುವ ಬಂಕರ್ ಗಳಲ್ಲಿ ಪಾಳಿಯನುಸಾರ ಗಡಿ ಕಾವಲು ಕಾಯುತ್ತಾರೆ. ಚಳಿಯ ಅಗಾಧತೆ ಇರುವುದರಿಂದ ಸಹಜವಾಗಿಯೇ ಈ ಸಂಧರ್ಭದಲ್ಲಿ ಎರಡೂ ಕಡೆಯ ಸೈನಿಕರು ಸ್ವಲ್ಪ ಸಡಿಲವಾಗಿಯೇ ಇರುತ್ತಾರೆ. ಇಂತಹದ್ದೊಂದು ಪರಿಸ್ಥಿತಿಯ ಲಾಭ ಪಡೆದ ಪಾಕೀಗಳು ಕಾರ್ಗಿಲ್ ವಲಯಕ್ಕೆ ನಿಧಾನವಾಗಿ ಸೇರಿಕೊಂಡರು. ಮೇ ಮಾಹೆಯಲ್ಲಿ ವಾಯುಪಡೆಯ ಫ್ಲೈಟ್ ಲೆ.ನಚಿಕೇತ ಮತ್ತು ಸ್ಕ್ವಾ.ಲೀ.ಅಜಯ್ ಅಹುಜಾ ನಿಯಂತ್ರಣ ರೇಖೆಯ ಬಳಿ ಹಾರಾಟ ನಡೆಸಿದ್ದಾಗ ಮೊದಲ ಅಪಾಯದ ಸುಳಿವು ದೊರಕಿತ್ತು. ಗಡಿ ಭದ್ರತಾ ಪಡೆ ಮತ್ತು ಸೇನೆ ಎಚ್ಚೆತ್ತು ಕೊಳ್ಳುವ ವೇಳೆಗಾಗಲೇ ಮುಷ್ಕೋ ಕಣಿವೆ, ಡ್ರಾಸ್, ಕಾರ್ಗಿಲ್, ಇಂದೂಸ್ ನದಿಯ ಸನಿಹದ ಪೂರ್ವ ವಲಯ ಮತ್ತು ಸಿಯಾಚಿನ್ ಪ್ರದೇಶಗಳನ್ನು ಉಗ್ರರು ಮತ್ತು ಪಾಕೀಸೈನಿಕರು ಸುತ್ತುವರೆದಿದ್ದರು. ಆರಂಭದಲ್ಲಿ ಪ್ರತಿದಾಳಿ ನಡೆಸುವಾಗ ನಮ್ಮ ಸೈನಿಕರು ಸಾವು ನೋವಿಗೆ ಸಿಲುಕಿದರಾದರೂ ಹಂತ ಹಂತವಾಗಿ ಟೈಗರ್ ಹಿಲ್, ಡ್ರಾಸ್, ಹೀಗೆ ಎಲ್ಲ ಪ್ರದೇಶಗಳಿಂದಲೂ ಉಗ್ರರನ್ನು, ಪಾಕೀ ಸೈನಿಕರನ್ನು ಹೊಡೆದಟ್ಟಿದರು. ಹಲವು ಮಂದಿ ಪಾಕೀಗಳನ್ನು ಹೆಡೆಮುರಿ ಕಟ್ಟುವ ಕೆಲಸ ಮಾಡಿದರು ಜುಲೈ 26 1999ರಂದು ಸಂಪೂರ್ಣವಾಗಿ ಶತ್ರುಗಳನ್ನು ಹಿಮ್ಮೆಟ್ಟಿಸಿ ಕಾರ್ಗಿಲ್ ನಲ್ಲಿ ವಿಜಯ ಪತಾಕೆ ಹಾರಿಸಿದರು. ಹಾಸನ ಜಿಲ್ಲೆಯ ವೀರ ಯೋಧ ಯೆಂಗಟ ಸಹಾ ಕಾರ್ಗಿಲ್ ಮೊದಲ ದಾಳಿಯಲ್ಲಿ ವೀರ ಬಲಿದಾನ ಗೈದಿದ್ದಾರೆ.ಈ ಯುದ್ಧದಲ್ಲಿ ದೇಶದ 523ಮಂದಿ ಯೋಧರು, ಸೇನಾಧಿಕಾರಿಗಳು ವೀರ ಬಲಿದಾನ ಮಾಡಿದರು.ತದನಿಮಿತ್ತ ಈ ದಿನವನ್ನು ವಿಜಯ ದಿವಸವಾಗಿ ಆಚರಿಸಲಾಗುತ್ತಿದೆ.
ಇಂದಿಗೆ ಕಾರ್ಗಿಲ್ ಯುದ್ಧ ನಡೆದು 10ವರ್ಷಗಳು ಸಂದಿವೆ, ಕಾಲು ಕೆರೆದು ಆಗಾಗ ಕ್ಯಾತೆ ತೆಗೆಯುವ ಪಾಕಿಸ್ತಾನಕ್ಕೆ ನಮ್ಮ ದೇಶದ ಸೈನಿಕರು ಸಮರ್ಥವಾಗಿ ಉತ್ತರಿಸಿದ್ದಾರೆ. ಪಾಕೀಸ್ತಾನಕ್ಕೆ ಅಂದು ಅಮೇರಿಕಾದ ಪರೋಕ್ಷ ಬೆಂಬಲವಿದ್ದಾಗ್ಯೂ ಬಾರತಕ್ಕೆ ಅಂತರರಾಷ್ಟ್ರೀಯ ಸಮುದಾಯ ನೀಡುತ್ತಿರುವ ಬೆಂಬಲ ನಮ್ಮ ಸಾಮರ್ಥ್ಯಕ್ಕೆ ಸಾಮು ಹಿಡಿದಂತಾಗಿದೆ. ದೇಶದ ಆಂತರಿಕ ಕಲಹಗಳನ್ನು, ಅಭದ್ರತೆಯನ್ನು ನಿವಾರಿಸಿಕೊಳ್ಳುವ ಯೋಗ್ಯತೆಯಿಲ್ಲದ ಪಾಕ್ ಸರ್ಕಾರ ಪದೇ ಪದೇ ಇಂತಹ ಕೃತ್ಯಕ್ಕೆ ಕೈ ಹಾಕುತ್ತಲೇ ಇರುತ್ತದೆ. 1994 ಮುಂಬೈ ಸ್ಫೋಟ, ತಾಜ್ ಹೋಟೆಲ್ ದಾಳಿ ಯಂತಹ ಕೃತ್ಯಗಳನ್ನು ನಿರಾತಂಕವಾಗಿ ಮಾಡುತ್ತಿದೆ, ಪ್ರತೀ ಬಾರಿಯೂ ತನ್ನ ಪಾತ್ರವಿಲ್ಲ ಎಂದು ಹೇಳುತ್ತಿದೆ, ಆದರೆ ಪ್ರತೀ ಬಾರಿಯೂ ಪಾಕ್ ಕೃತ್ಯಕ್ಕೆ ಪುಟಗಟ್ಟಲೆ ಸಾಕ್ಷ್ಯಗಳು ಸಿಗುತ್ತಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮುಜುಗುರ ಅನುಭವಿಸುತ್ತಿದೆ. ಆದರೆ ನಮ್ಮ ದೇಶ ಎಲ್ಲ ರೀತಿಯಲ್ಲೂ ಪಾಕ್ ಗೆ ಪ್ರತ್ಯುತ್ತರ ಕೊಡಲು ಸಮರ್ಥವಾಗಿದೆ. ದೇಶ ಕಾಯುವ ಸೈನಿಕರು ಇಂಥಹದ್ದೊಂದು ನಿಲುವಿಗೆ ಸಾಥ್ ನೀಡಿದ್ದಾರೆ. ಇದು ಕಾರ್ಗಿಲ್ ವೀರ ಬಲಿದಾನ ಮಾಡಿದ ಹುತಾತ್ಮರಿಗೆ ನಾವು ತೋರಿಸ ಬಹುದಾದ ಗೌರವ ಮತ್ತು ಸ್ಮರಣೆ.