ಚಿತ್ರ ಕೃಪೆ: rotikapdamakaan.wordpress.com
ಜನ ಕೇಳಿದ್ದನ್ನ ಕೊಡ್ತೀವಿ, ಅದಕ್ಕೆ ಆಕ್ಷೇಪಣೆ ಯಾಕೆ ಸಾರ್? ಎಂದು ಪ್ರಶ್ನಿಸುವ ಮಾಧ್ಯಮದ ಮಂದಿ ಜನ ಬಯಸುವುದನ್ನು ಕೊಡುವಲ್ಲಿ ಅಗತ್ಯವಾದುದನ್ನು ಆರೋಗ್ಯವಂತ ನೆಲೆಗಟ್ಟಿನಲ್ಲಿ ಕೊಟ್ಟರೆ ಅದಕ್ಕೆ ಆರ್ಥವಿರುತ್ತೆ. ಸಹಜವಾಗಿ ಶುಗರ್ ಪೇಷಂಟ್ ಸಿಹಿಯನ್ನೇ ಬಯಸುತ್ತಾನೆ, ಹಾಗಂತ ಸಿಹಿಯನ್ನೆ ಕೊಟ್ಟರೆ ಆತನ ಪರಿಸ್ಥಿತಿ ಏನಾಗಬೇಡ? ಸಿಹಿಗೆ ಪರ್ಯಾಯವಾಗಿ ರೋಗಿ ಬದುಕುವಂತಹ ಔಷಧವನ್ನೆ ಕೊಡುತ್ತಾರಲ್ಲವೇ ಎಂದು ನನಗೆ ಪ್ರಶ್ನೆ ಎಸೆದು ಮುಗುಳ್ನಕ್ಕಿದ್ದು ಪತ್ರಕರ್ತ ಮಿತ್ರ ಮಧುಸೂಧನ್ . ಹೌದು ಇಂತಹ ಕಾರಣಗಳಿಗಾಗಿ ಮಾಧ್ಯಮಗಳು ಇತ್ತೀಚೆಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೆ ಆಸ್ಪದ ಕೊಟ್ಟಿವೆ. ಜುಲೈ 1 ಪತ್ರಿಕಾ ದಿನಾಚರಣೆ, ಈ ಸಂಧರ್ಭದಲ್ಲಿ ಮಾಧ್ಯಮಗಳು ಮತ್ತು ಜನಸಾಮಾನ್ಯರು ಸ್ಪಂದ ನೆ ಮತ್ತು ಪ್ರತಿಸ್ಪಂದನೆ ಹೇಗಿರಬೇಕು, ಮಾಧ್ಯಮ ಲೋಕದಲ್ಲಿ ಏನಾಗುತ್ತಿದೆ, ಆಧ್ಯತೆಯ ವಿಚಾರಗಳೇನು, ಜನರ ಮನಸ್ಥಿತಿ ಮಾಧ್ಯಮಗಳ ಕುರಿತು ಹೇಗಿದೆ, ಅದು ಹೇಗೆ ಬದಲಾಗಬೇಕು, ಇತ್ಯಾದಿ ವಿಚಾರಗಳು ಈ ಸಂಧರ್ಬದಲ್ಲಿ ಅಗತ್ಯವಾಗಿ ಚರ್ಚೆಯಾಗಬೇಕಿದೆ.
ಮಾಧ್ಯಮ ಎಂದರೇನು?
ಇತ್ತೀಚೆಗಿನ ದಿನಗಳಲ್ಲಿ ಪದೇ ಪದೇ ಮಾಧ್ಯಮಗಳ ಕಾರ್ಯ ವೈಖರಿಯ ಬಗೆಗೆ ಸಾರ್ವಜನಿ ಕವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಅತಿರಂಜಿತಸುದ್ದಿ, ಮಸಾಲೆ ಸುದ್ದಿ, ಕ್ರೈಂ, ರಾಜಕೀಯ,ಹಣಕ್ಕಾಗಿ ಸುದ್ದಿ ಹೀಗೆ ಮಾಧ್ಯಮ ಲೋಕದ ವಿವಿಧ ಆಯಾಮಗಳನ್ನು ತಾಕುವ ವಿಚಾರಗಳು, ಅಲ್ಲಿ ವ್ಯಕ್ತವಾಗುತ್ತಿರುವ ಕ್ರೋಢಿಕೃತ ಅಭಿಪ್ರಾಯಗಳು ಮಾಧ್ಯಮಗಳ ಶುದ್ದೀಕರಣವನ್ನು ಬಯಸುತ್ತಿವೆ ಜೊತೆಗೆ ಮಾಧ್ಯಮಗಳನ್ನೆ ನಿರ್ದೇಶಿಸುವ ಕೆಟ್ಟ ಪ್ರವೃತ್ತಿ ಜಾರಿಯಲ್ಲಿದೆ. ಮಾಧ್ಯಮ ಎಂದರೆ ಪ್ರಖರವಾದ ಸಂವಹನ ಮಾಧ್ಯಮ, ಧ್ವನಿಯಿಲ್ಲದವರಿಗೆ, ಶೋಷಿತರಿಗೆ ನ್ಯಾಯವನ್ನು ಪ್ರತಿಪಾದಿಸಬಹುದಾದ ಪ್ರಭಾವಶಾಲಿ ಅವಕಾಶವೇ ಮಾಧ್ಯಮ. ಆಕಾಶ ವಾಣಿ ದೇಶದ ಹಸಿರು ಕ್ರಾಂತಿಗೆ ಮಹತ್ವದ ಕೊಡುಗೆಯನ್ನು ಕೊಟ್ಟಂತೆ ಮುದ್ರಣ ಮಾಧ್ಯಮಗಳು ಸಹಾ 70ರ ದಶಕಕ್ಕೂ ಮುಂಚೆ ದೇಶದಲ್ಲಾದ ಕಾಲಘಟ್ಟದ ಪ್ರಮುಖ ಬದಲಾವ ಣೆಗಳಿಗೆ ಸಾಥ್ ನೀಡಿವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದು ಇದೇ ಮುದ್ರಣ ಮಾಧ್ಯಮ. ಆದರೆ ಪರಿಸ್ಥಿತಿ ಬದಲಾದಂತೆ ಮತ್ತು ತಂತ್ರಜ್ಞಾನದಲ್ಲಿ ಆದ ಬದಲಾವಣೆಗಳು ಮಾಧ್ಯಮ ಲೋಕದಲ್ಲಿನ ಹೊಸ ಅಲೆಗಳಿಗೆ ಕಾರಣವಾದವು. ಈ ಹೊಸ ಅಲೆಯಲ್ಲಿ ಬಂದ ಮಾಧ್ಯಮದ ವಿವಿಧ ಆಯಾಮಗಳು ಸಮಾಜದ ಸ್ವಾಸ್ತ್ಯ ಕ್ಕೆ ಪೂರಕವಾದಂತಹ ಅಗತ್ಯತೆಗಳನ್ನು ಆಧ್ಯತೆಯಾಗಿ ನೀಡುವಲ್ಲಿ ಅನುಸರಿಸುತ್ತಿರುವ ಅಡ್ಡ ಹಾದಿಗಳು ಒಟ್ಟು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಕಾರಣವಾಗಿದೆ.
ಸಂಘರ್ಷಕ್ಕೆ ಕಾರಣವೇನು?
ಇಂತಹದ್ದೊಂದು ಬೆಳವಣಿಗೆ ಜನಸಾಮಾನ್ಯರು ಮತ್ತು ಮಾಧ್ಯಮಗಳ ನಡುವಣ ಸಂಘರ್ಷಕ್ಕೆ ನಾಂದಿ ಹಾಡಿದೆ. ಹಿಂದಿನ ದಶಕಗಳಲ್ಲಿ ಮಾಧ್ಯಮಗಳೆಡೆಗೆ ಜನರಿಗಿದ್ದ ಆದರ್ಶದ ಕಲ್ಪನೆಗಳು ಮತ್ತು ಗೌರವದ ಭಾವನೆಗಳು ಮರೆಯಾಗಿವೆ ಇದಕ್ಕೆ ಪ್ರಮುಖ ಕಾರಣ ಜಾಗತೀಕರಣದ ನಂತರ ಮಾಧ್ಯಮ ಲೋಕದಲ್ಲೂ ಆಗುತ್ತಿರುವ ವಾಣಿಜ್ಯೀಕರಣವೇ ಆಗಿದೆ. ಗಂಭೀರವಾದ ವಿಚಾರಗಳನ್ನು, ಸಂವೇದನಾತ್ಮಕ ವಿಚಾರಗಳನ್ನು, ಪ್ರಗತಿಪರವಾದ ವಿಚಾರಗಳನ್ನ ಜನರಿಗೆ ನೀಡುವ ಬದಲು ಮನರಂಜನೆಯನ್ನೇ ಪ್ರಧಾನವಾಗಿರಿಸಿದ ಸುದ್ದಿಗಳು ಮತ್ತು ಕಾರ್ಯಕ್ರಮಗಳು ಜನರ ಆಲೋಚನಾ ಕ್ರಮವನ್ನೆ ಹಾಳುಗೆಡವಿದೆ. ಪರಿಣಾಮ Infotainment ಎಂಬ Corporate culture ನಮಗೆ ಗೊತ್ತಿಲ್ಲದಂತೆ ನಮ್ಮ ಯೋಚನಾಕ್ರಮವನ್ನು ಆಳುತ್ತಿವೆ. ದೇಶದಲ್ಲಿ ಪ್ರಮುಖವಾಗಿ ರಾಜ್ಯದ ಪತ್ರಿಕೆಗಳಿಗೆ ಜನರ ಮನಸ್ಥಿತಿಯನ್ನು ಆರೋಗ್ಯಕರವಾದ ನಿಟ್ಟಿನಲ್ಲಿ ಕೊಂಡೊಯ್ಯುವ ಪ್ರಗತಿ ಪರ ಚಿಂತನೆಗಳಿಗೆ ಹಚ್ಚುವ, ಸಧಭಿರುಚಿಯನ್ನು ಮೂಡಿಸುವ ತಾಕತ್ತು ಇತ್ತು ಆದರೆ ಈ ದೃಶ್ಯ ವಾಹಿನಿಗಳು ಪ್ರಾರಂಭವಾದ್ದದ್ದೇ ಆಗಿದ್ದು ಜನಸಾಮಾನ್ಯರ ಆಲೋಚನೆಗಳೆಲ್ಲ ದಿಕ್ಕಾಪಾಲಾಗಿವೆ.ಜನ ಕೀಳುಅಭಿರುಚಿಯನ್ನು ನೋಡುತ್ತಾರೆಂದರೆ ಅಂತಹುದೇ ವಿಚಾರಗಳಿಗೆ ಹೆಚ್ಚು ಒತ್ತು ಕೊಟ್ಟು ಪದೇ ಪದೇ ಪ್ರಸಾರ ಮಾಡುವುದನ್ನು ದೃಶ್ಯ ವಾಹಿನಿಗಳಲ್ಲಿ ಕಂಡರೆ ಕಾರ್ಪೊರೇಟ್ ವಿಚಾರಗಳಿಗೆ ಮತ್ತು ಆಧ್ಯತೆಗಳಿಗೆ ಒತ್ತು ನೀಡಿ ಪೂರಕವಾಗಿ ಸುದ್ದಿ/ಲೇಖನ/ಚಿತ್ರಗಳನ್ನು ಪ್ರಕಟಿಸುವ ಮೂಲಕ ಪತ್ರಿಕೆಗಳು ಸಹಾ ನೈತಿಕ ಅಧ:ಪತನಕ್ಕೆ ತುತ್ತಾಗಿವೆ. ಪತ್ರಿಕಾ ಲೋಕಕ್ಕೆ ಬಂಡವಾಳಶಾಹಿಗಳು,ರೌಡಿಗಳು, ರಾಜಕಾರಣಿಗಳು, ವಂಚಕರು ಪ್ರವೇಶ ಪಡೆಯುತ್ತಿರುವುದು ಮತ್ತು ಅವರೇ ಪತ್ರಕರ್ತರನ್ನು ನಿಯಂತ್ರಿಸುತ್ತಿರುವುದರಿಂದ ಸಮಾಜದಲ್ಲಿ ಮಾಧ್ಯಮಗಳು ವ್ಯತಿರಿಕ್ತ ಪರಿಣಾಮ ಉಂಟಾಗಲು ಕಾರಣವಾಗಿದೆ.
ಸಂವಿಧಾನದ ನಾಲ್ಕನೇ ಅಂಗವೆಂದು ಪತ್ರಿಕಾ ರಂಗ ಎಂದು ಹೇಳಲಾಗುತ್ತದೆ ಆದರೆ ಅದನ್ನು ಸಂವಿದಾನದಲ್ಲಿ ನಮೂದಿಸಿಲ್ಲ ಅದೊಂದು ಸಾರ್ವಜನಿಕ ಕಲ್ಪನೆ. ಪ್ರಜಾಪ್ರಭುತ್ವದ ಕಾವಲು ನಾಯಿ ಎಂದು ಗುರುತಿಸಲ್ಪಡುವ ಪತ್ರಿಕಾರಂಗದ ಹೊಸ ಅಲೆಯಲ್ಲಿ ಪತ್ರಿಕೋಧ್ಯಮದ ಪಾಠ ಕಲಿತ ಮಂದಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರಾದರೂ ಅವರ ನೈತಿಕ ಬದ್ದತೆ ಕುಸಿಯುತ್ತಿದೆ. ಮಾಧ್ಯಮ ಪ್ರಪಂಚದ ಸಂವೇದನೆಗಳನ್ನ ಅರಿಯುವ ಮುನ್ನವೇ ಇಲ್ಲಿನ ಆಕರ್ಷಣೆಗಳು ಅವ ರ ಬದ್ದತೆ ಗೆ ಧಕ್ಕೆ ತರುತ್ತಿವೆ. ನೈತಿಕತೆ ಮರೆತಾಗ ನಂಬಿಕೊಂಡ ಧೋರಣೆಗಳಿಗೆ ಅಸ್ತಿತ್ವ ಇರುವುದಿಲ್ಲ, ಆಗ ಗ್ರಹಿಕೆಗಳೀಗೆ, ಸಂವೇದನಾತ್ಮಕ ಅಂಶಗಳಿಗೆ ಕಿಲುಬು ಕಾಸಿನ ಕಿಮ್ಮತ್ತು ಇರುವುದಿಲ್ಲ. ಒಂದು ಉದಾಹರಣೆ ಹೇಳುವುದಾದರೆ ಇವತ್ತು ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ 15ದಿನಕ್ಕೊಮ್ಮೆ ಪತ್ರಕರ್ತರಿಗಾಗಿ ನಡೆಸುವ ಔತಣಕೂಟಗಳಿಗೆ ಹೋಗಿ ಬರುವ ಪತ್ರಕರ್ತರಿಂದ ಪ್ರಾಮಾಣಿಕತನವನ್ನ ನಿರೀಕ್ಷಿಸಲು ಸಾಧ್ಯವಿಲ್ಲ, ಕಾರ್ಪೊರೇಟ್ ವಲಯಗಳಿಂದ ಪಡೆಯುವ ಉಡುಗೊರೆಗಳು ಪತ್ರಕರ್ತನ ಅಂತಸತ್ವವನ್ನು ನಾಶಮಾಡುತ್ತಿವೆ. ಪ್ರಭಾವ ಬಳಸಿ ಲಾಭ ಪಡೆಯುವ ಅನುಕೂಲಸಿಂಧು ಪತ್ರಕರ್ತರಿಂದ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ. ಹಾಗೆಯೇ ಸಾರ್ವಜನಿಕ ವಲಯದಲ್ಲೂ ಅಂತಸತ್ವ ದಪ್ರಭಾವ ಕ್ಷೀಣಿಸಿದ್ದು ಜನರಲ್ಲಿ ಜಾಗೃತ ಪ್ರಜ್ಞೆಯಿಲ್ಲ. ಸಮಸ್ಯೆ ಬಂದಾಗ ಮಾತ್ರ ಪತ್ರಕರ್ತರತ್ತ ಬೊಟ್ಟು ಮಾಡುವ ಜನ ತಾವೇನೂ ಮಾಡಬೇಕು ತಮ್ಮ ಆದ್ಯತೆಗಳೇನು ಎಂಬುದನ್ನು ಮರೆತು ಬಿಡುತ್ತಾರೆ. ಅಧಿಕಾರಶಾಹಿ ಸದಾ ಪ್ರಚಾರದ ಸಲುವಾಗಿ ಮಾಧ್ಯಮವನ್ನು ಬಳಸಿಕೊಳ್ಳಲು ನೋಡುತ್ತದೆಯಾದರೂ ಅಲ್ಲೊಂದು ಇಲ್ಲೊಂದು ಪ್ರಾಮಾಣಿಕವಾದ ಮತ್ತು ಪಾರದರ್ಶಕ ನಡವಳಿಕೆಯ ಪತ್ರಕರ್ತರಿಂದ ಸಮಾಜದಲ್ಲಿ ಇನ್ನು ಮಾಧ್ಯಮಗಳ ಮೇಲಿನ ವಿಶ್ವಾಸ ಕಡಿಮೆಯಾಗಿಲ್ಲ ಎಂಬುದೇ ಸಮಾಧಾನಕರ ಅಂಶ ಅಲ್ಲವೇ? ಪತ್ರಿಕೆಗಳ ಸಮಾಜ ಮುಖಿ ಕಾರ್ಯ ಮತ್ತು ಅದನ್ನು ಸ್ವೀಕರಿಸುವ ಜನರ ಮನಸ್ಥಿತಿಗಳು ಮಾತ್ರ ಸಮಾಜದ ಆರೋಗ್ಯ ಕಾಯಬಲ್ಲದು ಈ ದಿಸೆಯಲ್ಲಿ ಮಾಧ್ಯಮಗಳು ಅಗತ್ಯ ಬಿದ್ದಾಗ ವಿಚಾರವಂತರ ಸಲಹೆಗಳನ್ನು ಸ್ವೀಕರಿಸಿ ಮುನ್ನೆಡೆಯುವುದು ಒಳ್ಳೆಯದಲ್ಲವೇ?