ನಂಬಿಕೆಗಳು ಧರ್ಮವನ್ನ ಪ್ರತಿನಿಧಿಸುತ್ತವೆ, ಧರ್ಮ ಜನರ ಬದುಕನ್ನ ನಿರ್ದೇಶಿಸುತ್ತದೆ, ಜನ ಅದಕ್ಕೆ ತಕ್ಕಂತೆ ಬದುಕನ್ನು ಕಂಡು ಕೊಳ್ಳುತ್ತಾರೆ. ಭಾರತದ ಸಂವಿಧಾನ ಧಾರ್ಮಿಕ ನಂಬಿಕೆಗಳಿಗೆ ಮತ್ತು ಆಚರಣೆಗಳಿಗೆ ಆಯಾ ಧರ್ಮದ ನೆಲೆಗಟ್ಟಿನಲ್ಲಿ ಅವಕಾಶ ನೀಡಿದೆ. ಬಹುಶ: ಶ್ರೇಣೀಕೃತ ವ್ಯವಸ್ಥೆಯಲ್ಲಿಯೇ ಶತಮಾನಗಳಿಂದಲೂ ಸಾಗಿ ಬಂದ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೇಲೂ ಆ ನೆಲೆಗಟ್ಟನ್ನು ಮೀರುವ ಇಲ್ಲವೇ ಪರ್ಯಾಯವನ್ನು ಕಂಡು ಕೊಳ್ಳುವ ಅವಕಾಶ ಇರಲಿಕ್ಕಿಲ್ಲ. ಅಷ್ಟರ ಮಟ್ಟಿಗೆ ಜಾತೀಯ ಪದ್ದತಿ ತಲೆ ತಲಾಂತರದಿಂದಲೂ ಅನುಸರಿಸಿಕೊಂಡು ಬಂದಿದೆ ಅನಿಸುತ್ತೆ. ಹಾಗಾಗಿ ಒಂದು ಧಾರ್ಮಿಕ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಇಲ್ಲವೇ ಕೊಂಚ ಬದಲಾವಣೆ ಬೇಕು ಎನ್ನುವವರಿಗೆ ಸ್ಥಾಪಿತ ಹಿತಾಸಕ್ತಿಗಳ ದೊಡ್ಡ ಬೆದರಿಕೆಯನ್ನು ಎದುರಿಸ ಬೇಕಾಗುತ್ತದೆ. ಇವತ್ತು ಸಮಾಜವಾದಿ ಹಿನ್ನೆಲೆಯ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತರಲು ಹೊರಟಿರುವ ಮೌಡ್ಯಾಚರಣೆ ವಿರೋಧಿ ಕಾನೂನಿನ ಕರಡು ಅಂತಹುದೆ ತೊಡಕನ್ನು ಎದುರಿಸುತ್ತಿದೆ. ಅದು ವಾಸ್ತವ ನೆಲೆಗಟ್ಟಿನಲ್ಲಿ ಚರ್ಚೆಗಳು ನಡೆದಿದ್ದರೆ ಇಲ್ಲಿ ಇದನ್ನು ಪ್ರಸ್ತಾಪಿಸುವ ಅವಶ್ಯಕತೆಯೇ ಇರುತ್ತಿರಲಿಲ್ಲವೇನೋ. ರಾಜ್ಯ ಸರ್ಕಾರದ ಕೋರಿಕೆಯಂತೆ ರಾಷ್ಟ್ರೀಯ ಕಾನೂನು ವಿದ್ಯಾಲಯ ರಚಿಸಿರುವ ಈ ಕರಡು ಪ್ರತಿ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದ್ದಂತೆ ರಾಜ್ಯದಾದ್ಯಂತ ದೊಡ್ಡ ಹುಯಿಲೆದ್ದಿದೆ. ಕಾಂಗ್ರೆಸ್ ಸರ್ಕಾರ ಹಿಂದೂಗಳ ನಂಬಿಕೆಯನ್ನೇ ಪ್ರಶ್ನಿಸುತ್ತಿದೆ, ಇತರೆ ಧರ್ಮಗಳ ನಂಬಿಕೆಗಳನ್ನು ಪ್ರಶ್ನಿಸುತ್ತಿಲ್ಲ, ನಂಬಿಕೆ ಮತ್ತು ಆಚರಣೆ ಪ್ರಶ್ನಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಭಂಗ ತಂದಿದೆ. ಪೂಜೆ ಮಾಡುವುದು ತಪ್ಪೆ? ಹರಕೆ ತೀರಿಸುವುದು ತಪ್ಪೇ? ಸಿದ್ದರಾಮಯ್ಯ ಮು.ಮಂ. ಆದಾಗ ಕುರ್ಚಿಗೆ ಪೂಜೆ ಮಾಡಿದ್ದರು ಹೀಗಿದ್ದರೂ ಅದ್ಯಾವುದೋ ಸ್ವಘೋಷಿತ ಬುದ್ದಿಜೀವಿಗಳ ಮಾತು ಕೇಳಿಕೊಂಡು ಹಿಂದೂ ಧಾರ್ಮಿಕ ಭಾವನೆಗೆ ಮಸಿ ಬಳಿಯಲು ಹೊರಟಿದ್ದಾರೆ ಇತ್ಯಾದಿಯಾಗಿ ರಾಜ್ಯಾಧ್ಯಂತ ಚರ್ಚೆ ಯಾಗುತ್ತಿದೆ. ಅಷ್ಟಕ್ಕೂ ಮೌಡ್ಯಾಚರಣೆ ನಿಷೇಧ ವಿಧೇಯಕ ಏಕೆ ಬೇಕು? ಈ ಕಾಯ್ದೆ ಏನನ್ನು ಒಳಗೊಂಡಿದೆ? ಧಾರ್ಮಿಕ ಭಾವನೆಗಳಿಗೆ ನಂಬಿಕೆಗಳಿಗೆ ಇದು ಧಕ್ಕೆ ತರುತ್ತಿದೆಯೇ? ಕರಡು ರಚನೆಯ ಹಿಂದಿನ ಉದ್ದೇಶ ಏನು? ಇದರಲ್ಲಿ ಇದ್ದವರು ಯಾರು? ಕರಡನ್ನು ವಿರೋಧಿಸುವವರ ಹುನ್ನಾರಗಳೇನು? ಎಂಬ ಪ್ರಶ್ನೆಗಳಿಗೆ ನನ್ನ ಗ್ರಹಿಕೆ ನಿಲುಕಿದಂತೆ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ ಓದಿಕೊಳ್ಳಿ.
(ಮುಂದುವರೆಯುವುದು......?)
(ಮುಂದುವರೆಯುವುದು......?)