Sunday, December 27, 2009

'ಮುಸ್ಲಿಂ' ಮನೋಧರ್ಮ ಬದಲಾಗ ಬೇಕಲ್ಲವೇ?

ಜಾಗತಿಕವಾಗಿ ಮುಸ್ಲಿಂರ ಸ್ಥಿತಿ-ಗತಿ ಹೇಗಿದೆ ಎಂಬುದನ್ನು ತಿಳಿಯಲು ಇದೊಂದು ಕಾರ್ಟೂನು ಸಾಕು. ಯಾಕೆ ಹೀಗೆ? ಜಗತ್ತಿನ ಜನಸಂಖ್ಯೆಯ ಒಂದನೇ 5ಭಾಗದಷ್ಟಿರುವ ಮುಸ್ಲಿಂರು ಸಾಮಾಜಿಕವಾಗಿ, ರಾಜಕೀಯವಾಗಿ,ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವೇನು? ಅವರದೇ ಅಧಿಪಥ್ಯವಿರುವ ರಾಷ್ಟ್ರಗಳಲ್ಲಿ, ರಾಜ್ಯಗಳಲ್ಲಿಯೂ ಅವರ ಮನಸ್ಥಿತಿ, ಸ್ಥಾನಮಾನಗಳಲ್ಲಿ ಕೊಂಚವೂ ಬದಲಾವಣೆ ಬಂದಿಲ್ಲವೆಂಬುದು ದುರಂತದ ಸಂಗತಿ. ಮುಸ್ಲಿಂ ಎಂದರೆ 'ಅಪಾಯದ ಗಂಟೆ' ಎಂದು ಭಾವಿಸಲಾಗಿರುವುದರಿಂದ ಜಾಗೃತಾವಸ್ಥೆ ಜಗತ್ತಿನೆಲ್ಲಡೆಯೂ ಇದೆ. ಹೀಗೇಕಾಗುತ್ತಿದೆ? ಅವರು ಯಾಕೆ ಜಗತ್ತಿನ ಇತರೆ ಧರ್ಮೀಯರಿಗಿಂತ ಭಿನ್ನವಾಗಿ ಕಾಣಲಾರಂಭಿಸಿದ್ದಾರೆ ಎಂಬ ಪ್ರಶ್ನೆ ಸದಾ ಇದ್ದೇ ಇರುತ್ತೆ. ಅದಕ್ಕೆ ಪೂರಕವಾಗಿ ಇತರೆ ಧರ್ಮೀಯರು ಅವರವರ ಭಾವಕ್ಕನುಗುಣವಾಗಿ ಮುಸ್ಲಿಂರನ್ನು ಅರ್ಥೈಸಲಾರಂಬಿಸಿದ್ದಾರೆ, ಇಂತಹ ಬೆಳವಣಿಗೆ ಪರಿಸ್ಥಿತಿಯನ್ನು ಮತ್ತಷ್ಟು ಆತಂಕದೆಡೆಗೆ ಜಗತ್ತಿನಾಧ್ಯಂತ ಸೆಳೆಯುತ್ತಲೇ ಇದೆ, ಮತ್ತು ಅದರ ಪರಿಣಾಮಗಳು ಗೋಚರವಾಗುತ್ತಲೇ ಇವೆ. ಇದಕ್ಕೆ ಪರಿಹಾರವೇನು? ಎಂಬ ಪ್ರಶ್ನೆಗೆ ಆರೋಗ್ಯಕರ ಉತ್ತರ ಹುಡುಕುವ ಗೋಜಿಗೆ ಯಾರೂ ಹೋಗಿಲ್ಲ. ಆದ್ದರಿಂದ ಮೊಹರಂ ಕಡೆದಿನ ದ ಸಂಧರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ಈ ಚರ್ಚೆಯನ್ನು ತಂದಿದ್ದೇನೆ.
ಮುಸ್ಲಿಂ ಎಂದರೆ 'ದೇವರಿಗೆ ಅರ್ಪಿತವಾದವರು' ಎಂದು ಅರ್ಥೈಸಲಾಗಿದೆ. ಮುಸ್ಲಿಂ ಪದದ ಜೊತೆಯಲ್ಲೇ ಥಳುಕು ಹಾಕಿಕೊಂಡಿರುವುದು 'ಜಿಹಾದ್' ಪದ . ಜಿಹಾದ್ ಎಂದರೆ ಹೋರಾಟ. ಧರ್ಮರಕ್ಷಣೆಗೆ ಹೋರಾಟದಲ್ಲಿ ನಿರತನಾದವನು ಮುಜಾಹಿದ್ದೀನ್ ಎಂಬ ಅರ್ಥವಿದೆ. ಜಾಗತಿಕ ಜನಸಂಖ್ಯೆಯಲ್ಲಿ ಶೇ.೨೩ ರಷ್ಟು ಅಂದರೆ ೧.5ಬಿಲಿಯನ್ ಮುಸ್ಲಿಂರಿದ್ದಾರೆ, ಕ್ರೈಸ್ತರ ನಂತರದ ಸ್ಥಾನ ಮುಸ್ಲಿಂ ಜನಸಂಖ್ಯೆಗಿದೆ. ಸುಮಾರು 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮುಸ್ಲಿಂ ಪಾರುಪತ್ಯವಿದೆ, ಇಂಡೋನೇಷಿಯಾದಲ್ಲಿ ಪ್ರಪಂಚದೆಲ್ಲೆಡೆಗಿಂತ ಹೆಚ್ಚು ಮುಸಲ್ಮಾನರಿದ್ದಾರೆ, ಏಷ್ಯಾ ಖಂಡದಲ್ಲೇ ಶೇ.೬೩ ರಷ್ಟು ಮುಸ್ಲಿಂ ರಿದ್ದು 50ಕ್ಕೂ ಹೆಚ್ಚು ವಿಧದ ಭಾಷೆ ಬಳಸುತ್ತಾರೆ. ಹಿಂದೂಗಳಲ್ಲಿರುವಂತೆ ಇಲ್ಲಿಯೂ 2000ಕ್ಕೂ ಹೆಚ್ಚು ಪ್ರಮುಖ ಜಾತಿ, ಉಪಜಾತಿ ಧಾರ್ಮಿಕ ಪದ್ದತಿಗಳಿವೆ. 7ನೇ ಶತಮಾನದ ಸುಮಾರಿಗೆ ಅರೇಬಿಯಾದಿಂದ ವ್ಯಾಪಾರದ ಸಲುವಾಗಿ ಬಂದು ಬೀಡುಬಿಟ್ಟ ಮುಸಲ್ಮಾನರು ಮೊದಲ ಪ್ರಾರ್ಥನಾ ಮಂದಿರ ಕಟ್ಟಿದ್ದು ಕೇರಳದ ಕೂಡುಂಗಲೂರು ಎಂಬ ಸ್ಥಳದಲ್ಲಿ. ಸಧ್ಯ ಭಾರತದ ಒಟ್ಟು ಜನಸಂಖ್ಯೆಯಲ್ಲಿ ೧/೬ ರಷ್ಟಿರುವ ಇವರು ಕಳೆದ ಜುಲೈ 2009ರ ಅಂಕಿ-ಅಂಶಗಳ ಪ್ರಕಾರ ೧೬೦.9ಮಿಲಿಯನ್ ಇದ್ದಾರೆ, ಇದೇ ಜನಸಂಖ್ಯೆ 2001ರಅಂತ್ಯಕ್ಕೆ 138ಮಿಲಿಯನ್ ಇತ್ತು. ಈ ಕಾರಣಗಳಿಂದಾಗಿ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ್ದು 3ನೇ ಸ್ಥಾನ. ಮೊದಲ ಹಾಗು ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಇಂಡೋನೇಷಿಯಾ ಮತ್ತು ಪಾಕೀಸ್ಥಾನಗಳಿವೆ. ದೇಶದ 2ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಲಕ್ಷ್ಯದ್ವೀಪಗಳಲ್ಲಿ ಇವರ ಸಂಖ್ಯೆ ಹೆಚ್ಚಿದೆ, ಸಾಕ್ಷರತೆ ಪ್ರಮಾಣ ಶೇ.೭೫.೫ ರಷ್ಟಿದೆ.
ಇಂತಹ ಮುಸಲ್ಮಾನರು ಪ್ರಸಕ್ತ ಸಂಧರ್ಭದಲ್ಲಿ ಹೇಗೆ ಗುರುತಿಸಲ್ಪಡುತ್ತಿದ್ದಾರೆ, ಗೊತ್ತಾ? ಉಗ್ರಗಾಮಿ, ಭಯೋತ್ಪಾದಕ, ಮುಜಾಹಿದ್ದೀನ್ ಎಂದೇ ಗುರುತಿಸಲಾಗುತ್ತಿದೆ. ಅಖಂಡ ಭಾರತದ ಭಾಗವಾಗಿರುವ ಭಾರತೀಯ ಮುಸಲ್ಮಾನರೂ ಅದರಲ್ಲೂ ಜನಪ್ರಿಯತೆ ಪಡೆದ ವ್ಯಕ್ತಿಗಳನ್ನೆ ಮುಸ್ಲಿಂ ಎಂಬ ಕಾರಣಕ್ಕಾಗಿ ಅನುಮಾನದಿಂದ ನೋಡಲಾಗುತ್ತಿದೆ. ಬಾಲಿವುಡ್ ಬಾದಷಹ ಶಾರೂಖ್ ಖಾನ್ ನನ್ನು ಅಮೇರಿಕಾದಲ್ಲಿ ತೀವ್ರ ತಪಾಸಣೆಗೆ ಒಳಪಡಿಸಿದರೆ, ತನ್ನ ಚಿತ್ರವೊಂದರ ಪ್ರಚಾರದ ಸಲುವಾಗಿ ವೇಷ ಮರೆಸಿಕೊಂಡು ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಎಂಬ ಕಾರಣಕ್ಕಾಗಿ ನಟ ಅಮೀರ್ ಖಾನ್ ನ ಮೇಲೆ ದೂರು ದಾಖಲಿಸಲಾಗುತ್ತದೆ. ದೇಶದ ಗುಪ್ತಚರ ಸಂಸ್ಥೆ 'ರಾ' ನಲ್ಲಿ ಮುಸ್ಲಿಂರೇ ಇಲ್ಲ!, ಒಟ್ಟಾರೆ ಸರ್ಕಾರಿ ನೌಕರರು ಕೇವಲ ಶೇ.೬.೪ ಮಾತ್ರ. ಮುಸಲ್ಮಾನರ ಸ್ಥಿತಿಗತಿ ಕುರಿತ ಕೇಂದ್ರಕ್ಕೆ ವರದಿ ನೀಡಿರುವ ರಾಜೀಂದರ್ ಸಾಚಾರ್ ವರದಿಯನುಸಾರ ಮುಸ್ಲಿಂರು ತಮ್ಮ ಜನಸಂಖ್ಯೆ ಪ್ರಮಾಣವನ್ನು ಮೀರಿ 'ಪ್ರಾತಿನಿದ್ಯ' ಪಡೆದ ಜಾಗವೆಂದರೆ ಅದು ಜೈಲುಗಳು! 8ರಾಜ್ಯಗಳಲ್ಲಿ ಸರಾಸರಿ ಶೇ.೧೪.೮೨ ರಷ್ಟಿರುವ ಮುಸ್ಲಿಂರಲ್ಲಿ ಶೇ.೨೩.4ರಷ್ಟು ಜನ ಜೈಲುಬಂಧಿಗಳು!
ಈಗ ವಿಚಾರಕ್ಕೆ ಬರೋಣ ದೇಶದ ಮುಸಲ್ಮಾನರ ಪರಿಸ್ಥಿತಿ ಯಾಕೆ ಹೀಗೆ? ಇವರಲ್ಲಿ ಪೂರ್ಣ ಪ್ರಮಾಣದ ಶಿಕ್ಷಣ ಪಡೆಯುವವರು ವಿರಳ, ಕಲಿತವರು ಕೊಲ್ಲಿ ರಾಷ್ಟ್ರಗಳ ಕಡೆ ಮುಖ ಮಾಡುತ್ತಾರೆ. ಅತಿಯಾದ ಧಾರ್ಮಿಕ ಆಚಾರಗಳನ್ನು ಪಾಲಿಸುತ್ತಾರೆ. ಧರ್ಮದ ಬಗೆಗಿನ ಕುರುಡು ಪ್ರೀತಿ ವ್ಯವಸ್ಥೆಯಿಂದ ಇವರನ್ನು ವಿಮುಖರನ್ನಾಗಿ ಮಾಡುತ್ತಿದೆ. ನಮ್ಮ ವ್ಯವಸ್ಥೆಯಲ್ಲಿ ಕೆಳ-ಮದ್ಯಮ-ಮೇಲ್ವರ್ಗ ಎಂದು ವಿಂಗಡಿಸಲು ಸಾಧ್ಯವಿದ್ದರೆ, ಮುಸಲ್ಮಾನರಲ್ಲಿ ಇದಕ್ಕೆ ತದ್ವಿರುದ್ದ ಬಹುತೇಕವಾಗಿ ಕೆಳ-ಮೇಲ್ವರ್ಗಗಳನ್ನಷ್ಟೇ ಕಾಣಲು ಸಾಧ್ಯ. ಶ್ರೀಮಂತ ಮುಸಲ್ಮಾನರಿಗೆ ಬಡ ಮುಸಲ್ಮಾನರ ಕಾಳಜಿ ಬೇಕಿಲ್ಲ, ರಾಜಕೀಯ ಅಧಿಕಾರ ಹಿಡಿದವನು ಅಧಿಕಾರ ದಕ್ಕಿಸಿಕೊಳ್ಳುವವರೆಗೆ ಮಾತ್ರ ಮುಸ್ಲಿಮರ ಹೆಸರು ಹೇಳುತ್ತಾನೆಯೇ ವಿನಹ ನಂತರ ಕಾಳಜಿ ಮರೆತು ಬಿಡುತ್ತಾನೆ. ಬದುಕಿಗೆ ನಿರ್ದಿಷ್ಟ ಹಾದಿ ಗೋಚರಿಸದಿದ್ದಾಗ ಬಹುತೇಕ ಮಂದಿ ದಗಾ-ವಂಚನೆಯನ್ನೆ ಮುಖ್ಯ ಕಸುಬಾಗಿಸಿ ಕೊಳ್ಳುತ್ತಾರೆ ಉಗ್ರವಾದದೆಡೆಗೆ ವಾಲುತ್ತಾರೆ ಹೊಟ್ಟೆ ಪಾಡಿಗಾಗಿ! ಅದರಲ್ಲೂ ಧಾರ್ಮಿಕ ಹೋರಾಟದ ಹೆಸರಿನಡೆ ನಡೆಯುವ ಕೃತ್ಯವಂತೂ ಘನಘೋರವಾದುದು. ಇವತ್ತು ದೇಶದ ಮುಸಲ್ಮಾನರಿಗೆ ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯಡಿ ರಕ್ಷಣೆ ನೀಡಲಾಗಿದೆ, ಅವರ ಅಭಿವೃದ್ದಿಗಾಗಿ ಹತ್ತು ಹಲವು ನಿಗಮ/ಮಂಡಳಿಗಳಿವೆ, ಉದ್ಯೋಗ ಮೀಸಲಾತಿ ನೀಡಲಾಗಿದೆ. ಆದರೆ ಯಾವುದು ಸದ್ಭಳಕೆಯಾದಂತಿಲ್ಲ. ಏಕೆಂದರೆ ಮುಸಲ್ಮಾನರ ಹೆಸರು ಹೇಳಿ ಬರುವ ಅದೇ ಜನಾಂಗದ ಮುಖಂಡರು ಸ್ವಾರ್ಥ ಹಿತಾಸಕ್ತಿಗಾಗಿ ಅಲ್ಲಿ ಪ್ರತಿಷ್ಠಾಪಿತರಾಗುತ್ತಿದ್ದಾರೆ. ವಕ್ಫ್ ಮಂಡಳಿಗಳು ಶ್ರೀಮಂತ ಮುಸಲ್ಮಾನರ ಆಶ್ರಯ ತಾಣಗಳಾಗಿವೆ. ವಿಧಾನ ಪರಿಷತ್-ರಾಜ್ಯಸಭೆಗೆ ಆಯ್ಕೆಯಾಗುವ ಮುಸ್ಲಿಂ ಮುಖಂಡರು ಮುಸ್ಲಿಮರ ಸ್ಥಿತಿಗತಿ ಕುರಿತು ಬಾಯಿ ಬಿಡಲು ತಯಾರಿಲ್ಲ. ಇನ್ನು ದೇಶದ ವಿವಿಧ ರಾಜಕೀಯ ಪಕ್ಷಗಳಿಂದ ನೇರವಾಗಿ ಸಂಸತ್/ವಿಧಾನ ಸಭೆಗಳಿಗೆ ಆಯ್ಕೆಯಾಗುವ ಮುಸ್ಲಿಂ ಮುಖಂಡರು ಕೂತು ಉಣ್ಣಲಷ್ಟೇ ಲಾಯಕ್ಕು! ಇವರಿಗೆ ಸಮಾಜದ ಹಿತಾಸಕ್ತಿ ಬೇಕಿಲ್ಲ ಎಂಬ ಆರೋಪ ದೇಶ ಸ್ವತಂತ್ರವಾದಂದಿನಿಂದಲೂ ಇದೆ. ಇನ್ನು ನಮ್ಮ ರಾಜಕೀಯ ಪಕ್ಷಗಳೋ ಮುಸಲ್ಮಾನರನ್ನು ಓಲೈಸಲು ನಿಲ್ಲುತ್ತವೆ, ದೇಶದ ಕಾನೂನು ಎಲ್ಲರಿಗೂ ಒಂದೇ ಆದರೂ ಇವರಿಗೆ ಕೆಲವು ವಿಚಾರಗಳಲ್ಲಿ ರಿಯಾಯ್ತಿ ಇದೆ. ಷರಿಯತ್ ಕಾನೂನು ಆಂತರಿಕವಾಗಿ ಜಾಗೃತವಾಗಿದೆ. ಮದರಸಗಳು ಧಾರ್ಮಿಕ ಚಟುವಟಿಕೆಯ ಕೇಂದ್ರಗಳಾಗಿವೆ. ಅವರಿಗಾಗಿಯೇ ಪ್ರತ್ಯೇಕ ಶಾಲೆ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ. ಇಂತಹ ಕ್ರಿಯೆಗಳಿಂದ ಸಂವಿಧಾನದ ಸೆಕ್ಯುಲರಿಸಂ ಪದಕ್ಕೆ ಸೂಕ್ತ ಅರ್ಥ ಸಿಗದಂತಾಗಿದೆ.
ಸೂಕ್ತ ಶಿಕ್ಷಣ ಸಿಗದ ಯಾವುದೇ ವ್ಯಕ್ತಿ ಅನಾರೋಗ್ಯಕರ ವಾತಾವರಣಕ್ಕೆ ಕಾರಣನಾಗುತ್ತಾನೆಂಬ ಮಾತಿದ್ದರು, ಬಾರತೀಯ ಮುಸಲ್ಮಾನರಲ್ಲಿ ಓದಿದವರೇ(ಎಲ್ಲರೂ ಅಲ್ಲ ಶೇ.೬ ರಷ್ಟು ಮಂದಿ ಮಾತ್ರ) ಹೆಚ್ಚಿನ ಸಂಖ್ಯೆಯಲ್ಲಿ ಉಗ್ರಗಾಮಿ ಧೋರಣೆ ತಾಳುತ್ತಿರುವುದು ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡುವಂತಿದೆ. ದೇಶದಲ್ಲಿ ನೆಲೆಸಿರುವ ಮುಸಲ್ಮಾನರೆಲ್ಲರೂ ಅರಬ್ಬಿ ಮೂಲದವರಲ್ಲ, ಇಲ್ಲಿನವರೇ ಆಗಿದ್ದರೂ ಸಹಾ ಭಾಹ್ಯ ಶಕ್ತಿಗಳ ಕುತಂತ್ರದಿಂದಾಗಿ ಅವರ ಮನಸ್ಸು ವಿಚಲಿತವಾಗುವಂತೆ ಮತ್ತು ದೇಶದಲ್ಲಿ ಅವರಿಗೆ ಅಭದ್ರತೆಯ ಭಯವನ್ನು ಉಂಟು ಮಾಡಿದೆ. ಇದಕ್ಕೆ ಪೂರ್ಣವಾಗಿ ಮುಸಲ್ಮಾನರೇ ಕಾರಣರಲ್ಲ ಮುಸ್ಲಿಂಮೇತರ ಸಂಘಟನೆಗಳ ಕೋಮುಭಾವನೆಯೂ ಕಾರಣವಾಗಿದೆ.
ದೇಶದ ಮುಸಲ್ಮಾನರಿಗೆ ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಪರಿಣಾಮಕಾರಿಯಾದ ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತರಬೇಕಾಗಿದೆ. ರಾಜಕೀಯವಾಗಿ ದಲಿತರಿಗೆ ನೀಡಿದಂತೆ ಮುಸ್ಲಿಂರಿಗೆ ಮೀಸಲಾತಿ ನೀಡಬೇಕಾಗಿದೆ. ಸಾಚಾರ್ ವರದಿಯನ್ವಯ ಅಲ್ಪಸಂಖ್ಯಾತರನ್ನು ಅದರಲ್ಲೂ ಮುಸ್ಲಿಂರನ್ನು ಪೂರ್ವಾಗ್ರಹದಿಂದ ನೋಡುವುದನ್ನು ಇನ್ನಾದರೂ ಬಿಡಬೇಕಾಗಿದೆ. ಹಾಗೆಯೇ ಶಿಕ್ಷಣ,ಆರೋಗ್ಯ, ನೌಕರಿ ಎಲ್ಲದರಲ್ಲೂ ಮುಸ್ಲಿಮರಿಗೆ ಪಾಲು ಸಿಗುವಂತೆ ನೋಡಿಕೊಳ್ಳಬೇಕು ಅದು ರಾಜಕೀಯ ಇಚ್ಚಾಶಕ್ತಿಯುಳ್ಳ ಸರ್ಕಾರದಿಂದ ಮಾತ್ರ ಸಾಧ್ಯ. ಅಂತೆಯೇ ಮುಸ್ಲಿಂ (ಕೆಲವು ಮಂದಿ) ರ ಮನಸ್ಥಿತಿ ಬದಲಾಗ ಬೇಕಿದೆ. ವ್ಯವಸ್ಥೆಯ ಆರೋಗ್ಯಕ್ಕೆ ಪೂರಕವಾಗುವಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿ, ಸಮಾಜದ ಒಟ್ಟು ಮುಖ್ಯವಾಹಿನಿಯಲ್ಲಿ ಬೆರೆಯುವಂತಾಗಲಿ, ಹೊಂದಾಣಿಕೆ ಮನೋಧರ್ಮ ಬೆಳೆಯಬೇಕು ಅದಕ್ಕೆ ಮುಸ್ಲಿಂಮೇತರ ಸಂಘಟನೆಗಳು ಕೈಜೋಡಿಸಬೇಕು. ಹಾಗಾದಲ್ಲಿ ಮಾತ್ರ ಸಮುಷ್ಠಿ ಭಾರತದ ಪ್ರಜ್ಞೆ ಮೂಡಿತಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...