Sunday, September 5, 2010

ಹೇಗಿದೆ ನಮ್ಮ ಆಧುನಿಕ ಗುರು ಪರಂಪರೆ?


"ಟೀಚರ್ ಗಳು ಸರಿ ಇಲ್ಲ ! ಮೊದಲು ನೀವು ಸರಿಯಾಗಿ. ಇವತ್ತು ಸಮಾಜದಲ್ಲಿ ಭ್ರಷ್ಟಾಚಾರ ಇದೆ,ವ್ಯವಸ್ಥೆ ಹಾಳಾಗಿದೆ, ಭ್ರಷ್ಟ ಅಧಿಕಾರಿಗಳು/ರಾಜಕಾರಣಿಗಳು ಇದ್ದಾರೆಂದರೆ ಅದಕ್ಕೆ ನೀವೆ ನೇರ ಹೊಣೆ, ಫೀಸು ಕಟ್ಟಿ ಶಾಲೆಗೆ ಬರುವ ಮುಗ್ದ ಬಾಲಕ ಶಾಲೆ ಬಿಡುವ ವೇಳೆಗೆ ಕೆಟ್ಟು ಹೋಗುತ್ತಾನೆ ಎಂದರೆ ಸಮಸ್ಯೆಯ ತೀವ್ರತೆ ಗೊತ್ತಾಗುತ್ತದಲ್ವಾ? ಬರೀ ಪಾಠ ಪ್ರವಚನ ಮಾಡೋದ್ರಿಂದ ಪ್ರಯೋಜನವಿಲ್ಲ ಬದುಕುವುದನ್ನು ಕಲಿಸಿ, ನೈತಿಕ ಶಿಕ್ಷಣ ನೀಡಿ, ದಕ್ಷತೆಯಿಂದ ಕೆಲಸ ಮಾಡಿ, ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಿ ತಿದ್ದಿಕೊಳ್ಳಲು ಆಗದಿದ್ದರೆ ಕೆಲಸ ಬಿಟ್ಟು ಹೋಗಿ" ಎಂದು ಖಡಕ್ಕಾಗಿ ನೇರಾ ನೇರಾ ಮಾತುಗಳಲ್ಲಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡದ್ದು ಖ್ಯಾತ ನಟ, ರಂಗಕರ್ಮಿ ಮತ್ತು ನಿವೃತ್ತ ಇಂಗ್ಲೀಷ್ ಪ್ರೊಫೆಸರ್ ಟಿ ಎಸ್ ಲೋಹಿತಾಶ್ವ. ಅವರಿಗೀಗ 68ರ ಪ್ರಾಯ ಆದರೂ ಪ್ರಬುಧ್ದ ಮನಸ್ಥಿತಿಯ ಕ್ರಿಯಾಶೀಲ ಮೇಷ್ಟ್ರು ಅವರು!
ಅಸಲು ವಿಚಾರಕ್ಕೆ ಬರುವ ಮುನ್ನ ಪ್ರೊಫೆಸರ್ ಬಗ್ಗೆ ಒಂದು ಪುಟ್ಟ ಪರಿಚಯ. ತುಮಕೂರು ಜಿಲ್ಲೆಯ ತೊಂಡೆಕೆರೆ ಗ್ರಾಮ ದಿಂದ ಬಂದ ಲೋಹಿತಾಶ್ವ ಎಡಪಂಥೀಯ ಧೋರಣೆ ಹೊಂದಿದ ಪ್ರಗತಿಶೀಲ ವ್ಯಕ್ತಿತ್ವದವರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇಂಗ್ಲೀಷ್ ಸ್ನಾತಕಪಧವೀಧರರು. ನೇರ ಹಾಗೂ ದಿಟ್ಟ ನಡವಳಿಕೆಯ ಲೋಹಿತಾಶ್ವ ಅನಿಸಿದ್ದನ್ನು ಯಾರ ಮುಲಾಜಿಗೂ ಕಾಯದೇ ಹೇಳುವ ಗುಣದವರು. ಇದುವರೆಗೂ 500ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಅವರು ಸಾಹಿತ್ಯ ವಲಯದಲ್ಲೂ ಕೃಷಿ ಮಾಡಿದ್ದಾರೆ. ನಾಟಕ ರಚನೆ, ಗದ್ಯ-ಪದ್ಯ ರಚನೆ, ಕವನ ಸಂಕಲನ, ಅನುವಾದ ಹೀಗೆ ವಿಭಿನ್ನ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಪ್ರಗತಿ ಪರ ಧೋರಣೆ ಬಿಂಬಿಸುವ ಹಲವು ಸಮಾಜ ಮುಖಿ ನಾಟಕಗಳಲ್ಲಿ ಲೋಹಿತಾಶ್ವ ನಟಿಸಿದ್ದಾರೆ.ಚಲನಚಿತ್ರಗಳಲ್ಲಿ ಕಿರುತೆರೆಯಲ್ಲಿ ಅಭಿನಯಿಸಿದ್ದಾರೆ. ಸಾಹಿತ್ಯ-ಸಂಸ್ಕೃತಿ ಸೇವೆಗಾಗಿ ರಾಜ್ಯ ನಾಟಕ ಅಕಾಡೆಮಿ ಹಾಗೂ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಅವರನ್ನರಸಿ ಬಂದಿವೆ. ಅವರ ಪುತ್ರ ಶರತ್ ಲೋಹಿತಾಶ್ವ ಕೂಡಾ ಅಪ್ಪನ ಹಾದಿಯಲ್ಲೇ ಸಾಗಿದ್ದಾರೆ.
ಇಂತಹ ಲೋಹಿತಾಶ್ವ ಶಿಕ್ಷಕರ ದಿನಾಚರಣೆಗಾಗಿ ಆಗಮಿಸಿದ್ದ ವೇಳೆ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಸಿದ ಪರಿ ನಿಜಕ್ಕೂ ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಕರ ಆದ್ಯತೆ, ಗುರಿ ಮತ್ತು ಪರಿಣಾಮದ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ನೆನ್ನೆ ರಾಷ್ಟ್ರದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗಿದೆ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅತಿಥಿ ಗಣ್ಯರೆನಿಸಿಕೊಂಡವರು ದಾವಂತಕ್ಕೆ ಬಿದ್ದವರಂತೆ ಶಿಕ್ಷಕರನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿ ಬಿಟ್ಟಿರುತ್ತಾರೆ. ಆದರೆ ಅದರ ಜೊತೆಗೆ ಶಿಕ್ಷಕರನ್ನ ಮೌಲ್ಯಮಾಪನ ಮಾಡುವಂತಹ ಮಾತುಗಳು ಬರುವುದು ಕಡಿಮೆಯೇ ಯಾಕೆ ಹೀಗೆ? ಇವತ್ತು ಶಿಕ್ಷಣ ಕ್ಷೇತ್ರದಲ್ಲಿ ಗುರುಗಳ ಪಾತ್ರವೇನು? ಸಮಾಜಕ್ಕೆ ಅವರ ಕೊಡುಗೆ ಏನು? ಎಂತಹ ಸಂದೇಶ ಅವರಿಂದ ಹೋಗುತ್ತಿದೆ? ಬದಲಾವಣೆಯ ಕಾಲಘಟ್ಟದಲ್ಲಿ ಅವರ ಹೊಣೆಗಾರಿಕೆ ಏನು?ಎಂತಹವರು 'ಗುರು' ಪಟ್ಟವನ್ನು ಅಲಂಕರಿಸುತ್ತಿದ್ದಾರೆ? ಅವರ ನಡವಳಿಕೆ ಹೇಗಿದೆ? ಅವರ ಸಂಸ್ಕೃತಿ ಹೇಗಿದೆ? ಅವರ ಬುದ್ದಿಮಟ್ಟ ಹೇಗಿದೆ? ಎಂತಹ ವ್ಯಕ್ತಿತ್ವವನ್ನು ಅವರು ರೂಪಿಸುತ್ತಿದ್ದಾರೆ ? ಸಮಾಜಕ್ಕೆ ಅವರ ಪ್ರಸ್ತುತತೆ ಏನು? ಇತ್ಯಾದಿಗಳನ್ನು ಅಗತ್ಯವಾಗಿ ವಿಚಾರ ಮಾಡಬೇಕಾದ ಸಂಧರ್ಭವಿದು.
ಹಿಂದಿನ ದಶಕಗಳಲ್ಲಿ ಶಿಕ್ಷಣದ ಬೋಧನೆಯ ಪರಿಪೂರ್ಣತೆ ಉಚ್ಚ್ರಾಯ ಸ್ಥಿತಿಯಲ್ಲಿದ್ದಂತೆ ಇವತ್ತು ಇಲ್ಲ. ಭಾವ ತೀವ್ರತೆಯಾಗಲೀ ಸ್ವಾಭಿಮಾನದ ಶಿಸ್ತಿನ ಬದುಕು ಕಲಿಸುವ ಮನೋಸ್ಥಿತಿಯಲ್ಲಿ ಶಿಕ್ಷಕರಿಲ್ಲ ಯಾಕೆ ಹೀಗೆ? ಶಿಕ್ಷಣಕ್ಕೆ ಸರಿಯಾದ ಚೌಕಟ್ಟಿಲ್ಲದ ದಿನಗಳಲ್ಲಿ, ಸವಲತ್ತುಗಳಿಲ್ಲದ ದಿನಗಳಲ್ಲಿ ಸಮಾಜದಲ್ಲಿ ಹೆಚ್ಚಿನ ಅಪರಾಧಗಳು ಘಟಿಸುತ್ತಿರಲಿಲ್ಲ ಆದರೆ ಇವತ್ತೇನಾಗಿದೆ? ಸಕಲ ಸವಲತ್ತುಗಳ ನಡುವೆ ನೀಡುತ್ತಿರುವ ಶಿಕ್ಷಣವಿದ್ದರೂ ಅಪರಾಧ ಹೆಚ್ಚಿನ ರೀತಿಯಲ್ಲಾಗುತ್ತಿದೆ. ಭ್ರಷ್ಟಾಚಾರ ಮೇರೆ ಮೀರಿದೆ, ಸಾಮಾಜಿಕ ಬದುಕುಗಳಲ್ಲಿ ಅಪಸವ್ಯ ಮೂಡಿದೆ ಒಟ್ಟಾರೆ ಜಾಗೃತ ಸ್ಥಿತಿಯಲ್ಲಿ ಏರುಪೇರಾಗಿದೆ. ನೆನಪಿರಲಿ ಸಮಾಜದ ಎಲ್ಲಾ ಸ್ಥಿತಿಗತಿಗೂ ಶಿಕ್ಷಣವೇ ಮೂಲ ಕಾರಣ! ಅಂದ ಮೇಲೆ ಅದನ್ನು ಕಲಿಸುವವರು (ಕ್ಷಮಿಸಿ ಎಲ್ಲರೂ ಅಲ್ಲ) ದಿಕ್ಕುತಪ್ಪಿದ್ದಾರೆ, ತಮ್ಮ ಹೊಣೆ ಮರೆತಿದ್ದಾರೆ ಎಂದೇ ಅರ್ಥವಲ್ಲವೇ? ಇವತ್ತು ಗುಣಮಟ್ಟದ ಶಿಕ್ಷಣ-ನೈತಿಕತೆಯ ಶಿಕ್ಷಣ ನೀಡುತ್ತಿದ್ದರೂ ಅನುಷ್ಠಾನ ಹಂತದ ಲೋಪಗಳು ಪ್ರಸಕ್ತ ಸ್ಥಿತಿಗತಿಗೆ ಕಾರಣವಲ್ಲವೇ?
ಕಳೆದ 2-ದಶಕಗಳ ಹಿಂದೆ ಗುರು ಪರಂಪರೆ ಹೇಗಿತ್ತು? ಕಲಿಸುವವರ ಅಧ್ಯಯನಶೀಲತೆ, ಭಾವ ತೀವ್ರತೆ, ಕಾಳಜಿ, ಪರಿಶೀಲನಾ ಗುಣ ಈಗ ಯಾಕಿಲ್ಲ? ಕಾರಣ ಮುಖ್ಯವಾಗಿ ಪ್ರಾಥಮಿಕ ಹಂತದ ಶಿಕ್ಷಣ ದಿಕ್ಕು ತಪ್ಪಿದೆ. ಶಿಕ್ಷಕರಿಗೆ ಸವಲತ್ತುಗಳು ಜಾಸ್ತಿಯಾಗಿವೆ ಆದರೆ ಅದರ ಬೆನ್ನಲ್ಲೆ ಒತ್ತಡದ ಸಮಸ್ಯೆಗಳು ಹೆಗಲಿಗೇರಿವೆ. ಸಾಂಪ್ರದಾಯಿಕ ಕಲಿಕೆ ಬಿಟ್ಟು ಕೆಲಸಕ್ಕೆ ಬಾರದ ನಲಿಕಲಿ ಹಾಳುಮೂಳು ಹತ್ತೊಂಬತ್ತು ಎಂದು ವರ್ಷವಿಡೀ ಶಿಕ್ಷಕರಿಗೆ ತರಬೇತಿ, ಮಾಹಿತಿ ಎಂದು ಸಾಯಿಸಲಾಗುತ್ತಿದೆ. ಶಿಕ್ಷಕರನ್ನು ಕಾಯಲು ಸಿಆರ್ ಪಿ-ಬಿಆರ್ ಪಿ, ಸಿಎಇಓ ಇತ್ಯಾದಿ ಮಾಡಲಾಗಿದೆ, ಅದು ಸಾಲದೆಂಬಂತೆ ಸರ್ಕಾರದ ರಾಷ್ಟ್ರೀಯ ಕಾರ್ಯಕ್ರಮಗಳು ಅಂದರೆ ಜನಗಣತಿ, ದನಗಣತಿ, ಜಾತಿಗಣತಿ ಚುನಾವಣೆ, ಕಟ್ಟಡ ನಿರ್ಮಾಣ, ಬಿಸಿಯೂಟ ಹೀಗೆ ಜವಾಬ್ದಾರಿಗಳ ಪಟ್ಟಿಯೂ ಹೆಗಲೇರಿದೆ. ಸಿಆರ್ ಪಿ-ಬಿಆರ್ ಪಿ ಗಳಾದವರು ತಾವು ಶಿಕ್ಷಕರೆಂಬುದನ್ನು ಮರೆತು ಇತರೆ ಶಿಕ್ಷಕರನ್ನು ಗೋಳು ಹುಯ್ದು ಕೊಳ್ಳುವ, ಶೋಷಿಸುವ ಪೀಡೆಗಳಾಗಿ ಬಿಟ್ಟಿದ್ದಾರೆ! ಹೀಗಾಗಿ 7ನೇ ತರಗತಿ ಮುಗಿಸಿ ಬರುವ ವಿದ್ಯಾರ್ಥಿಗೆ ಪ್ರೌಢಶಾಲಾ ಹಂತದಲ್ಲಿ ಹೊಸದಾಗಿ ಅ, ಆ, ಇ ಈ ಇಂದ ಪಾಠ ಹೇಳಿಕೊಡುವ ಪರಿಸ್ಥಿತಿಯಿದೆ. ಅಂದ ಮಾತ್ರಕ್ಕೆ ಶಿಕ್ಷಕರಿಗೆ ಸಮಸ್ಯೆಗಳು ಮಾತ್ರ ಅಡ್ಡಿಯಾಗಿವೆ ಅಂತಲ್ಲ ಅವರ ಸ್ವಯಂಕೃತಾಪರಾಧಗಳು ಸಹಾ ವಿದ್ಯಾರ್ಥಿ/ಶಿಕ್ಷಣದ ಮೇಲೆ ಆಘಾತಕಾರಿ ಪರಿಣಾಮ ಉಂಟುಮಾಡುತ್ತಿದೆ. ಇದಕ್ಕೂ ಮೂಲ ಕಾರಣ ಶಿಕ್ಷಣದ ಜೊತೆಗೆ ರಾಜಕಾರಣ ಬೆರೆತಿರುವುದು, ಆಯ್ಕೆಯಾಗುವಾಗಲೇ ಅನೇಕ ಅಡ್ಡನಾಡಿಗಳು ಪ್ರಭಾವದ ಮೂಲಕ ಶಿಕ್ಷಕರಾಗಿ ಆಯ್ಕೆಯಾಗುತ್ತಿದ್ದಾರೆ. ಇಂತಹವರ ಸೋಂಬೇರಿತನ, ಬೇಜವಾಬ್ದಾರಿ, ಕಳ್ಳಾಟ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ. ಇವತ್ತು ಶಿಕ್ಷಕರಾಗಿ ಆಯ್ಕೆಯಾಗುವವರು ಸಾಧಾರಣವಾಗಿ ಮೆರಿಟ್ ಪಾಸಾದವರಾಗಿರುತ್ತಾರೆ. ಆದರೂ ಅವರಿಂದ ಗುಣ ಮಟ್ಟದ ಶಿಕ್ಷಣ ಸಿಗುತ್ತಿಲ್ಲವೆಂದರೆ ಅದರ ಮೂಲಕ್ಕೆ ಹೋಗಬೇಕು. ಇವತ್ತು ಲಕ್ಷ ಸಂಖ್ಯೆಯಲ್ಲಿ ಶಿಕ್ಷಕರನ್ನು ತಯಾರು ಮಾಡುತ್ತಿರುವ ಸಂಸ್ಥೆಗಳು ದೊಡ್ಡ ಅನೈತಿಕತೆಯ ಕೇಂದ್ರ ಸ್ಥಾನಗಳಾಗಿವೆ!ಶಿಕ್ಷಣಾರ್ಥಿಗಳಾಗಿ ಬರುವವರನ್ನು ಅಂಕಗಳ ಹೊಂದಾಣಿಕೆಗೆ ಲೈಂಗಿಕವಾಗಿ ಶೋಷಿಸುವ,ದುಡ್ಡು ಪಡೆಯುವ ಪೀಡಕ ಪ್ರವೃತ್ತಿಯಿಂದಾಗಿ ಶಿಕ್ಷಕರಾಗುವವರ ಪಾವಿತ್ರ್ಯ ಕೆಡುತ್ತಿದೆ. ಶಿಕ್ಷಕ ಶಿಕ್ಷಣಾರ್ಥಿಯಾಗಿ ಬರುವವರು ವಾಸ್ತವದಲ್ಲಿ ಹೇಗೆ ನಡೆದು ಕೊಳ್ಳುತ್ತಿದ್ದಾರೆ ಎಂಬುದು ತಿಳಿಯದ ವಿಷಯವೇನಲ್ಲ. ತಮ್ಮನ್ನು ಯಾರು ಗಮನಿಸುತ್ತಿದ್ದಾರೆ? ತಮ್ಮ ನಡವಳಿಕೆ ಹೇಗಿದೆ? ಎಂಬ ಸೂಕ್ಷ್ಮವೇ ಅವರಿಗಿರುವುದಿಲ್ಲ ಹೀಗಿರುವಾಗ ಅಂತಹವರು ಶಿಕ್ಷಕರಾಗಿ ಬಂದು ಕಟ್ಟೆ ಹಾಕುವುದೇನು? ಇದು ಪ್ರಾಥಮಿಕ/ಪ್ರೌಡಶಾಲ ಶಿಕ್ಷಕರನ್ನು ಮಾತ್ರ ಕುರಿತು ಹೇಳುವ ಮಾತಲ್ಲ ಕಾಲೇಜು/ವಿವಿಗಳ ಉಪನ್ಯಾಸಕರು/ಅದ್ಯಾಪಕರು/ಪ್ರಾದ್ಯಾಪಕರುಗಳು ಸಹಾ ಇಲ್ಲಿ ಉಲ್ಲೇಖನೀಯ. ಶಿಕ್ಷಕರು ರೂಡಿಸಿಕೊಂಡ ಸಂಸ್ಕೃತಿ, ಉಡುವ ಬಟ್ಟೆ, ಮಾತು, ಹಾವ-ಭಾವ ಎಲ್ಲವೂ ಸಮಾಜದಲ್ಲಿ ಗಮನಿಸಲ್ಪಡುತ್ತದೆ. ಹೀಗಿರುವಾಗ ಅವರು ಹೇಗಿರಬೇಕು ಅಲ್ಲವೇ? ಪ್ರೌಡಶಾಲೆ/ಕಾಲೇಜು ಮಟ್ಟದಲ್ಲಿ ತಮ್ಮ ಬೇಳೆ ಬೇಯಿಸಿ ಕೊಳ್ಳಲು ವಿದ್ಯಾರ್ಥಿಗಳನ್ನು ಎತ್ತಿ ಕಟ್ಟುವುದು,ಗುಂಪುಗಾರಿಕೆ ಪ್ರಚೋದಿಸುವುದು, ಸಲ್ಲದ ಚಟುವಟಿಕೆಗಳಿಗೆ ಪುಸಲಾಯಿಸುವುದು ಶೈಕ್ಷಣಿಕ ವ್ಯವಸ್ಥೆಗೆ ಕೊಡಲಿ ಪೆಟ್ಟಲ್ಲವೇ? ಇವತ್ತಿಗೂ ಎಷ್ಟೋ ಮಂದಿ ಶಿಕ್ಷಕರುಗಳಿಗೆ/ಉಪನ್ಯಾಸಕರುಗಳಿಗೆ
ನೆಟ್ಟಗೆ ಒಂದು ವ್ಯಾಕರಣ ಬದ್ದ ಬರವಣಿಗೆ ಬರುವುದಿಲ್ಲ, ವಾಸ್ತವ ಜಗತ್ತಿನ ವಿದ್ಯಮಾನಗಳ ಅರಿವಿಲ್ಲ ಎನ್ನುವುದಾದರೆ ಅಂತಹ ಪುಂಗಿದಾಸರು ಬೇಕಾ ಹೇಳಿ? ಶಿಕ್ಷಕರಾಗಿ ಬರುವವರು ಶಿಕ್ಷಣ ಕಲಿಸುವ ಬದಲಿಗೆ ಅನ್ಯ ವಿಚಾರ-ವಿದ್ಯಮಾಗಳತ್ತಲೇ ಒಲವು ತೋರುವುದು ವಿದ್ಯಾರ್ಥಿಗಳಿಗೆ ಮಾಡುವ ಘೋರ ಅನ್ಯಾಯವಲ್ಲವೇ? ಇಂತಹವರಿಂದ ಆರೋಗ್ಯವಂತ ಸಮಾಜ ಕಟ್ಟುವುದು ಸಾಧ್ಯವೇ? ಎಲ್ಲೋ ಕೆಲವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರಾದರೂ ಅಂತಹವರು ಬಹುಸಂಖ್ಯಾತ ಕೆಟ್ಟು ಹೋಗಿರುವ ಶಿಕ್ಷಕರಿಂದ ಅಪಮಾನ ಎದುರಿಸುತ್ತಿರುವ ಸನ್ನಿವೇಶವೂ ಇದೆ. ನೆನಪಿರಲಿ ಒಬ್ಬ ಶಿಕ್ಷಕ ಕೆಟ್ಟರೇ ಸಮಾಜವೂ ಕೆಡುತ್ತದೆ ಅದಕ್ಕೆ ಅವನೇ ಹೊಣೆಗಾರನೂ ಆಗಿರುತ್ತಾನೆ ನೀವೇನಂತೀರಿ??

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...