ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆತರೋಕೆ ಎಷ್ಟು ಯೋಜನೆಗಳಿವೆ? ಎದುರಿಗಿದ್ದ ಅಧಿಕಾರಿಯನ್ನು ಪ್ರಶ್ನಿಸಿದೆ. ಸರಿ ಸುಮಾರು 62 ಯೋಜನೆಗಳು ಇದೆ ಅಂದ್ರು ಶಿಕ್ಷಣ ಇಲಾಖೆಯ ನನ್ನ ಅಧಿಕಾರಿ ಮಿತ್ರರು. ಹೌದಲ್ವಾ?... ಹಾಗಾದ್ರೆ ಕಳೆದ ಸಾಲಿನಲ್ಲಿ ರಾಜ್ಯದಾಧ್ಯಂತ 523 ಸರ್ಕಾರಿ ಶಾಲೆಗಳು ಮುಚ್ಚಿದ್ದು ಯಾಕೆ? ಎಂಬ ಪ್ರಶ್ನೆಗೆ ಸರ್ಕಾರಿ ನಿಯಮದ ಕಡೆಗೆ ಕೈ ತೋರಿಸಿದ್ರು ಅದೇ ಅಧಿಕಾರಿ ಮಿತ್ರ. ಇವತ್ತು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಳು ಶಿಕ್ಷಣ/ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಕೋಟಿಗಟ್ಟಲೆ ಹಣ ವೆಚ್ಚ ಮಾಡುತ್ತಿದೆ, ಸಾಲದು ಎಂಬಂತೆ ವಿಶ್ವ ಭ್ಯಾಂಕ್ ನೆರವಿನ ಯೋಜನೆಗಳನ್ನು ಜಾರಿಗೆ ತಂದಿದೆ ಆದರೂ ಯಾಕೆ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ? ಪ್ರತಿ ವರ್ಷ ಸರ್ಕಾರಿ ಶಾಲೆಗಳಿಗೆ ಎಲ್ಲ ಮೂಲಭೂತ ಸೌಕರ್ಯಗಳಿದ್ದರೂ, ಉತ್ತಮ ದರ್ಜೆಯ ಶಿಕ್ಷಕರಿದ್ದರೂ, ಸವಲತ್ತುಗಳು ಇದ್ದರೂ ಸಹಾ ಸರ್ಕಾರಿ ಶಾಲೆ ಯಾಕೆ ಇವತ್ತು ಪೋಷಕರ ಮತ್ತು ಮಕ್ಕಳ ಆಕರ್ಷಣೆಗೆ ಕಾರಣವಾಗಿಲ್ಲ? ಖಾಸಗಿ ಶಾಲೆಗಳು/ಕಾಲೇಜುಗಳು ಯಾಕೆ ಸೆಳೆತಕ್ಕೆ ಕಾರಣವಾಗಿವೆ? ಪೋಷಕರ/ಮಕ್ಕಳ ಧೋರಣೆ ಏನು? ಎಂಬ ಪ್ರಶ್ನೆ ಇವತ್ತು ಎಲ್ಲರನ್ನೂ ಕಾಡುತ್ತಿದೆ. ಈ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಮೊದಲು ಕೆಲವು ವಿಚಾರಗಳನ್ನು ಗಮನಿಸೋಣ.
ಕೇಂದ್ರ ಸರ್ಕಾರ ಈ ಸಾಲಿನಲ್ಲಿ ಶಿಕ್ಷಣಕ್ಕಾಗಿ ಬಜೆಟ್ ಮಂಡನೆ ವೇಳೆ 45,267.40 ಮಿಲಿಯನ್ ಹಣವನ್ನು ಕಾದಿರಿಸಿದೆ.ಭಾರತದ ಸಾಕ್ಸರತಾ ಪ್ರಮಾಣ ಶೇ.66% ಈ ಪೈಕಿ ಪುರುಷರ ಸಾಕ್ಷರತೆ ಶೇ.76.9%, ಮಹಿಳೆಯರ ಪ್ರಮಾಣ ಶೇ.54.5%. ಭಾರತದಲ್ಲಿ ಶೇ.15ರಷ್ಟು ಮಂದಿ ಮಾತ್ರ ಪ್ರೌಢಶಿಕ್ಷಣದ ವರೆಗೆ ಶಿಕ್ಷಣ ಪಡೆಯುತ್ತಾರೆ. ಭಾರತದಲ್ಲಿ ಸರ್ಕಾರಿ ಪ್ರಾಯೋಜಿತ ಶಾಲೆಗಳು ಶೇ.80ರಷ್ಟಿದೆ. ಖಾಸಗಿ ವಲಯದ ಶಿಕ್ಷಣ ಸಂಸ್ಥೆಗಳು ಶೇ.27ರಷ್ಟಿದೆ. ಖಾಸಗಿ ವಲಯದ ಶಿಕ್ಷಣ ಸಂಸ್ಥೆಗಳಿಗೆ ಹೂಡಿಕೆಯಾಗುವ ವೆಚ್ಚ 2008ರಲ್ಲಿ 40ಬಿಲಿಯನ್ ಡಾಲರ್, ಅದೇ 2012ವ ವೇಳೆಗೆ ಇದು 68ಬಿಲಿಯನ್ ಡಾಲರ್ ಆಗುವ ಸಾಧ್ಯತೆ ಇದೆ. ದೇಶದಲ್ಲಿ ವಾರ್ಷಿಕವಾಗಿ ಎಲಿಮೆಂಟರಿ ಶಿಕ್ಷಣಕ್ಕೆ ಶೇ.65.6%ಮಂದಿ ಸೇರ್ಪಡೆಯಾದರೆ ಪ್ರೌಢಶಿಕ್ಷಣಕ್ಕೆ ಶೇ.9.5, ತಾಂತ್ರಿಕ ಶಿಕ್ಷಣಕ್ಕೆ ಶೇ.10.7% ಇತರೆ ಶಿಕ್ಷಣಕ್ಕೆ ಕೇವಲ 1.49ರಷ್ಟು ಮಂದಿ ಮಾತ್ರ ಸೇರ್ಪಡೆಯಾಗುತ್ತಿದ್ದಾರೆ ಎಂದು ಸರ್ಕಾರದ ಅಧಿಕೃತ ಸರ್ವೆ ಹೇಳುತ್ತದೆ. ಬಾರತದಲ್ಲಿ 1522 ಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರತಿ ವರ್ಷ 582,000ಮಂದಿ ಪ್ರವೇಶ ಪಡೆಯುತ್ತಿದ್ದರೆ 1244 ಪಾಲಿಟೆಕ್ನಿಕ್ ಗಳಿಗೆ 265,000 ಮಂದಿ ದಾಖಲಾಗುತ್ತಿದ್ದಾರೆ ಇಲ್ಲಿ ಮೂಲ ಭೂತ ಸೌಕರ್ಯಗಳ ಕೊರತೆ ಮತ್ತು ಉಪನ್ಯಾಸಕರ ಕೊರತೆ ಇದೆ! ಆದಾಗ್ಯೂ ಪ್ರವೇಶ ಮಾತ್ರ ನಿರಾತಂಕವಾಗಿದೆ. ಇಲ್ಲಿ ಯಾವ ಸರ್ಕಾರಿ ನೀತಿಗಳು ಪಾಲನೆಯಾಗುತ್ತಿಲ್ಲ. ಪೋಷಕರ ಹುಚ್ಚಿಗೆ ಇದು ಒಂದು ಜ್ವಲಂತ ನಿದರ್ಶನ!
ಸರ್ವಶಿಕ್ಷಣ ಅಭಿಯಾನ ಜಾರಿಗೆ ಬಂದ ಮೇಲೆ ರಾಷ್ಟ್ರಾಧ್ಯಂತ ಸರ್ಕಾರಿ ಶಾಲೆಗಳು ಉತ್ತಮ ಮೂಲ ಸೌಕರ್ಯಗಳನ್ನೇನೊ ಪಡೆದಿವೆ ಆದರೆ ಶಿಕ್ಷಣ/ಶಿಕ್ಷಕರ ಗುಣಮಟ್ಟ ಕಾಯ್ದು ಕೊಳ್ಳುವಲ್ಲಿ ಮಾತ್ರ ವಿಫಲವಾಗಿದೆ ಇದು ಸರ್ಕಾರಿ ಶಾಲೆಗಳ ಹಿನ್ನೆಡೆಗೆ ಪ್ರಮುಖ ಕಾರಣ ಎನ್ನಬಹುದು.ಇಲ್ಲಿ ಶಿಕ್ಷಕರನ್ನು ಮಾತ್ರ ದೋಷಿಸುವಂತಿಲ್ಲ ಈ ವ್ಯವಸ್ಥೆಯ ಮನಸ್ಥಿತಿಯೂ ಕಾರಣ! ಕಳೆದ ವಾರ ನನ್ನ ಮಿತ್ರರೊಬ್ಬರು ಹೇಳುತ್ತಿದ್ದರು ಅಬ್ಬಾ ನಾನಂತೂ ನನ್ನ ಮಗಳನ್ನು ಮಂಗಳೂರಿನ ಖಾಸಗಿ ಕಾಲೇಜಿಗೆ ಸೇರಿಸಿ ಬಚಾವಾದೆ, ಯಾಕೆಂದ್ರೆ ನನ್ನ ಮಿತ್ರನೊಬ್ಬ ನೀವೆಲ್ಲ ನಿಮ್ಮ ಮಕ್ಕಳನ್ನು ಮಂಗಳೂರು-ಬೆಂಗಳೂರಿನ ಖಾಸಗಿ ಶಾಲೆಗೆ ಸೇರಿಸಿ ಪರವಾಗಿಲ್ಲ ನಾನು ಮಾತ್ರ ಸರ್ಕಾರಿ ಶಾಲೆಯಲ್ಲೇ ಓದಿಸುತ್ತೇನೆ ಅಂದ, ಈಗ ನೋಡಿದ್ರೆ ಅವನ ಮಗ ಡ್ರಗ್ ಅಡಿಕ್ಟ್ , ಸಣ್ಣಪುಟ್ಟ ಬಡಿದಾಟ,ಕಳ್ಳತನ ಮಾಡಿ ಜೈಲಿಗೂ ಹೋಗಿದ್ದನಂತೆ ಶಿಕ್ಷಣ ಅರ್ಧಕ್ಕೆ ನಿಂತಿದೆ, ಈಗ ನೋಡಿದ್ರೆ ನನ್ನ ಮಿತ್ರ ಹಪಹಪಿಸುತ್ತಾನೆ ಅದಕ್ಕೆ ಏನಾದ್ರೂ ಆಗ್ಲಿ ನಮ್ ಮಕ್ಕಳನ್ನ ಒಳ್ಳೆ ಸ್ಕೂಲಿಗೆ ಸೇರಿಸಬೇಕು ಅಂದ್ರು. ಅಂದ್ರೆ ಅವರ ಮಾತಿನ ಅರ್ಥ ಏನು? ಸರ್ಕಾರಿ ಶಾಲೆಲಿ ಕಲಿಯೋ ಮಕ್ಕಳೆಲ್ಲ ಹಾಳಾಗ್ತಾರೆ ಅಂತಾನಾ? ಇವತ್ತಿನ ವ್ಯವಸ್ಥೇಲಿ ಬದುಕ ಬೇಕು ಅಂದ್ರೆ ಇಂಗ್ಲೀಶ್ ಬೇಕು ಅದಕ್ಕೆ ನೂರಾರು ಮೈಲು ದೂರದ ಮಂಗಳೂರಿನ ವಸತಿ ಶಾಲೆಗೆ ವರ್ಷಕ್ಕೆ 40ಸಾವಿರ ಕೊಟ್ಟು ನನ್ನ ಮಗೂನಾ ಎಲ್ ಕೆ ಜಿ ಸೇರಿಸಿದೀನಿ ಅಂತ ಹೆಮ್ಮೆಯಿಂದ ಬೀಗಿದ ಮತ್ತೊಬ್ಬ ಹಳ್ಳಿಗಾಡಿನ ಮಿತ್ರ. ಇದೆಲ್ಲಾ ಏನು ಸ್ವಾಮಿ ಮನುಷ್ಯರ ಸಂಬಂಧಗಳಿಗೆ ಭಾವನೆಗಳಿಗೆ ಪ್ರೀತಿ ವಾತ್ಸಲ್ಯಕ್ಕೆ ಧಕ್ಕೆ ಬಂದರೂ ಪರವಾಗಿಲ್ಲ ಈತನ ಮಗ ಎಲ್ ಕೆ ಜಿಗೆ ಇಂಗ್ಲೀಷ್ ಭೋಧಿಸುವ ಖಾಸಗಿ ಶಾಲೆಗೆ ಸೇರಬೇಕು ಅಂದರೆ ಜಾಗತೀಕರಣದ ಗಾಳಿ ಎಷ್ಟರ ಮಟ್ಟಿಗೆ ಬೀಸಿದೆ ಎಂದು ಅರ್ಥ ಮಾಡಿಕೊಳ್ಳಿ.
ಇರಲಿ ಈಗ ವಿಚಾರಕ್ಕೆ ಬರೋಣ ಶಿಕ್ಷಣ ಕ್ಷೇತ್ರವನ್ನು ಒಂದು ಸೇವಾ ವಲಯ ಎಂದೇ ಅರ್ಥೈಸಲಾಗುತ್ತದೆ. ದೇಶದಲ್ಲಿ ಇದುವರೆಗೂ ಒಂದು ಸಮರ್ಪಕ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ,ಏಕರೂಪದ ಶಿಕ್ಷಣ ನೀತಿ ಇಲ್ಲಿಲ್ಲ ಹಾಗಾಗಿ ಪ್ರಾದೇಶಿಕವಾಗಿ ಕಲಿತವನಿಗೆ ಜಾಗತಿಕ ವ್ಯವಸ್ಥೆಯಲ್ಲಿ ಕಿಲುಬು ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ಇಲ್ಲಿನ ಶಿಕ್ಷಣ ಸ್ವಾವಲಂಬಿ ಬದುಕಿಗೆ ಪೂರಕವಾಗಿಲ್ಲ ಅದು ದುರಂತದ ಸಂಗತಿ. ಅಬ್ದುಲ್ ಕಂಡ ಕಂಡ ಸೂಪರ್ ಪವರ್ ಭಾರತದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಜ್ಞಾನ ಆಯೋಗವನ್ನು ಸ್ಥಾಪಿಸಿ ಅದರ ಶಿಫಾರಸ್ಸಿನಂತೆ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಈಗಷ್ಟೆ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಧ್ಯದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಸುದಾರಿಸುವ ಹಾದಿಯಲ್ಲಿದೆ, ಫಲವಾಗಿ ಪ್ರಾಥಮಿಕ,ಪ್ರೌಢ ಮತ್ತು ವೃತ್ತಿ ಶಿಕ್ಷಣಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶಿಕ್ಷಕರಿಗೆ ಸಂಬಳ-ಸವಲತ್ತುಗಳನ್ನು ನೀಡಲಾಗಿದೆ. ಅದರ ಜೊತೆ ಜೊತೆಗೆ ಮಕ್ಕಳನ್ನು ಶಾಲೆಗಳಿಗೆ ಸೆಳೆಯುವ ಮಹತ್ವದ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದರೂ ಸರ್ಕಾರಿ ಶಾಲೆಗಳು ಪ್ರತೀ ವರ್ಷ ಮುಚ್ಚಲ್ಪಡುತ್ತಿವೆ ಕಾರಣವೇನು? ನೀವು ಗಮನಿಸಿರ ಬಹುದು ಸರ್ಕಾರಿ ಶಿಕ್ಷಕರಾಗಿ ಆಯ್ಕೆಯಾಗುವವರು ಉತ್ತಮ ದರ್ಜೆಗಳಲ್ಲಿ ತೇರ್ಗಡೆಯಾದವರಾಗಿರುತ್ತಾರೆ.ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಅವರಿಗೆ ಬಿಡುವಿಲ್ಲದಂತೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಉಚಿತ ಪಠ್ಯ ವಿತರಣೆ, ಉಚಿತ ಬೈಸಿಕಲ್, ಉಚಿತ ಊಟ, ಹೆಣ್ಣು ಮಕ್ಕಳಿಗೆ ವಾರ್ಷಿಕ ದಾಖಲಾತಿ ಶುಲ್ಕದಿಂದಲೂ ವಿನಾಯಿತಿ, ವರ್ಷಕ್ಕೊಮ್ಮೆ ಉಚಿತ ಪ್ರವಾಸ, ಕ್ರೀಡೆ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ, ಸುಸಜ್ಜಿತ ಕಟ್ಟಡ, ಕುಡಿಯುವ ನೀರು, ಶೌಚಾಲಯ, ಕಂಪ್ಯೂಟರು ಶಿಕ್ಷಣ, ವೃತ್ತಿ ಕೌಶಲ್ಯ ಶಿಕ್ಷಣ, ರಿಮೋಟ್ ವಿಲೇಜ್ ಗಳಿಂದ ಬರುವ ಮಕ್ಕಳಿಗೆ ಉಚಿತ ಪ್ರಯಾಣ ವೆಚ್ಚ ಇಷ್ಟೆಲ್ಲ ಇದ್ದರೂ ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಹಿಂಜರಿಯುವುದೇಕೆ? ಅದು ಹೋಗಲಿ ಎಂದರೆ ಇವತ್ತು ಎಷ್ಟು ಜನ ಶಿಕ್ಷಕರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ? ನನ್ನೂರಿನ ಉದಾಹರಣೆಯನ್ನೇ ಹೇಳುವುದಾದರೆ ಇಲ್ಲಿರುವ 1500 ಶಿಕ್ಷಕರು/ಉಪನ್ಯಾಸಕರು/ಶಿಕ್ಷಣ ಇಲಾಖೆಯ ಅಧಿಕಾರಿಗಳ ಪೈಕಿ ಸರಿ ಸುಮಾರು 600 ರಷ್ಟು ಮಂದಿ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ನೆಲೆಸಿ ಪ್ರತಿ ನಿತ್ಯ ಇಲ್ಲಿಗೆ ಪ್ರಯಾಣ ಮಾಡುತ್ತಾರೆ, ಕಾರಣವಿಷ್ಟೆ ಅವರ ಮಕ್ಕಳ ಭವಿಷ್ಯ ಮುಖ್ಯವಂತೆ! ಜಿಲ್ಲಾ ಕೆಂದ್ರದಲ್ಲಿ ಉತ್ತಮ ಖಾಸಗಿ ಶಾಲೆಗಳಿವೆ ಇಲ್ಲಿ ಸರ್ಕಾರಿ ಶಾಲೆ ನೆಚ್ಚಿಕೊಂಡರೆ ಮಕ್ಕಳ ಭವಿಷ್ಯ ಅಷ್ಟಕ್ಕಷ್ಟೇ ಅನ್ನುತ್ತಾರೆ. ಅಂದರೆ ಅವರು ಕರ್ತವ್ಯ ನಿರ್ವಹಿಸುವ ಶಾಲೆ/ಕಾಲೇಜುಗಳಲ್ಲಿ ಅವರ ಭೋಧನೆಯ ಮೇಲೆಯೇ ಅವರಿಗೆ ನಂಬಿಕೆ ಇದ್ದಂತಿಲ್ಲ. ಹಾಗಾದರೆ ಇವರೆಲ್ಲಾ ಯಾವ ಪುರುಷರ್ಥಾಕ್ಕೆ ಸರ್ಕಾರಿ ಸೇವೆಗೆ ಸೇರುತ್ತಾರೆ ? ಶಾಲೆ/ಕಾಲೇಜುಗಳಲ್ಲಿ ಅಲ್ಲಿನ ಮಕ್ಕಳಿಗೆ ಇವರ ಬೋಧನೆ ಯಾವ ಮಟ್ಟದಲ್ಲಿರುತ್ತದೆ ? ಎಂಬ ಪ್ರಶ್ನೆ ಸಹಜವಾಗುತ್ತದೆ. ಸರ್ಕಾರದ ಡಿ ಐ ಎಸ್ ಇ ಸಮೀಕ್ಷೆಯ ಪ್ರಕಾರ ಖಾಸಗಿ ಶಾಲೆಗಳಲ್ಲಿ ಶೇ.54.9ರಷ್ಟು ಮಂದಿ ನಿಗದಿತ ತರಬೇತಿ ಹೊಂದಿಲ್ಲದ ಶಿಕ್ಷಕರೆನಿಸಿಕೊಂಡವರು ಪಾಠ ಮಾಡುತ್ತಾರೆ! ಸದರಿ ಶಾಲೆಗಳಲ್ಲಿ ಅನಿಯಮಿತ ಡೊನೇಷನ್, ಶುಲ್ಕದ ಜೊತೆಗೆ ಮನೆಪಾಠಕ್ಕೆ ಇಂತಿಷ್ಟು ಅಂತ ವಸೂಲಿ ಮಾಡಲಾಗುತ್ತದೆ. ಯಾಂತ್ರಿಕವಾಗಿ ಮಕ್ಕಳಿಗೆ ಬಲವಂತದ ಶಿಕ್ಷಣ ನೀಡಲಾಗುತ್ತದೆ, ಇದರಿಂದ ಇಂತಹ ವಿದ್ಯಾರ್ಥಿ ಉತ್ತಮ ಅಂಕಗಳನ್ನು ಗಳಿಸಬಹುದೇ ವಿನಹ ಆತನ ಭೌದ್ದಿಕ ಮಟ್ಟ ಖಂಡಿತಾ ಬೆಳೆಯಲಾರದು. ಮುಂದೆ ಆತ ಸಮಾಜ ಕಂಟಕನಾಗುವ ಮತ್ತು ಸಾಮಾಜಿಕ ಸಂಬಂಧಗಳ ಶೂಲೆಗೂ ಕಾರಣನಾಗಬಹುದು, ಆದರೂ ಈ ಪೋಷಕರಿಗೆ ಖಾಸಗಿ ಶಾಲೆಗಳೇ ಬೇಕು ಅಂದರೆ ಏನರ್ಥ?
ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳು ಸುಧಾರಿಸಬೇಕಾದರೆ ಖಾಸಗಿ ಶಾಲೆಗಳಿಂದ ಪೋಷಕರ ಮನಸ್ಸನ್ನು ಸೆಳೆಯಬೇಕಾದರೆ ನಮ್ಮ ಸರ್ಕಾರಿ ಶಾಲೆ/ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರು ಗಳನ್ನು (ಕ್ಷಮಿಸಿ ಎಲ್ಲರನ್ನೂ ಅಲ್ಲ) ಹದ್ದುಬಸ್ತಿನಲ್ಲಿಡ ಬೇಕಾಗಿದೆ ಅವರಿಂದ ಪ್ರಾಮಾಣಿಕ ಸೇವೆಯನ್ನು ಪಡೆಯುವಲ್ಲಿ ಸರ್ಕಾರ ಗಮನ ಹರಿಸಬೇಕಿದೆ. ಕುಡಿದು ಶಾಲೆಗೆ ಬರುವ, ರಾಜಕೀಯ ಮಾಡುವ, ಕಾಮುಕ ವರ್ತನೆ ತೋರುವ, ಅಸಹಜ ಪ್ರವೃತ್ತಿ, ಸೋಮಾರಿತನ, ಅಶಿಸ್ತು ಇವುಗಳನ್ನು ಹೊಂದಿದ ಶಿಕ್ಷಕರಿಗೆ ಎಚ್ಚರಿಕೆ ನೀಡಿ ಸೇವೆಯಿಂದ ಮುಕ್ತ ಮಾಡುವ ಅಧಿಕಾರವನ್ನು ಸರ್ಕಾರ ಅಧಿಕಾರಿಗಳಿಗೆ ನೀಡಿದರೆ ಸರ್ಕಾರಿ ಶಾಲೆಯ ಆಕರ್ಷಣೆ ಉಳಿಯಬಹುದೇನೋ. ಅಗತ್ಯ ಬಿದ್ದರೆ ಇಂತಹ ಕಾರ್ಯಕ್ಕೆ ಒಂಬುಡ್ಸ್ ಮನ್ ಗಳನ್ನು ರಚಿಸಿ ದಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಯ ಮೇಲೆ ನಿಯಂತ್ರಣ ಸಾಧಿಸಬಹುದು. ಇನ್ನೊಂದು ಮಾತು ಸಾಕಷ್ಟು ಸವಲತ್ತುಗಳನ್ನು/ಯೋಜನೆಗಳನ್ನು ಸರ್ಕಾರಿ ಶಾಲೆಗಳಿಗೆ ನೀಡುತ್ತಿದ್ದರೂ ಅನಿಯಮಿತವಾಗಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುತ್ತಿದೆ. ಹೀಗಾದರೆ ಶಿಕ್ಷಣ ವ್ಯವಸ್ಥೆ ಒಂದಲ್ಲ ಒಂದು ದಿನ ಸಂಪೂರ್ಣ ಖಾಸಗೀಕರಣ ಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಆಗ ಉಳ್ಳವರಿಗೆ ಮಾತ್ರ ಶಿಕ್ಷಣ ಎಂಬಂತಾದರೆ ಗತಿಯೇನು?