Sunday, December 11, 2011

ಮಡೇಸ್ನಾನ ನಿಷೇದಕ್ಕೆ ಅಷ್ಟಮಂಗಳ ಪ್ರಶ್ನೆ ಬೇಕಾ?



ರಾಮನಾಥಪುರದ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆಯ ದಿನದಂದು ಎಂಜಲು ಎಲೆ ಮೇಲೆ ಉರುಳುವ ಸೇವೆ ಇದೆ ! ತಕ್ಷಣವೇ ಅದಕ್ಕೊಂದು ಕರೆಕ್ಷನ್ ಹಾಕಿದ ಗೆಳೆಯ "ಆದ್ರೆ ಅಲ್ಲಿ ಬ್ರಾಹ್ಮಣರು ಉಂಡ ಎಲೆಗಳ ಮೇಲೆ, ಬ್ರಾಹ್ಮಣರೇ ಉರುಳುತ್ತಾರೆ" ಎಂದು ನಸುನಕ್ಕ. ಶಾಕ್ ಆಗುವ ಸರದಿ ನನ್ನದು. ಅದೇ ದಿನ ಹಾಸನದ ಮಿತ್ರರೊಬ್ಬರು ಫೋನಾಯಿಸಿ ನಗರದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲೂ ಅಪೇಕ್ಷೆ ಈಡೇರಿಕೆಗಾಗಿ ಬರಿಯ ನೆಲದ ಮೇಲೆ ಊಟ ಮಾಡುವ ಪದ್ದತಿ ಇದೆ ಎಂದರು. ಆಮೇಲೆ ಹುಡುಕುತ್ತಾ ಹೋದರೆ ಇಂತಹ ವಿವಿಧ ಅನಾಗರಿಕ ಪದ್ದತಿಗಳು ನಮ್ಮ ಸುತ್ತಲೂ ಸಂಪ್ರದಾಯದ ಹೆಸರಿನಲ್ಲಿ ಚಾಲ್ತಿಯಲ್ಲಿರುವುದು ಅರಿವಿಗೆ ಬಂದು ದಿಗಿಲಾಯ್ತು. ಇದೆಲ್ಲದಕ್ಕಿಂತ ಹೆಚ್ಚು ವಿಷಾಧಭಾವ ಮೂಡಿಸಿದ ಸಂಗತಿ ಹಿರಿಯ ಸಚಿವ ವಿ ಎಸ್ ಆಚಾರ್ಯ ಹೇಳಿಕೆ. ಮಡೇಸ್ನಾನ ನಿಷೇದಿಸುವ ಕುರಿತು ಅಷ್ಟಮಂಗಳ ಪ್ರಶ್ನೆಯ ನಂತರ ನಿರ್ಧರಿಸಲಾಗುವುದಂತೆ, ಹಾಗೆಯೇ ಸಾಂಪ್ರಾದಾಯಿಕ ಪದ್ದತಿಗಳ ಆಚರಣೆ ಜನರ ಹಕ್ಕು ಅದಕ್ಕೆ ಅಡ್ಡಿ ಉಂಟು ಮಾಡಬಾರದಂತೆ ! ಇದು ಜವಾಬ್ದಾರಿಯುತ ಸಚಿವರುಗಳು  ಹಾಗೂ ಸಿಎಂ ಡೀವಿ ಮಾತನಾಡುವ ಪರಿ. ಕಳೆದ 15ದಿನಗಳಿಂದ ಮಡೇ ಸ್ನಾನ ಪರ/ವಿರೋಧ ಚರ್ಚೆಗಳು ನಡೆಯುತ್ತಿವೆ. ಅವರವರ ಮೂಗಿನ ನೇರಕ್ಕೆ ವಿಚಾರವನ್ನ ಚರ್ಚೆಗೆ ತಂದಿದ್ದಾರೆ. ಇರಲಿ ಇಂತಹದ್ದೊಂದು ಅನಿಷ್ಠ ಸಂಪ್ರದಾಯ ಕುರಿತ ಚರ್ಚೆ ನಾಗರಿಕ ಸಮಾಜದ ನಾಗರೀಕರಿಗೆ ಅಗತ್ಯವೇ ಆಗಿದೆ. 
         ಭಾರತ ದೇಶ ಹೇಳಿ ಕೇಳಿ ಸಾಂಪ್ರದಾಯಿಕ ಆಚರಣೆಗಳನ್ನು ಹೊಂದಿದ, ವಿವಿಧ ಧರ್ಮಗಳನ್ನು ಹೊಂದಿದ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ. ಈ ನಡುವೆಯೇ ನಾಗರಿಕ ಸಮಾಜಕ್ಕೆ ವಿರುದ್ದವಾದ ಆಚರಣೆಗಳನ್ನು ಕಾಲಘಟ್ಟಕ್ಕೆ ತೊರೆಯದೇ ಹಾಗೆಯೇ ಉಳಿಸಿಕೊಂಡು ಬರಲಾಗಿದೆ. ಭಾರತೀಯ ಪರಂಪರೆಯನ್ನು ಅತ್ಯಂತ  ಪುರಾತನವಾದ ನಾಗರಿಕೆತೆಯನ್ನು ಹೊಂದಿದ ರಾಷ್ಟ್ರವೆಂದು ಗುರುತಿಸಲಾಗುತ್ತದೆ. ಭಾರತೀಯ ಪರಂಪರೆಗೆ 8000ವರ್ಷಗಳಷ್ಟು ಹಳೆಯ ಇತಿಹಾಸವಿರುವುದನ್ನು ಕಾಣಬಹುದು. ವರ್ಗಬೇಧ, ಜಾತೀಯತೆ ಮತ್ತಿತರ ಅನಿಷ್ಟ ಸಂಪ್ರದಾಯಗಳ ವಿರುದ್ದ ಅನೇಕ ಸಮಾಜ ಸುಧಾರಕರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಹೀಗಿರುವಲ್ಲಿ ಕಾಲ ಕಳೆದಂತೆ ಒಂದೊಂದೆ ಅನಿಷ್ಠ ಸಂಕೋಲೆಗಳು ಕಳಚುತ್ತಾ ಬಂದಿವೆ. ಹಿಂದಿನ ಕಾಲ ಘಟ್ಟದಲ್ಲಿ ಅರಿವಿನ ಕೊರತೆಯಿಂದಾಗಿ ಅನಾಗರಿಕ ಆಚರಣೆಗಳನ್ನು ಪೋಷಿಸಿಕೊಂಡು ಬರಲಾಗಿತ್ತಾದರೂ ಕಾಲಘಟ್ಟದ ಬದಲಾವಣೆಯಿಂದ ಅಲ್ಲೆಲ್ಲ ಹೊಸತನದ ಅರಿವು ಮೂಡುತ್ತಿದೆ. 
          ಮೊನ್ನೆ ಸುಬ್ರಹ್ಮಣ್ಯ ದೇಗುಲದಲ್ಲಿ ಚಂಪಾ ಷಷ್ಠಿಯಂದು ನಡೆಯುತ್ತಿದ್ದ ಮಡೆಸ್ನಾನವನ್ನು ವಿರೋಧಿಸಿದ ಶಿವರಾಂ ಎಂಬುವವರಿಗೆ ಮನಸ್ಸೋ ಇಚ್ಚೆ ಸಾರ್ವಜನಿಕವಾಗಿಯೇ ಥಳಿಸಲಾಗಿದೆ, ಸಾಲದ್ದು ಎಂಬಂತೆ ದೇಗುಲದ ಮುಂದೆ ಭಕ್ತಾದಿಗಳ ಹೆಸರಿನ ಅನಾಗರಿಕರು ಮಡೇಸ್ನಾನದ ಪರವಾಗಿ ಭಾರಿ ಪ್ರತಿಭಟನೆಯನ್ನು ನಡೆಸಿದ್ದಾರೆ, ರಾಜ್ಯ ಸರ್ಕಾರ ತನ್ನದೇ ಆಡಳಿತದ ಸ್ಥಳೀಯ ಸಹಾಯಕ ಆಯುಕ್ತರು ನಿಷೇದಿಸಿದ ಮಡೇಸ್ನಾನವನ್ನು ಬೆಂಬಲಿಸಲು ಮೀನ ಮೇಷ ಎಣಿಸುತ್ತಾ, ಎಸಿ ಆದೇಶವನ್ನು ರದ್ದುಗೊಳಿಸಿ ಅಧಿಕೃತವಾಗಿ ಮಡೇಸ್ನಾನಕ್ಕೆ ಅವಕಾಶ ಮಾಡಿದೆ. ಮುಖ್ಯಮಂತ್ರಿ ಮತ್ತು ಸಚಿವರುಗಳು ಮಡೇಸ್ನಾನ ನಿಷೇಧಕ್ಕೆ ಅಷ್ಟಮಂಗಳ ಪ್ರಶ್ನೆಯನ್ನು ಕಾಯುವುದಾದರೆ ಅವರು ದೇಶದ ಕಾನೂನಿಗೆ, ಸಂವಿಧಾನಕ್ಕೆ ಕೊಡುವ ಗೌರವವೇನು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಭಾವನಾತ್ಮಕ ವಿಚಾರಗಳು ನಾಗರೀಕತೆಯ ಚೌಕಟ್ಟಿನಲ್ಲಿರಬೇಕೆ ವಿನಹ ಎಲ್ಲೆಯನ್ನು ಮೀರುವಂತಾಗಬಾರದಲ್ಲವೇ?
             ಧೃಶ್ಯ ಮಾಧ್ಯಮವೊಂದರ ವರದಿಗಾರ ಅದೇ ಛಾನಲ್ ಗೆ ಸಂಬಂಧಿಸಿದ ಪತ್ರಿಕೆಯಲ್ಲಿ ಮಡೆ ಸ್ನಾನದ ಪರವಾಗಿ ವಿಚಾರ ಮಂಡಿಸುತ್ತಾ "ಈ ಸಂಪ್ರದಾಯ ಮುಂದುವರಿಯಬೇಕು ಇಲ್ಲವಾದರೆ ನಾವು ರಥ ಕಟ್ಟುವುದಿಲ್ಲ ಅಂತ ಪಟ್ಟು ಹಿಡಿದದ್ದು ಮಲೆಕುಡಿಯ ಜನಾಂಗದವರೇ ಹೊರತು ಮೇಲ್ಜಾತಿಯವರಲ್ಲ ಎನ್ನುತ್ತಾರೆ ಆದರೆ ಆದರೆ ಅನಿಷ್ಠ ಪದ್ದತಿಯನ್ನು ಜೀವಂತವಾಗಿಡುವ ಉದ್ದೇಶದಿಂದ ಮಲೆಕುಡಿಯರಂತಹ ಅಮಾಯಕ ಜನರನ್ನು ಕಾಲ ಕಾಲಕ್ಕೆ ಪಾಲಿಶ್ ಮಾಡಿ ಅನುಕೂಲಕ್ಕೆ ಬಳಸುವಂತಹ ಪಟ್ಟಭದ್ರ ಹಿತಾಸಕ್ತಿಗಳಿಗೆ ನಾಗರೀಕತೆಯ ಅರಿವಿಲ್ಲವೇ?  ಅದೇ ರೀತಿ ನೆಲದ ಮೇಲೆ ಊಟ ಮಾಡುವುದು ಮುಖ್ಯ ಪ್ರಾಣನಿಗೆ ಸಲ್ಲಿಸುವ ಸೇವೆಯಂತೆ ಇದಕ್ಕೆ ಉಡುಪಿ ಮಠದಲ್ಲಿ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲವಂತೆ ಹಾಗೆಂದ ಮಾತ್ರಕ್ಕೆ ಇಂತಹದ್ದನ್ನು ಪುರಸ್ಕರಿಸಬೇಕೆ? ಇದ್ಯಾವ ಸೀಮೆಯ ನಾಗರೀಕ ಪದ್ದತಿ? ಇದಕ್ಕೆ ಶುಲ್ಕ ಬೇರೆ ಬೇಕಿತ್ತಾ?  ಮಡೇಸ್ನಾನ ತೀರಾ ವೈಯುಕ್ತಿಕವಾದ ಸೇವೆ ದೇವರ ಮಾಮೂಲು ಸೇವಾ ಪಟ್ಟಿಯಲ್ಲಿ ಇದು ಸೇರಿಲ್ಲ ಎನ್ನಲಾಗುತ್ತದೆ ಹಾಗಾದರೆ ಚಂದ್ರಗುತ್ತಿಯ ಬೆತ್ತಲೆ ಸೇವೆ ತೀರಾ ವೈಯುಕ್ತಿಕ ಮತ್ತು ಭಾವನಾತ್ಮಕವಾದುದು, ಉತ್ತರ ಕರ್ನಾಟಕದಲ್ಲಿ ಬಸವಿ ಬಿಡುವ ಪದ್ದತಿ ವೈಯುಕ್ತಿಕವಾದುದು ಹೀಗೆ ಹೇಳುತ್ತಾ ಹೋದರೆ ಹಲವಾರು ಅನಿಷ್ಠ ಸಂಪ್ರದಾಯಗಳನ್ನು ಪಟ್ಟಿ ಮಾಡಬಹುದು. ಇವತ್ತು ನಾವೆಲ್ಲ ಯಾವ ಕಾಲ ಘಟ್ಟದಲ್ಲಿದ್ದೇವೆ? ವೈಜ್ಞಾನಿಕ ಅವಿಷ್ಕಾರಗಳು ಕಣ್ಣ ಮುಂದಿವೆ ಹೀಗಿದ್ದರೂ ಇಂತಹ ಮೂಡನಂಬಿಕೆಗಳ ಆಚರಣೆ ಬೇಕಾ ಎಂಬ ಪ್ರಶ್ನೆ ಮೂಡುತ್ತದೆ,. ಇದೇ ಲೇಖನದಲ್ಲಿ ಸದರಿ ವರದಿಗಾರ ಒಂದು ಪ್ರಶ್ನೆ ಮುಂದಿಡುತ್ತಾನೆ ಬಕ್ರಿದ್ ದಿನ ಕುರಿ ಕಡಿಯುವುದು ನಂಬಿಕೆಯ ಬಾಗ, ದೀಪಾವಳಿಗೆ ಕೋಳಿ ಬಲಿ ನೀಡುವುದು ಸಂಪ್ರದಾಯ ಅದೇ ರೀತಿ ಮಡೇಸ್ನಾನ ದಕ್ಷಿಣ ಕನ್ನಡದ ನಂಬಿಕೆ ಎಂದು ವಿತಂಡವಾದವನ್ನು ಮುಂದಿಡುತ್ತಾನೆ. ಕುರಿ-ಕೋಳಿ ಬಲಿ ಅನಾಗರಿಕ ಕೃತ್ಯವೆಂದೇ ಕಾಣಬಹುದು ಆದರೆ ಅದು ಆಹಾರ ಸೇವನೆಯ ಅನಿವಾರ್ಯ ಭಾಗ, ಮಾಂಸಹಾರ ಇಲ್ಲದಿದ್ದರೆ ಜಗತ್ತಿನ ಬಹುತೇಕ ರಾಷ್ಟ್ರಗಳ ಜನರು ಹಸಿವಿನಿಂದ ಸಾಯುವುದನ್ನು ಕಾಣಬೇಕಿತ್ತು, ಅಷ್ಟಕ್ಕೂ ಸಸ್ಯಾಹಾರಿಗಳ ಸೇವಿಸುವ ಗೋವಿನ ಹಾಲು ಮಾಂಸಜನ್ಯವಾದುದೇ ಅಲ್ಲವೇ ಆಗ ಅದು ಸಸ್ಯಾಹಾರ ಹೇಗಾದಿತು ?
       ಅನಾಗರಿಕ ಕೃತ್ಯಗಳನ್ನು ಬೆಂಬಲಿಸುವ ಭರದಲ್ಲಿ ವಿತಂಡ ವಾದಗಳು ಮತ್ತು ಸಮಂಜಸವಲ್ಲದ ತರ್ಕಗಳು ಹಾದಿ ತಪ್ಪಿಸುತ್ತವೆಯೇ ವಿನಹ ಸರಿಯಾದ ಪರಿಹಾರೋಪಾಯ ಕಂಡು ಕೊಳ್ಳಲಾಗುವುದಿಲ್ಲ. ಆರೋಗ್ಯವಂತ ಸಮಾಜದ ನಡೆಗೆ ಆರೋಗ್ಯವಂತ ಚಿಂತನೆಗಳು ಮಾತ್ರ ಬೇಕು ಅದು ನಾಗರೀಕತೆಯ ಲಕ್ಷಣವಾಗುತ್ತದೆ ಆದರೆ ತರ್ಕಕ್ಕೆ ಪ್ರತಿ ತರ್ಕ ಎಂದು ಮುಂದುವರೆದರೆ ಅದಕ್ಕೆ ಸರಿಯಾದ ಪರಿಹಾರ ದೊರಕಲಾರದು. ಸರ್ಕಾರವೂ ಕೂಡ ಮಡೇಸ್ನಾನ ಮತ್ತು ಮಡೇಸ್ನಾನದಂತಹ ಅನಿಷ್ಠ ಆಚರಣೆಗಳನ್ನು ನಿಷೇದಿಸುವಲ್ಲಿ ಸಂವಿದಾನದ ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕೆ ವಿನಹ ಅಷ್ಟಮಂಗಳ ಪ್ರಶ್ನೆಯ ಮೂಲಕ ಅಲ್ಲ ಎಂಬುದನ್ನು ಅರಿಯಬೇಕಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...