ಗಾಂಧೀ ಮಾರ್ಗದ ಅಹಿಂಸಾತ್ಮಕ ಹೋರಾಟಕ್ಕೆ ಆರೂವರೆ ದಶಕಗಳ ನಂತರ ಮೊದಲ ಹಂತದ ಗೆಲುವು ದಕ್ಕಿದೆ. ಅಷ್ಟರಮಟ್ಟಿಗೆ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಹೋರಾಟ ಮತ್ತು ಜನಲೋಕಪಾಲ್ ಮಸೂದೆಯ ಅನುಷ್ಠಾನದ ಆಗ್ರಹ ಗಟ್ಟಿತನವನ್ನ ಉಳಿಸಿಕೊಂಡಿದೆ. ಕಳೆದ ಏಪ್ರಿಲ್ ನಲ್ಲಿ ಜನಲೋಕಪಾಲ್ ಮಸೂದೆಯ ಕರಡು ರಚನೆಗೆ ಆಗ್ರಹಿಸಿ ಅಣ್ಣಾ ನೇತೃತ್ವದ ತಂಡ ಚಳುವಳಿ ನಡೆಸಿತ್ತು. ಆಗ ದೊರೆತ ಅಭೂತ ಪೂರ್ವ ಬೆಂಬಲವನ್ನ ಅನಾಮತ್ತಾಗಿ ಹೈಜಾಕ್ ಮಾಡಲು ಹೊರಟ ಯೋಗ ಗುರು ಬಾಬಾ ರಾಮದೇವ ನೈತಿಕತೆ ಕಳೆದುಕೊಂಡು ಮೂಲೆಗುಂಪಾಗಿದ್ದು ಈಗ ಇತಿಹಾಸ. ನೈತಿಕತೆಯನ್ನ, ಸಿದ್ದಾಂತವನ್ನ ಯಾವ ಚಳುವಳಿಗಳು ಉಳಿಸಿಕೊಳ್ಳುತ್ತವೋ ಅದಕ್ಕೆ ಯಾವತ್ತಿದ್ದರೂ ಗೆಲುವು ಎಂಬುದಕ್ಕೆ ಅಣ್ಣಾ ಹಜಾರೆಯ 13ದಿನಗಳ ಶಾಂತಿಯುತ ಉಪವಾಸ ಸತ್ಯಾಗ್ರಹ ಇವತ್ತು ನಮ್ಮ ಕಣ್ಣೆದುರಿಗಿದೆ. ಈ ಸಂಧರ್ಭದಲ್ಲಿ ಚಳುವಳಿಯ ಕುರಿತು ಬುದ್ದಿ ಜೀವಿಗಳೆನಿಸಿಕೊಂಡವರಿಂದ, ರಾಜಕೀಯ ಪಕ್ಷಗಳ ಮುಖಂಡರಿಂದ, ಅಧಿಕಾರ ರೂಢರಿಂದ ನಾನಾ ರೀತಿಯ ಟೀಕೆಗಳು ಮತ್ತು ವಿಮರ್ಶೆಗಳು ಬಂದಿವೆ. ಚಳುವಳಿಗಳಲ್ಲಿ ಎಂಥಹವರು ಪಾಲ್ಗೊಂಡರು? ಯಾರು ಎಷ್ಟೆಷ್ಟು ವಿಚಾರ ಅರಿತಿದ್ದರು?ಅಂಥಹವರು ಚಳುವಳಿಗೆ ಯಾಕೆ ಬಂದರು? ಅಷ್ಟಕ್ಕೂ ಲೋಕಪಾಲ ಮಸೂದೆ ಜಾರಿಗೆ ಬಂದ ತಕ್ಷಣ ಭ್ರಷ್ಟಾಚಾರದ ಭೂತ ಓಡಿಸಲು ಸಾಧ್ಯವಾದೀತೆ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಅವಶ್ಯಕತೆ ಇದೆ.
ಇವತ್ತು ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಜನಲೋಕಪಾಲ್ ಮಸೂದೆಗೆ ನಾಲ್ಕೂವರೆ ದಶಕಗಳ ಇತಿಹಾಸವಿದೆ. ಆದಾಗ್ಯೂ ಅಧಿಕಾರ ಷಾಹಿಗಳ ಕುತಂತ್ರದಿಂದಾಗಿ ಅದಕ್ಕೊಂದು ಸ್ಪಷ್ಟರೂಪ ಕೊಡುವ ಪ್ರಯತ್ನಕ್ಕೆ ಸರಿಯಾದ್ದೊಂದು ಅವಕಾಶ ದಕ್ಕಿರಲಿಲ್ಲ.ಆದರೆ ಅಣ್ಣಾ ಹಜಾರೆ ನೇತೃತ್ವದಲ್ಲಿ ಬದ್ದತೆಯ ಹೋರಾಟಕ್ಕೆ ಕೊಂಚ ಮಟ್ಟಿಗೆ ಗೆಲುವು ಸಿಕ್ಕಿದೆ. ಜನಲೋಕಪಾಲ ಮಸೂದೆ ಜಾರಿಗೆ ಬಂದಾಕ್ಷಣ ದೇಶದ ಆಡಳಿತ ವ್ಯವಸ್ತೆಯಲ್ಲಿ ಅಭೂತಪೂರ್ವ ಬದಲಾವಣೆ ಆಗಿಬಿಡುತ್ತದೆ ಲಂಚದ ಸಮಸ್ಯೆ ನಿವಾರಣೆಯಾಗುತ್ತದೆ, ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿರುವ 1461ಕೋಟಿಗೂ ಹೆಚ್ಚಿನ ಬೇನಾಮಿ ಹಣ ಪುಕ್ಕಟ್ಟೆಯಾಗಿ ಸಿಕ್ಕುಬಿಡುತ್ತೆ ಅದನ್ನು ಪ್ರತೀ ಹಳ್ಳಿಗೆ ತಲಾ 61ಕೋಟಿಯಂತೆ ಹಂಚಬಹುದು, ಅಬಿವೃದ್ದಿ ಕಾರ್ಯಕ್ಕೆ ಬಳಸಬಹುದು, ಅದೆಷ್ಟೋ ವರ್ಷ ಪುಕ್ಕಟ್ಟೆಯಾಗಿ ವಿದ್ಯುತ್ ಸರಬರಾಜು ಮಾಡಬಹುದು ಆಗ ಭಾರತ ದೇಶದ ಭವಿಷ್ಯ ಉಜ್ವಲವಾಗಿ ಬಿಡುತ್ತೆ ಅನ್ನೊ ಮೂರ್ಖತನದ ಮೂರ್ಖರ ಎಸ್ ಎಂ ಎಸ್ ಗಳು ಹರಿದಾಡಿ ಬಿಟ್ಟವು ಲಾಭವಾಗಿದ್ದು ಮಾತ್ರ ಮೆಸೆಜು ಸರ್ವಿಸ್ ನೀಡಿದ ಮೊಬೈಲು ಕಂಪೆನಿಗಳಿಗೆ! ಅದೇ ರೀತಿ ಇನ್ನೊಂದು ಮೂರ್ಖರ ಗುಂಪು ಅಣ್ಣಾ ಹಜಾರೆ ಕೇವಲ 7ನೇ ತರಗತಿ ಓದಿದ ನಿರಕ್ಷರಕುಕ್ಷಿ, ಭೂಮಿಯ ಮೇಲಿನ ರಕ್ಕಸ! ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನೇ ತಿದ್ದಲು ಆರ್ ಎಸ್ ಎಸ್ ನೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡ ಒಬ್ಬ ಕೋಮುವಾದಿ ಎಂದು ಜರೆಯುವ ಮೆಸೆಜನ್ನು ಕಿಡಿಗೇಡಿಗಳು ಹರಿಯ ಬಿಟ್ಟಿದ್ದರು. ವಿ.ಕ ದ ದೆಹಲಿಯ ಹಿರಿಯ ವರದಿಗಾರ ಉಮಾಪತಿ, ರಾಮಲೀಲಾ ಮೈದಾನದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟದ ಸದವಕಾಶವನ್ನ ಮೀಸಲು ವಿರೋಧಿ ಗುಂಪು ಹೇಗೆ ಬಳಸಿಕೊಂಡು ಹೋರಾಟದ ಆಶಯವನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂಬ ವಿಚಾರವನ್ನ ಬರೆದಿದ್ದರು. ಅಷ್ಟೇ ಅಲ್ಲ ವೈಯುಕ್ತಿವಾಗಿ ಭ್ರಷ್ಟರಾದವರು ಸಾರ್ವಜನಿಕವಾಗಿ ಸಾಮೂಹಿಕವ ನೆಲೆಗಟ್ಟಿನಲ್ಲಿ ಹೇಗೆ ಮುಖವಾಡ ಧರಿಸಿ ಬರುತ್ತಿದ್ದಾರೆ ಎಂಬ ಸಾಕಷ್ಟು ವಿಚಾರಗಳು ನಮ್ಮ ಕಣ್ಣೆದುರಿಗೆ ಬಂದು ಹೋದವು ತಾತ್ವಿಕ ನೆಲೆಗಟ್ಟಿಗೆ, ತಾರ್ಕಿದ ಸಂಘರ್ಷಕ್ಕೆ ಎಣೆಯಿಲ್ಲದಂತೆ ವಿವಿಧ ಮಜಲುಗಳಿಂದ ಹರಿದು ಬಂದ ಬೆಂಬಲ ಅಂತಿಮವಾಗಿ ಯಾವ ರೂಪ ತಳೆಯುತ್ತಿತ್ತೋ ಗೊತ್ತಿಲ್ಲ ಆದರೆ ಸ್ವತಂತ್ರ ಭಾರತದಲ್ಲಿ ಒಂದು ಜೆಪಿ ಚಳುವಳಿಯ ನಂತರ ನಡೆದ ದೊಡ್ಡ ಹೋರಾಟ ಇದು.
ನಮ್ಮ ಜನ ಸಿನಿಕರು, ಕಲ್ಪನೆಗಳ ಸಾಮ್ರಾಜ್ಯದಲ್ಲಿ ವಾಸ್ತವತೆಯನ್ನು ಮೀರಿ ನಿಂತ ವಿಚಾರಗಳನ್ನ ಅರ್ಥೈಸಿಕೊಳ್ಳಲಾಗದವರು ಏಕಾಏಕಿ ಬದಲಾವಣೆಗಳನ್ನು ನಿರೀಕ್ಷಿಸಿ ಬಿಡುತ್ತಾರೆ. ನಿಮಗೆ ನೆನಪಿರಲಿ ಇವತ್ತು ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆಂದೇ ಸರಿ ಸುಮಾರು 6 ಸಂಸ್ಥೆಗಳಿವೆ. ಆದಾಗ್ಯೂ ಭ್ರಷ್ಟಾಚಾರ ಎಂಬುದು ಇಲ್ಲಿಂದ ಖಾಲಿ ಆಗಿಲ್ಲ ಏಕೆಂದರೆ ಇವೆಲ್ಲಾ ಹಲ್ಲು ಕಿತ್ತ ಹಾವುಗಳು! ಇವನ್ನು ಮೀರಿದ ಲೋಕಪಾಲ ಸಮಿತಿ ಅಸ್ತಿತ್ವಕ್ಕೆ ಬಂದರೆ ಅದಕ್ಕೊಂದು ಸ್ಪಷ್ಟ ನೀತಿ ನಿಯಮ ಸಂಸತ್ ನಲ್ಲಿ ಕಾನೂನಾಗಿ ಮಾರ್ಪಟ್ಟರೆ ಕೊಂಚ ಮಟ್ಟಿಗೆ ಭ್ರಷ್ಟಾಚಾರವನ್ನು ತಹಬಂದಿಗೆ ತರಬಹುದೇನೋ ಎನ್ನುವ ನಿರೀಕ್ಷೆಯಿದೆ. ಎಲ್ಲವೂ ಅಂದುಕೊಂಡಂತೆ ಆದರೂ ಶೇ.2ರಷ್ಟು ಭ್ರಷ್ಟಾಚಾರ ನಿಯಂತ್ರಣ ಆಡಳಿತ ವ್ಯವಸ್ಥೆಯಲ್ಲಿ ಕಾಣಬಹುದೇ ವಿನಹ ಬಾಕಿಯಂತೆ ಯಥಾಸ್ಥಿತಿಯೇ ಉಳಿದು ಬಿಡುವ ಅಪಾಯವಿದೆ. ಹಾಗಾಗಿ ಸ್ವಿಸ್ ಬ್ಯಾಂಕಿನಿಂದ ಹಣ ತರುವುದು, ಭ್ರಷ್ಟರನ್ನ ಹಿಡಿದು ಮಟ್ಟಹಾಕುತ್ತೇವೆ ಎಂದು ಹೇಳಲ್ಪಡವುದು ಸಧ್ಯಕ್ಕೆ ಹಾಸ್ಯಾಸ್ಪದವೇ ಆಗಿದೆ. ಸ್ವತ: ಅಣ್ಣಾ ಹಜಾರೆ ಹೇಳುವಂತೆ ಇನ್ನು ಹತ್ತು ವರ್ಷಗಳಲ್ಲಷ್ಟೇ ಇದರ ಪರಿಣಾಮವನ್ನು ನಿರಿಕ್ಷಿಸಬಹುದು.
ಅಣ್ಣಾ ಹಜಾರೆ ಜನಲೋಕಪಾಲ್ ಮಸೂದೆಯಲ್ಲಿ ಸಂಸತ್ ಮೀರಿದ ಮತ್ತು ಪ್ರಧಾನ ಮಂತ್ರಿ,ನ್ಯಾಯಾಧೀಶರನ್ನು ಹದ್ದುಬಸ್ತಿನಲ್ಲಿಡುವ ಸೂಪರ್ ಪವರ್ ಲೋಕಪಾಲಕ್ಕೆ ಬೇಕೆಂದು ಪಟ್ಟು ಹಿಡಿದದ್ದು ನಿಜ. ಇದು ತುಂಬಾ ಸೂಕ್ಷ್ಮ ವಿಚಾರವೂ ಹೌದು ಭಾರತದ ದೇಶ ಸಂವಿಧಾನಕ್ಕೆ ಜಾಗತಿಕವಾಗಿ ಅತ್ಯಂತ ಮಹತ್ವದ ಸ್ಥಾನವಿದೆ. ಸಂವಿಧಾನದ ಆಶಯದಂತೆ ರಚನೆಯಾಗುವ ನ್ಯಾಯಾಂಗ/ಕಾರ್ಯಾಂಗ/ಶಾಸಕಾಂಗ ಗಳ ಪೈಕಿ ಶಾಸಕಾಂಗ ಮತ್ತು ಕಾರ್ಯಾಂಗ ನೈತಿಕತೆ ಕಳೆದುಕೊಂಡಿವೆ ಜನಸಾಮಾನ್ಯರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿವೆ ಆದರೆ ನ್ಯಾಯಾಂಗ ಇನ್ನೂ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ. ಹೀಗಿರುವಾಗ ಲೋಕಪಾಲ ವ್ಯವಸ್ಥೆ ನ್ಯಾಯಾಂಗವನ್ನು ಆಳುವಂತಾಗಬಾರದಲ್ಲವೇ? ಅದೇ ರೀತಿ ಸಂವಿಧಾನದ ಆಶಯದಂತೆ ಸಂಸತ್ ನ ಮುಖ್ಯಸ್ಥನಾಗುವ ಪ್ರಧಾನಿ ಹೆಚ್ಚ ಶಕ್ತಿಶಾಲಿ. ಆ ಸ್ಥಾನಕ್ಕೆ ತನ್ನದೇ ಆದಂತಹ ಘನತೆ ಗೌರವಗಳಿವೆ ಮತ್ತು ರಿಯಾಯ್ತಿಗಳಿವೆ. ಹಾಗಾಗಿ ಪ್ರಧಾನಿಯನ್ನು ಸಹಾ ಲೋಕಪಾಲ ನಿಯಂತ್ರಿಸುವ ವ್ಯವಸ್ಥೆ ಸಂವಿಧಾನ ವಿರೋಧಿಯಾಗಿದೆಯಲ್ಲವೇ?
ಈಗಾಗಲೇ ದೇಶದಲ್ಲಿ ನಡೆದಿರುವ 2ಜಿ ಸ್ಪೆಕ್ಟ್ರಂ ಹಗರಣ, ಕಾಮನ್ ವೆಲ್ತ್ ಗೇಮ್ ಹಗರಣದ ಕೇಂದ್ರ ಬಿಂದುವಾಗಿ ಪ್ರಧಾನ ಮಂತ್ರಿಯವರನ್ನ ನೋಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಸಿಎಜಿ ನೇರ ವರದಿಯನ್ನು ನೀಡಿವೆ ಅಂದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾನೂನು ಅವರಿಗೂ ಅನ್ವಯವಾಗಬೇಕಲ್ಲವೇ ಎಂಬ ಪ್ರಶ್ನೆ ಎದುರಾಗಬಹುದು ಆದರೆ ಪ್ರಧಾನಿಗೆ ಅತಿ ದೊಡ್ಡ ಹೊಣೆಗಾರಿಕೆಯಿದೆ ತನ್ನ ಕರ್ತವ್ಯವನ್ನು ನೋಡಿಕೊಳ್ಳಲು ಅನೇಕ ಮಂದಿ ಮಂತ್ರಿ ಮಾಗಧರು ಇರುತ್ತಾರೆ, ಐಎಎಸ್ ಅಧಿಕಾರಿಗಳಿರುತ್ತಾರೆ ಅವರು ಪ್ರಧಾನಿಗೆ ಆಗುಹೋಗುಗಳನ್ನು ಮನವರಿಕೆ ಮಾಡುವ, ದುರ್ವಿನಿಯೋಗವಾಗದಂತೆ ಹದ್ದಿನ ಕಣ್ಣಿಡುವ ವ್ಯವಸ್ಥೆಯನ್ನು ಮಾಡಬಹುದಲ್ಲವೇ ? ಇವುಗಳನ್ನು ನಿಯಂತ್ರಿಸಲು ಪ್ರಧಾನಿ ಅಸಮರ್ಥನಾದಾಗ ಆತ ರಾಜೀನಾಮೆ ಕೊಡಬಹುದು ಆಗ ಆತನ ಮೇಲೆ ಲೋಕಪಾಲ ಮಸೂದೆಯನ್ವಯ ಕ್ರಮ ಜರುಗಿಸಲು ಅವಕಾಶವಿದೆ. ಆದರೆ ಈ ವಿಚಾರದಲ್ಲಿ ಅಣ್ಣಾ ಕೊಂಚ ಬಿಗಿಪಟ್ಟು ಹಿಡಿದ ಮಾತ್ರಕ್ಕೆ ಹಿರಿಯ ಜೀವವನ್ನು ವಿನಾ ಕಾರಣ ಜರಿದು ಅಪಮಾನಿಸುವುದು ಸರಿಯೇ? ಸದರಿ ವಿಚಾರಗಳಲ್ಲಿ ಆಡಳಿತ ಪಕ್ಷವಿರಲಿ ವಿರೋಧ ಪಕ್ಷಗಳು ಕೂಡಾ ಅಣ್ಣಾ ಮನವಿಗೆ ಸ್ಪಂದಿಸಿಲ್ಲ ಮತ್ತು ಅಣ್ಣಾ ಕೂಡ ಸದರಿ ನಿಲುವಿನಿಂದ ಹಿಂದೆ ಸರಿದಿದ್ದಾರೆ ಹೀಗಿರುವಾಗ ಅವರನ್ನ ದೂಷಣೆ ಮಾಡುವುದು ಸರಿಯಲ್ಲ.
ಇನ್ನು ಹೋರಾಟ ವೀರರ ಕಥೆ. ನೈತಿಕತೆಯ ಚಳುವಳಿಯ ಬೆಂಬಲಕ್ಕೆ ಬಂದ ಅನೇಕ ರಾಜಕೀಯ ಪಕ್ಷಗಳು, ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಶ್ರೀ ಸಾಮಾನ್ಯರಲ್ಲಿ ಬಹುತೇಕರಿಗೆ ಚಳುವಳಿಯ ಆಶಯಗಳೇ ತಿಳಿಯದೇ ಹೋದುದು ದುರಂತದ ಸಂಗತಿ. ವಿದ್ಯಾರ್ಥಿಗಳ ಚಳುವಳಿಯಲ್ಲಿ ಗಾಂಭೀರ್ಯತೆ ಕಾಣಲಿಲ್ಲ ಜೋಶ್ ಎಂಬಂತೆ ಪ್ರತಿಬಿಂಬಿತವಾಯಿತು.ಕೆಲವು ಸಂಘಟನೆಗಳು ಪ್ರಚಾರದ ಸಲುವಾಗಿ ಬಂದು ಹೋದವು, ಬುದ್ದಿಜೀವಿಗಳೆನಿಸಿಕೊಂಡವರು ಕೆಲವರು ತಮ್ಮದೇ ಧಾಟಿಯಲ್ಲಿ ಬುದ್ದಿಹೀನರಂತೆ ಹೇಳಿಕೆ ನೀಡಿದರು.ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರ ಬೀಳಿಸಲು ಪ್ರತಿಭಟನೆಗೆ ಬಂದರು. ಎಲ್ಲಕ್ಕಿಂತ ಮುಖ್ಯವಾಗಿ ವ್ಯವಸ್ಥೆಯ ಭ್ರಷ್ಟರು ಸಾಮೂಹಿಕ ನೆಲೆಗಟ್ಟಿನಲ್ಲಿ ಅಣ್ಣಾ ಗೆ ಜೈ ಎಂದದ್ದು ವಿಷಾಧವಲ್ಲದೇ ಮತ್ತೇನು.? ಜೆಪಿ ಚಳುವಳಿ ನಡೆದಾಗ ಅದರಲ್ಲಿದ್ದ ಬುದ್ದಿ ಜೀವಿಗಳು ಮತ್ತು ಮುತ್ಸದ್ದಿಗಳಂತಹವರು ಅಣ್ಣಾ ಹೋರಾಟದಲ್ಲಿ ಕಾರಬರಲಿಲ್ಲ ಆದರು ದೇಶದಲ್ಲಿ ರಕ್ತ ರಹಿತ ಕ್ರಾಂತಿಗೆ ಮತ್ತು ಗಾಂಧಿವಾದಕ್ಕೆ ಅಂತಿಮ ಜಯ ದೊರೆಯಿತಲ್ಲ ಎಂಬುದಷ್ಟೇ ಸಮಾಧಾನಕರ ಸಂಗತಿಯಲ್ಲವೇ?