Sunday, September 12, 2010

ಬೇಕಾಗಿದೆ ಮೌಲ್ಯಾಧಾರಿತ ರಾಜಕಾರಣ..!

ಬಿಜೆಪಿ ಸರ್ಕಾರ ಮತ್ತೊಮ್ಮೆ ಮುಜುಗುರಕ್ಕೆ ಸಿಲುಕಿದೆ, ಮತ್ತು ಇದು ಹೊಸತೇನೂ ಅಲ್ಲ ಬಿಡಿ. ಪರಮ ಭ್ರಷ್ಟಾಚಾರ ಬಯಲಾಗುತ್ತಿದ್ದಂತೆ ಅನಿವಾರ್ಯವಾಗಿ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ರಾಜೀನಾಮೆ ನೀಡಿದ್ದಾರೆ.ಬಿಜೆಪಿ ಸರ್ಕಾರದಲ್ಲಿ ಇದು ಮೂರನೆಯ ರಾಜೀನಾಮೆ. ಮೊದಲನೆಯವರು ಮುಜುರಾಯಿ ಖಾತೆ ಸಚಿವ ಕೃಷ್ಣಶೆಟ್ಟಿ, ಎರಡನೆಯವರು ಸಮಾಜ ಕಲ್ಯಾಣ ಇಲಾಖೆ ಸಚಿವ ಡಿ ಸುಧಾಕರ್ ಮೂರನೆಯವರು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಪದೇ ಪದೇ ಇಂತಹ ಅವಸ್ಥೆಗೆ ಗುರಿಯಾದ ಸರ್ಕಾರವೆಂದರೆ ಸಧ್ಯದ ಬಿಜೆಪಿ ಸರ್ಕಾರ.ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 3ವರ್ಷಗಳಷ್ಟೇ ಕಳೆದಿದೆ ಈ ಅವಧಿಯಲ್ಲಿ ಇಷ್ಟೆಲ್ಲ ಅಸಹ್ಯಗಳು ಬೇಕಿತ್ತಾ?
ಒಂದರೆಕ್ಷಣ ನೆನಪಿಸಿಕೊಳ್ಳಿ ಪಕ್ಷ ಅಧಿಕಾರಕ್ಕೆ ಬಂದ ಆರಂಭದಲ್ಲೇ ಹೊನ್ನಾಳಿ ಶಾಸಕ ರೇಣುಕಾಚಾರ್ಯ ನರ್ಸು ಜಯಲಕ್ಷ್ಮಿ ಜೊತೆ ಚಕ್ಕಂದ ಆಡಿದ ವಿವರಗಳು ಬಹಿರಂಗಕ್ಕೆ ಬಂದಿದ್ದು, ದಾವಣಗೆರೆಯಲ್ಲಿ ಪುಂಡಾಟಿಕೆ ತೋರಿಸಲು ಹೋಗಿ ಎಸ್ಪಿ ಸೋನಿಯಾ ನಾರಂಗ್ ರಿಂದ ಅಂಡಿನ ಮೇಲೆ ರೇಣುಕಾಚಾರ್ಯ ಒದೆ ತಿಂದದ್ದು, ರೆಡ್ಡಿಗಳನ್ನು ನಿರ್ಲಕ್ಷಿಸಿದರೆಂಬ ಆರೋಪ ಹೊತ್ತ ಸಿಎಂ ಯಡಿಯೂರಪ್ಪ ಅಧಿಕಾರ ಹೋಯಿತು ಎನ್ನುವಷ್ಟರಲ್ಲಿ ಸ್ವಾಭಿಮಾನವನ್ನು ಗಾಳಿಗೆ ತೂರಿ ಸಿಎಂ ಗದ್ದುಗೆ ಉಳಿಸಿಕೊಂಡದ್ದು, ಕೆಜಿಎಫ್ ನ ಶಾಸಕ ಸಂಪಂಗಿಯ ಭ್ರಷ್ಟಾಚಾರದಿಂದ ಲೋಕಾಯುಕ್ತ ಬಲೆಗೆ ಸಿಲುಕಿದ್ದು, ಮುಜುರಾಯಿ ಖಾತೆಯ ಸಚಿವರಾಗಿದ್ದ ಕೃಷ್ಣಶೆಟ್ಟಿ ಸರ್ಕಾರ ಸ್ವಾಧಿನಕ್ಕೆ ತೆಗೆದುಕೊಂಡ ನೂರಾರು ಎಕರೆ ಕೃಷಿ ಭೂಮಿಗೆ ಸರ್ಕಾರದಲ್ಲಿ ಅಧಿಕ ವೆಚ್ಚ ತೋರಿಸಿ ರೈತರಿಗೆ ಕಡಿಮೆ ಬೆಲೆ ನೀಡಿ ವಂಚಿಸಿದ್ದು, ಪ್ರತಿಫಲವಾಗಿ ರಾಜೀನಾಮೆ,ಶಾಸಕ ಹರತಾಳು ಹಾಲಪ್ಪ ಅತ್ಯಾಚಾರ ಕಾಂಡದಲ್ಲಿ ಸಿಲುಕಿದ್ದು,ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ನಿಗಮದ ಅಧ್ಯಕ್ಷೆ ಚಿತ್ರ ನಟಿ ಶೃತಿಯ ಖಾಸಗಿ ಬದುಕಿನ ರಂಪಾಟ ಬಹಿರಂಗವಾಗಿದ್ದು, ನರ್ಸು ಜಯಲಕ್ಷ್ಮಿ ಸರ್ಕಾರದಲ್ಲಿ ಸಚಿವನಾಗಿರುವ ರೇಣುಕಾಚಾರ್ಯನ ಖಾಸಗಿ ಬದುಕನ್ನು ಹಾದಿರಂಪ ಬೀದಿರಂಪ ಮಾಡಿ ಕೋರ್ಟು ಮೆಟ್ಟಿಲು ಹತ್ತಿಸಿದ್ದು, ವಿಧಾನ ಸಭೆಯಲ್ಲಿ ರೆಡ್ಡಿ ಸಹೋದರರ ವಾಗ್ದಾಳಿಯಿಂದ ಪ್ರತಿಪಕ್ಷಗಳು ಧರಣಿ ನಡೆಸಿ ಪಾದಯಾತ್ರೆ ಮಾಡಿದ್ದು, ಬೇಲೇಕೇರಿ ಬಂದರಿನ ಅದಿರು ನಾಪತ್ತೆಯಾಗಿದ್ದು, ಲೋಕಾಯುಕ್ತರು ಹೆಚ್ಚಿನ ಅಧಿಕಾರಕ್ಕೆ ಆಗ್ರಹಿಸಿ ರಾಜೀನಾಮೆ ನೀಡಿದ್ದು, ಮೈಸೂರು ವಿವಿ ಭ್ರಷ್ಟಾಚಾರ ಕುರಿತು ಸರ್ಕಾರದ ಎಡಬಿಡಂಗಿ ದೋರಣೆ, ರಾಜ್ಯಪಾಲರ ಅಸಹಾಯಕ ಹೇಳಿಕೆ, ಪ್ರತಿ ಪಕ್ಷದವರ ಮಾತಿನ ವಿರುದ್ದ ಆಡಳಿತ ಪಕ್ಷದವರ ಕ್ರಿಮಿನಲ್ ಹೇಳಿಕೆಗಳು, ಬಿಕ್ಷುಕರ ಪುನರ್ವಸತಿ ಕೇಂದ್ರದ ಅಕ್ರಮ-ಅವ್ಯವಸ್ಥೆ, ಹೊಣೆಹೊತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಸುಧಾಕರ್ ರಾಜೀನಾಮೆ, ಹಾಸನ-ಮೈಸೂರು ವೈದ್ಯಕೀಯ ಮಹಾವಿದ್ಯಾಲಯಗಳ ಸಿಬ್ಬಂದಿ ನೇಮಕಾತಿಯ ಅಕ್ರಮ-ಭ್ರಷ್ಟಾಚಾರ, ನೇಮಕಾತಿ ರದ್ದು, ಹೈಕೋರ್ಟಿನಿಂದ ಸಚಿವರಿಗೆ ಛೀಮಾರಿ, ಅಂತಿಮವಾಗಿ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಮಚಂದ್ರಗೌಡ ರಾಜೀನಾಮೆ ಹೀಗೆ ಹೇಳುತ್ತಾ ಹೋದರೆ ಒಂದೇ ಎರಡೇ?
ಯಾವುದೇ ಸರ್ಕಾರಕ್ಕೆ ಒಂದು ಅಭಿವೃದ್ದಿಯ ಬದ್ದತೆ ಬೇಕು , ಬದ್ದತೆ ಜೊತೆಗೆ ನೈತಿಕ ಮೌಲ್ಯಗಳು ಬೇಕು. ಚುನಾವಣೆಯಲ್ಲಿ ಗೆಲ್ಲುವವರೆಗೆ ಮಾತ್ರ ಪಕ್ಷ ರಾಜಕಾರಣ ಬೇಕು. ಗೆದ್ದ ಮೇಲೆ ಎಲ್ಲರನ್ನು ಸಲಹುವ ಆಡಳಿತ ಪಕ್ಷ ಆಗಬೇಕು, ಜನ ಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರವನ್ನು ಜಾಗೃತಾವಸ್ಥೆಯಲ್ಲಿರಿಸುವ ವಿರೋಧ ಪಕ್ಷವಾಗಬೇಕು. ಆದರೆ ಈಗ ಆಗುತ್ತಿರುವುದೆಲ್ಲವೂ ತದ್ವಿರುದ್ದ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಅಷ್ಟೂ ಪಕ್ಷಗಳಿಗೂ ವೈಯುಕ್ತಿಕ ಹಿತಾಸಕ್ತಿಗಳು ಮುಖ್ಯವಾಗಿದೆ, ಕಾಂಗ್ರೆಸ್ ಗೆ ರೆಡ್ಡಿಗಳನ್ನು ತೆಗೆಯುವ ಹುನ್ನಾರ ಬಿಟ್ಟರೆ ಬೇರೆ ವಿಚಾರಗಳಿಲ್ಲ, ಅದಕ್ಕಾಗಿ ವಿಧಾನಸಭೆ/ಪರಿಷತ್ ಅಧಿವೇಶನಗಳನ್ನು ಬಲಿಗೊಟ್ಟು ಧರಣಿ-ಪಾದಯಾತ್ರೆ ಮಾಡಿ ಮುಗುಮ್ಮಾಗಿ ಕುಳಿತಿದ್ದಾರೆ. ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ 70ಕೋಟಿ ದುಡ್ಡು ತಿಂದು ಅರಗಿಸಿಕೊಳ್ಳುತ್ತಿದ್ದಾರೆ, ಸಧ್ಯಕ್ಕೆ ಆ ಪ್ರಕರಣ ಮುಚ್ಚಿ ಹೋಗಿದೆ. ಜೆಡಿಎಸ್ ಪಾಳೆಯದಲ್ಲಿ ದೇವೇಗೌಡ 'ನೈಸ್' ವಿವಾದ ಕುರಿತು ತಲೆ ಕೆಡಿಸಿಕೊಂಡಿದ್ದರೆ, ಮಗ ಕುಮಾರಸ್ವಾಮಿ ರೆಡ್ಡಿಗಳನ್ನು ಹಣಿಯುವ ಕುರಿತು ಆಸಕ್ತಿ ತೋರುತ್ತಿದ್ದಾರೆ. ಈ ಪ್ರತಿ ಪಕ್ಷಗಳಿಗೆ ರಾಜ್ಯದ ಜನತೆಯ ಕಷ್ಟ ಸುಖಗಳು ಬೇಕಿಲ್ಲ, ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿ ಕೊಳ್ಳುವಲ್ಲಿ ನಿರತವಾಗಿವೆ ಮತ್ತು ಆ ಮೂಲಕ ರಾಜ್ಯದ ಜನರನ್ನ ವಂಚಿಸಿವೆ. ರಾಜ್ಯದಲ್ಲಿ ಆಡಳಿತ ಹದಗೆಟ್ಟಿದೆ, ಭ್ರಷ್ಟಾಚಾರ ಮೇರೆ ಮೀರಿದೆ. ಮೈಸೂರು ವಿವಿ ಮಾಜಿ ಕುಲಪತಿ ವಿರುದ್ದ ವ್ಯಾಪಕವಾದ ಭ್ರಷ್ಟಾಚಾರ ಆರೋಪ ಕೇಳಿ ಬಂದರೂ ಕ್ರಮತೆಗೆದು ಕೊಳ್ಳದೇ ಹೇಡಿತನ ಮೆರೆದಿದೆ ಸರ್ಕಾರ! ಆದರೆ ವೈದ್ಯಕೀಯ ಮಹಾವಿದ್ಯಾಲಯಗಳ ಭೋಧಕೇತರ ಸಿಬ್ಬಂದಿ ನೇಮಕಾತಿ ಅಕ್ರಮ ಕುರಿತು ಸಿಎಂ ಯಡಿಯೂರಪ್ಪ ದಿಟ್ಟತನ ಪ್ರದರ್ಶಿಸಿದ್ದಾರೆ. ಅತ್ತೂ ಕರೆದು ಸಂಪುಟ ದರ್ಜೆಯ ಭ್ರಷ್ಟ ಸಚಿವ ರಾಮಚಂದ್ರಗೌಡರಿಂದ ರಾಜೀನಾಮೆ ಕೊಡಿಸಲಾಗಿದೆ. ಹಾಸನ-ಮೈಸೂರು ವೈದ್ಯಕೀಯ ಕಾಲೇಜಿನ ಭೋಧಕೇತರ ಸಮಿತಿಯನ್ನು ಮಾತ್ರ ರದ್ದು ಪಡಿಸಿರುವ ಸರ್ಕಾರ ನೇಮಕಾತಿ ಸಮಿತಿಯ ವಿರುದ್ದವೂ ಕಠಿಣ ನಿಲುವು ಪ್ರಕಟಿಸ ಬೇಕಾಗಿದೆ. ಈ ವಿದ್ಯಾಲಯಗಳ ಭೋಧಕೇತರ ಸಿಬ್ಬಂದಿ ಮಾತ್ರವಲ್ಲ ಭೋಧಕ ಸಿಬ್ಬಂದಿ, ಪರಿಕರಗಳ ಖರೀದಿಯಲ್ಲೂ ಅಕ್ರಮ ನಡೆದಿರುವ ಸಾಧ್ಯತೆಗಳಿವೆ,ಅವು ಕೂಡ ಸಮಗ್ರ ತನಿಖೆಯಿಂದ ಬಯಲಿಗೆ ಬರಬೇಕಿದೆ. ಲೆಕ್ಕಪತ್ರವಿಲ್ಲದಂತೆ ಕಾನೂನುಗಳನ್ನು ಗಾಳಿಗೆ ತೂರಿ ಹಲವು ಇಂಜಿನಿಯರಿಂಗ್ ಕಾಲೇಜುಗಳು, ನರ್ಸಿಂಗ್ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಔದ್ಯೋಗೀಕರಣದ ನೆಪದಲ್ಲಿ ರೈತರ ಕೃಷಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಉದ್ಯಮಿಗಳಿಗೆ ನೀಡಲಾಗಿದೆ, ಅಭಿವೃದ್ದಿಯ ವಿಚಾರದಲ್ಲಿ ವಿವಿಧ ಜಿಲ್ಲೆಗಳಿಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಕಳ್ಳರು, ಸುಳ್ಳರು, ವಂಚಕರು, ಅತ್ಯಾಚಾರಿಗಳು, ವ್ಯಭಿಚಾರಿಗಳಿಗೆ ಆಢಳಿತ-ವಿಪಕ್ಷದಲ್ಲಿ ಆದ್ಯತೆ ನೀಡಲಾಗಿದೆ. ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಮನೆ ಕಟ್ಟಿ ಕೊಡುತ್ತೇನೆಂದು ಹೇಳಿ 1 1/2 ವರ್ಷವಾಗಿದೆ, ಅವರಿಗೆ ತಲೆಯ ಮೇಲೊಂದು ಸೂರು ಕಲ್ಪಿಸಲಾಗಿಲ್ಲ! ಐಎಎಸ್-ಐಪಿಎಸ್-ಕೆಎಎಸ್ ಅಧಿಕಾರಿಗಳ ವರ್ಗಾವಣೆಗೆ ಕಡಿವಾಣ ಬಿದ್ದಿಲ್ಲ, ಹೇಳಿ ಇದನ್ನೆಲ್ಲಾ ನಿಬಾಯಿಸಲು ಸಾಧ್ಯವಿಲ್ಲದ ಆಡಳಿತ ಪಕ್ಷಗಳು-ವಿಪಕ್ಷಗಳು ಬೇಕಾ? ರಾಜಕಾರಣದಲ್ಲಿ ಮೌಲ್ಯವಿಲ್ಲದಿದ್ದರೆ ಆಗೋದೆ ಹೀಗೆ ಸ್ವಾಮಿ. ಕಳೆದ 5-6 ದಶಕಗಳಲ್ಲಿ ಅದೆಷ್ಟೋ ರಾಜಕೀಯ ಪಕ್ಷಗಳು ಸರ್ಕಾರ ನಡೆಸಿವೆ, ವಿರೋಧ ಪಕ್ಷಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಿವೆ ಆದರೆ ಈ ಮೂರು ವರ್ಷದಲ್ಲಿ ರಾಜಕೀಯ ಪಕ್ಷಗಳ ಆದ್ಯತೆ-ಬದ್ದತೆ ಮಾತ್ರ ಸಂಪೂರ್ಣವಾಗಿ ಜನವಿರೋಧಿ ಧೋರಣೆಯವೇ ಆಗಿವೆ. ಸ್ವಾರ್ಥ ರಾಜಕಾರಣ ಪ್ರಧಾನ ಪಾತ್ರ ವಹಿಸಿದೆ, ಮೌಲ್ಯಾಧಾರಿತ ರಾಜಕಾರಣ ಕಳೆದು ಹೋಗಿದೆ ಪ್ರಜಾ ತಾಂತ್ರಿಕ ವ್ಯವಸ್ಥೆಯ ಸುಲಲಿತ ಮುನ್ನಡೆಗೆ ನೈತಿಕತೆಯ ರಾಜಕಾರಣವಿಲ್ಲದಿದ್ದರೆ ಅದು ವ್ಯವಸ್ಥೆಯ ಅಧ:ಪತನಕ್ಕೆ ಕಾರಣವಾಗುತ್ತದೆ. ಅರಾಜಕತೆ ಜನರ ಶಾಂತಿ ನೆಮ್ಮದಿಯನ್ನು ಹಾಳು ಮಾಡುತ್ತದೆ ಆದ್ದರಿಂದ ನಮ್ಮ ರಾಜಕಾರಣಿಗಳು ಎಚ್ಚೆತ್ತು ಕೊಳ್ಳದಿದ್ದರೆ ಜನ ಪಾಠ ಕಲಿಸುತ್ತಾರೆ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...