'ಸುಮ್ಮನಿರಲಾರದವ ಇರುವೆ ಬಿಟ್ಕೊಂಡ' ಅಂತ ಕನ್ನಡದಲ್ಲಿ ಒಂದು ಗಾದೆ ಮಾತಿದೆ. ಅದು ದೇಶದ ವಿದೇಶಾಂಗ ಖಾತೆ ರಾಜ್ಯ ಸಚಿವ ಶಶಿಥರೂರನ ವಿಚಾರದಲ್ಲಿ ನಿಜವಾಗಿ ಬಿಟ್ಟಿದೆ. ದೊಡ್ಡವರ ಸಣ್ಣತನವೂ, ಹುಡುಗಾಟಿಕೆಯೂ ಸಾರ್ವಜನಿಕವಾದಾಗ ಅದು ಅಸಹ್ಯವಾಗಿ ಬಿಡುತ್ತೆ. ಈ ಶಶಿಥರೂರ್ ಆಗಬಾರದ ಕಾರಣಗಳಿಗೆ ಸುದ್ದಿ ಆಗುತ್ತಿರುವುದು ಇದೇ ಮೊದಲೇನಲ್ಲ. ಈತ ಬೆಳೆದು ಬಂದ ಹಿನ್ನೆಲೆ ವಹಿಸಿಕೊಂಡು ನಿರ್ವಹಿಸಿದ ಹೊಣೆಗಾರಿಕೆಗಳನ್ನು ಗಮನಿಸಿದಾಗ ಇಂಥಹದ್ದೆಲ್ಲಾ ಬೇಕಿತ್ತಾ ಈತನಿಗೆ ಅನಿಸದಿರದು. ಭಾರತದಂತಹ ಸದ್ಘೃಹಸ್ಥ ರಾಷ್ಟ್ರಗಳಲ್ಲಿ ಇಂತಹ ಕಿರಿಕಿರಿಗಳನ್ನು ಸಹಿಸುವುದು ಕಷ್ಟ. ಇರಲಿ ಈ ಶಶಿ ಥರೂರು ಯಾರು? ಈತನ ಹಿನ್ನೆಲೆ ಏನು? ಯಾಕೆ ವಿವಾದಗಳು ಈತನ ಬೆಂಬತ್ತಿವೆ? ಇದು ಸಮಾಜದ ಮೇಲೆ ಎಂತಹ ಪರಿಣಾಮ ಬೀರುತ್ತೆ ಅನ್ನೋದನ್ನು ನೋಡೋಣ.
ಕೇಂದ್ರ ಸಚಿವ,ಪತ್ರಕರ್ತ,ಅಂಕಣಕಾರ, ಮಾನವ ಹಕ್ಕುಗಳ ಹೋರಾಟಗಾರ,ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಸ್ಥಾನದ ಡಿಫೀಟೆಡ್ ಕ್ಯಾಂಡಿಡೇಟು,ಲೇಖಕ, ಅಂತರ ರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಸಲಹೆಗಾರ, ವಿಶ್ವ ಸಂಸ್ಥೆಯ ಸೆಕ್ರೆಟರಿ ಜನರಲ್, ಹಲವಾರು ಸಂಘ ಸಂಸ್ಥೆಗಳಿಗೆ ಟ್ರಸ್ಟಿ ಹೀಗೆ ಇನ್ನೂ ಏನೇನೊ ಉನ್ನತ ಹುದ್ದೆಗಳನ್ನು ನಿರ್ವಹಿಸುತ್ತಾ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು ಈ ಶಶಿಥರೂರ್. ಇಂತಹ ಶಶಿಥರೂರು ಹುಟ್ಟಿದ್ದು ಲಂಡನ್ ನಲ್ಲಿ. ಕೇರಳದ ಪಾಲಕ್ಕಾಡ್ ನ ನಾಯರ್ ಕುಟುಂಬದ ಶಶಿಥರೂರ್ ರ ತಂದೆ ಥರೂರು ಚಂದ್ರಶೇಖರ್ ನಾಯರ್, ತಾಯಿ ಸುಲೇಖ ಮೆನನ್. ಮುಂಬೈನ ಮಾಂಟ್ ಫರ್ಡ್ ಸ್ಕೂಲ್ ನಲ್ಲಿ ಪ್ರಾಥಮಿಕ ವಿದ್ಯಬ್ಯಾಸ ಮಾಡಿದ ಥರೂರ್ ಕಲ್ಕತ್ತಾದ ಸೇಂಟ್ ಕ್ಷೇವಿಯರ್ ಹೈಸ್ಕೂಲ್ ನಲ್ಲಿ ಓದು ಮುಂದುವರೆಸಿದರು. ದೆಹಲಿಯ ಸ್ಟೀಫನ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಬಿಎ ಪದವಿ, ಮುಂದೆ ಫ್ಲೆಚರ್ ಸ್ಕೂಲ್ ಆಫ್ ಲಾನಲ್ಲಿ ಸ್ಕಾಲರ್ ಶಿಪ್ ಪಡೆದು ಕಾನೂನು ಹಾಗೂ ಅಂತರ ರಾಷ್ಟ್ರೀಯ ಸಂಬಂದಗಳಿಗೆ ಸಂಬಂದಿಸಿದಂತೆ ಎರಡೆರೆಡು ಸ್ನಾತಕ ಪದವಿ, ನಂತರ ಕೇವಲ 22ನೇ ವಯಸ್ಸಿಗೆ ಅದೇ ವಿಷಯದಲ್ಲಿ ಪಿಎಚ್ ಡಿ ಮಾಡಿದ ಹೆಗ್ಗಳಿಕೆ ಈತನದ್ದು.
ಕಾಲೇಜು ದಿನಗಳಲ್ಲಿ ತನ್ನ ಬುದ್ದಿವಂತಿಕೆ ಹಾಗೂ ಪಠ್ಯೇತರ ಚಟುವಟಿಕೆಗಳಿಂದ ಅತ್ಯಂತ ಜನಪ್ರಿಯ ನಾಗಿದ್ದ ಶಶಿಥರೂರು ಉತ್ತಮ ರಂಗನಟ. 70ರ ದಶಕದಲ್ಲಿ ಮೀರಾ ನಾಯರ್ ನಿರ್ದೇಶಿಸುತ್ತಿದ್ದ 'ಆಂಟೋನಿ ಕ್ಲಿಯೋಪಾತ್ರ' ನಾಟಕದಲ್ಲಿ ನಟಿಸಿ ಯಶಸ್ವಿ ನಟರೂ ಆಗಿದ್ದರು. ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಮಿಂಚಿದ್ದ ಶಶಿಥರೂರು ಮುಂದೆ 1978ರಲ್ಲಿ ವಿಶ್ವಸಂಸ್ಥೆಯ ಸೇವೆಗೆ ಸೇರ್ಪಡೆಯಾದರು. ವಿಶ್ವಸಂಸ್ಥೆಯ ನಿರಾಶ್ರೀತರ ಪುನರ್ವಸತಿ ಹೈ ಕಮಿಷನರ್ ಆಗಿ ಸಿಂಗಾಪುರ್ ನಲ್ಲಿ ಕರ್ತವ್ಯ ನಿರ್ವಹಿಸಿ ಶಹಬ್ಬಾಸ್ ಗಿರಿ ಪಡೆದರು.ಆಗ ಇವರ ವಯಸ್ಸು ಕೇವಲ 25! ಹೀಗೆ ವೃತ್ತಿಯಲ್ಲಿ ಯಶಸ್ಸು ಸಾಧಿಸಿ ಮೇಲೆರುತ್ತ ವಿಶ್ವಸಂಸ್ಥೆಯ ಕಾರ್ಯದರ್ಶಿಯ ಮಾದ್ಯಮ ನಿರ್ದೇಶಕರಾಗಿ ನೇಮಕಗೊಂಡರು.2007ರಲ್ಲಿ Under Secretary General ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದಕ್ಕೂ ಮುನ್ನ 2006ರಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ನಿವೃತ್ತರಾಗುವಾಗ ಆ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೊಟ್ಟ ಮೊದಲ ಭಾರತೀಯನಾಗಿ ಅಭ್ಯರ್ಥಿಯಾದವರು ಇದೇ ಶಶಿಥರೂರು. ಇವರೊಂದಿಗೆ ಸ್ಪರ್ಧಿಸಿದ್ದ 7ಜನ ಅಭ್ಯರ್ಥಿಗಳಲ್ಲಿ ಕಡೆಯ ಕ್ಷಣದ ವರೆಗೂ ಉಳಿದು ಸೆಣಸಿದ ಥರೂರು ಭಾರತೀಯರ ಹೆಮ್ಮೆಯ ಪ್ರತೀಕವಾಗಿದ್ದರು.
ಇಂತಹ ಶಶಿಥರೂರು ವಿಶ್ವಸಂಸ್ಥೆಯ ಕೆಲಸ ತ್ಯಜಿಸಿದ ಮೇಲೆ ಭಾರತದಲ್ಲಿ ನಡೆಯುತ್ತಿದ್ದ ಲೋಕಸಭಾ ಚುನಾವಣೆಗೆ ಕೇರಳದ ತಿರುವನಂತ ಪುರಂನಿಂದ ಸ್ಪರ್ಧಿಸಿದರು. ಕಣದಲ್ಲಿದ್ದ ಘಟಾನುಘಟಿ ಸ್ಪರ್ಧಿಗಳೆದುರು ಸೆಣಸಿದ ಆತ ಬರೋಬ್ಬರಿ 1ಲಕ್ಷ ಮತಗಳ ಅಂತರದಿಂದ ದಾಖಲೆಯ ಗೆಲುವನ್ನು ದಾಖಲಿಸಿದರು. ಇದು ಕೇರಳದ 30ವರ್ಷಗಳ ರಾಜಕೀಯ ದಾಖಲೆಗಳಲ್ಲಿ ಇತಿಹಾಸವೆನಿಸಿದೆ. ಈ ಎಲ್ಲಾ ಸಾಧನೆಗಳ ಹಿನ್ನೆಲೆಯಲ್ಲಿ ಕೇಂದ್ರ ಮನಮೋಹನ ಸಿಂಗರ ಸರ್ಕಾರದಲ್ಲಿ ಶಶಿಥರೂರು ವಿದೇಶಾಂಗ ಖಾತೆಯ ರಾಜ್ಯ ಸಚಿವರಾಗಿ ಬಿಟ್ಟರು. ಈತ ಮೊದಲು ವಿವಾದಕ್ಕೆ ಸಿಲುಕಿದ್ದು ಭಾರತವು ಇಸ್ರೇಲ್ ಕುರಿತು ಹೊಂದಿರುವ ಧೋರಣೆಗಳ ಕುರಿತ ಹೇಳಿಕೆ ಮೂಲಕ. ಎಸ್ ಎಂ ಕೃಷ್ಣ ಹಾಗೂ ಶಶೀಥರೂರು ಮಂತ್ರಿಯಾದ ಮೇಲೂ ಅಧಿಕೃತ ನಿವಾಸಗಳಿಗೆ ತೆರಳದೆ ಪಂಚತಾರ ಹೋಟೆಲುಗಳಲ್ಲಿ ವಾಸ್ತವ್ಯ ಹೂಡಿ ಸರ್ಕಾರಿ ಹಣ ದುರ್ಬಳಕೆ ಮಾಡಿಕೊಂಡದ್ದು ದೊಡ್ಡ ಸುದ್ದಿಯಾಯ್ತು, ಆಗ ಶಶಿಥರೂರ್ ತನ್ನ ಸ್ವಂತ ಪಾಕೆಟ್ ನಿಂದ ಹೋಟೆಲ್ ವೆಚ್ಚ ಭರಿಸಿರುವುದಾಗಿ ಹೇಳಿದ್ದರು,ಜಾಗತಿಕ ಹಿಂಜರಿತದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಿಗು ನಿಲುವುಗಳನ್ನು ಪ್ರಕಟಿಸಿದಾಗ ಮೊದಲ ದರ್ಜೆಯ ರೈಲು ಪ್ರಯಾಣ ಸಚಿವರುಗಳಿಗೆ ಸಂಸದರುಗಳಿಗೆ ತಪ್ಪಿಹೋಗಿತ್ತು , ಸಾಮಾನ್ಯದರ್ಜೆಯ ಭೋಗಿಗಳಲ್ಲಿ ಪ್ರಯಾಣಿಸುವ ಸಂಧರ್ಭ ಬಂದಾಗ ಇದು ದನಗಳ ಕೊಟ್ಟಿಗೆಯಂತಿದೆ ಎಂದು ನೀಡಿದ ಹೇಳಿಕೆ ಕೇಂದ್ರಸರ್ಕಾರಕ್ಕೆ ಮುಜುಗುರ ಉಂಟುಮಾಡಿತ್ತು.ಮುಂಬೈ ನ 26/11ರ ದುರ್ಘಟನೆಗೆ ಸಂಬಂಧಿಸಿದಂತೆ ಡೇವಿಡ್ ಹೆಡ್ಲಿ ಯನ್ನು ಅಮೇರಿಕಾದಲ್ಲಿ ಬಂಧಿಸಿದಾಗ ವಿದೇಶಾಂಗ ಖಾತೆಯ ಸಂಪುಟ ದರ್ಜೆ ಸಚಿವ ಕೃಷ್ಣರಿಗಿಂತ ಮೊದಲೇ ಹೇಳಿಕೆ ನೀಡಿ ಮುಜುಗುರಕ್ಕೀಡು ಮಾಡಿದ್ದು ಇದೇ ಶಶಿಥರೂರು. ಇದೀಗ ಕೊಚ್ಚಿನ್ ಐಪಿಎಲ್ ಕ್ರಿಕೆಟ್ ಟೀಂ ಹರಾಜಿಗೆ ಸಂಬಂದಿಸಿದಂತೆ ಸುನಂದ ಪುಷ್ಖರ್ ಎಂಬುವವರ ಮೂಲಕ ತನ್ನ ಪ್ರಭಾವ ಬಳಸಿ ಹಣ ಹೂಡಿದ್ದಾರೆಂದು ಲಲಿತ್ ಮೋದಿ ನೀಡಿದ ಹೇಳಿಕೆಯಿಂದ ಮತ್ತೆ ಶಶಿಥರೂರು ವಿವಾದಕ್ಕೆ ಈಡಾಗಿದ್ದಾರೆ. ಶಶೀಥರೂರು ಈಗ 45ರ ಹೊಸ್ತಿಲಲ್ಲಿದ್ದಾರೆ2ನೇ ಪತ್ನಿಯ ಮಕ್ಕಳು ಉನ್ನತ ಹುದ್ದೆಗಳಲ್ಲಿದ್ದಾರೆ. ಹೀಗಿರುವಾಗ ಶಶಿಥರೂರು ಕಾಶ್ಮೀರ ಮೂಲಕ ಸುನಂದ ಪುಷ್ಖರ್ ಳ ಮೋಹಕ್ಕೆ ಸಿಲುಕಿ ಮತ್ತೆ ಅಸಹ್ಯವನ್ನು ಮಾಡಿಕೊಂಡಿದ್ದಾರೆ. ಪ್ರತಿ ಭಾರಿ ಎಡವಟ್ಟದಾಗಲೂ ಟ್ವಿಟ್ಟರ್ ನಂತಹ ಸಾಮಾಜಿಕ ಅಂತರ್ ಜಾಲ ತಾಣದ ಮೂಲಕ ತನ್ನ ವಿಚಾರವನ್ನು ಹರಿಯ ಬಿಡುತ್ತಿದ್ದ ಶಶಿಥರೂರು ಈಗ ತಲೆದಂಡ ಕೊಡಬೇಕಾದ ಸ್ಥಿತಿ ಬಂದಿದೆ.
ಅತ್ಯಂತ ಪ್ರಜ್ಞಾ ಪೂರ್ವಕವಾಗಿ ನಿಭಾಯಿಸ ಬೇಕಾದ ಮಹತ್ವದ ಮಂತ್ರಿ ಗಿರಿ ಇರುವಾಗ ತನ್ನ ಚೆಲ್ಲಾಟದ ವರ್ತನೆಗಳಿಂದ ಸಡಿಲವಾಗಿ ವರ್ತಿಸುತ್ತಿರುವ ಶಶಿಥರೂರು ಯಾವ ಜ್ಞಾನ, ಪದವಿ ಗಳಿಸಿದ್ದರೇನು ಸುಖ ಒಳ್ಳೆ ನಡತೆ ಇಲ್ಲದಿದ್ದ ಮೇಲೆ. ತನ್ನನ್ನು ಕೋಟ್ಯಾಂತರ ಜನ ಗಮನಿಸುತ್ತಿರುತ್ತಾರೆ, ನಾನು ಅವರ ಭಾವನೆಯ ಪ್ರತೀಕವಾಗಿದ್ದೇನೆ ಎಂಬ ಜವಾಬ್ದ್ದಾರಿಯೂ ಮರೆತು ಹೋದಾಗ ಇಂಥಹವೆಲ್ಲ ಜರುಗುತ್ತವೇನೋ. ಅದಕ್ಕೆ ಹೇಳಿದ್ದು ಓದಿ ಪದವಿ ಪಡೆದರೆ ಸಾಲದು,ಬದುಕಿಗೊಂದು ಸೈದ್ದಾಂತಿಕ ನೆಲಗಟ್ಟಿರಬೇಕು ಅದಿಲ್ಲದಿದ್ದರೆ ಇಂತಹ ನೂರಾರು ಶಶಿಥರೂರುಗಳು ಸೃಷ್ಟಿಯಾಗುತ್ತಾರೆ ನೆನಪಿರಲಿ, ಇದು ಸಮಾಜಕ್ಕೂ ಒಳ್ಳೆಯದಲ್ಲ.