Friday, November 16, 2012

'ಗಿರಿ'ಶಿಖರವೇರಿದ ಹಳ್ಳಿಹೈದ!



ಹೊಸನಗರ ಗಿರೀಶ್ ನಾಗರಾಜೇಗೌಡ ವಿಶ್ವ ಒಲಿಂಪಿಕ್ಸ್ ನ  ಕ್ರೀಡಾಪುಟಗಳ ಇತಿಹಾಸದಲ್ಲಿ ಸಾಧನೆಯ ಶಿಖರಕ್ಕೇರಿದ ನವಪೀಳಿಗೆಯ ತರುಣ,ಈಗ ಎಲ್ಲರಿಗೂ ಚಿರಪರಿಚಿತ ಹೆಸರು. ಪ್ಯಾರಾಲಿಂಪಿಕ್ಸ್ ಗೂ ಮುನ್ನ ಏಷ್ಯನ್ ಗೇಮ್ಸ್, ಸೇರಿದಂತೆ 4ಪ್ರಮುಖ ಕ್ರೀಡಕೂಟದಲ್ಲಿ ಪದಕದ ಸಾಧನೆಯನ್ನು ಮಾಡಿದ್ದರೂ ಅಪರಿಚಿತವಾಗಿಯೇ ಉಳಿದಿದ್ದ ಗಿರೀಶ ಆಗ ಅನುಭವಿಸಿದ ನೋವು ಸಂಕಟ, ಅಪಮಾನ ಆತನನ್ನು ಒಂದೇ ಒಂದು ಗೆಲುವಿಗಾಗಿ ಹಂಬಲಿಸುವಂತೆ ಮಾಡಿತ್ತು ಅದನ್ನು  ಪ್ಯಾರಾಲಿಂಪಿಕ್ಸ್ ಮೂಲಕ ದಕ್ಕಿಸಿಕೊಂಡ ಗಿರೀಶ್  ಇವತ್ತು ಗೆಲುವಿನ ಹೆಬ್ಬಾಗಿಲನ್ನು ದಾಟಿ ಜಗತ್ತಿಗೆ ತನ್ನ ಶ್ರೇಷ್ಠತೆಯ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾನೆ. ಅಷ್ಟರ ಮಟ್ಟಿಗೆ ಆತ ತನ್ನ ಹುಟ್ಟೂರಿಗೆ ಮತ್ತು ಭಾರತ ದೇಶಕ್ಕೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಯನ್ನು ತಂದಿದ್ದಾನೆ. ಗೆಲುವಿಗೆ ಮುನ್ನ ಆತ ಸಾಗಿ ಬಂದ ಹಾದಿ ಸುಲಭದ್ದೇನೂ ಆಗಿರಲಿಲ್ಲ, ಯಾವುದೇ ಸೌಲಭ್ಯಗಳಿಲ್ಲದೇ, ಗಾಡ್ ಫಾದರ್ ಗಳಿಲ್ಲದೇ ಆರ್ಥಿಕ ಸಂಕಷ್ಟದ ನಡುವೆಯೂ ಗಿರೀಶ ಬೆಳ್ಳಿ ಹುಡುಗನಾಗಿ ಬೆಳೆದು ನಿಂತ ಬಗೆ  ಹೇಗೆ ಗೊತ್ತೇ?

ಅರಕಲಗೂಡು ತಾಲೂಕಿನ ಗಡಿಭಾಗದಲ್ಲಿ ಬರುವ ಪುನರ್ವಸತಿ ಗ್ರಾಮ ಹೊಸನಗರದ ಕೃಷಿಕ ನಾಗರಾಜೇಗೌಡ ಹಾಗೂ ಜಯಮ್ಮ ದಂಪತಿಗಳ 2ನೆಯ ಪುತ್ರ ಗಿರೀಶ. ಹುಟ್ಟಿದ್ದು ಜನವರಿ 26, 1988ರ ಗಣರಾಜ್ಯೋತ್ಸವ ದಿನದಂದು. ಹೇಮಾವತಿ ನದಿ ಯೋಜನೆಯಲ್ಲಿ ಸಂತ್ರಸ್ತರಾದವರ ಪುನರ್ವಸತಿ ಗ್ರಾಮ ಹೊಸನಗರ ತಾಲೂಕಿನ ಕೊಡಗು ಗಡಿ ಭಾಗದಲ್ಲಿ ಈ ಗ್ರಾಮ ಇಂದಿಗೂ ಅಭಿವೃದ್ದಿಯಿಂದ ಮೂಲ ಸೌಕರ್ಯಗಳಿಂದ ದೂರ ದೂರ. ಗ್ರಾಮದಲ್ಲಿಯೇ ಇರುವ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಗಿರೀಶನ ಓದು ಆರಂಭ, ನಂತರ ಮರಿಯಾನಗರದಲ್ಲಿ ಅಧ್ಯಯನ ಮುಂದುವರಿಕೆ ಆ ಸಂಧರ್ಬದಲ್ಲಿ ನಡೆದ ಶಾಲಾ ಕ್ರೀಡಾಕೂಟವೊಂದರಲ್ಲಿ ಪಾಲ್ಗೊಳ್ಳಲು ಈತ ಅಂಗವಿಕಲನೆನ್ನುವ ಕಾರಣಕ್ಕೆ ತಿರಸ್ಕರಿಸಲಾಯಿತು. ಇದರಿಂದ ತೀವ್ರವಾಗಿ ಮನನೊಂದ ಎಳೆಯ ಗಿರೀಶನನ್ನ ಆದರಿಸಿ ಆಡಲು ಮೊದಲು ಅವಕಾಶ ನೀಡಿದ್ದು ಅದೇ ಶಾಲೆಯ ಮುಖ್ಯ ಶಿಕ್ಷಕಿ ಮೇರೀ ಟೀಚರ್. ಬೆಳ್ಳಿಯ ನಗೆ ಬೀರಿದಾಗ ಮೊದಲಿಗೆ ಗಿರೀಶ ನೆನೆದದ್ದು ಮೇರಿ ಟೀಚರ್ ಅನ್ನೇ. ಮುಂದೆ ಬನ್ನೂರು ಹೈಸ್ಕೂಲಿನಲ್ಲಿ ಕಲಿಯುವಾಗ ನಡೆಯುತ್ತಿದ್ದ ಶಾಲಾ ಕ್ರೀಡಾ ಕೂಟಗಳಲ್ಲಿ ಗಿರೀಶನಿಗೆ ಆಡುವ ಅವಕಾಶವೇ ಸಿಗುತ್ತಿರಲಿಲ್ಲ ಬದಲಿಗೆ ತನ್ನ ಸಹಪಾಠಿ ಆಟಗಾರರ ಬಟ್ಟೆ ಹಿಡಿದು ಕಾಯುವ ಕೆಲಸ, ಅಪ್ಪಿ ತಪ್ಪಿ ಆಟಗಾರರ ಬ್ಯಾಟು, ಚೆಂಡು ಹಿಡಿದು ಆಡುವ ಪ್ರಯತ್ನ ಮಾಡಿದರೆ ಹಿಯಾಳಿಕೆಯ ಮಾತು. ಪಿಯುಸಿ ಗೆ ಕೊಡಗು ಜಿಲ್ಲೆಯ ಕ್ರೀಡಾ ಶಾಲೆಯಲ್ಲಿ ಅವಕಾಶ ಗಿಟ್ಟಿಸಿದ ಅಲ್ಲಿ ಮೊದಲಿಗೆ ಸಾಧನೆಯ ಪ್ರಯತ್ನ, ಮುಂದೆ ಹಾಸನದ ಗೊರೂರು ಎಎನ್ ವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಟ ಆಡುವ ಅವಕಾಶಕ್ಕೆ ಕಾತುರ, ಒಮ್ಮೆ ಹೇಗೋ ಅವಕಾಶ ಗಿಟ್ಟಿಸಿ  ಹಿಂದಿನ ದಿನವೇ ಹಾಸನದ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕ್ರೀಡಾಂಗಣಕ್ಕೆ ಬಂದರೆ ಮರುದಿನ ಈತ ಅಂಗವಿಕಲನೆನ್ನುವ ಕಾರಣಕ್ಕೆ ಅವಕಾಶ ನಿರಾಕರಣೆ, ಆದರೂ ಪರಿ ಪರಿಯಾಗಿ ವಿನಂತಿಸಿ ಅವಕಾಶ ಗಿಟ್ಟಿಸಿದ ಗಿರೀಶ್ ಅವತ್ತೇ ಹೈಜಂಪ್ ನಲ್ಲಿ ರಜತ ಪದಕ ಪಡೆದಿದ್ದ, ಅವರ ಕಾಲೇಜಿಗೆ ಆ ಕ್ರೀಡಾಕೂಟದಲ್ಲಿ ದಕ್ಕಿದ್ದು ಅದೊಂದೆ ಪದಕ!

ಇಷ್ಟಕ್ಕೂ ಆಟ ಆಡಲು ಬೇಕಾದಷ್ಟು ಕ್ರೀಡೆಗಳಿವೆ ಆದರೂ ಗಿರೀಶ ಹೈ ಜಂಪ್ ಅನ್ನೇ ಆರಿಸಿಕೊಂಡಿದ್ದೇಕೆ? ಎಂಬ ಪ್ರಶ್ನೆ ಏಳುವುದು ಸಹಜ. ಹಳ್ಳಿಗಾಡು ಪ್ರದೇಶದಲ್ಲಿ ಆಟದ ಯಾವುದೇ ಪರಿಕರಗಳಿಲ್ಲ, ಆಡಲು ಸೂಕ್ತ ಮೈದಾನಗಳಿಲ್ಲ ಆದರೆ ಜಿಗಿಯಲು ಮತ್ತು ಓಡಲು ಯಾವುದೇ ಅಡ್ಡಿ ಆತಂಕಗಳಿಲ್ಲ. ಹಾಗಾಗಿ ಗಿರೀಶ ತನ್ನ ಕುಟುಂಬದ ಬಡತನದ ನಡುವೆಯೂ ತನ್ನ ಅಂಗವೈಕಲ್ಯವನ್ನು ಮರೆಸುವ ಓಡುವ ಮತ್ತು ಜಿಗಿಯುವ ಆಟದಲ್ಲಿ ತನಗೆ ಅರಿವಿಲ್ಲದಂತೆ ತೊಡಗಿಕೊಂಡ, ಮೊದಲಿಗೆ ಮನೆಯ ಹಿತ್ತಲಲ್ಲಿ ಟೇಪ್ ರೆಕಾರ್ಡರ್ ಕೆಸೆಟ್ ನ ರೀಲನ್ನು ಟೊಂಗೆಗಳಿಗೆ ಕಟ್ಟಿ ಹಾರುತ್ತಿದ್ದವ ಗ್ರಾಮದ ಹುಡುಗರ ಜೊತೆ ಸೇರಿ ಬೀದಿಯಲ್ಲಿ ಓಡೋಡಿ ಬಂದು ಜಿಗಿಯುವ ಪ್ರಯತ್ನ ಮಾಡುತ್ತಿದ್ದ ಅಷ್ಟೇ ಅಲ್ಲ ಕೈಕಾಲು ಚೆನ್ನಾಗಿರುವ ಇತರೆ ಹುಡುಗರೊಂದಿಗೆ ಪಂಥಾಹ್ವಾನ ನೀಡುತ್ತಿದ್ದ. ಆಗ ಹುಟ್ಟಿನಿಂದಲೇ  ಮುರುಟಿ ಹೋದಂತಿದ್ದ  ಎಡಗಾಲು ಪಾದ ನೋವಾಗಿ ರಕ್ತ ಒಸರುತ್ತಿದ್ದರೂ ಹುಡುಗ ಅದನ್ನು ಲೆಕ್ಕಿಸದೇ ಸಾಧನೆ ಮಾಡುತ್ತಲೇ ಹೋದ ಮತ್ತು ಅದೊಂದು ದಿನ ಒಲಿಂಪಿಕ್ಸ್ ಎತ್ತರವನ್ನು ಜಿಗಿದು ಬಿಟ್ಟ!

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ಕೇವಲ ಹತ್ತು ಮಂದಿ. ಆಗೀಗ ಹಲವು ಪದಕಗಳು ಭಾರತಕ್ಕೆ ಪ್ಯಾರಾಲಿಂಪಿಕ್ಸ್ ನಲ್ಲಿ ದಕ್ಕಿದೆಯಾದರೂ ಇತ್ತೀಚೆನ ದಿನಗಳಲ್ಲಿ ಪೂರಾ ನಿರಾಸೆಯೆ ಇತ್ತು ಪದಕ ಗೆಲ್ಲದಿದ್ದರೂ ತಕ್ಕ ಮಟ್ಟಿಗಿನ ಸಾಧನೆ ಮಾಡಿದ ರಾಜ್ಯದ ಈಜು ಪಟು ಫರ್ಮಾನ್ ಭಾಷಾ ಬಿಟ್ಟರೆ ಅಂತಹ ಹೇಳಿಕೊಳ್ಳುವ ಕ್ರೀಡಾಪಟುಗಳು ಭಾರತದ ಪಟ್ಟಿಯಲ್ಲಿರಲಿಲ್ಲ. ಅಥ್ಲೆಟಿಕ್ಸ್ ನಲ್ಲಿ ಪ್ರತಿನಿಧಿಸಿದ್ದ 5ಮಂದಿ ಪೈಕಿ ಹೆಚ್ಚಿನ ಸಾಧನೆ ಮಾಡಿ ಭರವಸೆ ಮೂಡಿಸಿದ್ದ ಗಿರೀಶ್ ಪದಕ ಗೆಲ್ಲುವ ಫೇವರಿಟ್ ಆಗಿದ್ದರು. ಆದರೂ ಗಿರೀಶ್ ಗೆ ತನ್ನ ಸಾಧನೆಯನ್ನು ಉತ್ತಮ ಪಡಿಸಕೊಳ್ಳುತ್ತೇನೆ ಎಂಬ ಭರವಸೆಯಿತ್ತೇ ವಿನಹ ಬೆಳ್ಳಿ ಗೆಲ್ಲುತ್ತೇನೆ ಎಂಬ ಕನಸು ಇರಲಿಲ್ಲ. ಆದರೂ ಒಲಿಂಪಿಕ್ಸ್ ಕನಸನ್ನು ನಿಜ ಮಾಡಿಕೊಳ್ಳಲು ಹೊಟ್ಟೆ ಪಾಡಿನ ಉದ್ಯೋಗ ಬಿಟ್ಟು , ಗಾಡ್ ಫಾದರ್ ಗಳ ನೆರವಿಲ್ಲದೇ ತನ್ನ ಹಿಂದಿನ ಸಾಧನೆಗಳ ಆಧಾರದಲ್ಲೆ ಲಂಡನ್ ಗೆ ಹೋಗುವ ಅವಕಾಶವನ್ನು ಗಿರೀಶ್ ಗಳಿಸಿದ್ದರು. ಆ ಹೊತ್ತಿಗಾಗಲೇ ಹೈಜಂಪ್ ನಲ್ಲಿ ಭಾರತದ ನಂ.1 ಆಟಗಾರನಾಗಿ ಮತ್ತು ವಿಶ್ವದಲ್ಲಿ ನಾಲ್ಕನೆಯ ಸ್ಥಾನವನ್ನು ಗಿರೀಶ್ ಪಡೆದಿದ್ದರು. ಲಂಡನ್ ಕನಸು ಕಣ್ಣೆದುರಿಗಿತ್ತು ಆದರೆ ಅಲ್ಲಿಗೆ ಹೋಗಲು ಆರ್ಥಿಕ ನೆರವಿಗಾಗಿ ಗಿರೀಶ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆ ಸಂಧರ್ಭದಲ್ಲಿ ತನ್ನ ಸಾಧನೆಯ ಆಧಾರದಲ್ಲಿ ತನಗೇನಾದರೂ ಸರ್ಕಾರಿ ನೌಕರಿ ಸಿಕ್ಕಿತೇ ಎಂದು ಹಾಸನ ಜಿಲ್ಲಾಧಿಕಾರಿ ಕಛೇರಿಗೆ ಹೋದರೆ ಗಂಟೆ ಗಟ್ಟಲೆ ಹೊರಗೆ ಕಾದು ನಿಲ್ಲಬೇಕಾಯ್ತು ಮತ್ತು ತಾತ್ಸಾರದ ಭರವಸೆ ನೀಡಿ ಸಾಗ ಹಾಕಲಾಯಿತು. ಒಮ್ಮೆ ತನ್ನ ಕಾಲಿಗೆ ಚಿಕಿತ್ಸೆ ನೀಡಿದ್ದ ವೈದ್ಯರ ಬಳಿ ತೆರಳಿ ಫಿಟ್ ನೆಸ್ ಸರ್ಟಿಫಿಕೆಟ್ ಗೆ ವಿನಂತಿಸಿದರೆ ಅವರು ಅದನ್ನು ನಿರಾಕರಿಸಿದರು ಮತ್ತು ಪರಿಚಿತರೊಬ್ಬರ ಮೂಲಕ ಹೇಳಿಸಿದಾಗ ಕಾಟಾಚಾರಕ್ಕೆ ಏನೋ ಒಂದು ಗೀಚಿ ಕಳಿಸಿದರು. ವಿಜಯ ಶಾಲೆ ಮಕ್ಕಳು, ಪೊಟ್ಯಾಟೋ ಕ್ಲಬ್ ಅಲ್ಪ ಪ್ರಮಾಣದ ಆರ್ಥಿಕ ಸಹಾಯ ಮಾಡಿದರೆ ಜಿಲ್ಲಾ ಕಸಾಪ ಸೇರಿದಂತೆ ಒಂದೆರೆಡು ಸಂಸ್ಥಗಳು ಗೆಲುವಿಗೆ ಹಾರೈಸಿ ಲಂಡನ್ ಗೆ ಕಳುಹಿಸಿಕೊಟ್ಟವು. ಈಗ ಗಿರೀಶ ನಿಗೆ ವಿಜಯಲಕ್ಷ್ಮಿ ಒಲಿದು ಬಂದಿದ್ದಾಳೆ ಜೊತೆಗೆ ಧನಲಕ್ಷ್ಮಿಯೂ ಸಹ. ಆದರೂ ಗಿರೀಶ ಸರಳತೆ ಮತ್ತು ಸಜ್ಜನಿಕೆ ಹಾಗೆಯೇ ಇದೆ ಅದೇ ಗಿರೀಶ ಮತ್ತೊಂದು ಸಾಧನೆಗೆ ಕಾದಿದ್ದಾರೆ.

ಗಿರೀಶ್ ಗೆ ಪ್ಯಾರಾಲಿಂಫಿಕ್ಸ್  ಗೆಲುವು ದೊರೆಯುತ್ತಿದ್ದಂತೆ ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಮುಂದಾಗಿದ್ದು ಬೆಂಗಳೂರಿನ ಸಮರ್ಥನಂ ಎಂಬ ಸಂಸ್ಥೆ. ಗಿರೀಶನನ್ನು ಪ್ರಮೋಟ್ ಮಾಡಿದ್ದೇ ತಾವು, ಅವನ ಸಾಧನೆಯ ಹಿಂದೆ ನಮ್ಮ ಪರಿಶ್ರಮವಿದೆ ಎಲ್ಲ ರೀತಿಯ ಸಹಾಯವನ್ನು ನಾವು ಮಾಡಿದ್ದೇವೆ ಎಂದು ದೇಶೀಯ ಮತ್ತು ವಿದೇಶಿ ಚಾನಲ್ ಗಳಲ್ಲಿ ಪ್ರಚಾರ ಗಿಟ್ಟಿಸಿಬಿಟ್ಟಿತು. ಇದ್ಯಾವುದಿದು ಸಮರ್ಥನಂ ಅಂತ ಪರಿಶಿಲಿಸಿದರೆ ಅನಾವರಣಗೊಂಡ ಸತ್ಯ ಗೆಲುವಿನ ಹಿಂದೆ ಎನ್ ಕ್ಯಾಶ್ ಮಾಡಿಕೊಳ್ಳಲು ಎಂತಹ ವಂಚಕರಿರುತ್ತಾರೆಂಬ ಸತ್ಯವನ್ನು. ಸಮರ್ಥನಂ ಎಂಬ ಸಂಸ್ಥೆ  ಅಂಗವಿಕಲರಿಗೆ ಕಂಪ್ಯೂಟರ್ ತರಬೇತಿ ಮತ್ತು ಕಾಲ್ ಸೆಂಟರ್ ತರಬೇತಿ ನೀಡುವ ಸಂಸ್ಥೆ ಇಲ್ಲಿ ಗಿರೀಶ ಸರ್ಕಾರಿ ಪ್ರಾಯೋಜಕತ್ವದಲ್ಲಿ 4-5ತಿಂಗಳು ತರಬೇತಿ ಪಡೆದಿದ್ದರಷ್ಟೆ ಅದೂ 2011ರಲ್ಲಿ. ಕ್ರೀಡೆಗೆ ಸಂಬಂದಿಸಿದ ಯಾವುದೇ ತರಬೇತಿಯಾಗಲಿ ಸಹಾಯವಾಗಲಿ ಈ ಸಂಸ್ಥೆಯಿಂದ ಆಗಿಲ್ಲ ಆದರೆ ಗಿರೀಶನ ಗೆಲುವಿನ ನೆಪದಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮತ್ತು ಸರ್ಕಾರಗಳಿಂದ ಹೊಸ ಪ್ರಾಜೆಕ್ಟ್ ಪಡೆದ ಈ ಸಂಸ್ಥೆಗಳನ್ನು ನಿರ್ಬಂದಿಸುವ ಅಗತ್ಯವಿದೆ. ಸಧ್ಯ ಗಿರೀಶರಿಗೆ ಲಂಡನ್ ಕನ್ನಡಿಗರು ಮತ್ತು ದುಬೈ ಕನ್ನಡಿಗರು ಸತ್ಕರಿಸಿದ್ದಾರೆ ಸಚಿನ್, ಸಲ್ಮಾನ್ ಖಾನ್, ಸೈನಾ ನೆಹ್ವಾಲ್ ಮುಂತಾದವರಿಂದ ಪ್ರೋತ್ಸಾಹ ಸಿಕ್ಕಿದೆ. ದೇಶದ ಪ್ರತಿಷ್ಟಿತ ಸಿಎನ್ ಎನ್ ಐ ಬಿ ಎನ್ ಛಾನಲ್ ಗಿರೀಶನ ಕುರಿತು ಸಾಕ್ಷ್ಯ ಚಿತ್ರ ನಿರ್ಮಿಸಲು ಮುಂದಾಗಿದೆ, ರಾಜ್ಯ ಸರ್ಕಾರ ರಾಜ್ಯೊತ್ಸವದ ಗರಿ ನೀಡಿದೆ ಈಗ ಜಿಲ್ಲಾಡಳಿತವೂ ಸಹಾ ಗಿರೀಶನನ್ನು ಸತ್ಕರಿಸುತ್ತಿದೆ 

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...