Sunday, December 29, 2013

ಅರವಿಂದ ಕೇಜ್ರಿವಾಲ ಎಂಬ ಮಾಂತ್ರಿಕ!

“Change Begins with small things” ಇದು ದೆಹಲಿಯ ಗದ್ದುಗೆ ಏರಿರುವ ಆಮ್ ಆದ್ಮಿ ನೇತಾರ ಅರವಿಂದ ಕೇಜ್ರಿವಾಲರ ಧ್ಯೇಯವಾಕ್ಯ. ಭ್ರಷ್ಟಾಚಾರದ ವಿರುದ್ದ ಚಳುವಳಿ ಮಾಡಿಕೊಂಡು ಅರ್ಧ ಶತಮಾನಗಳಿಂದ ದೇಶವನ್ನು ಆಳುತ್ತಿರುವ ಪ್ರಬಲ ಕಾಂಗ್ರೆಸ್ ವಿರುದ್ದ ಸೆಡ್ಡು ಹೊಡೆದು ಆ ಪಕ್ಷವನ್ನು ಗುಡಿಸಿ ಹಾಕುತ್ತೇನೆ ಎಂದು ಗುಟುರು ಹಾಕುತ್ತಿದ್ದ ಅರವಿಂದ ಕೇಜ್ರಿವಾಲ್ ಇವತ್ತು ಚಳುವಳಿಕಾರರ ಪಾಲಿನ ಐಕಾನ್, ಬದಲಾವಣೆ ಬಯಸುವ ಎಲ್ಲ ಮನಸ್ಸುಗಳ ಹೀರೋ ಆಗಿ ನಿಂತಿದ್ದಾರೆ. ಇದೇನು ಭ್ರಮೆಯೋ ನಿಜವೋ ಎಂಬ ಗೋಂದಲ ಸರಿಯುವ ಮುನ್ನವೇ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಅದಿಕಾರದ ಗದ್ದುಗೆಯೇರಿದ್ದಾರೆ ಅಷ್ಟೇ ಅಲ್ಲ ತನ್ನ ನಿಲುವುಗಳಲ್ಲಿ ಯಾವುದೇ ಬದಲಾವಣೆಗಳಿಲ್ಲದೇ ನಿಚ್ಚಳ ನಿರ್ಧಾರಗಳೊಂದಿಗೆ ಅಧಿಕಾರ ಹಿಡಿದಿದ್ದಾರೆ ಇದು ದೇಶದ ಜಾಗೃತ ಮನಸ್ಥಿತಿಯ ಬದಲಾವಣೆಯ ಕನಸುಗಳ ಸಾಕಾರದ ಪ್ರತಿ ರೂಪದಂತೆ ಭಾಸವಾಗಲಾರಂಬಿಸಿದೆ. ಈ ಹೊತ್ತಿನಲ್ಲಿ ಇದು ಅತ್ಯಂತ ಪ್ರಮುಖವಾಗಿ ಗಮನಿಸಬೇಕಾದ ಸಂಗತಿ ಆಗಿದೆ.

          ಜಾಗತಿಕ ವಿದ್ಯಮಾನಗಳು ಬದಲಾಗುತ್ತಿರುವ ಸಂಧರ್ಭದಲ್ಲಿ ಚಳುವಳಿಗಳು ಸಾಯುತ್ತಿರುವ ಬೆನ್ನಲ್ಲೇ ದೆಹಲಿಯಲ್ಲಿ ಜರುಗಿದ “ನಿರ್ಭಯಾ” ಪ್ರಕರಣ ಹಾಗೂ ಜನಲೋಕ ಪಾಲ್ ಬಿಲ್ ಗೆ ಒತ್ತಾಯಿಸಿ ನಡೆದ ಚಳುವಳಿಗಳು ಪ್ರಮುಖವಾದವು ಮತ್ತು ಕೊಂಚ ಮಟ್ಟಿಗೆ ಗಟ್ಟಿತನ ಉಳಿಸಿಕೊಂಡಂತಹವು. ಚಳುವಳಿ ಎಂದರೆ ಮೂಗು ಮುರಿಯುವ ಮತ್ತು ಅನುಮಾನದಿಂದ ನೋಡುವ ಸಮಾಜದ ನಡುವೆ ವಿಷಯಗಳು ಬದ್ದತೆ ಉಳಿಸಿಕೊಂಡು ಮುಂದುವರೆಯುವುದು ಕಷ್ಟ ಸಾದ್ಯ. ಇದಕ್ಕೆ ಚಳುವಳಿಯ ನಿಖರತೆ ಮತ್ತು ಗಟ್ಟಿತನ, ಮಂಚೂಣಿಯಲ್ಲಿ ಬರುವ ನೇತಾರರ ಪ್ರಾಮಾಣಿಕ ಹಾಗೂ ವಿಶ್ವಾಸಾರ್ಹ ನಡೆಗಳು ಮುಖ್ಯವಾಗುತ್ತವೆ. ಜೆಪಿ ಚಳುವಳಿ, ರೈತ ಚಳುವಳಿ, ದಲಿತ ಚಳುವಳಿ ಸಾಂಸ್ಥಿಕ ಹಾಗೂ ಬೌದ್ದಿಕ ನೆಲೆಗಟ್ಟಿನಲ್ಲಿ ಆರಂಭಗೊಂಡು ಸಾಗಿದರೂ ಸ್ಪಷ್ಟ ರೂಪ ಪಡೆಯುವಲ್ಲಿ ವಿಫಲವಾದವು. ಚಳುವಳಿಗಳ ನೇತಾರರ ಒಳಜಗಳ, ಸ್ವಾರ್ಥ ಲೋಲುಪತೆ , ರಾಜಕೀಯದ ಹಂಬಲ, dependancy ಚಳುವಳಿಗಳನ್ನು ಮತ್ತು ನೇತಾರರನ್ನು ಹೊಸಕಿ ಹಾಕಿದವು. ಅವುಗಳ ಪಳೆಯುಳಿಕೆಗಳು ಅವರಿವರ ಸೆರಗಿನಂಚಿನಲ್ಲಿ ಸೋಗಿನ ಚಳುವಳಿಗಳನ್ನು ಮಾಡಿಕೊಂಡು ಬೆರಳೇಣಿಕೆಯಷ್ಟಿರುವ ಪ್ರಾಮಾಣಿಕ ಹೋರಾಟಗಾರರನ್ನು ಅಣಕಿಸುತ್ತಿರುವ ಈ ಹೊತ್ತಿನಲ್ಲಿ ಅಣ್ಣಾ ಹಜಾರೆಯ ಚಳುವಳಿ ಮತ್ತು ಅದರ ಬೆನ್ನೆಲೆಬುಗಳ ಪೈಕಿ ಪ್ರಮುಖರಾದ ಅರವಿಂದ ಕೇಜ್ರಿವಾಲ್ ರ ನಡೆಗಳು   ಸಧ್ಯದ ಪರಿಸ್ಥಿತಿಯಲ್ಲಿ ಬದಲಾವಣೆಯ ಪರ್ವವನ್ನು ಬಯಸುವವರಿಗೆ ಬೆಳಕಿಂಡಿಯಂತೆ ಗೋಚರಿಸುತ್ತಿವೆ. ಜಾಗತಿಕ ವಿದ್ಯಮಾನಗಳ ಗೋಂದಲದ ನಡುವೆಯೂ ಬದ್ದತೆಯಿಟ್ಟುಕೊಂಡ ಪ್ರಾಮಾಣಿಕ ಚಳುವಳಿಗೆ ಉಳಿಗಾಲವಿದೆ ಎಂಬುದನ್ನು ಗಂಬೀರವಾದ ನೆಲೆಗಟ್ಟಿನಲ್ಲಿ ಮನದಟ್ಟು ಮಾಡುತ್ತಿವೆ.
          ಹರಿಯಾಣ ರಾಜ್ಯದ ಶಾಖಾಹಾರಿ ಕುಟುಂಬದಿಂದ ಬಂದ ಅರವಿಂದ ಕೇಜ್ರಿವಾಲ ದೆಹಲಿಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಗುಡಿಸಿ ಹಾಕುವ ಮಾತನಾಡುತ್ತಲೇ ಕೇವಲ ಒಂದು ವರ್ಷದ ಹಿಂದೆ ಆರಂಭಿಸಿದ ಆಂಧೋಲನವನ್ನು ಯಶಸ್ಸಿನ ಮೆಟ್ಟಿಲಿಗೆ ತಂದಿದ್ದಲ್ಲದೇ ತಾನು ಗುಡಿಸಿ ಹಾಕಿದ ಪಕ್ಷದ ಬೆಂಬಲವನ್ನು ಬಾಹ್ಯವಾಗಿ ಪಡೆದು ಅಧಿಕಾರದ ಗದ್ದುಗೆ ಏರಿರುವುದು ಸಾಮಾನ್ಯ ಸಂಗತಿಯಲ್ಲ. ಇಂತಹ ಕೇಜ್ರಿವಾಲ ಕುರಿತು ಕೆಲಸಂಗತಿಗಳನ್ನು ಅರಿಯುವುದು ಅವಶ್ಯ.ಭಾರತದ ಪ್ರತಿಷ್ಠಿತ ಐಐಟಿ ಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಕೇಜ್ರಿವಾಲ ಟಾಟಾ ಸ್ಟೀಲ್ ನಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿ ನಾಗರೀಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಸಲುವಾಗಿ ಇಂಜಿನಿಯರ್ ಹುದ್ದೆಗೆ ರಾಜೀನಾಮೆ ನೀಡಿದರು. ಕೊಲ್ಕತ್ತಾದ ರಾಮಕೃಷ್ಣ ಮಿಷನ್ ನಲ್ಲಿ ಮತ್ತು ನೆಹರೂ ಯುವ ಕೇಂದ್ರದಲ್ಲಿ ಕೆಲ ದಿನಗಳನ್ನು ಕಳೆದ ಕೇಜ್ರಿವಾಲ್ ಐಆರ್ ಎಸ್ ಪರೀಕ್ಷೆಯಲ್ಲಿ ಯಶಸ್ಸು ಪಡೆದರು. ಮುಂದೆ ಆದಾಯ ತೆರಿಗೆ ಇಲಾಖೆಯಲ್ಲಿ ಜಂಟಿ ಆಯುಕ್ತರಾಗಿ ಭಾರತ ಆಡಳಿತ ಸೇವೆಗೆ ಸೇರ್ಪಡೆಗೊಂಡರು. ಅಲ್ಲಿ ಹಲವು ಪರಿಣಾಮಕಾರಿ ಕ್ರಮಗಳನ್ನು ಅನುಸರಿಸಿದ ಕೇಜ್ರಿವಾಲ ಬಿಗಿಯಾದ ಮತ್ತು ಸರಳವಾದ ತೆರಿಗೆ ನೀತಿಯನ್ನು ಅನುಷ್ಠಾನಕ್ಕೆ ತಂದು ಮೆಚ್ಚುಗೆಗೂ ಪಾತ್ರರಾದರು. ಸತತ 18ತಿಂಗಳುಗಳ ಕಾಲ ಕಾರ್ಯ ನಿರ್ವಹಿಸಿದ ಮೇಲೆ ಅಲ್ಲಿಯೂ ಕೆಲಸ ತೊರೆದರು. ಮುಂದೆ ಪಬ್ಲಿಕ್ ಕಾಸ್ ರೀಸರ್ಚ್ ಪೌಂಡೇಶನ್ (PCRF) ಎಂಬ ಸೇವಾ ಸಂಸ್ಥೆಯನ್ನು ತಮ್ಮ ಬೆಂಬಲಿಗ ಮನಿಶ್ ಸಿಸೋಡಿಯಾ ಜೊತೆ ಸೇರಿ ಸ್ಥಾಪಿಸಿದರು. ಇದೇ ಸಂಧರ್ಭದಲ್ಲಿ ದೊರಕಿದ ಮ್ಯಾಗ್ಸೆಸ್ಸೆ ಪುರಸ್ಕಾರದ ಅಷ್ಟೂ ಹಣವನ್ನು ಸೇವಾ ಸಂಸ್ಥೆಗೆ ನೀಡಿದ ಹೆಗ್ಗಳಿಕೆ ಕೇಜ್ರಿವಾಲರದ್ದು. ಧ್ವನಿಯಿಲ್ಲದ ಕೆಳಸ್ಥರದ ಜನರಿಗೆ ಮದ್ಯಮವರ್ಗದವರಿಗೆ ಬೆಂಬಲವಾಗಿ ನಿಂತ ಪರಿವರ್ತನಾ ಸಂಸ್ಥೆಯೂ ಆಗ ಸ್ಥಾಪಿತವಾಯಿತು.
          ಅಣ್ಣಾ ಹಜಾರೆ ನೇತೃತ್ವದಲ್ಲಿ 2002ರಿಂದ ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ನಡೆಯುತ್ತಿದ್ದ ಚಳುವಳಿಯಲ್ಲಿ ಕೇಜ್ರೀವಾಲ್ ಕೂಡ ಪ್ರಮುಖರು. ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ 2005-06ರಲ್ಲಿ ಮಾಹಿತಿ ಹಕ್ಕು ಕಾಯ್ದೆ ರೂಪಿಸಿತು. 2011ರಲ್ಲಿ ಜನಲೋಕಪಾಲ್ ಬಿಲ್ ಗೆ ಒತ್ತಾಯಿಸಿ ನಡೆದ ಬೃಹತ್ ಚಳುವಳಿಯಲ್ಲಿ ಪ್ರಸ್ತಾಪಿಸಲಾಗಿದ್ದ ಪ್ರಮುಖ ಕರಡು ಅಂಶಗಳ ರಚನೆಯಲ್ಲಿಯೂ ಕೇಜ್ರಿವಾಲ್ ಪಾತ್ರ ಪ್ರಮುಖವಾಗಿತ್ತು. ಭ್ರಷ್ಟಾಚಾರ ವಿರುದ್ದದ ಅಣ್ಣಾ ಹಜಾರೆ ನೇತೃತ್ವದ ಚಳುವಳಿಗೆ ದಕ್ಕಿದ ಭಾರೀ ಜನ ಬೆಂಬಲದ ಲಾಭ ಪಡೆಯಲು ಯತ್ನಿಸಿದ್ದ ಬಿಜೆಪಿ ಮತ್ತು ಇತರೆ ಪಕ್ಷಗಳು ಬೆಂಬಲಕ್ಕೆ ನಿಂತಿದ್ದವು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆಗ ಒಗ್ಗೂಡಿದ ಭಾರೀ ಜನಬೆಂಬಲ ಮತ್ತು ಒತ್ತಾಸೆಯನ್ನು ಅಣ್ಣಾ ಹಜಾರೆ ಮತ್ತು ತಂಡ ಹೇಗೆ ನಿಭಾಯಿಸುತ್ತದೆ ಅದಕ್ಕೆ ತಾರ್ಕಿಕ ಅಂತ್ಯ ಸಿಗುವುದೇ ಎಂಬ ಪ್ರಶ್ನೆ ಆಗ ಎದ್ದಿತ್ತು. ಮತ್ತು ಅಂತಹ ಬೃಹತ್ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವೇ ರಾಜಕೀಯದ ಸುಳಿಗಾಳಿಯಲ್ಲಿ ಎಲ್ಲವೂ ಹೊಸಕಿ ಹಾಕಲಿದೆ ಎಂಬ ಮನಸ್ಥಿತಿಗೆ ಈಗ ತಕ್ಕ ಶಾಸ್ತಿಯಾದಂತಾಗಿದೆ.
          ಉತ್ತರ ಪ್ರದೇಶದಲ್ಲಿ ಅಸೆಂಬ್ಲಿ ಚುನಾವಣೆಗಳು ಎದುರಾಗುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳೆ ಎಲ್ಲ 70ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕಲು ತಿಣುಕಾಡುತ್ತಿರುವ ಹೊತ್ತಿನಲ್ಲೇ ಜನಸಾಮಾನ್ಯರನ್ನ ಬದ್ದತೆ ಇಟ್ಟುಕೊಂಡ ಅಭ್ಯರ್ಥಿಗಳನ್ನೇ ಹುಡುಕಿ ಕಣಕ್ಕಿಳಿಸಿದ ಕೇಜ್ರಿವಾಲ್ ಆಗಲೇ ಅರ್ಧ ಯಶಸ್ಸನ್ನು ಗಳಿಸಿ ಬಿಟ್ಟಿದ್ದರು. ಚುನಾವಣಾ ಪ್ರಚಾರಕ್ಕೆ ಮತ್ತು ಸಂಘಟನೆಗೆ ದುಡ್ಡಿನ ಮಹತ್ವ ಅರಿತ ಅವರು ಸಾರ್ವಜನಿಕ ದೇಣಿಗೆಯನ್ನು ಅವಶ್ಯವಿರುವಷ್ಟು ಸಂಗ್ರಹಿಸಿದರು. ಮತ್ತು 69ಕ್ಷೇತ್ರಗಳ ಪೈಕಿ 28ರಲ್ಲಿ ಗೆಲುವು ಸಾಧಿಸಿ ಬಿಟ್ಟರು. ಅತಂತ್ರ ಸ್ಥಿತಿ ನಿರ್ಮಾಣವಾದಾಗ ಕಾಂಗೈ ಮತ್ತು ಬಿಜೆಪಿ ಪಕ್ಷಗಳಿಗೆ ಅರಗಿಸಿಕೊಳ್ಳಲಾಗದ 18ಷರತ್ತುಗಳನ್ನು ವಿಧಿಸಿದ್ದಲ್ಲದೇ ಅಧಿಕಾರದ ಹೊಸ್ತಿಲು ಬಳಿಗೆ ಬಂದಾಗಲೂ ಅಧಿಕಾರ ಹಿಡಿಯುವ ಮುನ್ನ ಜನಾಭಿಪ್ರಾಯ ಸಂಗ್ರಹಿಸಿ ಅಧಿಕಾರಕ್ಕೆ ಬಂದಿದ್ದು ಯಾವತ್ತಿಗೂ ಚಾರಿತ್ರಿಕ ಸಂಗತಿಯೇ. ದೆಹಲಿಯಂತಹ ಸೂಕ್ಷ್ಮ ಮತ್ತು ಪ್ರಮುಖ ಪ್ರದೇಶದಲ್ಲಿ ಸರ್ಕಾರಿ ಬಂಗಲೆಯನ್ನು ಪಡೆಯದೇ, ಐಶಾರಾಮಿ ಕಾರುಸೌಲಭ್ಯ ಪಡೆಯದೇ, ಬೆಂಗಾವಲು ಪಡೆಯಿಲ್ಲದೇ ತಾನಂದುಕೊಂಡಂತೆ ಅಧಿಕಾರ ಚಲಾಯಿಸುವ ಮನಸ್ಥಿತಿಯಿಂದ ಕೇಜ್ರಿವಾಲ್ ಮುಖ್ಯ ಮಂತ್ರಿಯಾಗಿರುವುದು ಈ ಶತಮಾನದ ಮಟ್ಟಿಗೆ  ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುದೊಡ್ಡ ಗೆಲುವೇ ಸರಿ.

          ಕ್ಯೂಬಾ ಕ್ರಾಂತಿಗೆ ಕಾರಣನಾದ ಚೆಗುವಾರ ಯುವ ಸಮುದಾಯದ ಐಕಾನ್ ಆಗಿರುವಂತೆ ಇವತ್ತು ಭಾರತದಲ್ಲಿ ಕೇಜ್ರಿವಾಲ್ ಜ್ವರ ದೇಶದಾದ್ಯಂತ ಹಬ್ಬುತ್ತಿದೆ. ಎಲ್ಲ ರಾಜ್ಯಗಳಲ್ಲೂ ಆಮ್ ಆದ್ಮಿ ಪಕ್ಷದ ಶಾಖೆಗಳು ತೆರೆಯುತ್ತಿವೆ. ಭರವಸೆಯ ಕಂಗಳ ಸಮುದಾಯ ಅಲ್ಲಿ ಜಮಾಯಿಸುತ್ತಿದೆ ಎಂದರೆ ಅದು ವರ್ತಮಾನದ ಜಾಗೃತ ಪ್ರಜ್ಞೆಯ ಪ್ರತೀಕವಲ್ಲದೇ ಮತ್ತೇನೂ ಅಲ್ಲ. ಜನಸಾಮಾನ್ಯರ ನಿರೀಕ್ಷೆಗಳನ್ನು ಕೇಜ್ರಿವಾಲ ಎಷ್ಟರ ಮಟ್ಟಿಗೆ ನಿಭಾಯಿಸುತ್ತಾರೋ ತಿಳಿಯದು ಆದರೆ ಜನಸಾಮಾನ್ಯರ ಆಶಯದ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂಕೇತವಾಗಿ ನೇತಾರನಾಗಿರುವುದು ಬಹುಕಾಲ ನೆನಪಿನಲ್ಲುಳಿಯುವ ಸಂಗತಿ. 

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...