Sunday, April 6, 2014

ಕೀಳು ಅಭಿರುಚಿ ಮತ್ತು ಚುನಾವಣಾ ರಾಜಕೀಯ!

ಲೋಕಸಭಾ ಚುನಾವಣೆ ರಂಗೇರುತ್ತಿರುವ ದಿನಗಳಲ್ಲೇ ಕೆಲವು ಅನುಚಿತ ಸಂಗತಿಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಅದು ನೈತಿಕತೆಗೆ ಧಕ್ಕೆ ತರುವಂತಹ ಸಂಗತಿಗಳು. ಸಾರ್ವತ್ರಿಕವಾಗಿ ಜರುಗುತ್ತಿರುವ ಈ ಘಟನೆಗಳಿಗೆ ಮೂಲ ಪ್ರೇರಣೆ ಏನಿರುತ್ತದೆಯೋ ಗೊತ್ತಿಲ್ಲ ಆದರೆ ಪರಿಣಾಮ ಮಾತ್ರ ವ್ಯತಿರಿಕ್ತವೇ ಸರಿ.

     ಕೇವಲ ಹತ್ತು ತಿಂಗಳ ಅವಧಿಯಲ್ಲಿ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಐತಿಹಾಸಿಕ ರಾಜಕೀಯ ಪುಟಗಳನ್ನು ತೆರೆದದ್ದು ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಎಂಬುದು ನಿಸ್ಸಂಶಯವಾದುದ್ದು. ಭಾರತದ ಕೈಗಾರಿಕಾ ವಸಾಹತು ರಾಜ್ಯವಾದ ಗುಜರಾತ್ ನಲ್ಲಿ ಚಹಾ ಮಾರುತ್ತಿದ್ದ ಸಾಮಾನ್ಯನಾಗಿದ್ದ ನರೆಂದ್ರ ಮೋದಿ ನಂತರ ರಾಷ್ಟ್ರೀಯ ಪಕ್ಷವೊಂದರ ಮಂಚೂಣಿ ಪ್ರಧಾನಿ ಅಭ್ಯರ್ಥಿಯಾಗಿದ್ದು ಸಾಮಾನ್ಯ ಸಂಗತಿಯೇನಲ್ಲ. ಸಿವಿಲ್ ಕಂಟ್ರಾಕ್ಟರ್ ಮತ್ತು ರೈತಾಪಿಯೂ ಆಗಿದ್ದ  ಹಳ್ಳಿಗಾಡಿನ ರೈತನ ಮಗ ಹೆಚ್ ಡಿ ದೇವೇಗೌಡ ಪ್ರಾದೇಶಿಕ ಪಕ್ಷವೊಂದರ ಸಂಸದನಾಗಿ ಭಾರತ ದೇಶದ ಪ್ರಧಾನಿ ಪಟ್ಟ ಅಲಂಕರಿಸಿದ್ದು ಹೆಮ್ಮೆಯ ಸಂಗತಿ. ಹಾಗೆಯೇ ಚಿತ್ರರಂಗದಲ್ಲಿ ಬಿಂದಾಸ್ ತಾರೆಯಾಗಿ ಹೆಸರು ಮಾಡಿದ್ದ ನಗ್ಮಾ ಸಂಸದೆಯಾಗಿದ್ದು, ರಾಜಕೀಯವನ್ನು ನಿರಾಕರಿಸುತ್ತಲೇ ಮುಂಗೋಪ, ಹುಡುಗಾಟ ಪ್ರದರ್ಶಿಸುತ್ತಾ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ನಾಯಕಿ ನಟಿ ರಮ್ಯಾ ಅಭಿಮಾನದ ಬಲದಿಂದಲೇ ಸಂಸತ್ ಭವನಕ್ಕೆ ಅತೀ ಚಿಕ್ಕ ವಯೋಮಾನದಲ್ಲೇ ಪ್ರವೇಶ ಪಡೆದಿದ್ದು ದಾಖಲೆಯೇ ಸರಿ. 
       ಇದು ಒಂದೆಡೆ ಇರಲಿ ಈ ಸಂಗತಿಗಳನ್ನು ಇಲ್ಲಿ ಯಾಕೆ ಪ್ರಸ್ತಾಪಿಸಿದೆ ಎಂದರೆ ಸಾರ್ವತ್ರಿಕವಾಗಿ ಹೀಗೆ ಐಕಾನ್ ಗಳಾಗಿರುವವರ ವಿರುದ್ದ ಕೀಳು ಅಭಿರುಚಿಯನ್ನು ಪ್ರದರ್ಶಿಸುವುದಿದೆಯಲ್ಲ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆಮ್ ಆದ್ಮಿ ಪಕ್ಷದ ಹೀರೋ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೇಲೆ ಚುನಾವಣಾ ಪ್ರಚಾರದ ಸಂಧರ್ಭ ನಡೆಯುತ್ತಿರುವ ಹಲ್ಲೆಗಳು, ಮಸಿ ಎರಚುವಿಕೆ, ತಡೆಯೊಡ್ಡುವುದು ಸರಿಯೇ? ಹೋಗಲಿ ಲೋಕಸಭಾ ಚುನಾವಣೆಯಲ್ಲಿ ಪ್ರಮುಖವಾಗಿ ಬಿಂಬಿತವಾಗುತ್ತಿರುವ ಎರಡು ರಾಷ್ಟ್ರೀಯ ಪಕ್ಷಗಳಿಗೆ ಅರವಿಂದ ಕೇಜ್ರಿವಾಲ್ ಅಷ್ಟೊಂದು ತೊಡಕಾಗಿ ಪರಿಣಮಿಸಿದ್ದಾರೆಯೇ ? ಗೂಂಡಾ ಪ್ರವೃತ್ತಿ ಹಲ್ಲೆ ಖಂಡನೀಯ. ನರೇಂದ್ರ ಮೋದಿ ಹವಾ ಇಲ್ಲ ಎಂದು ವಿರೋಧ ಪಕ್ಷಗಳು ಹೇಳುತ್ತವಾದರೂ ಭಾರತದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಹವಾ ಇದೆಯೋ ಇಲ್ಲವೋ ನಮೋ ಹವಾ ಅಂತು ಇದ್ದೇ ಇದೆ ಎಂಬುದು ನಿರ್ವಿವಾದ, ಆದರೆ ಇದನ್ನು ಸಹಿಸದ ಕಾಂಗೈ ಸಂಸತ ಅಭ್ಯರ್ಥಿಯೊಬ್ಬ ನರೇಂದ್ರ ಮೋದಿಯನ್ನು ಕತ್ತರಿಸುತ್ತೇನೆ ಎಂದು ಮಾತನಾಡುತ್ತಾನೆ, ಇದೆಲ್ಲ ಎಂತಹ ನಡವಳಿಕೆಯನ್ನು ಪ್ರದರ್ಶಿಸಿದಂತಾಗುತ್ತದೆ ಅಲ್ಲವೇ? ಇಂಥಹವರು ಗೆದ್ದ ಮೇಲೆ ಶಾಂತಿ ಸುವ್ಯವಸ್ಥೆ ಕಾಪಾಡುತ್ತಾರೆಯೇ ? ವ್ಯಕ್ತಿಗತವಾಗಿ ಆತ ಮಾತನಾಡಿದ್ದು ಒಂದು ಪಕ್ಷಕ್ಕೆ, ಒಂದು ಸಮುದಾಯಕ್ಕೆ ಕೆಟ್ಟ ಹೆಸರು ತಂದಂತಲ್ಲವೇ ಇವುಗಳ ಒಟ್ಟು ಪರಿಣಾಮ ವ್ಯತಿರಿಕ್ತವಾಗ ಬಹುದಲ್ಲವೇ?
         ದೃಶ್ಯ ಮಾಧ್ಯಮಗಳಿಗೆ ಕಡಿವಾಣ ಇಲ್ಲದಿರುವುದರಿಂದ ಅನೇಕ ಪ್ರಚೋದನಾತ್ಮಕ ಚಟುವಟಿಕೆಗಳು ಕಾರ್ಯಕ್ರಮವಾಗಿ ಪ್ರಸಾರ ಕಾಣುತ್ತಿವೆ. ಇಂತಹದ್ದೊಂದು ಚುನಾವಣ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ನ ಅಧ್ಯಕ್ಷ ಪರಮೇಶ್ವರ್, ಮಾಜಿ ಪ್ರಧಾನಿ ದೇವೇಗೌಡ ವಿರುದ್ದ ಆಡಬಾರದ ಮಾತನ್ನು ಉತ್ಸಾಹದಲ್ಲಿ ಆಡಿದ್ದಾರೆ. ಉತ್ತಮ ಶೈಕ್ಷಣಿಕ ಹಿನ್ನೆಲೆಯಿರುವ ಪರಮೇಶ್ವರ್ ಮುತ್ಸದ್ದಿ ತನವನ್ನು ಪ್ರದರ್ಶಿಸಿ ಸಮತೂಕದ ಮಾತನ್ನು ಆಡಬಹುದಿತ್ತು, ಆದರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉತ್ಸಾಹದಲ್ಲಿ ನಾಲಗೆಯನ್ನು ಹರಿಯಬಿಟ್ಟಿದ್ದಾರೆ, ಬಿಜೆಪಿಯ ಈಶ್ವರಪ್ಪ, ಪ್ರತಾಪ್ ಸಿಂಹ, ಕಾಂಗೈನ ಜನಾರ್ಧನ ಪೂಜಾರಿ ಕೂಡಾ ಎಗ್ಗು ತಗ್ಗಿಲ್ಲದೇ ಮಾತನಾಡಿ ತಮ್ಮ ಘನತೆ ಗೌರವಕ್ಕೆ ಕುಂದು ತಂದುಕೊಂಡಿದ್ದಾರೆ. ಹಿಂದೊಮ್ಮೆ ಇದೇ ದೇವೇಗೌಡ ಕೂಡ ಮುಖ್ಯ ಮಂತ್ರಿಯಾಗಿದ್ದ ಯಡಿಯೂರಪ್ಪ ವಿರುದ್ದ ಕೀಳು ಅಭಿರುಚಿಯ ಮಾತನ್ನು ಆಡಿದ್ದರು. ಅದು ಒಂದು ರೀತಿಯಲ್ಲಿ ಯಡಿಯೂರಪ್ಪ ಗೆ ಒಳ್ಳೆಯದೇ ಆಗಿತ್ತೆನ್ನಿ. ಈಗ ಅದೇ ಲಾಭ ದೇವೇಗೌಡರಿಗೂ ಪರೋಕ್ಷವಾಗಿ ಆಗುವ ಸಾಧ್ಯತೆಗಳೇ ಹೆಚ್ಚು!
         ನಗ್ಮಾ ಸಂಸತ್ ಅಭ್ಯರ್ತಿಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಹಿರಿಯ ರಾಜಕಾರಣಿಯೊಬ್ಬ ಕಿವಿಯಲ್ಲಿ ಏನೋ ಹೇಳುವವನಂತೆ ನಟಿಸುತ್ತಾ ಆಕೆಯನ್ನು ಸಾರ್ವತ್ರಿಕವಾಗಿ ಅಪ್ಪಿ ಮುತ್ತಿಟ್ಟಿದ್ದು ಅವನ ನೈತಿಕತೆಯ ಪರಮಾವಧಿಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ರಮ್ಯಾ ಲೋಕಸಭಾ ಚುನಾವಣೆಗೆ ನಿಂತಾಗ ಆಕೆಯ ಹುಟ್ಟಿನ ಕುರಿತು ಅನೈತಿಕ ಹೇಳಿಕೆ ನೀಡಿದ್ದು ರಮ್ಯಾಗೆ ಮತಗಳಾಗಿ ಪರಿವರ್ತನೆಯಾಗಿದ್ದು ಸುಳ್ಳೇನಲ್ಲ. ಈ ಸಲ ರಮ್ಯಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಅಭಿಮಾನಿಗಳು ಮುಜುಗುರವಾಗುವಂತೆ ಸಾರ್ವತ್ರಿಕವಾಗಿ ಆಕೆಯನ್ನು ಅಪ್ಪಿ ಮುದ್ದಾಡಿದ ಘಟನೆಯೂ ವರದಿಯಾಗಿದೆ. 
      ಇದೆಲ್ಲಾ ಎಂಥದ್ದು ಮಾರಾಯ್ತೇ? ಪ್ರಜಾತಾಂತ್ರಿಕ ವ್ಯವಸ್ಥೆಗೆ ಗಂಭೀರ ನೆಲೆಗಟ್ಟಿನಲ್ಲಿ ಸಾಗಬೇಕಾದ ಚುನಾವಣೆಗಳಲ್ಲಿ ಇಂಥಹ ಕೀಳು ಅಭಿರುಚಿಗಳು ಕೊನೆಯಾಗಬೇಕು. ಸಾರ್ವತ್ರಿಕವಾದ ದುರ್ವರ್ತನೆಗಳು,ಕೀಳು ಅಭಿರುಚಿಯ ಭಾಷಣಗಳು, ಪ್ರಚೋದನಾಕಾರಿಯಾದ ಮಾತುಗಳು ವ್ಯಕ್ತಿತ್ವವನ್ನು ಹಾಳು ಮಾಡುವ ಜೊತೆಗೆ ಪರಿಸರಕ್ಕೂ ಕೆಟ್ಟ ಪಾಠವನ್ನೇ ಕಲಿಸುತ್ತವೆ. ಆರೋಗ್ಯಕರವಾದ ವಾತಾವರಣಕ್ಕೆ ಅಡ್ಡಿಯಾಗುವಂತಹ ಇಂತಹ ಸಂಗತಿಗಳನ್ನೇ ರಾಜಕೀಯ ಪಕ್ಷಗಳ ಓಟಿನ ಅಸ್ತ್ರವನ್ನಾಗಿ ಮಾಡಿಕೊಂಡು ಚುನಾವಣೆ ಎದುರಿಸುವುದು ಇನ್ನೂ ಅಸಹ್ಯಕರ ಸಂಗತಿಯಲ್ಲವೇ. ಭಾರತ ದೇಶದ ಒಟ್ಟು ಚುನಾವಣಾ ಪ್ರಕ್ರಿಯೆಗಳನ್ನು ಬಹಳ ವೇಗವಾಗಿ ಮತದಾರ ಗ್ರಹಿಸುತ್ತಿರುತ್ತಾನೆ ಮತ್ತು ಸರಿಯಾದ ಸಂಧರ್ಭದಲ್ಲಿ ತಕ್ಕ ಪಾಠವನ್ನು ಕಲಿಸುತ್ತಾನೆ ಎಂಬುದನ್ನು ಅರಿಯಬೇಕಾದ ತುರ್ತು ಇದೆ. 

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...