ಆ ಪ್ರೊಫೆಸರ್ ಡಿಪಾರ್ಟ್ ಮೆಂಟಲ್ಲಿ ಅವಳಿಗೆ ಜಾಸ್ತಿ ಮಾರ್ಕ್ಸ್ ಜಾಸ್ತಿ ಕೊಡ್ತಾನೆ, ಅದು ಯಾವಾಗ್ಲೂ ಹ್ಯಾಪ ಮೋರೆ ಹಾಕ್ಕೊಂಡು ಬರುತ್ತೆ ಯಾರ್ನೂ ಮಾತಾಡ್ಸಲ್ಲ, ಆದ್ರೆ ಅವಳ ಚೆಂದಕ್ಕೆ ಬಿದ್ದವ್ನೇ ಅದ್ಕೆ ಅವಳಿಗೆ ಪರೀಕ್ಷೆಲಿ ಒಳ್ಳೆ ಮಾರ್ಕು ಕೋಡ್ತಾನೆ, ಪಿಎಚ್ ಡಿ ಗೂ ಅದೇ ಪ್ರೊಫೆಸರ್ ಹತ್ರಾನೆ ಅವಳು ರಿಜಿಸ್ಟರ್ ಮಾಡ್ಸಿರ್ ಬೇಕು ಬಿಡು ಮಗಾ ಇನ್ನ ಅವಳ ಕಥೆ! ಅನ್ನೋ ಕಾಲ ಒಂದಿತ್ತು,ಈಗ ಅದು ಮಾಮೂಲು! ಆಮೇಲೆ ಡಿಗ್ರೀ ಕಾಲೇಜುಗಳ ಕಾರೀಡಾರಿನಲ್ಲೂ ಇಂಥವೇ ಡೈಲಾಗುಗಳು ಕೇಳಿ ಕೇಳಿ ಸಾಕಾಗಿತ್ತು. ನಾವು ಮಹರಾಜ ಕಾಲೇಜಿನಲ್ಲಿ ಪಿಜಿ ಕಲಿಯುವ ಹೊತ್ತಿಗೆಲ್ಲ ಮಂಡ್ಯದ ಪಿಜಿ ಸೆಂಟರ್ ಕೋಆರ್ಡಿನೇಟರ್ ಒಬ್ಬ ವಿದ್ಯಾರ್ಥಿನಿಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿ ಕೆಲಸದಿಂದಲೇ ವಜಾ ಆಗಿದ್ದ, ಆತನಿಗೆ ಖ್ಯಾತ ಸಾಹಿತಿ ಎಂಬ ಹೆಸರು ಬೇರೆ, ದುರಾದೃಷ್ಟಕ್ಕೆ ನಾನು ಪದವಿ ಕಲಿಯುವಾಗ ಆತನೇ ಬರೆದ ಪುಸ್ತಕ ನನಗೆ ಪಠ್ಯ ಮತ್ತು ಆತನೇ ನನಗೆ ಅದ್ಯಾಪಕ, ಸದರಿ ಅದ್ಯಾಪಕ ತರಗತಿಗಳಲ್ಲಿ ಬಾಯಿ ಬಿಟ್ಟರೆ ಬರೀ ಪೋಲೀ ಮಾತು! ಈಗಲೂ ವರ್ತಮಾನದಲ್ಲಿ ನಮ್ಮೊಡನೆ ಆತ ಇದ್ದಾನೆಂದು ಹೇಳಿಕೊಂಡರೆ ಅದು ಶಿಕ್ಷಕ ಸಮದಾಯಕ್ಕೆ ನಾಚಿಕೆಗೇಡು.
ವಿಶ್ವ ವಿದ್ಯಾಲಯಗಳಲ್ಲಿ ಮಾತ್ರ ಕಾಣ ಬರುತ್ತಿದ್ದ ಈ ಕಾಯಿಲೆ ಮುಂದೆ ಪದವಿ ಕಾಲೇಜು, ಪಿಯು ಕಾಲೇಜಿಗೂ ವಿಸ್ತರಿಸಿತು. ಅದರಲ್ಲೂ ಮುಖ್ಯವಾಗಿ ಬಿಎಡ್ ಮತ್ತು ಟಿ ಸಿ ಹೆಚ್ ಕಾಲೇಜುಗಳಲ್ಲಿ ಇದು ಅತಿಯಾಗಿತ್ತು. ವಾರ್ಷಿಕ ಟೂರು ಶೈಕ್ಷಣಿಕ ಟೂರು, ಅದಕ್ಕೆ ಎಲ್ಲರೂ ಕಡ್ಡಾಯವಾಗಿ ಬರಲೇ ಬೇಕು, ಹೆಣ್ಣು ಮಕ್ಕಳು ಚೆಂದ ವಾಗಿದ್ದರಂತೂ ಮುಗಿಯಿತು, ಮನೆಗಳಿಗೆ ತೆರಳಿ ಪೋಷಕರಿಗೆ ಒತ್ತಡ ಹಾಕಿ ವಾರ, ಹದಿನೈದು ದಿನ ಶೈಕ್ಷಣಿಕ ಪ್ರವಾಸದ ಹೆಸರಿನಲ್ಲಿ ಮಜವೋ ಮಜ. ಪ್ರವಾಸದ ಮಜಾ ಮುಗಿಸಿಕೊಂಡು ಬಂದಾದ ಮೇಲೆ ರಾಮಾಯಣ-ಮಹಾಭಾರತ ರಂಪವಾಗಿ ಒಂದೋ ಆತ ಅಥವಾ ಆಕೆ ಮದುವೆಯಾಗಿ ಬಿಡುತ್ತಿದ್ದರು ಇಲ್ಲವೇ ಊರು ಬಿಡುತ್ತಿದ್ದರು. ಅವತ್ತಿನ ಪಳೆಯುಳಿಕೆಗಳು ಇಂದಿಗೂ ಕಣ್ಣೆದುರಿಗಿವೆ. ನಂತರದ್ದು ಪಿಯುಸಿ, 14-15ರ ವಿದ್ಯಾರ್ಥಿ/ನಿ ಯರುಗಳನ್ನು ನಾಲ್ಕೈದು ದಿನ ಶೈಕ್ಷಣಿಕ ಪ್ರವಾಸ ಅಂತ ಕರೆದುಕೊಂಡು ಹೋದರೆ ವಿದ್ಯಾರ್ಥಿನಿಯರ ಪಾಡು ಬೇಡ. ನನ್ನ ಪರಿಚಯದ ಪಿಯು ವಿದ್ಯಾರ್ಥಿನಿಯೋರ್ವಳನ್ನು ಕುತೂಹಲಕ್ಕೆ ಕೇಳಿದ್ದೆ ಎಲ್ಲಿಗೆ ಟೂರ್ ಹೋಗ್ತಿದ್ದೀರಿ? ಅದು ಬಾಲಕಿಯರ ಪಿಯು ಕಾಲೇಜು. ಬೆಂಗಳೂರು ಹೋಗ್ತಿದ್ದೀವಿ, ಮತ್ತೊಂದು ಕಾಲೇಜು ವಿದ್ಯಾರ್ಥಿನಿ ಹೇಳಿದಳು ಕೊಡೈಕೆನಾಲ್ ಗೆ, ಕ್ಷಣ ಕಾಲ ಗಾಬರಿಯಾಗಿ ಹೋಯ್ತು ಸರಿ ಬೆಂಗಳೂರಿನಲ್ಲಿ ಏನು ನೋಡಲಿಕ್ಕಿದೆ ? ವಂಡರ್ ಲಾಗೆ ಹೋಗ್ತಿದೀವಿ. ಸರಿ ಟೂರು ಮುಗೀತು, ಮಕ್ಕಳು ಮರಳಿ ಬಂದರು , ನಾನು ಮತ್ತೆ ಕೇಳಿದೆ ಹೇಗಿತ್ತು ಟೂರು? ಸಾರ್ ಒಬ್ಬರು ಮಿಸ್ ಇನ್ನ ನಾಲ್ಕೈದು ಜನ ಸರ್ ಗಳು, ನಾನು ಮತ್ತೆ ಸರ್ ಮೇಲಿಂದ ಜಾರಿ ನೀರಿಗೆ ಬೀಳುವ ಆಟ ಆಡಿದ್ವಿ, ಸರ್ರು ನನ್ನ ಗಟ್ಟಿಯಾಗಿ ಹಿಡ್ಕೊಂಡಿದ್ರು, ಬಟ್ಟೆ ಬದಲಿಸೋಕೆ ಹೋದ್ವಾ ಸರ್ರು ನಮ್ ಜೊತೆನೆ ಬಟ್ಟೆ ಚೇಂಚ್ ಮಾಡಿದ್ರು! ಆಮೇಲೆ ರಾತ್ರಿ ಉಳ್ಕೊಂಡಿದ್ವಲ್ಲ ಯಾವ್ದೋ ಚೌಲ್ಟ್ರಿ ಒಂದೇ ಹಾಲ್ ಅಲ್ಲಿ ಸರ್ರ್ ಗಳು ನಮಗೆ ಸೀರೆ ಉಡಿಸೋದು ನಾವು ಅವರಿಗೆ ಸೀರೆ ಉಡಿಸಿದ್ವಿ ಸಖತ್ ಖುಷಿಯಾಯ್ತು ಸರ್ ಅಂದವಳ ಮುಖದಲ್ಲಿ ಮುಗ್ಧತೆಯಿತ್ತೆ ವಿನಹ ಆಕೆ ವಿವರಿಸಿದ ಅಷ್ಟೂ ಸಂಗತಿಗಳ ಸೀರಿಯಸ್ ನೆಸ್ ಗೊತ್ತಿರಲಿಲ್ಲ. ನಾನಂತೂ ಅದೆಲ್ಲ ಕೇಳಿಸಿಕೊಂಡು ದಂಗು ಬಡಿದವನಂತಾಗಿದ್ದೆ.
ಪದವಿ ಓದುವ ದಿನಗಳಲ್ಲಿ ಬಿಂದಾಸ್ ಜೀವನ ಶೈಲಿಯ ಕೊಡಗು ಭಾಗದ ಯುವತಿಯೊಬ್ಬಳು ಅತಿಥಿ ಉಪನ್ಯಾಸಕಿ, ಆಕೆಯ ಗಂಡ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ, ಮೊದಲೇ ಸಿರಿವಂತದ ಕುಟುಂಬದ ಆ ಯುವತಿ ತರಗತಿಗಳಲ್ಲಿ ಹುಡುಗರೆಡೆಗೆ ಮಾದಕ ನೋಟ ಬೀರುತ್ತಿದ್ದಳು ವೀಕೆಂಡ್ ಗಳಲ್ಲಿ ಅದೇ ಕಾಲೇಜಿನ ಸಿರಿವಂತ ಹುಡುಗರ ಜೊತೆ ಕಲರ್ ಕಲರ್ ಟೀ ಶರ್ಟು ಮತ್ತು ಟೈಟು ಜೀನ್ಸ್ ತೊಟ್ಟು ಬೈಕ್ ಗಳಲ್ಲಿ ಹೊರಟು ಬಿಡುತ್ತಿದ್ದಳು. ಪ್ರೌಢಶಾಲಾ ಹಂತದಲ್ಲಿ ಪಿಟಿ ಮಾಸ್ಟರ್ ಮೊದಲ ಸೆಲೆಬ್ರಿಟಿ, ಆ ಮೇಲೆ ಪಾಠದ ಬದಲಿಗೆ ಮೋಜಿನ ಮಾತುಗಳನ್ನು ಪುಂಖಾನು ಪುಂಖವಾಗಿ ಆಡುವ ಶಿಕ್ಷಕ ಹೆಚ್ಚು ಅಚ್ಚುಮೆಚ್ಚಿನ ಶಿಕ್ಷಕನಾಗಿ ಬಿಡುತ್ತಾನೆ ಹದಿಹರೆಯದ ಮಕ್ಕಳಿಗೆ. ಪಿಟಿ ಮಾಸ್ಟರ್(ಕ್ಷಮಿಸಿ ಎಲ್ಲರೂ ಅಲ್ಲ) ವಿದ್ಯಾರ್ಥಿಗಳ ದೈಹಿಕ ಸೌಂದರ್ಯವನ್ನು ಕಣ್ಣಂಚಲ್ಲೇ ಅಳೆದು ಎಲ್ಲಾ ಹಂತದಲ್ಲೂ ಆಧ್ಯತೆ ಕೊಡುತ್ತಾ ಹೋಗುತ್ತಾನೆ, ಕ್ರೀಡಾ ಕೂಟಗಳಿಗೆ ಬೇಕು ಬೇಕಾದವರನ್ನು ಆಯ್ದು ಕರೆದುಕೊಂಡು ಹೋಗುತ್ತಾನೆ, ಅಲ್ಲಿ ಏನೇನು ನಡೆಯ ಬಹುದು ಎಂಬುದನ್ನು ಬರೆದರೆ ಇನ್ನೊಂದು ಕಥೆಯಾಗ ಬಹುದು. ಇವೆಲ್ಲ ಹಾಳಾಗಿ ಹೋಗಲಿ ಎಂದರೆ ಪೂರ್ವ ಪ್ರಾಥಮಿಕ ಹಂತದಿಂದ ಪ್ರಾಥಮಿಕ ಹಂತಕ್ಕೆ ಬರುವ ಮಕ್ಕಳಿಗೆ ಶಿಕ್ಷಕರೆ ಮಾದರಿ. ಅವರು ಏನು ಹೇಳಿದರೂ ಅದೇ ವೇದ ವಾಕ್ಯ. ಮಕ್ಕಳ ಮನಸ್ಥಿತಿಯ ಸದುಪಯೋಗ ಪಡೆಯುವ ಶಿಕ್ಷಕ/ಕಿ ನೈತಿಕ ಪ್ರಜ್ಞೆಯನ್ನು ಮೀರಿ ವರ್ತಿಸಿ ಬಿಡುತ್ತಾರೆ. ಬೆಳೆಯುತ್ತಿರುವ ಮಕ್ಕಳ ಹೆಗಲ ಮೇಲೆ ಕೈ ಹಾಕುವುದು, ತೊಡೆ ಚಿವುಟುವುದು, ಪಾಠ ಮಾಡುವಾಗ ಶಿಕ್ಷಿಸುವ ನೆಪದಲ್ಲಿ ಇಲ್ಲವೇ ಶಹಬ್ಬಾಸ್ ಗಿರಿ ಹೇಳುವ ನೆಪದಲ್ಲಿ ಬಿಗಿದಪ್ಪುವುದು, ಕೆನ್ನೆ ಚಿವುಟುವುದು ಇತ್ಯಾದಿ ಕ್ರಿಯೆಗಳನ್ನು ಮಾಡುವುದು ಮಾಮೂಲು. ಒಮ್ಮೆ ಹಳ್ಳಿಯೊಂದರಿಂದ ಫೋನ್ ಕರೆ ಮಕ್ಕಳೊಂದಿಗೆ ಅಶ್ಲೀಲವಾಗಿ ವರ್ತಿಸಿದ ಮುಖ್ಯ ಶಿಕ್ಷಕನ ನಡವಳಿಕೆ ಖಂಡಿಸಿ ಶಾಲಾ ಕೊಠಡಿಯಲ್ಲಿ ಬೀಗ ಹಾಕಲಾಗಿದೆ, ಸರಿ ಇದೇನಪ್ಪಾ ಅಂದುಕೊಂಡು ಶಿಕ್ಷಣಾಧಿಕಾರಿಗಳ ಜೊತೆ ಸ್ಥಳಕ್ಕೆ ಧಾವಿಸಿದೆವು, ಮಕ್ಕಳೆಲ್ಲ ಗೋಡೆ ಸ್ಲೇಟುಗಳ ಮೇಲೆ ಶಿಕ್ಷಕನ ಕೃತ್ಯಗಳ ಕುರಿತು ತೋಚಿದಂತೆ ಬರೆದು ಪ್ರತಿಭಟನೆ ನಡೆಸುತ್ತಿದ್ದವು ಅವರೊಂದಿಗೆ ಪೋಷಕರು ಸೇರಿಕೊಂಡಿದ್ದರು. ಅಲ್ಲಿ ಏನಾಯ್ತು ಎಂದು ನೋಡಿದರೆ ತರಗತಿಯಲ್ಲಿ 7ನೇ ಇಯತ್ತೆ ಕಲಿಯುವ ಹುಡುಗಿ ಋತುಮತಿಯಾಗಿದ್ದಾಳೆ, ಸರಿ ಶಾಲೆಗೆ ಬಂದಿಲ್ಲ, ಕೆಲ ದಿನಗಳ ನಂತರ ಆ ಹುಡುಗಿ ಶಾಲೆಗೆ ಬಂದಿದ್ದಾಳೆ, ಮಕ್ಕಳು ಕೇಳಿವೆ ಋತುಮತಿ ಆಗೋದು ಅಂದ್ರೆ ಏನು? ಶಾಲೆಯ ಮುಖ್ಯ ಶಿಕ್ಷಕ ಏನು ಮಾಡಿದ್ದಾನೆ ಗೊತ್ತೆ ಆ ಬಾಲೆಯ ದಾವಣಿಯೆತ್ತಿ ಇದನ್ನೆ ಹಾಗನ್ನೋದು ಅನ್ನೋದ, ಈ ಘಟನೆಯಿಂದ ಶಾಕ್ ಗೆ ಒಳಗಾದ ಆ ಬಾಲೆ ಅಳುತ್ತಲೇ ಮನೆಗೆ ಓಡಿ ಪೋಷಕರಿಗೆ ಹೇಳಿದ್ದಾಳೆ, ಗಾಬರಿಯಾದ ಪೋಷಕರು ಶಾಲೆಗೆ ಧಾವಿಸಿದ್ದಾರೆ , ಆಗ ಮುಖ್ಯ ಶಿಕ್ಷಕನ ರಂಕು ರಂಕಿನ ಕಥೆಗಳು ಬೀದಿಗೆ ಬಿದ್ದಿವೆ. ದಿನಾ ರಿಯಾಲಿಟಿ ಶೋ ಮತ್ತು ಟೀವಿ ಸೀರಿಯಲ್ ನೋಡುವ ಆತ ಅದರಲ್ಲಿ ಬರುವ ಪಾತ್ರಗಳನ್ನು ವರ್ಣನೆ ಮಾಡ ಮಕ್ಕಳೊಂದಿಗೆ ಚರ್ಚಿಸುತ್ತಿದ್ದ, ಟೀವಿ ಸೀರಿಯಲ್ ನಲ್ಲಿ ಯಾವುದು ತಾನೆ ಒಳ್ಳೆಯದಿದೆ? ಎಲ್ಲವೂ ಹಾದರದ ಕಥೆಗಳೇ ಇಲ್ಲವೇ ಬಾಲ್ಯ ವಿವಾಹಗಳದ್ದು. ಮನೆಯಂಗಳದಲ್ಲಿ ತಪ್ಪದೇ ಇವನ್ನು ನೋಡುವ ಮಕ್ಕಳೊಂದಿಗೆ ಶಾಲೆಯಲ್ಲೂ ಆ ಕುರಿತು ಚರ್ಚಿಸಿದರೆ ಪಾತ್ರಗಳೊಂದಿಗೆ ಮಕ್ಕಳನ್ನು ಥಳುಕು ಹಾಕಿದರೆ ಅದರ ಪರಿಣಾಮವೇನು?
ಮೊನ್ನೆ ಮೊನ್ನೆ ರಾಜಧಾನಿಯಲ್ಲಿ 2-3 ಶಾಲೆಗಳಲ್ಲಿ 3,4,5,6 ವರ್ಷದ ಪುಟ್ಟ ಕಂದಮ್ಮಗಳ ಮೇಲೆ ಕಂಡರಿಯದಂತಹ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದವು, ಕೆಲವು ಪ್ರಕರಣಗಳಲ್ಲಿ ಪಿ ಟಿ ಮಾಸ್ತರ್, ಶಿಕ್ಷಕ, ಅಟೆಂಡರ್, ಮಕ್ಕಳನ್ನು ಶಾಲೆಗೆ ಬಿಡಲು ಕರೆದೊಯ್ಯುವ ವಾಹನ ಚಾಲಕ-ನಿರ್ವಾಹಕರುಗಳು ಕಂಡು ಬಂದರು. ಬಹುತೇಕ ಪ್ರಕರಣಗಳಲ್ಲಿ ಇಂತಹ ಶೋಷಣೆಗೆ ಒಳಗಾದವರು ಹೆಣ್ಣು ಮಕ್ಕಳು ಎಂದು ಕೊಂಡರೂ ಸಹಾ ಸರಿ ಸುಮಾರು ಅಷ್ಟೆ ಪ್ರಮಾಣದಲ್ಲಿ ಗಂಡು ಮಕ್ಕಳು ಸಹಾ ಲೈಂಗಿಕ ತೃಷೆಗೆ ಬಲಿಯಾಗಿದ್ದಾರೆ. ಹೈಸ್ಕೂಲ್ ನಲ್ಲಿ ಮನೆ ಪಾಠಕ್ಕೆ ಹೋಗುವ ಗಂಡು ಮಕ್ಕಳ ಜನನಾಂಗಗಳನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದ ಶಿಕ್ಷಕನೊಬ್ಬನಿದ್ದ, ಕಳೆದ ವರ್ಷ ಹಾಸನ ಜಿಲ್ಲೆಯ ಡಿಪ್ಲೋಮ ವಿದ್ಯಾರ್ತಿಯೊಬ್ಬ ಅನೈಸರ್ಗಿಕ ಕ್ರಿಯೆಗೆ ಬಲಿಯಾಗಿ ಪ್ರಕರಣವನ್ನು ಸಾರ್ವತ್ರಿಕ ಗೊಳಿಸಿದ್ದು ಬೆಚ್ಚಿ ಬೀಳಿಸುವ ಸಂಗತಿ. ಅದೊಂದು ದಿನ ನನ್ನ ಆಪ್ತ ಮಿತ್ರರಾಗಿರುವ ಶಿಕ್ಷಾಣಾದಿಕಾರಿಯೊಬ್ಬರು ಹೀಗೆ ಹೇಳಿದ್ದರು, ನೋಡಿ ನಮ್ಮ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆ ಬರಲಾಗಿ ಎಷ್ಟೋ ಮಕ್ಕಳು ದೌರ್ಜನ್ಯಕ್ಕೊಳಗಾಗುವುದರಿಂದ ಪಾರಾಗಿದ್ದಾರೆ!
ತಂದೆ ತಾಯಿಯನ್ನು ಬಿಟ್ಟರೆ ಮಕ್ಕಳು ಸುರಕ್ಷಿತ ಎಂಬ ಭಾವನೆಯಿದ್ದುದು ಶಾಲೆಗಳಲ್ಲಿ ಅದೂ ಶಿಕ್ಷಕರುಗಳ ಮೇಲುಸ್ತುವಾರಿಯಲ್ಲಿ. ಈಗ ಅಂತಹ ನಂಬಿಕೆಗಳೇ ಮಣ್ಣಾಗುತ್ತಿವೆ, ಕಾಮವೇ ಪ್ರಧಾನವಾಗಿ ನೈತಿಕತೆಯ ಅಧ:ಪತನವಾಗುತ್ತಿರುವುದನ್ನು ಕಾಣ ಬಹುದು. ಶಿಕ್ಷಕ/ಉಪನ್ಯಾಸಕ/ಅದ್ಯಾಪಕ/ಪ್ರಾದ್ಯಾಪಕ ರಿಗೆ ನೀತಿ ನಿಯಮಗಳನ್ನು ರೂಪಿಸ ಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ವೃತ್ತಿಯ ಘನತೆಯನ್ನರಿತು ಅವರೇ ಸಮಾಜ ತಮ್ಮನ್ನು ಗಮನಿಸುತ್ತಿದೆ, ನಾವು ಮಾದರಿ ವ್ಯಕ್ತಿತ್ವಗಳು ಆಗ ಬೇಕು ಎಂಬುದನ್ನು ಮನಗಾಣ ಬೇಕಿದೆ.ಯಾವಾಗ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚಾದವೋ ಆಗ ಎಚ್ಚೆತ್ತುಕೊಂಡ ಸರ್ಕಾರ ಶಾಲಾ-ಕಾಲೇಜುಗಳಿಗೆ ಪೋಲೀಸ್ ನೀತಿ ನಿಯಮಗಳನ್ನು ರೂಪಿಸಿ ನವೆಂಬರ್ 11, 2014ರಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ. ಸಧ್ಯಕ್ಕೆ ಖಾಸಗಿ ಶಾಲೆಗಳಲ್ಲಿ ನಡೆದ ದೌರ್ಜನ್ಯಗಳು ಮಾತ್ರ ಬೆಳಕಿಗೆ ಬಂದಿವೆ ಸರ್ಕಾರಿ ಶಾಲೆಗಳಲ್ಲಿ ಇಂತಹ ಪ್ರಕರಣಗಳು ಜರುಗುತ್ತಿರುವ ಕುರಿತು ಸರ್ಕಾರ ಎಚ್ಚರಿಕೆ ವಹಿಸ ಬೇಕಿದೆ. ಶಿಕ್ಷಕರು ಮಾನವೀಯ ಮತ್ತು ನೈತಿಕ ಮೌಲ್ಯಗಳನ್ನು ಹೊರತು ಪಡಿಸಿದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವ ಕುರಿತು ಕಟ್ಟೆಚ್ಚರ ವಹಿಸುವ ಸಲುವಾಗಿ ಪ್ರತೀ ತರಗತಿಯ ಕೋಣೆಗಳಲ್ಲಿ ಸಿಸಿಟೀವಿಗಳನ್ನು ಅಳವಡಿಸಲು ಸೂಚಿಸಲಾಗಿದೆ, ಪ್ರತೀ ಶಿಕ್ಷಕರ ವೈಯುಕ್ತಿಕ ಮಾಹಿತಿ, ಕೌಟುಂಬಿಕ ಹಿನ್ನೆಲೆಯ ಮಾಹಿತಿಯನ್ನು ಸ್ಥಳೀಯ ಠಾಣೆಗಳಿಗೆ ಒಪ್ಪಿಸಲು ಸೂಚಿಸಲಾಗಿದೆ. ದೇವರುಗಳ ಸ್ಥಾನದಲ್ಲಿರುವ ಶಿಕ್ಷಕರುಗಳು ಇವತ್ತು ಸಾರ್ವತ್ರಿಕ ಕಟಕಟೆಯಲ್ಲಿ ನಿಲ್ಲುವಂತಾಗಿರುವುದು ವ್ಯವಸ್ಥೆಯ ದುರಂತ. ವ್ಯವಸ್ಥೆಯಲ್ಲಿ ಎಲ್ಲಾ ಶಿಕ್ಷಕರುಗಳಿಗೂ ಈ ಮಾತು ಅನ್ವಯಿಸುವುದಿಲ್ಲ ಆದರೆ ನೂರು ಮಂದಿಯ ಪೈಕಿ ಒಬ್ಬ ಇಂಥ ಹೀನಸುಳಿಯ ಶಿಕ್ಷಕರಿದ್ದರೂ ಅದು ಸಮಸ್ತ ಶಿಕ್ಷಕ ಸಮುದಾಯಕ್ಕೆ ಕೇಡು ಅಲ್ಲವೇ? ಅಂತಹ ಹೀನಸುಳಿಗಳ ನಿವಾರಣೆಗೆ ಅನ್ವಯಿಸುವ ಕಾನೂನು ಒಳ್ಳೆಯ ಶಿಕ್ಷಕರನ್ನು ಬಲಿ ತೆಗೆದುಕೊಳ್ಳುತ್ತದಲ್ಲವೇ?