Sunday, May 22, 2011

ಯಾರಿಗೆ ಬೇಕಾಗಿದೆ ಈ 'ರಾಜಕೀಯ'?

ಅಗಸನಿಗೆ ಅರಿವೆ ಚಿಂತೆ ಆದ್ರೆ ಮಗಳಿಗೆ ಮಿಂಡನ ಚಿಂತೆ ಅಂತೆ ಹಾಗೆ ರಾಜ್ಯದಲ್ಲಿ ಪ್ರಸಕ್ತ ರಾಜಕೀಯ ವಿಧ್ಯಮಾನಗಳು ರೇಜಿಗೆ ಹುಟ್ಟಿಸುವಂತೆ ನಡೆಯುತ್ತಿವೆ. ರಾಜ್ಯದ ಮುಖ್ಯ ಮಂತ್ರಿ ಯಡಿಯೂರಪ್ಪ ಮಾಡಿಕೊಂಡ  ಅವಾಂತರಗಳು ಆತನ ರಾಜಕೀಯ ನಡೆ, ವಿರೋಧ ಪಕ್ಷದ ಸ್ಥಿರವಿಲ್ಲದ ನಿಲುವುಗಳು ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಅಯೋಮಯವನ್ನಾಗಿ ಮಾಡಿವೆ. ಈ ನಡುವೆ ಸಾಮಾನ್ಯ ಜನತೆ ತಲ್ಲಣಗೊಂಡಿದ್ದಾರೆ.ರೈತರು ಕಂಗೆಡುವ ಪರಿಸ್ತಿತಿ ಇದೆ, ಶಿಕ್ಷಣದ ಕವಲು ಹಾದಿಯಲ್ಲಿರುವ ಯುವ ಶಕ್ತಿ ದಿಕ್ಕು ತೋರದೇ ನಿಂತಿದ್ದಾರೆ.ಆದರೆ ರಾಜಕಾರಣಿಗಳಿಗೆ ಜನಸಾಮಾನ್ಯರ ಹಿತಾಸಕ್ತಿ ಬೇಕಿಲ್ಲ. ಇಂತಹ ಸನ್ನಿವೇಶದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಯಾರಿಗೆ ಬೇಕಿತ್ತು? ಜನಸಾಮಾನ್ಯರ ಹಿತಾಸಕ್ತಿ ಯಾವ ರಾಜಕಾರಣಿಗೆ ಬೇಕಾಗಿದೆ? ಇಂತಹವರು ಅಧಿಕಾರದಲ್ಲಿರಬೇಕಾ? ಅನಗತ್ಯ ರಾಜಕೀಯ ಚರ್ಚೆಗಳು ಬದುಕು ಕಟ್ಟಲು ಸಹಕರಿಸುತ್ತವಾ? ಸಧ್ಯ ನಮಗೆ ಎಂತಹ ಸನ್ನಿವೇಶ ಬರಬೇಕಾಗಿದೆ ಎಂಬುದು ಸಧ್ಯದ ಪ್ರಸ್ತಾವನೆ.
            ಕಳೆದ ವರ್ಷ ಹೆಚ್ಚು ಕಡಿಮೆ ಇದೇ ಸಮಯಕ್ಕೆ ರಾಜ್ಯದಲ್ಲಿ ನಕಲಿ ಬೀಜ ಮಾರಾಟ ಹಗರಣ ಬೆಳಕಿಗೆ ಬಂದಿತ್ತು, ಗೊಬ್ಬರ ಹಾಹಾಕಾರ ಇತ್ತು, ರಾಜ್ಸ ಸರ್ಕಾರ ರೆಡ್ಡಿಗಳ ಹೊಡೆತಕ್ಕೆ ಸಿಲುಕಿ ನಲುಗುತ್ತಿತ್ತು.ಬೀಜ ಕಂಪನಿಗಳೊಂದಿಗೆ ಕಮೀಷನ್ ವ್ಯವಹಾರ ಮಾಡಿಕೊಂಡ ಕೃಷಿ ಇಲಾಖೆಯ ಆಯುಕ್ತರು, ಅಧಿಕಾರಿಗಳೂ ರೈತರ ಹಿತ ಮರೆತು ಚೀನಾ ಪ್ರವಾಸಕ್ಕೆ ಹೋಗಿದ್ದರು. ಆದರೆ ಒಬ್ಬ ಮಾಜಿ ಶಾಸಕ ಎ ಟಿ ರಾಮಸ್ವಾಮಿ, ರಾಜ್ಯದ ರೈತರಿಗೆ ವಂಚಿಸುವ ಬೀಜ ಮಾರಾಟ ಕಂಪನಿಗಳ ಕುರಿತು ಧ್ವನಿಯೆತ್ತಿದ್ದರು.ಸರ್ಕಾರಕ್ಕೆ ಪತ್ರ ಬರೆದು ಬೀಜ ಕಂಪನಿಗಳೊಂದಿಗೆ ಅಧಿಕಾರಿಗಳ ಮಾಡಿಕೊಂಡ ಕಮಿಷನ್ ವ್ಯವಹಾರ, ನಕಲಿ ಬೀಜ, ಹೆಚ್ಚಿನ ಬೆಲೆಯ ಬೀಜದಿಂದಾಗುತ್ತಿರುವ ತೊಂದರೆಯನ್ನು ಸರ್ಕಾರಕ್ಕೆ ಎಳೆ ಎಳೆಯಾಗಿ ವಿವರಿಸಿದ್ದರು. ಆದರೆ ಸರ್ಕಾರ ಏನು ಕ್ರಮ ಕೈಗೊಂಡಿತು? ರೈತರ ಹಿತಾಸಕ್ತಿಯನ್ನು ಯಾವರೀತಿ ಕಾಪಾಡಿತು ಎಂಬುದು ಮಾತ್ರ ತಿಳಿಯಲಿಲ್ಲ, ಅದು ರಾಜ್ಯದ ರೈತರ ಮಟ್ಟಿಗೆ ದುರಂತದ ಸಂಗತಿಯೂ ಹೌದು. ಇದಕ್ಕೂ ಮುನ್ನ ಇದೇ ಮಾಜಿ ಶಾಸಕ ಎಟಿಆರ್ ಸರ್ಕಾರ ರೈತರ ಬಡ್ಡಿ ಮನ್ನಾ ಮಾಡಲು ನೀಡಿದ ಅವಕಾಶವನ್ನು ಬ್ಯಾಂಕ್ ಅಧಿಕಾರಿಗಳು ಮತ್ತು ಸ್ಥಳೀಯ ಪ್ರತಿನಿಧಿಗಳು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಹೇಗೆ ಬಡರೈತರನ್ನು ವಂಚಿಸಿದ್ದಾರೆ ಎಂಬ ಬಗ್ಗೆಯೂ ದಾಖಲೆಗಳ ಸಮೇತ ಬಹಿರಂಗ ಪಡಿಸಿದ್ದರೂ ಏನೂ ಕ್ರಮ ಕೈಗೊಳ್ಳದ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿತು. ರೈತರ ಹೆಸರು ಹೇಳಿ ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿದ ಮುಖ್ಯ ಮಂತ್ರಿ ಬಿಎಸ್ ವೈ ಎಂದು ಹೇಳಿಕೊಳ್ಳುವ ಮೂಲಕ ರೈತರ ಹಿತಾಸಕ್ತಿಯ ನಾಟಕ ಪ್ರದರ್ಶಿಸಿದರು. ಅಸಲಿಗೆ ಜ್ಯೋತಿಷಿಯೊಬ್ಬ ಹೇಳಿದ ಮಾತಿನಂತೆ ಹಸಿರು ಶಾಲು ಹೊದ್ದು ಕಂಟಕ ನಿವಾರಣೆಗೆ ಹಾಗೆ ಮಾಡಿದರೆಂಬುದು ಈಗ ಎಲ್ಲರಿಗೂ ತಿಳಿದ ಸತ್ಯ. ಇಂತಹವರು ಬಂದು ಮಾಡಿದ್ದೇನು? ರೈತರಿಗೆ ಎತ್ತು-ಗಾಡಿ ಯೋಜನೆ, ಬಿತ್ತನೆ ಬೀಜ ಕೊಳ್ಳಲು ರೈತರಿಗೆ ಧನ ಸಹಾಯ, ಈಗ ಲಾಟರಿ ಮಾದರಿಯ ಸುವರ್ಣ ಭೂಮಿ ಯೋಜನೆ ಎಂಬ ಸತ್ವವಿಲ್ಲದ ಬಣ್ಣದ ಯೋಜನೆಗಳನ್ನು ಹೇಳುವ ಮೂಲಕ ವಂಚಿಸುತ್ತಿದ್ದಾರೆ. ಈ ಪೈಕಿ ಯಾವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲದಿರುವುದು ಕಣ್ಣೆದುರಿಗಿರುವ ಸತ್ಯ. 
          ಇವತ್ತು ರಾಜ್ಯದಲ್ಲಿ ಮತ್ತೆ ಗೊಬ್ಬರದ ಸಮಸ್ಯೆ ತಲೆ ಎತ್ತಿದೆ, ಧೃಢೀಕೃತ ಬಿತ್ತನೆ ಬೀಜ ಇಲ್ಲ,ಕೃಷಿ/ತೋಟಗಾರಿಕೆ/ಮೀನುಗಾರಿಕೆ/ರೇಷ್ಮೆ/ಜಲಾನಯನ/ನೀರಾವರಿ/ಪಶು ಇಲಾಖೆಗಳು ನರಸತ್ತಂತಿವೆ, ರೈತರಿಗೆ ತಾಂತ್ರಿಕ ಮಾರ್ಗದರ್ಶನವನ್ನು ಕಾಲ ಕಾಲಕ್ಕೆ ಒದಗಿಸುವ, ಸೌಕರ್ಯ ಕಲ್ಪಿಸುವ  ಬದಲು ಅಧಿಕಾರಿಗಳು  ಇಲಾಖೆಯ ಮಾರ್ಗಸೂಚಿಗಳನ್ನು ಕಾಯುತ್ತಾ, ಅನುದಾನದ ಕಡೆಗೆ ಕೈ ತೋರಿಸುತ್ತಾ ನಿಸ್ತೇಜವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಲ್ಲಿ ರೈತರಿಗೆ , ಕೂಲಿ ಕಾರ್ಮಿಕರಿಗೆ ಕೆಲಸ ಸಿಕ್ಕಿಲ್ಲ,ಅಧಿಕಾರಿಗಳು ಮತ್ತು  ಜನಪ್ರತಿನಿಧಿಗಳು ಕೋಟ್ಯಾಂತರ ರೂಪಾಯಿ ವಂಚಿಸಿದ್ದಾರೆ.ಸರ್ಕಾರ ಮಾತ್ರ ಕ್ರಮ ಕೈಗೊಳ್ಳದೇ ನಿರುಮ್ಮಳವಾಗಿದೆ.   ತೋರಿಕೆಯ 'ಕೃಷಿ ಬಜೆಟ್' ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.ಹೀಗಾಗಿ ರಾಜ್ಯದ ರೈತ ಆಕಾಶ ನೋಡುವಂತಾಗಿದೆ.
              ಇನ್ನು ವೃತ್ತಿಪರ ಶಿಕ್ಷಣದ ಕುರಿತು ಸರಿಯಾದ್ದೊಂದು ನೀತಿ ಪ್ರಕಟಿಸದ ರಾಜ್ಯ ಸರ್ಕಾರದ ಧೋರಣೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಕಂಗಾಲಾಗುವಂತೆ ಮಾಡಿದೆ. ಸರ್ಕಾರಿ ಶಾಲೆಗಳಿಗೆ ಮಿತಿ ಮೀರಿದ ಸವಲತ್ತುಗಳಿದ್ದರೂ ಸರಿಯಾಗಿ ನಿರ್ವಹಿಸಲಾಗದೇ ಅನೇಕ ಶಾಲೆಗಳು ಮುಚ್ಚುವಂತಾಗುತ್ತಿದೆ, ಸರ್ಕಾರ ನೀತಿ ನಿಯಮಗಳನ್ನು ಬದಿಗಿರಿಸಿ ಹೊಸ  ಶಿಕ್ಷಣ ಸಂಸ್ಥೆಗಳಿಗೆ ನಾಯಿಕೊಡೆಗಳಂತೆ ತಲೆ ಎತ್ತಲು ಅವಕಾಶ ಮಾಡುತ್ತಿದೆ. ವೃತ್ತಿಪರ ಶಿಕ್ಷಣ ಕೇಂದ್ರಗಳು ವಸೂಲಿ ಕೇಂದ್ರಗಳಾಗಿ ಪರಿಣಮಿಸಿವೆ ಅವಕ್ಕೊಂದು ಅಂಕುಶ ಹಾಕುವ ಸಣ್ಣ ಪ್ರಯತ್ನವನ್ನು ಸರ್ಕಾರ ಮಾಡುತ್ತಿಲ್ಲ.
             ಆರೋಗ್ಯ ಇಲಾಖೆಯಲ್ಲಿ 108 ಅಂಬ್ಯುಲೆನ್ಸ್ ಸೇವೆ ಒದಗಿಸದ್ದೇವೆಂದು ಎದೆಯುಬ್ಬಿಸಿ ಹೇಳುವ ಸರ್ಕಾರ ಅದರ ನಿರ್ವಹಣೆ ಹಾಗೂ ಪ್ರತೀ ಕಿಮೀ ಗೆ ಅಳತೆ ಮೀರಿ ಸಾರ್ವಜನಿಕರ ಎಷ್ಟು ಹಣ ಪಾವತಿಸುತ್ತಿದೆ ಎಂಬುದನ್ನು ಮಾತ್ರ ಹೇಳುತ್ತಿಲ್ಲ, ಅದರ ಗುತ್ತಿಗೆ ಅವಧಿ ಇನ್ನೊಂದು ತಿಂಗಳಿಗೆ ಅಂತ್ಯಗೊಳ್ಳಲಿದೆ ನಂತರ ಸರ್ಕಾರಿ ಹೆಗ್ಗಣಗಳು ಅದನ್ನು ಸುಪರ್ದಿಗೆ ತೆಗೆದುಕೊಳ್ಳಲಿವೆ ಅಲ್ಲಿಗೆ ಅದರ ಪರಿಸ್ಥಿತಿ ಊಹಿಸಬಹುದು. ಅದೇ ರೀತಿ ಕಂಪ್ಯೂಟರ್ ಶಿಕ್ಷಣಕ್ಕೆ ಆದ್ಯತೆ ನೀಡಿ ಎಸ್ ಎಂ ಕೃಷ್ಣರ ಅವಧಿಯಲ್ಲಿ ಆರಂಭಿಸಿದ ಕೋಟ್ಯಾಂತರ ರೂಪಾಯಿ ವೆಚ್ಚದ ಕಂಪ್ಯೂಟರ್ ಗಳು ಸರ್ಕಾರದ ನಿಲುವುಗಳಿಂದಾಗಿ ಮಕ್ಕಳ ಶಿಕ್ಷಣಕ್ಕೆ ಲಬ್ಯವಾಗದೇ ಧೂಳು ತಿನ್ನುತ್ತಿವೆ .ನಾರಿಯರಿಗೆ ವಿತರಿಸಿದ ಭಾಗ್ಯಲಕ್ಷ್ಮಿ ಸೀರೆ ಯಲ್ಲಿ ಸರ್ಕಾರದ ಮಂದಿ ಪಡೆದ ಬಾಬತ್ತು ಎಷ್ಟೆಂಬುದರ ಲೆಕ್ಕ ಜನರಿಗೆ ತಿಳಿದಿದೆ. ರೈತರನ್ನು ವಂಚಿಸಿ ಪಡೆದ ಭೂಮಿಯನ್ನು ಮಾಜಿ ಸಚಿವನೋರ್ವ ಯಾವ ಮೊತ್ತಕ್ಕೆ ಮಾರಿ ದುಡ್ಡು ಮಾಡಿದ?ಬಣ್ಣ ಬಣ್ಣದ ಯೋಜನೆಗಳು ಮತ್ತು ಬಾಬತ್ತುಗಳಿಗೆ ಕೋಟಿಗಳ ಲೆಕ್ಕದಲ್ಲಿ ಹಣ ಪ್ರಕಟಿಸಿದ ಸರ್ಕಾರ ನಂತರ ಅದನ್ನೇ ವ್ಯಾಪಾರ ಮಾಡಿಕೊಂಡಿದ್ದು ಈಗ ಇತಿಹಾಸ.ಜಾಗತೀಕರಣದ ಹೆಬ್ಬಾಗಿಲು ತೆರೆದು ಅನಾಮತ್ತು 8ಕಂಪನಿಗಳಿಗೆ ಕೃಷಿಗೆ ಸಂಬಂಧಿಸಿದಂತೆ ಉದ್ದಿಮೆ ಸ್ಥಾಪಿಸಲು ಅನುವು ಮಾಡಿಕೊಡುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಬಿಎಸ್ ವೈ ಕೃಷಿ ಬಜೆಟ್ ನಾಟಕವಾಡಿದ್ದು ಈಗ ಬಹಿರಂಗವಾಗುತ್ತಿರುವ ಸತ್ಯ.ತನ್ನ ಸಚಿವ ಸಂಪುಟದ ಶಾಸಕರುಗಳು ಸಚಿವರುಗಳ ಲಂಪಟತನ, ಭ್ರಷ್ಟಾಚಾರ, ಅಪ್ರಾಮಾಣಿಕತೆಗಳನ್ನು ಸಮರ್ಥಿಸಿಕೊಳ್ಳುವ, 800ಕೋಟಿ ಮೌಲ್ಯದ ಡಿನೋಟಿಫಿಕೇಶನ್ ಹಗರಣದ ಸೂತ್ರದಾರನಾದ ಮುಖ್ಯಮಂತ್ರಿ ಯಾವ ಎಗ್ಗು ತಗ್ಗಿಲ್ಲದೇ ಸತ್ಯ ಪ್ರಾಮಾಣಿಕತೆಯ ಮಾತುಗಳನ್ನಾಡುವುದು ಎಷ್ಟು ಸರಿ? ದೇಶದ ರಾಜಕಾರಣದ ಇತಿಹಾಸದಲ್ಲೇ ಕಂಡೂ ಕೇಳರಿಯದ ಪ್ರಮಾಣದಲ್ಲಿ ಶಾಸಕರುಗಳ ಕೊಳ್ಳುವಿಕೆ, ಆಮಿಷದಂತಹ ಅನಾಹುತಕಾರಿ ಬೆಳವಣಿಗೆಗೆ ನಾಂದಿ ಹಾಡಿದ ಇಂತಹ ಸರ್ಕಾರ ಬೇಕಾ ಸ್ವಾಮಿ? 
         ಇದೆಲ್ಲ ಸರಿ ಆದರೆ ಇವತ್ತು ರಾಜ್ಯ ಸರ್ಕಾರದ ಪತನಕ್ಕೆ ಸಂಚು ಹಾಕಿ ಕುಳಿತಿರುವ ವಿರೋಧ ಪಕ್ಷಗಳು ಪ್ರಸಕ್ತ ಸಂಧಿಗ್ಧ ಸನ್ನಿವೇಶದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಅಸಹ್ಯ ಹುಟ್ಟಿಸುವಂತಿದೆ. ರಾಜ್ಯಪಾಲ ಮುಕ್ತವಾಗಿ ಕಾರ್ಯ ನಿರ್ವಹಿಸದೇ ಪಕ್ಕಾ ಕಾಂಗ್ರೆಸ್ ಏಜೆಂಟನಾಗಿ ನಡೆದುಕೊಳ್ಳುತ್ತಿರುವದು ರಾಜ್ಯಾಂಗದ ಮೇಲಿನ ಗೌರವವನ್ನು ಕಡಿಮೆ ಮಾಡುತ್ತಿದೆ. ಜನಸಾಮಾನ್ಯರ ಸಮಸ್ಯೆಗಳ ಬಗೆಗೆ ಧ್ವನಿಯೆತ್ತದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರುಗಳು ಅಧಿಕಾರದ ಹವಣಿಕೆಗೆ ಬಿದ್ದು ಬಟ್ಟೆ ಹರಿದುಕೊಳ್ಳುತ್ತಿದ್ದಾರೆ.. ಒಳಗೊಳಗೆ ಬಿಎಸ್ ವೈ ವಿರುದ್ದ ಒಳಸಂಚು ನಡೆಸುತ್ತಿರುವ ಬಿಜೆಪಿಗಳು ಪ್ರತಿ ಹೋರಾಟ ನಡೆಸುತ್ತಿದ್ದಾರೆ. ಇವರಿಗೆಲ್ಲ ಜನರ ಹಿತಾಸಕ್ತಿ  ಬೇಕಿಲ್ಲ ಹೀಗಿರುವಾಗ ರಾಜ್ಯಪಾಲರನ್ನು ಮನೆಗೆ ಕಳುಹಿಸಿ ಸರ್ಕಾರವನ್ನು ವಿಸರ್ಜಿಸಿ ರಾಜಕೀಯ ಪಕ್ಷಗಳಿಗೆ ಪಾಠ ಕಲಿಸದಿದ್ದರೆ ರಾಜ್ಯದ ಜನತೆ ನೆಮ್ಮದಿಯಿಂದ ಇರಲಾಗದು ಅಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...