Sunday, April 25, 2010

ಪಂಚಾಯ್ತಿ ಎಲೆಕ್ಷನ್ ಅಂದ್ರೆ ಸುಮ್ನೇನಾ?

ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿನ ಬಿಬಿಎಂಪಿ ಮಹಾಸಮರ ಅಂತ್ಯಗೊಂಡಿದೆ, ಬೆನ್ನಲ್ಲೇ ಗ್ರಾಮ ಪಂಚಾಯತ್ ಚುನಾವಣೆ ಎಂಬ ಮಹಾ ಸಮರ ಎದ್ದು ನಿಂತಿದೆ. ಎಂಪಿ ಚುನಾವಣೆ, ಎಂಎಲ್ ಎ ಚುನಾವಣೆ ಎಲ್ಲವನ್ನೂ ಮೀರಿದ ಪ್ರಾಶಸ್ತ್ಯ ಈ ಚುನಾವಣೆಗಿದೆ. ಚುನಾವಣೆಯ ಹೊಸ್ತಿಲಲ್ಲಿ ನಿಂತು ನೋಡುವುದಾದರೆ ಯಾಕೆ ಗ್ರಾಮ ಪಂಚಾಯ್ತಿ ಚುನಾವಣೆಗೆ ಮನ್ನಣೆ? ಇದರ ಮಹತ್ವ ಏನು? ಏನೆಲ್ಲಾ ಬದಲಾವಣೆಗಳು ಈ ಪಂಚಾಯ್ತಿಗಳಿಂದ ಆಗಿದೆ? ಕಳೆದ 2-3 ಟರ್ಮುಗಳಲ್ಲಿ ಈ ಚುನಾವಣೆಗಳಿಗೆ ಸಿಗದಿದ್ದ ಮಹತ್ವ ಈಗ ಯಾಕೆ ಬಂದಿದೆ? ಎಂಬೆಲ್ಲಾ ಪ್ರಶ್ನೆಗಳು ಸಹಜ ಯಾಕೆ ಗೊತ್ತಾ?
ಭಾರತ ಹಳ್ಳಿಗಳ ದೇಶ, ಇಲ್ಲಿ ಜಗತ್ತಿನ ಬಹು ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಪ್ರಜೆಯೇ ಪ್ರಭುವೂ ಹೌದು. ಹಳ್ಳಿಯಿಂದ ದಿಲ್ಲಿಗೆ ಹೋಗುವ ಪುಡಾರಿಗಳು ತಮ್ಮ ಹಿಂಬಾಲಕರಿಗೆ, ಕಾರ್ಯಕರ್ತರಿಗೆ ಜಾಗ ಮಾಡಿಕೊಡಲು ಅವಕಾಶ ಒದಗಿಸುವ ಅತ್ಯುತ್ತಮ ವೇದಿಕೆಯೂ ಸಹಾ ಗ್ರಾಮ ಪಂಚಾಯ್ತಿಗಳೇ ಆಗಿವೆ. ಹಿಂದೆಲ್ಲಾ ಹಳ್ಳಿಗಳಲ್ಲಿ ಅಶ್ವಥ್ತ ಕಟ್ಟೆ ಮೇಲೆ ಕುಳಿತು ನ್ಯಾಯ ಮಾಡುವ ಊರಗೌಡ, ಪಟೇಲ, ಶ್ಯಾನುಬೋಗರು ಇದ್ದರು. ಆದರೆ ಕಾಲ ಬದಲಾದಂತೆ ಹಳ್ಳಿಗಳಿಗೂ ಆಧುನೀಕರಣದ ಗಾಳಿ ಬೀಸಿ 'ಆವಯ್ಯನ ಮಾತು ಯಾಕ್ ಕೇಳಬೇಕು? ಅವನೇನು ದೊಡ್ಡಕೋಲಾ? ಎಂಬ ಧಾಟಿಯ ಮಾತುಗಳು, ಅಶಿಸ್ತಿನ ನಾಗರೀಕತೆ ಪ್ರದರ್ಶಿಸುವ ಮಂದಿ, ಅತ್ತ ಜಮೀನಿನಲ್ಲಿ ಗೆಯ್ಯದೇ ಇತ್ತ ಬೇರೆ ಕಡೆಯೂ ದುಡಿಯದೇ ಅವರಿವರ ಮಾತು,ಕೊಂಕುತನ ಬೆಳೆಸಿಕೊಂಡು ವೇಸ್ಟ್ ಬಾಡಿಗಳಾಗಿ ಮನೆಯವರಿಗೂ ಹೊರೆಯಾಗಿ ಕಾಲ ಕಳೆಯುವ ಮಂದಿ ಇವತ್ತು ನಮ್ಮ ಹಳ್ಳಿಗಳಲ್ಲಿ ಹೆಜ್ಜೆಗೂ ಕಾಣ ಸಿಗುತ್ತಾರೆ. ಮೈಗಳ್ಳತನ, ಪುಡಾರಿತನ ಮೇಳೈಸಿ ಹಳ್ಳಿಗಳ ನೆಮ್ಮದಿಯೂ ಕೆಟ್ಟು ಕೆರ ಹಿಡಿದಿದೆ. ಒಂದು ಶಾಲೆಯಲ್ಲಿ ಸಿಗುವ SDMC ಅಧ್ಯಕ್ಷ ಪದವಿಯನ್ನು, ಗ್ರಾಮ ಪಂಚಾಯ್ತಿಯ ಅಧ್ಯಕ್ಷ-ಸದಸ್ಯ ಸ್ಥಾನವನ್ನು ಪ್ರಧಾನಿ ಸ್ಥಾನ, ರಾಷ್ಟ್ರಪತಿ ಸ್ಥಾನದ ಮಟ್ಟಕ್ಕೆ ಕಲ್ಪಿಸಿಕೊಂಡು ಸದುದ್ದೇಶಕ್ಕಿಂತ ಸ್ವಾರ್ಥ ಬೆರೆತ ರಾಜಕೀಯ ಮಾಡುವುದನ್ನು ಹಳ್ಳಿಗಳಲ್ಲಿ ಕಾಣಬಹುದು. ಇಂತಹದ್ದೊಂದು ಪುಡಾರಿತನ ಇಡೀ ಗ್ರಾಮದ ಜನರಿಗೆ ಅನುಕೂಲ ಕಲ್ಪಿಸುವ ಬದಲು ಅಶಾಂತಿಗೆ ಕಾರಣವಾಗಿದೆ, ಪಕ್ಷರಾಜಕಾರಣ ಹೆಡೆಯಾಡಲಾರಂಬಿಸಿದೆ. ಅಕ್ಕಪಕ್ಕದ ಮನೆಯವರಿರಲಿ, ಅಣ್ಣ-ತಮ್ಮ-ಅಪ್ಪ ನೇ ಪರಸ್ಪರರ ವಿರುದ್ದ ಕತ್ತಿಮಸೆಯಲು ಈ ಗ್ರಾಮ ಪಂಚಾಯತ್ ಚುನಾವಣೆ ಅವಕಾಶ ಕಲ್ಪಿಸಿದೆ ಇದು ಈ ದೇಶದ ದುರಂತ ಸ್ವಾಮಿ. ಇರಲಿ ಈ ಪಂಚಾಯ್ತಿಳ ಅಸ್ತಿತ್ವ ಹೇಗೆ ಬಂತು ? ಇದರ ಅನುಕೂಲವೇನು? ಆದರೆ ಇದು ಹೇಗೆ ದಾರಿ ತಪ್ಪಿದೆ ಅನ್ನೊದನ್ನು ಸಂಕ್ಷಿಪ್ತವಾಗಿ ಹೇಳಿ ಬಿಡ್ತೀನಿ.
ನೋಡಿ ಈ ಪಂಚಾಯತ್ ರಾಜ್ ವ್ಯವಸ್ಥೆ ದಕ್ಷಿಣ ಏಷ್ಯಾದ ರಾಷ್ಟ್ರಗಳ ಒಂದು ಸ್ಥಳೀಯ ಸರ್ಕಾರದ ಆಡಳಿತ ವ್ಯವಸ್ಥೆ. ಸಧ್ಯ ಭಾರತ, ಪಾಕೀಸ್ತಾನ ಮತ್ತು ನೇಪಾಳ ರಾಷ್ಟ್ರಗಳಲ್ಲಿ ಪ್ರಮುಖವಾಗಿ ಅಸ್ತಿತ್ವದಲ್ಲಿವೆ. ಪಂಚಾಯತ್ ಅಂದ್ರೆ 'ಪಂಚ' ಐದು ಮಂದಿಯ 'ಯಾತ್' ಸದನ ಎಂದರ್ಥ. ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ದಿಗೆ ಮಹತ್ಮಾಗಾಂದಿಯವರು ಕಂಡ ಸ್ವರಾಜ್ಯ ಕನಸಿನ ಫಲವೇ ನಮ್ಮಲ್ಲಿರುವ ಪಂಚಾಯತ್ ರೂಪದ ಆಡಳಿತ. 1950-60ರ ದಶಕದಲ್ಲಿ ದೇಶದ ಬೇರೆ ಬೇರೆ ರಾಜ್ಯಗಳಲ್ಲ ಪಂಚಾಯತ್ ಅಸ್ತಿತ್ವದಲ್ಲಿವೆ. ಸಾಮಾಜಿಕ ನ್ಯಾಯ, ಆರ್ಥಿಕ ಸ್ವಾವಲಂಬನೆ, ಗ್ರಾಮೀ ಣಮೂಲ ಸೌಕರ್ಯಾಭಿವೃದ್ದಿ, ಗ್ರಾಮೀಣ ಮಂದಿಗೆ ಉದ್ಯೋಗ,ಆಹಾರ ಭದ್ರತೆ ಮೂಡಿಸುವುದು ಹೀಗೆ ಹತ್ತು ಹಲವು ಉದ್ದೇಶಗಳು ಈ ಪಂಚಾಯ್ತಿಗಳಿಗಿದೆ. ದೇಶದಾಧ್ಯಂತ ಪಂಚಾಯತ್ ರಾಜ್ ವ್ಯವಸ್ಥೆ ಅಸ್ತಿತ್ವದಲ್ಲಿದ್ದರೂ ಸಮರ್ಪಕವಾಗಿ ನಡೆಯುತ್ತಿರುವದು ಕೆಲವೇ ರಾಜ್ಯಗಳಲ್ಲಿ ಮಾತ್ರ. ಬಿಹಾರ ದಂತಹ ರಾಜ್ಯದಲ್ಲಿ ಸ್ಥಳೀಯ ಸರ್ಕಾರದ ಅಸ್ತಿತ್ವವೇ ಇಲ್ಲದಂತಾಗಿದೆ, ಅಲ್ಲಿ ಚುನಾವಣೆಗಳೆ ನಡೆದಿಲ್ಲ. ಸಾಮಾಜಿಕ ನ್ಯಾಯದಂತಹ ಅಂಶಗಳಿಗೆ ಬೆಂಕಿ ಬಿದ್ದಿದೆ. ಅದೇ ಕೇರಳದಲ್ಲಿ ಇಡೀ ದೇಶಕ್ಕೆ ಮಾದರಿಯಾಗುವಂತಹ ಸ್ಥಳೀಯ ಸರ್ಕಾರ ವ್ಯವಸ್ಥೆ ಜಾರಿಯಲ್ಲಿದೆ. ಗ್ರಾಮ ಪಂಚಾಯ್ತಿ,ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹೀಗೆ ಮೂರು ಹಂತಗಳಲ್ಲಿ ಬರುವ ಸ್ಥಳೀಯ ಸರ್ಕಾರ ವ್ಯವಸ್ತೆ ಯಲ್ಲಿ ಪ್ರಧಾನವಾಗಿ ನಿಲ್ಲುವುದೇ ಗ್ರಾಮ ಪಂಚಾಯ್ತಿಗಳು. ಇಲ್ಲಿ ಅಧ್ಯಕ್ಷನಾಗುವವನು ಅಭಿವೃದ್ದಿ ಕಾರ್ಯಗಳಿಗೆ ಸಹಿ ಹಾಕುವ ಅವಕಾಶ ಪಡೆಯುತ್ತಾನೆ. ಇಂತಹ ಅವಕಾಶ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಯ ರಾಜಕಾರಣಿಗಳಿಗೆ, ಎಂಎಲ್ ಎ ಗೆ ಎಂಪಿಗೆ ಏಕೆ ಒಬ್ಬ ಸಚಿವನಿಗೂ ಸಹಾ ಅಂತಹ ಅವಕಾಶ ಲಭಿಸದು. ದೇಶದ ರಾಷ್ಟ್ರಪತಿಗೆ ಇರುವಷ್ಟೇ ವಿಶೇಷ ಅಧಿಕಾರಗಳನ್ನು ಪಡೆಯುವ 2ನೇ ಏಕೈಕ ವ್ಯಕ್ತಿ ಕೂಡಾ ಗ್ರಾಮ ಪಂಚಾಯ್ತಿ ಅಧ್ಯಕ್ಷನಿಗಿರುತ್ತದೆ. ಈಗ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಂದಲೂ ಸಹಾ ಹೆಚ್ಚಿನ ಪ್ರಮಾಣದ ಅನುದಾನ ಗ್ರಾಮ ಪಂಚಾಯ್ತಿಗಳಿಗಿರುವುದು, ಇತರೆ 2ಪಂಚಾಯ್ತಿಗಳಿಗಿಂತ ಹೆಚ್ಚಿನ ರೀತಿಯಲ್ಲಿ ಜನರನ್ನು ಪರಿಣಾಮಕಾರಿಯಾಗಿ ತಲುಪುವ ಏಕೈಕ ಮಾದ್ಯಮ ಈ ಗ್ರಾಮ ಪಂಚಾಯ್ತಿ.
ಇಂತಹ ಪಂಚಾಯ್ತಿಗೆ ಖದರ್ರು ದಕ್ಕಿದ್ದು 1ದಶಕದ ಹಿಂದೆ, ಕೂಲಿಗಾಗಿ ಕಾಳು ಯೋಜನೆ, ಸ್ವಚ್ಚ ಗ್ರಾಮ ಯೋಜನೆ, ಗ್ರಾಮೀಣ ಸ್ವರೋಜ್ ಗಾರ್ ಯೋಜನೆ, ಇಂದಿರಾ ಅವಾಸ್, ಅಂಬೇಡ್ಕರ್, ರಾಜೀವ್ ಗಾಂದಿ ವಸತಿ ಯೋಜನೆ ಹೀಗೆ ಬಂದ ಯೋಜನೆಗಳು ಅಧಿಕಾರ ಹಿಡಿಯುವ ಮರಿ ಪುಡಾರಿಗಳಿಗೆ, ಅಧಿಕಾರಿಗಳಿಗೆ ಅಕ್ಷಯ ಪಾತ್ರೆಯಾಗಿತ್ತು. ಆದರೆ ಅದಕ್ಕಿಂತಲೂ ಹೆಚ್ಚಿನ ಬಲ ಬಂದಿದ್ದು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಂದ ಮೇಲೆ. ಇದರ ಫೋರ್ಸ್ ಹೇಗಿತ್ತೆಂದರೆ ದುಡ್ಡು ಹೊಡೆಯುವ ಪಂಚಾಯ್ತಿಗಳ ಇತರೆ ಯೋಜನೆಗಳು ನೆನೆಗುದಿಗೆ ಬಿದ್ದು ಇದು ಸಿಕ್ಕಾಪಟ್ಟೆ ಮುಂದಿದೆ. ಇದಕ್ಕೂ ಮುನ್ನ ಸುವರ್ಣ ಗ್ರಾಮ ಯೋಜನೆ, ಸ್ವಚ್ಚ ಗ್ರಾಮ ಯೋಜನೆ ಸಮರ್ಪಕ ಅನುಷ್ಠಾನ ಕಾಣದೇ ಬೋಗಸ್ ಬಿಲ್-ವರದಿ ನೀಡಿ ಲಕ್ಷ ಲಕ್ಷಗಳಲ್ಲಿ ಲೂಟಿ ಮಾಡುತ್ತಿದ್ದ ಮಂದಿ ಈ ಉದ್ಯೋಗ ಖಾತ್ರಿಯಿಂದ ಕೋಟಿ ಕೋಟಿ ಗಳಲ್ಲಿ ಹಗಲು ದರೋಡೆಗಿಳಿದಿದ್ದಾರೆ. ಇದರಲ್ಲಿ ದುಡ್ಡು ತಿನ್ನದವನೇ ಪರಮ ಪಾಪಿ. PWD/ZP ಕಂಟ್ರಾಕ್ಟು ಮಾಡುತ್ತಿದ್ದವರು,ಗ್ರಾಮ ಪಂಚಾಯಿತಿ ಸದಸ್ಯರು-ಅಧ್ಯಕ್ಷರು, ಊರ ಮುಂದೆ ತೂಕಡಿಸುತ್ತಿದ್ದ ಮೈಗಳ್ಳ ಕೂ ಡ ಉದ್ಯೋಗ ಖಾತ್ರಿಯ ಅತಿಕ್ರಮ ಗುತ್ತಿಗೆದಾರರು. ಇಂಥಹ ಕೇಡಿಗಳೆಲ್ಲ ಒಟ್ಟಿಗೆ ಸೇರಿ ಗ್ರಾಮ ಪಂಚಾಯ್ತಿಯ ಅಖಾಡಕ್ಕಿಳಿದಿರುವುದು ಚುನಾವಣೆ ರಂಗೇರಲು ಕಾರಣವಾಗಿದೆ. ತಾಲ್ಲೂಕು ಪಂಚಾಯ್ತಿ-ಜಿಲ್ಲಾ ಪಂಚಾಯ್ತಿಗೆ ನಿಲ್ಲುವ ತಾಕತ್ತಿರುವವರು ಕೂಡಾ ಇವತ್ತು ಗ್ರಾಮ ಪಂಚಾಯ್ತಿಗೆ ಬರುತ್ತಿದ್ದಾರೆಂದರೆ ಅದರ ಮಹತ್ವ ಅರಿವಾದೀತು. ಇಂತಹ ಸನ್ನಿವೇಶವನ್ನು ಯಶಸ್ವಿಯಾಗಿ ಬಳಸಿಕೊಳ್ಳುವ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಗ್ರಾಮಗಳಲ್ಲೆ ಒಬ್ಬೊಬ್ಬರನ್ನು ಎತ್ತಿಕಟ್ಟಿ ವ್ಯವಸ್ಥೆಯನ್ನೇ ಹಾಳುಗೆಡವುತ್ತಾರೆ. ಅಲ್ಲಿ ಬೆಂಕಿ ಇದ್ದಷ್ಟು ದಿನ ಇವರ ಸ್ಥಾನ ಭದ್ರ. ನಾವು ಎಂಎಲ್ಎ ಎಲೆಕ್ಷನ್ ಗೆ ಹೆಚ್ಚು ದುಡ್ಡು ಖರ್ಚಾಗುತ್ತೆ ಅಂದುಕೊಂಡ್ರೆ ಅದಕ್ಕಿಂತ ಹೆಚ್ಚಿನ ಹಣದ ಹೊಳೆ ಈ ಚುನಾವಣೆಯಲ್ಲಿ ಕಾಣಬಹುದು. ಇದು ಒಂದು ಊರಿನ ನೆಮ್ಮದಿಯನ್ನು ಶಾಶ್ವತವಾಗಿ ಕೆಡಿಸಿ ಬಿಡುತ್ತದೆ, ಅದೂ ಸರಿಪಡಿಸಲಾಗದಷ್ಟು! ಯಾವುದೇ ರಾಜಕೀಯ ಪಕ್ಷಗಳ/ಪುಡಾರಿಗಳ ಹಂಗಿಲ್ಲದೆ ಸಮರ್ಥರನ್ನು ಆಯ್ಕೆ ಮಾಡುವ ಯೋಗ್ಯತೆ ನಮ್ಮ ಹಳ್ಳಿಗಳ ಜನರಿಗಿಲ್ಲವೇ? ಇಂಥಹದ್ದೊಂದು ಎಚ್ಚರಿಕೆಯ ಅರಿವನ್ನು ಆಯಾ ಗ್ರಾಮಗಳ ವಿದ್ಯಾವಂತ ಯುವಕರು, ಸಮಕಾಲೀನವಾಗಿ ಚಿಂತಿಸುವರು, ಹಳ್ಳಿ ತೊರೆದು ನಗರದಲ್ಲಿ ನೆಲೆಯಾಗಿರುವವರು ಮಾಡಲು ಸಾಧ್ಯವಿಲ್ಲವೇ? ಯೋಚಿಸಿ ಹಳ್ಳಿಗಳ ಉದ್ದಾರವೇ ದೇಶದ ಉದ್ದಾರ ಸ್ವಾಮಿ, ನೋಡಿ ನೀವು ನಿಮ್ಮ ಹಳ್ಳಿಗಳಿಗೆ ಹೋಗಿ ಸಾಧ್ಯವಾದಷ್ಟ ಮಟ್ಟಿಗೆ ಚುನಾವಣೆ ಅನಿಷ್ಟಗಳಿಗೆ ಮಂಗಳ ಹಾಡಿ, ಅವಿರೋಧ ಆಯ್ಕೆಗೆ ಮನಸ್ಸು ಕೊಡಿ ಇದು ನಿಮ್ಮಿಂದ ಖಂಡಿತಾ ಸಾಧ್ಯವಿದೆ ಅಲ್ವಾ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...