Friday, December 17, 2010

ನೀರಾವರಿ ತಜ್ಞ ಎಚ್ ಎನ್ ನಂಜೇಗೌಡ:ಒಂದು ನೆನಪು


ಅದು ಕಾವೇರಿ ನದಿ ನೀರಿನ ವಿವಾದ ಭುಗಿಲೆದ್ದ ಸಂಧರ್ಭ, ಸಲ್ಲದ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡು ತಾಂತ್ರಿಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ರೈತರ  ಹಿತಾಸಕ್ತಿಗೆ ಕುಂದು ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿತ್ತು. ನಮ್ಮ ರಾಜ್ಯದಲ್ಲಿ ಹುಟ್ಟಿ ಹರಿಯುವ ನದಿಯ ನೀರಿನ ಪ್ರಯೋಜನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾರದೇ ಅಸಹಾಯಕತೆ ಪ್ರದರ್ಶಿಸಿದ ಸರ್ಕಾರಕ್ಕೆ ನೆರವಿಗೆ ಬಂದದ್ದು ಕರ್ನಾಟಕ ರಾಜ್ಯದ ನೀರಾವರಿ ಭಗೀರಥ ಎಚ್ ಎನ್ ನಂಜೇಗೌಡ. ನದಿ ನೀರು ವಿವಾದ ಕುರಿತಂತೆ ಹೋರಾಟ ನಡೆಸುತ್ತಿದ್ದ ಕನ್ನಡ ಸಂಘಟನೆಗಳ ಹೋರಾಟಕ್ಕೆ ನೈತಿಕ ಬಲ ತುಂಬಿದ್ದು ಎಚ್ ಎನ್ ನಂಜೇಗೌಡ, ನದಿ ನೀರಿನ ವಿವಾದ ಕುರಿತ ಪ್ರತ್ಯೇಕ ಪ್ರಾಧಿಕಾರದ ಮುಂದೆ ವಾದ ಮಂಡಿಸಲು ಹೆಗಲಿಗೆ ಹೆಗಲು ಕೊಟ್ಟು ಮಾಹಿತಿ ನೀಡಿದ್ದು ಅದೇ ಎಚ್ ಎನ್ ನಂಜೇಗೌಡ.! ಹೌದು ತನಗಾಗಿ ಏನನ್ನೂ ಮಾಡಿಕೊಳ್ಳದೇ ಜನರ ಸೇವೆಗಾಗಿ ತನ್ನ ವಿದ್ವತ್ತನ್ನು ಮುಡಿಪಾಗಿಟ್ಟ ಅಪರೂಪದ ರಾಜಕಾರಣಿ ಎಚ್ ಎನ್ ನಂಜೇಗೌಡ. ನೀರಾವರಿ ವಿಚಾರದಲ್ಲಿ ರಾಜ್ಯದ ಜನತೆ ಸದಾ ನೆನಪಿಟ್ಟುಕೊಳ್ಳ ಬೇಕಾದ ಎಚ್ ಎನ್ ನಂಜೇಗೌಡರು ಗತಿಸಿ ಇಂದಿಗೆ 3ವರ್ಷಸಂದಿದೆ. ಈ ಸಂಧರ್ಭ ದಲ್ಲಿ ಅವರ ಬಗೆಗೆ ಮೆಲುಕು ಹಾಕುವುದು ಅವರಿಗೆ ಸಲ್ಲಿಸುವ ಗೌರವವಾಗಬಹುದೇನೋ.
ಮಹಾರಾಜಾ ಕಾಲೇಜು ವಿದ್ಯಾರ್ಥಿ ಇವತ್ತು ರಾಜ್ಯದಲ್ಲಿ ಹಲವು ಮಂದಿ ರಾಜಕಾರಣಿಗಳನ್ನು ನೋಡಿದ್ದೀರಿ, ಹಿಂದಿನ ದಶಕಗಳಲ್ಲಿ ಇದ್ದ ರಾಜಕಾರಣಿಗಳಿಗೂ ಇಂದಿನ ರಾಜಕಾರಣಿಗಳಿಗೂ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಂತಹ ವ್ಯವಸ್ಥೆಯ ನಡುವೆ ಹಳೆ-ಹೊಸ ತಲೆಮಾರಿನ ರಾಜಕಾರಣಿಗಳ ನಡುವೆ ತಾನು ನಂಬಿದ ಸಿದ್ದಾಂತಗಳಿಗೆ, ನೈತಿಕ ಮೌಲ್ಯಗಳಿಗೆ ನಿಷ್ಟುರ ಬದ್ದತೆಯನ್ನು ಪ್ರದರ್ಶಿಸಿ ಬದುಕಿದ ಛಲಗಾರ ಎಚ್ ಎನ್ ನಂಜೇಗೌಡ. ಅವರ ಕುರಿತು ಮಾತನಾಡುವ ಮುನ್ನ ಚೂರು  ಮಾಹಿತಿ ನಿಮಗಾಗಿ. ಲಭ್ಯ ಮಾಹಿತಿಗಳನ್ನಾಧರಿಸಿ ಹೇಳುವುದಾದರೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನಂಜೇಗೌಡರ ಎರಡನೇ ಪತ್ನಿ ಕಮಲಮ್ಮನವರ  ಪುತ್ರ ಎಚ್ ಎನ್ ನಂಜೇಗೌಡ. ತಾಯಿಯ ಊರು ಅರಕಲಗೂಡು ತಾಲೂಕಿನ ಗಂಗೂರು ಗ್ರಾಮ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸಗಳನ್ನು ಪೂರೈಸಿದ ನಂಜೇಗೌಡರು ಬಿಎ ಪದವಿಗಾಗಿ ಮೈಸೂರಿಗೆ ತೆರಳಿದರು. ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗೌಡರು ಕಾಲೇಜು ದಿನಗಳಲ್ಲೆ ಉತ್ತಮ ವಾಗ್ಮಿಯೂ ಆಗಿದ್ದರು, ವಿದ್ಯಾರ್ಥಿ ಸಂಘದ ಮುಖಂಡರೂ ಆಗಿ ಹೆಸರು ಗಳಿಸಿದ್ದ ಗೌಡರು ಸದಾ ಚಟುವಟಿಕೆಯ ಚಿಲುಮೆ. 
                ಅಂದಿನ ದಿನಗಳಲ್ಲಿಯೇ ವಿದ್ಯಾರ್ಥಿ ಚಳುವಳಿಗಳಲ್ಲೂ ಮುಂದಾಳಾಗಿರುತ್ತಿದ್ದರು. ಪದವಿಯ ನಂತರ ಕಾನೂನು ಪದವಿ ಕಲಿತ ಗೌಡರು 60ರ ದಶಕದ ಆರಂಭದಲ್ಲಿ ಅರಕಲಗೂಡಿಗೆ ವಾಪಾಸಾದರು. ಆ ವೇಳೆಗಾಗಲೇ ರಾಜಕಾರಣದ ಕಿಚ್ಚು ಹೊತ್ತಿಸಿಕೊಂಡಿದ್ದ ಗೌಡರು ತಾಲೂಕಿನಲ್ಲಿಯೂ ಚಳುವಳಿಗಳ ಮುಂದಾಳತ್ವ ವಹಿಸುತ್ತಿದ್ದರು. ರೈತರ ಬಗೆಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದ ಅವರು ರೈತರಿಗಾಗಿ ಏನನ್ನಾದರೂ ಮಾಡಬೇಕೆಂಬ ತುಡಿತ ಹತ್ತಿಸಿಕೊಂಡಿದ್ದರು. 1960-61ರಲ್ಲಿ ಅರಕಗಲೂಡು ವಿದಾನಸಭಾ ಸದಸ್ಯ ಸ್ಥಾನಕ್ಕೆ  ಪಕ್ಷೇತರರಾಗಿ ಸ್ಪರ್ಧಿಸಿದ್ದ ಪುಟ್ಟೇಗೌಡರಿಗೆ ಸಾಥ್ ನೀಡಿದರು. ಮುಂದೆ 1962ರಲ್ಲಿ ಪ್ರಜಾಸೋಷಲಿಸ್ಟ್ ಪಕ್ಷದಿಂದ ಅಭ್ಯರ್ಥಿಯಾದ ಎಚ್ ಎನ್ ನಂಜೇಗೌಡ ಪ್ರತಿಸ್ಫರ್ಧಿಯಾಗಿದ್ದ ಕಾಂಗ್ರೆಸ್ ನ ಜಿ ಎ ತಿಮ್ಮಪ್ಪಗೌಡರ ವಿರುದ್ದ ಸ್ಪರ್ದಿಸಿ ಸೋಲುಂಡರು. ಮತ್ತೆ ರಾಜ್ಯದಲ್ಲಿ ನಿಜಲಿಂಗಪ್ಪನವರ ಸರ್ಕಾರವಿದ್ದಾಗ 1967ರಲ್ಲಿ ಸ್ವತಂತ್ರ ಪಕ್ಷದಿಂದ ಸ್ಪರ್ದಿಸಿ ಕೆ ಬಿ ಮಲ್ಲಪ್ಪನವರ ವಿರುದ್ದ ಗೆಲುವು ಸಾಧಿಸಿದರು. ಮತ್ತೆ 1972ರಲ್ಲಿ ಸಂಸ್ಥಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದ ನಂಜೇಗೌಡರು ಎದುರಾಳಿ ಕೆ ಬಿ ಮಲ್ಲಪ್ಪನವರನ್ನು ಎರಡನೇ ಭಾರಿಗೆ ಸೋಲಿಸಿದರು. ಆಗ ಆಡಳಿತಕ್ಕೆ ಬಂದ ಅರಸು ಸರ್ಕಾರದಲ್ಲಿ ಭಾರೀ ನೀರಾವರಿ ಖಾತೆಯ ಸಚಿವರಾದ ಗೌಡರಿಗೆ ತಾವು ಅಂದುಕೊಂಡಿದ್ದನ್ನು ಮಾಡುವ ಅವಕಾಶ ಸಿಕ್ಕಿತ್ತು. ಅಷ್ಟು ಹೊತ್ತಿಗಾಗಲೇ ಹೇಮಾವತಿ ಜಲಾಶಯ ಯೋಜನೆ ಜಾರಿಯಲ್ಲಿತ್ತು, ಸದರಿ ಜಲಾಶಯದ ಹಿನ್ನೀರಿನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಯೋಜನೆಗಳಿಗೆ ಚಾಲನೆ ನೀಡಿದ ಗೌಡರು ಹಾರಂಗಿ ಜಲಾಶಯ ಯೋಜನೆಯ ನೀರನ್ನು ತಾಲೂಕಿನ ರೈತರಿಗೆ ದೊರಕಿಸುವ ಸಾಹಸ ಮಾಡಿದರು. ತಾಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕ ರಸ್ತೆಗಳಾದವು ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಮೀಣ ಜನರ ಆರ್ಥಿಕಾಭಿವೃದ್ದಿಗೆ ಹೆಗಲು ನೀಡುವ ಬ್ಯಾಂಕಿಂಗ್ ಯೋಜನೆಯನ್ನು ಅನುಷ್ಠಾನಕ್ಕೆ ತಂದರು, ಪರಿಣಾಮ ತಾಲೂಕಿನ ಹಲವು ಗ್ರಾಮಗಳಲ್ಲಿ ಗ್ರಾಮೀಣ ಬ್ಯಾಂಕ್ ಸೇವೆಯನ್ನು ಪಡೆಯುವಂತಾಯಿತು.

ದಿಟ್ಟೆದೆಯ ರಾಜಕಾರಣಿ :ಅಧಿಕಾರದಲ್ಲಿದ್ದಾಗ ಯಾವುದಕ್ಕೂ ರಾಜೀ ಮಾಡಿಕೊಳ್ಳದ ಗೌಡರು ತಮ್ಮ ನಿರ್ದಾಕ್ಷ್ಯೀಣ್ಯ ನಡೆಗಳಿಂದಾಗಿ ರಾಜೀ ನೀಡಬೇಕಾಯಿತು. ಅಧಿಕಾರಕ್ಕೆ ಅಂಟಿ ಕೂರದೇ ಅಂದುಕೊಂಡದ್ದನ್ನು ಮಾಡಿ ಮುಗಿಸುವ, ಇದ್ದ್ದದ್ದನ್ನು ಇದ್ದಂತೆ ನೇರವಾಗಿ ಕಠಿಣವಾಗಿ ಹೇಳುವ ಛಾತಿಯಿಂದಾಗಿ ಮತ್ತು ಅಧಿಕಾರಕ್ಕೆ ಅಂಟಿಕೂರದ ನಡವಳಿಕೆ ಎಚ್ ಎನ್ ನಂಜೇಗೌಡರನ್ನು ಎತ್ತರದಲ್ಲಿ ಕೂರುವಂತೆ ಮಾಡಿದೆ. ಮುಂದೆ ಸರ್ಕಾರ ಪತನಗೊಂಡಾಗ 1978ರಲ್ಲಿ ಮತ್ತೆ ಸ್ಪರ್ದಿಸಿದ ನಂಜೇಗೌಡರು ಸೋಲನುಭವಿಸಿದರು. ನಂತರದ ದಿನಗಳಲ್ಲಿ ರಾಜಕೀಯದಲ್ಲಿ ಎತ್ತರಕ್ಕೇರಿದ ಅವರು 1980ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಸಂಸತ್ ನಲ್ಲಿ ತಮ್ಮ ಪಕ್ಷದವರೇ ಆದ ಪ್ರಧಾನಿ ರಾಜೀವ್ ಗಾಂಧಿ ವಿರುದ್ದ ಬೋಫೋರ್ಸ್ ಹಗರಣ ಬಹಿರಂಗವಾದಾಗ ಅತ್ಯಂತ ಕಟುವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪಕ್ಷದಿಂದಲೇ ಹೊರಬಿದ್ದರು. ರಾಜ್ಯದಲ್ಲಿ ಜೆಡಿಯು ತೆಕ್ಕೆಗೆ ಹೋಗಿ ಸೋಲನುಭವಿಸಿದರು ನಂತರ ಬಿಜೆಪಿಗೆ ಸೇರಿ ಬಸವನಗುಡಿಯಲ್ಲಿ ಸೋಲು ಕಂಡು 'ಗರ್ಭಗುಡಿಯ ಪಕ್ಷವೆಂದು ಜರಿದು ಪಕ್ಷ ತೊರೆದರು. ಗೌಡರು ಯಾವುದೇ ಪಕ್ಷದಲ್ಲಿದ್ದರು ನೀರಾವರಿ ಕುರಿತು ವಹಿಸಿದ್ದ ಆಸ್ಥೆ ಮತ್ತು ರೈತರ ಪರವಾಗಿದ್ದ ಕಾಳಜಿಯಿಂದಾಗಿ ಕಾಲಕಾಲಕ್ಕೆ ಸರ್ಕಾರಕ್ಕೆ ಮತ್ತು ಹೋರಾಟಗಾರರಿಗೆ ಮಾಹಿತಿ ನೀಡಿದರು. ಯಾವುದೇ ದಾಖಲೆಗಳನ್ನು ಎದುರಿಗಿಟ್ಟುಕೊಳ್ಳದೇ ಬ್ರಹ್ಮಾಂಡದಂತಹ ನೀರಾವರಿ ಅಂಕಿಅಂಶಗಳನ್ನು ಸುಲಲಿತವಾಗಿ ಹೇಳುತ್ತಿದ್ದ ಗೌಡರು ನೀರಾವರಿ ಕುರಿತು ಉಂಟಾದ ಸಂಕಟ ಸಮಯದ ಆಪದ್ಬಾಂದವನಾಗಿರುತ್ತಿದ್ದರು.

ಸ್ಮರಣೆ ಲೇಸು :  ವಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರೂ ಎಂದಿಗೂ ಸಮುದಾಯದ ಚಟುವಟಿಕೆಗಳಿಂದ ದೂರವಿದ್ದ ಗೌಡರು ಎಲ್ಲ ಜನಾಂಗದ ಜನರ ಅನುರಾಗಿಯಾಗಿದ್ದರು. ಎಲ್ಲಾ ಪಕ್ಷಗಳ ರಾಜಕಾರಣಿಗಳು ಗೌಡರೊಂದಿಗೆ ಸೌಹಾರ್ಧಯುತ ಸಂಭಂಧವಿರಿಸಿಕೊಂಡಿದ್ದರು. ಗೌಡರ ನೀರಾವರಿ ಬಗೆಗಿನ ಕಾಳಜಿಗೆ ಹೆಚ್ ಕೆ ಪಾಟೀಲ್ ಮತ್ತು ನಿಜಲಿಂಗಪ್ಪನವರ ಸರ್ಕಾರದಲ್ಲಿ ಸಚಿವರಾಗಿದ್ದ ಬಸಪ್ಪನವರ ಮಾರ್ಗದರ್ಶನವೂ ಕಾರಣವಾಗಿತ್ತು. ಒಬ್ಬ ನಿಷ್ಟುರ, ಜನಪರ ಕಾಳಜಿಯ ನಂಬಿದ ಸಿದ್ದಾಂತಗಳನ್ನು ಪ್ರತಿಪಾದಿಸುವ ಸಾಧಕನ ನೆನಪು ನಮಗೆ ಸದಾ ಸ್ಮರಣೀಯ, ನಂಜೇಗೌಡರು ಸಿದ್ದಾಂತ ಮತ್ತು ಚಳುವಳಿಯ ವಿಚಾರದಲ್ಲಿ ಗೋಪಾಲಗೌಡರ ಮಟ್ಟಿಗೆ ಬೆಳೆಯುವ ಸಾಧ್ಯತೆಗಳಿತ್ತಾದರೂ ಒಂದು ಪಕ್ಷದಲ್ಲಿ ನೆಲೆ ನಿಲ್ಲದ ಗೌಡರಿಗೆ ಅದು ಸಾಧ್ಯವಾಗಲಿಲ್ಲ ಆದರೆ ಒಂದು ಶಕ್ತಿಯಾಗಿ, ಸಮೂಹದ ಪ್ರೇರಕ ಶಕ್ತಿಯಾಗಿ ಬದುಕಿದರೆಂಬುದು ಮಾತ್ರ ದಿಟವೇ ಹೌದು. ಇಂದು ಗೌಡರು ಬದುಕಿದ್ದಿದ್ದರೆ 77ವರ್ಷ ತುಂಬುತ್ತಿತ್ತು ಆದರೆ ಇವತ್ತು ಅವರಿಲ್ಲ ಆದರೆ ಅವರ ವಿಚಾರ ನಮ್ಮೊಂದಿಗಿದೆ, ರಾಜಧಾನಿ ಬೆಂಗಳೂರಿನಲ್ಲಿ ಹೆಚ್ ಎನ್ ಸಂಸ್ಮರಣೆ ಕರ್ನಾಟಕ ಸರ್ಕಾರದ ಸಚಿವಾಲಯದ ಟಿ ಚನ್ನಬಸಪ್ಪ ಸಭಾಂಗಣದಲ್ಲಿ ಸಂಜೆ 5.30ಕ್ಕೆ ಏರ್ಪಾಟಾಗಿದೆ. ಅರಕಲಗೂಡು ನಾಗರಿಕ ವೇದಿಕೆಯ ಯೋಗಾರಮೇಶ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರ ಸಹವರ್ತಿಗಳು ಎಚ್ ಎನ್ ನಂಜೆಗೌಡರನ್ನು ಸ್ಮರಿಸಿಕೊಳ್ಳಲಿದ್ದಾರೆ.ನೀವೂ ಜೊತೆಯಾಗಿ ನುಡಿನಮನ ಸಲ್ಲಿಸಿ.
ಈ ಲೇಖನವನ್ನು ಸಾಂಧರ್ಭಿಕವಾಗಿ ದಟ್ಸ್ ಕನ್ನಡದಲ್ಲಿ ಸಾದ್ಯಂತವಾಗಿ ಪ್ರಕಟಿಸಿ ಉಪಯುಕ್ತ ಸಲಹೆ ನೀಡಿದ ಸಂಪಾದಕರಾದ ಶ್ಯಾಂಸುಂದರ್ ಅವರಿಗೆ ಧನ್ಯವಾದಗಳು. ದಟ್ಸ್ ಕನ್ನಡದಲ್ಲಿ ಈ ಲೇಖನವನ್ನು ಓದಲು ಈ ಲಿಂಕ್ ಕ್ಲಿಕ್ಕಿಸಿ http://thatskannada.oneindia.in/news/2010/12/18/tribute-to-hn-nange-gowda-irrigation-expert.html 
Thanks to "SAMPADA"  to publish this article with Special Category, Read more click on http://sampada.net/????????-?????-???-???-????????????-???????????? 

ಸ್ವಯಂಕೃಷಿ ನೂತನ ಕನ್ನಡ ಛಾನಲ್

ಸ್ವಯಂಕೃಷಿ ನೂತನ ಕನ್ನಡ ಛಾನಲ್

Sunday, December 5, 2010

ಇಂಥಾ ಅಯ್ಯಪ್ಪ ಭಕ್ತರುಗಳು ಬೇಕಾ ಸ್ವಾಮಿ?

ಮೊನ್ನೆ ಮೊನ್ನೆ ಸಿಎಂ ಯಡ್ಯೂರಪ್ಪನವರ ಸಿಎಂ ಕುರ್ಚಿ ಹೋಗಿಯೇ ಬಿಡ್ತು ಅಂತ ಅಂದುಕೊಂಡಿರುವಾಗಲೇ, ಈವಯ್ಯ  ಪೂಜೆ ಪುನಸ್ಕಾರ, ಯಜ್ಞ-ಯಾಗ ಅಂತೆಲ್ಲ ಮಾಡ್ಕಂಡು ಇದುವರೆಗೂ ರಾಜ್ಯದಲ್ಲಿ ಸಿಎಂ ಕುರ್ಚಿ ಏರಿದ ಮುಖ್ಯಮಂತ್ರಿಗಳ್ಯಾರು ನೋಡದಷ್ಟು ದೇವಾಲಯಗಳನ್ನು ದೇಶದ ಉದ್ದಗಲಕ್ಕೂ ಸಂದರ್ಶಿಸಿ, ಬಿಜೆಪಿ ಹೈ ಕಮಾಂಡ್ ಗೆ ಕ್ಯಾರೆ  ಅನ್ನದೇ ತನ್ನ ಸ್ಥಾನದಲ್ಲೇ ಉಳಿದು ಕೊಂಡದ್ದು ಈಗ ಇತಿಹಾಸ.ಕಾಕತಾಳಿಯವೋ, ಯಡಿಯೂರಪ್ಪನ ಪೂಜಾಫಲವೋ ಗೊತ್ತಿಲ್ಲ  ಅಧಿಕಾರ ಸಧ್ಯಕ್ಕೆ ಉಳಿದುಕೊಂಡಿದೆ, ಮುಂದಕ್ಕೆ ಅವರು ನಂಬಿದ ದೇವರೇ ಕಾಪಾಡಬೇಕು.ಸ್ವಾಮಿಯೇ ಶರಣಂ ಅಯ್ಯಪ್ಪ!
ಇದು ಅಯ್ಯಪ್ಪ ಸ್ವಾಮಿಯ ಭಕ್ತರ ಮಾಸ, ಇನ್ನು ಎರಡು ತಿಂಗಳು ಇವರ ಹಾವಳಿ ತಪ್ಪಿದ್ದಲ್ಲ. ಅಯ್ಯಪ್ಪ ಭಕ್ತರ ಹಾವಳಿ ನಿನ್ನೆ ಮೊನ್ನೆಯದಲ್ಲ  ಇದು ನಿರಂತರವಾಗಿ ದಶಕಗಳಿಂದ ಬಂದತದ್ದು. ಮನುಷ್ಯ ಹೆದರೋದು ಒಂದು ದೆವ್ವ, ಇನ್ನೊಂದು ದೇವರು. ಈ ಎರಡು ಹೆಸರನ್ನು ಬಳಸಿಕೊಂಡು ಜನರನ್ನು ಏನು ಬೇಕಾದರೂ ಮಾಡಿಬಿಡಬಹುದು. ಇದು ಭಾರತದಂತಹ ಸನಾತನ ಸಾಂಸ್ಕೃತಿಕ ಪರಂಪರೆಯ ದೇಶದಲ್ಲಿ ಮಾತ್ರ ಸಾಧ್ಯ. ಇಲ್ಲಿ ನಂಬಿಕೆಗೆ, ಬಾವನೆಗಳಿಗೆ, ಸಂಬಂಧಗಳಿಗೆ ಇನ್ನಿಲ್ಲದಷ್ಟು ಬೆಲೆ ಇದೆ. ಹಾಗಾಗಿಯೆ ಒಂದಷ್ಟು ನೆಮ್ಮದಿಯೂ ಇದೆ ಆದರೆ ಇದರ ನೆರಳಲ್ಲೆ ವಂಚನೆಯೂ ಜಾಗೃತಾವಸ್ಥೆಯಲ್ಲಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಹೌದು ನಂಬಿಕೆಗಳಿಗೆ, ಭಾವನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಾಗ ಎಂತಹ ಪರಿಸ್ಥಿತಿ ಏರ್ಪಡುತ್ತದೆ ? ಇದರಿಂದ ಆಗುವ ಲಾಭ-ನಷ್ಟ ಏನು? ಸಾಮಾಜಿಕವಾಗಿ ಬೀರುವ ಪರಿಣಾಮವೇನು ? ಆಧುನಿಕತೆಗೆ ದಾಪುಗಾಲು ಹಾಕುತ್ತಿರುವ ದಿನಗಳಲ್ಲೂ ಇವೆಲ್ಲಾ ಬೇಕಾ? ಎಂಬೆಲ್ಲ ಪ್ರಶ್ನೆಗಳು ನಮ್ಮನ್ನಾವರಿಸುವುದು ಸಹಜವೇ. 
          
ಅಯ್ಯಪ್ಪ ಮಹಾತ್ಮೆ:ಇವತ್ತು  ದೇಶಾಧ್ಯಂತ ಅತೀ ಹೆಚ್ಚು ಭಕ್ತರನ್ನು ಹೊಂದಿದ ದೇವರು ತಿರುಪತಿಯ ಏಳು ಕುಂಡಲವಾಡ ಗೋವಿಂದ ಅಲಿಯಾಸ್ ತಿರುಪತಿ ವೆಂಕಟೇಶ್ವರ,ಎರಡನೇ ಸ್ಥಾನದಲ್ಲಿ ಬರುವುದೇ ಅಯ್ಯಪ್ಪ ಭಕ್ತರು, ಉಳಿದಂತೆ ದುರ್ಗಾದೇವಿ,ಸಂತೋಷಿಮಾತಾ,ಹೀಗೇಗೋ ನಾನಾ ಅವತಾರದ ಸಾವಿರಾರು ರೂಪಗಳಲ್ಲಿ ಬರುವ ದೇವರುಗಳು ಉಂಟು. ಅವರವರ ನಂಬಿಕೆ ಮತ್ತು ಶಕ್ತಾನುಸಾರ ಭಕ್ತಾದಿಗಳನ್ನು ಹೊಂದಿರುವ ಪ್ರತೀ ದೇವರುಗಳಿಗೂ ಒಂದೊಂದು ಹಿನ್ನೆಲೆಯಿದೆ. ಇರಲಿ ಅಯ್ಯಪ್ಪನ ಬಗ್ಗೆ ಹೇಳುವುದಾದರೆ ಈತನಿಗೆ ಸರಿಸುಮಾರು 50ಮಿಲಿಯನ್ ಭಕ್ತರು ಪ್ರತೀ ವರ್ಷವೂ ಶಬರಿಮಲೆಗೆ ತೆರಳಿ ಪೂಜೆ ಅರ್ಪಿಸುತ್ತಾರೆ! ತಿನ್ನಲು ಒಂದು ಹೊತ್ತಿನ ಅನ್ನ,ಸೂರು ಮತ್ತು ಒಂದು ನೆಮ್ಮದಿಯ ಬದುಕು ಇಲ್ಲದಿದ್ದರೂ ಭಕ್ತಿ ಭಾವದ ಹೆಸರಿನಲ್ಲಿ ಉಳಿಸಿದ ಹಣವೋ, ಸಾಲ-ಸೋಲವೋ ಮಾಡಿ  ಹಣ ಸಂಗ್ರಹಿಸಿ ಯಾತ್ರೆಗೆ ಹೊರಡುವ ಜನರಿಗೆ ಅಂತಿಮವಾಗಿಯಾದರೂ ನೆಮ್ಮದಿ ದಕ್ಕುತ್ತದಾ ಗೊತ್ತಿಲ್ಲ. ಅಯ್ಯಪ್ಪನ ವಿಷಯದಲ್ಲಿ ಮಾತ್ರ ಇಂತಹವೆಲ್ಲ ತಪ್ಪುವುದಿಲ್ಲ.
          ಸ್ವಾಮಿಯೇ ಶರಣಂ ಅಯ್ಯಪ್ಪ ಎಂದರೆ "ಆಶ್ರಯ ಕೊಡು ಭಗವಂತ"  ಎಂದು ಅರ್ಥೈಸಲಾಗುತ್ತದೆ. ಅಯ್ಯಪ್ಪನ ಕುರಿತು 2-3ರೀತಿಯ ಕತೆಗಳಿವೆ ಅದು ನಿಮಗೂ ತಿಳಿದದ್ದೇ. ಹರಿ-ಹರನ ಸಮಾಗಮದಿಂದ ಅಯ್ಯಪ್ಪ ಜನಿಸಿದ ಎನ್ನಲಾಗುತ್ತದೆ ಇದು ವೈಜ್ಞಾನಿಕವಾಗಿ ನಂಬಲು ಅಸಾಧ್ಯವಾದ ಮಾತು. ಕೇರಳದಲ್ಲಿ ಪ್ರಚಲಿತದಲ್ಲಿರುವಂತೆ ಪಂಡಾಲಂನ ರಾಜ ನಿಗೆ ಕಾಡಿನಲ್ಲಿ ಸಿಕ್ಕ ಮಗುವೇ ಅಯ್ಯಪ್ಪ,ಈತನಿಗೆ ಮಕ್ಕಳಿಲ್ಲದ ಕೊರತೆ. ಇವನೋ ಶಿವ ಭಕ್ತ ಈತನ ರಾಣಿ, ವಿಷ್ಣುವಿನ ಆರಾದಕಿ. ಹಾಗಾಗಿ ಹರಿ-ಹರ ಸಮಾಗಮದಿಂದ ಜನಿಸಿದ ಮಗು ರಾಜನಿಗೆ ವರದ ರೂಪದಲ್ಲಿ ದೊರಕಿತಂತೆ. ದೊರೆತ ಮಗುವಿನ ಕಂಠದಲ್ಲಿ ಹೊಳೆಯುವ ಮುತ್ತಿನ ಹಾರವಿದ್ದುದರಿಂದ ಮಣಿಕಂಠನೆಂಬ ಹೆಸರು ಬಂತೆಂಬ ಪ್ರತೀತಿಯೂ ಇದೆ. ಹೀಗಿರುವಾಗ ರಾಣಿಗೆ ಮಗು ಜನಿಸಿತು. ಆದರೆ ತನಗೆ ಕಾಡಿನಲ್ಲಿ ಸಿಕ್ಕ ಮಣಿಕಂಠನಿಗೆ ಯುವರಾಜನ ಪಟ್ಟವನ್ನು ಕಟ್ಟಲು ಪಂಡಾಲ ರಾಜ ಮುಂದಾಗಿದ್ದರಿಂದ  ಆತನ ಮಂತ್ರಿ ಕುತಂತ್ರ ನಡೆಸಿ ರಾಣಿಯ ತಲೆ ಕೆಡಿಸಿ ಮಣಿಕಂಠನಿಗೆ ಪಟ್ಟವನ್ನು ತಪ್ಪಿಸುವ ಸಲುವಾಗಿ ತಂತ್ರ ಹೂಡಿದ,ಅದರಂತೆ ಕಾಯಿಲೆ ಬಿದ್ದ ರಾಣಿಯ ಆರೋಗ್ಯ ಸುಧಾರಣೆಗೆ ಹುಲಿಯ ಹಾಲನ್ನು ತರುವಂತೆ ಮಣಿಕಂಠನಿಗೆ ಸೂಚಿಸಲಾಯಿತು.
             ಅಮ್ಮನ ಅಣತಿಯನ್ನು ಪಾಲಿಸಲು ಕಾಡಿಗೆ ಹೊರಟ ಮಣಿಕಂಠನಿಗೆ ಕಾಡಿನಲ್ಲಿ ಕಂಠಕ ಪ್ರಾಯಳಾಗಿದ್ದ ಮಹಿಷಿ ಎದುರಾದಳು ಆಕೆಯನ್ನು ಸಂಹಾರ ಮಾಡಿದಾಗ ಮಹಿಷಿಯ ಪೂರ್ವಜನ್ಮದ ಸುಂದರ ಯುವತಿ ರೂಪುತಳೆದಳು.ಋಷಿ ಮುನಿಯೊಬ್ಬರ ಶಾಪದಿಂದ ಆಕೆ ಮಹಿಷಿಯಾಗಿ ಜನ್ಮ ತಾಳಿದ್ದಳು. ಆ ಸುಂದರ ಯುವತಿ ಮಣಿಕಂಠನಿಗೆ ಮಾರುಹೋಗಿ ಮದುವೆಯಾಗುವಂತೆ ಪಟ್ಟುಹಿಡಿದಳು. ಆದರೆ ಅದನ್ನು ನಯವಾಗಿ ನಿರಾಕರಿಸಿದ ಅಯ್ಯಪ್ಪ ತಾನು ನೆಲೆಯಾಗುವ ಶಬರಿಮಲೈಗೆ ಭಕ್ತರು ಬರುವುದನ್ನು ನಿಲ್ಲಿಸಿದಾಗ ಆಕೆಯನ್ನು ವರಿಸುವ ಭಾಷೆಯನ್ನಿತ್ತನಂತೆ. ಹಾಗಾಗಿಯೇ ಆಕೆಯ ದೇಗುಲ ಇವತ್ತಿಗೂ ಅಯ್ಯಪ್ಪನ ದೇಗುಲದ ಪಕ್ಕದಲ್ಲೇ ಇದೆ.ಕಾಡಿಗೆ ಬಂದ ಮಣಿಕಂಠ ಹುಲಿಯನ್ನು ಪಳಗಿಸಿ ಹುಲಿಯ ಹಾಲನ್ನು ತಂದೂ ಬಿಟ್ಟ ಆ ಮೂಲಕ ತನ್ನ ಮಾತೃಭಕ್ತಿಯನ್ನು ಸಾಬೀತು ಪಡಿಸಿದ ಅಯ್ಯಪ್ಪ ಅಂತಾರ್ಧನನಾದ.
            ಅನ್ನಾಹಾರ ಬಿಟ್ಟ ರಾಜನಿಗೆ ಕನಸಿನಲ್ಲಿ ಕಾಣಿಸಿಕೊಂಡು ಶಬರಿಮಲೈನಲ್ಲಿ ನೆಲೆಸುವ ಮಾತು ಕೊಟ್ಟ ಅದರಂತೆ  ಮುಂದೆ  ಶಬರಿಮಲೈನಲ್ಲಿ ನೆಲೆ ನಿಂತ. ಇವತ್ತಿಗೂ ಮಣಕಂಠನನ್ನು ಇಷ್ಟಪಟ್ಟ ಆ ಸುಂದರ ಯುವತಿಯ ದೇಗುಲ, ಅಯ್ಯಪ್ಪನ ದೇಗುಲದ ಸನಿಹದಲ್ಲೇ ಇದೆ. ಆಕೆಯನ್ನು 'ಮಾಲಿಕಾಪುರತಮ್ಮ" ಎಂದೇ ಕರೆಯಲಾಗುತ್ತದೆ. ಶಬರಿಮಲೈ ಅಯ್ಯಪ್ಪನ ದರ್ಶನ ಪಡೆಯಲು 18ಮೆಟ್ಟಿಲುಗಳನ್ನು ಬೆಟ್ಟಕ್ಕೆ ನಿರ್ಮಿಸಲಾಗಿದೆ ಅವಕ್ಕೆ ಚಿನ್ನದ ಲೇಪನವಿದೆ. ಭಕ್ತಿ-ಶ್ರದ್ದೆಯಿಂದ ನಡೆದುಕೊಂಡವರು ಮಾತ್ರ ಅದನ್ನು ಹತ್ತಲು ಸಾಧ್ಯ ಎಂದೇ ನಂಬಿಕೆಯಿದೆ.

ಏನಿದು ಮಕರ ಜ್ಯೋತಿ  ಮಕರ ಸಂಕ್ರಾಂತಿಯ ದಿನದಂದು ಮಕರ ಜ್ಯೋತಿಯ ರೂಪದಲ್ಲಿ ಅಯ್ಯಪ್ಪನೇ ಇಂದಿಗೂ ದರ್ಶನ ಕೊಡುತ್ತಾನೆ ಎಂದು ನಂಬಲಾಗುತ್ತಿದೆ. ಈ ಬಗ್ಗೆ ಹಲವಾರು ವಾದ-ವಿವಾದಗಳು ಇವೆ. ಈ ವಿವಾದ ಕೋರ್ಟು ಮೆಟ್ಟಿಲು ಏರಿತ್ತು, ಅಲ್ಲಿ ಧಾರ್ಮಿಕ ವ್ಯವಸ್ಥೆಗಳನ್ನು ನೋಡುತ್ತಿರುವ 80ವಯಸ್ಸಿನ ಹಿರಿಯ ಮುಖಂಡರೊಬ್ಬರು ಹೇಳುವಂತೆ ದೇಗುಲದ ಆಡಳಿತ ಮಂಡಳಿಯೇ ಪ್ರತೀ ವರ್ಷ ಮಕರ ಸಂಕ್ರಮಣದ ದಿನದಂದು ಜ್ಯೋತಿಯ ರೂಪದಲ್ಲಿ ಕರ್ಪೂರ ಉರಿಸಲಾಗುತ್ತದೆ ಅದೇ ಸಮಯಕ್ಕೆ ಆಕಾಶದಲ್ಲಿ ಕಾಣುವ ಹೊಳೆಯುವ ನಕ್ಷತ್ರವೊಂದು ಬೆಟ್ಟದ ಸಾಲಿನಲ್ಲಿ ಉರಿಸುವ ಜ್ಯೋತಿಗೆ ಸಮನಾಗಿ ಕಾಣಿಸುವುದರಿಂದ ಅದು ಇನ್ನು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದಂತೆ ಅದನ್ನು ನೋಡುವ ಭಕ್ತರು ಅಯ್ಯಪ್ಪನೇ ದರ್ಶನ ಕೊಟ್ಟ ನೆಂದು ಪುನೀತರಾಗುತ್ತಾರೆ ಇರಲಿ ಭಕ್ತಿ-ನಂಬಿಕೆ ಅವರವರ ಭಾವಕ್ಕೆ ಸಂಬಂಧಿಸಿದ್ದು.
ಮಾಲೆ ಧರಿಸುವವರು ಯಾರು? ಮುಖ್ಯವಾಗಿ ನಾವಿಲ್ಲಿ ಮಾತನಾಡಬೇಕಾದ್ದು ಅಯ್ಯಪ್ಪನ ಭಕ್ತರ ಬಗೆಗೆ. ಬದುಕಿನಲ್ಲಿ ಒಂದು ಶಿಸ್ತು ಕಂಡುಕೊಳ್ಳದ, ಸಮಾಜ ಕಂಟಕನಾದ, ಸೋಲಿನ ಸುಳಿಗೆ ಸಿಕ್ಕವರಿಗೆ ಅಯ್ಯಪ್ಪ ಮಾಲೆಯನ್ನು ಹಾಕಿಸಲಾಗುತ್ತದೆ. ಈ ಪೈಕಿ ಅತ್ಮವಿಶ್ವಾಸದ ಹುಕಿಗೆ, ಶೋಕಿಗೆ ಬಿದ್ದು ಮಾಲೆ ಹಾಕುವವರು ಉಂಟು. ಅಯ್ಯಪ್ಪ ಮಾಲೆ ಹಾಕಿದ ಮೇಲಾದರೂ ತನ್ನ ಬದುಕಿನಲ್ಲಿ ಭರವಸೆ ಮೂಡಿಸುವ ರೀತಿ ಎಲ್ಲರಿಗೂ ಬೇಕಾದವರಾಗಿ ಬದುಕುತ್ತಾರೆಂಬ ನಿರೀಕ್ಷೆ ಒಂದು 10ಪರ್ಸೆಂಟಿನಷ್ಟು ನಿಜವಾದರೆ ಬಾಕಿ 90ಪರ್ಸೆಂಟಿನಷ್ಟು ಜನ ಹುಟ್ಟುಗುಣ ಸುಟ್ಟರೂ ಹೋಗದೆನ್ನುವಂತೆ ಮಾಮೂಲಿಯಾಗಿ ಬದುಕಿ ಬಿಡುತ್ತಾರೆ. ಮಾಲೆ ಹಾಕಿದಷ್ಟು ದಿನ ಮಾತ್ರ ಅಚ್ಚರಿ ಹುಟ್ಟುವಷ್ಟು ಬದಲಾವಣೆ ಕಾಣುವ ಈ ಮಂದಿ ಉಳಿದಂತೆ ಮಾಮೂಲಿ ವರಸೆಗಳನ್ನು ಹಾಗೆಯೇ ಉಳಿಸಿಕೊಂಡಿರುತ್ತಾರೆ. ಹೀಗಿರುವಾಗ ಅಯ್ಯಪ್ಪ ಮಾಲೆ ಬೇಕಾ? ಎಂಬ ಪ್ರಶ್ನೆ ಹುಟ್ಟುತ್ತದೆ.
             ಅಯ್ಯಪ್ಪ ಮಾಲೆ ಧರಿಸಿದವನು 41ದಿನಗಳ ಕಾಲ ಕಠಿಣ ಶಿಸ್ತಿನಲ್ಲಿರಬೇಕಾಗುತ್ತದೆ. ಪ್ರತೀ ನಿತ್ಯ 108ಭಾರಿ ಅಯ್ಯಪ್ಪನ ನಾಮಸ್ಮರಣೆ ಮಾಡಬೇಕಾಗುತ್ತದೆಂಬ ನಿಯಮವಿದೆ, ಆದರೆ ಎಷ್ಟು ಮಂದಿ ಕೋಡಂಗಿಗಳಿಗೆ ಈ ಬಗ್ಗೆ ಅರಿವಿದೆ? ದೇವರ ಮಾಲೆಯ ಹೆಸರಿನಲ್ನಲಿ, ಭಕ್ತಿಯ ಹೆಸರಿನಲ್ಲಿ ನಯಾ ಪೈಸಾದ ಬದಲಾವಣೆಯೂ ಆಗದಿದ್ದರೆ ಅಯ್ಯಪ್ಪ ಮಾಲೆಯಾದರೂ ಏಕೆ ಬೇಕು? ಬಹುತೇಕ ಅಯ್ಯಪ್ಪ ಮಾಲೆ ಧರಿಸುವವರು ಗ್ರಾಮೀಣ ಪ್ರದೇಶದದವರು ಮತ್ತು ಶ್ರಮಿಕರು ಆಗಿರುತ್ತಾರೆ. ಮಾಲೆ ಧರಿಸಿ ಶಬರಿಮಲೈಗೆ ತೆರಳಲು ಸಾವಿರಾರು ರೂಪಾಯಿಗಳ ಚೀಟಿ ಹಾಕಿ ಅಯ್ಯಪ್ಪನ ದರ್ಶನವಾದ ಮೇಲೆ ಬರಗೆಟ್ಟವರಂತೆ ಕುಡಿತ-ಇಸ್ಪೀಟು-ಮಾಂಸಹಾರ-ಮೋಜಿನ ಪ್ರವಾಸ ಗಳಲ್ಲಿ ತೊಡಗುವ ಅನೇಕ ಮಂದಿ ಅಯ್ಯಪ್ಪ ಭಕ್ತಾದಿಗಳು ಸಾಧಿಸುವುದೇನನ್ನು? ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ತೊಂದರೆ ಕೊಡಲೋ ಎಂಬಂತೆ  ಮಾಲೆ ಹಾಕುವ ಈ ಮಂದಿ ತಾವೇ ಹೇಳಿಕೊಂಡರೆ ಸಾಲದೆಂಬಂತೆ ಊರಿನ ನಾಲ್ಕು ದಿಕ್ಕಿಗೂ ಮೈಕು ಹಾಕಿ ರಾತ್ರಿಯಿಡೀ ಭಜನೆ ಮಾಡುವುದು ಪೂಜೆ ಸ್ನಾನದ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪರಿಸರವನ್ನು ಹಾಳು ಮಾಡುವುದು ಸರಿಯೇ?
            ಮನೆಯಲ್ಲಿ ತಿನ್ನಲು ಅನ್ನ-ಸೂರಿಗೆ ದಿಕ್ಕಿಲ್ಲದಿದ್ದರೂ ಕೂಡಿಟ್ಟ ಹಣವನ್ನು ಯಾತ್ರೆಗೆಂದು ವೆಚ್ಚಮಾಡಿ ಸಾಧಿಸುವುದೇನು?  ಪ್ರಸಕ್ತ ದಿನಗಳಲ್ಲಿ ದೇವರ ಮೇಲಿನ ನಂಬಿಕೆಗಳು ತಪ್ಪಬೇಕು ಎಂದು ನಾನು ಹೇಳುವುದಿಲ್ಲ ಆದರೆ ಭಕ್ತಿ ಭಾವ ನಮ್ಮನ್ನು ಒಂದು ಅನೂಹ್ಯ ಲೋಕಕ್ಕೆ ಕರೆದೊಯ್ಯುತ್ತದೆ, ಸಮಾಜದಲ್ಲಿನ ಅಶಾಂತಿಗೆ ತಾತ್ಕಾಲಿಕವಾಗಿಯಾದರೂ ತಡೆ ಹಾಕುತ್ತದೆ. ಕ್ರೂರ ಮನಸ್ಸುಗಳನ್ನು ಮಣಿಸುತ್ತದೆ ಆದರೆ ಭಕ್ತಿಭಾವದ ಹೆಸರಿನಲ್ಲಾದರೂ ಜನ ಬದಲಾಗಬೇಕು, ಸಮಾಜದ ಒಳಿತಿಗೆ ಪೂರಕವಾಗುವ ರೀತಿ ನಡವಳಿಕೆಗಳನ್ನಿಟ್ಟುಕೊಂಡಾಗ ಮಾತ್ರ ನಂಬಿದ ಭಕ್ತಿಗೆ ಚ್ಯುತಿ ಬಾರದು ಅಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...