Sunday, March 16, 2014

ಭ್ರಮೆ ಮತ್ತು ಬದುಕು!

ಭ್ರಮೆ ಮತ್ತು ಬದುಕು ಹಲವು ಸಲ ತಳುಕು ಹಾಕಿಕೊಂಡಿರುತ್ತವೆ. ಬದಲಾಗುವ ಕಾಲಘಟ್ಟದಲ್ಲಿ ಸಿದ್ದಾಂತಗಳು ಬ್ರಷ್ ಅಪ್ ಆಗಬೇಕು, ನಿಲುವುಗಳು ಬದಲಾಗ ಬೇಕು, ಸಾರ್ವಜನಿಕವಾಗಿ ಹೇಗೆ ತೆರೆದುಕೊಳ್ಳಬೇಕು ಎಂಬುದು ಸಹಾ ಮುಖ್ಯವಾಗುತ್ತದೆ. ಇದು ಕೆಲವೊಮ್ಮೆ ನಗೆಪಾಟಲಿಗೂ ಈಡು ಮಾಡುತ್ತದೆ. ಭ್ರಮೆಯ ಬದುಕಿನಿಂದ ಅನೇಕ ಅವಕಾಶಗಳು ಕಳೆದು ಹೋಗಬಹುದು, ಹತ್ತಿರದಲ್ಲಿದ್ದವರು ದೂರ ಸರಿದು ಹೋಗಬಹುದು. ಇದು ಬದುಕುಗಳನ್ನು ಎಲ್ಲಿಂದೆಲ್ಲಿಗೋ ತಂದು ನಿಲ್ಲಿಸಿ ಬಿಡಬಹುದು. 
      ಅವರೊಬ್ಬ ಕನ್ನಡದ ಹೆಸರಾಂತ ಕವಿ, ಗ್ರಾಮೀಣ ಸೊಗಡಿನಲ್ಲಿ ಬರೆಯುತ್ತಿದ್ದ ಅವರು ಸಾಹಿತ್ಯ ವಲಯದಲ್ಲಷ್ಟೇ ಅಲ್ಲ ಶೈಕ್ಷಣಿಕ ವಲಯದಲ್ಲೂ ಛಾಪು ಮೂಡಿಸಿದವರು.  ಮುಂದೆ ಅವರು ದೊಡ್ಡ ಪ್ರಶಸ್ತಿಯ ಹಿರಿಮೆಗೂ ಪಾತ್ರರಾದರೆನ್ನಿ, ಸರಿ ಅವರನ್ನು ಓಲೈಸುವ, ಸಭೆಗಳಿಗೆ ಕರೆಯುವ ಉಮ್ಮೇದಿಯೂ ಇರುತ್ತದಲ್ಲಾ, ಇದನ್ನೇ ಒಂದು ಛಾನ್ಸ್ ಆಗಿ ತೆಗೆದುಕೊಂಡ ಮಹಾಶಯರು ಒಂದು ಕಾರ್ಯಕ್ರಮಕ್ಕೆ ಇಂತಿಷ್ಟು ಹಣ, ಐಷಾರಾಮಿ ವಾಹನ, 5ಸ್ಟಾರ್ ದರ್ಜೆಯ ಹೋಟೆಲ್, ರಾತ್ರಿಗೆ ನಾಲ್ಕಂಕಿ ಬೆಲೆ ಬಾಳುವ ಪಾನೀಯ ಹೀಗೆ ಪಟ್ಟಿ ಇದರ ಜೊತೆಗೆ ಅವರೇ ಹೇಳುವ ದಿನಾಂಕಕ್ಕೆ ಕಾರ್ಯಕ್ರಮ! ಯಾವುದೇ ಷೆಡ್ಯೂಲ್ ಇಲ್ಲದಿದ್ದರೂ ಸಂಘಟಕರು ಹೇಳುವ ದಿನಾಂಕಕ್ಕೆ ಇವರು ಬ್ಯುಸಿ ಎಂಬುದನ್ನು ಹೇಳಲು ಮರೆಯುತ್ತಿರಲಿಲ್ಲ. ಕಾರ್ಯಕ್ರಮ ಸಂಘಟಕರು ಮತ್ತು ಸಾಹಿತ್ಯ ಚಟುವಟಿಕೆ ನಡೆಸುವ ಸಂಸ್ಥೆಗಳೂ ಸಹಾ ಈ ಡಿಮ್ಯಾಂಡ್ ನೋಡಿ ಕರೆಯುವುದನ್ನೇ ಬಿಟ್ಟು ಬಿಟ್ಟರು. 

      ಅವನು ಹಳ್ಳಿ ಹೈದ ತುಂಬಾ ಕಷ್ಟ ಪಟ್ಟು ಆಟೋಟ ಗಳಲ್ಲಿ ಪಾಲ್ಗೊಳ್ಳುತ್ತಿದ್ದ, ನಿರಾಸೆಯಾದರೂ ಅಂದು ಕೊಂಡಿದ್ದನ್ನು ದಕ್ಕಿಸಿಕೊಳ್ಳುವಲ್ಲಿ ನಿಸ್ಸೀಮ! ಪದವಿ ನಂತರ ಮಹಾನಗರಿ ಬೆಂಗಳೂರು ತಲುಪಿಕೊಂಡ, ಅವಕಾಶವಾದಾಗಲೆಲ್ಲ ರಾಷ್ಟ್ರ-ಅಂತರ ರಾಷ್ಟ್ರೀಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಪದಕಗಳನ್ನು ತರುತ್ತಿದ್ದ, ಆಗೆಲ್ಲ ಖರ್ಚಿಗೆ ದುಡ್ಡು ಬೇಕಿತ್ತಲ್ಲ ಹಾಗಾಗಿ ನನ್ನದೊಂದು ಫೋಟೋ ಸುದ್ದಿ ಹಾಕಿ ಎಂದು ಪತ್ರಿಕಾಲಯಗಳಿಗೆ ಎಡತಾಕುತ್ತಿದ್ದ, ಅಧಿಕಾರಸ್ಥರ ಮನೆಗಳಿಗೆ ವೆಚ್ಚ ಬರಿಸಲು ಕೋರಿ ಎಡತಾಕುತ್ತಿದ್ದ! ಅಂತಹ ಹೈದ ಅದೊಂದು ದಿನ ಅಂತರ ರಾಷ್ಟ್ರೀಯ ಮಟ್ಟದ ಪದಕವನ್ನ ಗಿಟ್ಟಿಸಿಯೇ ಬಿಟ್ಟಿದ್ದ. ಸರಿ ಆತನಿಗೆ ದಕ್ಕಿದ ದಿಡೀರ್ ಹೆಸರನ್ನು ಜನಪ್ರಿಯತೆಯನ್ನ ನಿಭಾಯಿಸುವುದು ಹೇಗೆ ಎಂಬುದನ್ನು ವಿವೇಚಿಸದೇ ಏಕಾಏಕಿ ಪ್ರತಿಷ್ಠಾ ಮನೋಭಾವಕ್ಕೆ ಒಳಗಾಗಿ ಬಿಟ್ಟ(superiority complex). ಜನ ಪ್ರೀತಿಯಿಂದ ಕರೆದರೆ ಮಾತನಾಡಿಸಿದರೆ ಇವನದ್ದು ಪ್ರತಿಷ್ಠೆಯ ಮಾತು, ಕಾರ್ಯಕ್ರಮಗಳಿಗೆ ಕರೆದರೆ ಇಂತಿಷ್ಟು ದುಡ್ಡು ಎಂದು ನಿಗದಿ ಮಾಡಿಬಿಟ್ಟ! ಜನ ಕರೆಯುವುದನ್ನೇ ನಿಲ್ಲಿಸಿ ಬಿಟ್ಟರು, ಥೂ ಇವನಾ ನಾವು ಇಷ್ಟಪಟ್ಟ ಸಾಧಕ ಎಂಬ ಮಾತುಗಳು ಕೇಳಿ ಬಂದವು!

     ಅದು ಸಾಹಿತ್ಯ ಸಂಸ್ಥೆಯೊಂದರ ಕಾರ್ಯಕ್ರಮ ಸಂಘಟಕರು ಸಾಹಿತಿಯೊಬ್ಬರಿಗೆ ದೂರವಾಣಿ ಕರೆ ಮಾಡಿ ಇಂಥ ಕಾರ್ಯಕ್ರಮ ನೀವು ಬರಬೇಕು ಎಂದು ಮನವಿ ಮಾಡಿದರು, ಆ ಸಾಹಿತಿ ಶೈಕ್ಷಣಿಕ ವಲಯದಲ್ಲಿ ಉದ್ಯೊಗದಲ್ಲಿರುವಾತ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ 6ಅಂಕಿ ಸಂಬಳ ಪಡಯುವಾತ, ನೋಡಿ ಇವ್ರೆ ನಾನು ಆ ಕಾರ್ಯಕ್ರಮಕ್ಕೆ ಬರೋಲ್ಲ, ಉದ್ಘಾಟನೆಗೆ ಬಂದು ಬಿಡ್ತೀನಿ ಎನ್ನಬೇಕೆ, ಸಂಘಟಕರಿಗೆ ಕಸಿವಿಸಿ ಬೇಡ ಉದ್ಘಾಟನೆಗೆ ಬೇರೆಯವರು ಇದ್ದಾರೆ ಎಂದು ಹೇಳುವ ಅವಕಾಶವೇ ಸಿಗಲಿಲ್ಲ, ಸರಿ ಕಾರ್ಯಕ್ರಮದ ದಿನ ಸಾಹಿತಿ ಮಹಾಶಯರು ಬಂದರು ಇನ್ನೂ ವೇದಿಕೆ ಏರಿ ನಾಡಗೀತೆ ಹೇಳಬೇಕು ತಕ್ಷಣವೆ ವೇದಿಕೆಯ ಹಿಂದೆ ನಿಂತಿದ್ದ ಸಂಘಟಕರೆಡೆಗೆ ತಿರುಗಿ ನೋಡ್ರೀ ನಾನು ಕಾರ್ ಮಾಡ್ಕೊಂಡು ಬಂದಿದೀನಿ, ನನಗೆ ಇಷ್ಟು ಕಾರ್ಯಕ್ರಮ ಮುಗಿದ ತಕ್ಷಣ ಹೊರಡ್ತೀನಿ ಬೇಗ ವ್ಯವಸ್ಥೆ ಮಾಡಿ ಎಂದು ಬಡಬಡಿಸಿದರು. ಸಂಘಟಕರು ಸುಸ್ತೋ ಸುಸ್ತು!

      ಅದು ಮದ್ಯಮ ವರ್ಗದ ಕುಟುಂಬ, ಜಿಲ್ಲೆಯವರೇ ಆದರೂ ರಾಜಧಾನಿಯಲ್ಲಿ ನೆಲೆಸಿದ್ದಾರೆ. ಆ ಕುಟುಂಬದ ಪೈಕಿ ಒಬ್ಬಾಕೆ ಕಲಾವಿದೆಯಾಗಿ ಹೆಸರು ಮಾಡಿದ್ದಾರೆ! ಅದು ಮಾತಾಡುವ ಗೊಂಬೆಯ ಒಡತಿ! ಸರಿ ನಮ್ ಜಿಲ್ಲೆಯವರಲ್ವಾ ಒಮ್ಮೆ ಕರೆದು ಸಾರ್ವಜನಿಕ ಸನ್ಮಾನ ಮಾಡೋಣ ಎಂದು ಕೊಂಡ ಆಕೆಯ ತಾಲೂಕಿನ ತಹಸೀಲ್ದಾರರು ಫೋನಾಯಿಸಿದರು. ಸದರಿ ಯುವತಿಯ ತಂದೆ ಫೋನ್ ಎತ್ತಿಕೊಂಡರು. ರೀ ಸನ್ಮಾನ ಅತ್ಲಾಗಿರ್ಲಿ ಮೊದ್ಲು ನಮ್ ನಂಬರ್ ನಿಮಗೆ ಕೊಟ್ಟಿದ್ದು ಯಾರು? ಅವರು ಇಲ್ಲ ಬಾಂಬೆ ಲಿ ಕಾರ್ಯಕ್ರಮ ಇದೆ, ಸುಖಾ ಸುಮ್ಮನೆ ನಮ್ ಹೆಸರು ಹೇಳಿಕೊಂಡು ಕಾರ್ಯಕ್ರಮ ಆಯೋಜಿಸ ಬೇಡಿ, ನಮ್ದು ಏನಿದ್ರು 5ಅಂಕಿ ಸಂಭಾವನೆ ಕೊಡೋ ಹಾಗಿದ್ರೆ ಹೇಳಿ ಆಮೇಲೆ ನಾವೇ ಡೇಟ್ ಕೊಡ್ತೀವಿ ಅಂತ ಹೇಳಿ ಫೋನ್ ಕುಕ್ಕಿಬಿಡಬೇಕೆ. ತಹಸೀಲ್ದಾರ್ ಸುಸ್ತೋ ಸುಸ್ತು. ಸರಿ ಒಮ್ಮೆ ರಾಜಧಾನಿಗೆ ಹೋದಾಗ ಅವರ ಮನೆಗೆ ಹೋಗುವ ಅವಕಾಶ ಬಂತು. ಏನಾಶ್ಚರ್ಯ ಮನೆ ಬಾಗಿಲಿಗೆ ಬಂದು ನಮ್ಮೂರು ಕಡೇವ್ರಾ ಬನ್ನಿ ಅಂತ ಸ್ವಾಗತಿಸಿ ಕರೆದರು. ನಮ್ಮೂರಿಗೆ ಬಂದು ಕಾರ್ಯಕ್ರಮ ಮಾಡಬೇಕು ಹೊರಗಡೆ ಏನ್ ಹೆಸರು ಮಾಡಿದ್ರೆ ಏನು ನಮ್ಮೂರಲ್ಲಿ ಗುರುತಿಸಿದ ಹಾಗೆ ಆಗಲ್ಲ ನೋಡಿ ದುಡ್ಡು ನಾವು ಗಣನೆಗೆ ತಗೊಳ್ಳಲ್ಲ ಅನ್ನಬೇಕೆ ಸುಸ್ತಾಗುವ ಸರದಿ ನಮ್ಮದು. 

        ಅವರು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ವಿದ್ವಾಂಸರು ಖ್ಯಾತ ಗಾಯಕರು, ತಾವು ಪ್ರೀತಿಸುವ ಗಾಯನದ ಬೆನ್ನು ಬಿದ್ದ ಅವರು ಬ್ಯಾಂಕ್ ನೌಕರಿಗೆ ರಾಜೀನಾಮೆ ನೀಡಿ ಹುಟ್ಟಿದ ಹಳ್ಳಿಗೆ ಮರಳಿ ಬಂದು ಬಿಟ್ಟರು. ಒಂದು ಕಾಲದಲ್ಲಿ ದೊಡ್ಡ ಸಂಗೀತಗಾರರನ್ನು ಹೊಂದಿ ಹೆಸರು ಮಾಡಿದ್ದ ಊರಿನ ಪರಂಪರೆಯನ್ನು ಮರಳಿಸುವ ಧೃಢ ಸಂಕಲ್ಪ ಮಾಡಿದರು ಮತ್ತು ಅದನ್ನು ಸಾಕಾರ ಮಾಡಿಸಿಕೊಳ್ಳುವ ದಿಸೆಯಲ್ಲಿ ಇಂದಿಗೂ ಪ್ರಯತ್ನ ಮಾಡುತ್ತಲೇ ಇದ್ದಾರೆ, ತಮ್ಮ ಉದ್ದೇಶದಲ್ಲಿ ಸಾಫಲ್ಯತೆಯನ್ನು ಪಡೆದುಕೊಂಡಿದ್ದಾರೆ. ಇಂತಹವರನ್ನು ನಮ್ಮೂರಲ್ಲೂ ಕರೆಸಬೇಕು ಹಾಡಿಸಬೇಕು ಆದರೆ ಹೊರಗೆ ಇವರ ಕಾರ್ಯಕ್ರಮಕ್ಕೆ 50ಸಾವಿರದವರೆಗೆ 1-2ಗಂಟೆಗೆ ಗಾಯನಕ್ಕೆ ದುಡ್ಡು ಕೊಡುವವರಿದ್ದಾರೆ ನಮಗೆ ಇದು ಸಾಧ್ಯವೇ ಎಂದು ಯೋಚಿಸುವ ಹೊತ್ತಿಗೆ ಒಮ್ಮೆ ಭೇಟಿಯಾದ ಅವರು ನೋಡಿ ಇದು ನನ್ನೂರು, ನನ್ನ ಜಿಲ್ಲೆ ನಯಾ ಪೈಸೆಯೂ ಬೇಕಿಲ್ಲ ನಾನೇ ಬಂದು ಹಾಡುತ್ತೇನೆ ನೀವು ಕರೆದಲ್ಲಿಗೆ ಬಂದು ಪಾಲ್ಗೋಳ್ಳುತ್ತೇನೆ ಎನ್ನುವ ಮೂಲಕ ಇಂಥಹವರು ಇದ್ದಾರ ಎಂದು ಅನಿಸುವಂತೆ ನಡೆದುಕೊಂಡರು.

        ಅದು ಮಹಿಳಾ ದಿನಾಚರಣೆಯ ಕಾರ್ಯಕ್ರಮ, ಸರಿ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿ ಒಬ್ಬ ಸೆಲೆಬ್ರಿಟಿಯನ್ನು ಕರೆಯೋಣ ಅವರಿಗೆ ವಾಹನ, ಸ್ವಲ್ಪಮಟ್ಟಿನ ಸಂಭಾವನೆ ಕೊಡೋಣ ಎಂದು ಕೊಂಡು ಒಂದು ಕಾಲದಲ್ಲಿ ತುಂಬಾ ಹೆಸರು ಮಾಡಿದ್ದ ಸೆಲೆಬ್ರಿಟಿ ನಟಿಯೊಬ್ಬರನ್ನು ಕರೆದೆವು ಅವರು ತಕ್ಷಣ ಒಪ್ಪಿಕೊಂಡರು. ಅವರದ್ದೇ ವಾಹನದಲ್ಲಿ ಬರುತ್ತೇನೆ ಯಾವ ವಸತಿ ವ್ಯವಸ್ಥೆ, ಸಂಭಾವನೆ ಏನೂ ಬೇಡ 200ಕಿಮಿ ಯಾದರೂ ಪರವಾಗಿಲ್ಲ ಖುಷಿ ಬರೋಕೆ ಅಂದರು. ಆದರೆ ಕಾರ್ಯಕ್ರಮದ ದಿನ ಯಾವುದೋ ಪ್ರಮುಖ ಷೆಡ್ಯೂಲ್ ಬೆಂಗಳೂರಿನಲ್ಲೇ ಇದ್ದುದರಿಂದ ಬರಲಾಗುತ್ತಿಲ್ಲ ಎಂದು ವಿಷಾದಿಸಿದರು. ಆಯ್ತು ಎಂದು ಗೊತ್ತಿರುವ ಇತರೆ ಮಹಿಳಾ ಸೆಲೆಬ್ರಿಟಿಗಳನ್ನು ಕರೆದರೆ ಅವರ ಬೇಡಿಕೆಗಳ ಪಟ್ಟಿ ದೊಡ್ಡದಿತ್ತು, ಅದು ಸಂಘಟಕರ ಮಟ್ಟಕ್ಕೆ ನಿಲುಕುವುದಿರಲಿ ಅವರನ್ನ ಕರೆಯದೇ ಹಾಗೆ ಕಾರ್ಯಕ್ರಮ ಮಾಡಿದರು. 

       ಜನಪ್ರಿಯತೆ ಎನ್ನುವುದು ಸಾರ್ವತ್ರಿಕವಾಗಿ ದೊರೆತಾಗ ಅದು ದೀರ್ಘಕಾಲಕ್ಕೆ ಉಳಿಯಲಾರದು, ಆಕ್ಷಣಕ್ಕೆ ಮತ್ತು ಸ್ವಲ್ಪ ದಿನಕ್ಕೆ ಮಾತ್ರ ಅದು ಜೀವಂತವಾಗಿರುತ್ತೆ. ಅದನ್ನ ಹೇಗೆ ಬಳಸಿಕೊಳ್ಳಬೇಕು ಜನರಿಗೆ ಹತ್ತಿರವಾಗಿ ಹೇಗೆ ಉಳಿಯಬೇಕು ಎಂಬ ಕಾಮನ್ ಸೆನ್ಸ್ ಇಷ್ಟೋ ಜನರಿಗೆ ಇರುವುದಿಲ್ಲ ಹಾಗಾಗಿ ಅವರು ಎಂತಹ ದೊಡ್ಡ ಸಾಧಕರೇ ಆಗಿದ್ದರೂ ಅವೆಲ್ಲವೂ ಅವರ ನಡವಳಿಕೆಗಳಿಂದ ಸಾರ್ವತ್ರಿಕವಾಗಿ ಶೂನ್ಯವಾಗಿ ಬಿಡುತ್ತವೆ. ಹಾಗೆಯೇ ತಾವು ನಂಬಿಕೊಂಡದ್ದು ಮತ್ತು ಅಂದು ಕೊಂಡದ್ದೇ ಅಲ್ಟಿಮೇಟ್ ಎಂಬ ಮನಸ್ಥಿತಿಯೂ ಸಹಾ ಸಮಾಜದಲ್ಲಿ ಒಪ್ಪಿತವಾಗದು. ಪ್ರತೀ ಕಾಲಘಟ್ಟಕ್ಕು ಅಪ್ ಡೇಟ್ ಅನ್ನು ವ್ಯವಸ್ಥೆ ಬಯಸುತ್ತದೆ ಹಾಗೆಯೇ ಫ್ಲೆಕ್ಸಿಬಿಲಿಟಿಯನ್ನೂ ಸಹಾ ಇವನ್ನು ನಿಭಾಯಿಸುವುದನ್ನು ಕಲಿಯಬೇಕಾದರೆ ಮುಖ್ಯವಾಗಿ ಇಗೋ ಬಿಡಬೇಕು. ಹೊಸತನಕ್ಕೆ ತೆರೆದುಕೊಳ್ಳುವ ಮನಸ್ಥಿತಿಯು ಇರಬೇಕಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...