
ಹೀಗೆ ಜನಮಾನಸದಲ್ಲಿ ಆಳವಾಗಿ ನೆಲೆನಿಂತ ವಿಷ್ಣು ಯಾರಿಗೂ ತಿಳಿಯದಂತೆ ಒಂದೂ ಮಾತು ಆಡದೇ ಹೊರಟೇ ಹೋದರು. ವಂಶವೃಕ್ಷ ಚಲನ ಚಿತ್ರದಿಂದ ಆರಂಭಗೊಂಡ ವಿಷ್ಣುವಿನ ಚಿತ್ರ ಯಾತ್ರೆ ಅಂತ್ಯಗೊಂಡಿದ್ದು 200ನೇ ಚಿತ್ರ ಆಪ್ತರಕ್ಷಕ ದಲ್ಲಿ. ಚಿತ್ರರಂಗದಲ್ಲಿ ಯಾರಿಗೂ ಕೇಡು ಬಯಸದ, ಸರ್ವ ಜನಾಂಗದ ಒಳಿತು ಬಯಸುತ್ತಿದ್ದ, ಎಡಗೈಲಿ ಕೊಟ್ಟದ್ದು ಬಲಗೈಗೆ ತಿಳಿಯದಂತೆ ಸಹಾಯ ಹಸ್ತ ಚಾಚುತ್ತಿದ್ದ ಆಪ್ತಮಿತ್ರ ಇಂದು ನಮ್ಮೊಡನಿಲ್ಲ. ಆದರೆ ಆವರು ಉಳಿಸಿ ಹೋದ ನೆನಪುಗಳು, ಮಾಡಿದ ಕಾರ್ಯಗಳು ನಮ್ಮೊಂದಿಗಿವೆ. ಇಂತಹ ವಿಷ್ಣುವರ್ಧನ್ ಬಗ್ಗೆ ಅವರ ಸಾವಿನ ಸಂಧರ್ಭದಲ್ಲಿ ಅಭಿಮಾನಿಗಳ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಅನಾಗರೀಕವಾಗಿ ನಡೆದುಕೊಂಡರು. ವಿಷ್ಣುವಿನ ಶವಸಂಸ್ಕಾರದ ನಂತರ ವಾಹನಗಳಿಗೆ ಬೆಂಕಿ ಇಟ್ಟ ಪ್ರಕರಣ, ಆಸ್ತಿಪಾಸ್ತಿಗಳ ಮೇಲೆ ಕಲ್ಲುತೂರಿ ಹಾನಿಮಾಡಿದ್ದು, ಪೊಲೀಸರು ಅನಿವಾರ್ಯವಾಗಿ ಗಾಳಿಯಲ್ಲಿ ಗುಂಡು ಹಾರಿಸುವಂತೆ ಪ್ರಚೋದಿಸಿದ್ದು ಅಂತಿಮ ಕ್ಷಣದ ಕಪ್ಪು ಚುಕ್ಕೆ.
ಇಷ್ಟಕ್ಕೂ ಹೇಗೆ ಬೆಳೆದರು, ಯಾಕೆ ಚಿತ್ರರಸಿಕರ ಕಣ್ಮಣಿಯಾದರು ಎನ್ನುವುದೇ ಒಂದು ಇಂಟರೆಸ್ಟಿಂಗ್ ಕಥಾನಕ. ವಿಷ್ಣು ಹುಟ್ಟಿದ್ದು ಸೆ. 18ನೇ, 1950ರಲ್ಲಿ ತಂದೆ ನಾರಾಯಣರಾವ್ ಅಂದಿನ ದಿನಗಳಲ್ಲಿ ಪ್ರಸಿದ್ದ ರಂಗ ನಟ, ಚಿತ್ರ ಸಂಭಾಷಣೆಕಾರ, ಓರ್ವ ಸಹೋದರಿ ರಮಾರಾಮಚಂದ್ರ ಖ್ಯಾತ ಕಥಕ್ ನೃತ್ಯಗಾತಿ ಮೈಸೂರಿನ ಚಾಮುಂಡಿ9ಪುರಂನಲ್ಲಿ ನೆಲೆಸಿದ ವಿಷ್ಣು ಅಲ್ಲಿಯೇ ವಿದ್ಯಾಭ್ಯಾಸ ಪೂರೈಸಿದರು. ರಂಗನಾಟಕಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಬಾಲ್ಯದಲ್ಲಿಯೇ ವಂಶವೃಕ್ಷ ಚಿತ್ರದಲ್ಲಿ ಕಾಣಿಸಿಕೊಂಡರಾದರೂ ಅಂದಿನ ಸಂಪತ್ ಕುಮಾರ್ ಗೆ ಬ್ರೇಕ್ ನೀಡಿದ್ದು ಮಾತ್ರ ಪುಟ್ಟಣ್ನ ಕಣಗಾಲ್ ರ ನಾಗರಹಾವು ಚಲನ ಚಿತ್ರ.ನಾಯಕನಾಗಿ ಅಭಿನಯಿಸಿದ ಮೊತ್ತಮೊದಲ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದ ವಿಷ್ಣು ನಂತರದ ದಿನಗಳಲ್ಲಿ ಕರ್ಣ, ಬಂಧನ, ಹೃದಯಗೀತೆ, ಮಲಯಮಾರುತ, ಬಂಗಾರದ ಜಿಂಕೆ, ಸುಪ್ರಭಾತ ದಂತಹ ನೂರಾರು ಚಿತ್ರಗಳಲ್ಲಿ ಅವಿಸ್ಮರಣೀಯ ಅಭಿನಯ ನೀಡುವ ಮೂಲಕ ಜನಮನ ಸೂರೆಗೊಂಡರು. ವಿಷ್ಣು ಚಿತ್ರ ಬದುಕಿಗೆ ಒಂದು ಹಂತದಲ್ಲಿ ತಿರುವು ನೀಡಿದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೆಶನದ ನಾಗರಹೊಳೆ ಚಿತ್ರದಲ್ಲಿ ಮೊದಲ ಹಾಡು ಹಾಡುವ ಮೂಲಕ ಹಾಡುಗಾರರಾಗಿಯೂ ದಾಖಲಾದರು. ಈ ಚಿತ್ರದಲ್ಲಿ ವಿಷ್ಣು ಗೆ ನಾಯಕಿಯಾಗಿ ನಟಿಸಿದ್ದು ಅವರ ಮನದನ್ನೆ ಭಾರತಿ ವಿಷ್ಣುವರ್ದನ್!
ಅದು ರಾಜ್ ಕುಮಾರ್ ಯುಗ, ರಾಜ್ ಕುಮಾರ್ ಒಂದರ ಮೇಲೊಂದರಂತೆ ಹಿಟ್ ಆಗುತ್ತಿದ್ದವು, ರಾಜ್ ಚಿತ್ರ ನಿರ್ಮಾಣ ಸಂಸ್ಥೆ ಸಹಾ ಸೃಷ್ಟಿಯಾಗಿತ್ತು ಎಲ್ಲೆಲ್ಲೂ ರಾಜ್ ಅಲೆ ಸೃಷ್ಟಿಯಾಗಿತ್ತು. ಇಂತಹ ಸನ್ನಿವೇಶದಲ್ಲಿ ಬಂದ 'ರಾಮಾಚಾರಿ' ರಾಜ್ ಕುಮಾರ್ ಅಲೆಯ ನಡುವೆಯೂ 2ನೇ ಸ್ಥಾನಕ್ಕೆ ನೆಲೆನಿಂತರು. ವಾಸ್ತವ ನೆಲೆಗಟ್ಟಿನಲ್ಲಿ ರಾಜ್-ವಿಷ್ಣು ನಡುವೆ ಪೈಪೋಟಿ ಇಲ್ಲದಿದ್ದರು , ಅಭಿಮಾನಿಗಳ ಅತಿರೇಕ ಅವರಿಬ್ಬರನ್ನು ಚಿತ್ರರಂಗದ ಅಂಗಳದಲ್ಲಿ ಎದುರಾಳಿಗಳಂತೆಯೇ ಬಿಂಬಿಸಿತು. ಇಂತಹ ಸನ್ನಿವೇಶದಲ್ಲಿಯೇ ರಾಜ್ ಮತ್ತು ವಿಷ್ಣು ಜೊತೆಯಾಗಿ ನಟಿಸಿದ ಗಂಧದ ಗುಡಿ ಚಿತ್ರದ ಕ್ಲೈಮಾಕ್ಷ್ ಚಿತ್ರೀಕರಣದ ವೇಳೆ ಅನಾಮಿಕ ಕಿರಾತಕರ ಕಿತಾಪತಿಯಿಂದಲೋ, ದ್ವೇಷ ಸೃಷ್ಟಿಸುವ ಹುನ್ನಾರದಿಂದಲೋ ಬಂದೂಕಿನೊಳಗೆ ನೈಜ ಗುಂಡು ಸೇರಿತ್ತು. ವಿಶ್ರಾಂತಿಯ ವೇಳೆ ಬಾಲಣ್ಣನ ಕೈಲ್ಲಿದ್ದ ಬಂದೂಕಿನಿಂದ ಅಕಸ್ಮಿಕವಾಗಿ ನಿಜವಾದ ಗುಂಡು ಹಾರಿಯೇ ಬಿಟ್ಟಿತು.ಆಗ ವಿಷ್ಣು ಮತ್ತು ಇಡೀ ಚಿತ್ರ ತಂಡ ಸ್ತಂಬೀಬೂತವಾಯ್ತು, ಅಣ್ಣ ರಾಜ್ ಕುಮಾರ್ ಕೂದಲೆಳೆಯ ಅಂತರದಿಂದ ಪಾರಾದರು. ಈ ಘಟನೆ ಇಡೀ ಚತ್ರರಂಗದಲ್ಲಿ ದಿಗ್ಮೂಡರನ್ನಾಗಿಸಿತು. ಪರಿಣಾಮ ಹುಚ್ಚೆದ್ದ ಅಭಿಮಾನಿಗಳಿಂದ ವಿಷ್ಣು ಮನೆಯ ಮೇಲೆ ಕಲ್ಲು ತೂರಾಟವಾಯಿತು. ಹಲ್ಲೆಯ ಯತ್ನ ವಾಯಿತು. ಮನನೊಂದ ವಿಷ್ಣು ಮದ್ರಾಸ್ ಗೆ ತೆರಳಿ ಕೆಲಕಾಲ ಅಲ್ಲೆ ಉಳಿಯುವ ಅನಿವಾರ್ಯತೆ ಸೃಷ್ಟಿಯಾಯಿತು. ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಮತ್ತು ಸಚಿವ ಜೀವರಾಜ್ ಆಳ್ವ ಅಲ್ಲಿಗೆ ತೆರಳಿ ವಿಷ್ಣುರವರ ಮನವೊಲಿಸಿ ಕರೆತಂದರು. ಅಂದು ವಿಷ್ಣು ಆಡಿದ ಮಾತು ಹೀಗಿತ್ತು. ಬಾಲಕನೋರ್ವ ಮನೆಬಿಟ್ಟು ಹೋಗಿದ್ದಾನೆ, ಅವನು ಯಾವಾಗಲಾದರೂ ಮನೆಗೆ ಹಿಂತಿರುಗಲೇ ಬೇಕಲ್ಲವೇ ಹಾಗೆಯೇ ನಾನೂ ಸಹ ಅಂದರಲ್ಲದೇ ರಾಜ್ಯಕ್ಕೆ ವಾಪಾಸಾದರು. ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ನಿರ್ದೇಶಕ ಭಾರ್ಗವ, ರಾಜೇಂದ್ರ ಸಿಂಗ್ ಬಾಬು, ದ್ವಾರಕೀಶ್, ದಿನೇಶ್ ಬಾಬು ರಂತಹವರ ಗರಡಿಯಲ್ಲಿ ವಿಷ್ಣು, ವಿಷ್ಣುವಿಗೆ ಸಾಟಿಯಾಗುವಂತೆ ನಟಿಸಿಬಿಟ್ಟರು.
ವಿಷ್ಣುವಿಗೆ ಅಭಿಮಾನಿ ಸಂಘವಿದ್ದರೂ ಇತರೆ ನಟರಂತೆ ಅತಿರೇಕದ ವರ್ತನೆಗಳು ಕಾಣಬರಲಿಲ್ಲ. ಅಭಿಮಾನಿ ಸಂಘಗಳು ಕೇವಲ ವಿಷ್ಣುವಿನ ಚಿತ್ರ ಬಿಡುಗಡೆಯಾದಾಗ ಸ್ಟಾರ್ ಹೊತ್ತು ಮೆರವಣಿಗೆ ಮಾಡದೇ ಸಮಾಜ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡವು. ವಿಷ್ಣು ಅಂತಹ ಬೆಳವಣಿಗೆಗೆ ನೇರ ಕಾರಣವಾಗಿದ್ದರು. ರಾಜ್ಯಾಧ್ಯಂತ ನಡೆದ ಅತೀ ಹೆಚ್ಚು ರಕ್ತ ದಾನ ಶಿಬಿರಗಳು, ವೈದ್ಯಕೀಯ ಸಹಾಯ, ಮದುವೆಗಳು, ಶಿಕ್ಷಣ ಸಹಾಯ, ಾಟಗಾರರಿಗೆ ಪ್ರೋತ್ಸಾಹ, ಸಹ ಕಲಾವಿದರ ಪ್ರೋತ್ಸಾಹ ಹೀಗೆ ಹತ್ತು ಹಲವು ಕೆಲಸಗಳ ಮೂಲಕ ವಿಷ್ಣು ನೆಲೆ ನಿಂತರೂ. ಕೇವಲ ಒಂದೇ ಮಾದರಿಯ ಚಿತ್ರಗಳಲ್ಲಿ ನಟಿಸದೇ ವಿಭಿನ್ನ ಚಿತ್ರಗಳಲ್ಲಿ ವಿಭಿನ್ನ ನಟನೆ ನೀಡುವ ಮೂಲಕ ಮನೆಮಾತಾದರು. ಕೆಲ ಚಿತ್ರಗಳು ಸೋತರು ವಿಚಲಿತರಾಗದ ವಿಷ್ಣು ಮತ್ತೆ ಮತ್ತೆ ಅಂತಹ ನಿರ್ದೇಶಕರ ಚಿತ್ರಗಳಲ್ಲಿ ನಟಿಸಿ ಅವರಿಗೆ ಗೆಲುವಿನ ಹರ್ಷದ ಸವಿಯನ್ನು ತಂದು ಕೊಟ್ಟರು. ಅಂಬಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ವಿಷ್ಣು ಅವರಿಗಾಗಿಯೇ ತಮ್ಮ ಮನೆಯಲ್ಲಿ ವಿಶೇಷ ಬಾರ್ ತೆರೆದಿದ್ದರಂತೆ. ಅಂಬಿ ಮಾತ್ರವಲ್ಲ ತಮ್ಮ ಅನೇಕ ಸ್ನೇಹಿತರಿಗೂ ಅದೇ ರೀತಿಯ ಪ್ರೀತಿ ಸ್ನೇಹವನ್ನು ತೋರಿಸುತ್ತಿದ್ದರು. ನೊಂದವರಿಗೆ ಸದಾ ನೆರವಿನ ಹಸ್ತ ಚಾಚುತ್ತಿದ್ದರು. ಸಹ ಕಲಾವಿದರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಇಂತಹ ವಿಷ್ಣುವಿನ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆ ಆಧಾರವಿಲ್ಲದ ವರದಿಯನ್ನು ಅವರ ಅಂತ್ಯದ ನಂತರದಲ್ಲಿ ಪ್ರಕಟಿಸಿ ಭಾರೀ ಅಸಹ್ಯ ಸೃಷ್ಟಿಸಿತು. ರಾಜ್ಯ ಸರ್ಕಾರ ವಿಷ್ಣು ನೆನಪಿಗೆ ಫಿಲಂ ಸಿಟಿ ನಿರ್ಮಿಸುವ ಘೋಷಣೆ ಮಾಡಿದೆ, ಮತ್ತು ಅದಕ್ಕಾಗಿ 10ಕೋಟಿ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದೆ. ಅದು ಶೀಘ್ರವಾಗಿ ಜಾರಿಗೆ ಬರಬೇಕಿದೆ. ರಾಜ್ ಸ್ಮಾರಕ್ಕೆ ಬಂದ ಗತಿ ವಿಷ್ಣು ಸ್ಮಾರಕ್ಕೆ ಬಾರದಿರಲಿ. ರಾಜ್ ಹಾಗೂ ವಿಷ್ಣು ಕನ್ನಡ ಚಿತ್ರರಂಗದ ಎರಡು ಕಣ್ಣುಗಳು ಅವರ ಸ್ಮಾರಕಗಳು ವಿಳಂಬವಿಲ್ಲದಂತೆ ಆಗಬೇಕಿದೆ ಅಲ್ಲವೇ?