Wednesday, February 8, 2012

ಮಾನಗೇಡಿ ಅಧಿಕಾರಸ್ಥರ ಕೃತ್ಯಗಳು ಎಲ್ಲಿಗೆ ಬಂತಪ್ಪ?

      
ದನದಲ್ಲಿ ನೀಲಿ ಚಿತ್ರ ನೋಡಿ ಸಚಿವರು ಕೆಟ್ರು ಆದರೆ ಸಚಿವ ದ್ವಯರು ನೋಡಿದ ನೀಲಿ ಚಿತ್ರವನ್ನು ಅಂತರ್ಜಾಲದಲ್ಲಿ ಹುಡುಕಿ ಹಸಿ ಹಸಿಯಾಗಿ ಇಡೀಜಗತ್ತಿಗೆ ಸುದ್ದಿ ವಾಹಿಗಳು ತೆರೆದಿಟ್ವಲ್ಲ ಇದು ತಪ್ಪಲ್ವೇ, ಕೊಂಚ ಮಾತ್ರ ಕಾಣುತ್ತಿದ್ದ ಮೊಬೈಲ್ ಚಿತ್ರ ತೋರಿಸಿದ್ರೆ  ಸಾಕಿತ್ತಲ್ವಾ ? ಹಾಗಿದ್ರೆ ಸಚಿವರುಗಳಿಗಿಂತ ದೊಡ್ಡ ಅನಾಹುತ ಮಾಡಿರೋದು ಸುದ್ದಿ ವಾಹಿನಿಗಳ ಹಸಿ ನೀಲಿ ಚಿತ್ರ ಪ್ರಸಾರ ಏನಂತೀರಾ? ಇದಕ್ಕೆ ತಲೆದಂಡ ಆಗಲೇ ಬೇಕಲ್ವಾ? ಇಂಥಹದ್ದೊಂದು ಪ್ರಶ್ನೆ ಕಳೆದ ರಾತ್ರಿಯಿಂದ ನನ್ನ ಮನಸ್ಸು ಕೆಡಿಸಿದೆ. ಪೋಲಿ ಸಚಿವರುಗಳ ಸುದ್ದಿಗಿಂತ ಯಾವುದೇ ಅಡೆತಡೆ ಇಲ್ಲದೇ ಪ್ರಸಾರವಾಗುತ್ತಿದ್ದ ಅಶ್ಲೀಲ ಚಿತ್ರದ ಕ್ಲಿಪಿಂಗ್ ಅನ್ನ ಕೋಟ್ಯಾಂತರ ಮಂದಿ ವಯೋಭೇಧ ವಿಲ್ಲದೇ ನೋಡುವಂತೆ ತೆರೆದಿಟ್ಟದ್ದು ದೊಡ್ಡ ಮಟ್ಟದ ಅನಾಹುತ ಅನಿಸುತ್ತಿಲ್ಲವೇ? ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಮಾಧ್ಯಮಗಳು ಇಂಥಹ ಸಂಧರ್ಭದಲ್ಲೂ ಸಾಮಾಜಿಕ ಹೊಣೆಯರಿತು ವರ್ತಿಸದೇ ಮುಚ್ಚುಮರೆ ಮಾಡದೇ ತೆರೆದಿಟ್ಟದ್ದು ಒಪ್ಪುವ ಮಾತೇ? ಭಟ್ಟರು ನೇತೃತ್ವ ವಹಿಸಿರುವ ಪತ್ರಿಕೆಯೂ ಕೂಡಾ ಉಡುಪಿ ರೇವ್ ಪಾರ್ಟಿಯಲ್ಲಿ ವಿದೇಶಿಯರು ನಗ್ನ ಅರೆನಗ್ನರಾಗಿ ಕಾಮಕೇಳಿ ನಡೆಸಿದ ದೃಶ್ಯವನ್ನು 'ಮುಚ್ಚುಮರೆ' ಇಲ್ಲದೇ ಪ್ರಕಟಿಸಿದ್ದು, ಮಾಧ್ಯಮಗಳು ಹೆಚ್ಚಿನ ಪ್ರಸಾರಕ್ಕಾಗಿ ಯಾವ ಮಟ್ಟಕ್ಕಿಳಿದಿದೆ ಎಂಬುದನ್ನು ತೋರಿಸಿದೆ,ಇದು ಗಂಭೀರವಾದ ವಿಚಾರವೂ ಹೌದು. ಸಮಾಜದಲ್ಲಿ ಜನರ ಭಾವನೆಗಳನ್ನು ರೂಪಿಸುವ ಪ್ರಭಾವ ಶಾಲಿ ಮಾದ್ಯಮವಾಗಿ ರಾಜ್ಯದಲ್ಲಿ ಮಾಧ್ಯಮಗಳು ಕೆಲಸ ಮಾಡುತ್ತಿವೆ ಹೀಗಿರುವಾಗ ಸಾಮಾಜಿಕ ಕಾಳಜಿ ಸ್ವಲ್ಪವಾದರೂ ಇರಬೇಡವೇ? 
       ಇರಲಿ ಇದೆಲ್ಲಕ್ಕಿಂತ ಇವತ್ತು ವ್ಯಾಪಕವಾಗಿ ಚರ್ಚೆಗೆ ಬಂದಿರುವ ವಿಷಯ ಬಿಜೆಪಿ ಸರ್ಕಾರದ್ದು. ದಕ್ಷಿಣ ಭಾರತದಲ್ಲಿ ಮೊದಲ ಭಾರಿಗೆ ಬಿಜೆಪಿ ಪಕ್ಷದ ಸರ್ಕಾರ ಸ್ಥಾಪಿಸುವ ಮೂಲಕ ಹೆಮ್ಮೆಯಿಂದ ಬೀಗುತ್ತಿದ್ದ ಪಕ್ಷಕ್ಕೆ ಇದು ಅದೆಷ್ಟನೆಯ ಮುಜುಗುರವೋ? ಆರಂಭದಲ್ಲೆ ನರ್ಸು-ರೇಣುಕ ಪ್ರಕರಣ, ರಘುಪತಿ ಭಟ್ ರ ಪತ್ನಿ ದೆಹಲಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಯಡಿಯೂರಪ್ಪ-ಶೋಭಾ ಕರೆಂದ್ಲಾಜೆ ಕೇರಳದ ದೇಗುಲದಲ್ಲಿ ಮದುವೆಯಾದರು ಎಂಬ ಸುದ್ದಿ, ಮಾಜಿ ಸಚಿವ ಹಾಲಪ್ಪನ ಅತ್ಯಾಚಾರ ಪ್ರಕರಣ, ಸರ್ಕಾರ ಹಾಗೂ ರೈತರಿಗೆ ಒಂದೆ ತೆಕ್ಕೆಯಲ್ಲಿ ವಂಚನೆ ಮಾಡಿದ ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಗದೀಶ್ ನಾಯ್ಡು, 850ಕೋಟಿ ರೂಪಾಯಿಗಳ ಡಿನೋಟೀಫಿಕೇಶನ್ ಹಗರಣ ನಡೆಸಿ ಅಧಿಕಾರ ಕಳೆದುಕೊಂಡು ಜೈಲು ಪಾಲಾದ ಮಾಜಿ ಸಿ ಎಂ ಯಡ್ಡಿ, ಗಣಿಗಾರಿಕೆ ನಡೆಸಿ ರಾಜ್ಯದ ಸಂಪತ್ತನ್ನು ಲೂಟಿ ಹೊಡೆದ ಜನಾರ್ಧನರೆಡ್ಡಿ, ಅಧಿಕಾರಕ್ಕಾಗಿ ಕಿತ್ತಾಟ ನಡೆಸಿ ಲೆಕ್ಕವಿಲ್ಲದಷ್ಟು ಬಾರಿ ಇಕ್ಕಟ್ಟಿಗೆ ಸಿಲುಕಿದ ಸರ್ಕಾರ, ಸಚಿವರುಗಳು ಮತ್ತು ಮುಖ್ಯಮಂತ್ರಿಗಳ ಕೋಡಂಗಿ ಹೇಳಿಕೆಗಳು ಒಂದೇ ಎರಡೇ? ಜನ ತಮ್ಮನ್ನು ಯಾಕೆ ಆರಿಸಿ ಕಳಿಸಿದ್ದಾರೆ? ತಮ್ಮ ಹೊಣೆಗಾರಿಕೆ ಏನು? ನಡವಳಿಕೆ ಹೇಗಿರಬೇಕು? ನಿಲುವುಗಳಿಗೆ ಬದ್ದತೆ ಪ್ರದರ್ಶನ ಊಹುಂ ಯಾವುದರಲ್ಲೂ ಬಿಜೆಪಿ ಪಕ್ಷದ ಸರ್ಕಾರ ಅಂದುಕೊಂಡಂತೆ ನಡೆದುಕೊಳ್ಳಲಿಲ್ಲ. ಬದಲಿಗೆ ರಾಷ್ಟ್ರೀಯ ಮಟ್ಟದಲ್ಲಿ ಅಸಹ್ಯದ ಮೇಲೆ ಅಸಹ್ಯವನ್ನು ಪ್ರದರ್ಶಿಸುವ ಮೂಲಕ ತನ್ನ ಯೋಗ್ಯತೆಯನ್ನು ಬಟಾ ಬಯಲು ಮಾಡಿಕೊಂಡಿದೆ.
        ಅಲ್ಪನಿಗೆ ಅಧಿಕಾರ ಸಿಕ್ಕರೆ ಏನಾಗುತ್ತದೋ ಅದೇ ರೀತಿ ಇವತ್ತು ಬಿಜೆಪಿ ಸರ್ಕಾರದ ಕಥೆಯೂ ಆಗಿದೆ. ಇಷ್ಟಕ್ಕೂ ಆಡಳಿತ ಪಕ್ಷದ ಶಾಸಕರು ಮತ್ತು ಸಚಿವರುಗಳುಹಗರಣಗಳು ರಾಜ್ಯದ ಮಟ್ಟಿಗೆ ಹೊಸದೇನಲ್ಲ, ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಗುಂಡೂರಾವ್ ತುಂಬಾ ಶೋಕಿ ಮತ್ತು ರಸಿಕ ಪ್ರಿಯ. ಖ್ಯಾತ ನೃತ್ಯಗಾತಿ ಮಂಜುಪ್ರಿಯ ಬೆನ್ನ ಹಿಂದೆ ಬಿದ್ದಿದ್ದ ಈತ ಒಮ್ಮೆ ರೈತರ ಮೇಲೆ ಲಾಠಿಛಾರ್ಜು ಮತ್ತು ಗೋಲೀಬಾರ್ ನಡೆದಾಗ ಮಂಜುಭಾರ್ಗವಿಯ ನೃತ್ಯದ ಸವಿ ಸವಿಯುತ್ತಿದ್ದರಂತೆ.ಅನೇಕ ಅಧಿಕಾರಸ್ಥರು ಲೈಂಗಿಕ ಸಂಬಂಧಿ ವಿಚಾರಗಳಲ್ಲೆ ಅಧಿಕಾರ ಕಳೆದುಕೊಂಡಿದ್ದಾರೆ, ಮಾನ ಮರ್ಯಾದೆಗಳನ್ನು ಹರಾಜು ಹಾಕಿಕೊಂಡು ದಿಕ್ಕು ದೆಸೆಯಿಲ್ಲದಂತಾಗಿದ್ದಾರೆ. ಇವತ್ತು ಲಕ್ಷ್ಮಣ ಸವದಿ, ಸಿಸಿ ಪಾಟೀಲ ಮತ್ತು ಕೃಷ್ಣಪಾಲೇಮಾರ್ ಕೂಡಾ ಸದನದಲ್ಲಿ ಗಂಭೀರವಾಗಿ ಚರ್ಚೆ ನಡೆಯುವ ವೇಳೆ ಸದನದ ಘನತೆ ಮರೆತು ಆಶ್ಲೀಲ ಚಿತ್ರ ವೀಕ್ಷಣೆಗೆ ಮುಂದಾಗಿ ರಾಜ್ಯದ ಜನತೆಗೆ ರಾಷ್ಟ್ರಮಟ್ಟದಲ್ಲಿ ಮುಜುಗುರದ ಪರಿಸ್ತಿತಿ ತಂದಿಟ್ಟಿದ್ದಾರೆ. ಅಶ್ಲೀಲ ಚಿತ್ರ ವೀಕ್ಷಣೆ ತಪ್ಪಲ್ಲವಾದರೂ ಅದನ್ನು ಒಬ್ಬ ಜವಾಬ್ದಾರಿಯುತ ವ್ಯಕ್ತಿ ಹೊತ್ತಲ್ಲದ ಹೊತ್ತಲ್ಲಿ ನಿಷಿದ್ದ ಪ್ರದೇಶದಲ್ಲಿ ನೋಡುತ್ತಾನೆಂದರೂ ಅಂತಹ ಹೀನ ಮನಸ್ಸಿನ ಜಂತುಗಳು ಅಧಿಕಾರದಲ್ಲಿ ಉಳಿಯುವ ಅವಶ್ಯಕತೆ ಇಲ್ಲ. 
           ಈ ಬಿಜೆಪಿ ಸರ್ಕಾರ ಸುದ್ದಿಯಾಗದ ವಿಚಾರಗಳಿಗೆ ಹೆಚ್ಚು ಸುದ್ದಿಯಾಗುತ್ತಿರುವುದೂ ಸಹಾ ಕನ್ನಡಿಗರ ದೌರ್ಬಾಗ್ಯವೇ ಸರಿ. ರಾಜ್ಯದಲ್ಲಿ ಅಧಿಕಾರದ ಸವಿಯುಣಿಸಿದ ಸಾಮಾನ್ಯ ಮತದಾರರನ್ನ ಮರೆತ ಮುಖ್ಯಮಂತ್ರಿ, ಸದಾನಂದ ಗೌಡರಿಗೆ ಅಧಿಕಾರದಲ್ಲಿ ಉಳಿಯಲು ಮಂಗಳೂರಿನ ಭೂತದೈವ ಅಭಯ ನೀಡಿದೆಯಂತೆ, ಇನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಯಾದಗಿರಿಯ ಅದ್ಯಾರೋ ಮಾತಾಜಿ ಎಂಬಾಕೆಯ ದರ್ಶನಕ್ಕಾಗಿ ಗಂಟೆ ಗಟ್ಟಲೇ ಕಾದು ಕೈಮುಗಿದು ನಿಲ್ಲುತ್ತಾರೆ, ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಆಶೀರ್ವಚನ ಪಡೆಯುತ್ತಾರೆ, ಸಾರ್ವಜನಿಕವಾಗಿ ಹೆಚ್ಚು ವರ್ಚಸ್ವಿ ನಾಯಕರಾಗಿರುವ ಯಡ್ಡಿ ಯನ್ನು ಆಕೆ ಏಕವಚನದಲ್ಲಿ ಸಂಭೋಧಿಸಿ ಬಯ್ಯುವುದು ಪ್ರಸಾದವೇ? ಇನ್ನ ಡಿಜಿಪಿ ಶಂಕರ ಬಿದರಿ, ಅಧಿಕಾರದುದ್ದಕ್ಕೂ ಯಾರಿಗೂ ಕೇರ್ ಮಾಡದೇ ಪ್ರಾಮಾಣಿಕವಾಗಿ ಮತ್ತು ಶಿಸ್ತಿನಿಂದ ಕಾರ್ಯ ನಿರ್ವಹಿಸಿದ ಶಂಕರಬಿದರಿ ರಾಜ್ಯದ ಉನ್ನತ ಪೋಲೀಸ್ ಹುದ್ದೆ ಪಡೆದ ಮೇಲೆ ಆಧ್ಯಾತ್ಮಿಕತೆ, ಪೂಜೆ ಪುನಸ್ಕಾರಗಳಿಗೆ ಹೆಚ್ಚು  ಆಧ್ಯತೆ ಕೊಡುತ್ತಿರುವುದು ವಿಷಾಧನೀಯ, ಶಂಕರ ಬಿದರಿ ಕೂಡ ತಮ್ಮ ಹುದ್ದೆಯ ಘನತೆ ಮರೆತು ಮಾತಾಜಿಯ ಅಪ್ಪಣೆಗೆ ತಲೆಭಾಗಿ ನಿಲ್ಲುತ್ತಾರೆ,ಆಢಳಿತಕ್ಕೆ ಮೌಡ್ಯದ ಸೂಚನೆಗೆ ಎರವಾಗುತ್ತಾರೆಂದರೆ ಸಾಮಾನ್ಯ ಜನತೆ ಯಾರಲ್ಲಿ ವಿಶ್ವಾಸವಿಡಬೇಕು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಇವರಿಗೆಲ್ಲ ಅಧಿಕಾರ ಕೊಟ್ಟವರು ಯಾರು? ಸಂಕಟ ಬಂದಾಗ ವೈಯುಕ್ತಿಕ ನೆಲೆಗಟ್ಟಿನಲ್ಲಿ ಅಂತಹ ಕ್ರಿಯೆಗಳನ್ನು ಮಾಡಿಕೊಳ್ಳಲಿ ಆದರೆ ಸಾರ್ವಜನಿಕ ಬದುಕಿನಲ್ಲಿ ಇಂಥಹ ಅಪಸವ್ಯಗಳನ್ನು ಸಹಿಸಲಾದೀತೆ? 
          ವಾಸ್ತವವಾಗಿ ಸರ್ಕಾರದ ಆಶಯಗಳು ಮೌಡ್ಯ ಕುರಿತು ಏನು ಹೇಳುತ್ತವೆ? ವಿಧಾನ ಸೌಧ ಮುಂದೆಯೇ ದಪ್ಪ ಅಕ್ಷರಗಳಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಬರೆಯಲಾಗಿದೆ. ಅಂದರೆ ಬೇರೆ ದೇವರನ್ನು ಪೂಜಿಸಿ ಪುನೀತರಾಗಬೇಕಿಲ್ಲ, ಸಿಕ್ಕ ಅಧಿಕಾರದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರ ಕೆಲಸವನ್ನು ಮಾಡಿ ಅಂತ. ಆದರೆ ಈಗ ನಡೆಯುತ್ತಿರುವುದೆಲ್ಲ ತದ್ವಿರುದ್ದ, ಮುಖ್ಯಮಂತ್ರಿ ಸೇರಿದಂತೆ ಸಚಿವರು ಮಂದಿ ಮಾಗಧರು ಅಧಿಕಾರ ಸ್ವೀಕಾರಕ್ಕೆ ಮುನ್ನ ವಾಸ್ತು, ಸಮಯ, ಪೂಜೆ ಪುನಸ್ಕಾರ ಇತ್ಯಾದಿಗಳನ್ನ ಚಾಚೂ ತಪ್ಪದೇ ನಡೆಸುವ ಜೊತೆಗೆ ಮೌಡ್ಯಾಚರಣೆಗೆ ಸಂಕೇತವಾಗಿ ಬಿಂಬಿತವಾಗುತ್ತಾರೆ. ಸರ್ಕಾರಿ ಕಛೇರಿಗಳಲ್ಲೂ ಪೂಜೆ ಪುನಸ್ಕಾರದಂತಹ ಕ್ರಿಯೆಗಳು ಅಸಲಿ ಅಧಿಕಾರ ಬಲದ ವಿಶ್ವಾಸದ ಬದಲಿಗೆ ದೇವರಲ್ಲಿ ಮಾತ್ರ ವಿಶ್ವಾಸ ವಿಡುವಂತೆ ಸಾರ್ವಜನಿಕವಾಗಿ ವ್ಯಕ್ತವಾಗುವಂತೆ ಮಾಡಲಾಗುತ್ತಿದೆ. ಆಂದರೆ ಇವರೆಲ್ಲಾ ಸರ್ಕಾರಿ ನೌಕರಿ ಮಾಡುವುದು, ರಾಜಕೀಯ ಮಾಡಿ ಅಧಿಕಾರಕ್ಕೆ ಬರುವುದು ಯಾವ ಘನ ಉದ್ದೇಶಕ್ಕೆ?  ಸಾಮಾನ್ಯ ಜನ ಯಾವ ವ್ಯವಸ್ಥೆಯಲ್ಲಿ ನಂಬಿಕೆ ಇಡಬೇಕು? 

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...