Sunday, July 17, 2011

ಹೇಳುವುದು ಒಂದು.. ಮಾಡುವುದು ಇನ್ನೊಂದು..

ಹೌದು ಆಚಾರ-ವಿಚಾರ, ಸಿದ್ದಾಂತಗಳು ಹೇಳಲಿಕ್ಕೆ ಕೇಳಲಿಕ್ಕೆ ಮಾತ್ರ ಚೆಂದ.. ಆದರೆ ಬದುಕಲು ಅಲ್ಲ. ಉಪದೇಶ ಪರರಿಗೆ ನನಗೆ ಮಾತ್ರ ಅದೆಲ್ಲ ಅನ್ವಯಿಸುವುದಿಲ್ಲ ಎಂಬ ತದ್ವಿರುದ್ದದ ಪ್ರಕ್ರಿಯೆಗಳು ವಾಸ್ತವದಲ್ಲಿ ಜಾರಿಯಲ್ಲಿರುವುದನ್ನು ಕಾಣಬಹುದು. ಪರಿಣಾಮ ಸಮಾಜದಲ್ಲಿ ನೈತಿಕ ಅಧ:ಪತನವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಯಾಕೆ ಹೀಗಾಗುತ್ತಿದೆ? ನೈತಿಕತೆ, ಸಿದ್ದಾಂತಗಳು ಯಾಕೆ ಬಾಳಿಕೆ ಬರುತ್ತಿಲ್ಲ? ಇದರಿಂದ ಆಗುತ್ತಿರುವುದೇನು? ಸಮಾಜದ ವಿವಿಧ ಸ್ಥರಗಳಲ್ಲಿ ಎರಡು ಮುಖಗಳಿಂದ ಆಗುತ್ತಿರುವ ಪರಿಣಾಮಗಳೇನು ಎಂಬ ಕುರಿತು ಒಂದು ಅವಲೋಕನ ಅಗತ್ಯವಾಗಿ ಆಗಬೇಕಾಗಿದೆ. 
        ಸಮಾಜದ ವಿವಿಧ ಸ್ಥರಗಳಲ್ಲಿ ಗಣ್ಯರೆಂದು ಗುರುತಿಸಿಕೊಂಡವರನ್ನ, ವಿವಿಧ ಕಾರಣಗಳಿಗಾಗಿ ಜನಪ್ರಿಯತೆ ಪಡೆದವರನ್ನ ನಮ್ಮ ದೇಶದಲ್ಲಿ ಅನುಸರಿಸುವುದು ಹೆಚ್ಚು ಮತ್ತು ಅವರ ಬದುಕನ್ನು ಆದರ್ಶವೆಂದು ಭಾವಿಸುವುದು ಸಹಜವೇ ಆಗಿದೆ. ಆದರೆ ವಾಸ್ತವದಲ್ಲಿ ಯಾಕೆ ಹೀಗಾಗುತ್ತಿದೆ? ಒಬ್ಬ ಸಿನಿಮಾ ನಟ ತೆರೆಯ ಮೇಲೆ ಆಡುವ ಡೈಲಾಗ್ ಗಳು, ಹೇಳುವ ನೀತಿಗಳು ಅವನ ನಿಜ ಜೀವನದಲ್ಲ್ಲಿಯೂ ಇರುತ್ತವೆ ಎಂದು ಬಹುತೇಕರು ಭಾವಿಸಿರುತ್ತಾರೆ, ಹಾಗೆಯೇ ಒಬ್ಬ ರಾಜಕಾರಣಿ, ಒಬ್ಬ ಅದಿಕಾರಿ, ಒಬ್ಬ ಪತ್ರಕರ್ತ, ಒಬ್ಬ ಶಿಕ್ಷಕ, ಒಬ್ಬ ಸಾಹಿತಿ ಹೀಗೆ ಇನ್ನು ಅನೇಕ ಮಂದಿ ತಮ್ಮದೇ ಆದ ಚೌಕಟ್ಟಿನಲ್ಲಿ ಕೆಲವೊಮ್ಮೆ ಅದನ್ನು ಮೀರಿ ಸಮಾಜಕ್ಕೆ ವೇದಾಂತವನ್ನ, ಸಿದ್ದಾಂತವನ್ನು, ನೈತಿಕತೆಯ ಪಾಠವನ್ನ ಅವರವರದ್ದೇ ಧಾಟಿಯಲ್ಲಿ ಅನುಕೂಲಕ್ಕೆ ತಕ್ಕಂತೆ ಆಡಿರುತ್ತಾರೆ. ಅಮಾಯಕ ಜನ ಸಮೂಹ ಅದನ್ನು ನಿಜವೆಂದು ಭ್ರಮಿಸುತ್ತದೆ, ಬದಲಾವಣೆಯ ಕನಸನ್ನು ಕಾಣುತ್ತದೆ ಆದರೆ ಅವೆಲ್ಲ ಮರೀಚಿಕೆಗಳು ಎಂಬುದು ಅರ್ಥವಾಗುವಷ್ಟರಲ್ಲಿ ಎಷ್ಟೋ ಮಂದಿ ತಮ್ಮ ಬದುಕಿನ ಹಾದಿಯ ಅಂತ್ಯಕ್ಕೆ ಬಂದಿರುತ್ತಾರೆ. ನೆಚ್ಚಿಕೊಂಡವರ ಆದರ್ಶಗಳನ್ನು ಪಾಲಿಸುವ ಹುಕಿಗೆ ಬಿದ್ದು ಭ್ರಮನಿರಸನಗೊಂಡು ಬಿಡುತ್ತಾರೆ. ಈ ದೇಶದಲ್ಲಿ ಆದರ್ಶ ಎನಿಸಬಹುದಾದಂತಹ ಅನೇಕ  ವ್ಯಕ್ತಿತ್ವಗಳು ಆಗಿ ಹೋಗಿವೆ,ಗಾಂಧಿ,ಅಂಬೇಡ್ಕರ್,ಬಸವ,ಬುದ್ದ ಹೀಗೆ ಅಲ್ಲಿ ಬದಲಾವಣೆಗಳಲ್ಲಿ ಒಂದು ಖಚಿತತೆ ಇತ್ತು.  ಅಂದಿನ ದಿನಗಳಲ್ಲಿ ನಂಬಿಕೊಂಡ ವಿಚಾರಕ್ಕೊಂದು ಬದ್ದತೆ ಇರುತ್ತಿದ್ದಾದರೂ ಇತ್ತೀಚೆಗಿನ ದಿನಗಳಲ್ಲಿ ಆ ಬದ್ದತೆಗಳು ಕಳೆದು ಹೋಗಿ ಕೇವಲ ಸ್ವಾರ್ಥ ಮಾತ್ರ ಪ್ರಧಾನವಾಗಿ ಕಾಣುತ್ತಿರುವುದು ವಿಷಾಧನೀಯಕರ ಸಂಗತಿಗಳಲ್ಲೊಂದು. 
         ಇವೆಲ್ಲಾ ಯಾಕೆ ಪ್ರಸ್ತಾಪಿಸ ಬೇಕಾಯಿತೆಂದರೆ ಕಳೆದ ವಾರ ನಡೆದ ರಾಜ್ಯ ಮಟ್ಟದಲ್ಲಿ ನಡೆದ 2 ಪ್ರಮುಖ ಸಂಗತಿಗಳು ಇಲ್ಲಿ ಉಲ್ಲೇಖಾರ್ಹ ಈ ಪೈಕಿ ಮೊದಲನೆಯದ್ದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬೇಕು ಎಂದು ಉಪವಾಸ ಸತ್ಯಾಗ್ರಹ ಹೂಡಿದ್ದ ಮೈಸೂರು ವಿವಿ ಮಾಜಿಉಪ ಕುಲಪತಿ ದೇ. ಜವರೇಗೌಡ, ರಾಜ್ಯ ಸರ್ಕಾರ 5ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದನ್ನು ವಿರೋಧಿಸುವ ನಿಲುವು ವ್ಯಕ್ತಪಡಿಸುತ್ತಿರುವುದು. ಇನ್ನೊಂದು ಮುಖ್ಯ ಮಂತ್ರಿ ಯಡಿಯೂರಪ್ಪ ತಮ್ಮ ಮತ್ತು ತಮ್ಮ ಕುಟುಂಬದವರ ವಿರುದ್ದ ಹೊರಡಿಸಿದ ಆರೋಪಗಳ ಪ್ರಕರಣವನ್ನ ಸಿಬಿಐ ಗೆ ವಹಿಸಲು ಆಗ್ರಹಿಸಿ ನಡೆಸಿದ ಉಪವಾಸದ ವೇಳೆ ಸಾಹಿತಿ ಅನಂತಮೂರ್ತಿ, ಎಚ್ ಡಿ ಕುಮಾರಸ್ವಾಮಿಯನ್ನ ಭೇಟಿಯಾಗಿದ್ದು. 
         ಮೈಸೂರು ಮಹರಾಜ ಕಾಲೇಜಿನಲ್ಲಿ  ಪ್ರಾಧ್ಯಾಪಕರಾಗಿದ್ದ ಹಾಗೂ ಖ್ಯಾತ ಚಿಂತಕ ಮತ್ತು ಸಾಹಿತಿಯೂ ಆಗಿರುವ ಪ್ರೊ|| ಕೆ ಎಸ್ ಭಗವಾನ್ , ದೇ ಜವರೇಗೌಡರ ವ್ಯತಿರಿಕ್ತ ನಿಲುವುಗಳ ಕುರಿತು ರಾಜ್ಯದ ಪತ್ರಿಕೆಗಳಿಗೆ ಪತ್ರ ಬರೆದಿದ್ದರು ಅದರಲ್ಲಿ ವ್ಯಕ್ತವಾಗಿರುವಂತೆ, ದೇಜಗೌ ರ ಕನ್ನಡ ಪರ ಹೋರಾಟ, ಚಿಂತನೆ ಮತ್ತು ಅಭಿಮಾನವನ್ನೇನೋ ಒಪ್ಪೋಣ ಆದರೆ ಅದೇ ಮನುಷ್ಯ ಅಧ್ಯಕ್ಷರಾಗಿರುವ ಕುವೆಂಪು ಶಿಕ್ಷಣ ಟ್ರಸ್ಟ್ ಅಡಿಯಲ್ಲಿ ಎಲ್ ಕೆ ಜಿ/ಯುಕೆಜಿ ಯಿಂದಲೇ ಆಂಗ್ಲಮಾಧ್ಯಮದಲ್ಲಿ ಭೋಧಿಸಲಾಗುತ್ತಿದೆ.. ಆದರೆ ಅವರ ಮೂಗಿನಡಿಯಲ್ಲೆ ಆಂಗ್ಲ ಮಾಧ್ಯಮವನ್ನ ಪ್ರೋತ್ಸಾಹಿಸಲಾಗುತ್ತಿದೆ ಹೀಗಿರುವಾಗ ಅವರ ಹೋರಾಟಗಳಿಗೆ ಅರ್ಥ ಬರುವುದೇ? ಇನ್ನು ಯು ಆರ್ ಅನಂತಮೂರ್ತಿ 70ರ ದಶಕದ ಬದಲಾವಣೆಯ ಹೊಸ ಗಾಳಿ ಬೀಸಿದ ಸಾಹಿತ್ಯವನ್ನ ನೀಡಿದವರು, ಸಾಹಿತ್ಯದ ಮೂಲಕ ಸಂಚಲನ ಸೃಷ್ಟಿಸಿದ ಇವರು ಕಳೆದೆರೆಡು ದಶಕಗಳಿಂದ ಅತ್ತ ಬಲಪಂಥೀಯವೂ ಅಲ್ಲದ ಇತ್ತ ಎಡಪಂಥೀಯನೂ ಆಗದೆ ಎಡಬಿಡಂಗಿ ಧೋರಣೆಯನ್ನೇ ಪ್ರದರ್ಶಿಸುತ್ತಾ ಅವಕಾಶವಾದಿ ತನವನ್ನ ಪ್ರದರ್ಶಿಸಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ 1500ಕೋಟಿ ರೂಪಾಯಿ ಆಸ್ತಿ ಮಾಡಿಕೊಂಡು ಅದನ್ನೆಲ್ಲ ತಾನು ಲೀಗಲ್ ಆಗಿ ಸಂಪಾದಿಸಿದೆ ಎಂದು ಹೇಳುವುದು ಒಂದು ಬಾಲಿಶವಾದ ಪ್ರಯತ್ನ.. ಇಂತಹವರ ಬೆಂಬಲಕ್ಕೆ ಅನಂತಮೂರ್ತಿ ಬರುತ್ತಾರೆ. ಹಾಗೆಯೇ ಮೈಸೂರು ವಿವಿ ಯ ಉಪಕುಲಪತಿಯಾಗಿದ್ದ ಪುಣ್ಯಾತ್ಮನೋರ್ವ ಜಾತಿ ವ್ಯವಸ್ಥೆಯಲ್ಲಿ ತನಗೆ ನಂಬಿಕೆಯಿಲ್ಲ ವೆಂದು ಸಾರ್ವಜನಿಕವಾಗಿ ಬಿಂಬಿಸಿಕೊಂಡಿದ್ದರು, ತಮ್ಮ ಮಕ್ಕಳ ಜಾತಿಯನ್ನು ಶಾಲೆಗೆ ಸೇರಿಸುವಾಗ 'ಭಾರತೀಯ' ಎಂದೇ ನಮೂದಿಸಿದ್ದರು. ಆದರೆ ಕುಲಪತಿ ಹುದ್ದೆಗೆ ಏರಿದಾಗ ಆತ ಮಾಡಿದ್ದೇ ಬೇರೆ ಮೀಸಲು ಕೋಟ ಇರಲಿ ಸಾಮಾನ್ಯ ಕೋಟಾದಲ್ಲೂ ತನ್ನದೇ ಜಾತಿಯ ಜನರನ್ನ ಶೇ.70 ರಷ್ಟು ತುಂಬಿದರು. ಅಂದರೆ ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇರುವವರಿಗಿಂತ ಜಾತ್ಯಾತೀತ ಎಂದು ಬಿಂಬಿಸುವುದರಲ್ಲೇ ಹೆಚ್ಚಿನ ಹುಳುಕು ತುಂಬಿರುತ್ತದೆ ಎಂದು ಭಾವಿಸಬೇಕಾಗುತ್ತದೆಯಲ್ಲವೇ? 
         ಇವತ್ತು ಪ್ರತೀ ಊರುಗಳಲ್ಲೂ ಇಂತಹ ವ್ಯಕ್ತಿತ್ವಗಳನ್ನ ಕಾಣಬಹುದು. ಒಬ್ಬ ವ್ಯಕ್ತಿ ಹೆಚ್ಚು ಭ್ರಷ್ಟನಾದ ನಂತರ ಸಮಾಜ ಸೇವೆಯತ್ತ ಹೊರಳುತ್ತಾನೆ. ಯಾವತ್ತಿಗೂ ಜನಸಾಮಾನ್ಯರನ್ನ ಕಣ್ಣೆತ್ತಿ ನೋಡದವನು ಅವರ ಆತ್ಮೀಯ ಬಂಧುವಿನಂತೆ ನಡೆದುಕೊಳ್ಳಲಾರಂಭಿಸುತ್ತಾನೆ.ಇಂತಹ ಬದಲಾವಣೆಗಳು ಶಾಶ್ವತವಾಗಿ ಆದರೆ ಒಳ್ಳೆಯದೇ ಆದರೆ ಆತನ ಆಕಾಂಕ್ಷೆ ಸಾಧನೆಯಾಗುವವರೆಗೆ ಮಾತ್ರ ಇದ್ದರೆ ಅದು ದುರಂತ.ಸಾಮಾಜಿಕ ಸುಧಾರಣೆ ಬಗ್ಗೆ ಭಾಷಣ ಮಾಡುವವನು ಅಂತರಂಗದಲ್ಲಿ ಅದಕ್ಕೆ ವಿರುದ್ದ ದೋರಣೆ ಹೊಂದಿರುತ್ತಾನೆ, ಸ್ತ್ರೀ ಪೀಡಕ, ಮಹಿಳಾ ಶೋಷಕ ಸಮಾಜದಲ್ಲಿ ಸುಧಾರಣಾವಾದಿಯ ಮುಖವಾಡ ಧರಿಸಿರುತ್ತಾನೆ. ಒಬ್ಬ ಬೇಟೆಗಾರ, ಒಬ್ಬ ಕಲ್ಲುಗಣಿ ಮಾಲಿಕ, ಪರಿಸರ ಹಾಳುಮಾಡುವ ಉದ್ಯಮ ನಡೆಸುವವ ಇದ್ದಕ್ಕಿದ್ದಂತೆ ಸಮಾಜದಲ್ಲಿ 'ಪರಿಸರವಾದಿ' ಎಂಬ ಮುಖವಾಡ ಹೊತ್ತು ಪ್ರತ್ಯಕ್ಷವಾಗಿ ಬಿಡುತ್ತಾನೆ. ಕನ್ನಡ ಭಾಷೆಯ ಕನ್ನಡ ಸಂಸ್ಕೃತಿಯ ಅರಿವೆ ಇರದ ಕೋಡಂಗಿ ಕನ್ನಡ ಹೋರಾಟಗಾರನಾಗಿ ಬಿಡುತ್ತಾನೆ. ಒಬ್ಬ ಸಮಾಜ ಘಾತುಕ  , ರೋಲ್ ಕಾಲ್ ಮಾಡಿಕೊಂಡು ಬದುಕುವವನು ಸಮಾಜ ಸೇವೆಯ ಸಂಘಟನೆಯ ಮಂಚೂಣಿಯಲ್ಲಿ ನಿಲ್ಲುತ್ತಾನೆ.ಕಳ್ಳದಂಧೆ ನಡೆಸುವವನು, ವಂಚಿಸುವವನು, ಹೆಂಡಕುಡುಕತನ, ಅಂದರ್ ಬಾಹರ್ ಆಡುವವನು, ಕಾಮುಕ ಪ್ರವೃತ್ತಿಯುಳ್ಳವನು, ಪಾರ್ಟು ಟೈಂ ರಾಜಕಾರಣ ಮಾಡುವವನು ರಾಜಕಾರಣಿಯಾಗಿ, ಮಠದ ಸ್ವಾಮೀಜಿಯಾಗಿ, ಪತ್ರಕರ್ತನಾಗಿ, ಶಿಕ್ಷಕನಾಗಿ, ನೌಕರನಾಗಿ, ಅಧಿಕಾರಿಯಾಗಿ ಸ್ಥಾಪಿತನಾಗುತ್ತಾನೆ. ಅಂದರೆ ಎಲ್ಲರೂ ಅಂತಹವರೇ ಎಂದು ಹೇಳುವುದಿಲ್ಲ, ಹೆಚ್ಚಿನ ಪಾಲು ಮಂದಿ ತಮ್ಮ ವೈಯುಕ್ತಿಕ ಹಿತಾಸಕ್ತಿಗೋಸ್ಕರ ಸಮಾಜದ ಮುಖವಾಣಿಗಳನ್ನು 'ಮುಖವಾಡ'ಗಳನ್ನಾಗಿ ಮಾಡಿಕೊಂಡು ಬಿಡುತ್ತಾರೆ ಅದೇ ದುರಂತ. 
          ಬದಲಾವಣೆಗಳು ಕಾಲಘಟ್ಟಕ್ಕೆ ಅನುಗುಣವಾಗಿ ಆರೋಗ್ಯಕರವಾಗಿ ಆಗಬೇಕೆ ವಿನಹ ಅದು ಸ್ವಾರ್ಥದ ಮೂಸೆಯಲ್ಲಿ ಬಂದರೆ ಹೀಗೆಲ್ಲಾ ಆಗಿಬಿಡುತ್ತವೆ. ಆಂತರಿಕ ಒತ್ತಡಕ್ಕಿಂತ ಬಾಹ್ಯ ಒತ್ತಡಗಳು, ಆಕಾಂಕ್ಷೆಗಳು ಮೇರೆ ಮೀರಿದಾಗ ನೈತಿಕತೆಯು ಕಳೆದು ಹೋಗುತ್ತದೆ.ಸಿದ್ದಾಂತಗಳ ಪ್ರತಿಪಾದನೆಗೆ ಗಟ್ಟತನ ಪ್ರದರ್ಶಿಸುವ ವ್ಯಕ್ತಿತ್ವಗಳು ಇಂದಿನ ದಿನಮಾನದಲ್ಲಿ ಕಾಣಸಿಗುತ್ತಿಲ್ಲ, ವೇಗದ ಬದುಕಿನಲ್ಲಿ ತಾನು ಹೇಗೆ ಬದುಕಿದೆ ಎನ್ನುವುದಕ್ಕಿಂತ ತಾನು ಬದುಕಿರುವಷ್ಟು ದಿನ ಹೇಗೆಲ್ಲ ಅಧಿಕಾರ ಹಿಡಿಯಬೇಕು, ದುಡ್ಡು ಮಾಡಬೇಕು ಅದರಲ್ಲಿ ತಾನು ಮತ್ತು ತನ್ನ ಕುಟುಂಬ ಹೇಗೆ ಬದುಕಬೇಕು ಎಂದು ಯೋಚಿಸುವವರ ಸಂಖ್ಯೆಯೇ ಹೆಚ್ಚು. ವ್ಯವಸ್ಥೆಯ ಲೋಪದೋಷಗಳನ್ನು ವೈಯುಕ್ತಿಕ ಲಾಲಸೆಗೆ ಬಳಸಿಕೊಳ್ಳುವ ಮಂದಿ ಅದರಲ್ಲೂ  ತಮ್ಮ ಬೇಳೆ ಬೇಯಿಸಿಕೊಂಡು ಬಿಡುತ್ತಾರೆ. ಹೀಗಿರುವಾಗ ಯಾರನ್ನ ನಂಬಬೇಕು ಯಾರನ್ನು ಬಿಡಬೇಕು ಎಂಬುದೇ ಗೋಂದಲಕ್ಕೆ ಸಿಲುಕಿಸಿ ಬಿಡುತ್ತದೆ.ಹೀಗಾದಾಗ ಸಿದ್ದಾಂತಗಳು ಅರ್ಥ ಕಳೆದುಕೊಂಡು ಅವು ಬದುಕು ಕಟ್ಟಿಕೊಡುವುದಿಲ್ಲ ಎಂಬ ಭಾವನೆಯನ್ನು ಮೂಡಿಸಿ ಬಿಡುತ್ತವೆ. ವ್ಯವಸ್ಥೆಯಲ್ಲಿ ನಂಬಿದ ಸಿದ್ದಾಂತದಿಂದಲೇ ಎಲ್ಲವನ್ನು ಜಯಿಸಿ ಬಿಡುತ್ತೇನೆ ಎಂಬುದೂ ಕೂಡಾ ಹಾಸ್ಯಸ್ಪದವೇ ಅದಕ್ಕೆ ಜಾಗತಿಕ ವರ್ತಮಾನದ ಆಶಯಗಳು ನಮಗರಿವಿಲ್ಲದಂತೆ ನಮ್ಮ ಬದುಕುಗಳ ಮೇಲೆ ಪರಿಣಾಮವನ್ನು ಉಂಟುಮಾಡುತ್ತವೆ.  ಆದರೆ ಜಾಗೃತ ಸ್ಥಿತಿ ಮಾತ್ರ ಇಂತಹ ಕ್ರಿಯೆಗಳ ಪರಿಣಾಮವನ್ನ ಕೊಂಚ ಮಟ್ಟಿಗಾದರೂ ಕಡಿಮೆ ಮಾಡಬಲ್ಲದಾಗಿವೆ.   ಜನಪ್ರಿಯತೆಯ ಕಕ್ಕುಲಾತಿಗೆ ಸಿಲುಕಿದ ಮುಖವಾಡಗಳು ನಂಬಿದ ಅಮಾಯಕರನ್ನ ವಂಚಿಸಿಬಿಡುತ್ತವೆ. ನಮ್ಮ ನಡುವೆಯೇ ಇಂತಹ ಹಲವು ಮುಖಗಳು ಕಾಣಿಸಿಕೊಳ್ಳುತ್ತವೆ ಅಂತಹವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಷ್ಟೇ.

Sunday, July 3, 2011

ಮಹಿಳಾ ಸಬಲೀಕರಣ ಎಂದರೆ ಇದೇನಾ?

ಮೊನ್ನೆಯಷ್ಟೆ ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಗುಲ್ಬರ್ಗಾ ಜಿ.ಪಂ. ಸಭೆಯಲ್ಲಿ ಗಂಡಂದಿರ ಮಾತಿಗೆ ಸೊಪ್ಪು ಹಾಕದ ಅಧಿಕಾರಿಗಳ ವಿರುದ್ದ ಪ್ರತಿಭಟಿಸಿ ಮಹಿಳಾ ಸದಸ್ಯೆಯರು ಹಚಾ ಅಂದು ಎದ್ದು ಹೋದ ಘಟನೆಯನ್ನು ಸ್ವಾರಸ್ಯಕರವಾಗಿ ಪ್ರಕಟಿಸಲಾಗಿತ್ತು.ದೇಶಕ್ಕೆ  ಸ್ವಾತಂತ್ರ್ಯ ಬಂದು 64ವರ್ಷಗಳು ಸರಿದು ಹೋಗಿವೆ, ಆ ನಂತರ ಮಹಿಳೆಯರಿಗೆ ಅನುಕಂಪ ತೋರುತ್ತ ಮಹಿಳಾ ಸಬಲೀಕರಣದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಅನೇಕ ರಾಜಕೀಯ ಪಕ್ಷಗಳು ಅಧಿಕಾರವನ್ನಷ್ಟೇ ಅನುಭವಿಸಿ ಹೋಗಿವೆ. ಸಾಮಾಜಿಕ-ಧಾರ್ಮಿಕ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಹಿತಾಸಕ್ತಿಗಳು ಮಹಿಳೆಯರಿಗೆ ಸಿಕ್ಕ ಅಲ್ಪಸ್ವಲ್ಪ ಅವಕಾಶಗಳನ್ನು ಮುಕ್ತವಾಗಿ ಚಲಾಯಿಸಲು ಬಿಡದೇ 'ಸಬಲೀಕರಣ'ದ ವ್ಯರ್ಥ ಪ್ರಯತ್ನಗಳನ್ನ ಅಣಕಿಸುತ್ತಾ ಬಂದಿವೆ. ಇದು ಎಷ್ಟರ ಮಟ್ಟಿಗೆ ಸರಿ? ಸರಿ-ತಪ್ಪುಗಳ ಹೊಯ್ದಾಟದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯದ್ದೇ ಮೇಲುಗೈ ಯಾಕಾಗುತ್ತೆ? ಮಹಿಳೆ ಸಬಲೆಯಾಗುವುದು ಎಂದರೆ ಅಂಕೆಯಿಲ್ಲದ ಬಿಡು ಬೀಸು ವರ್ತನೆಯೇ?  ರಾಜಕೀಯ ಮಹಿಳಾ ಮೀಸಲು ಎಂತಹವರಿಗೆ ಸಿಗುತ್ತಿದೆ? ಅಸಲಿಗೆ ಮಹಿಳಾ ಮೀಸಲು ಹೇಗಿರಬೇಕು? ಇತ್ಯಾದಿ ಪ್ರಶ್ನೆಗಳು ಕಾಡುತ್ತವೆ.

     ಭಾರತ ಸನಾತನ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದ  ದೇಶ, ವೇದಗಳ ಕಾಲದ ನಂತರವಷ್ಟೇ ಇಲ್ಲಿ ಮಹಿಳೆಯರಿಗೆ ಕಟ್ಟುಪಾಡುಗಳನ್ನ ವಿಧಿಸುವ ಹಾಗೂ ವ್ಯವಸ್ಥಿತವಾಗಿ ಶೋಷಿಸುವ ಪದ್ದತಿ ಬೆಳೆದು ಬಂದಿದೆ. 'ಸ್ತ್ರೀ' ಎಂದರೆ ದೇವತೆ, ಅದೊಂದು ಅತೀಂದ್ರಿಯ ಶಕ್ತಿಯ ಸ್ವರೂಪ ಎಂಬೆಲ್ಲ ಉಪಮೇಯಗಳ ಮೂಲಕ ಹೇಳಲಾಗುತ್ತದೆಯಾದರು ಭಾರತದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯದ್ದೆ ಮೇಲುಗೈ ಆಗಿರುವುದು ಎಲ್ಲರಿಗೂ ತಿಳಿದ ಸಂಗತಿ. ರಾಜಕೀಯ, ಉದ್ಯೋಗ, ಶಿಕ್ಷಣ, ಹಾಗೂ ಕೌಟುಂಬಿಕ ಪರಿಸರದಲ್ಲಿ ಮಹಿಳೆಯರಿಗೆ ಸಿಗಬೇಕಾದ ಆದ್ಯತೆಗಳು ಹಿಂದಿಗಿಂತ ಈಗ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿದೆ ಅನಿಸುತ್ತದೆಯಾದರೂ ಅಲ್ಲಿ ಗಂಡಸಿನ ಮರ್ಜಿ ಕಾಣಬರುತ್ತದೆ. ಒಂದು ಹೆಣ್ಣು ಎಷ್ಟೇ ವಿದ್ಯಾವಂತಳಾದರೂ, ತಿಳುವಳಿಕೆಯುಳ್ಳವಳಾದರೂ, ಪ್ರಬುದ್ದ ಮನಸ್ಥಿತಿಯವಳಾದರೂ ಸಾಂಸಾರಿಕ ವಿಚಾರಗಳಲ್ಲಿ ಪುರುಷನೇ ಮೇಲುಗೈ ಸಾಧಿಸುತ್ತಾನೆ. ವೇದಗಳ ಕಾಲಕ್ಕಿಂತ ಮೊದಲು ಮಹಿಳೆಯರಿಗೆ ಅತ್ಯಂತ ಹೆಚ್ಚಿನ ಗೌರವಾದರಗಳು ಮತ್ತು ಸಮಾನ ಅವಕಾಶಗಳು ಮುಕ್ತವಾಗಿರುತ್ತಿತ್ತು, ಈಗಲೂ ಅದು ಹೆಸರಿಗಷ್ಟೇ ಇದೆ ಮತ್ತು ಅನುಕಂಪದ ದಾಟಿಯಲ್ಲಿ ಅದನ್ನು ಕೊಡುತ್ತಿದ್ದೇವೆ ಅಂದುಕೊಳ್ಳಲಾಗುತ್ತಿದೆ. ಆದರೆ ಇದು ತಪ್ಪು ಸಮಾನ ಅವಕಾಶಗಳನ್ನ ಯಾರಿಗೂ ಯಾರೂ ಕೊಡಬೇಕಾದ ಅವಶ್ಯಕತೆ ಇಲ್ಲ, ಅದು ವ್ಯಕ್ತಿಗತವಾಗಿ ಅನುಭವಕ್ಕೆ ಬರುವಂತಹದ್ದು ಹಾಗೂ ಚೌಕಟ್ಟಿನ ಎಲ್ಲೆ ಮೀರದಂತೆ ನಡೆದುಕೊಳ್ಳುವಂತಹದ್ದು, ಹೀಗಿರುವಾಗ ಮಹಿಳಾ ಸಮಾನತೆ ಎನ್ನುವುದೇ ಹಾಸ್ಯಾಸ್ಪದವಲ್ಲವೇ? ಆದರೂ ಸಮಾನತೆಯ ಮತ್ತು ಸಬಲೀಕರಣದ ಅಂಶಗಳು ಚರ್ಚೆಗೆ ಬರಲು ಸಧ್ಯದ ಅನಿಷ್ಟ ವ್ಯವಸ್ತೆ ಕಾರಣ ಎಂಬುದು ಅತ್ಯಂತ ವಿಷಾಧನೀಯಕರ.
        ಚರ್ಚೆ ಗಂಭೀರ ದಾಟಿಯಿಂದ ಹೊರಳುವುದಾದರೆ ವಾಸ್ತವ ನೆಲೆಗಟ್ಟಿನಲ್ಲಿ ಮಹಿಳೆಯರ ಸ್ಥಿತಿಗತಿ ಹೇಗಿದೆಯೆಂದು ಅವಲೋಕಿಸಬಹುದು. ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬರಲು ಆಧುನಿಕತೆಯ ಸಂಸ್ಕೃತಿ ಮಹಿಳೆಯರಿಗೆ ಸಹಾಯ ಮಾಡಿರಬಹುದಾದರೂ ಅದು ನೈತಿಕತೆಯ ಎಲ್ಲೆಯನ್ನು ಮೀರಿ ನಿಂತಿದೆ ಎಂಬುದು ಅಷ್ಟೇ ಸತ್ಯ. ಮಹಿಳಾ ಸಂವೇದನೆಗಳು ಜಾಗತೀಕರಣದ ಭರಾಟೆಯಲ್ಲಿ  ಹಿಂದಕ್ಕೆ ಸರಿದಿವೆ, ಪ್ರಭಾವಶಾಲಿಯಾಗಿ ಅದನ್ನು ಅಭಿವ್ಯಕ್ತಿಸುವ ಸಾಮರ್ತ್ಯ ಮಾತ್ರವೇ ಮಹಿಳೆಯರ ಹಿತಕಾಪಾಡಬಲ್ಲವು. ಮಹಿಳೆಯರ ಜಾಗೃತಿಗೆ, ಹಕ್ಕಿನ ಹೋರಾಟಕ್ಕೆ ರಾಜಕೀಯ ಪ್ರಧಾನ ಅವಕಾಶ ಎಂದೇ ಭಾವಿಸಲಾಗಿದೆ, ಹಾಗಾಗಿ ಶೇ.33.3 ಮಹಿಳಾ ಮೀಸಲು ವಿಧೇಯಕವನ್ನು ಮೊದಲ ಭಾರಿಗೆ ಇತ್ತೀಚಿನ ದಿನಗಳಲ್ಲಿ ಅಂದರೆ 1996ರಲ್ಲಿ ಹೆಚ್ ಡಿ ದೇವೇಗೌಡ ಪ್ರಧಾನಿಯಾಗಿದ್ದ ಕಾಲದಲ್ಲಿ ಮಂಡಿಸಲಾಗಿತ್ತು. ಸದರಿ ವಿಧೇಯಕದ ಅನುಷ್ಠಾನ ಕೊಂಚ ಮಟ್ಟಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಾತ್ರ ಜಾರಿಗೆ ಬಂದಿದೆ. ಶಾಸಕರು ಮತ್ತು ಸಂಸದರಾಗುವ ಅವಕಾಶಗಳು ಮಹಿಳೆಯವರಿಗೆ ಇದೆಯಾದರೂ ದೇಶದಲ್ಲಿರುವ ಸುಮಾರು 750ಕ್ಕೂ ಮಿಕ್ಕಿದ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಪೂರ್ಣಪ್ರಮಾಣದ ಅವಕಾಶಗಳನ್ನು ನಿರಾಕರಿಸಿವೆ. ಇದ್ದುದರಲ್ಲಿ ರಾಜ್ಯ ಸಭಾ ಸ್ಥಾನಕ್ಕೆ ಆಯ್ಕೆಯಾಗುವ ಬಹುತೇಕ ಮೀಸಲು ಸ್ಥಾನಗಳಿಗೆ ರಾಜಕಾರಣಿಗಳ ಗೆಣೆಕಾರ್ತಿಯರು, ಬಹುಗಳು ಬರುತ್ತಿದ್ದಾರಾದರೂ ಅವರು ಕೇವಲ ಶೋಕೇಸ್ ಗೊಂಬೆಗಳಂತೆ ಇದ್ದು ಹೋಗುತ್ತಾರಷ್ಟೇ.  ಕೆಳ ಸ್ಥರದಿಂದ ಬಂದವರಿಗೆ, ಮದ್ಯಮವರ್ಗದವರಿಗೆ,ಸುಶಿಕ್ಷಿತ ಮಹಿಳೆಯರಿಗೆ ಅವಕಾಶ ದೊರೆತರೆ ನಿಜವಾದ ಮಹಿಳಾ ಪ್ರಾತಿನಿಧ್ಯ ಮತ್ತು ಹಕ್ಕುಗಳ ರಕ್ಷಣೆ ಸಾಧ್ಯವಾಗಬಹುದು. ಅದೇ ರೀತಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಇವತ್ತಿಗೂ ಮಹಿಳೆಯರ ಮೇಲೆ ಪುರುಷರ ಪ್ರಾತಿನಿಧ್ಯ ಇರುವುದರಿಂದ, ಸ್ತ್ರೀಯರು ಅವಕಾಶ ದೊರೆತರೂ ಕೂಡ ಗಂಡಸಿನ ಅಣತಿಯಂತೆ ಅಧಿಕಾರ ಚಲಾಯಿಸುತ್ತಿರುವುದು ದುರಂತದ ಸಂಗತಿಯಲ್ಲವೇ? ಇಷ್ಟೇ ಏಕೆ ಆಕೆ ಸದಸ್ಯಳಾಗುತ್ತಿದ್ದಂತೆಯೇ ತನ್ನ ಪುರುಷ ಪುಂಗವನ ಹೆಸರನ್ನು ತನ್ನ ಹೆಸರಿನ ಮುಂದೆ ಚಲಾವಣೆಗೆ ತರಬೇಕಾಗುತ್ತದೆ, ಆಕೆ ಅಧಿಕಾರಿಯಾದರೂ ಅಷ್ಟೆ ಹೆಸರಿನ ಮುಂದೆ ಅಥವಾ ಹಿಂದೆ ಗಂಡನ ಹೆಸರನ್ನು ತಗುಲಿಸಕೊಳ್ಳಬೇಕು ಇದು ಮಹಿಳೆಯರಿಗೆ ಅನಿವಾರ್ಯವೇ? 
       ಆದರೆ ಕೌಟುಂಬಿಕ ವ್ಯವಸ್ಥೆಯಲ್ಲಿ ಎಂತಹುದೇ ಹೀನ ನಿರ್ಬಂದಿಸುವ ಕ್ರಮಗಳು ಮಹಿಳೆಯರ ಪಾಲಿಗಿದ್ದರೂ ಕೆಲವು ಸಂಸಾರಗಳನ್ನು ಹೊರತು ಪಡಿಸಿದರೆ ಬಹುತೇಕ ಕುಟುಂಬಗಳಲ್ಲಿ ಮಹಿಳೆಯರ ಅಧಿಕಾರ ಚಲಾವಣೆ ಇರುವುದನ್ನು ಕಾಣಬಹುದು, ಘಟವಾಣಿಯರ ಕಾರುಬಾರು ಪುರುಷರನ್ನು ಕಟ್ಟಿಹಾಕಿದರು ಹೊರಗಿನ ಜಗತ್ತಿಗೆ ಬಂದಾಗ ಮಾತ್ರ ಅದೇ ಗಂಡಸಿನ ಅಂಕೆಗೆ ಅಂಟಿಕೊಳ್ಳುವುದು ಕಾಣುತ್ತದೆ. ಮಹಿಳೆಯರ ಸಬಲೀಕರಣಕ್ಕೆ ನೈಜವಾದ ಚಿಂತನೆಗಳು ಪ್ರಾಮಾಣಿಕವಾಗಿ ಆಗಬೇಕಿದೆ, ಮಹಿಳೆಯರ ಒಗ್ಗೂಡುವಿಕೆ, ಶಿಕ್ಷಣ ಮುಂತಾದ ಅಂಶಗಳು ಪರಿಣಾಮಕಾರಿಯಾಗಿ ಇದಕ್ಕೆ ಬೆನ್ನೆಲುಬಾಗುತ್ತವೆ ಆದರೆ ಪ್ರಯತ್ನ ಆಗಬೇಕಷ್ಟೆ.. ಅದು ಯಾವಾಗ ಅನ್ನೋದನ್ನ ಕಾದು ನೋಡಬೇಕು.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...