ಕರ್ನಾಟಕ ರಾಜ್ಯದ ಒಬ್ಬ ಪರಮ ಭ್ರಷ್ಟ ಮುಖ್ಯಮಂತ್ರಿಯ ನಿರ್ಗಮನದ ನಂತರ ಶ್ರಮಿಕ ವರ್ಗದ ನೇತಾರ, ವಿದ್ಯಾರ್ಥಿ ಪರಿಷತ್ ನ ಯೂತ್ ಐಕಾನ್ , ವಕೀಲ, ಸಂಸದ ಹಾಗೂ ಶುದ್ದ ಹಸ್ತರೆನಿಸಿದ ಡಿ ವಿ ಸದಾನಂದ ಗೌಡ ರಾಜ್ಯದ 26ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅಷ್ಟರ ಮಟ್ಟಿಗೆ ಭಾರತೀಯ ಜನತಾ ಪಕ್ಷ ದಕ್ಷಿಣ ಭಾರತದಲ್ಲಿ ತನ್ನ ವರ್ಚಸ್ಸಿಗೆ ಉಂಟಾಗಿದ್ದ ಹಾನಿಯನ್ನು ಸ್ವಲ್ಪಮಟ್ಟಿಗಾದರೂ ತೊಡೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂಬ ಆಶಾಭಾವನೆ ಮೂಡಿಸಿದೆಯಾದರೂ ಆತ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನ ಹಾಟ್ ಫೇವರಿಟ್ ಎಂಬುದು ಮಾತ್ರ ಬೇಸರ ಭಾವ ಮೂಡಿಸಿದೆ. ಶತಾಯ ಗತಾಯ ಪಕ್ಷದ ವರ್ಚಸ್ಸು ಕಾದುಕೊಳ್ಳುವ ನಿಟ್ಟಿನಲ್ಲಿ ಬಾಜಪ ತೆಗೆದುಕೊಂಡ ಕಠಿಣ ನಿಲುವು ನಾಯಕತ್ವ ಬದಲಾವಣೆಗೆ ನಾಂದಿ ಹಾಡಿದೆ. ಇಂತಹ ಸನ್ನಿವೇಶದಲ್ಲಿ ಮುಳ್ಳು ಹಾದಿಯನ್ನು ಕ್ರಮಿಸಬೇಕಿರುವ ಡಿ ವಿ ಸದಾನಂದಗೌಡ ಆದ್ಯತೆಗಳೇನು? ಅವರು ಸಾಗಿಬಂದ ಹಿನ್ನೆಲೆ ಏನು? ಮಾಜಿ ಮುಖ್ಯಮಂತ್ರಿಯ ಅಡಿಯಾಳಾಗುವ ಮೂಲಕ ರಾಜ್ಯದಲ್ಲಿ ತಮಿಳುನಾಡು ಮಾದರಿಯ ಮತ್ತೊಬ್ಬ ಸೆಲ್ವಂ ಆಗುವರೇ? ಗಣಿ ವರದಿ ಕುರಿತು ಎಂತಹ ನಿಲುವು ತಳೆಯಬಹುದು? ಪಕ್ಷದ ಭ್ರಷ್ಟರನ್ನು ಮಟ್ಟ ಹಾಕುವರೇ? ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಬಲ್ಲರೇ ಎಂಬುದು ಸಧ್ಯ ನಮ್ಮೆದುರಿಗಿರುವ ಪ್ರಶ್ನೆಗಳು.
ಡಿ ವಿ ಸದಾನಂದ ಗೌಡ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೇಕೋಲು ಗ್ರಾಮದ ದೇವರಗುಂಡ ಕುಟುಂಬದ ಸಾಮಾನ್ಯ ಕುಟುಂಬಕ್ಕೆ ಸೇರಿದವರು. ತಂದೆ ವೆಂಕಪ್ಪಗೌಡ, ತಾಯಿ ಕಮಲ, ಜನನ 1953ರಲ್ಲಿ.ಪುತ್ತೂರು ತಾಲೂಕಿನ ಕೆಯ್ಯೂರು ಮತ್ತು ಸುಳ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣವನ್ನು ಮುಗಿಸಿದ ಗೌಡರು ಕಾಲೇಜು ವಿದ್ಯಾಭ್ಯಾಸ ಮುಂದುವರೆಸಿದ್ದು ಪುತ್ತೂರಿನ ಸಂತಫಿಲೋಮಿನಾ ಕಾಲೇಜಿನಲ್ಲಿ. ಅದೇ ಕಾಲೇಜಿನಿಂದ ಬಿಎಸ್ಸಿ ಪಧವೀಧರರಾದ ಗೌಡರು ಮುಂದೆ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಿಂದ ಕಾನೂನು ಶಿಕ್ಷಣ ಪೂರೈಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ವಿಧ್ಯಾರ್ಥಿ ಚಳುವಳಿಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳಲಾರಂಭಿಸಿದ ಗೌಡರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಾಯಕನಾಗಿ ರೂಪುಗೊಳ್ಳಲು ಅತ್ಯತ್ತಮ ವೇದಿಕೆಯನ್ನು ಒದಗಿಸಿತು. ನಂತರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತನಾಗಿ ರೂಪುಗೊಂಡ ಗೌಡರು 1976ರಲ್ಲಿ ಸುಳ್ಯ ಮತ್ತು ಪುತ್ತೂರಿನಲ್ಲಿ ವಕೀಲಿಕೆ ವೃತ್ತಿಯನ್ನು ಆರಂಭಿಸಿದರು. ಕೆಲವೇ ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾಗಿಯೂ ಕಾರ್ಯ ನಿರ್ವಹಿಸಿದ ಗೌಡರಿಗೆ ರಾಜಕೀಯ ಸೆಳೆತವೂ ಆಗಾಗ್ಯೆ ಕಾಡುತ್ತಲೇ ಇತ್ತು. ವಕೀಲಿಕೆಯ ದಿನಗಳಲ್ಲೇ ಸಾರ್ವಜನಿಕ ಮತ್ತು ಸಾಮಾಜಿಕ ಕಳಕಳಿಯ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದ ಡಿವಿಎಸ್ ಸರ್ಕಾರಿ ಅಭಿಯೋಜಕರಾಗಿ ನಿಯುಕ್ತಿಗೊಂಡ ಅಲ್ಫಾವಧಿಯಲ್ಲೇ ತಮ್ಮ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿಬಿಟ್ಟರು. ಅಷ್ಟರಮಟ್ಟಿಗೆ ಅವರ ರಾಜಕೀಯ ಸೆಳೆತ ಅವರನ್ನು ಆಕರ್ಷಿಸಿತ್ತು. 1981ರಲ್ಲಿ ಡಾಟಿ ಎಂಬುವವರನ್ನು ವರಿಸಿದ ಗೌಡರಿಗೆ ತಾಂತ್ರಿಕ ಶಿಕ್ಷಣ ಪೂರೈಸಿರುವ ಕಾರ್ತಿಕ್ ಎಂಬ ಪುತ್ರನೂ ಇದ್ದಾನೆ.
ಸಹಕಾರಿ ಚಳುವಳಿಗಳಲ್ಲಿ ತೊಡಗಿಕೊಂಡ ಗೌಡರು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರೂ ಕೂಡ ಆಗಿದ್ದರು ಎಂಬುದು ಗಮನಾರ್ಹ. ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್, ಕ್ಯಾಂಪ್ಕೋ ಮತ್ತಿತರ ಸಹಕಾರಿ ವಲಯಗಳಲ್ಲಿ ಸಾರ್ವಜನಿಕ ಪ್ರತಿನಿಧಿಯಾಗಿ ಸೇವೆಗೈದ ಗೌಡರು ಶ್ರಮಿಕ ವರ್ಗದ ನ್ಯಾಯೋಚಿತ ಹೋರಾಟಗಳಿಗೆ ಧ್ವನಿಯಾಗುವ ಮೂಲಕ ಕಾರ್ಮಿಕ ವರ್ಗದ ನೇತಾರರಾಗಿಯೂ ರೂಪುಗೊಂಡರು. ಭಾರತೀಯ ಮಜ್ದೂರ್ ಸಂಘ, ಆಟೋ ರಿಕ್ಷಾ ಮತ್ತು ಮಾಲೀಕರ ಸಂಘದ ಅಧ್ಯಕ್ಷ , ಬೀಡಿ ಮಜ್ದೂರ್ ಸಂಘದ ಅಧ್ಯಕ್ಷ, ಕರ್ನಾಟಕ ಕೈಗಾರಿಕೆಗಳ ಸಿಬ್ಬಂದಿ ಯೂನಿಯನ್ ಅಧ್ಯಕ್ಷ ರಾಗಿದ್ದುದನ್ನು ಗಣನೆಗೆ ತೆಗೆದುಕೊಳ್ಳುವುದಾದರೆ ಗೌಡರು ಸುಖಾ ಸುಮ್ಮನೆ ಪ್ರವರ್ಧಮಾನಕ್ಕೆ ಬಂದವರಲ್ಲವೆಂಬುದನ್ನು ಸಾಕ್ಷೀಕರಿಸುತ್ತವೆ. ರಾಜಕೀಯದ ಒಳ ಹೊರಗುಗಳನ್ನು ಅರಿಯುವ ಸಲುವಾಗಿ ಜನಸಂಘದ ಪ್ರಾಥಮಿಕ ಸದಸ್ಯತ್ವ ಪಡೆದ ಗೌಡರು ಮುಂದೆ ಸುಳ್ಯದ ಭಾಜಪ ಕ್ಷೇತ್ರ ಅಧ್ಯಕ್ಷರಾಗಿ ಆಯ್ಕೆಯಾದರು. ಹಾಗೆಯೇ ಯುವಮೋರ್ಚಾದ ನಾಯಕರಾಗಿ ರಾಜ್ಯದ ಮಟ್ಟದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿಯೂ ವಿವಿಧ ಸ್ಥಾನಗಳನ್ನು ಪಕ್ಷದಲ್ಲಿ ಅಲಂಕರಿಸಿ 2006ರಲ್ಲಿ ಮೊದಲ ಭಾರಿಗೆ ರಾಜ್ಯ ಭಾಜಪ ಅಧ್ಯಕ್ಷರಾಗುವ ಮೂಲಕ ಭಾಜಪದ ಮಂಚೂಣಿ ನಾಯಕರೆನಿಸಿದರು. 1989ರಲ್ಲಿ ಮೊದಲ ಬಾರಿಗೆ ಪುತ್ತೂರಿನಿಂದ ವಿಧಾನ ಸಭಾ ಸದಸ್ಯ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗಳಿಗೆ ಕಾಲಿರಿಸಿದ ಗೌಡರು 1994ರಲ್ಲಿ ಮೊದಲ ಭಾರಿಗೆ ವಿಧಾನ ಸಭಾ ಸದಸ್ಯರಾಗಿ ಚುನಾಯಿತರಾದರು ಗೆಲುವಿನ ನಗೆ ಬೀರಿದರು. ಎರಡನೇ ಭಾರಿಗೆ ಎಂಎಲ್ ಎ ಆಗಿ ಆಯ್ಕೆಯಾಗುತ್ತಿದ್ದಂತೆ ವಿಧಾನ ಸಭೆಯಲ್ಲಿ ಶಾಸಕಾಂಗ ಪಕ್ಷದ ಉಪನಾಯಕನಾಗುವ ಮೂಲಕ ತಾನೊಬ್ಬ ಸಮರ್ಥ ನಾಯಕ ಎಂಬುದನ್ನು ಸಾಬೀತುಪಡಿಸಿದರು.ಸುಧೀರ್ಘ 10ವರ್ಷಗಳ ಶಾಸಕತ್ವದ ಸೇವೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ನ್ಯಾಯ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರಲ್ಲದೇ ಅಡಿಕೆ ಬೆಳೆಗಾರರಿಗೆ ನಾಯಕತ್ವ ಒದಗಿಸಿದರು. ಸಂಸದರಾಗಿ ಆಯ್ಕೆಯಾದಾಗ ಕಾಫಿ ಬೆಳೆಗಾರಿರಿಗೆ ವಿಶೇಷ ಪ್ಯಾಕೇಜ್ ಒದಗಿಸುವ ಜೊತೆಗೆ ಕಡೂರು-ಚಿಕ್ಕಮಗಳೂರು ಮತ್ತು ಮಂಗಳೂರು ನಡುವಣ ರೈಲ್ವೇ ಮಾರ್ಗದ ಕೆಲಸ ಪೂರ್ಣಗೊಳಿಸಲು ಪ್ರಮುಖ ಕಾರಣಕರ್ತರೆನಿಸಿದ್ದಾರೆ. ಅತ್ಯುತ್ತಮ ಜನಾನುರಾಗಿ, ಪ್ರಾಮಾಣಿಕ ಹೋರಾಟಗಾರ,ನಿಷ್ಪೃಹ ಸಮಾಜ ಸೇವಕ, ಅಧ್ಯಯನ ಶೀಲ ಹಾಗೂ ರಾಷ್ಟ್ರೀಯವಾದಿಯೂ ಆಗಿರುವ ಸದಾನಂದಗೌಡ ನಿಜಕ್ಕೂ ಭಾಜಪದ ಅತ್ಯುತ್ತಮ ನಾಯಕ ಎನ್ನುವುದರಲ್ಲಿ ಸಂದೇಹವಿಲ್ಲ.
ಸಂಸತ್ ನ ಮುಂಗಾರು ಅಧಿವೇಶನದಲ್ಲಿ ಆಗಬಹುದಾದ ಮುಖಭಂಗ ತಪ್ಪಿಸಿಕೊಳ್ಳುವ ಉದ್ದೇಶದಿಂದ ಪಕ್ಷದ ಮಂಚೂಣಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ತೆಗೆದುಕೊಂಡ ಕಠಿಣ ಹಾಗೂ ಸೂಕ್ತ ನಿಲುವಿನಿಂದ ಯಡಿಯೂರಪ್ಪ ರಾಜೀನಾಮೆ ನೀಡುವಂತಾಗಿದೆ. ಇಂತಹ ಸಂಧರ್ಭದಲ್ಲಿ ಪಕ್ಷದ ನಾಯಕನ ಆಯ್ಕೆ ಯಡಿಯೂರಪ್ಪನ ಬಿಗಿಪಟ್ಟಿನಿಂದಾಗಿ ಕಷ್ಟ ಎನಿಸಿದಾಗ ಮುಖ್ಯ ಮಂತ್ರಿ ಅಭ್ಯರ್ಥಿಯ ಆಯ್ಕೆಗೆ ಮತದಾನ ನಡೆದಿದೆ. ಈ ಸಂಧರ್ಭದಲ್ಲಿ ಎರಡು ಬಣಗಳಾಗಿ ಒಡೆದು ಹೋದ ಬಿಜೆಪಿಗೆ ಜಗದೀಶ್ ಶೆಟ್ಟರ್ ಮತ್ತು ಸದಾನಂದ ಗೌಡ ಇಬ್ಬರು ಸಮರ್ಥ ನಾಯಕರೆನಿಸಿದರೂ ಸಹಾ ಅವರಿಬ್ಬರ ಬೆಂಬಲಕ್ಕೆ ನಿಂತವರ ಹುನ್ನಾರಗಳು ಮಾತ್ರ ಅಸಹ್ಯ ಹುಟ್ಟಿಸುವಂತಿವೆ. ಇದ್ದುದರಲ್ಲಿ ಜಗದೀಶ್ ಶೆಟ್ಟರ್ ಪರವಾಗಿ ಇದ್ದವರು ಪರವಾಗಿಲ್ಲ ಎನಿಸಿದರೂ ಸಹಾ ಜಾತಿ ರಾಜಕಾರಣ ಅಲ್ಲಿ ನೆಲೆ ನಿಂತದ್ದು ಮಾತ್ರ ಒಪ್ಪಿಕೊಳ್ಳುವಂತಿರಲಿಲ್ಲ.ಇನ್ನು ಸಂಘದ ಹುರಿಯಾಳು ಸದಾನಂದಗೌಡ ರ ಬೆನ್ನ ಹಿಂದೆ ನಿಂತದ್ದು ಖುದ್ದು ಯಡಿಯೂರಪ್ಪ ಮತ್ತು ಗಣಿ ಹಗರಣದಲ್ಲಿ ಕೊಚ್ಚಿ ಹೋಗುತ್ತಿರುವ ರೆಡ್ಡಿ ಬ್ರದರ್ಸ್. ತಮ್ಮ ಬೆಂಬಲದ ಅಭ್ಯರ್ಥಿ ಗೆಲುವಿಗೆ ಅನಾಮತ್ತು 500ಕೋಟಿ ಹೂಡಿಕೆ ಮಾಡಲು ಸಜ್ಜಾಗಿದ್ದ ರೆಡ್ಡಿಗಳ ಹುನ್ನಾರ ಯಾರಿಗೂ ತಿಳಿಯದ್ದೇನಲ್ಲ, ಅದೇ ರೀತಿ ಇನ್ನಾರು ತಿಂಗಳಲ್ಲಿ ತಾವೇ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರುವುದಾಗಿ ಹೇಳಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸದಾನಂದ ಗೌಡರನ್ನು ಆಟಿಕೆ ಬೊಂಬೆಯಂತೆ ಆಡಿಸುವರೆ ? ತಮಿಳುನಾಡಿನಲ್ಲಿ ಮುಖ್ಯ ಮಂತ್ರಿಯಾಗಿದ್ದ ಜಯಲಲಿತ ಹಿಂದೊಮ್ಮೆ ತಮ್ಮ ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿಯನ್ನಾಗಿ ಸೆಲ್ವಂ ನನ್ನು ಆಯ್ಕೆ ಮಾಡಿಕೊಂಡಂತೆ ರಾಜ್ಯದಲ್ಲೂ ಡಿವಿಎಸ್ ಆಯ್ಕೆಯಾಗಿದ್ದರೆ ಅದಕ್ಕಿಂತ ದುರಂತ ಮತ್ತೊಂದಿರಲಾರದು.ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಬುದ್ದಿವಂತರು ಹಾಗೂ ಪ್ರಾಮಾಣಿಕರು ಎಂಬ ಭಾವನೆಯಿದೆ, ದಕ್ಷಿಣ ಕನ್ನಡ ಜಿಲ್ಲೆಯಿಂದ ಎರಡನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿವಿಎಸ್ ತಮ್ಮ ಮುಂದಿರುವ ಅಡ್ಡಿ ಆತಂಕಗಳನ್ನು ಮೀರುವರೆಂಬ ನಿರೀಕ್ಷೆಯಿದೆ. ಆದಾಗ್ಯೂ ಒಬ್ಬ ಪರಿಪೂರ್ಣ ನಾಯಕನಾಗಿ ರೂಪುಗೊಂಡಿರುವ ಡಿವಿಎಸ್ ಅಧಿಕಾರ ಸ್ಥಾನದಲ್ಲಿ ಕುಳಿತುಕೊಂಡಾಗ ಆದರ್ಶವನ್ನೇ ಹೊದ್ದುಕೊಂಡು ಪ್ರಾಮಾಣಿಕವಾಗಿ ಕೆಲಸಮಾಡಲು ಸಧ್ಯದ ಪರಿಸ್ಥಿತಿ ಪೂರಕವಾಗಿಲ್ಲ ಆದಾಗ್ಯೂ ಇವೆಲ್ಲವನ್ನು ಮೆಟ್ಟಿ ನಿಂತು ಸದಾನಂದಗೌಡ ರಾಜ್ಯಕ್ಕೆ ಉತ್ತಮ ಆಡಳಿತ ನೀಡುವರೇ ಕಾದು ನೋಡಬೇಕು.