Sunday, June 6, 2010

ಜಾಗತಿಕ ಬಂಡವಾಳ; ಮುಂದೇನು ಕಾದಿದೆ ಗೊತ್ತಾ?



ಕಳೆದ ವಾರ ಹಾಸನದ ಬಳಿಯಿರುವ ಕಾರ್ಖಾನೆಯೊಂದರಿಂದ ತ್ಯಾಜ್ಯ ವಸ್ತು ಮತ್ತು ರಾಸಾಯನಿಕ, ಕೆರೆ ಹಾಗೂ ಜಮೀನಿಗೆ ಸೇರಿದ ಪರಿಣಾಮ ಬೆಳೆ ಸಂಪೂರ್ಣ ಹಾಳಾಗಿತ್ತು. ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಬೆಳೆ ನಷ್ಟವಾಗಿದ್ದಕ್ಕೆ ನಷ್ಟ ಹೊಂದಿದ ರೈತರಿಗೆ ತಲಾ 20ಸಾವಿರ ರೂಪಾಯಿಗಳ ಪರಿಹಾರ ವಿತರಣೆಗೆ ತೀರ್ಮಾನಕ್ಕೆ ಬರಲಾಯಿತು! ಮತ್ತೆ ಮುಂದಿನ ಸಾರಿಯೂ ಹೀಗೆ ಆದರೆ ಮತ್ತೆ ಪರಿಹಾರ ಕೊಡಬೇಕೆನ್ನುವ ಕರಾರಿಗೂ ಬರಲಾಯಿತು. ಇಂತಹದ್ದೊಂದು ಅವಿವೇಕದ ವಿಚಾರ ಕೇಳಿ ಬೇಸರವಾಯ್ತು. ಅಲ್ಲ ಸ್ವಾಮಿ ಕೈಗಾರಿಕೆಗಳ ತ್ಯಾಜ್ಯ ರಾಸಾಯನಿಕಗಳು ಭೂಮಿಯಲ್ಲಿ ನೀರಿನಲ್ಲಿ ಬೆರೆತರೆ ಶಾಶ್ವತವಾಗಿ ಮಣ್ಣಿನ ಫಲವತ್ತತೆಯನ್ನೇ ಹಾಳು ಮಾಡಿಬಿಡುತ್ತದೆ, ಇದು ಪರಿಹಾರದಿಂದ ಬಗೆ ಹರಿಯುವ ಸಮಸ್ಯೆಯೇ? ಅಂತರ್ಜಲವನ್ನು ಹಾಳುಗೆಡವುವ ತ್ಯಾಜ್ಯ ಜನ-ಜಾನುವಾರುಗಳ ಮೇಲೆ ಎಂತಹ ಪರಿಣಾಮ ಬೀರಿತು?ಮುಂದಿನ ತಲೆಮಾರಿನ ಮೇಲೆ ಇಂತಹವುಗಳಿಂದ ಆಗುವ ಪರಿಣಾಮಗಳೇನು? ಇದನ್ನು ಪ್ರಶ್ನಿಸುವವರ ಮೇಲೆ ಆಗುತ್ತಿರುವ ದೌರ್ಜನ್ಯಗಳೇನು? ಪ್ರಜ್ಞಾವಂತರನ್ನ ಹತ್ತಿಕ್ಕಿದರೆ ಮುಂದಿನ ದಿನಗಳಲ್ಲಿ ಎದುರಾಗುವ ಭೀಕರೆತೆಯನ್ನು ತೊಡೆಯುವುದಾದರೂ ಹೇಗೆ? ಎಂಬ ಪ್ರಶ್ನೆಗಳು ಧುತ್ತನೆ ಎದುರಾಗುತ್ತವೆ.ಇವು ನಾಲ್ಕು ಕಾಸಿನ ಪರಿಹಾರದಿಂದ ಬಗೆಹರಿಯುವಂತಹುದ್ದೆ? ಸರ್ಕಾರಕ್ಕೆ ರೈತರ ಹಿತಾಸಕ್ತಿ ಕುರಿತು ಯಾವ ಕಾಳಜಿ ಪ್ರದರ್ಶಿಸುತ್ತಿದೆ? ಅಷ್ಟಕ್ಕೂ ಇಂತಹ ಸಮಸ್ಯೆಗಳು ಎದುರಾದಾಗ ಪರಿಸರ ಇಲಾಖೆ-ಭೂವಿಜ್ಞಾನ-ಪೋಲೀಸ್-ಕಂದಾಯ ಇಲಾಖೆ ಅಧಿಕಾರಿಗಳು ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ? ಯಾರ ಹೇಸಿಗೆಯನ್ನು ತಿಂದು ಬದುಕುತ್ತಿದ್ದಾರೆ ಎಂದು ಪ್ರಶ್ನೆ ಮಾಡುವುದು ಅನಿವಾರ್ಯವಾಗುತ್ತದೆ. ಇದು ಹಾಸನದ ಕಥೆ ಮಾತ್ರವಲ್ಲ ಆರ್ಥಿಕ ವಲಯಗಳನ್ನು ಹೊಂದಿದ ರಾಜ್ಯದ ಎಲ್ಲಾ ಜಿಲ್ಲೆಗಳ ಕಥೆಯೂ ಆಗಿರುವುದು ದುರಂತದ ಸಂಗತಿ.
ಕೈಗಾರಿಕೆಗಳು ಬೆಳೆದಂತೆಲ್ಲಾ ರಾಜ್ಯದ ಮೂಲೆ ಮೂಲೆಗಳಲ್ಲೂ ಆರ್ಥಿಕ ವಲಯಗಳು ಸ್ಥಾಪನೆಯಾಗುತ್ತಿವೆ. ಸದರಿ ವಲಯದ ಆಸುಪಾಸಿನಲ್ಲಿ ಬರುವ ಪರಿಸರದ ಮೇಲೆ ಪ್ರತಿ ನಿತ್ಯ ಅತ್ಯಾಚಾರ ನಡೆಯುತ್ತಲೆ ಇದೆ. ಬಂಡವಾಳಶಾಹಿಗಳು ರೈತರನ್ನು, ಹೋರಾಟದ ಧ್ವನಿಗಳನ್ನು ರಾಜಕಾರಣಿಗಳು ಮತ್ತು ಆದಿಕಾರಸ್ಥರ ಮೂಲಕ ವ್ಯವಸ್ಥಿತವಾಗಿ ಮಟ್ಟಹಾಕಲಾರಂಬಿಸಿದ್ದಾರೆ ಪರಿಣಾಮ ಪ್ರಾಕೃತಿಕ ಅತ್ಯಾಚಾರವನ್ನು ಸಹಿಸಿಕೊಂಡು ಸಿಕ್ಕಷ್ಟು ಹಣದಲ್ಲಿ ತೃಪ್ತಿ ಪಡಬೇಕಾದ ಅನಿವಾರ್ಯತೆ ರೈತನಿಗೆ ಎದುರಾಗಿದೆ. ಈಗ ಯೋಚಿಸಬೇಕಾದ ಸಂಧರ್ಭ ಬಂದಿದೆ, ಮೊನ್ನೆ ಯಷ್ಟೇ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿದೆ. ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಬಂಡವಾಳ ಈ ಭಾರಿ ರಾಜ್ಯಕ್ಕೆ ಹರಿದು ಬಂದಿದೆ. ಒಂದು ರೀತಿಯಲ್ಲಿ ಉದ್ಯಮಗಳು ಬಂದಿರುವುದರಿಂದ ಉದ್ಯೋಗದ ಪ್ರಮಾಣ ಹೆಚ್ಚುತ್ತದೆ, ಊರುಗಳು ಅಭಿವೃದ್ದಿಯಾಗುತ್ತವೆ, ಮೂಲ ಭೂತ ಸೌಕರ್ಯ ಅಭಿವೃದ್ದಿಯಾಗುತ್ತೆ , ಆರ್ಥಿಕ ಸ್ಥಿತಿಗತಿ ಉತ್ತಮ ಗೊಳ್ಳುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ನಿಜಕ್ಕೂ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆಯಿಂದ ರೈತರಿಗೆ, ಜನಸಾಮಾನ್ಯರಿಗೆ ಎದುರಾಗುವ ಸಮಸ್ಯೆಗಳು ಒಂದೇ ಎರಡೆ?
ಇರಲಿ ಅದಕ್ಕೂ ಮುನ್ನ ಮೊನ್ನೆ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದ ಮುಖ್ಯಾಂಶಗಳನ್ನು ನೋಡೋಣ.ಸಮಾವೇಶದ 2ದಿನಗಳಲ್ಲಿ ಹರಿದು ಬಂದ ಬಂಡವಾಳದ ಒಟ್ಟು ಪ್ರಮಾಣ 4ಲಕ್ಷ ಕೋಟಿ, ಉದ್ಯಮ ಸ್ಥಾಪನೆಗೆ ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡ ಕಂಪನಿಗಳ ಸಂಖ್ಯೆ 360, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಕಂಡ ಒಟ್ಟು ವಲಯಗಳು 12, ಈ ಎಲ್ಲ ಯೋಜನೆಗಳು ಜಾರಿಗೆ ಬಂದರೆ ರಾಜ್ಯದಲ್ಲಿ ಸೃಷ್ಟಿಯಾಗುವ ೊಟ್ಟು ಉದ್ಯೋಗಾವಕಾಶ 8.50ಲಕ್ಷ,ಒಪ್ಪಂದ ಆಗಿರುವ ಉದ್ಯಮಗಳು ಅಸ್ತಿತ್ವಕ್ಕೆ ಬೇಕಾದ ಅವಧಿ 3-5ವರ್ಷ, ಒಂದೇ ಕಂಪನಿ ಹೂಡಿದ ಅತೀ ಹೆಚ್ಚು ಬಂಡವಾಳದ ಮೊತ್ತ 36ಸಾವಿರ ಕೋಟಿ.ವಿವಿಧ ಕ್ಷೇತ್ರಗಳಲ್ಲಿ ಆಗಲಿರುವ ಹೂಡಿಕೆ ಹೀಗಿದೆ. ಆಟೋಮೊಬೈಲ್-113ಕೋಟಿ, ಸಿಮೆಂಟ್-36991ಕೋಟಿ, ಇಂಜಿನಿಯರಿಂಗ್-320ಕೋಟಿ, ಆಹಾರ ಸಂಸ್ಕರಣೆ-1121ಕೋಟಿ,ಆಸ್ಪತ್ರೆ-1249ಕೋಟಿ, ಹೋಟೆಲ್ ಉದ್ಯಮ-1441ಕೋಟಿ, ಮೂಲ ಸೌಕರ್ಯ-1282ಕೋಟಿ, ಉಕ್ಕು-2,21,344ಕೋಟಿ. ಈ ಪೈಕಿ ಉಕ್ಕು ಉದ್ಯಮಕ್ಕೆ ಮೊದಲ ಪ್ರಾಶಸ್ತ್ಯ! ಅಲ್ಲಿಗೆ ಬಳ್ಳಾರಿ ಜನರ ಬದುಕು ಮುಗಿದಂತೆ!ಇವತ್ತು ಏನು 12ವಲಯಗಳ ಜತೆ ಒಪ್ಪಂದವಾಗಿದೆ, ಇವುಗಳಿಗೆ ಜಮೀನು ಕೊಡುವಾಗ ಸರ್ಕಾರ ಕೃಷಿ ಭೂಮಿ ಹೊರತು ಪಡಿಸಿ ಜಾಗ ನೀಡುವ ಮಾತಾಡಿದೆ ಇದು ನಿಜಕ್ಕೂ ನಂಬುವ ಮಾತಾ? ಉದ್ಯೋಗ ಸೃಷ್ಟಿ ಎನ್ನುತ್ತಾರೆ ಯಾರಿಗೆ ಸ್ವಾಮಿ ಸ್ಥಳೀಯರಿಗೆ ಉದ್ಯೋಗ ಸಿಕ್ಕುತ್ತೆ, ಇವತ್ತು ರಾಜ್ಯದಾಧ್ಯಂತ ಸ್ಥಾಪಿತವಾಗಿರುವ ುದ್ಯಮಗಳಲ್ಲಿ ಬಹುಪಾಲು ಮುಖ್ಯ ಸ್ಥಾನಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು ಉತ್ತರ ಭಾರತೀಯರು ಮತ್ತು ಆಸುಪಾಸಿನ ರಾಜ್ಯಗಳವರು, ಖಾಸಗಿ ವಲಯಗಳಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದಾರೆ. ಕಾರ್ಮಿಕ ವೃತ್ತಿಗೂ ಬಿಹಾರಿಗಳು, ಒರಿಸ್ಸಾದವರು,ಬಂಗಾಳಿಗಳನ್ನು ಕರೆತರಲಾಗುತ್ತಿದೆ. ಒಂದು ಕಡೆ ರೈತರ ಪರ ಮಾತಾನಾಡುವ ಸರ್ಕಾರ ಬಿಟಿ ತಳಿಗೆ ಅವಕಾಶ ನೀಡುವ ಹಲವು ಒಡಂಬಡಿಕೆಗಳಿಗೆ ಸಹಿಹಾಕಿದೆ. ಇತ್ತು ಉದ್ಯಮಗಳಿಗೆ ಒತ್ತು ನೀಡಿದ ಪರಿಣಾಮ ಮುಂದಿನ ದಿನಗಳಲ್ಲಿ ಆಹಾರದ ಸಮಸ್ಯೆ ಎದುರಾಗುವುದು ಖಚಿತ,ಅತ್ತ ಕೃಷಿ ಜಮೀನೆ ಇಲ್ಲ, ಇತ್ತ ಕೂಲಿ ಕೆಲಸವೂ ಇಲ್ಲ ಎಂದರೆ ರೈತ ಬದುಕುವುದು ಹೇಗೆ?
1994ರಲ್ಲಿ ಆರ್ಥಿಕ ಉದಾರೀಕರಣ ನೀತಿ ಜಾರಿಗೆ ಬಂದಾಗಿನಿಂದ ಮೊದಲ ಮತ್ತು ಎರಡನೇ ಹಂತದಲ್ಲಿ ಬಂಡವಾಳ ಶಾಹಿಗಳಿಗಾಗಿ ರೈತರು ಕೃಷಿ ಜಮೀನುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಇಂತಹ ಜಮೀನುಗಳನ್ನು ಕಂಪನಿಗಳ ಹೆಸರಿನಲ್ಲಿ ಪಡೆಯುವ ಮದ್ಯವರ್ತಿಗಳು 1ಕ್ಕೆ 10ಪಟ್ಟು ಬೆಲೆಗೆ ಅಕ್ರಮವಾಗಿ ಮಾರಿ ಕೊಳ್ಳುತ್ತಿವೆ. ಮೈಸೂರು-ಬೆಂಗಳೂರು ಕಾರಿಡಾರ್ ರಸ್ತೆಯಲ್ಲಿ ಅಶೋಕ್ ಖೇಣಿ ಇಂತಹದ್ದೊಂದು ಕೇಡಿತನ ಮಾಡಿದ್ದಾನೆಂಬ ಆರೋಪ ಜಗಜ್ಜಾಹೀರಾಗಿದೆ. ಇವರ ಜೊತೆಗೆ ರಾಜ್ಯ ಸಂಪುಟದಲ್ಲಿ ಮಂತ್ರಿಯಾಗಿದ್ದ ಕೃಷ್ಣಯ್ಯ ಶೆಟ್ಟಿಯ ಮೇಲೂ ಇಂತಹುದೇ ಗುರುತರವಾದ ಆಪಾದನೆಯಿದೆ. ಹಲವೆಡೆ ಭೂಸ್ವಾಧೀನ ವಿರೋಧಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ, ಭೂಮಿ ನೀಡಿದವರಿಗೆ ಸರಿಯಾಗಿ ದುಡ್ಡು ಸಿಗುತ್ತಿಲ್ಲ, ರೈತ ಹೊಲ ಮನೆ ಮಾರಿಕೊಂಡು ಗುಳೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ನಗರ ಪ್ರದೇಶದ ಬದುಕು ತುಟ್ಟಿಯಾಗಿದೆ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ದುಸ್ತರವಾಗಿದೆ. ಈ ನಡುವೆ ಕೂಲಿ ಕಾರ್ಮಿಕರು ಕೂಡ ರಾಜ್ಯಕ್ಕೆ ಹೊರ ರಾಜ್ಯಗಳಿಂದ ಆಮದಾಗುತ್ತಿದ್ದಾರೆ, ನಮ್ಮವರಿಗೆ ಕೂಲಿ ಕೆಲಸವು ಗತಿ ಇಲ್ಲದಂತಾಗಿದೆ. ಕೈಗಾರಿಕೆಗಳು ಬೆಳೆದಂತೆ ನಗರೀಕರಣವೂ ಬೆಳೆಯುತ್ತಿದೆ, ಮೂಲ ಸೌಕರ್ಯಗಳ ಅವಶ್ಯಕತೆ ಹೆಚ್ಚಿದ್ದು ಅವುಗಳ ಸಮರ್ಪಕ ಪೂರೈಕೆ ಸಾಧ್ಯವಾಗುತ್ತಿಲ್ಲ, ಅರಣ್ಯದೊಳಗಣ ರಸ್ತೆಯ ಪರಿಣಾಮ ಪ್ರಾಣಿ ಸಂಕುಲಕ್ಕೆ ಅಪಾಯ ಎದುರಾಗಿದೆ ಜನ-ಜಾನುವಾರು ಕುಡಿಯುವ ನೀರು ಕಲುಷಿತವಾಗಿದೆ ಇಲ್ಲವೆ ಲಭ್ಯತೆ ಕಡಿಮೆಯಾಗುತ್ತಿದೆ. ಬದುಕಿನ ಮಟ್ಟ ಏರುತ್ತಿದೆ,ಕೊಳ್ಳುಬಾಕ ಸಂಸ್ಕೃತಿ ಜನಸಾಮಾನ್ಯರ ಬದುಕನ್ನು ಹದಗೆಡಿಸಿದೆ. ದೇಶೀಯ ತಂತ್ರಜ್ಞಾನ, ಸಾಂಪ್ರದಾಯಿಕ ಕೃಷಿ, ಸಾಮಾಜಿಕ ಸಂಬಂಧಗಳು ನೆಲೆ ಕಳೆದುಕೊಳ್ಳುತ್ತಿವೆ.ಈಗ ಇರುವ ಉದ್ಯಮಗಳಿಗೆ ಜಮೀನು ನೀಡುವುದು ದುಸ್ತರವಾಗಿದೆ, ವಿದ್ಯುತ್-ರಸ್ತೆ-ನೀರುಗಳಂತಹ ವ್ಯವಸ್ತೆಯನ್ನೆ ಸುಧಾರಿಸಲು ಸಾಧ್ಯವಾಗಿಲ್ಲ, ಮುಂದಿನ ದಿನಗಳಲ್ಲಿ ಸೌಕರ್ಯದ ಹೆಸರಿನಲ್ಲಿ ಪ್ರತಿಯೊಂದು ಸಾರ್ವಜನಿಕ ವ್ಯವಸ್ಥೆಯೂ ಖಾಸಗೀರಕರಣ ಗೊಳ್ಳಲಿದೆ, ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ಅಧಿಕವಾಗಲಿದೆ, ಅನ್ಯ ಭಾಷಿಕರ ಹಾವಲಿ ಜಾಸ್ತಿಯಾಗಲಿದೆ, ನಮ್ಮ ಸಂಸ್ಕೃತಿಗೆ, ಭಾಷೆಗೆ, ನಮ್ಮ ವಿಚಾರಗಳಿಗೆ ಧಕ್ಕೆ ಒದಗಲಿದೆ. ಹೀಗಿರುವಾಗ ಈ ಬೃಹತ್ ಪ್ರಮಾಣದ ಹೂಡಿಕೆ ನಮಗೆ ಬೇಕಿತ್ತಾ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...