ಕೃಪೆ: ಗೂಗಲ್ ಅಂತರ್ಜಾಲ |
ವಾರ್ಷಿಕ ಪರೀಕ್ಷೆಗಳು ಇನ್ನೇನು ಮುಗಿಯುತ್ತಿವೆ ಎನ್ನುವ ಹೊತ್ತಿಗೆ ಸ್ವತಂತ್ರ ಪಕ್ಷಿಗಳಾಗಿ ಸ್ವಚ್ಚಂಧವಾಗಿ ಹಾರಾಡುವ ಮನಸ್ಥಿತಿ, ಅಪ್ಪ ಕೊಟ್ಟ ಕಾಸು ಡಬ್ಬಿಯಲ್ಲಿ ತುಂಬಿಸಿ ಒಡೆಯುವ ಘಳಿಗೆ ಅದು. ಆಟ-ಓಟ ಮಾಮೂಲು, ಹೆಚ್ಚು ಮಳೆ ಸುರಿಯುವ ಆ ಪ್ರದೇಶದಲ್ಲಿ ರಾತ್ರಿ-ಹಗಲು ಅನುಭವಕ್ಕೆ ತಂದು ಕೊಳ್ಳುವುದೇ ಒಂದು ಅನನ್ಯ ಅನುಭವ. ಶಾಲೆಗೆ ನಾಳೆಯಿಂದ ರಜೆ ಎನ್ನುವಾಗಲೇ ತರಾತುರಿಯಲ್ಲಿ ಗ್ರಾಮದ ಸನಿಹದಲ್ಲಿರುವ ಬೆಟ್ಟಕ್ಕೆ ತೆರಳಿ ಉರುವಲು ಕಟ್ಟಿಗೆ ಆಯುವ ಕೆಲಸ ಅದೆಷ್ಟು ಮಜಾ ಕೊಡುತ್ತಿತ್ತೆಂದರೆ ಹೊತ್ತು ಹೋಗಿದ್ದೆ ತಿಳಿಯುತ್ತಿರಲಿಲ್ಲ. ಬೆಟ್ಟದ ಅರಣ್ಯಕ್ಕೆ ಓಡಿ, ಮರ ಹತ್ತಿ ಇಳಿದು ಎಲೆ, ಹಣ್ಣು ಕಿತ್ತು, ಬಂಡೆಯ ಮೇಲೆ ಪವಡಿಸಿ ತಿಂದು ತೇಗಿ ಝರಿಯ ನೀರ ಕುಡಿದು ಹೊರಲು ಸಾಧ್ಯವಾಗುವಷ್ಟು ಕಟ್ಟಿಗೆ ಹೊರೆ ಹೊತ್ತು ಶಾಲೆಗೆ ಬರುವ ಹೊತ್ತಿಗೆ ಆಯಾಸ ಮನೆ ಮಾಡಿ ಬಿಡುತ್ತಿತ್ತು. ಅಂದ ಹಾಗೆ ಅವತ್ತು ಉರುವಲು ಕಟ್ಟಿಗೆ ಎರಡು ಕಾರಣಗಳಿಗೆ ಸಂಗ್ರಹಿಸಲಾಗುತ್ತಿತ್ತು. ಒಂದು ಶಾಲೆಯಲ್ಲಿ ಪ್ರತೀ ದಿನ ಮದ್ಯಾಹ್ನ ನೀಡುತ್ತಿದ್ದ ಗೋದಿ ಉಪ್ಪಿಟ್ಟು ತಯಾರಿಗೆ ಮತ್ತೊಂದು ಶಾಲಾ ಮುಖ್ಯ ಶಿಕ್ಷಕರ ಮನೆಯ ಉಪಯೋಗಕ್ಕೆ.
ಅವತ್ತಿನ ದಿನಗಳಲ್ಲಿ ಯಾವ ಫಲಾಪೇಕ್ಷೆಯಿಲ್ಲದೇ (ಶುಲ್ಕ ರಹಿತವಾಗಿ) ಮನೆ ಪಾಠ ಮಾಡುತ್ತಿದ್ದ ಶಿಕ್ಷಕರು ಪಾಠವನ್ನಷ್ಟೇ ಅಲ್ಲ ಬದುಕಿನ ಪಾಠವನ್ನು ಹೇಳುತ್ತಿದ್ದರು. ಬೇಸಿಗೆ ರಜೆ ಬಂದಾಗ ಅವರನ್ನು ಒತ್ತಾಯ ಪೂರ್ವಕವಾಗಿ ಮನೆಗೆ ಕರೆತಂದು ಊಟ ಮಾಡಿಸಿದರೆ ಅದೇ ತೃಪ್ತಿ ಉಳಿದಂತೆ ಕಟ್ಟಿಗೆ ಸಂಗ್ರಹಿಸಿ ತಂದು ಹಾಕುವುದು. ಇವಷ್ಟೇ ಕೆಲಸ, ಆಮೇಲೆ ಶಾಲೆಯ ರಜೆ ಘೋಷಣೆಯ ದಿನ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅಂತಲೇ ಕೊಡಲಾಗುತ್ತಿದ್ದ ಪುಸ್ತಕಗಳನ್ನು ಶಿಕ್ಷಕರು ಮಾತ್ರ ಆಗಾಗ ತೆಗೆದು ಓದುತ್ತಿದ್ದುದನ್ನು ಗಮನಿಸಿದ್ದ ನನಗೆ ತುಂಬಾ ಗಮನ ಸೆಳೆದದ್ದು ಇತಿಹಾಸ, ಪುರಾಣದ ಅಮರ ಚಿತ್ರ ಕಥಾ ಮಾಲಿಕೆ.
ಆಗ ಟಿವಿ ಇಲ್ಲ, ಸಿನಿಮಾ ಥಿಯೇಟರ್ ಗಳಿಲ್ಲ, ಬೇಸಿಗೆ ಶಿಬಿರಗಳ ರೇಜಿಗೆ ಇಲ್ಲ, ಓದುವ ಹವ್ಯಾಸ ಒಂದೇ ನಮ್ಮನ್ನು ಬಂಧಿಸಿಟ್ಟಿದ್ದರಿಂದ ಓದಿನ ಹಸಿವು ಇನ್ನು 6-7ನೇ ತರಗತಿಗೆ ಬರುವ ವೇಳೆಗೆ ಜಾಸ್ತಿ ಆಗಿ ಬಿಟ್ಟಿತ್ತು. ಸುದರ್ಶನ, ಟಿ. ಕೆ. ರಾಮರಾವ್, ಹಂದನಕೆರೆ ವೆಂಕಟದಾಸು ಮತ್ತಿತರರ ಕೃತಿಗಳನ್ನು ವನಗೂರು ಕೂಡುರಸ್ತೆಯ ಕುಮಾರ ಲಿಂಗೇಶ್ವರ ಜಾತ್ರೆಗೆ ಹೋದಾಗ ಕೂಡಿಟ್ಟ ಹಣದಲ್ಲಿ ಖರಿದಿಸಿ ಓದುವುದೇ ಒಂದು ಮಜಾ ಆಗಿರ್ತಿತ್ತು. ಅದಕ್ಕೂ ಮುನ್ನ ರಜೆ ಸಿಕ್ಕಾಗಲೆಲ್ಲ ಭಾರತ-ಭಾರತಿ ಪುಸ್ತಕ ಮಾಲಿಕೆಯ ಅಂಗೈ ಅಗಲದ ಪುಟ್ಟ ಪುಸ್ತಕಗಳು ನನ್ನ ಓದಿನ ಹಸಿವನ್ನು ವಿಸ್ತರಿಸಿದವು. ನನಗೆ ನೆನಪಿರುವಂತೆ ಮೊದಲಿಗೆ ಓದಿದ ಪುಸ್ತಕ ವೀಣೆ ಶೇಷಣ್ಣ, ಭಗತ್ ಸಿಂಗ್, ಮಹಾತ್ಮ ಗಾಂಧಿ , ಅಂಬೇಡ್ಕರ್,ವಿವೇಕಾನಂದ, ಸಿದ್ದಾರ್ಥ, ಮಹಾ ಭಾರತ ಮತ್ತು ರಾಮಾಯಣದ ಎಲ್ಲ ಪಾತ್ರಗಳು, ಮೈಸೂರು ಮಹಾರಾಜರ ಕುರಿತಾದ ಪುಸ್ತಕಗಳು,ಹೀಗೆ ತುಂಬಾ ಸಂಕ್ಷಿಪ್ತವಾಗಿರುತ್ತಿದ್ದ ಸಾಹಿತ್ಯದ ಆ ಪುಸ್ತಕಗಳು ಅವತ್ತಿಗೆ ಅಚ್ಚುಮೆಚ್ಚು. ಆದರೆ ಇವೆಲ್ಲವನ್ನು ಮೀರಿದ್ದು ರಾಮಾಯಣ-ಮಹಾಭಾರತದ ಕಥಾನಕಗಳನ್ನು ಮನಮುಟ್ಟುವಂತೆ ಚಿತ್ರಿಸಿ ಸಾಹಿತ್ಯ ಒದಗಿಸುತ್ತಿದ್ದ ಅಮರ ಚಿತ್ರಕಥಾ ಮಾಲಿಕೆ. ಮಂಗಲ್ ಪಾಂಡೆ ಕುರಿತಾದ ಅಮರ ಚಿತ್ರಕಥಾ ಮಾಲಿಕೆ ಅವತ್ತಿಗೆ ನನ್ನನ್ನು ಬಹುವಾಗಿ ಕಾಡಿತ್ತು, ಹೀಗೆ ಅಂಟಿಕೊಂಡ ಓದಿನ ಜಾಡ್ಯ ತೇಜಸ್ವಿಯವರ ಕರ್ವಾಲೋ ಕೃತಿಯನ್ನು 6ನೇ ಇಯತ್ತೆಯಲ್ಲಿರುವಾಗಲೇ ಓದುವ ಮೂಲಕ ಸಾಹಿತ್ಯದ ಓದಿನ ದಿಕ್ಕನ್ನು ಬದಲಿಸಿತ್ತು. ಶಾಲೆಯಲ್ಲಿದ್ದ ಪುಸ್ತಕಗಳನ್ನು ಓದಿ ಮುಗಿಸಿದ ಮೇಲೆ ಸೋದರ ಮಾವನ ಗೆಳೆಯರ ಮನೆಯಿಂದ ಅವತ್ತಿಗೆ ಪಡೆದು ಓದಿದ ಅಂಬೇಡ್ಕರ್ ಮತ್ತು ಗಾಂಧಿಯ ಪುಸ್ತಕಗಳು ವಾಸ್ತವ ಜಗತ್ತಿಗೆ ನನ್ನನ್ನು ತೆರೆದು ಕೊಳ್ಳುವಂತೆ ಮಾಡಿದವು. ಪತ್ರಿಕೆಗಳು ಬರುವುದನ್ನು ಕಾಯ್ದುಕೊಂಡು ಸಹೋದರನೊಡನೆ ಕಿತ್ತಾಡಿಕೊಂಡು ಒಂದಕ್ಷರವನ್ನು ಧಾವಂತದಲ್ಲಿ ಓದುತ್ತಿದ್ದ ದಿನಗಳು, ಸುಧಾ-ತರಂಗದ ಜೊತೆಗೆ ಆಗಷ್ಟೇ ಬಣ್ಣದ ಹೊಳಪಿನಲ್ಲಿ ಜೀವ ತಳೆಯುತ್ತಿದ್ದ ಲಂಕೇಶ್ ಪತ್ರಿಕೆ, ರಾಜು ಪತ್ರಿಕೆಗಳು ಹೊರ ಜಗತ್ತಿನ ಸಂಪರ್ಕವಿಲ್ಲದ ದಿನಗಳಲ್ಲೂ ಹೊರ ಜಗತ್ತಿನ ಅರಿವು ಮೂಡಿಸುತ್ತಿದ್ದವು, ರಜಾ ಕಾಲದಲ್ಲಿ ರೇಡಿಯೋ ಕೇಳುವುದೇ ಮಜಾ, ರೇಡಿಯೋ ಗೆ ಪತ್ರ ಬರೆಯುವುದು, ರೇಡಿಯೋ ನಾಟಕಗಳನ್ನು ಆಲಿಸುವುದು, ಯುವವಾಣಿಯ ವೈವಿದ್ಯಮಯ ಕಾರ್ಯಕ್ರಮಗಳು, ವಾರ್ತೆಗಳು ಅದರಲ್ಲೂ ವಿದೇಶಿ ರೇಡಿಯೋ ಗಳಲ್ಲಿ ಕನ್ನಡ ಕೇಳುವ ಖುಷಿ ಸಖತ್ತಾಗಿರ್ತಿತ್ತು. ರೇಡಿಯೋ ಮಾಸ್ಕೋ, ರೇಡಿಯೋ ಸಿಲೋನ್, ದಾರವಾಡ ಆಕಾಶವಾಣಿ, ಹಿಂದಿಯ ವಿವಿಧ ಭಾರತಿ ಅಬ್ಬಾ ಅಂತಹ ಸುಖದ ದಿನಗಳು ಮರೆಯಲು ಸಾಧ್ಯವೇ?
ಬಹುಶ: ಗಾಂಧಿ-ಅಂಬೇಡ್ಕರ್ ಚಿಂತನೆಗಳು, ತೇಜಸ್ವಿಯವರ ಸಾಹಿತ್ಯದ ಓಘ, ಪತ್ರಿಕೆಗಳ ಓದು ನನ್ನೊಳಗಿನ ಚಿಂತಕನನ್ನು, ಬರಹಗಾರನನ್ನು ಜಾಗೃತಗೊಳಿಸಿದ್ದವು, 7ನೇ ತರಗತಿಗೆ ಬರುವ ಹೊತ್ತಿಗೆ ರೈತ ಸಂಘದ ಚಳುವಳಿಯ ಕಾವು ಆದರ್ಶ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜದ ಕಲ್ಪನೆಯನ್ನು ಅವತ್ತಿಗೆ ನನ್ನಲ್ಲಿ ಒಡ ಮೂಡಿಸಿದ್ದವು.ಕಥೆ-ಕವನ-ಲೇಖನ ಬರೆಯುವ ತಹತಹಿಕೆ ಆರಂಭವಾಗಿತ್ತು. ಪರಿಸರದಲ್ಲಿ ಕಣ್ಣಳತೆಯಲ್ಲೇ ಕಾಣುತ್ತಿದ್ದ ಅಸ್ಪೃಶ್ಯತೆ, ತಾರತಮ್ಯದ ಧ್ವನಿಗಳು, ಶೋಷಣೆಯ ಮುಖಗಳು, ಪತ್ರಿಕೆಗಳಲ್ಲಿ ಓದುತ್ತಿದ್ದ ರೇಡಿಯೋದಲ್ಲಿ ಕೇಳುತ್ತಿದ್ದ ಬದನವಾಳು ದಲಿತರಿಗೆ ಮಲ ತಿನ್ನಿಸಿದ ಪ್ರಕರಣಗಳು ಬಂಡಾಯದ ಮತ್ತು ನಿಷ್ಟುರವಾದ ಗ್ರಹಿಕೆಗಳನ್ನು ಬೆಳೆಸಿಕೊಳ್ಳಲು ಮತ್ತು ಅಕ್ಷರ ರೂಪಕ್ಕೆ ಇಳಿಸಲು ಕಾರಣವಾದವು.
ಅಮರ ಚಿತ್ರಕಥೆಗಳನ್ನು ಓದಿದ ಪರಿಣಾಮ ನಮ್ಮ ಆಟಗಳಲ್ಲೂ ಅವೇ ಪಾತ್ರಗಳು ಒಡ ಮೂಡುತ್ತಿದ್ದವು. ಭೀಮ-ದುರ್ಯೋಧನರ ಕಾಳಗ, ಭರತ-ಬಾಹುಬಲಿಯ ಕಾಳಗ, ವೀರ ಅಭಿಮನ್ಯು, ದಾನಶೂರ ಕರ್ಣ,ಭೀಮ-ಬಕಾಸುರ, ಶ್ರೀರಾಮ, ಲವ-ಕುಶ ಹೀಗೆ ಅನೇಕ ಪಾತ್ರಗಳೇ ನಾವಾಗಿ ಆಡುವ ಭರಾಟೆಯಲ್ಲಿ ನಿಜವಾಗಿಯೂ ಗದೆಯಂತಹ ವಸ್ತುಗಳಲ್ಲಿ ಹೊಡೆದಾಡಿ ಅತ್ತದ್ದೆಷ್ಟೋ ದಿನಗಳು ಹಾಗೆಯೇ ಬಿಲ್ಲಿನಿಂದ ಬಿಟ್ಟ ಬಾಣಗಳು ತಗುಲಿ ರಾತ್ರಿಯೆಲ್ಲ ಬವನೆ ಪಟ್ಟ ದಿನಗಳು ಇವೆ. ಇದೆಲ್ಲಕ್ಕಿಂತ ಮಜಾ ಕೊಟ್ಟ ಸಂಗತಿಗಳೆಂದರೆ ದೇವರ ಅನ್ವೇಷಣೆ! ದೇವರನ್ನು ಕಾಣ ಬೇಕಾದರೆ ತಪಸ್ಸು ಮಾಡಬೇಕು, ತಪಸ್ಸು ಮಾಡಿದರೆ ದೇವರು ನಿಜಕ್ಕೂ ಬರುತ್ತಾನಾ ಎಂಬ ಪ್ರಶ್ನೆಯಿಟ್ಟುಕೊಂಡು ಅಮ್ಮನಿಗೆ ತಿಳಿಯದಂತೆ ಉಪವಾಸ ಇದ್ದು, ಮಡಿಯಲ್ಲಿದ್ದು ಅಮ್ಮ ಬಟ್ಟೆ ತೊಳೆಯಲು ಹೊಳೆಗೆ ಹೋಗುತ್ತಿದ್ದಂತೆ ಮನೆಯ ಹಿಂದಿನ ತಿಪ್ಪೆ (ಈಗಿನ ಗಲೀಜು ತಿಪ್ಪೆಗಳಲ್ಲ ಬದಲಿಗೆ ಕಟ್ಟಿಗೆ ಒಲೆ ಉರಿಸುತ್ತಿದ್ದ ಬೂದಿಯನ್ನು ಗುಡ್ಡೆ ಹಾಕುತ್ತಿದ್ದ ತಿಪ್ಪೆ) ಮೇಲೆ ಕುಳಿತು ನಿರ್ವಾಣ ಸ್ಥಿತಿಯಲ್ಲಿ ಲಂಗೋಟಿ ಕಟ್ಟಿಕೊಂಡು ದಂಡದ ಮೇಲೆ ಕೈ ಇಟ್ಟು ತಪಸ್ಸು ಕುಳಿತು ಬಿಡುತ್ತಿದ್ದೆ. ಬೆಳಿಗ್ಗೆ ಮದ್ಯಾಹ್ನ ಕಳೆದು ಸಂಜೆಯಾದರೂ ದೇವರೇ ಪ್ರತ್ಯಕ್ಷ ಆಗುತ್ತಿರಲಿಲ್ಲ, ಅದೊಂದು ದಿನ ಕೇರೆ ಹಾವು ತಿಪ್ಪೆಯ ಮೇಲೆ ಕುಳಿತಿದ್ದ ನನ್ನ ಬಳಿಗೆ ಬಂದಾಗಲೇ ಇನ್ನು ಯಾವ ತಪಸ್ಸು ಬೇಡಪ್ಪಾ ಅನಿಸಿಬಿಟ್ಟಿತ್ತು,. ಇದು ನನ್ನ ಅರಿವಿನ ಪ್ರಜ್ಞೆಯನ್ನು ಮತ್ತಷ್ಟು ಹೆಚ್ಚಿಸಿ ಬಿಟ್ಟಿತು, ಪ್ರಶ್ನಿಸುವ ಮನೋಧರ್ಮವನ್ನು, ವೈಚಾರಿಕೆ ನಿಲುವನ್ನು ಮತ್ತಷ್ಟು ಹೊಳಪುಗೊಳಿಸಿತು.
12ನೇ ವಯಸ್ಸಿಗೆ ಕಥೆ ಮತ್ತು ಅಪೂರ್ಣವಾದ ಕಾದಂಬರಿಗಳನ್ನು ಅರ್ದಂಬರ್ದ ಬರೆದು ಹಾಗೆ ಬಿಟ್ಟಿದ್ದೆ. ವರ್ಣ ಚಿತ್ರಗಳನ್ನು ಬಿಳಿಯ ಬಟ್ಟೆಯ ಮೇಲೆ ಬರೆಯುವ ಪ್ರಯತ್ನಗಳನ್ನು ಮಾಡಿದ್ದೆ, ಹಾಗೆ ಬರೆದ ಚಿತ್ರಗಳಲ್ಲಿ ಇವತ್ತಿಗೂ ನೆನಪಿನಲ್ಲಿ ಉಳಿದಿರುವುದು ಬುದ್ದ ಮತ್ತು ಟಿಪ್ಪು ಸುಲ್ತಾನ್ ಚಿತ್ರಗಳು, ಹಾಗೆಯೇ ರೇಡಿಯೋದಲ್ಲಿ ಕೇಳಿದ ಚಲನ ಚಿತ್ರಗಳಲ್ಲಿ ಬಹು ಕಾಲ ನೆನಪಿಗೆ ಉಳಿದದ್ದು ಕಿತ್ತೂರು ರಾಣಿ ಚನ್ನಮ್ಮ ಮತ್ತು ಬಬ್ರುವಾಹನ, ಮಯೂರ. ಚಿಕ್ಕಪ್ಪ-ಚಿಕ್ಕಮ್ಮಂದಿರಿಗೆ ಮತ್ತು ಸೋದರಮಾವ ಹಾಗೂ ಅವರ ಸ್ನೇಹಿತರಿಗೆ ಇನ್ ಲ್ಯಾಂಡ್ ಪತ್ರದಲ್ಲಿ ಆಗಾಗ ಬರೆಯುವ ಗೀಳು ಅಧಿಕವಾಗಿತ್ತು. ಸ್ವತ: ಗ್ರೀಟಿಂಗ್ ಕಾರ್ಡುಗಳನ್ನು ತಯಾರಿಸುವ ಹವ್ಯಾಸವೂ ಇತ್ತು, ಪರಿಸರದ ಪ್ರತಿಕೃತಿಗಳನ್ನು ತಯಾರಿಸುವ ಹುಮ್ಮಸ್ಸಿತ್ತು. ಇನ್ನೊಂದು ಸಂಗತಿ ಹೇಳಲೇ ಬೇಕು. 8ನೇ ತರಗತಿಯಲ್ಲಿ ಕರ್ವಾಲೋ ಪಠ್ಯ ಪುಸ್ತಕವಾಗಿ ಓದಬೇಕಿದ್ದ ನಾನು ಅದನ್ನು 7ನೇ ತರಗತಿಯಲ್ಲಿ ಓದಿ ಅರಗಿಸಿಕೊಂಡಿದ್ದೆ.
ಇವತ್ತಿಗೆ ಅಂತಹ ದಿನಗಳೆಲ್ಲಿವೆ? ವಿದ್ಯಾರ್ಥಿ ಜೀವನ, ಟ್ರಕ್ಕಿಂಗ್, ಬೇಸಿಗೆ ಶಿಬಿರ, ಕ್ರಿಕೆಟ್ , ವಂಡರ್ ಲಾ, ಜೂ ಗಾರ್ಡನ್, ಪಿಚ್ಚರ್ರು, ಟೀವಿಗಳ ಚೋಟಾ ಭೀಮ್, ಚಿಂಟೂ ಇತ್ಯಾದಿಗಳಲ್ಲಿ ಕಳೆದು ಹೋಗಿ ಬಿಡುತ್ತಾರೆ. ಪುಸ್ತಕದ ಹುಳುಗಳು ಜ್ಞಾನಾರ್ಜನೆಯೆಂದರೆ ಪಠ್ಯ ಪುಸ್ತಕ ಓದುವುದು ಮತ್ತು ಅಡ್ವಾನ್ಸ್ ಆಗಿ ಟ್ಯೂಷನ್ನು ಕ್ಲಾಸುಗಳಿಗೆ ಹೋಗುವುದು ಎಂದೇ ಭಾವಿಸಿರುವಂತಿದೆ. ಭಾವನಾತ್ಮಕವಾಗಿ ಮತ್ತು ಭೌದ್ದಿಕವಾಗಿ ಬೆಳೆಯ ಬಹುದಾದ ಸಾಧ್ಯತೆಗಳು, ಹಾಗೂ ಸಾಮಾಜಿಕ ಪ್ರಕ್ರಿಯೆಗಳನ್ನು ಅರಿಯುವ ಸಂಗತಿಗಳು ಬಾಲ್ಯದಲ್ಲೇ ಕಳೆದು ಹೋಗುತ್ತಿರುವುದರಿಂದ ಸಮನಾಂತರ ಸಮಾಜವನ್ನು ಕಾಣಲು ಸಾಧ್ಯವಾಗುತ್ತಿಲ್ಲ, ಸಾಹಿತ್ಯದ ಓದು ಕ್ಷೀಣಿಸಿರುವುದರಿಂದ ಗ್ರಹಿಕೆಗಳು ಸತ್ತು ಹೋಗುತ್ತಿವೆ, ಮನುಷ್ಯ ಜಾತಿಯ ಅಂತರ ಹಾಗೂ ಕೌಟಂಬಿಕ ಸಂಬಂಧಗಳ ಅಂತರವೂ ಹೆಚ್ಚುತ್ತಿದೆ ಅನಿಸುವುದಿಲ್ಲವೇ?