Sunday, April 20, 2014

ವಿದ್ಯಾರ್ಥಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು!


ಎಷ್ಟೋ ಸಲ ಬದುಕು ಎಲ್ಲಿಂದೆಲ್ಲಿಗೋ ನಮ್ಮನ್ನು ತಂದು ನಿಲ್ಲಿಸಿ ಬಿಡುತ್ತವೆ. ಹಾಗೆ ಎಲ್ಲಿಂದೆಲ್ಲಿಗೋ ತಂದು ನಿಲ್ಲಿಸುವ ಮುನ್ನ ನಾವೇನಾಗಿದ್ದೇವು ? ಏನಾಯಿತು?ಎಂಬ ಸಿಂಹಾವಲೋಕನ ಭವಿಷ್ಯದ ದಿನಗಳಲ್ಲಿ ಒಂದು ಫ್ರೇಮಿನೊಳಗೆ ನಮ್ಮನ್ನು ತಂದು ಬಿಡಬಹುದು ಇಲ್ಲವೇ ಮುಂದಿನ ಪೀಳಿಗೆಗೆ ಹೀಗೆಯೇ ನಡೆಯ ಬೇಕು ಎಂಬ ಕಟ್ಟಲೆಯನ್ನು ಹೇರ ಬಹುದು. ಇವೆಲ್ಲವೂ ವಾಸ್ತವ ಜಗತ್ತಿನ ವೈರುದ್ಯಗಳು.

        ವಿದ್ಯಾರ್ಥಿ ಜೀವನದಲ್ಲಿ ಇದು ಬಹು ಮುಖ್ಯವಾದ ಅಂಶ, ಬದುಕಿನ ಟರ್ನಿಂಗ್ ಪಾಯಿಂಟ್ ಶುರುವಾಗುವುದೇ ಪ್ರೌಢಶಾಲ ಹಂತ ದಾಟಿದ ಮೇಲೆ ಮತ್ತು ಪಿಯು ಹಂತವನ್ನು ಮುಗಿಸಿದ ಮೇಲೆ. ಮೊದಲೆಲ್ಲ ಹಾಗಿರಲಿಲ್ಲ ಬಿಡಿ ನಾವಂದುಕೊಂಡದ್ದೇ ಹಾದಿ, ಸಾಗಿದ್ದೇ ದಿಕ್ಕು. ಆದರೆ ಬದಲಾದ ಪರಿಸ್ಥಿತಿಯಲ್ಲಿ  ಎಲ್ಲವೂ ನಿರೀಕ್ಷಿತ, ಕುತೂಹಲಕ್ಕೆ ಇಲ್ಲಿ ಜಾಗವಿಲ್ಲ. ಆಗೆಲ್ಲಾ ಎಷ್ಟು ಕಷ್ಟ ವಿತ್ತು, ಸರ್ಕಾರಿ ಶಾಲೆಯಾದರೂ ಉಸಿರು ಗಟ್ಟಿಸುವ ವಾತಾವರಣ ತರಗತಿಯಲ್ಲಿ, ಆಟೋಟಗಳಲ್ಲಿ ಅಷ್ಟೆ ಉತ್ಸಾಹ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಡಿದ್ದೇ ಆಟ-ನೋಟ, ಓದಲಿಕ್ಕೆ ಕಪಾಟಿನಿಂದ ಪುಸ್ತಕಗಳು ದಂಡಿಯಾಗಿ ಬರುತ್ತಿದ್ದವು, ಪಠ್ಯೇತರ ಚಟುವಟಿಕೆಗಳಲ್ಲೂ ಉತ್ಸಾಹ, ಪೋಷಕರಿಂದ ಕಾಳಜಿ ವಹಿಸುವ ಸಂಗತಿಗಳು ಅಷ್ಟಕ್ಕಷ್ಟೆ. ನಮ್ಮ ನೋಟ್ಸ್ ನಾವೇ ಮಾಡ್ಕೋತಿದ್ವಿ, ಹೋಂ ವರ್ಕ್ ಬರೆಯೋದು, ಪಾಠ ಓದೋದು, ನಿರ್ವಂಚನೆಯಿಂದ ಮತ್ತು ವ್ಯಾಪಾರದ ಸೋಂಕಿಲ್ಲದೇ ಉಚಿತ ಮನೆ ಪಾಠ ಹೇಳುತ್ತಿದ್ದ ಶಿಕ್ಷಕರು! ಇಂತಹ ಪರಿಸರ ಸೃಜನಶೀಲತೆಗೂ ಒತ್ತು ಕೊಡುತ್ತಿತ್ತು, ಆದರೆ ಈಗೆಲ್ಲಿದೆ ಅಂತಹ ಪರಿಸರ? ಸರ್ಕಾರಿ ಶಾಲೆಗಳಿಗೆ ನೇಮಕವಾಗುವ ಶಿಕ್ಷಕರು ಎಷ್ಟರ ಮಟ್ಟಿಗೆ (ಕ್ಷಮಿಸಿ ಎಲ್ಲ ಶಿಕ್ಷಕರನ್ನು ಉದ್ದೇಶಿಸಿಲ್ಲ) ತಮ್ಮ ಕರ್ತವ್ಯಕ್ಕೆ ನ್ಯಾಯ ಒದಗಿಸುತ್ತಿದ್ದಾರೆ? ತಮ್ಮ ಮಕ್ಕಳನ್ನೇ ಸರ್ಕಾರಿ ಶಾಲೆಗಳಲ್ಲಿ ಕಳುಹಿಸದ ಶಿಕ್ಷಕರು, ಸರ್ಕಾರಿ ನೌಕರರು, ಸರ್ಕಾರ ಸಂಬಳ ಸವಲತ್ತು ಮಾತ್ರ ಅಪೇಕ್ಷಿಸುತ್ತಾರೆ. ಇಂತಹ ನಿಲುವುಗಳೇ ಶಿಕ್ಷಣ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದೆಯಲ್ಲವೇ? ಸರ್ಕಾರ ನಿಯಮಗಳನ್ನ ಉಲ್ಳಂಘಿಸಿ ಶಿಕ್ಷಣದ ಹೈಟೆಕ್ ಅಂಗಡಿಗಳಿಗೆ ಅವಕಾಶ ಕಲ್ಪಿಸುತ್ತಿದೆ ಮತ್ತು ಸುಂದರ ಪರಿಸರದ ಕನ್ನಡ ಶಾಲೆಗಳನ್ನು ತಾನೇ ಮುಂದಾಗಿ ನಿಂತು ಕಗ್ಗೊಲೆ ಮಾಡುತ್ತಿದೆ. 
             
            ಜಾಗತೀಕರಣದ ಗಾಳಿಯೇ ಹಾಗೆ ನಮ್ಮ ಮನಸ್ಸನ್ನು ಅದು ಬದಲಿಸುತ್ತದೆ, ಕ್ಷಣಿಕ ಆಮಿಷಗಳಿಗೆ ಬಲಿಬೀಳುವ ಮನಸ್ಸು ವಾಸ್ತವವನ್ನ ಅರಿಯದೇ ಮೂಲಕ್ಕೆ ಧಕ್ಕೆ ಯಾಗುವ ಸಂಗತಿಗಳೆಡೆಗೆ ನಮ್ಮನ್ನು ಸೆಳೆದು ಬಿಡುತ್ತದೆ. ಕನ್ನಡ ಶಾಲೆಗಳ ವಿಷಯವೂ ಹಾಗೆಯೇ, ತಮ್ಮ ಮಗುವಿಗೆ ಇಷ್ಟವಿರಲಿ ಬಿಡಲಿ ಹೈಟೆಕ್ ಕಲ್ಚರ್ ನ ಶಾಲೆಗಳಲ್ಲಿ ಅವು ಕಲಿಯಬೇಕು ಎಂಬ ಇರಾದೆಗೆ ಬಿದ್ದು ಒತ್ತಡದಿಂದ ಕಲಿಕೆಗೆ ಹಚ್ಚಲಾಗುತ್ತದೆ. ಇದನ್ನೆ ಅನುಸರಿಸುವ ಆಜುಬಾಜಿನ ಮಂದಿ ತಮಗೆ ಸಾಮರ್ಥ್ಯವಿರಲಿ ಬಿಡಲಿ ತಾವು ಪಕ್ಕದವರನ್ನು ಅನುಸರಿಸುವ ಉಮೇದಿಗೆ ಬಿದ್ದು ಬಿಡುತ್ತಾರೆ. ಹಾಗಾಗಿ ಶಿಕ್ಷಣ ವ್ಯಾಪಾರದ ಅಡ್ಡೆಗಳಿಗೆ ಮಕ್ಕಳು ಸೇರುವ ಮತ್ತು ಕಲಿಯುವ ಅನಿವಾರ್ಯತೆ ಸೃಷ್ಟಿಸುತ್ತಾರೆ. ಆಗ ಮಗುವಿನ ಪ್ರತೀ ಹಂತದಲ್ಲೂ ಪೋಷಕರ ಹಸ್ತಕ್ಷೇಪವೇ ಜಾಸ್ತಿ, ಮಕ್ಕಳ ನೋಟ್ಸ್ ತಾವೇ ಬರೆಯಬೇಕು, ಸ್ನಾನ ಮಾಡಿಸಬೇಕು, ಬಟ್ಟೆ ಹಾಕಬೇಕು, ಶಾಲೆಗೆ ಕರೆದೊಯ್ಯಬೇಕು, ಹೊತ್ತು ಹೊತ್ತಿಗೆ ಬಾಕ್ಸ್ ತೆಗೆದುಕೊಂಡು ಹೋಗಿ ಊಟ ಮಾಡಿಸಬೇಕು, ಪರೀಕ್ಷೆ ಬಂದಾಗ ಇಂಥದ್ದೇ Rank ಬರಬೇಕು, ಕಾರ್ಯಕ್ರಮಗಳಲ್ಲಿ ಇಂಥದ್ದೇ ಸಿನಿಮಾ ಸಾಂಗಿಗೆ ಕುಣಿಯಬೇಕು ಹೀಗೆ ಇತ್ಯಾದಿ ಒತ್ತಡಕ್ಕೆ ಮಕ್ಕಳ ಮೇಲೆ ಒತ್ತಡ ಸೃಷ್ಠಿಯಾಗುತ್ತದೆ. 10ನೇ ತರಗತಿ ಮತ್ತು ಪಿಯು ಮುಗಿಸುವಾಗ ಇನ್ನಿಲ್ಲದ ಒತ್ತಡ ಹೇರಿ ಪರೀಕ್ಷೆ ಬರೆಸುತ್ತಾರೆ ನಂತರ ಅವನು/ಳು ಇಂಜಿನಿಯರ್ರೇ ಆಗಬೇಕು, ಡಾಕ್ಟರ್ ಆಗಬೇಕು ಎಂಬ ಹಪಾಹಪಿಗೆ ಬಿದ್ದು ವೃತ್ತಿ ಶಿಕ್ಷಣಕ್ಕೆ ಸೇರಿಸುತ್ತಾರೆ. ಹೀಗೆ ಒತ್ತಡದಲ್ಲೇ ಸೃಷ್ಟಿಯಾಗುವ ಆತ/ಅವಳು ಬದುಕಿನಲ್ಲಿ ದುಡ್ಡು ಮಾಡುವುದನ್ನು ಕಲಿಯಬಹುದಷ್ಟೇ ಆದರೆ ಸಾಮಾಜಿಕ ಜೀವನದಲ್ಲಿ ಸಂಪೂರ್ಣವಾಗಿ ವಿಫಲವಾಗುವ ಸಂಧರ್ಭಗಳೇ ಅಧಿಕ. 

           ಹೀಗೆ ದುಡ್ಡು ಮಾಡುವುದನ್ನು ಕಲಿಸುವ ಪೋಷಕರು ಅದೇ ಮಕ್ಕಳಿಗೆ ನೈತಿಕ ಪಾಠವನ್ನ, ಸಾಮಾಜಿಕ ಬಾಂಧವ್ಯದ ಪಾಠವನ್ನ ಹೇಳಿ ಕೊಡುವುದಿಲ್ಲ, ಅವರಿಗೆ ಅದೆಲ್ಲ ಗಮನಿಸುವ ಪುರುಸೊತ್ತು ಕಡಿಮೆಯೇ. ಹೀಗಿರುವಲ್ಲಿ ಆತ/ಅವಳು ವೃದ್ದಾಪ್ಯದಲ್ಲಿ ಒಂಟಿ ಮಾಡಿ ದೂರ ಸರಿದಾಗ ಅನುಭವಿಸುವ ಯಾತನೆಯೇ ಅದಕ್ಕೆ ಉತ್ತರವಾಗ ಬಹುದು. ಕಲಿಯುವ ಮಗುವಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು, ಒಳ್ಳೆಯದ್ದು ಮತ್ತು ಕೆಟ್ಟದ್ದನ್ನು ನಿರ್ಧರಿಸುವ ಗುಣ ಬೆಳೆಸುವ ಜೊತೆಗೆ ಪರಿಸರದಲ್ಲಿ ಅನೇಕ ಸಂಗತಿಗಳನ್ನ ಗ್ರಹಿಕೆ ತಂದು ಕೊಳ್ಳುವ ಅವಕಾಶಗಳನ್ನ ಮುಕ್ತವಾಗಿ ನೀಡಬೇಕು. ಮಕ್ಕಳ ಪ್ರೌಢಾವಸ್ಥೆ ಮಕ್ಕಳಿಗೆ ಮಾತ್ರ ಟರ್ನಿಂಗ್ ಪಾಯಿಂಟ್ ಅಲ್ಲ ಪೋಷಕರಿಗೂ ಇದು ಟರ್ನಿಂಗ್ ಪಾಯಿಂಟ್ ಎಂಬುದನ್ನು ತಿಳಿದುಕೊಂಡಾಗ ಮಾತ್ರ ವ್ಯವಸ್ಥೆಯ ಸುಧಾರಣೆ ನಿರೀಕ್ಷಿಸ ಬಹುದು ಅಲ್ಲವೇ? 

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...