Sunday, June 28, 2009

ಪತ್ರಕರ್ತರು ಮತ್ತು ಗೃಹಸಚಿವ ಆಚಾರ್ಯರ ಪ್ರೆಸ್ ಒಂಬುಡ್ಸ್ ಮೆನ್ ಪ್ರಸ್ತಾಪ

ಇದು ಪತ್ರಿಕಾ ದಿನಾಚರಣೆಯ ಮಾಸ, ಸಮಾಜದ ಆಗು-ಹೋಗುಗಳಲ್ಲಿ ಮುಳುಗಿ ಹೋಗುವ ಪತ್ರಕರ್ತ ತನ್ನನ್ನಷ್ಟೇ ಅಲ್ಲ ತನ್ನ ಕುಟುಂಬವನ್ನು ಮರೆತು ಸಮಯದ ಮಿತಿ ಇಡದೇ ಕಳೆದು ಹೋಗುತ್ತಾನೆ. ಒಮ್ಮೊಮ್ಮೆ ಇದು ಎಷ್ಟು ಅತಿಯಾಗುತ್ತದೆ ಎಂದರೆ ಸಮಾಜದ ಅಂಕು ಡೊಂಕು ಗಳನ್ನು, ಇತರರ ಬದುಕು-ಬವಣೆಗಳನ್ನು ವರದಿ ಮಾಡುವ ಭರದಲ್ಲಿ ತನ್ನ ಕುಟುಂಬದ ಬೇಕು-ಬೇಡಗಳನ್ನೇ ಗಮನಿಸದೇ ನಿರ್ಲಕ್ಷ್ಯ ಧೋರಣೆ ತಳೆದಿರುತ್ತಾರೆ.! ಹೊತ್ತಲ್ಲದ ಹೊತ್ತಿನಲ್ಲಿ, ಸಂಧಿಗ್ಧದ ಸನ್ನಿವೇಶಗಳಲ್ಲಿ, ಅಪಾಯಕಾರಿ ಸಂಧರ್ಭಗಳಲ್ಲಿ ಎಂತಹ ಅಡೆತಡೆಗಳನ್ನು ಲೆಕ್ಕಿಸದೇ ವರದಿಗಾರಿಕೆ ನಡೆಸುವ ಮತ್ತು ಅದನ್ನು ಪ್ರಕಟಿಸುವ ಸಾರ್ವಜನಿಕ ಹಿತಾಸಕ್ತಿ ಹೊಂದಿದ ವ್ಯಕ್ತಿ ಸದಾ ನೆತ್ತಿಯ ಅಲುಗಿನಲ್ಲೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸಮಾಜದಲ್ಲಿ ಕಾಣಬರುವ ಲೋಪದೋಷಗಳಿಗಳಿಗೆ ಸಂಬಂಧಿಸಿದಂತೆ ಸರ್ಕಾರದ, ಸಮಾಜದ ಗಮನ ಸೆಳೆಯಲು ಪತ್ರಿಕೆ ಬೇಕು, ಜನರಿಗೆ ಮಾಹಿತಿ ತಲುಪಿಸಲು ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ಆಡಳಿತ ರೂಢರಿಗೆ ಪತ್ರಿಕೆಗಳ, ದೃಶ್ಯವಾಹಿನಿಗಳ,ಪತ್ರಕರ್ತರು ಬೇಕೇ ಬೇಕು. ಇಂತಹವರಿಗೆ ಸೇವಾ ಭದ್ರತೆ, ಜೀವ ಭದ್ರತೆ, ಸ್ಥಿರತೆ ಕಡಿಮೆಯೇ. ಸ್ವಾತಂತ್ರ್ಯ ನಂತರ ಎಷ್ಟೋ ಸರ್ಕಾರಗಳು ಬಂದು ಹೋಗಿವೆ, ಸಮಾಜದ ಸರ್ವಾಂಗೀಣ ಅಭಿವೃದ್ದಿಗೆ ನೂರಾರು ಯೋಜನೆಗಳು, ಆರ್ಥಿಕ ಭದ್ರತೆಯ ಯೋಜನೆಗಳು ಜಾರಿಯಲ್ಲಿವೆ. ಆದರೆ ಯಾವುದೇ ಸರ್ಕಾರ ಅಥವ ಸಮಾಜದ ಮುಖ್ಯವಾಹಿನಿಯ ಮಂದಿ ಇದುವರೆಗೂ ಪತ್ರಕರ್ತರಅಭಿವೃದ್ದಿಯ ಬಗೆಗೆ ಕಿಂಚಿತ್ತು ಗಮನ ಹರಿಸಿಲ್ಲ. ಸ್ವತ: ಪತ್ರಕರ್ತರೇ ಒಗ್ಗೂಡಿ ಸರ್ಕಾರದ ಗಮನಕ್ಕೆ ಆಗಬೇಕಾದ ಕಾರ್ಯಗಳನ್ನು ಗಮನಕ್ಕೆ ತಂದರೂ ಅದಕ್ಕೆ ತೃಣ ಮಾತ್ರದ ಬೆಲೆ ಇಲ್ಲ. ಈಗ್ಯೆ ಕೆಲ ವರ್ಷಗಳ ಹಿಂದೆ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀತಿ ಪ್ರಕಟಿಸಲಾಗಿದೆ. ಕೇವಲ ೫೦೦-೧೦೦೦ ರೂಪಾಯಿಗಳ ಟಿಕೆಟ್ಗಳನ್ನು ಒಂದೆರೆಡು ವರ್ಷ ನೀಡಿ ಕೈತೊಳೆದು ಕೊಂಡ ಸರ್ಕಾರ ಇದುವರೆಗೂ ಬಸ್ ಪಾಸ್ ಸೌಲಭ್ಯ ಇರಲಿ ಬಜೆಟ್ ನಲ್ಲಿ ಘೋಷಿಸಿದ ಯಶಸ್ವಿನಿ ಯೋಜನೆಯನ್ನು ಜಾರಿಗೆ ತಂದಿಲ್ಲ. ಸಣ್ಣ ಪತ್ರಿಕೆಗಳ ಬೆಳವಣಿಗೆಗೆ ಆದ್ಯತೆ ನೀಡುವ ಜಾಹಿರಾತುಗಳಿಗೆ ಓಬೀರಾಯನ ಕಾಲದ ದರಪಟ್ಟಿಯನ್ನೆ ಮುಂದುವರೆಸಿಕೊಂಡು ಬಂದಿದೆ, ರಿಯಾಯ್ತಿ ದರದ ಮುದ್ರಣ ಹಾಳೆ, ಸರ್ಕಾರಿ ಜಾಹೀರಾತು ನೀಡುವಲ್ಲಿ ನಿರ್ಲಿಪ್ತ ಧೋರಣೆ ಪ್ರದರ್ಶಿಸುತ್ತಿದೆ. ಪತ್ರಕರ್ತರ ಮೇಲೆ ರಾಜ್ಯದ ವಿವಿದೆಡೆ ನಿರಂತರ ಹಲ್ಲೆ ನಡೆಯುತ್ತಿದೆ, ಯಾವ ಪ್ರಕರಣದಲ್ಲೂ ಪತ್ರಕರ್ತರಿಗೂ ರಕ್ಷಣೆ-ನ್ಯಾಯ ಸಿಕ್ಕಿಲ್ಲ. ಬದಲಿಗೆ ಜವಾಬ್ಧಾರಿ ಸ್ಥಾನದಲ್ಲಿರುವ ರಾಜ್ಯದ ಗೃಹ ಸಚಿವರು ಪತ್ರಕರ್ತರನ್ನು ಹಣಿಯುವ ಮಾತನಾಡುತ್ತಾರೆ, ಮಾತೆತ್ತಿದರೆ ಪ್ರೆಸ್ ಒಂಬುಡ್ಸ್ ಮನ್ ಜಾರಿಗೆ ತರುವ ಮಾತನಾಡುತ್ತಾರೆ. ಅಷ್ಟಕ್ಕೂ ಒಂಬುಡ್ಸ್ ಮನ್ ಅಂದರೇನು? ಹಿರಿಯ ನ್ಯಾಯಾಧೀಶರನ್ನೊಳಗೊಂಡ ಸ್ವತಂತ್ರ ತನಿಖಾ ಸಮಿತಿ. ವರದಿಗಳಿಂದ ಯಾರಿಗಾದರು ನೋವಾದರೆ, ವರದಿ ಸತ್ಯಕ್ಕೆ ದೂರ ಎನಿಸಿದರೆ ಯಾವುದೇ ಶುಲ್ಕವಿಲ್ಲದೇ ದೂರು ದಾಖಲಿಸುವ ವ್ವಸ್ಥೆ ಇದು. ಪತ್ರಿಕೆಗಳ ವಿರುದ್ದ, ಪತ್ರಕರ್ತರ ವಿರುದ್ದ ದೂರು ದಾಖಲಿಸಲು ನ್ಯಾಯಾಂಗ ವ್ಯವಸ್ಥೆ ಇದೆ, ಪ್ರಸ್ ಕೌನ್ಷಿಲ್ ಇದೆ, ಪತ್ರಕರ್ತರಿಗೆ ಸ್ವಯಂ ನಿಯಂತ್ರಣದ ಹಕ್ಕು ಇದೆ. ಹೀಗಿರುವಾಗ ಇನ್ನೊಂದು ಪ್ರೆಸ್ ಒಂಬುಡ್ಸ್ ಮನ್ ಅಗತ್ಯತೆಇಲ್ಲ. ಇಂತಹದ್ದೊಂದು ಸಣ್ಣ ವಿಷಯ ಅರಿಯದ ಸಚಿವ ಅಚಾರ್ಯ ಗೃಹ ಸಚಿವ ಸ್ಥಾನವನ್ನು ನಿರ್ವಹಿಸುತ್ತಿರುವ ರೀತಿ ಜನರಿಗೆ ತಿಳಿಯದ್ದೇನಲ್ಲ, ಹಲವಾರು ಸಂಧರ್ಭಗಳಲ್ಲಿ ಆ ಅಂಶ ಸಾಬೀತಾಗಿದೆ! ಸಮಾಜದ ಒಳಿತಿಗೆ ರಾಜಕೀಯ ವ್ಯಕ್ತಿಗಳು, ಸಚಿವರು ಮುಖ್ಯಮಂತ್ರಿಗಳು, ಸರ್ಕಾರಿ ಅಧಿಕಾರಿಗಳ ನಿಯಂತ್ರಣಕ್ಕೆ ಒಂಬುಡ್ಸ್ ಮನ್ ಅವಶ್ಯಕತೆ ಇದೆ. ಈ ಬಗೆಗೆ ಅಚಾರ್ಯ ಮೊದಲು ತಿಳಿದು ಕೊಳ್ಳಲಿ. ಖಾಸಗಿ ಬ್ಲಾಗ್ ನಿರ್ವಹಿಸುವ .drvsacharya.blogspot.com ಸಚಿವರು ನಿಯಮಕ್ಕೆ ವಿರುದ್ದವಾಗಿ ತನ್ನ ಬ್ಲಾಗಿನಲ್ಲಿ ಸರ್ಕಾರಿ ಲಾಂಛನ ಪ್ರದರ್ಶಿಸಿದ್ದಾರೆ. ಪತ್ರಿಕೆಗಳಲ್ಲಿ ಬರುವ ಪ್ರತಿ ವರದಿಗು ಇದರಲ್ಲಿ ವಿರುದ್ದವಾದ ಅಭಿಪ್ರಾಯ ಬರೆಯುತ್ತಾರೆ. ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟವಾದಾಗ ಸ್ಥಳಕ್ಕೆ ಭೇಟಿ ನೀಡಲಿಲ್ಲ ಎಂದು ಪತ್ರಿಕೆಗಳು ಬರೆದರೆ, ಗೃಹಸಚಿವರು ಅಲ್ಲಿಗೆ ಹೋಗಿ ಮಾಡುವುದಾದರೂ ಏನು ಎಂಬ ಧಾಟಿಯ ಹೇಳಿಕೆ ಪ್ರಕಟಿಸುತ್ತಾರೆ. ಇವರ ವಿರುದ್ದ ಕ್ರಮ ಜರುಗಿಸಲು ಯಾವ ಒಂಬುಡ್ಸ್್ ಮನ್ ರಚನೆಯಾಗಬೇಕೋ? ಅವರೇ ಹೇಳಬೇಕು. ಪೋಲೀಸರು ಪತ್ರಕರ್ತರಿಗೆ ಮಾಹಿತಿ ನೀಡದಂತೆ ನಿರ್ಬಂದಿಸುವ ಕ್ರಿಯೆಯು ಅಲ್ಲಲ್ಲಿ ಜಾರಿಯಲ್ಲಿದೆ. ಇದು ಎಲ್ಲ ಸಂಧರ್ಭಕ್ಕೂ ಪಥ್ಯವಾಗಲಾರದು ಎಂಬುದನ್ನು ತಿಳಿದರೆ ಒಳಿತು. ಇದು ವಿಪರ್ಯಾಸದ ಸಂಗತಿಯಲ್ಲದೇ ಮತ್ತೇನು? ಇವತ್ತು ಉತ್ತರದ ರಾಜ್ಯಗಳು ಸೇರಿದಂತೆ ದಕ್ಷಿಣದ ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ಪತ್ರಿಕೆಗಳು ರಾಜಕೀಯ ಪಕ್ಷಗಳ, ಉಳ್ಳವರ ಸ್ವತ್ತಾಗಿವೆ. ಅವರವರ ಹಿತಾಸಕ್ತಿಗೆ ಅನುಗುಣವಾಗಿ ಅವು ವರದಿ ಪ್ರಕಟಿಸುತ್ತವೆ. ಇದು ಸಮಾಜಕ್ಕೆ ಒಳಿತಲ್ಲ. ನಮ್ಮ ರಾಜ್ಯದಲ್ಲಿ ಸಧ್ಯ ಅಂತಹ ಪರಿಸ್ಥಿತಿ ಇಲ್ಲ.! ಸಧ್ಯದ ಮಟ್ಟಿಗೆ ಒಂದು ನಿಯತ್ತು, ಸಿದ್ದಾಂತದ ನೆರಳಿನಲ್ಲೇ ಪತ್ರಿಕೆಗಳ ಪತ್ರಕರ್ತರ ಕಾರ್ಯ ನಿರ್ವಹಣೆಯಿದೆ. ಎಲ್ಲ ಕಡೆ ಇರುವಂತೆ ಇಲ್ಲೂ ಕೆಲವು ಹೀನ ಸುಳಿಯ ಮಂದಿ ಪತ್ರಿಕೋಧ್ಯಮದ ಸೋಗಿನಲ್ಲಿ ಪತ್ರಕರ್ತರೆಂಬ ಹೊಂದಿದ್ದಾರಾದರು ಅವುಗಳಿಗೆ ತಾತ್ವಿಕ ಉಳಿಗಾಲವಿಲ್ಲ. ಹಾಗಾಗಿ ಭಯ ಪಡುವ ಅಗತ್ಯತೆ ಇಲ್ಲ.
ನಿಮಗೆ ಗೊತ್ತೇ ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚಿನ ಪತ್ರಿಕೆಗಳು, ಮತ್ತು ಪತ್ರಕರ್ತರು ಇರುವುದು ಭಾರತದಲ್ಲಿ, ಪ್ರಜಾಪ್ರಭುತ್ವದಲ್ಲಿ ಕಾವಲು ನಾಯಿಯ ಕೆಲಸವನ್ನು ನಿರ್ವಹಿಸುವ ಪತ್ರಕರ್ತರು ಒಟ್ಟು ಸಮುದಾಯದ ಭಾವನೆಗಳನ್ನು ಕ್ರೋಢಿಕರಿಸುವ ಕೆಲಸವನ್ನು ಮಾಡುತ್ತಿವೆ. ಇತರೆ ಎಲ್ಲ ದೇಶಗಳಿಗಿಂತ ಅತ್ಯಂತ ಹೆಚ್ಚು ಸಮರ್ಥವಾಗಿ ಯಾವ ವಿಷಯವನ್ನು ಕಡೆಗಣಿಸದೆ, ಎಲ್ಲ ರೀತಿಯ ವಿಚಾರಗಳಿಗೂ ವೇದಿಕೆ ಒದಗಿಸುತ್ತಿದೆ. ಹಾಗಾಗಿಯೇ ಪತ್ರಿಕೆಗಳು ದೇಶದ ಜನರ ಜನಜೀವನದ ಭಾಗವಾಗಿ ಕಾರ್ಯನಿರ್ವಹಿಸುತ್ತಿವೆ, ಆದರೆ ವಿದೇಶದಲ್ಲಿ ಪತ್ರಿಕೆಗಳ ಆದ್ಯತೆಗಳು ಸೀಮಿತವಾಗಿರುತ್ತವೆ. ಜಾಗತಿಕ ಮಟ್ಟದಲ್ಲಿ ಪತ್ರಿಕೆಗಳ ಹುಟ್ಟಿಗೆ ಚಾಲನೆ ದೊರೆತದ್ದು 17ನೇ ಶತಮಾನದಲ್ಲಿ. 17ನೇ ಶತಮಾನದ ಅಂತ್ಯದಲ್ಲಿ ಭಾರತದಲ್ಲಿ ಜೇಮ್ಸ್ ಆಗಸ್ಟಸ್ ಹಿಕಿ ಎಂಬಾತ ಭಾರತೀಯ ಪತ್ರಿಕೋಧ್ಯಮಕ್ಕೆ ಮುನ್ನುಡಿ ಬರೆದ. ದೇಶದ ಪ್ರಥಮ ಪತ್ರಿಕೆ ಜನವರಿ ೧೭೮೦ ರಂದು ಕಲ್ಕತ್ತಾ ನಗರದಿಂದ 'ಕಲ್ಕತ್ತಾ ಜನರಲ್ ಅಡ್ವರ್ಟೈಸ್" ಅಥವ "ಬೆಂಗಾಲ್ ಗೆಜೆಟ್" ಹೆಸರಿನಲ್ಲಿ ಹೊರಬಂತು. 1789ರಲ್ಲಿ ಬಾಂಬೆ ಮಹಾನಗರದಿಂದ ಬಾಂಬೆ ಹೆರಾಲ್ಢ್ ಬಂತು, ನಂತರ ಬಾಂಬೆ ಕೊರಿಯರ್ , ಟೈಮ್ಸ್ ಆಪ್ ಇಂಡಿಯಾ ಪತ್ರಿಕೆ ಪ್ರಕಾಶನ ಆರಂಬಿಸಿತು. ಭಾರತೀಯ ಭಾಷಾ ಪತ್ರಿಕೆಯಾಗಿ ಚಲಾವಣೆಗೆ ಬಂದದ್ದು ಬಂಗಾಳಿ ಭಾಷೆಯ ಸಮಾಚಾರ್ ದರ್ಪಣ್ . 1854ರ ನಂತರ ಇತರೆ ಭಾರತೀಯ ಭಾಷೆಯ ಪತ್ರಿಕೆಗಳು ಜನ್ಮ ತಳೆದವು. 1950ರಲ್ಲಿ ೨೧೪ ದಿನಪತ್ರಿಕೆಗಳಿದ್ದರೆ, ಆ ಪೈಕಿ ೪೪ ಆಂಗ್ಲಭಾಷಾ ಪತ್ರಿಕೆಗಳು ಇದ್ದವು.ಈಗ ಆ ಸಂಖ್ಯೆ ದುಪ್ಪಟ್ಟಾಗಿದೆ. ಸುಮಾರು 99ಮಿಲಿಯನ್ ನಷ್ಟು ಪತ್ರಿಕಾ ಪ್ರತಿಗಳನ್ನು ಜನ ಓದುತ್ತಿದ್ದಾರೆ. ಸಮಾಜದಲ್ಲಿ ಜಾಗೃತಿಯ ಅಲೆಯನ್ನು ಪತ್ರಿಕೆಗಳು ಸಮರ್ಥವಾಗಿ ಹುಟ್ಟುಹಾಕಿವೆ. ಕೇರಳದಂತಹ ರಾಜ್ಯದಲ್ಲಿ ಪತ್ರಿಕೆಗಳ ಒಡನಾಟವಿಲ್ಲದೇ ಜನರ ಬದುಕೇ ಇಲ್ಲ ಎಂಬಷ್ಟರ ಮಟ್ಟಿಕೆ ಪತ್ರಿಕಾ ಓದುಗರ ಸಂಖ್ಯೆ ಇದೆ. ಇದು ಪತ್ರಿಕೆಗಳ ಮಾಯಾ ಜಗತ್ತು.

Saturday, June 27, 2009

ಕೆ ಪಿ ಎಸ್ ಸಿ - ಮರುಕಳಿಸಿದ ಗೊಂದಲ, ಬೇಕಾ ಇದು?

ಇಂದು ಕರ್ನಾಟಕ ಲೋಕಸೇವಾ ಆಯೋಗ ಗ್ರಾಮ ಪಂಚಾಯತ್ ಹಂತ-೧, ಹಂತ-೨ ಕ್ಕೆ ರಾಜ್ಯಾಧ್ಯಂತ ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆ ವೇಳೆ ಅಭ್ಯರ್ಥಿಗಳಿಗೆ ಗೊಂದಲ ಉಂಟಾಯಿತು. ಇಂತಹ ಗೊಂದಲ, ನೇಮಕಾತಿ ಅಕ್ರಮಗಳು ಕೆಪಿಎಸ್ಸಿಗೆ ಹೊಸದೇನಲ್ಲ ಬಿಡಿ. ಆದರೂ ಒಂದು ಅತ್ಯಂತ ವಿಶ್ವಾಸಾರ್ಹ, ಸ್ವತಂತ್ರವಾದ ನೇಮಕಾತಿ ಆಯೋಗ ಪದೇ ಪದೇ ಪರೀಕ್ಷಾ ಅಕ್ರಮ, ಮೀಸಲು ಅಕ್ರಮ, ಅಂಕಗಳ ವ್ಯತ್ಯಾಸ, ಜಾತೀಯತೆ, ಪರೀಕ್ಷೆಗೆ ಮುನ್ನ ಪ್ರಶ್ನೆ ಪತ್ರಿಕೆ ಬಹಿರಂಗ, ಒಂದೇ ಮನೆಯ ಸದಸ್ಯರಿಗೆ ಸಮನಾದ ಆಯ್ಕೆ ಅಂಕಗಳನ್ನು ನೀಡುವಿಕೆ, ಸಮಿತಿ ಸದಸ್ಯರ ಭ್ರಷ್ಠಾಚಾರ, ಪಕ್ಷಪಾತ ಧೋರಣೆ, ಪರೀಕ್ಷಾ ಫಲಿತಾಂಶ ಪ್ರಕಟಣೆಗೆ ನಿಧಾನ ಗತಿ ಹೀಗೆ ಸಾರ್ವಜನಿಕವಾಗಿ ಪದೇ ಪಧೇ ಮುಜುಗರಕ್ಕೊಳಗಾಗುವುದು ಸರಿಯೇ? ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಇರುವಷ್ಟೇ ಮಹತ್ವದ ಗೌರವ ಈ ಸಂಸ್ಥೆಗೆ ಇದೆ, ಸರ್ಕಾರಿ ಉದ್ಯೋಗವರಸುವ ಯುವಜನರಿಗೆ ಹೊಣೆಗಾರಿಕೆಯ ಉದ್ಯೋಗ ಕಲ್ಪಿಸುವ ಸ್ವಾಯತ್ತ ಸಂಸ್ಥೆಗೆ ಅದರದ್ದೇ ಆದ ಸ್ಥಾನಮಾನ ಇದೆ. ಭಾರತೀಯ ಸೇವೆಗಳ ನೇಮಕಾತಿಗಾಗಿ 1921ರಲ್ಲಿ ಸೆಂಟ್ರಲ್ ರಿಕ್ರೂಟ್ಮೆಂಟ್ ಬೋರ್ಡ್ ಕಾರ್ಯ ಆರಂಭಿಸಿತು, 1940ರ ವರೆಗೂ ಸರ್ಕಾರಿ ಸಚಿವಾಲಯದಲ್ಲೇ ಇದರ ಕಛೇರಿ ಇತ್ತು. ಮುಂದೆ ಸಾರ್ವಜನಿಕ ಸೇವೆಗಳ ಆಯುಕ್ತರ ನೇಮಕಾತಿ ಯಾದಾಗ 1950ರ ಸಂವಿಧಾನದ ಅನುಚ್ಚೇದ ಕಲಂ14ರನುಸಾರ ದೇಶದ ಎಲ್ಲ ರಾಜ್ಯಗಳಲ್ಲೂ 1951ರಿಂದ ಲೋಕಸೇವಾ ಆಯೋಗಗಳು ಅಸ್ತಿತ್ವಕ್ಕೆ ಬಂದವು. ಸರ್ಕಾರಿ ಸೇವೆಗೆ ಪಾರದರ್ಶಕ ನೇಮಕಾತಿ, ಸ್ಫರ್ದಾತ್ಮಕ ಪರೀಕ್ಷೆಗಳನ್ನು ನಡೆಸುವುದು, ನೇಮಕಾತಿಯಲ್ಲಿ ಸಂವಿಧಾನಾತ್ಮಕವಾಗಿ ಪಾಲಿಸಬೇಕಾದ ಸಾರ್ವಜನಿಕ ಆಶಯಗಳನ್ನು ಪಾಲಿಸುವುದು ಲೋಕಸೇವಾ ಆಯೋಗದ ಕರ್ತವ್ಯ. ಕರ್ನಾಟಕದಲ್ಲಿ ಲೋಕಸೇವಾ ಆಯೋಗ ಅಸ್ತಿತ್ವಕ್ಕೆ ಬಂದ ಮೇಲೆ ಇದುವರೆಗೂ 12ಮಂದಿ ಚೇರ್ಮನ್, 35ಮಂದಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಧ್ಯದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿಯಾಗಿ ಇಬ್ಬರು ಸದಸ್ಯರನ್ನು ನೇಮಿಸಲಾಗಿದೆ. ಒಟ್ಟಾರೆಯಾಗಿ ಆಯೋಗದ ಒಂದು ಸಮಿತಿಯಲ್ಲಿ ಅಧ್ಯಕ್ಷರು ಸೇರಿದಂತೆ 8ಮಂದಿ ಕಾರ್ಯ ನಿರ್ವಹಿಸುತ್ತಾರೆ. ಸಾರ್ವಜನಿಕ ನ್ಯಾಯ ಕಲ್ಪಿಸುವ ಹಿನ್ನೆಲೆಯೋ ಏನೋ ರಾಜ್ಯದ ಎಲ್ಲ ಪ್ರಮುಖ ಜಾತಿಗಳ ತಲಾ ಒಬ್ಬರು ಸಮಿತಿಯಲ್ಲಿದ್ದಾರೆ. ಈ ಪೈಕಿ ಗೋನಾಳ್ ಭೀಮಪ್ಪ ಅಧ್ಯಕ್ಷರು ಮತ್ತು ಸದಸ್ಯರು(ಪ.ಜಾತಿ), ಇನ್ನು ಸದಸ್ಯರಾದ ದಾಸಯ್ಯ(ಪ.ಜಾತಿ), ನಾಗರಾಜ್ (ಕುರುಬ), ರುದ್ರೆಗೌಡ(ಲಿಂಗಾಯಿತ), ರಾಮಕೃಷ್ಣ(ಒಕ್ಕಲಿಗ), ಕೃಷ್ಣಪ್ರಸಾದ್(ಕುಂಬಾರ), ಬಿ ಪಿ ಕನಿರಾಂ (ಲಂಬಾಣಿ) ಇನ್ನೊಬ್ಬರು ರಿಯಾಜ್ ಅಹ್ಮದ್(ಮುಸ್ಲಿಂ), ಇನ್ನು ಒಂದು ಬ್ರಾಹ್ಮಣ ಸದಸ್ಯರನ್ನು ತೆಗೆದು ಕೊಳ್ಳುವ ಪ್ರಸ್ತಾವ ನೆನೆಗುದಿಗೆ ಬಿದ್ದಿದೆ. ಸದರಿ ಸ್ಥಾನಗಳಿಗೆ ಸಾರ್ವಜನಿಕ ವಲಯದಲ್ಲಿ ಉತ್ತಮವಾಗಿ ಸೇವೇ ಸಲ್ಲಿಸಿದ ಎ ವರ್ಗದ ನಿವೃತ್ತ ಅಧಿಕಾರಿಗಳು, ನಿವೃತ್ತ ಕುಲಪತಿಗಳು ಅರ್ಹತೆ ಆಧಾರದಲ್ಲಿ ನೇಮಕವಾಗುತ್ತಾರೆ. ಕಳೆದ 2ದಶಕಗಳಿಂದ ಈ ನಿಯಮಗಳನ್ನು ಸರ್ಕಾರಗಳು ಸದಸ್ಯರ ಹೆಸರುಗಳನ್ನು ಶಿಫಾರಸ್ಸು ಮಾಡುವಾಗ ಸಮರ್ಪಕವಾಗಿ ಪಾಲಿಸಿಲ್ಲ ದಿರುವ ಅನುಮಾನವಿದೆ, ಪರಿಣಾಮ ವಿಶ್ವಾಸಾರ್ಹವಾದ ಸಂಸ್ಥೆಯೊಂದು ಪದೇ ಪದೇ ಮುಜುಗುರಕ್ಕೊಳಗಾಗುತ್ತಿದೆ. ಕೆಪಿಎಸ್ಸಿ ಕಳೆದ ಬಾರಿ ದ್ವಿತಿಯ ದರ್ಜೆ ಮತ್ತು ಪ್ರಥಮ ದರ್ಜೆ ಗುಮಾಸ್ತರ ಪರೀಕ್ಷೆ ಸಂಧರ್ಭದಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗ, ತಪ್ಪು ಪ್ರಶ್ನೆ, ತಪ್ಪು ಉತ್ತರಗಳನ್ನು ಪ್ರಕಟಿಸಿದ್ದರೆ, ಕೆ.ಇ.ಎಸ್ ಪರೀಕ್ಷೆಯ ಫಲಿತಾಂಶ, ಉಪನ್ಯಾಸಕರ ನೇಮಕಾತಿ ಆದೇಶವನ್ನು ತಡಮಾಡುತ್ತಿದೆ. ಈಗ ಗ್ರಾ.ಪಂ. ಕಾರ್ಯದರ್ಶಿಗಳ ಪರೀಕ್ಷೆಯಲ್ಲಿ ಕೆಲವರಿಗೆ ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿ ಪರೀಕ್ಷಾ ಕೇಂದ್ರದ ಮಾಹಿತಿ ನೀಡಿದ್ದರೆ ಇನ್ನು ಕೆಲವರಿಗೆ ಮಾಹಿತಿ ಒದಗಿಸಿಲ್ಲ, ಪ್ರವೇಶ ಪತ್ರದ ಹಿಂಬದಿಯಲ್ಲಿ ಎಸ್ ಎಸ್ ಎಲ್ ಸಿ , ಪದವಿಯಲ್ಲಿ ಕನ್ನಡ ಬಾಷೆ ಓದಿದ್ದರೆ ವಿನಾಯ್ತಿ ಇದೆ ಎಂದಿದೆಯೇ ಹೊರತು ಆಯೋಗ ನಡೆಸುವ ಕಡ್ಡಾಯ ಕನ್ನಡ ಪರೀಕ್ಷೆಯಿಂದ ಅಭ್ಯರ್ಥಿಗಳಿಗೆ ವಿನಾಯ್ತಿ ನೀಡಲಾಗಿದೆ ಎಂದು ಹೇಳಲಾಗಿಲ್ಲ, ಪರಿಣಾಮ ಲಕ್ಷಾಂತರ ಮಂದಿ ದೂರದ ಊರುಗಳಿಂದ ಪರೀಕ್ಷಾ ಕೇಂದ್ರಕ್ಕೆ ಬಂದು ನಿರಾಶೆಯಿಂದ ತೆರಳುವಂತಾಯಿತು ಯಾಕೆ ಹೀಗೆ? ಇನ್ನಾದರೂ ಕೆ ಪಿ ಎಸ್ ಸಿ ಸಾರ್ವಜನಿಕವಾಗಿ ಯಾವುದೇ ಶಂಕೆಗೆ ಒಳಗಾಗದಂತೆ ಕಾರ್ಯ ನಿರ್ವಹಿಸಬೇಕಾದ ಅಗತ್ಯತೆ ಇದೆ. ಏಕೆಂದರೆ ಒಮ್ಮೆ ಸಾರ್ವಜನಿಕವಾಗಿ ವಿಶ್ವಾಸ ಕಳೆದುಕೊಂಡರೆ ಅಂತಹ ಸಂಸ್ಥೆ ಜನಮನ್ನಣೆ ಗಳಿಸುವುದಿಲ್ಲ..!

Sunday, June 21, 2009

'ಸಿದ್ಧಾಂತ' ಗಳ ಗಂಟುಮೂಟೆ ಮತ್ತು ಚಳುವಳಿಗಳು

"ಯಾವುದೇ ತತ್ವ, ಸಿದ್ಧಾಂತಗಳೆಲ್ಲವೂ ಎಲ್ಲಿಯವರೆಗೆ ಎಂದರೆ ಅದು ತನ್ನ ಸ್ವಹಿತಾಸಕ್ತಿಗೆ ಧಕ್ಕೆ ಬರುವವರೆಗೂ ಮಾತ್ರ ಆನಂತರ ತತ್ವ ಸಿದ್ದಾಂತಗಳೆಲ್ಲವೂ ಮಣ್ಣು ಪಾಲಾಗುತ್ತವೆ".
-ಡಾ ಬಿ ಆರ್ ಅಂಬೇಡ್ಕರ್
ಅದು ೬೦-70ರ ದಶಕ, ಸಾಮಾಜಿಕ ಚಳುವಳಿಗಳಿಗೆ, ಸ್ವಾಭಿಮಾನದ ಚಳುವಳಿಗಳಿಗೆ ಕಾವು ಕೊಟ್ಟ, ಬಿರುಸು ಕೊಟ್ಟ, ಚಿಂತನ-ಮಂಥನಕ್ಕೆ ನಾಂದಿ ಹಾಡಿದ ಮೇರು ದಿನಗಳು. ಅಂತೆಯೇ ದಮನಿತರ ಧ್ವನಿಯಾದ, ಭ್ರಷ್ಟ ವ್ಯವಸ್ಥೆಯ ವಿರುದ್ಧ ಬೀದಿಗಿಳಿದ ಹೋರಾಟಕ್ಕೊಂದು ಅರ್ಥ ಮತ್ತು ದಿಕ್ಕು ದಕ್ಕಿಸಿಕೊಂಡ ದಿನಗಳು. ಆದರ್ಶ-ಸಿದ್ದಾಂತ-ಬದ್ದತೆಗೆ ಛಾಪು ಸಿಕ್ಕ ದಿನಗಳವು. ಆದರೆ ಈಗೇನಾಗಿದೆ? 90ರ ದಶಕದ ನಂತರದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸ್ವಾಭಿಮಾನದ ಹೋರಾಟಗಳು ದಿಕ್ಕು ದೆಸೆಯಿಲ್ಲದೇ ಗಟಾರ ಸೇರಿಕೊಂಡಿವೆ! ಮೊನ್ನೆ ನನ್ನ ಝೀ ಕನ್ನಡ ವಾಹಿನಿಯ ಸಮಾನ ಮನಸ್ಕ ಮಿತ್ರ ಮಧುಸೂಧನ್ ಮತ್ತು ಅಧಿಕಾರಿ ಮಿತ್ರ ಆನಂದ್ ಜೊತೆ ಪ್ರಸಕ್ತ ಸಂಧರ್ಭದ ಚಳುವಳಿಗಳ ಬಗ್ಗೆ ಮಾತನಾಡಿದೆ, ದೀರ್ಘ ಚರ್ಚೆಯ ನಂತರ ಮಂಥನವಾದ ಅಂಶಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಇಲ್ಲಿನ ಕಟು ವಾಸ್ತವಗಳನ್ನು ಓದಿ ಕೊಂಡ ಮೇಲೆ ನಿಮಗನಿಸಿದ್ದನ್ನು ನೀವು ಹೇಳಲು ಸ್ವತಂತ್ರರು...!
ಬಹುಶ3-4ದಶಕಗಳ ಹಿಂದಿನ ಕಾಲಘಟ್ಟ ಮತ್ತು ಪರಿಸರ ಅಲ್ಲಿನ ವಿಚಾರಗಳು ಯಾವುದೇ ಒಂದು ಚಳುವಳಿಯ ಸ್ಥಿರತೆಗೆ ಬುನಾದಿಯಾಗಿದ್ದವು, ಇಂತಹ ಸನ್ನಿವೇಶದಲ್ಲಿ ಹುಟ್ಟಿ ಬಂದದ್ದೇ ಪ್ರಗತಿ ಪರವಾದ ಚಳುವಳಿಗಳು. ಅಂತಹ ಚಳುವಳಿಗಳ ನಾಯಕತ್ವ ವಹಿಸಿದವರ ನೀತಿ-ನೆಲೆಗಟ್ಟು ಕೂಡ ಚಳುವಳಿಗಳ ಗಟ್ಟಿತನಕ್ಕೆ ಸಾಥ್ ನೀಡಿದ್ದವು. ವ್ಯವಸ್ಥೆಯಿಂದ ನೈಜವಾಗಿ ನೊಂದವರು, ದಮನಿತರು ತಮ್ಮ ಹಕ್ಕುಗಳಿಗೆ, ನ್ಯಾಯಕ್ಕೆ ಪ್ರತಿಭಟನೆ ಮಾಡುತ್ತಿದ್ದರು. ಅಂದಿನ ನಾಯಕರ ಬದ್ಧತೆ, ಸಿದ್ದಾಂತಗಳ ಗಣನೆ ಅಂದಿನ ಕಾಲ ಘಟ್ಟಕ್ಕೆ ಸರಿಯಾಗಿಯೇ ಇತ್ರು. ಪರಿಣಾಮ ರೈತ ಚಳುವಳಿ, ದಲಿತ ಚಳುವಳಿ, ಕಾರ್ಮಿಕರ ಚಳುವಳಿಗಳು ಸಂಘಟನಾತ್ಮಕವಾಗಿ ಬಲಿಷ್ಠ ನೆಲೆ ಪಡೆದುಕೊಂಡಿದ್ದವು. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಏನಾಗಿದೆ? ಸಿದ್ದಾಂತಗಳ ನೆಲೆಗಟ್ಟು ಇರಲಿ ಸೈದ್ದಾಂತಿಕ ನೆಲೆಗಟ್ಟು ಇಲ್ಲದ ಚಳುವಳಿಗಳು ಸಮಯಾನುಕೂಲಕ್ಕೆ ತಕ್ಕಂತೆ ನಡೆಯುತ್ತಿವೆ. ಗಮನಿಸಬೇಕಾದ ಸೂಕ್ಷ್ಮ ಎಂದರೆ. ಸ್ವಾಭಿಮಾನದ ಚಳುವಳಿ, ಸಾಮಾಜಿಕ ಚಳುವಳಿಗಳು ನಮ್ಮ ದೇಶದಲ್ಲಿ ಜಾಗತೀಕರಣದ ಬಿರುಗಾಳಿ ಬೀಸಿದ ನಂತರ ಕಣ್ಮರೆಯಾಗಿವೆ. ಬದ್ದತೆ-ಸಿದ್ದಾಂತ ಮಣ್ಣುಪಾಲಾಗಿವೆ. ಅಲ್ಲೊಂದು ಇಲ್ಲೊಂದು ಕೇಳಿ ಬರುವ ಧ್ವನಿಗಳ ಶಕ್ತಿ ಅಡಗಿಸುವ ವ್ಯವಸ್ಥಿತ ಕ್ರಿಯೆ ಸದಾ ಜಾರಿಯಲ್ಲಿವೆ. ಹಾಗಾಗಿಯೇ ಸಾಹಿತ್ಯ-ವಿಚಾರಗಳ ಮೂಲಕ ಹೊಸತೊಂದು ಲೋಕವನ್ನೇ ಸೃಷ್ಟಿಸಿದ ಪೂರ್ಣಚಂದ್ರ ತೇಜಸ್ವಿ ಹೇಳಿದ ಮಾತು ಈ ಸಂಧರ್ಭದಲ್ಲಿ ನೆನಪಿಗೆ ಬರುತ್ತದೆ. " ಈ ದೇಶದಲ್ಲಿ ಗಾಂದಿ, ಅಂಬೇಡ್ಕರ್ ಮತ್ತಿತರ ದಾರ್ಶನಿಕರ ತತ್ವ ಸಿದ್ದಾಂತಗಳು ಎಂದೋ ಕಸದ ಬುಟ್ಟಿ ಸೇರಿವೆ" ಎಂದು ನಿರ್ಭಿಡೆಯಿಂದ ಹೇಳುವ ಮೂಲಕ ಸಂಧಿಗ್ದಕ್ಕೆ ಸಿಲುಕಿದವರು ತೇಜಸ್ವಿ. ಇಂದಿನ ಚಳುವಳಿಗಳ ನಾಯಕರಿಗೆ ಸಿದ್ದಾಂತಗಳ ನೆರಳು ಬೇಕು ಆದರೆ ಅದರಡಿಯಲ್ಲಿ ಸ್ವಾರ್ಥದ ಹಿತಾಸಕ್ತಿ ಕಡ್ಡಾಯವಾಗಿರಬೇಕು ಎಂಬಂತಿದೆ, ಆದ್ದರಿಂದ ಇಂದಿನ ಚಳುವಳಿಗಳ ಗಟ್ಟಿತನಕ್ಕೆ ಹೊಡೆತ ಬಿದ್ದಿದೆ. ಸಾರ್ವಜನಿಕವಾದ ವಿಷಯಗಳಿಗೆ ಬೀದಿಗಿಳಿಯುವುದಕ್ಕಿಂತ ವೈಯುಕ್ತಿಕ ಹಿತಾಸಕ್ತಿಗಳಿಗೆ ಪೂರಕವಾಗುವ ಹೋರಾಟಗಳು ಜಾಗೃತಾವಸ್ಥೆಯಲ್ಲಿವೆ, ಇದು ನಮ್ಮ ನೈತಿಕ ಅಧ:ಪತನಕ್ಕೆ ಸಾಕ್ಷಿಯಾಗುತ್ತದೆ. ದೇಶದ ಆಡಳಿತ ವ್ಯವಸ್ಥೆಯ ವಿರುದ್ದ ಧ್ವನಿಯೆತ್ತಲೂ ಈಗ ಆಧುನಿಕ ಹೋರಾಟಗಳು ಬಂದಿವೆ ಅವುಗಳ ಪೈಕಿ ಮಾಹಿತಿ ಹಕ್ಕು ಕಾಯ್ದೆ ಎಂಬುದು ಒಂದು. ಇಂದಿನ ವೇಗದ ಬದುಕಿನಲ್ಲಿ ಬೀದಿಗಿಳಿದು ಪ್ರತಿಭಟಿಸಲು ತಾಕತ್ತು ಇಲ್ಲ ಎನ್ನುವುದಕ್ಕಿಂತ ತನ್ನ ಹಿಂದೆ ಪ್ರತಿಭಟನೆಗೆ ಅಗತ್ಯವಿರುವ ತಲೆಗಳ ಸಂಖ್ಯೆ ಇಲ್ಲ ತಿಳಿದಾಗ ಏಕಾಂಗಿ ಹೋರಾಟಕ್ಕೆ ಈ ಮಾದರಿಯ ಚಳುವಳಿ ಸಹಾಯ ಮಾಡುತ್ತಿದೆ.
ತನ್ನ ಪಾಡಿಗೆ ತಾನು ಪರಿಸರ ಸಂರಕ್ಷಣೆಯ ಚಟುವಟಿಕೆಗಳಲ್ಲಿ ತೊಡಗುವ ಸಾಲು ಮರದ ತಿಮ್ಮಕ್ಕ, ಹಾಸನದ ಗೆಳೆಯರ ನಮ್ಮೂರ ಸೇವೆ, ರಂಗ ಚಟುವಟಿಕೆಗಳ ಮೂಲಕ ವ್ಯವಸ್ಥೆಯ ಅಣಕ ಹೀಗೆ ಹತ್ತು ಹಲವು ಸ್ವಯಂಸ್ಫೂರ್ತಿಯ ಚಟುವಟಿಕೆಗಳು ಚಳುವಳಿಯ ಭಾಗಗಳೇ ಆಗಿವೆ. ಹಿಂದೆ ಸಿದ್ದಾಂತ ನಂಬಿಕೊಂಡು ಬೀದಿಗಿಳಿದ ಹೋರಾಟಗಾರರ ಪರಿಸ್ಥಿತಿ ಏನಾಗಿದೆ? ಈ ಪೈಕಿ ಒಂದು ವರ್ಗದ ಜನ ಭ್ರಷ್ಠ ವ್ಯವಸ್ಥೆಯಲ್ಲಿ ಸೇರಿಕೊಂಡು ಹೋರಾಟದ ನೆಪದಲ್ಲಿ ನಂಬಿಕೊಂಡ ಜನರನ್ನು ವಂಚಿಸುತ್ತ ಐಷಾರಾಮಿ ಬದುಕಿನಲ್ಲಿ ಕಾಲಕಳೆದರೆ ಮತ್ತೊಂದು ವರ್ಗದ ಜನ ಸಿದ್ದಾಂತ ನಂಬಿಕೊಂಡು ಹೋರಾಟಕ್ಕಿಳಿದು ಬದುಕನ್ನೇ ಕಳೆದುಕೊಂಡು ದಿಕ್ಕು ದೆಸೆಯಿಲ್ಲದೇ ಬರಿಬಾದಾಗಿ ಹೋಗಿದ್ದಾರೆ, ಆದರ್ಶದ ಕನಸಿನಲ್ಲಿ ತಮ್ಮ ನ್ನು ನಂಬಿಕೊಂಡವರ ಬದುಕನ್ನು ಬರಿದು ಮಾಡಿದ್ದಾರೆ. ಯಾಕೆ ಹೀಗೆ ? ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವೇ? ಹಾಗಾದರೆ ನಂಬಿಕೊಂಡ ಸಿದ್ದಾಂತಗಳ ಮೂಟೆಯನ್ನು ಏನು ಮಾಡಬೇಕು ? ಕೆಲವೊಮ್ಮೆ ವ್ಯವಸ್ಥೆಯ ವೈರುದ್ಯದ ವಿರುದ್ದ ನೇರವಾಗಿ ಪ್ರತಿಭಟಿಸಲು ಆಗದಿದ್ದಾಗ ಸಿದ್ದಾಂತಗಳ ನೆಪದಲ್ಲೆ ನಕ್ಸಲಿಸಂ ಅನ್ನು ಮಾಡುವುದುಂಟು, ಅದು ನಮ್ಮ ಸಮಸ್ಯಗಳ ಪರಿಹಾರಕ್ಕೆ ಉತ್ತರವಾದೀತೆ, ಅಂತಹ ಎಷ್ಟು ಹೋರಾಟಗಳು ಯಶಸ್ಸು ಕಂಡಿವೆ ಎಂಬುದಕ್ಕೆ ನಮ್ಮ ಕಣ್ಮುಂದೆಯೇ ಇತಿಹಾಸವಿದೆ. ಇಂತಹ ವಾಸ್ತವ ಸತ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾರಣವೇನು? ವ್ಯವಸ್ಥೆಯ ಲೋಪದೋಷಕ್ಕೆ ಸೈದ್ದಾಂತಿಕ ನೆಲಗಟ್ಟು ಇಟ್ಟುಕೊಂಡು ಚಳುವಳಿಗಳು ರೂಪಿತವಾಗಬೇಕು. ಆದರೆ ಈಗ ಆಗುತ್ತಿರುವುದೇನು? ಒಂದು ಚಳುವಳಿಯ ಹೆಸರಿನ ಸಂಘಟನೆಗೆ ಕೂಲಿ ಕಾರ್ಯಕರ್ತರು ಇರುತ್ತಾರೆ, ಅವರಷ್ಟೇ ಮಂದಿ ಬೇಕಾದ ಸಂಧರ್ಭದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾರೆ. ಅಂದಿನ ಕೂಲಿ ಸಿಕ್ಕರೆ, ಹೆಂಡ ಬಾಡು ಸಿಕ್ಕರೆ ಅಂದಿನ ಚಳುವಳಿ ಮುಕ್ತಾಯ! ಅಷ್ಟೇ ಅಲ್ಲ ಸಮಾಜದ ದಮನಿತ ಜನರ, ವಿದ್ಯಾರ್ಥಿಗಳ ಹಿತ ಕಾಯುವ , ಕನ್ನಡ ಸಂಸ್ಕೃತಿ ರಕ್ಷಣೆ ನೆಪದಲ್ಲಿ ಹಲವಾರು ಸಂಘಟನೆಗಳು ತಮ್ಮ ಸಂಘಟನೆಗಳ ಭದ್ರತೆಗೆ ಬುನಾದಿ ಹಾಕಿಕೊಳ್ಳುತ್ತಿವೆ ಅಂದರೆ ಉರಿಯುವ ಮನೆಯ ಗಳ ಹಿರಿದಂತೆ ಅಲ್ಲವೇ? ನೈಜ ಆಶಯ, ಬದ್ದತೆ ಅಲ್ಲಿ ಉಳಿದಿಲ್ಲ. ಇನ್ನು ಸ್ವಾಭಿಮಾನದ ಚಳುವಳಿಗಳು ನರಸತ್ತ ಮಂದಿಯ (ಕ್ಷಮಿಸಿ) ನಿರ್ಲಿಪ್ತ ಧೋರಣೆಯಿಂದ ಸತ್ತೇ ಹೋಗಿವೆ. ಈ ಸಂಧರ್ಭ 1950ರಲ್ಲಿ ಅಂಬೇಡ್ಕರ್ ಹೇಳಿದ ಮಾತು ಮತ್ತೆ ನೆನಪಾಗುತ್ತಿದೆ. "ಈ ದೇಶದ ಸಾಮಾಜಿಕ ಚಳುವಳಿಗಳು ಹಾಗೂ ಸ್ವಾಭಿಮಾನದ ಹೋರಾಟಗಳು ಏಕೆ ನಿಷ್ಕ್ರಿಯಗೊಂಡಿವೆ ಎಂದರೆ, ಚಳುವಳಿಯ ಮಂಚೂಣಿಯಲ್ಲಿರಬೇಕಾದವರುಬೀಜ ಒಡೆಸಿಕೊಂಡ ಹೋರಿಗಳಂತೆ ಮೂಗುದಾರದ ಅಂಕುಶದಲ್ಲಿದ್ದಾರೆ ಅಥವಾ ಕುತ್ತಿಗೆ ಬೆಲ್ಟ್ ಹಾಕಿಸಿಕೊಂಡು ಮಾಲೀಕ ಎಸೆಯುವ ಬಿಸ್ಕತ್ತಿಗೆ ಬಾಯಿ ಚಪ್ಪರಿಸುವವರಿದ್ದಾರೆ. ಅವರು ಚಳುವಳಿ ಮಾಡುವುದಿರಲಿ, ಬಾಯಿ ಬಿಡಲೂ ಆಗದ ಸ್ಥಿತಿಯಲ್ಲಿದ್ದಾರೆ".
ಮಾರ್ಟಿನ್ ಲೂಥರ್ ಹೇಳಿದಂತೆ ದುರ್ಜನರ ದುಷ್ಟತನಕ್ಕಿಂತ ಸಜ್ಜನರ ಮೌನ ಸಮಾಜಕ್ಕೆ ಅತ್ಯಂತ ಅಪಾಯಕಾರಿ, ಆದ್ದರಿಂದ ಮಿತ್ರರೇ ನಿಮಗೂ ಸ್ವಾಭಿಮಾನ ವಿದೆ ಎಂಬುದನ್ನು ಮರೆಯದಿರಿ ನಿಮ್ಮಲ್ಲಿನ ಜಡತ್ವ ತೊರೆದು ವ್ಯವಸ್ಥೆಯ ದೋಷಗಳ ವಿರುದ್ದ ಪ್ರತಿಭಟಿಸಿ, ಸಿದ್ದಾಂತ ಗಳಿರುವುದು ಗಂಟು ಮೂಟೆ ಕಟ್ಟುವುದಕ್ಕಲ್ಲ ಸೈದ್ದಾಂತಿಕ ಬದುಕಿಗೆ ನೆನಪಿರಲಿ..

Sunday, June 14, 2009

ಮಹಿಳಾ ಮೀಸಲಾತಿಯ ಗ್ರಹಣವೂ, ದಲಿತ ಮೀಸಲಾತಿಯ ಚರ್ಚೆಯೂ...!

"Nature has given women so much power that the law has very wisely given them little," said Samuel ಜಾನ್ಸನ್ ಕಳೆದ ವಾರ ಸಂಸತ್ ನಲ್ಲಿ ಮಹಿಳಾ ಮೀಸಲು ವಿಧೇಯಕದ ಗದ್ದಲವೇರ್ಪಟ್ಟಿತ್ತು ಈ ಸಂಧರ್ಭ ಸ್ಯಾಮುಯೆಲ್ ಜಾನ್ಸನ್ ರ ಮಾತು ನೆನಪಿಗೆ ಬಂತು ಮಹಿಳೆಯರನ್ನು ಸಮಾನವಾಗಿ ಕಾಣುವ ಅವರಿಗೂ ನಮ್ಮಷ್ಟೇ ಹಕ್ಕುಗಳಿವೆ ಎನ್ನುವ ಮಾತುಗಳಿಗೇನು ಕಡಿಮೆ ಇಲ್ಲ. ಇದು ಶತಮಾನಗಳಿಂದಲೂ ಬಂದಿದೆ. 12ನೇ ಶತಮಾನದ ಬಸವೇಶ್ವರರು ಇಂತಹದ್ದೊಂದು ತಾರತಮ್ಯವನ್ನು ವಿರೋಧಿಸಿ ಸಿಡಿದೆದ್ದು ಬ್ರಾಹ್ಮಣ್ಯವನ್ನು ತ್ಯಜಿಸಿ ಹೊಸ ಧರ್ಮವನ್ನು ಆರಂಭಿಸಿದರು (ಈಗ ಅದೇ ಧರ್ಮ,ಕೆಲವುಅವಿವೇಕಿ ಗಳಿಂದ ಜಾತಿಯಾಗಿ ಬದಲಾಗಿರುವುದು ಬೇರೆ ಮಾತು ಬಿಡಿ!) ಹೊಸ ಸಮಾಜದ ಕನಸುಗಳನ್ನು ಬಿತ್ತಿದರು, ಆದರ್ಶವಾಗಿಯೇ ಬದುಕಿ ಗತಿಸಿಹೋದರು. ಅವರ ನಂತರ ಎಷ್ಟೋ ಮಂದಿ ಮಹಿಳೆಯರ ಸಮಾನತೆಗಾಗಿ ಧ್ವನಿಯೆತ್ತಿದರು. ಆದರೆ ಅದನ್ನು ಶಾಸನಾತ್ಮಕವಾಗಿ ರೂಪಿಸಲು ಮೊದಲ ಧ್ವನಿಯೆತ್ತಿದ್ದು ಮಾತ್ರ ಡಾ. ಬಿ ಆರ್ ಅಂಬೇಡ್ಕರ್. ಭಾರತೀಯ ಸಮಾಜ ಸನಾತನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಹೊಂದಿದೆ, ಈ ನಡುವೆ ಹಲವು ಕಳಂಕಿತ ಸಾಮಾಜಿಕ ವೈರುಧ್ಯಗಳನ್ನು ತನ್ನ ಉಡಿಯಲ್ಲಿ ತುಂಬಿಕೊಂಡಿದೆ. ಅವು ಪ್ರತಿನಿತ್ಯ ನಮ್ಮ ನಡುವೆ ಕಾಣ ಸಿಕ್ಕರೂ ಪ್ರಸಕ್ತ ಪರಿಸರದಲ್ಲಿ ಮಾಮೂಲು ಸಂಗತಿಗಳಾಗಿ ಪರಿಗಣಿತವಾಗಿರುವುದರಿಂದ ಮಹಿಳೆಯರಿಗೆ ಮತ್ತು ಶೋಷಿತ ಸಮುದಾಯದ ದುರ್ಬಲರಿಗೆ ನಿರಂತರ ಅನ್ಯಾಯ ನಡೆಯುತ್ತಲೇ ಇದೆ. ಎತ್ತರದಲ್ಲಿ ನಿಂತು ಇಂತಹ ವಿಚಾರಗಳ ಬಗ್ಗೆ ಯೋಚಿಸುವ ಧಾಟಿಯೇ ಬೇರೆ, ಅದೇ ರೀತಿ ಸಮಾನತೆ ಹಕ್ಕು ಕಳಕೊಂಡವರ ನಡುವೆ ಒಬ್ಬರಾಗಿ ಚಿಂತಿಸುವ ಧಾಟಿಯೇ ಬೇರೆ. ಎತ್ತರದಲ್ಲಿ ಮೇಲ್ನೋಟದ ಥಳಕು ಕಂಡು ಬಂದರೆ, ತಳ ಮಟ್ಟದಲ್ಲಿ ಅಂತರ್ಗತವಾದ ವಿಚಾರ ಕಾಣಬರುತ್ತದೆ. ಹಾಗಾಗಿ ತಳಮಟ್ಟದಲ್ಲಿ ಕಾಣಬರುವ ಎತ್ತರದ ಚಿಂತನೆ ಮಾತ್ರ ಸಮಾನತೆಯ ವಿಚಾರವನ್ನು ಸಮರ್ಥವಾಗಿ ಬಿಂಬಿಸಬಲ್ಲದು. ಈ ಮಾತು ಯಾಕೆ ಹೇಳ ಬೇಕಾಯಿತೆಂದರೆ. ಕಳೆದ ವರ್ಷದ ನವೆಂಬರ್ 2008ರಲ್ಲಿ ಇದೇ ಯುಪಿಎ ಸರ್ಕಾರ 2ಮಹತ್ವದ ಬಿಲ್ ಗಳನ್ನು ಸಂಸತ್ ಮುಂದೆ ತಂದಿತ್ತು. ಅವುಗಳ ಪೈಕಿ ಒಂದು ಮಹಿಳೆಯರಿಗೆ ರಾಜಕೀಯ ಮೀಸಲಾತಿ,ಇನ್ನೊಂದು ಸರ್ಕಾರಿ ಸ್ವಾಮ್ಯದ ಕಾರ್ಪೊರೇಟ್ ವಲಯದಲ್ಲಿ ದಲಿತ ಮೀಸಲಾತಿಯನ್ನು ನಿರ್ಬಂದಿಸುವುದು. ಆದರೆ ಇವೆರಡಕ್ಕೂ ವಿರೋಧಿ ಅಲೆ ಕಂಡು ಬಂದಿದ್ದರಿಂದ ಮತ್ತು ಲೋಕಸಭಾ ಚುನಾವಣೆ ಘೋಷಣೆ ಯಾಗಿದ್ದರಿಂದ ರಾಜ್ಯ ಸಭೆಗೆ ಸದರಿ ವಿಧೇಯಕ ಕಳುಹಿಸಲ್ಪಟ್ಟಿತ್ತು. ಈಗ ಅದೇ ಯುಪಿಎ ಸರ್ಕಾರ ಮತ್ತೆ ಕೆಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿದೆ. ಮೊದಲ ಕಂತಾಗಿ ಆರಂಭದ ಅಧಿವೇಶನದಲ್ಲಿಯೇ ಮಹಿಳೆಯರಿಗೆ ರಾಜಕೀಯವಾಗಿ ಶೇ.50ರ ಮೀಸಲಾತಿ ನೀಡುವ ವಿಧೇಯಕ ಮಂಡಿಸುವ ಮಾತನಾಡಿದೆ. ಸಂಸದ ಶರದ್ ಯಾದವ್ ಮೊದಲ ದಿನವೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ, ಸದರಿ ವಿಧೇಯಕ ಅನುಮೋದನೆಯಾದರೆ ವಿಷ ಕುಡಿಯುವ ಮಾತನಾಡಿದ್ದಾರೆ. ಇದೆಲ್ಲ ಎಷ್ಟು ಸರಿ ಮಹಿಳೆಯರಿಗೆ ಮೀಸಲಾತಿ ಕೊಡುವುದು ಎಂದರೇನು? ಅದೇನು ರಾಜಕಾರಣಿಗಳ ಮುತ್ತಾತಂದಿರ ಸ್ವತ್ತೆ? ತಾನು ಜನಿಸಿದ್ದು ಒಬ್ಬ ಮಾತೆಯಿಂದ, ಸಮಾಜದೊಂದಿಗೆ ತೆರೆದುಕೊಳ್ಳುವ ಮೊದಲ ಪಾಠ ಕಲಿಸುವ ಅಮ್ಮನಿಗೆ ಮೀಸಲಾತಿಯ ನಿರ್ಬಂದ ಬೇಕೆ? ನೋಡಿ ನಮ್ಮ ಧಾರ್ಮಿಕ ನಿಬಂಧನೆಗಳೇನೇ ಇರಲಿ ಪ್ರತಿ ಹೆಣ್ಣಿಗೂ ಒಂದು ಇತಿಮಿತಿಯಲ್ಲಿ ಮುಕ್ತ ವಾತಾವರಣಕ್ಕೆ ತೆರೆದು ಕೊಳ್ಳುವ ಅವಕಾಶವಿದ್ದೇ ಇದೆ. ಇಂತಹದ್ದಕ್ಕೆ ಪುರುಷ ಸಮಾಜ ವ್ಯವಸ್ಥಿತವಾದ ರೀತಿಯಲ್ಲಿ ಮೂಗುದಾರ ಹಾಕುವುದು ನಿರ್ಬಂದಿಸುವುದು ತಪ್ಪಾಗುತ್ತದೆ. ಸಮಾಜದ ಮುಖ್ಯವಾಹಿನಿಯಲ್ಲಿ ಮಹಿಳೆಯರು ಪಾಲ್ಗೊಳ್ಳಲು ಮುಕ್ತ ಅವಕಾಶ ಲಭ್ಯವಾಗಬೇಕಿದೆ. ಸದರಿ ಅವಕಾಶದ ಬಳಕೆಯಾಗಬೇಕಾದರೆ ರಾಜಕೀಯ ಶಕ್ತಿ ಅತ್ಯಗತ್ಯ. ಆದರೆ ಅಲ್ಲಿಯೂ ಅಧಿಕಾರ ಹಿಡಿವ ಹೆಣ್ಣಿನ ಹಿಂದೆ ಪುರುಷ ಪರೋಕ್ಷವಾಗಿ ಅಧಿಕಾರ ಚಲಾಯಿಸುವುದನ್ನು ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಕಾಣಬಹುದು. ಆದಾಗ್ಯೂ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಸರಿಯಾದ ಪ್ರಾತಿನಿದ್ಯ ಸಿಗುತ್ತಿಲ್ಲ. ಇವತ್ತು ಶಾಸನ ಸಭೆಗಳಲ್ಲಿ ಮಹಿಳೆ ಮೀಸಲಾತಿಗೆ ಬೊಬ್ಬೆ ಹಾಕುತ್ತಿರುವ ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷಗಳಲ್ಲಿ ಹಾಗೂ ಟಿಕೆಟ್ ಹಂಚಿಕೆವೇಳೆ ಎಷ್ಟು ಮಂದಿ ಮಹಿಳೆಯರಿಗೆ ಮಣೆ ಹಾಕಿದ್ದಾರೆ ಎನ್ನುವ ಪ್ರಶ್ನೆಯೂ ಮುಖ್ಯವಾಗುತ್ತದೆ. ಕನಿಷ್ಟ ಶೇ.5ರಷ್ಟು ಸಹಾ ಪ್ರಾತಿನಿದ್ಯ ನೀಡದ ರಾಜಕೀಯ ಪಕ್ಷಗಳಿಗೆ ಮತ್ತು ಮುಖಂಡರಿಗೆ ಶೇ.50ರ ಮೀಸಲು ಪ್ರತಿಪಾದಿಸುವ ಹಕ್ಕಿದೆಯೇ? ಶೇ.33ರ ಮೀಸಲು ಕೊಡಲು ಹಲವು ದಶಕಗಳಿಂದ ಹಿಂಜರಿದವರು ಶೇ.50ರ ಮೀಸಲು ಕೊಟ್ಟಾರೆಯೇ? ಇನ್ನೊಂದು ವಿಚಾರ ಮಹಿಳಾ ಮೀಸಲು ವಿಧೇಯಕ ಅನುಮೋದನೆ ಗೊಳ್ಳುವಾಗ ಸದರಿ ಮೀಸಲಾತಿ ಅರ್ಹರಿಗೆ ತಲುಪುವಂತೆ ಹಾಗೂ ದುರ್ಬಲ ವರ್ಗದವರಿಗೂ ಸ್ಥಾನ ಲಭಿಸುವಂತೆ ಪರಿಷ್ಕರಣೆ ಯಾಗಬೇಕು. ಇಲ್ಲದಿದ್ದಲ್ಲಿ ತಲೆಮಾಸಿದ ರಾಜಕಾರಿಣಿಯರು, ರಾಜಕೀಯ ಮುಖಂಡರ ಅಂತಪುರದ ಗೆಳತಿಯರು , ಮೇಲ್ವರ್ಗೆದ ಶೋಕಿವಾಲಿಗಳು ಮಹಿಳಾ ಮೀಸಲು ಅತಕ್ರಮಿಸುವ ಅಪಾಯವಿದೆ.
ಇನ್ನು ದಲಿತ ಮೀಸಲಾತಿಯ ವಿಚಾರಕ್ಕೆ ಬರೋಣ. ಕಳೆದ ವಾರ ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಯಡಿಯೂರಪ್ಪ ಜಾತಿ ಸಮಾವೇಶವೊಂದರಲ್ಲಿ ಮಡಿವಾಳ ಜನಾಂಗವನ್ನು ಎಸ್ಸಿ ಪಟ್ಟಿಗೆ ಸೇರಿಸುವ ಮಾತನಾಡಿದ್ದಾರೆ, ಈಗ್ಯೆ 2ವರ್ಷಗಳ ಹಿಂದೆ ಪಕ್ಕದ ರಾಜ್ಯವೊಂದರ ಉದಾಹರಣೆ ನೀಡಿ ಉಪ್ಪಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸುವ ಮಾತುಗಳು ಕೇಳಿಬಂದಿತ್ತು. ನಿಮಗೆ ತಿಳಿದಿರಲಿ ಸಂವಿದಾನಾತ್ಮಕವಾಗಿ ಇರುವ ಒಟ್ಟು ಮೀಸಲಾತಿಯಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಶೇ.೨೭ ಹಾಗೂ ಪರಿಶಿಷ್ಟ ಜಾತಿಗೆ ಶೇ.೧೫, ಪರಿಶಿಷ್ಠ ಪಂಗಡಕ್ಕೆ ಶೇ.೭ ರ ಮೀಸಲಾತಿಯನ್ನು ರಾಜಕೀಯ, ಶಿಕ್ಷಣ, ಉದ್ಯೋಗದಲ್ಲಿ ಕೊಡಮಾಡಿದೆ. ಈ ಪೈಕಿ ಸಂಘಟಿತ ಪ.ಜಾತಿಯವರು ನಿರಂತರ ಹೋರಾಟದ ಮೂಲಕ ಶೇ.೭.5ರ ಮೀಸಲಾತಿ, ಪ.ಪಂಗಡದವರು ಶೇ.೨.5ರ ಮೀಸಲು ಅನುಭವಿಸುತ್ತಿದ್ದರೆ. ಒಟ್ಟು ಸಮಾಜವಾಗಿ ಸಂಘಟಿತರಾಗದ ಹಿಂ.ವರ್ಗಗಳು ಶೇ.2ರ ಮೀಸಲಾತಿ ಮಾತ್ರ ಗಳಿಸುವಲ್ಲಿ ಯಶಸ್ವಿಯಾಗಿವೆ. ಪಕ್ಕದ ಆಂದ್ರ ಹಾಗು ತಮಿಳುನಾಡಿನಲ್ಲಿ ಮಾತ್ರ ಹಿಂ.ವ. ದವರ ಮೀಸಲು ಪೂರ್ಣಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಅದಕ್ಕಾಗಿ ಸುಗ್ರೀವಾಜ್ನೆ ಮೂಲಕ ವಿಧೇಯಕ ತರಲಾಗಿದೆ. ದೇಶದ ೊಟ್ಟು ಜನಸಂಖ್ಯೆ ಶೇ.52ರಷ್ಟು ಪ್ರಮಾಣದಲ್ಲಿ ಹಿಂ.ವ. ಮಂದಿ ಇದ್ದಾರೆ. ಹೀಗಿರುವಾಗ ಎಸ್ಸಿ ಪಟ್ಟಿಒಂದರಲ್ಲೇ ಸುಮಾರು ೧೦೧ ಜಾತಿಗಳು ಸೇರ್ಪಡೆಯಾಗಿವೆ. ಹರಿಜನರ ಮೀಸಲು ಇತರೆ ಜನಾಂಗದೊಂದಿಗೆ ಹರಿದು ಹಂಚಿ ಹೋಗಿದೆ. ಹೀಗಿರುವಲ್ಲಿ ಮತ್ತೆ ಮತ್ತೆ ಈ ಪಟ್ಟಿಗೆ ನಾನಾ ಕಾರಣಗಳಿಂದ ಸೇರ್ಪಡೆಯಾಗುವವರ ಪಟ್ಟಿ ಬೆಳೆಯುತ್ತಲೇ ಇದೆ. ಅದೇ ರೀತಿ ಹಿಂ.ವ. ಪಟ್ಟಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ೨೩೯೯ ಜಾತಿಗಳಿದ್ದರೆ, ರಾಜ್ಯದಲ್ಲಿ ೧೮೫ ಜಾತಿಗಳಿವೆ. ಸದರಿ ಪಟ್ಟಿಗೂ ಮೇಲ್ಪದರದಲ್ಲಿ ಬರುವ ಸಾದರ ಲಿಂಗಾಯಿತರ ಸೇರ್ಪಡೆಯಾಗುತ್ತಿದೆ. ಹೀಗೆ ಎಲ್ಲ ಜಾತಿಗಳನ್ನು ಹಿಂದುಳಿದವರ್ಗಗಳ ಪಟ್ಟಿಗೆ ಎಸ್ಸಿ ಪಟ್ಟಿಗೆ ಸೇರಿದರೆ ಮೀಸಲಾತಿಯ ಅರ್ಥ ಉಳಿದೀತೆ? ಒಂದು ಮೀಸಲಾತಿ ಹಣ್ಣನ್ನು 100ಮಂದಿ ಹಂಚಿ ತಿನ್ನಲಾದಿತೇ? ಹೀಗಾದರೆ ಸಾಮಾಜಿಕ ನ್ಯಾಯ ಎಲ್ಲಿ ಸಿಕ್ಕೀತು. ಇನ್ನೂ ರಾಜಕೀಯ ಮೀಸಲಾತಿ ವಿಚಾರ, ದಲಿತ ಮೀಸಲಾತಿಯನ್ನು ಮೊದಲಿಗೆ 330ರ ಪರಿಚ್ಛೆದದ ಪ್ರಕಾರ ಮೊದಲ 20ವರ್ಷಗಳಿಗೆ ಮಾತ್ರ ನೀಡಲಾಗಿತ್ತು. ಆದರೆ ಈಗ ಎಷ್ಟು ವರ್ಷಕಳೆದಿದೆ? ಯಾಕಿನ್ನೂ ರಾಜಕೀಯ ಮೀಸಲಾತಿ ನೀಡಲಾಗುತ್ತಿದೆ. ರಾಜಕೀಯ ಮೀಸಲಾತಿ ಪಡೆದವರು ಅವರನ್ನು ನಂಬಿಕೊಂಡವರಿಗೆ ಮಾಡಿದ್ದೇನು? ಇವತ್ತು ಏನೇ ಮೀಸಲಾತಿ ಇದ್ದರೂ ಪ.ಜಾ/ಪ.ಪಂ ಮತ್ತು ಹಿಂ.ವ.ಮಂದಿಗೆ ಸರ್ಕಾರಿ ನೌಕರಿ ಇದ್ದರೆ, 1ಲಕ್ಷದಷ್ಟು ವಾರ್ಷಿಕ ಆದಾಯ ಹೊಂದಿರುವವರಿಗೆ ಮೀಸಲಾತಿ ಇಲ್ಲ ಅಂತಹವರು ಮುಲಾಜಿಲ್ಲದೇ ಮೇಲ್ಪದರಕ್ಕೆ ಬರುತ್ತಾರೆ. ಆದರೆ ರಾಜಕಾರಣಿಗಳಿಗೆ ಹಾಗಿಲ್ಲ ಯಾವುದೇ ಆದಾಯದ ಇತಿಮಿತಿಯಿಲ್ಲದೇ ಕೋಟ್ಯಾಧಿಶರಾಗಿದ್ದರೂ ಸಹಾ ರಾಜಕೀಯ ಮೀಸಲಾತಿ ನೀಡಲಾಗುತ್ತಿದೆ. ಇದು ಸರಿಯೇ? ಹಾಗೆ ರಾಜಕೀಯ ಮೀಸಲು ಸ್ಥಾನಗಳಿಂದ ಗೆದ್ದು ಬಂದವರು ಆಯಾ ಕ್ಷೇತ್ರದ ಜನರಿಗೆ ಮಾತ್ರ ಸೇವೇ ನೀಡುತ್ತಾರೆಯೇ ವಿನಹ ತನ್ನ ವ್ಯಾಪ್ತಿಗೊಳಪಡುವ ಇತರೆ ಪ್ರದೇಶಗಳ ಜನರ ಕಷ್ಟ ಸುಖ ಕೇಳಲಾರರು. ಉದಾಹರಣೆಗೆ ಒಂದು ಜಿಲ್ಲೆ ಅಂದರೆ ಅಲ್ಲಿನ ಹತ್ತು ಸ್ಥಾನಗಳ ಪೈಕಿ ಒಂದು ಮೀಸಲು ಕ್ಷೇತ್ರವಾಗುತ್ತದೆ. ಅಲ್ಲಿ ಗೆದ್ದವನು ಇಡೀ ಜಿಲ್ಲೆಯ ಸಮುದಾಯದ ಹಿತಕಾಯಬೇಕಲ್ಲವೇ? ಹೀಗೆ ಪ.ಜಾ/ಪ.ಪಂ. ಮತ್ತು ಹಿಂ.ವ.ಗಳಿಗೆ ನೀಡಿರುವ ಮೀಸಲಾತಿ ಬಗ್ಗೆ ಮಹತ್ವದ ಚರ್ಚೆ ಯಾಗಬೇಕಿದೆ. ಮೀಸಲಾತಿಯ ಮೂಲ ಆಶಯ ದಿಕ್ಕು ತಪ್ಪುವುದಾದರೆ ಅದರ ಅಗತ್ಯವಾದರೂ ಏನು?

Sunday, June 7, 2009

ಶಿಕ್ಷಣ ಮತ್ತು ಶಿಕ್ಷಕರ ಸಂಘದ ಚುನಾವಣೆಯು.......

ರಾಜ್ಯದಲ್ಲಿ ಈ ಬಾರಿ 500ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎಂದರು ಶಿಕ್ಷಣ ಇಲಾಖೆಯ ನನ್ನ ಪರಿಚಯದ ಅಧಿಕಾರಿ ಮಿತ್ರರು. ಅರೆಕ್ಷಣ ಯೋಚಿಸಿದೆ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಯಾವುದರಲ್ಲಿ ಕಡಿಮೆ ಇವೆ? ನನಗೆ ತಿಳಿದಿರುವ ಮಟ್ಟಿಗೆ ಸ್ವತಂತ್ರ ಭಾರತದಲ್ಲಿ ೧೯೬೮, ೧೯೮೬ ಹಾಗೂ 1992ರಲ್ಲಿ ಶಿಕ್ಷಣದ ಗುಣ ಮಟ್ಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಶಿಕ್ಷಣ ನೀತಿಗಳು ಪರಿಷ್ಕರಣೆಯಾಗಿವೆ. ಶಿಕ್ಷಣದ ಮೂಲಭೂತ ಸೌಕರ್ಯ ಅಭಿವೃದ್ದಿಗೆ
ಸರ್ವ ಶಿಕ್ಷಣ ಅಭಿಯಾನ ಯೋಜನೆ ಜಾರಿಗೆ ಬಂದಿದೆ. ಸದರಿ ಯೋಜನೆಯಡಿಯಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಶಿಕ್ಷಣಕ್ಕಾಗಿ ವ್ಯಯಿಸಲಾಗುತ್ತಿದೆ.ಮಕ್ಕಳು ಈಗ ಆರಾಮವಾಗಿ ತಾವಿರುವ ಹಳ್ಳಿಗಳಲ್ಲಿ, ಊರುಗಳಲ್ಲಿ, ನಗರಗಳಲ್ಲಿ ಸುಸಜ್ಜಿತ ಸರ್ಕಾರಿ ಶಾಲೆಗಳಿ ಹೋಗಿ ಶಿಕ್ಷಣ ಪಡೆಯಬಹುದು, ಉತ್ತಮ ಕಟ್ಟಡ, ಕುಡಿಯುವ ನೀರಿನ ವ್ಯವಸ್ಥೆ, ಉಚಿತ ಸಮವಸ್ತ್ರ, ಪಠ್ಯ ಪುಸ್ತಕ, ಬೈಸಿಕಲ್, ಬಿಸಿಯೂಟ ಹಾಗೂ ಅರ್ಹತೆ ಮಾನದಂಡದಲ್ಲಿ ಆಯ್ಕೆಯಾಗುವ ಪ್ರತಿಬಾವಂತ ಶಿಕ್ಷಕರ ಪಾಠ ಇವೆಲ್ಲ ಇದ್ದರೂ ಶಾಲೆಗಳು ಮಕ್ಕಳಿಲ್ಲದೇ ಮುಚ್ಚುವ ಪರಿಸ್ಥಿತಿಗೆ ಬರುತ್ತಿದೆ ಹೌದಲ್ವ ? ಹಾಗಾದರೆ ಇಂತಹದ್ದೊಂದು ಪರಿಸ್ಥಿತಿಗೆ ಕಾರಣಗಳೇನು?.
ಖಾಸಗಿ ಶಾಲೆಗಳೇ? ಪೋಷಕರ ಮನೋಭಾವವೇ? ಶಿಕ್ಷಕರ ಧೋರಣೆಯೇ? ನಮ್ಮ ಶಿಕ್ಷಣ ನೀತಿಯೇ? ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ? ಯೋಜನೆಗಳ ಅನುಷ್ಠಾನದ ಹಿನ್ನೆಡೆಯೇ? ಹೀಗೆ ಹತ್ತು ಹಲವು ಪ್ರಶ್ನೆಗಳು ನಮ್ಮ ಮುಂದೆ ಹಾದು ಹೋಗುತ್ತವೆ. ಕಳೆದ ವರ್ಷ ಇದೇ ಸಂಧರ್ಭದಲ್ಲಿ ಇಂತಹದ್ದೊಂದು ಪರಿಸ್ಥಿತಿಗೆ ಕಾರಣವೇನು? ಎಂಬ ಪ್ರಶ್ನೆಯಿಟ್ಟುಕೊಂಡು ಸುದ್ದಿ ವಾಹಿನಿಯೋದು ಚರ್ಚೆ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು. ಆಗ ಖಾಸಗಿ ಶಾಲೆಗಳ ಬಗ್ಗೆ ವಕಾಲತ್ತು ವಹಿಸಿದ್ದ ಮಹನೀಯರೊಬ್ಬರು ಸರ್ಕಾರಿ ವ್ಯವಸ್ಥೆಗಿಂತ ಉಚ್ಚಮಟ್ಟದ ಮೂಲ ಸೌಕರ್ಯ ಒದಗಿಸಿ ದುಡ್ಡು ವಸೂಲು ಮಾಡುತ್ತೇವೆ ಇದನ್ನು ಯಾರು ಪ್ರಶ್ನಿಸುವಂತಿಲ್ಲ ಎಂದಿದ್ದರು, ಅಂತಹದ್ದೊಂದು ಸಮರ್ಥನೆಯನ್ನು ಒಪ್ಪಲು ಸಾಧ್ಯವಿಲ್ಲದಿದ್ದರೂ ಸರ್ಕಾರ ಶಿಕ್ಷಣದ ಸುಧಾರಣೆಗೆ ಮಾಡುತ್ತಿರುವ ಪ್ರಯತ್ನಕ್ಕೆ ಹೋಲಿಸಿದರೆ ಖಾಸಗಿ ಶಾಲೆಗಳು ಏನೇನೂ ಅಲ್ಲ. ಏಕೆಂದರೆ ಸರ್ಕಾರಿ ಶಾಲೆಗಳಿಗಿಂತ ಉತ್ತಮ ಸೌಲಭ್ಯವೇನಾದರು ಖಾಸಗಿ ಶಿಕ್ಷಣ ಸಂಸ್ಥೆಗಳು ಒದಗಿಸುತ್ತಿದ್ದರೆ ಅದೂ ಪದವಿ ವೃತ್ತಿ ಪರ ಶಿಕ್ಷಣದಲ್ಲಿ ಮಾತ್ರ. ಉಳಿದಂತೆ ಮಾದ್ಯಮಿಕ ಹಂತದಿಂದ ಪ್ರೌಡಶಾಲೆ ಹಂತದವರೆಗೂ ಸರ್ಕಾರಿ ಶಾಲೆಗಳ ಶಿಕ್ಷಣ ಮತ್ತು ಸೌಲಭ್ಯದ ಮುಂದೆ ಖಾಸಗಿ ಶಾಲೆಗಳ ಶಿಕ್ಷಣ ಏನೇನೂ ಅಲ್ಲ. ಇನ್ನು ಅತ್ಯಂತ ವ್ಯವಸ್ತಿತವಾಗಿ ಶಿಕ್ಷಣದ ವ್ಯಾಪಾರೀಕರಣಕ್ಕಿಳಿದಿರುವ ದಕ್ಷಿಣ ಕನ್ನಡದ ಹಲವು ಶಿಕ್ಷಣ ಸಂಸ್ಥೆಗಳು ದುಬಾರಿ ಶುಲ್ಕ ಪಾವತಿಸಿಕೊಂಡು ಉಳ್ಳವರಿಗೆ ಮತ್ತು ಅತೀ ಬುದ್ದಿವಂತರನ್ನು ಆಯ್ಕೆಮಾಡಿಕೊಂಡು ಪ್ರಗತಿ ಸಾಧಿಸುತ್ತಿವೆ ಎನ್ನಬಹುದು. ಉಳಿದಂತೆ ಕೇಂದ್ರೀಯ ಶಾಲೆ ಎಂಬ ಹೆಸರಿನಲ್ಲಿ , ಶಾಲೆಗಳಿಗೆ ಆಂಗ್ಲ ಹೆಸರಿಡುವ ಮೂಲಕ, ಕೇಂದ್ರ ಪಠ್ಯ ಕ್ರಮ ಹೀಗೆ ಒಂದಿಲ್ಲೊಂದು ಗಿಮಿಕ್ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳು ಮೇಲ್ ಮಧ್ಯಮ, ಮದ್ಯಮ ವರ್ಗದವರ ಮಕ್ಕಳನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ಧಾರ್ಮಿಕತೆ ಮತ್ತು ಜ್ಞಾನ ಪ್ರಸಾರದ ಪ್ರತಿನಿಧಿಗಳಾಗಬೇಕಿದ್ದ ಮಠಾಧಿಪತಿಗಳು (ಕೆಲವರು ಮಾತ್ರ) ಶಿಕ್ಷಣದ ವ್ಯಾಪಾರೀಕರಣಕ್ಕೆ ನಿಂತು ಸರ್ಕಾರಿ ವ್ಯವಸ್ಥೆಗೆ ಸಡ್ಡು ನಿಂತಿದ್ದಾರೆ. ಇದರಿಂದಾಗಿ ಪೋಷಕರು ಜಾಗತೀಕರಣದ ಬಿಸಿಯ ಪ್ರಭಾವವೋ ಎಂಬಂತೆ ಆಂಗ್ಲ ಮಾಧ್ಯಮದ ಆಸೆಗೆ ಬಲಿ ಬಿದ್ದು ಸಾಲವೋ ಸೋಲವೋ ಮಾಡಿ ಮಕ್ಕಳನ್ನು ಖಾಸಗಿ ಆಂಗ್ಲ ಶಾಲೆಗಳಿಗೆ ಸೇರಿಸಲು ಮುಗಿಬೀಳುತ್ತಿದ್ದಾರೆ(ಮುಂದೆ ಶಿಕ್ಷಣ ಕಲಿತ ಆ ಮಗು ತಂದೆ-ತಾಯಿರನ್ನೇ ಅನಾಥರನ್ನಾಗಿ ಮಾಡಿ ತನ್ನ ಲೆವೆಲ್ ನೋಡಿ ಕೊಂಡು ಬೇರೆ ಹೋಗುವುದು ಆಮೇಲಿನ ಮಾತು ಬಿಡಿ). ಸರ್ಕಾರಿ Sಯೋಜನೆಗಳು, ಆಂಧೋಲನಗಳು ಇವರಿಗೆ ಕಣ್ಣಿಗೆ ಕಾಣುತ್ತಿಲ್ಲ ಹೀಗೇಕೆ?. ಇನ್ನೊಂದು ದುರಂತದ ಸಂಗತಿ ಏನು ಗೊತ್ತಾ? ಪೋಷಕರಿರಲಿ ಸ್ವತ: ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ತಮ್ಮ ಮಕ್ಕಳನ್ನು (ಬೆರಳೇಣಿಕೆ ಮಂದಿಯನ್ನು ಹೊರತುಪಡಿಸಿ) ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ, ಮತ್ತು ಸೇರಿಸಿದ್ದಾರೆ. ಅದಕ್ಕಾಗಿಯೇ ಶೇ.95ರಷ್ಟು ಶಿಕ್ಷಕರು ಮತ್ತು ಅಧಿಕಾರಿಗಳು ನಗರ ಕೇಂದ್ರಿತ ಪ್ರದೇಶಗಳಿಗೆ ತಮ್ಮ ವಾಸಸ್ಥಾನ ಬದಲಿಸಿದ್ದಾರೆ. ಶಿಕ್ಷಕರು ಹಳ್ಳಿ ಶಾಲೆಗಳಿಗೆ ಪ್ರತಿನಿತ್ಯ ನಗರ ಪ್ರದೇಶಗಳಿಂದಲೇ ಸಂಚರಿಸುತ್ತಾರೆ. ಇದಕ್ಕೆ ಅವರು ಕೊಡುವ ಉತ್ತರ ಮತ್ತು ಪ್ರಶ್ನೆ, ನಮ್ಮನ್ನೇ ಯಾಕೇ ಟಾರ್ಗೆಟ್ ಮಾಡ್ತೀರಿ? ಬೇರೆ ಇಲಾಖೆ ನೌಕರರ ಮಕ್ಕಳು ಹೋಗೋಲ್ವಾ? ಅಷ್ಟಕ್ಕೂ ನಮಗೆ ಹಳ್ಳಿಲೀ ಉಳಿಯೋಕೆ ಏನು ಕ್ವಾಟ್ರಾಸ್ ಕಟ್ಟಿಸಿ ಬಿಟ್ಟಿದಾರೆ ನೋಡಿ? . ಅಲ್ಲ ಸ್ವಾಮಿ ಸಮುದಾಯಕ್ಕೆ ಮಾದರಿಯಾಗಿ ನಿಲ್ಲಬೇಕಾದವರೇ ಹೀಗೆ ಪ್ರಶ್ನೆ ಕೇಳಿದರೆ ಆದೀತೆ?ಇನ್ನು ಯೋಜನೆಗಳ ಪ್ರಶ್ನೆ. ಸರ್ಕಾರಗಳು ಗಿಮಿಕ್ ಗಾಗಿಯೇ ಬಿಸಿಯೂಟ, ಸೈಕಲ್, ಪುಸ್ತಕ, ಸಮವಸ್ತ್ರ ನೀಡುತ್ತಾರೆ ಎನ್ನಲಾಗುತ್ತೆ, ಇಂತಹ ಆರೋಪಗಳ ಮಧ್ಯೆ ಶಿಕ್ಷಣ ಇಲಾಖೆಯ ನೌಕರರು ಯೋಜನೆ ಎಷ್ಟರ ಮಟ್ಟಿಗೆ ಯೋಜನೆ ಯಶಸ್ಸಿಗೆ ಶ್ರಮಿಸುತ್ತಾರೆ, ಎಷ್ಟು ಪಾರದರ್ಶಕವಾಗಿ ಮೂಲ ಸೌಕರ್ಯಾಭಿವೃದ್ದಿಗೆ ಮುಂದಾಗುತ್ತಾರೆ ಎಂದು ನೋಡಿದರೆ ಅಲ್ಲಿಯೂ ತೃಪ್ತಿದಾಯಕವಾದ ಉತ್ತರ ಸಿಗಲಾರದು. ನಮ್ಮದೂ ಅಂದು ಕೊಂಡು ಮಾಡುವವರ ಸಂಖ್ಯೆ ಕಡಿಮೆ ಬದಲಿಗೆ ಗಂಟೆ ಹೊಡೆದಾಗ ಶಾಲೆ, ಕರ್ತವ್ಯ ಎನ್ನುವಂತಾಗಿದೆ(ಇದಕ್ಕೆ ಅಪವಾದವೆಂಬಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವವರು ಇದ್ದಾರೆ), ಕೆಲವು ಶಿಕ್ಷಕರು ರಾಜಕೀಯ ಮಾಡಿಕೊಂಡೋ, ಇಲ್ಲವೇ ಶಿಕ್ಷಣ ಸುಧಾರಣೆ ಹಂತದಲ್ಲಿ ಸಿಕ್ಕಿರುವ ಸಿಆರ್ಪಿ, ಬಿಆರ್ಪಿ, ಸಿಎಇಓ ಹುದ್ದಗಳ ಜವಾಬ್ದಾರಿ ಅರಿವಿಲ್ಲದೇ ತಾವೇಹಿರಿಯ ಅಧಿಕಾರಿಗಳಂತೆ ವರ್ತಿಸುತ್ತಾದರ್ಪ ದಬಾವಣೆ ಮಾಡುತ್ತಾ ಕಾಲ ತಳ್ಳುತ್ತಿರುವ ಮಂದಿಗೂ ಕಡಿಮೆ ಏನಿಲ್ಲ.ಹೀಗಿರುವಾಗ ಯೋಜನೆ ಸಮರ್ಪಕ ಅನುಷ್ಠಾನ ಹೇಗೆ ಸಾಧ್ಯ? ಇನ್ನು ಶಿಕ್ಷಣ ನೀತಿ ವಿಚಾರಕ್ಕೆ ಬರೋಣ. ಸ್ವತಂತ್ರ ಭಾರತದ ನಂತರ ೨-೩ ದಶಕಗಳ ನಂತರ ರಾಷ್ಟ್ರೀಯ ಶಿಕ್ಷಣ ನೀತಿ ರಚಿಸಲು ಮುಂದಾದ ನಮ್ಮ ಸರ್ಕಾರಿ ವ್ಯವಸ್ಥೆ ಊರೆಲ್ಲ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು ಎಂಬಂತೆ ಖಾಸಗಿ ಶಾಲೆಗಳು ಊರ ತುಂಬಾ ಶುರುವಾದ ಮೇಲೆ ಸರ್ಕಾರಿ ಶಾಲೆಗಳನ್ನು ತೆರೆಯಲು, ಶಿಕ್ಷಕರ ನೇಮಕಾತಿ ಮಾಡಲು , ಮೂಲ ಸೌಕರ್ಯ ಒದಗಿಸಲು, ಸುಲಭ ಶಿಕ್ಷಣದ ಚಿಂತನೆಗೆ ಮುಂದಾದರೆ ಫಲವೇನು? ಬಿಸಿಯೂಟ ಯೋಜನೆ ಒಂದು ಉತ್ತಮ ಯೋಜನೆಯೇನೋ ಸರಿ ಇದು ಮಕ್ಕಳಿಗೆ ಆಹಾರ ಒದಗಿಸುವ ಜೊತೆಗೆ ಸಮಾನತೆಗೆ ಪೂರಕವಾಗಿ ಜಾರಿಗೆ ಬಂದಿದೆ. ಆದರೆ ಆಗಿರೋದು ಏನು ಸ್ವಾಮಿ ? ಪರಿಶಿಷ್ಠರು ಅಡುಗೆ ಕಾರ್ಯ ನಿರ್ವಹಿಸುವಲ್ಲಿ ಅನ್ಯ ಜಾತಿಯ ಮಕ್ಕಳು ಬಿಸಿಯೂಟ ಮಾಡೋಲ್ಲ, ಇನ್ನು ಕೆಲವೆಡೆ ಇದನ್ನು ಮನಗಂಡ ಸ್ಥಳೀಯ ಕುಹಕಿಗಳು ಪರಿಶಿಷ್ಠರನ್ನು ನಿಯಮ ಬಾಹಿರವಾಗಿ ಬದಿಗೆ ಸರಿಸಿ ಸವರ್ಣೀಯರಿಂದ ಅಡುಗೆ ಮಾಡಿಸಿ ಪರಿಶಿಷ್ಠರನ್ನು ಪಾತ್ರೆ ತೊಳೆಯುವ ಕೆಲಸಕ್ಕೆ ಹಚ್ಚಿವೆ ಇದು ಯೋಜನೆಯ ಅನುಷ್ಠಾನವೇ? ಇರಲಿ ಬಿಡಿ ಸರ್ಕಾರಿ ಶಾಲೆಗೆ ಬರುವವರಾದರೂ ಯಾರು ?
ಲಿತರು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲಾಗದ ಆರ್ಥಿಕ ದುರ್ಬಲರು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ದೊರಕದ ದಡ್ಡ ಮಕ್ಕಳು . ಅವರಲ್ಲೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ಕ್ಷೀಣಿಸುತ್ತಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬಂತೆ ಅವರೂ ಸಾಲ ಸೋಲ ಮಾಡಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ, ಹೀಗಾದರೆ ಸರ್ಕಾರಿ ಶಾಲೆಗಳ ಕಥೆ ಏನು? ಮೊದಲು ಶಿಕ್ಷಕರು ಸುಧಾರಣೆಯಾಗಬೇಕು , ಆಮೇಲೆ ಪೋಷಕರು ಆಮೇಲೆ ಯೋಜನೆ ಮತ್ತೊಂದು ಮಗದೊಂದು ಅಲ್ವಾ? ಈಗ ಶಿಕ್ಷಕರ ಚುನಾವಣೆ ನಡೆಯುತ್ತಿದೆ ಅಲ್ಲಿಯೂ ಜಾತಿಗಳ ವಿಂಗಡಣೆಯಾಗಿದೆ, ರಾಜಕೀಯ ಪಕ್ಷಗಳ ಚುನಾವಣೆ ಆಮಿಷದಂತೆ ಗುಂಡು ತುಂಡು ಪಾರ್ಟಿ ಯಾವ ೆಗ್ಗು ತಗ್ಗಿಲ್ಲದೇ ನಡೆಯುತ್ತಿದೆ. ಅವಿರೋಧವಾಗಿ ನಡೆಯಬಹುದಾಗಿದ್ದ ವ್ಯವಸ್ಥೆ ಏಕೆ ಹೀಗಾಯ್ತು ಎಂದರೆ ? ನಾವೇನು ಮನುಷ್ಯರಲ್ವ ಸ್ವಾಮಿ ಎನ್ನುತ್ತಾರೆ. ಹೌದು ಮನುಷ್ಯರೇ ಆದರೆ ಸಮಾಜದ ಮಾರ್ಗದರ್ಶಕ ಸ್ಥಾನದಲ್ಲಿರುವ ಅವರು ಸ್ವಲ್ಪವಾದರೂ ಸಿದ್ದಾಂತ ಮತ್ತು ನೈತಿಕತೆಯ ಚೌಕಟ್ಟಿನಲ್ಲಿ ಹೋಗಬೇಡವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...