Sunday, November 15, 2009

ದೌರ್ಜನ್ಯ ವಕೀಲಿಕೆಯ ಭಾಗವಾಗಿದೆಯೇನೋ ಎಂಬ ಅನುಮಾನ!


" ದೌರ್ಜನ್ಯ ವಕೀಲಿಕೆಯ ಭಾಗವಾಗಿದೆಯೇನೋ ಅನ್ನುವ ಅನುಮಾನ ಶುರುವಾಗಿದೆ,ನಿತ್ಯವೂ ಕಕ್ಷಿದಾರರ ಮೇಲೆ ವಿವಿಧ ರೀತಿಯ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ! ಅಪರೂಪಕ್ಕೊಮ್ಮೆ ಮಾಧ್ಯಮದವರ ಮೇಲೂ ದೌರ್ಜನ್ಯವಾಗಿದೆ. ನ್ಯಾಯವಾದಿಗಳು ನ್ಯಾಯಕ್ಕಾಗಿ ಹೋರಾಡುವುದಷ್ಟೇ ಅಲ್ಲ, ಅವರ ಹೋರಾಟದ ಹಾದಿಯೂ ನ್ಯಾಯ ಮಾರ್ಗದಲ್ಲಿರಲಿ!! "ಹೀಗೆಂದವರು ಜೀ ಕನ್ನಡ ವಾಹಿನಿಯ ಮಧುಸೂಧನ್. ಹೌದು ಇಂತಹದ್ದೊಂದು ಮಾತನ್ನು ಒಪ್ಪಬೇಕಾ? ಯಾಕೆ ಹೀಗೆ ಪುನರಾವರ್ತನೆಯಾಗುತ್ತಿದೆ? ಕಾನೂನು ಎಲ್ಲರಿಗೂ ಒಂದೇ ಅಲ್ಲವಾ? ಕರಿಕೋಟು ತೊಟ್ಟವರು ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಯಾಕೆ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ?? ಎಂಬೆಲ್ಲ ಪ್ರಶ್ನೆಗಳು ಪುನಹ ಕಾಡಿದ್ದು ಕಳೆದ ವಾರದ ಬೆಳವಣಿಗೆಯ ನಂತರ.

ಹೌದು ಯಾಕೆ ಹೀಗೆ ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ, ಕಾರ್ಯಾಂಗ,ಶಾಸಕಾಂಗ ಪ್ರಧಾನವಾಗಿದ್ದರೆ ಪ್ರತ್ಯೇಕವಾಗಿ ಪ್ರಜಾಪ್ರಭುತ್ವದ ಕಾವಲು ನಾಯಿಯಂತಿರುವುದು ಪತ್ರಿಕಾರಂಗ. ಇಲ್ಲಿ ಯಾರು ಹೆಚ್ಚು , ಯಾರು ಕಡಿಮೆ ಎಂಬ ವಿಚಾರಗಳ ಅವಲೋಕನ ಅನಗತ್ಯ. ಅವರವರದೇ ನೆಲೆಗಟ್ಟಿನಲ್ಲಿ ಅವರು ಹೆಚ್ಚು ಶಕ್ತರು ಹಾಗೂ ಸಮಾಜದಲ್ಲಿ ಜನಸಾಮಾನ್ಯರನ್ನು ಪ್ರತಿನಿಧಿಸುವವರು. ಎಲ್ಲರಿಗೂ ಅವರವರದೇ ಆದ ಗುರುತರ ಹೊಣೆಗಾರಿಕೆಗಳು ಇವೆ. ಹೀಗಿರುವಾಗ ಪರಸ್ಪರರನ್ನು ಗೌರವಿಸುವ, ಮತ್ತು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜವಾಬ್ದಾರಿ ಇರುತ್ತದೆ. ಅದೇ ಸಮಯದಲ್ಲಿ ಬಾಹ್ಯವಾಗಿ ನಮ್ಮ ನಡವಳಿಕೆಗಳು ಹೇಗೆ ಇರಬೇಕೆಂಬುದನ್ನು ಸಹಾ ಅರಿಯ ಬೇಕಾಗುತ್ತದೆ, ಯಾಕೆಂದರೆ ಅದು ಒಟ್ಟು ಸಮಾಜದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಹಾಗಾಗದಂತೆ ತಡೆಯಬೇಕಾದುದು ಪರಸ್ಪರರ ಕರ್ತವ್ಯ ಕೂಡ! ಆ ನಿಟ್ಟಿನಲ್ಲಿ ಕಳೆದ ವಾರ ಬೆಂಗಳೂರಿನ ಹೈಕೋರ್ಟ್ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬರ ಮೇಲೆ ನಡೆದ ಹಲ್ಲೆ ಹೆಚ್ಚು ಪ್ರಸ್ತುತವೆನಿಸುತ್ತದೆ ಕೂಡಾ. ಪ್ರಸಕ್ತ ಸಂಧರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಹಲ್ಲೆ ಮಾಮೂಲು ಸಂಗತಿಯಾಗಿದೆ, ಆದರೆ ಸಮಾಜದ ಒಂದು ಪ್ರಜ್ಞಾವಂತ ಗುಂಪಿನಿಂದ ಸಾರ್ವಜನಿಕ ಹಲ್ಲೆ ಕಾನೂನು ಮೀರಿ ನಡೆದಾಗ ಅದು ಪ್ರಶ್ನಾರ್ಹವೇ ಆಗಿದೆ. ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಸಿ ದಿನಕರನ್ ಅಕ್ರಮ ಆಸ್ತಿಗಳಿಸಿದ್ದಾರೆ ಹಾಗಾಗಿ ಅವರನ್ನು ಸುಪ್ರಿಂ ಕೋರ್ಟ್ ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಬೇಕು , ಅವರು ನ್ಯಾಯಾಲಯ ಕಲಾಪಗಳನ್ನು ನಡೆಸಬಾರದು ಎಂದು ಪ್ರತಿಭಟನೆ ನಡೆಸಿದರು. ಅದೂ ಕೋರ್ಟ್ ಆವರಣದಲ್ಲಿ ಮತ್ತು ಕಲಾಪ ನಡೆಯುವ ವೇಳೆ, ಕೆಲವು ನ್ಯಾಯಾಧೀಶರನ್ನು ಕೊಠಡಿಯೊಳಗೆ ಕೂಡಿಹಾಕಿದ್ದಲ್ಲದೇ, ಅಡ್ಡಿ ಪಡಿಸುವ ಯತ್ನವಾಗಿ ರಾಷ್ಟ್ರಗೀತೆಯನ್ನು ಹಾಡಲಾಯಿತು. ಈ ಸಂಧರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಮಾಧ್ಯಮ ಪ್ರತಿನಿಧಿಗಳು ಘಟನೆಯನ್ನು ಕಂಡರು ದೃಶ್ಯವಾಹಿನಿಗಳವರು ಚಿತ್ರೀಕರಿಸಿಕೊಂಡರು, ಅದು ಜನ ಸಾಮಾನ್ಯರ ಹಿತಾಸಕ್ತಿಯಿಂದ. ಆದರೆ ಇದನ್ನು ಸಹಿಸದ ಕೆಲವು ದುಷ್ಕರ್ಮಿ ವಕೀಲರುಗಳು( ಕ್ಷಮಿಸಿ ಎಲ್ಲರೂ ಅಲ್ಲ) ಸಿಎನ್ ಎನ್ ಐ ಬಿ ಎನ್ ಚಾನಲ್ ನ ಛಾಯಾಗ್ರಾಹಕ ವೆಂಕಟೇಶ್ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದರು, ಹಲವು ಪತ್ರಕರ್ತರನ್ನು ಮನಬಂದಂತೆ ಥಳಿಸಿದರು. ಇದು ವಕೀಲರುಗಳ ಹೋರಾಟದ ನ್ಯಾಯವಾದ ಮಾರ್ಗವೇ? ಇರಲಿ ಸ್ವಲ್ಪ ವಿಷಯಾಂತರ ಮಾಡೋಣ ಇಂತಹ ಹಲ್ಲೆಗಳು ಕೇವಲ ವಕೀಲರಿಂದ ಮಾತ್ರವೇ ಸಂಭವಿಸುತ್ತಿಲ್ಲ. ಸಮಾಜದ ಗಣ್ಯರೆನಿಸಿಕೊಂಡವರಿಂದಲೂ ಹಲ್ಲೆಗಳು ನಡೆದಿವೆ. ಕೆಲ ವರ್ಷಗಳ ಹಿಂದೆ ಮೈಸೂರಿನ ಪತ್ರಕರ್ತ ಸಂತೋಷ ನಡುಬೆಟ್ಟನನ್ನು ಚಾಮುಂಡಿ ಬೆಟ್ಟದ ಹಾದಿಯಲ್ಲಿ ಕ್ಷುಲ್ಲಕ ವಿಷಯಕ್ಕೆ ನಟ ಪುನೀತು ಬಡಿದಿದ್ದ, ನಾಗರಹೊಳೆ ಅರಣ್ಯದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಅಣ್ಣಯ್ಯ ಎಂಬಾತ ಈ ಟಿವಿ ಗೆಳೆಯರನ್ನು ಬಡಿದು ಕ್ಯಾಮೆರಾ ಹಾಳುಗೆಡವಿದ್ದ, ಹಾಸನದಲ್ಲಿಯೂ ಕೆಲವು ವಕೀಲರುಗಳಿಂದ ಪತ್ರಕರ್ತರ ಮೇಲೆ ದೌರ್ಜನ್ಯ ನಡೆದಿತ್ತು, ಮೊನ್ನೆ ಮೊನ್ನೆ ಶುಭಾಪೂಂಜಾ ಜೊತೆ ಕಾಣಿಸಿಕೊಂಡ ನಟ ವಿಜಯ್ ದೃಶ್ಯ ಮಾಧ್ಯಮದವರನ್ನು ತಡವಿಕೊಂಡಿದ್ದ ಹೀಗೆ ಅಂಕೆಗೆ ಸಿಗದಷ್ಟು ಲೆಕ್ಕದಲ್ಲಿ ಪತ್ರಕರ್ತರ ಮೇಲೆ ದೌರ್ಜನ್ಯ ನಿರಂತರವಾಗಿದೆ. ಯಾವ ಪ್ರಕರಣದಲ್ಲೂ ಇದುವರೆಗೂ ನ್ಯಾಯ ದಕ್ಕಿಲ್ಲ ಎಂಬುದು ದುರಂತದ ಸಂಗತಿಯೇ ಸರಿ. ಈ ಪ್ರಕರಣ ಕುರಿತು ಹೇಳಿಕೆ ನೀಡಿರುವ ರಾಜ್ಯದ ಕಾನೂನು ಸಚಿವ ಪ್ರಕರಣ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ಫಲಿತಾಂಶ ಮಾತ್ರ ಇನ್ನೂ ಆಗಿಲ್ಲ.

ಇಂತಹ ಸಂಧರ್ಭದಲ್ಲಿ ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಮಾಧ್ಯಮಗಳ ಕುರಿತು ಮೀಡಿಯಾ ಮಿರ್ಚಿ ಅಂಕಣ ಬರೆಯುವ, ಮಾದ್ಯಮ ಲೋಕದ ಒಳ-ಹೊರಗನ್ನು ಬಲ್ಲ ಸೂಕ್ಷ ಪ್ರಜ್ಞೆಯ ಜಿ ಎನ್ ಮೋಹನ್ ಮಾಧ್ಯಮ ಮಿತ್ರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಅಭಿಪ್ರಾಯ ಸೂಚಿಸುವಂತೆ ಕೋರಿದ್ದರು, ಈ ಮೇರೆಗೆ ಮೀಡಿಯಾ ಮಿರ್ಚಿ ಅಂತರ್ಜಾಲ ತಾಣದಲ್ಲಿ ಹಲವು ಗಣ್ಯರು, ಪತ್ರಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ, ಆ ಪ್ರತಿಕ್ರಿಯೆಗಳನ್ನು ಒಟ್ಟು ಮಾಡಿ ರಾಜ್ಯಪಾಲರಿಗೆ ಅರ್ಪಿಸಿ ಪತ್ರಕರ್ತರಿಗೆ ರಕ್ಷಣೆ ಕೋರುವ ಸ್ತುತ್ಯಾರ್ಹ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ಕಾನೂನು ಸಚಿವರ ಹೇಳಿಕೆಯಿಂದ ತೃಪ್ತರಾದಂತಿರುವ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಇನ್ನೂ ತೂಕಡಿಕೆಯಲ್ಲಿದೆ, ಇದು ಸರಿಯಲ್ಲ. ಕಾನೂನು ಎಲ್ಲರಿಗೂ ಒಂದೇ ಅದು ಯಾರಪ್ಪನ ಮನೆಯ ಆಸ್ತಿಯೂ ಅಲ್ಲ ಹಾಗಾಗಿ ಅದನ್ನು ಪ್ರತಿನಿಧಿಸುವವರೂ ಕೂಡ ಒಂದು ತೂಕದಿಂದ ನಡೆದುಕೊಂಡರೆ ಒಳಿತು ಇಲ್ಲವಾದಲ್ಲಿ ವ್ಯವಸ್ಥೆ ಅವರ ವಿರುದ್ಧ ತಿರುಗಿ ಬೀಳುವ ದಿನಗಳು ದೂರವಿಲ್ಲ ಎಂಬುದನ್ನು ಅರಿಯಬೇಕಲ್ಲವೇ?

ಕೊನೆ ಮಾತು: ರಾಜ್ಯದಲ್ಲಿ ಈಗ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿದೆ ಇದು ಜನ ಸಾಮಾನ್ಯರಿಗೆ ಉದ್ಯೋಗ ಒದಗಿಸುವ ಬದಲು ಪಂಚಾಯತ್ ವ್ಯವಸ್ಥೆಯ ಅಧಿಕಾರಿಗಳು ಮತ್ತು ಇಂಜಿನಿಯರುಗಳ ಜೋಳಿಗೆ ತುಂಬಿಸುವ ಅಕ್ಷಯ ಯೋಜನೆಯಾಗಿದೆ. ದೇಶದ ೩.೫೨ ಕೋಟಿ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಮಹತ್ತರ ಯೋಜನೆ. ರಾಜ್ಯದಲ್ಲಿ 13.50855ಕೋಟಿ ಜನರಿಗೆ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ. ಆರಂಭದಲ್ಲಿ ಯೋಜನೆಯ ಕಠಣ ಮಾರ್ಗಸೂಚಿಗಳಿಂದ ಕುಂಟುತ್ತಾ ಸಾಗಿದ್ದ ಯೋಜನೆ , ಈಗ ಸಡಿಲಗೊಂಡಿರುವ ಮಾರ್ಗದರ್ಶಿಸೂತ್ರಗಳಿಂದ ಅಧಿಕಾರ/ರಿ ಶಾಹಿಗಳ ಮತ್ತು ಕಂಟ್ರಾಕ್ಟುದಾರರ ಅಕ್ಷಯ ಪಾತ್ರೆಯಾಗಿ ಪರಿವರ್ತನೆಯಾಗಿದೆ. ಪ್ರಸ್ತುತ ಹಾಸನ ಜಿಲ್ಲೆಯಲ್ಲಿ ಇಂದಿನವರೆಗೆ ಕೇವಲ 14ಕೋಟಿರೂಪಾಯಿಗಳ ಕೆಲಸ ವಾಗಿದೆ ಆದರೆ ಮಾದ್ಯಮಗಳ್ಲಲಿ ಮಾತ್ರ ಜಿ.ಪಂ. ನ ಹಿರಿಯ ಅಧಿಕಾರಿಗಳು ಮತ್ತು ಅಧ್ಯಕ್ಷ/ಉಪಾಧ್ಯಕ್ಷರುಗಳು ಸಾರ್ವಜನಿಕರಿಗೆ ೨೫-30ಕೋಟಿ ಕೆಲಸವಾಗಿದೆಯೆಂಬ ಸುಳ್ಳುಹೇಳುತ್ತಿದ್ದಾರೆ. ಜಿಲ್ಲೆಯಾಧ್ಯಂತ ಹಲವೆಡೆ ಜನಸಂಖ್ಯೆಗನುಗುಣವಾಗಿ ಕ್ರಿಯಾ ಯೋಜನೆ ತಯಾರಿಸುವ ಬದಲು ದುಡ್ಡು ಮಾಡಲು ಕ್ರಿಯಾಯೋಜನೆ ತಯಾರಿಸಲಾಗಿದೆ. ಇದಕ್ಕೆ ಸ್ಪಷ್ಟ ಪಾರದರ್ಶಕ ಉದಾಹರಣೆಯೆಂದರೆ ಕೆರೆ ಅಭಿವೃದ್ದಿ ಕ್ರಿಯಾ ಯೋಜನೆಗಳು. ಶೇ.೨೦ ಜೆಸಿಬಿ ಬಳಸುತ್ತೇವೆಂದು ಹೇಳಲಾಗುತ್ತಿದ್ದರೂ ಶೇ.100ರಷ್ಟು ಜೆಸಿಬಿ ಬಳಕೆಯಾಗಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲವಾಗಿದೆ, ಅವರ ಜಾಬ್ ಕಾರ್ಡುಗಳು ಕಂಟ್ರಾಕ್ಟರುಗಳ ಬಳಿ ಇಲ್ಲವೇ ವಾರ್ಡು ಸದಸ್ಯರುಗಳ ಬಳಿ ಸಂಗ್ರಹವಾಗಿವೆ. ಕೆಲಸ ಮಾಡದೇ, ಅರೆಬರೆ ಕೆಲಸ ಮಾಡಿ ಲಕ್ಷಾಂತರ ರೂ ಕೊಳ್ಳೆ ಹೊಡೆಯಲಾಗಿದೆ.ಈ ಬಗ್ಗೆ ಪ್ರಶ್ನಿಸಿದರೆ ಆ ಬಗ್ಗೆ ದೂರುಕೊಡಿ ಪರಿಶೀಲಿಸುತ್ತೇವೆ ಎಂಬ ಹೊಣೆಗೇಡಿತನದ ಉತ್ತರ ನೀಡುತ್ತಾರೆ. ಜಿಲ್ಲಾ ಕೇಂದ್ರದಲ್ಲಿ ಕುಳಿತು ಮಜಾ ಉಡಾಯಿಸುವ ಅಧಿಕಾರಿ, ಜನಪ್ರತಿನಿಧಿ ಇದುವರೆಗೂ ಎಷ್ಟು ತಾಲೂಕುಗಳಿಗೆ, ಎಷ್ಟು ಪಂಚಾಯ್ತಿಗಳಿಗೆ ಮತ್ತು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ? ತಪ್ಪಿತಸ್ಥರ ವಿರುದ್ಧ ಏನು ಕ್ರಮವಾಗಿದೆಯೆಂಬ ಬಗ್ಗೆ ಉತ್ತರವಿಲ್ಲ. ಗ್ರಾಮಪಂಚಾಯಿತಿಗಳಿಗೆ ಸುವರ್ಣ ಗ್ರಾಮ ಯೋಜನೆ ಸೇರಿದಂತೆ ಇನ್ನಿತರ ಅಭಿವೃದ್ದಿ ಯೋಜನೆಗಳು ಜಾರಿಯಲ್ಲಿವೆ. ಇಲ್ಲಿ ಒಂದೇ ಕೆಲಸಕ್ಕೆ ಹಲವು ಯೋಜನೆಗಳನ್ನು ಸೇರಿಸಿ ಹಾಡುಹಗಲೇ ಜನಸಾಮಾನ್ಯರ ಹಣ ದೋಚಲಾಗುತ್ತಿದೆ. ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಕಾವೇರಿ ನೀರಾವರಿ ನಿಗಮ, ಜಲಾನಯನ ಹೀಗೆ ಇತರೆ ಇಲಾಖೆಗಳಲ್ಲಿ ಅನುಷ್ಠಾನಗೊಳ್ಳುವ ಉದ್ಯೋಗ ಖಾತ್ರಿ ಯೋಜನೆ ಲೆಕ್ಕಕ್ಕೆ ಸಿಗುವುದೇ ಇಲ್ಲ.ಇದೆಲ್ಲದರ ನಡುವೆ ರಾಮ-ಕೃಷ್ಣ ನ ಲೆಕ್ಕ ದಂತೆ ಆಗುವ-ಆಗದ ಕೆಲಸಗಳಿಗೆ ಎಂಬಿ ಬರೆಯುವ ಜಿ.ಪಂ. ಇಂಜಿನಿಯರುಗಳು ಕೋಟಿಗೆ ತೂಗುತ್ತಿದ್ದಾರೆ ಇಂತಿಷ್ಟು ಎಂದು %ಕೊಟ್ಟರೆ ಮುಗಿಯಿತು. ಅಸಲಿಗೆ ಸದರಿ ಯೋಜನೆ ನಮ್ಮ ಜಿಲ್ಲೆಗೆ ಅಗತ್ಯವೇ ಇರಲಿಲ್ಲ. ಆದರೂ ಬಂದ ಯೋಜನೆಯನ್ನಾದರೂ ಸರಿಯಾದ ರೀತಿಯಲ್ಲಿ ಜಾರಿಗೆ ತರಲು ಭ್ರಷ್ಠಾಚಾರದಿಂದ ಮುಕ್ತವಾಗಿ ನಿರ್ವಹಿಸಲು ಅಧಿಕಾರಿಗಳಿಗೇನು ದಾಡಿ ಬಂದಿದೆ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...