Sunday, April 10, 2011

ಭ್ರಷ್ಟ'ಭಾರತ'ವೂ... ಲೋಕಪಾಲ ಮಸೂದೆಯೂ..

"ಅಣ್ಣಾ ಹಜಾರೆ ನಿರಶನದಿಂದ ಲೋಕಪಾಲ್ ಬಿಲ್ ಪಾಸ್ ಆಗಬಹುದು, ಆದರೆ ಭಾರತದಿಂದ ಭ್ರಷ್ಠಾಚಾರ ತೊಲಗುತ್ತದೆ ಎಂಬುದು ಭ್ರಮೆ ಮಾತ್ರ" ಅಂತ ಫೇಸ್ ಬುಕ್ ನಲ್ಲಿ ಬರೆದದ್ದು ಪತ್ರಕರ್ತ ಮಿತ್ರ ಶ್ರೀನಿವಾಸಗೌಡ. ಇದು ಅವರೊಬ್ಬರ ಅಭಿಪ್ರಾಯವಲ್ಲ ಸಂವೇದನಾಶೀಲ ಮನಸ್ಸುಗಳೆಲ್ಲರ ಅಭಿಪ್ರಾಯವೂ ಅದೇ ಆಗಿದೆ ಎಂಬುದು ಮಾತ್ರ ಅತ್ಯಂತ ವಿಷಾಧನೀಯಕರ ಸಂಗತಿ. ಈ ಮಾತುಗಳಲ್ಲಿ ಭ್ರಷ್ಟಾಚಾರದ ಕಬಂಧಬಾಹುಗಳ ಬಂಧನ ಎಷ್ಟರ ಮಟ್ಟಿಗೆ ಬಿಗಿಯಾಗಿದೆ, ಅದನ್ನು ಮೀರಿ ನಿಲ್ಲಲು ಸಾಧ್ಯವೇ ಎಂಬ ಪ್ರಶ್ನೆಯೂ ಸಹಾ ಅಗೋಚರವಾಗಿ ಕಾಣಸಿಗುತ್ತದೆ. ಅಣ್ಣಾ ಹಜಾರೆ ಜನಲೋಕಪಾಲ ಮಸೂದೆಯ ಜಾರಿಗೆ ನಡೆಸಿದ 98ಘಂಟೆಗಳ ನಿರಶನ ಜಡ್ಡುಗಟ್ಟಿದ  ಸಂವೇದನಾಶೀಲ ಮನಸ್ಸುಗಳನ್ನು ಬಡಿದೆಬ್ಬಿಸಿದೆ, ಸಾರ್ವತ್ರಿಕವಾಗಿ ಜನಪರವಾದ ಚಳುವಳಿಗೆ 3ದಶಕಗಳ ನಂತರ ರಾಷ್ಟ್ರಾಧ್ಯಂತ ಪ್ರತಿಸ್ಪಂದನೆ ಸಿಕ್ಕಿದೆ ಎಂದರೆ ಅಷ್ಟರ ಮಟ್ಟಿಗೆ ಭ್ರಷ್ಟಾಚಾರದ ತೀವ್ರತೆ ಜನರನ್ನ ಕಾಡುತ್ತಿದೆ ಎಂದು ಅರ್ಥೈಸಬಹುದಾಗಿದೆ.ಹೀಗಿರುವಾಗ ಜನಲೋಕಪಾಲ್ ಮಸೂದೆ ಅಗತ್ಯತೆ ಏನು? ಅದರಿಂದ ನಾವು ಕಂಡ ಕನಸು ನನಸಾಗಲು ಸಾಧ್ಯವೇ? ಜನಲೋಕಪಾಲ ಮಸೂದೆ ಮಾತ್ರದಿಂದಲೇ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಕಾಣಲು ಸಾಧ್ಯವೇ ಎಂಬ ವಿಚಾರಗಳನ್ನು ಅವಲೋಕಿಸಲು ಇದು ಪ್ರಶಸ್ತ ಕಾಲವೂ ಹೌದು.


         ಸ್ವತಂತ್ರ  ಭಾರತದ ಅಭಿವೃದ್ದಿಗೆ ಪ್ರಮುಖ ತೊಡಕು ಭ್ರಷ್ಟಾಚಾರ, ಭಾರತ ಭ್ರಷ್ಟ ದೇಶಗಳ ಸಾಲಿನಲ್ಲಿ 87ನೇ ಸ್ಥಾನದಲ್ಲಿ ಇದೆ. ಇವತ್ತು ದೇಶದ ಉದ್ದಗಲಕ್ಕೂ ಆಡಳಿತ ನಡೆಸುವ ಪ್ರಜಾ ಸರ್ಕಾರಗಳು ಮತ್ತು ಅಲ್ಲಿನ ಅಧಿಕಾರ ಶಾಹಿ ವ್ಯವಸ್ಥೆ ಸಾಮಾನ್ಯ ಜನರನ್ನ ಹರಿದು ತಿನ್ನುತ್ತಿವೆ. ಬಡವರಿಗೆ, ಅರ್ಹರಿಗೆ ತಲುಪಬೇಕಾದ ಸವಲತ್ತುಗಳು ತಲುಪುತ್ತಿಲ್ಲ, ಜನಸಾಮಾನ್ಯರಿಗೆ ದಕ್ಕಬೇಕಾದ ಯೋಜನೆಗಳು ಉಳ್ಳವರ ಪಾಲಾಗುತ್ತಿದೆ, ಅಧಿಕಾರಿಗಳು, ರಾಜಕಾರಣಿಗಳು ಹಗಲು ದರೋಡೆಕೋರರಾಗಿದ್ದಾರೆ. ಸ್ವತಂತ್ರ ಬಾರತದ ನಂತರ ದೇಶದ ಭ್ರಷ್ಟಾಚಾರವನ್ನು ನಿಯಂತ್ರಿಸಲು ಇರುವಂತಹ ಅನೇಕ ಸಂಸ್ಥೆಗಳು ಹಲ್ಲುಕಿತ್ತ ಹಾವಿನಂತಾಗಿವೆ. ನ್ಯಾಯದ ಪರಾಮರ್ಶೆಗೆ ವರ್ಷಗಟ್ಟಲೆ ಕಾಯಬೇಕಾಗಿದೆ, ಭ್ರಷ್ಟಾಚಾರ ನಿಯಂತ್ರಿಸುವ ಸಂಸ್ಥೆಗಳು ಆಡಳಿತಾರೂಢ ರಾಜಕಾರಣಿಗಳ ನಿಯಂತ್ರಣದಲ್ಲಿವೆ ಇಂತಹ ಸನ್ನಿವೇಶದಲ್ಲಿ ಭ್ರಷ್ಟಾಚಾರವನ್ನ ನಿಯಂತ್ರಿಸಲು ಯಾವ ಮಸೂದೆ ಬಂದರೂ ಯಾವ ಸಂಸ್ಥೆಗಳು ಬಂದರೂ ಅದು ಬೆಕ್ಕಿನ ಕೊರಳಿಗೆ ಕಟ್ಟುವ ಘಂಟೆಯಂತಾಗುತ್ತದೆ ಅಷ್ಟೆ. ಆದರೆ ಅಂತಹದ್ದೊಂದು ಸಂಸ್ಥೆ ಇದೆಯಲ್ಲ ಎಂಬ ಅಲ್ಪತೃಪ್ತಿ ಹಾಗೂ ಹುಸಿ ಭ್ರಮೆಯಲ್ಲಿ ನಮ್ಮ ಬದುಕುಗಳೂ ಮುಂದುವರೆಯುತ್ತವೆ ಎಂಬದೂ ಅರಗಿಸಿಕೊಳ್ಳಲಾಗದ ಸತ್ಯವೂ ಹೌದು. ಆದರೂ ಅಣ್ಣಾ ಹಜಾರೆ ಪ್ರತಿಪಾದಿಸುತ್ತಿರುವ ಜನ್ ಲೋಕಪಾಲ್ ಮಸೂದೆ ಪ್ರಾಮಾಣಿಕವಾಗಿ ಜಾರಿಗೆ ಬಂದುದೇ ಆದರೆ ಕಾಲಾನಂತರದಲ್ಲಿ ಬದಲಾವಣೆಯ ಪರ್ವ ಆರಂಭವಾಗುವುದೆನ್ನುವ ಅಂಶವನ್ನು ಪೂರ್ಣವಾಗಿ ತಳ್ಳಿಹಾಕುವಂತಿಲ್ಲ ಎಂಬುದು ತೃಪ್ತಿಯನ್ನು ನೀಡುತ್ತಿದೆ. 


        ಲೋಕಪಾಲ್ ಮಸೂದೆ ಹಾಗೂ ಅಣ್ಣಾ ಹಜಾರೆ  ಕುರಿತು ಮಾದ್ಯಮಗಳು ವ್ಯಾಪಕವಾಗಿ ಬರೆದಿವೆ ಆದರೂ 2010ರ ಲೋಕಪಾಲ ಮಸೂದೆ ಕುರಿತು ಕೆಲವಿಚಾರಗಳನ್ನು ಅವಲೋಕಿಸಿ ಮುಂದುವರಿಯೋಣ. ಬಹುತೇಕರಿಗೆ ತಿಳಿದಿರುವಂತೆ ಲೋಕಪಾಲ ಮಸೂದೆಗೆ 42ವರ್ಷಗಳ ಇತಿಹಾಸವಿದೆ. ಲೋಕಪಾಲ ಅಂದರೆ ಹಿಂದಿಯಲ್ಲಿ ಜನರಕ್ಷಣೆ ಎಂದಾಗುತ್ತೆ. ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ 1966ರಲ್ಲಿ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ ರಾಜ್ಯದಲ್ಲಿ ಲೋಕಾಯುಕ್ತ ಹಾಗೂ ಕೇಂದ್ರದಲ್ಲಿ 'ಲೋಕಪಾಲ' ವ್ಯವಸ್ಥೆ ತರಲು ನಿರ್ಧರಿಸಲಾಯಿತು.ಸದರಿ ಮಸೂದೆಯಲ್ಲಿ ಅದಿಕಾರಿಗಳು, ನೌಕರರು ಸೇರಿದಂತೆ ಪ್ರಧಾನಮಂತ್ರಿ, ಸಚಿವರು, ಮುಖ್ಯಮಂತ್ರಿಗಳ ವಿರುದ್ದವೂ ಭ್ರಷ್ಟಾಚಾರ ಕಂಡು ಬಂದಲ್ಲಿ ಕ್ರಮಜರುಗಿಸುವ ಅಧಿಕಾರಗಳನ್ನು ಸೇರಿಸಿತ್ತು. ಆದರೆ ಸದರಿ ಮಸೂದೆಯಿಂದ ರಾಜಕಾರಣಿಗಳನ್ನು ಕೈಬಿಟ್ಟು ಅಧಿಕಾರಿಗಳನ್ನು ಮಾತ್ರ ಬಗ್ಗು ಬಡಿಯುವ ಮಸೂದೆಗೆ ಪ್ರಸ್ತಾವನೆ ಸಲ್ಲಿಸಲಾಯಿತು.ಅದರನ್ವಯ ಲೋಕಾಯುಕ್ತ, ಸಿಎಜಿ, ಸಿವಿಸಿ, ಸಿಬಿಐ, ಚುನಾವಣಾ ಆಯೋಗ ಹೀಗೆ ಸುಮಾರು ಹತ್ತು  ಸಂಸ್ಥೆಗಳು ಕಾರ್ಯನಿರ್ವಹಿಸುವಂತೆ ಮಾಡಲಾಯಿತಾದರೂ ಅವುಗಳ ನಿಯಂತ್ರಣ ಹಾಗೂ ಅಧಿಕಾರದ ವ್ಯಾಪ್ತಿಯನ್ನು ಸೀಮಿತಗೊಳಿಸಲಾಗಿದೆ. ರಾಜಕಾರಣಿಗಳನ್ನು ಸೇರಿಸಿದ ಲೋಕಪಾಲ ಮಸೂದೆಗೆ ದೇಶದ ನಾಲ್ಕನೇ ಲೋಕಸಭೆಯಲ್ಲಿ ಅಂದರೆ 1968ರಲ್ಲಿ ಅನುಮೋದನೆ ದೊರೆಯಿತಾದರೂ ರಾಜ್ಯ ಸಭೆಯಲ್ಲಿ ಅದು ಬಿದ್ದು ಹೋಯಿತು. ಅಂದರೆ ರಾಜ್ಯ ಸಭೆಯಲ್ಲಿ ಮಂಡನೆಯಾಗುವ ವೇಳೆಗೆ 1968ರಲ್ಲಿದ್ದ ಸರ್ಕಾರ ವಿಸರ್ಜನೆಯಾಯಿತು. ನಂತರ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ 1971, 1977, 1985, 1989, 1996, 1998, 2001, 2005 ಮತ್ತು 2008 ಸೇರಿದಂತೆ 10ಭಾರಿ ಲೋಕಸಭೆಯಲ್ಲಿ ಲೋಕಪಾಲ ಮಸೂದೆ ಮಂಡನೆಯಾಗಿದ್ದರೂ ಅನುಮೋದನೆಗೊಳ್ಳದೇ ಮುಂದೆ ಹೋಗಿದೆ. ಇದೀಗ 2010ರಲ್ಲಿ ಮಾಡಲಾದ ಬದಲಾವಣೆಗಳೊಂದಿಗೆ ಸದರಿ ಮಸೂದೆ ಲೋಕಸಭೆಯಲ್ಲಿ ಮಂಡನೆಗೆ ಸಿದ್ದವಾಗಿತ್ತು. ಇದರಲ್ಲಿ ಲೋಕಪಾಲ ಆಯೋಗಕ್ಕೆ ತಪ್ಪಿತಸ್ಥರ ವಿರುದ್ದ ನೇರವಾಗಿ ಕ್ರಮ ಜರುಗಿಸುವ ಹಕ್ಕು ಇಲ್ಲ, ಕೇವಲ ಸಲಹಾ ಸಮಿತಿ ಯಾಗಿ ಕಾರ್ಯ ನಿರ್ವಹಿಸುತ್ತದೆ, ಕ್ರಮಜರುಗಿಸಲು ಪ್ರಥಮ ಮಾಹಿತಿ ವರದಿ ತಯಾರಿಸಲು ಅವಕಾಶ ಇಲ್ಲ, ಕಡಿಮೆ ಕಾಲಾವಧಿಯ ಶಿಕ್ಷೆಗೆ ಮಾತ್ರ ಶಿಪಾರಸ್ಸು ಮಾಡಬಹುದಾಗಿರುತ್ತೆ ಎಂಬುದಾಗಿದೆ. ಆದರೆ ಸುಪ್ರೀಂಕೋರ್ಟು ನ್ಯಾಯಾಧಿಶ ಶಾಂತಿಭೂಷಣ್, ನಿವೃತ್ತ ಪೋಲೀಸ್ ಅಧಿಕಾರಿ ಕಿರಣ್ ಬೇಡಿ ಮತ್ತಿತರರು ರಚಿಸಿಕೊಂಡಿರುವ "ಭ್ರಷ್ಟಾಚಾರದ ವಿರುದ್ದದ ಭಾರತ" ಸಮಿತಿಯು ಲೋಕಪಾಲ ಮಸೂದೆಯ ಜನವಿರೋದಿ ನೀತಿಯನ್ನು ಬದಲಿಸಿ ಹೊಸ ನೀತಿಯನ್ನು ರೂಪಿಸಿದೆ. ಅದರಲ್ಲಿ ಪ್ರಮುಖವಾಗಿ ಭ್ರಷ್ಟಾಚಾರದಲ್ಲಿ ಪಾಲ್ಗೊಂಡ ಯಾವುದೇ ಜನಪ್ರತಿನಿಧಿ, ಅಧಿಕಾರಿ/ನೌಕರರ ವಿರುದ್ದ ಸ್ವತಂತ್ರವಾಗಿ ಕ್ರಮಜರುಗಿಸುವ ಹಕ್ಕು ಸೇರಿದಂತೆ ಜನಪ್ರತಿನಿಧಿಗಳನ್ನು ವಾಪಾಸು ಕರೆಸಿಕೊಳ್ಳುವ ಹಕ್ಕು ಮತ್ತು ಸಮಿತಿಯಲ್ಲಿ ಸಾಮಾನ್ಯ ಜನರಿಗೆ ಸ್ಥಾನಮಾನಗಳನ್ನು ನೀಡುವ ಬಗ್ಗೆ ಪ್ರತಿಪಾದಿಸಿದೆ. ಇಂತಹದ್ದೊಂದು ವ್ಯವಸ್ಥೆ ಹಾಂಕಾಂಗ್ ನಲ್ಲಿ ಜಾರಿಯಲ್ಲಿದ್ದು ಅದೇ ಮಾದರಿಯನ್ನು ಭಾರತೀಯ ಪ್ರಜಾತಾಂತ್ರಿಕ ವ್ಯವಸ್ಥೆಗೆ ಆಗುವಂತೆ ಒಗ್ಗಿಸಿಕೊಂಡು ನೀತಿ ನಿಯಮಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಸದರಿ ಪರಿಷ್ಕೃತ ಮಾದರಿಯ ಜನಲೋಕಪಾಲ ಮಸೂದೆ ಜಾರಿಗೆ ಬರಬೇಕೆಂದು ಜಂತರ್ ಮಂತರ್ ನಲ್ಲಿ ನಡೆಸಿದ ನಿರಶನ ಆಶಾದಾಯಕವಾದ ಫಲಿತಾಂಶವನ್ನು ನಿರೀಕ್ಷಿಸುವಂತೆ ಮಾಡಿದೆ. ಆಗಸ್ಟ್ 15ರವರೆಗೆ ನೀಡಲಾಗಿರುವ ಅಂತಿಮ ಗಡುವಿನಲ್ಲಿ ಜನಲೋಕಪಾಲ ಮಸೂದೆಯ ಸಮರ್ಪಕವಾಗಿ ಸಮಾಜ ಮುಖಿಯಾಗಿ ಜಾರಿಗೆ ಬರಬೇಕಾಗಿದೆ. 


          ಜನಲೋಕಪಾಲ ಮಸೂದೆ  ನಿರೀಕ್ಷಿತ ರೀತಿಯಲ್ಲಿ ಜಾರಿಗೆ ಬಂದರೂ ಅದರ ಪರಿಣಾಮಗಳು ಕೊಂಚ ಮಟ್ಟಿಗಾದರೂ ಜನಸಾಮಾನ್ಯರಿಗೆ ತಗುಲಿರುವ ಭ್ರಷ್ಟಾಚಾರದ ಬಿಸಿಯನ್ನು ತಗ್ಗಿಸಬಹುದು. ಯಾವುದೇ ವ್ಯವಸ್ಥೆ ಬಂದರೂ ಅಲ್ಲಿ ತೀವ್ರಗತಿಯ ಬದಲಾವಣೆಗಳನ್ನು ತತ್ ಕ್ಷಣದಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಇಲ್ಲಿ ಜನರ ಪಾಲ್ಗೊಳ್ಳುವಿಕೆ ಮತ್ತು ಪರಿವರ್ತಿತ ಜಾಗೃತ ಮನಸ್ಥಿತಿಯೂ ಅತ್ಯಗತ್ಯವಾಗಿದೆ. ಚಳುವಳಿಗಳು ಕ್ರಾಂತಿ ಮಾಡುತ್ತವೆ ಎಂಬುದು 4ದಶಕಗಳ ಹಿಂದಿನ ಮಾತು, ಆದರೆ ವ್ಯವಸ್ಥೆಯ ಕ್ರೂರ ನಡವಳೀಕೆಗಳು ಎಂಥಹ ಕಾಲಕ್ಕೂ ಕ್ರಾಂತಿ ಮಾಡಲು ಪ್ರೇರೇಪಣೆಯಾಗಿರುತ್ತವೆ ಎಂಬುದು ಸಹಾ ತಳ್ಳಿಹಾಕಲು ಆಗದ ಮಾತು. ಅದಕ್ಕೆ ಪೂರಕವಾದ ಮನಸ್ಥಿತಿಯನ್ನು ಸಹಾ ಈ ವ್ಯವಸ್ಥೆಯೇ ಸೃಜಿಸುತ್ತದೆ ಹಾಗಾಗಿಯೇ ಅಣ್ಣಾ ಹಜಾರೆಯಂತಹವರ ಹೋರಾಟಗಳು ಶಕ್ತಿ ತುಂಬುವ ಕ್ರಿಯೆಗಳಾಗುತ್ತವೆ, ಬದಲಾವಣೆಯ ಕನಸು ಕಾಣಲು ಅವಕಾಶ ಮಾಡುತ್ತವೆ. ವ್ಯವಸ್ಥೆಯ ಸುಧಾರಣೆ ಒಬ್ಬರಿಂದ ಸಾಧ್ಯವಿಲ್ಲ, ಅಲ್ಲಿನ ದೋಷಗಳ ವಿರುದ್ದ ಪ್ರತಿಭಟಿಸಲು ಸಂಘಟನಾತ್ಮಕ ಚಳುವಳಿ ಬೇಕು.  ಇಲ್ಲಿ ಅಣ್ಣಾ ಹಜಾರೆ ಒಂದು ನಿಮಿತ್ತ ಶಕ್ತಿಯಷ್ಟೇ, ಇದೇ ಚಳುವಳಿಯನ್ನ ದೇಶದ ಸಾಮಾನ್ಯ ಪ್ರಜೆ ಮಾಡಲು ಹೊರಟ್ಟಿದ್ದರೆ ಅದಕ್ಕೆ ಕಿಲುಬು ಕಾಸಿನ ಕಿಮ್ಮತ್ತು ಸಿಗುತ್ತಿರಲಿಲ್ಲ, ಆದರೆ ಅಣ್ಣಾಹಜಾರೆಯ ಹಿನ್ನೆಲೆ, ಗಟ್ಟಿತನ, ಪ್ರಾಮಾಣಿಕತೆ ಮತ್ತು ಹೋರಾಟ ಸಂವೇದನಾಶೀಲ ಮನಸ್ಸುಗಳನ್ನು ಒಗ್ಗೂಡಿಸಿದೆ. ಆ ಮೂಲಕ ಸತ್ತು ಮಲಗಿದ್ದ ಸ್ವಾಭಿಮಾನವನ್ನ ಜಾಗೃತಗೊಳಿಸಿದೆ ಅದಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಅಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...