Wednesday, September 5, 2012

ಸುವರ್ಣ ಸಂಭ್ರಮದಲ್ಲಿ ಶಿಕ್ಷಕ ದಿನ ಮತ್ತು ಜಿಜ್ಞಾಸೆ!



 ಇದು ಶಿಕ್ಷಕರ ದಿನಾಚರಣೆಯ ಸುವರ್ಣ ಸಂಭ್ರಮದ ಆಚರಣೆ ಅಂದರೆ ದೇಶದಲ್ಲಿ ಶಿಕ್ಷಕರ ದಿನಾಚರಣೆ ಆರಂಭವಾಗಿ 50ವರ್ಷಗಳು ಸಂದಿವೆ. ಮೊದಲ ಶಿಕ್ಷಕರ ದಿನಾಚರಣೆ ನಡೆದದ್ದು ಸೆ.5, 1962. ಅದು ಸರ್ವೆಪಲ್ಲಿ ರಾಧಾಕೃಷ್ಣನ್ ಭಾರತದ ಉಪ ರಾಷ್ಟ್ರಪತಿಯಾಗಿ ನೇಮಕವಾದ ವರ್ಷ ಅಷ್ಟೇ ಅಲ್ಲ ರಾಧಾಕೃಷ್ಣನ್ ಜನಿಸಿದ ದಿನಾಂಕವೂ ಹೌದು. ಆದರೆ ಕುರಿತು ಜಿಜ್ಞಾಸೆ ಇರುವುದನ್ನು ಅವರ ಜೀವನ ಕುರಿತ ಪುಸ್ತಕದಲ್ಲಿ ಡಾ ಸರ್ವೆಪಲ್ಲಿ ಗೋಪಾಲ್ ಉಲ್ಲೇಖಿಸಿದ್ದಾರೆ. ಹಾಗಾಗಿ ಯುನೆಸ್ಕೋ ಘೋಷಿಸಿರುವಂತೆ ಅಕ್ಟೋಬ್ 5ರಂದು ಶಿಕ್ಷಕರ ದಿನಾಚರಣೆ ಆಚರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಏನೇ ವೈರುಧ್ಯಗಳಿದ್ದರೂ ದಿನಕ್ಕೆ 50ವರ್ಷ ಸಂದಿರುವುದರಿಂದ ಇದನ್ನೆ ಶಿಕ್ಷಕರ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಸಂಧರ್ಭದಲ್ಲಿ ಶಿಕ್ಷಕರ ಮತ್ತು ಶೈಕ್ಷಣಿಕ ವಾತಾವರಣದ ಕುರಿತು ಮಾತನಾಡಬೇಕಾದ ಅಗತ್ಯವಿದೆ.

 ಅದಕ್ಕೂ ಮುನ್ನ ಡಾ ಸರ್ವೆಪಲ್ಲಿ ರಾಧಾಕೃಷ್ಣನ್ ಕುರಿತ ಪುಟ್ಟ ಮಾಹಿತಿ ನಿಮಗಾಗಿ. ಸರ್ವೆಪಲ್ಲಿ ರಾಧಾಕೃಷ್ಣನ್  ತೆಲುಗು ಬ್ರಾಹ್ಮಣ ಬಡ ಕುಟುಂಬದಲ್ಲಿ ಹುಟ್ಟಿದ್ದು ತಮಿಳುನಾಡಿನ ತಿರುತ್ತಾನಿ ಎಂಬ ಗ್ರಾಮದಲ್ಲಿಒಬ್ಬ ತತ್ವಜ್ಞಾನಿಯಾಗಿ ಆದರ್ಶ ಪ್ರಾಧ್ಯಾಪಕನಾಗಿ ಬೆಳೆದ ಸರ್ವಪಲ್ಲಿ ರಾಧಾಕೃಷ್ಣನ್ ಸಾಧನೆಯ ಶೃಂಗಕ್ಕೇರಿ ಅಂತಿಮವಾಗಿ ಭಾರತದ ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿ ಪದವಿಗೇರಿದರು. ಮೂಲಕ ಒಬ್ಬ ಸಾಮಾನ್ಯ ಶಿಕ್ಷಕ ವ್ಯಕ್ತಿಯ ನಿರ್ಮಾಣ ಮಾತ್ರವಲ್ಲದೇ ರಾಷ್ಟ್ರದ ಆಡಳಿತವನ್ನು ನಿಭಾಯಿಸುವ ಪರಮೋಚ್ಚ ಪದವಿಗೇರಬಹುದು ಎಂಬುದನ್ನು ಸಾಬಿತು ಪಡಿಸಿದರು.1909ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವೃತ್ತಿ ಜೀವನ ಆರಂಭಿಸಿದರು. 1918ರಲ್ಲಿ ಮೈಸೂರು ವಿವಿಯಲ್ಲಿ ಪ್ರೋಫೆಸರ್ ಆದರು. ನಂತರ ದೇಶ ಮತ್ತು ವಿದೇಶಗಳ ಹಲವು ವಿವಿ ಗಳಲ್ಲಿ ಅವಕಾಶ ಗಿಟ್ಟಿಸುವ ಮೂಲಕ ಸಾಧನೆ ಗೈದರು. ಪೌರಾತ್ಯ ಮತ್ತು ಪಾಶ್ಚಿಮಾತ್ಯ ತತ್ವ ಜ್ಞಾನದ ಪದ್ದತಿಗಳನ್ನು ವಿವರವಾಗಿ ರಚಿಸಿದ ರಾಧಾಕೃಷ್ಣನ್ ತನ್ನ ವಿದ್ವತ್ ನಿಂದಾಗಿ ಕಲ್ಕತ್ತಾ ಮತ್ತು ಆಕ್ಸ್ ಫರ್ಡ್ ವಿವಿಗಳಲ್ಲಿ ಅವಕಾಶ ಪಡೆದಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಬಿಟ್ರೀಷ್ ಸಂಸ್ಥಾನ ನೀಡುತ್ತಿದ್ದ ಸರ್ ಪದವಿ ಪಡೆದಿದ್ದರು. 1954ರಲ್ಲಿ ಅವರಿಗೆ ಭಾರತ ಸರ್ಕಾರ ಜೀವಿತಾವಧಿಯಲ್ಲೇ ಭಾರತ ರತ್ನ ಪ್ರಶಸ್ತಿಯನ್ನೂ ಸಹಾ ನೀಡಿ ಗೌರವಿಸಿದೆ. ಬರಿಟೀಷ್ ಅಕಾಡೆಮಿ ಫೆಲೋಶಿಪ್ ನೀಡಿದೆಯಲ್ಲದೇ ಜರ್ಮನಿಯ ಪ್ರತಿಷ್ಟಿತ ಟೆಂಪ್ಲೆಟಾನ್ ಪ್ರಶಸ್ತಿ ಅವರ ಮುಡಿಗೇರಿದೆ. ತತ್ವಶಾಸ್ತ್ರದಲ್ಲಿನ ಅವರ ಅನುಪಮ ಸೇವೆಗಾಗಿ ಸತತವಾಗಿ 5ರವರ್ಸಗಳ ಕಾಲ ಅವರ ಹೆಸರು ನೋಬೆಲ್ ಪ್ರಶಸ್ತಿಗಾಗಿ ಶಿಫಾರಸ್ಸಾಗಿತ್ತು ಎಂಬುದು ಗಮನಾರ್ಹ. ಅವರು ರಾಷ್ಟ್ರಪತಿ ಹುದ್ದೆಗೇರುವ ಮುನ್ನ ಯುನೆಸ್ಕೋ ದಲ್ಲಿ ಭಾರತದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದರಲ್ಲದೇ ಸೋವಿಯತ್ ಯೂನಿಯನ್ ನಲ್ಲಿ ಭಾರತದ ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸಿದರು.ರಾಷ್ರ್ಟಪತಿಯಾಗಿದ್ದಾಗ ಅವರ ಹುಟ್ಟಿದ ಹಬ್ಬವನ್ನು ಆಚರಿಸಲು ಬಂಧುಗಳು ಮತ್ತು ಸ್ನೇಹಿತರು ಮುಂದಾದಾಗ ಅದನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಅವರು ಸೂಚಿಸಿದ್ದರಲ್ಲದೇ ಮೂಲಕ ಸಮಸ್ತ ಶಿಕ್ಷಕ ಸಮುದಾಯಕ್ಕೆ ಗೌರವವನ್ನು ಅರ್ಪಣೆ ಮಾಡಿದ್ದಾರೆ.

            ನಡುವೆ ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಮಾಡುವುದರ ಕುರಿತು ಹಲವು ಆಕ್ಷೇಪಣೆಗಳು ಕೇಳಿ ಬಂದಿವೆ. ನೇರ ನಡೆ ನುಡಿಯ ದಿಟ್ಟ ವಿಮರ್ಶಕ ಪ್ರೊ. ಜಿ ಎಚ್ ನಾಯಕ ಕುರಿತ ಪ್ರಸ್ತಾವಗಳನ್ನು ಪತ್ರಿಕೆಯೊಂದರ ಮೂಲಕ ಹೊರಗೆಡವಿದ್ದಾರೆ. ರಾಧಾಕೃಷ್ಣನ್ ಪುತ್ರ ಇತಿಹಾಸಕಾರ,ಇತಿಹಾಸ ಪ್ರಾಧ್ಯಾಪಕ,ಅಂತರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ  ಡಾ ಸರ್ವೆಪಲ್ಲಿ ಗೋಪಾಲ್  ಬರೆದಿರುವ  "ರಾಧಾಕೃಷ್ಣನ್ - ಭಯಾಗ್ರಫಿ" ಪುಸ್ತಕದಲ್ಲಿ ಜನ್ಮ ದಿನದ ಗೋಂದಲ, ರಾಧಾಕೃಷ್ಣನ್ ಜನ್ಮದ ಕುರಿತ ಅಶ್ಲೀಲ ಕಥೆ, ಅದೇ ಕಾರಣಕ್ಕಾಗಿ ತಾಯಿಯನ್ನು ದೂರವಿರಿಸಿದ್ದು, ಅವರು ಪ್ರಾಧ್ಯಾಪಕರಾಗಿದ್ದಾಗ ಮೈಸೂರಿನಲ್ಲಿ ಪಕ್ಕದ ಮನೆಯವನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಅದೇ ಆರಂಭವಾಗಿ ಮುಂದೆ ಹಲವು ಹೆಂಗೆಳೆಯರ ಸಹವಾಸ ಮಾಡಿದ್ದು, ಅವರ ಭಾಷಣಗಳಲ್ಲಿ ಆತ್ಮವಂಚನೆಯ ಭಾಷಣಗಳನ್ನು ಮಾಡುತ್ತಿದ್ದುದು, ತನ್ನ ಐವರು ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹ ಮಾಡಿದ್ದು, ವೃತ್ತಿಯ ಬಗೆಗಿನ ಪ್ರೇಮದಿಂದ ಅಧಿಕಾರಕ್ಕೆ ಅಂಟಿಕೊಳ್ಳುವ ನೀತಿಯನ್ನು ಪ್ರದರ್ಶಿಸಿದ್ದು ಒಂದೇ ಎರಡೇ ಹೀಗೆ ರಾಧಾಕೃಷ್ಣನ್ ನೆಗೆಟೀವ್ ಅಂಶಗಳನ್ನು ಪ್ರಸ್ಥಾಪಿಸುವ ಮೂಲಕ ಇಂತಹವರ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. ಅದು ಸಮಂಜಸವೂ ಇರಬಹುದು ಆದರೆ ಅದೇ ಅಂತಿಮವೂ ಆಗಬೇಕಿಲ್ಲ. ಹಿಂದೆಸ್ವಾಮಿ ವಿವೇಕಾನಂದರ ಕುರಿತು ಇಂತಹುದ್ದೇ ಸತ್ಯಗಳು ಅನಾವರಣಗೊಂಡಿದ್ದವು ಅವರೊಬ್ಬ ದಡ್ಡ ಮತ್ತು ಮೂರ್ಖ, ವಾಸಿಯಾಗದ ಕಾಯಿಲೆಗಳಿದ್ದವು ಮತ್ತು ಆತ ಶುದ್ದ ಮಾಂಸಹಾರಿ ಇತ್ಯಾದಿ.ಆದರೆ ಸಮಾಜದಲ್ಲಿ ಉನ್ನತ ಧ್ಯೇಯ ಮತ್ತು ಆದರ್ಶ ಪುರುಷರಂತೆ ಕಾಣಿಸುವ ವ್ಯಕ್ತಿಗಳ ವೈಯುಕ್ತಿಕ ಬದುಕು ಏನೇ ಆಗಿದ್ದರೂ ಸಹಾ ಸಮಾಜ ಮುಖಿಯಾಗಿ ಕಾಣಿಸಿಕೊಳ್ಳುವ ವ್ಯಕ್ತಿತ್ವಗಳು ಮತ್ತು ವಿಚಾರಗಳು ಹೆಚ್ಚು ಆಧ್ಯತೆ ಪಡೆಯುತ್ತವೆ.

            ಇನ್ನು ಪ್ರಸಕ್ತ ವಿಷಯಕ್ಕೆ ಬರುವುದಾದರೆ ಶಿಕ್ಷಕ ದಿನಾಚರಣೆ ಶಿಕ್ಷಕ ಸ್ಥಾನದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯುವ ಗೌರವವನ್ನು ಸಾರಿ ಹೇಳುವ ದಿನ. ಹಿಂದಿನ ದಶಕಗಳಲ್ಲಿ ಗುರು ಮತ್ತು ಶಿಷ್ಯರ ನಡುವೆ ಇದ್ದ ಬಾಂಧವ್ಯಗಳು ಈಗ ಇಲ್ಲ. ಆಧುನೀಕರಣದ ಪ್ರವಾಹದಲ್ಲಿ ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯೂ ಈಗ ಉಳಿದಿಲ್ಲ, ಶಿಕ್ಷಣ ವ್ಯಾಪಾರೀಕರಣವಾಗಿದೆ ಶಾಲೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಸೌಲಭ್ಯಗಳು ಬಂದಿವೆ, ಸಂಬಳ-ವಗೈರೆಗಳು ಹೆಚ್ಚಿವೆ. ಜೊತೆಗೆ ಶಿಕ್ಷಕರ ಕಾರ್ಯಗಳು ವಿಸ್ತೃತವಾಗಿವೆ. ಶಿಕ್ಷಕರು ಈಗ ಮಕ್ಕಳಿಗೆ ಪಾಠ ಹೇಳುವ ಗುರುಗಳಾಗಿ ಮಾತ್ರ ಉಳಿಯದೇ ಬೇರೆ ಚಟುವಟಿಕೆಗಳು ಅವರ ಹೆಗಲೇರಿವೆ. ಕಲಿಸುವ ಉತ್ಸಾಹ ಕುಂದಿದೆ, ವಿದ್ಯಾರ್ಥಿಗಳೂ ಈಗ ಹಿಂದಿನಂತೆ ಉಳಿದಿಲ್ಲ ಶಿಕ್ಷಕರನ್ನೆ ನಿಯಂತ್ರಿಸುವ ಅಗೌರವ ತೋರುವ ಪ್ರವೃತ್ತಿಯೂ ಬೆಳೆದಿದೆ. ಇದಕ್ಕೆ ಶಿಕ್ಷಕರು ಪರೋಕ್ಷವಾಗಿ ಕಾರಣ ಎಂಬ ಮಾತನ್ನು ಅಲ್ಲಗೆಳೆಯುವಂತಿಲ್ಲ. ಶಿಕ್ಷಕರು ತಮ್ಮ ವೃತ್ತಿಯ ಗಾಂಭಿರ್ಯತೆಯನ್ನು ಅರಿಯದೇ ತೋರುವ ನಡವಳಿಕೆಗಳು, ಬಾಹ್ಯ ಚಟುವಟಿಕೆಗಳು, ಅಭಿರುಚಿಗಳು ಸ್ಥಾನದ ಪಾವಿತ್ಯತೆಯನ್ನು ಕಳೆದಿವೆ.ಪ್ರಾಮಾಣಿಕವಾಗಿ ವೃತ್ತಿಯನ್ನು ನಿರ್ವಹಿಸುವ ಪ್ರಜ್ಞೆಯನ್ನು ತೋರದೇ ರಾಜಕೀಯ, ಪುಡಾರಿತನ, ವ್ಯವಹಾರ ಮತ್ತು ಸಮಾಜ ಹೇಸಿಗೆ ಪಟ್ಟುಕೊಳ್ಳುವ ಚಟುವಟಿಕೆಗಳಲ್ಲಿ ತೊಡಗಿಕೊಂಡು ಮಾದ್ಯಮಗಳಲ್ಲಿ ಸುದ್ದಿಯಾಗುತ್ತಿರುವುದು ದುರಂತದ ಸಂಗತಿ. ಹತ್ತು ಶಿಕ್ಷಕರಲ್ಲಿ ಒಬ್ಬಿಬ್ಬರು ಪ್ರಾಮಾಣಿಕವಾಗಿ ಕೆಲಸ ಮಾಡಲು ಮುಂದಾಗುತ್ತಾರಾದರೂ ಇತರ ಶಿಕ್ಷಕರು ಅಡ್ಡಗಾಲು ಹಾಕುವ ಪ್ರವೃತ್ತಿಯಿಂದಾಗಿ ಅವರು ತಟಸ್ಥರಾಗಿ ಉಳಿಯುವ ಸಂಭವವೇ ಹೆಚ್ಚು ಇಂತಹದ್ದನ್ನು ಪ್ರತೀ ಶಾಲೆ ಮತ್ತು ಕಾಲೇಜುಗಳಲ್ಲೂ ಕಾಣಬಹುದು. ಕಲಿಕೆಯಲ್ಲೂ ಅಂತಹ ಗುಣಾತ್ಮಕ ಅಂಶಗಳನ್ನು ಕಾಣಲಾಗುತ್ತಿಲ್ಲಅಧ್ಯಯನದ ಕೊರತೆ, ಅನುಭವದ ಕೊರತೆ ಎದ್ದು ಕಾಣುತ್ತಿದ್ದು ವೈಯುಕ್ತಿಕ ಹಿತಾಸಕ್ತಿಗಳೂ ಕೂಡಾ ಶೈಕ್ಷಣಿಕ ಪ್ರಗತಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿವೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು ಜಾಗೃತರಾಗಬೇಕಿದೆ. ತಮ್ಮ ಸ್ತಾನದ ಘನತೆ ಗೌರವಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.
           
            

Sunday, August 5, 2012

ಯಾವುದ್ರೀ ಅದು "ನೈತಿಕ ಪೋಲೀಸ್ ಗಿರಿ"?



ಳೆದ ಶನಿವಾರ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ನಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ದಾಳಿಯ ಪ್ರಕರಣದ ಕುರಿತು ಪ್ರತಿಭಟನೆಗಳು ನಡೆಯುತ್ತಿವೆ ಮಾದ್ಯಮಗಳಲ್ಲಿ ಚರ್ಚೆಗಳು ಆಗುತ್ತಿವೆ ಫೇಸ್ ಬುಕ್ ನಂತಹ ಸಾಮಾಜಿಕ ತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಜಾರಿಯಲ್ಲಿವೆ, ಯೂಟ್ಯೂಬ್ ನಲ್ಲಿ ಘಟನೆಯ ತುಣುಕುಗಳನ್ನು ಪದೇ ಪದೇ ಮುಗಿಬಿದ್ದು ನೋಡಲಾಗುತ್ತಿದೆ. ಘಟನೆಯ ಕುರಿತು ಸರ್ಕಾರ ಜಾಣತನದ ನಿರ್ಲಕ್ಷ್ಯ ತೋರಿದರೂ ಒತ್ತಡ ಹೆಚ್ಚಾದಂತೆ ಅಪರಾಧಿಗಳನ್ನು ಬಂಧಿಸುತ್ತಿದ್ದಾರೆ. ಈ ಘಟನೆಯಲ್ಲಿ ಬಳಕೆ ಯಾಗುತ್ತಿರುವ ಪುಂಡರ ನೈತಿಕ "ಪೋಲೀಸ್ ಗಿರಿ", ಘಟನೆ ಕುರಿತು ಪೋಲೀಸರ ವರ್ತನೆಗಳು, ಮಾದ್ಯಮದ ಹೊಣೆಗಾರಿಕೆಗಳು, ಸರ್ಕಾರದ ನಿರ್ಲಕ್ಷ್ಯ ಧೋರಣೆಗಳು, ಪೋಷಕರ ನಿರ್ಲಕ್ಷ್ಯತನ, ಪ್ರಕರಣದ ವಾಸ್ತವತೆ ಅರಿಯದೇ ಬೀದಿಗಿಳಿದು ಪ್ರತಿಭಟಿಸುತ್ತಿರುವವರ ಧೋರಣೆಗಳು ಸಧ್ಯ ಚರ್ಚೆಗೆ ಬರುವುದು ಅವಶ್ಯವಾಗಿದೆ.  

ಅವತ್ತು ಶನಿವಾರ ರಾತ್ರಿ ಮಂಗಳೂರಿನ ಕಾರ್ಪೋರೇಟರ್ ಮೋಹನ್ ಪಡೀಲ್ ಎಂಬ ಚಡ್ಡಿಯ ನೇತೃತ್ವದಲ್ಲಿ ಹಿಂದೂ ಜಾಗರಣಾ ವೇದಿಕೆ ಹೆಸರಿನಡಿಯಲ್ಲಿ ಪುಂಡರು ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ನಡೆಸಿದ ದಾಳಿಯ ಸಂಧರ್ಭದಲ್ಲಿ ಪಾರ್ಟಿ ನಡೆಸುತ್ತಿದ್ದವರ ಬಳಿ ನಡೆದುಕೊಂಡ ರೀತಿ ಖಂಡನೀಯ ಹಾಗೂ ಶಿಕ್ಷಾರ್ಹ. ಅದೇ ರೀತಿ ಅನೈತಿಕತೆಯ ಪಾರ್ಟಿ ನಡೆಸುತ್ತಿದ್ದವರು ಕೂಡಾ ಶಿಕ್ಷಾರ್ಹರು ಎಂಬುದು ಅಷ್ಟೇ ಸತ್ಯ. ಮಂಗಳೂರಿನಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ ಈ ಹಿಂದೆ ನಡೆದ ಪಬ್ ಅಟ್ಯಾಕ್ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು ತೀರ ಈಚೆಗೆ ಅಸ್ಸಾಂನ ಗುರ್ ಗಾಂವ್ ನಲ್ಲಿ 16ರ ಬಾಲೆಯನ್ನು ಗುಂಪೊಂದು ನಡು ರಸ್ತೆಯಲ್ಲಿ ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿ ಅನಾಚಾರ ಎಸಗಲು ಪ್ರಯತ್ನಿಸಿದ ಘಟನೆ ರಾಷ್ಟ್ರಾದ್ಯಂತ ಚರ್ಚೆಯಾಗುತ್ತಿರುವ ಸಂಧರ್ಭದಲ್ಲೇ ಮಂಗಳೂರಿನ ಹೋಂ ಸ್ಟೇ ಪ್ರಕರಣ ನಡೆದದ್ದು ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದೆ. ಏಕೆಂದರೆ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷದ ಕೃಪಾ ಪೋಷಿತ ಸಂಘಟನೆಯೊಂದು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಮತ್ತು ತಕ್ಷಣ ಕೃತ್ಯದ ಕುರಿತು ಕ್ರಮ ಜರುಗಿಸುವಲ್ಲಿ ವಿಫಲವಾಗಿದ್ದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಹೇಳಿ ಕೇಳಿ ಮಂಗಳೂರು ಪಾಶ್ಚಾತ್ಯ ಸಂಸ್ಕೃತಿಗೆ ಹೆಚ್ಚು ಒಗ್ಗಿಕೊಂಡ ಕಡಲ ತಡಿಯ ಪ್ರದೇಶ, ವಿದೇಶಗಳಲ್ಲೂ ಹೆಚ್ಚಿನವರು ನೆಲೆಸಿರುವುದು ಅಲ್ಲಿನವರೇ ಗೊತ್ತಿದ್ದೊ ಗೊತ್ತಿಲ್ಲದೇಯೋ ದೇಸೀ ಸಂಸ್ಕೃತಿಗಿಂತ ಅಲ್ಲಿ ಬೇರೆ ಸಂಸ್ಕೃತಿಗಳ ಪ್ರಭಾವವೇ ಹೆಚ್ಚಾಗಿದೆ. ಪರಿಣಾಮ ಅನೈತಿಕತೆಯಂತಹ ಸಂಗತಿಗಳು ಅಲ್ಲಿ ನಿತ್ಯ ನೂತನ.! ಉದ್ದಿಮೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಮತ್ತು ಸೇವಾ ಸಂಸ್ಥೆಗಳಿಗೆ, ಧಾರ್ಮಿಕತೆಗೆ ಹೆಚ್ಚು ಒತ್ತು ನೀಡುವ ಮಂಗಳೂರು ಅತ್ಯಂತ ಪ್ರಬುದ್ದರನ್ನು ಸಹಾ ನೀಡಿದೆ ಆದರೆ ಅದೇ ನೆಲದಲ್ಲಿ ಇದಕ್ಕೆ ವ್ಯತಿರಿಕ್ತವಾದ ಅಂಶಗಳನ್ನು ತನ್ನ ನೆರಳಲ್ಲಿಯೇ ಪೋಷಿಸುತ್ತಿದೆ ಎನ್ನುವುದು ಸಹಾ ದುರಂತದ ಸಂಗತಿ. ಸಂಘ ಪರಿವಾರದ ಪ್ರಾಬಲ್ಯ ವಿರುವ ಮಂಗಳೂರಿನಲ್ಲಿ ಸಭ್ಯತೆ, ಶಿಷ್ಠಾಚಾರ ಮತ್ತು ಪ್ರಾಮಾಣಿಕತೆಗಳು ಇರುವ ಜೊತೆಗೆ ಕೋಮು ಕಲಹ ಹರಡುವ ಪುಂಡರ ಹಾವಳಿಯನ್ನು ಪೋಷಿಸುವ ಪ್ರಕ್ರಿಯೆಗಳು ಜಾರಿಯಲ್ಲಿವೆ. ವಿಪರ್ಯಾಸವೆಂದರೆ ಅದೇ ನೆಲದಲ್ಲಿ ಹಿಂದುತ್ವ/ಕ್ರೈಸ್ತ/ಮುಸಲ್ಮಾನರ ಮೂಲಭೂತ ವಾದದದ ಪ್ರತಿಪಾದನೆಯಂತೆಯೇ ಕಮ್ಯುನಿಸಂ ಧೋರಣೆಯ ಜನರು ಇದ್ದಾರಾದರೂ ಮೂಲಭೂತವಾದಿಗಳದ್ದೇ ಇಲ್ಲಿ  ಕೈ ಮೇಲಾಗಿರುವುದು ಕಾಣ ಸಿಗುತ್ತದೆ. ಆದ್ದರಿಂದಲೇ ಅದು ಸದಾ ಹೊತ್ತಿ ಉರಿಯುವ ಸೂಕ್ಷ್ಮ ಪ್ರದೇಶವೂ ಹೌದು.ಇದೆಲ್ಲಾ ರಾಜಕಾರಣಕ್ಕೆ ಮತ್ತು ವ್ಯವಸ್ಥೆಯನ್ನು ಪಟ್ಟಭದ್ರರು ಹಿಡಿತಕ್ಕೆ ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿದೆ. ಅಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ದೇಶ-ವಿದೇಶಗಳಿಂದ ಮತ್ತು ಹೊರ ರಾಜ್ಯಗಳಿಂದ ವಿದ್ಯಾರ್ಥಿಗಳ ದಂಡೇ ಹರಿದು ಬರುತ್ತದೆ. ಶಿಕ್ಷಣ ಅಲ್ಲಿ ವ್ಯಾಪಾರೀಕರಣದ ಅಡ್ಡೆಯಾಗಿದೆ ಅದೇ ನೆರಳಲ್ಲಿ ಅನಾಚಾರಗಳಿಗೂ ವೇದಿಕೆಯಾಗಿರುವುದು ನೋವಿನ ಸಂಗತಿ. ಕಲಿಯಲು ಬರುವ ಕೆಲವು ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ನೈತಿಕತೆಯ ಅಂಶಗಳನ್ನು ಮರೆಸುವ ವಿಚಾರಗಳತ್ತಲೂ ಆಕರ್ಷಿತರಾಗಿ ಬಿಡುತ್ತಾರೆ. ಮಾದಕ ದ್ರವ್ಯಗಳ ವ್ಯಸ್ನನ,ಕುಡಿತ, ಸೆಕ್ಸ್, ಬಿಡಾಡಿ ವರ್ತನೆಗಳೆಲ್ಲವನ್ನೂ ರೂಡಿಸಿಕೊಂಡು ವ್ಯವಸ್ಥೆಯಲ್ಲಿ ಕಂಟಕಪ್ರಾಯವಾಗಿಬಿಡುತ್ತಾರೆ, ಹೆತ್ತವರಿಗೆ ತಿಳಿಯದಂತೆ ಲಿವಿಂಗ್ ಟುಗೆದರ್ ಬದುಕು ನಡೆಸಿ ಕೋರ್ಸ್ ಪೂರೈಸಿದ ನಂತರ ಅವರವರ ಪಾಡಿಗೆ ಬೇರೆ ಹೋಗಿ ಬಿಡುತ್ತಾರೆ.  ಎಷ್ಟೋ ಪೋಷಕರಿಗೆ ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆಂಬ ಅರಿವು ಇರುವುದಿಲ್ಲ. ಇಂತಹದ್ದೆಲ್ಲ ಮೇಳೈಸಿ ಪಬ್ ಅಟ್ಯಾಕ್ ಮತ್ತು ಮಾರ್ನಿಂಗ್ ಮಿಸ್ಟ್ ಹೋಂ ನಂತಹ ಘಟನೆಗಳು ಜರುಗಲು ಕಾರಣವಾಗಿ ಬಿಡುತ್ತವೆ ಎಂಬುದು ಸತ್ಯ ಅಲ್ಲವೇ?

http://www.youtube.com/watch?v=22czcPNG-3M&feature=player_embedded#!

ಇನ್ನು ಪಬ್ ಅಟ್ಯಾಕ್ ವಿಷಯಕ್ಕೆ ಬರೋಣ ಹೋಂ ಸ್ಟೇ ಮೇಲೆ ಧಾಳಿ ಮಾಡಿದ ಪುಂಡರು ಅರೆ ನಗ್ನ ಸ್ಥಿತಿಯಲ್ಲಿದ್ದ ಯುವತಿಯರನ್ನು ಮುಟ್ಟಬಾರದ ಜಾಗದಲ್ಲಿ ಮುಟ್ಟಿ ಹೊಡೆದು ಬಡಿದು ರಾಕ್ಷಸಿ ಕೃತ್ಯವನ್ನು ಎಸಗಿದ್ದು ಕ್ಷಮಿಸಲಾಗದ ದುರ್ವರ್ತನೆ, ಪುಂಡರ ಇಂತಹ ಕೃತ್ಯವನ್ನ ನೈತಿಕ ಪೋಲೀಸ್ ಗಿರಿ ಎಂದು ಹೇಳುವುದು ತಪ್ಪು, ವಿಕೃತ ಮನೋಭಾವದವರು ನೈತಿಕತೆಯ ಅಂಶಗಳನಿಟ್ಟುಕೊಂಡು ಅಲ್ಲಿಗೆ ಧಾಳಿ ನಡೆಸಿರಲಿಲ್ಲ ಅದರ ಹಿಂದಿನ ಉದ್ದೇಶಗಳೇ ಬೇರೆ ಎಂಬುದು ಬೆಳಕಿಗೆ ಬರುತ್ತಿದೆ.ನಗರದ ಹೊರವಲಯದಲ್ಲಿ  ಅನಧಿಕೃತ ಹೋಂ ಸ್ಟೇ ನಡೆಯುತ್ತಿದ್ದರೂ ಪೋಲೀಸ್ ಮತ್ತು ಜಿಲ್ಲಾ ಆಡಳಿತ ವ್ಯವಸ್ಥೆ ಕಂಡರೂ ಕಾಣದಂತಿತ್ತು ಇದನ್ನು ದುರುಪಯೋಗ ಪಡಿಸಿಕೊಂಡ ಪುಂಡ ಚಡ್ಡಿ ಲೀಡರ್ ಅಲ್ಲಿಂದ 5000ರೂಗಳ ಮಾಮೂಲಿ ಹಫ್ತಾ ಪಡೆಯುತ್ತಿದ್ದ ಅದು ಸಿಗದಿದ್ದಾಗ ಹಿಂದೂ ಸಂಸ್ಕೃತಿಯ ಹೆಸರಿನಲ್ಲ ತನ್ನ ಪಟಾಲಂ ಅನ್ನು ಛೂ ಬಿಟ್ಟ ಅಹಿತಕರ ಘಟನೆಗೆ ಕಾರಣನಾಗಿದ್ದಾನೆ ಹೀಗಿರುವಾಗ ಅದು ನೈತಿಕ ಪೋಲೀಸ್ ಗಿರಿ ಹೇಗಾದೀತು? ಇನ್ನು ಅಲ್ಲಿ ಪಾರ್ಟಿ ನಡೆಸಿದವರ ಕಥೆ, ಪಾರ್ಟಿಯ ಕೇಂದ್ರ ಬಿಂದುಗಳು ವಿದ್ಯಾರ್ಥಿಗಳಲ್ಲ ಎಂಬುದು ಜಗಜ್ಜಾಹಿರಾಗಿರುವ ಸತ್ಯ ಮತ್ತು ಅವರ ಸಾರ್ವಜನಿಕ ನಡವಳಿಕೆಗಳ ಕುರಿತು ಒಳ್ಳೆಯ ಮಾತುಗಳಿಲ್ಲ. ಮದ್ಯಾಹ್ನವೇ ಬರ್ತ್ ಡೇ ಪಾರ್ಟಿ ಏರ್ಪಾಡಾಗಿದ್ದರೂ ಕತ್ತಲಾಗುವ ವೇಳೆಗೆ ಅಲ್ಲಿ ಉಳಿದದ್ದು 4-5 ಹುಡುಗಿಯರು ಮತ್ತು ಹುಡುಗರು. ಮಹಿಳಾ ಆಯೋಗದ ಅಧ್ಯಕ್ಷೆ ಸಿ ಮಂಜುಳಾ ಹೇಳುವ ಪ್ರಕಾರ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತನ್ನ ಹುಟ್ಟು ಹಬ್ಬ ಆಚರಣೆಗೆ ಪಿಯುಸಿ ಓದುತ್ತಿದ್ದ ಸ್ನೇಹಿತೆಯರನ್ನು ಆಹ್ವಾನಿಸಿದ್ದರು. ಉಳಿದ ಯುವತಿಯರು ಕಾಲೇಜು ಯುನಿಫಾರಂ ನಲ್ಲೆ ಹೋಂ ಸ್ಟೇ ಗೆ ಬಂದಿದ್ದರು, ಅಲ್ಲಿ ಅವರಿಗಾಗಿ ಪಾರ್ಟಿ ಡ್ರೆಸ್ ಸಿದ್ದಪಡಿಸಲಾಗಿತ್ತು, ಅವರೆಲ್ಲ ಯೂನಿಫಾರಂ ಕಳಚಿ ಪಾರ್ಟಿ ಡ್ರೆಸ್ ಧರಿಸಿದ್ದರು(ಅವು ಎಂತಹ ಡ್ರೆಸ್ ಗಳು ಎಂಬುದು ಜನತೆ ಈಗಾಗಲೆ ನೊಡಿದ್ದಾರೆ) ಮತ್ತು ಪಾರ್ಟಿ ಆಯೋಜಿಸಿದ್ದ ಯುವಕರಿಗೆ ಆ ಯುವತಿಯರ ಬಗ್ಗೆ ತಿಳಿದಿರಲಿಲ್ಲ! ಬರ್ತ್ ಡೇ ಗೆ ಬಿಯರ್ ತರಲಾಗಿತ್ತು ಪಾರ್ಟಿಯಲ್ಲಿ ಪಾಲ್ಗೊಂಡ ಬಹುತೇಕ ಹುಡುಗಿಯರ ಮನೆಗಳಲ್ಲಿ ತಮ್ಮ ಮಕ್ಕಳು ಅಲ್ಲಿಗೆ ಹೋಗಿದ್ದಾರೆ ಎಂಬುದು ತಿಳಿದಿರಲಿಲ್ಲ ಅಂದರೆ ಇದನ್ನ ಏನೆಂದು ತಿಳಿಯಬೇಕು ? ಇದೇನು ಸೆಕ್ಸ್ ಟೂರಿಸಂ ? ಇದು ಅನೈತಿಕತೆಯಲ್ಲದೇ ಮತ್ತೇನು? ಅಂದು ಸ್ಥಳಕ್ಕೆ ಬಂದ ಪೋಲೀಸರಿಗೆ ಸುತ್ತಮುತ್ತಲ ನಿವಾಸಿಗಳು ಹಲವಾರು ಭಾರಿ ಹೋಂ ಸ್ಟೇ ಮುಚ್ಚಿಸುವಂತೆ ದೂರು ನೀಡಿದ್ದರೂ ಕ್ರಮವಾಗಿರಲಿಲ್ಲ ಮತ್ತು ಘಟನೆ ನಡೆದಾಗ ಸ್ಥಳಕ್ಕೆ ಬಂದರೂ ದಾಳಿಕೋರ ಪುಂಡರನ್ನು ವಶಕ್ಕೆ ಪಡೆಯಲಿಲ್ಲ! ಅಂದರೆ ಇದರ ಹಿಂದಿನ ಹುನ್ನಾರವೇನು? ಮಾಧ್ಯಮಗಳು ಸಾಮಾಜಿಕ ಕಳಕಳಿಯಿಲ್ಲದೇ ಘಟನೆಯನ್ನು ಪ್ರಸಾರ ಮಾಡಿವೆ ಎಂಬ ಹುಯಿಲೆದ್ದಿದೆ ಆದರೆ ಈ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗದಿದ್ದರೆ ಇಂತಹ ವಾದಗಳಿಗೆ ಮಾನ್ಯತೆ ಇರುತ್ತಿರಲಿಲ್ಲ ಮಾಧ್ಯಮಗಳ ಕುರಿತು ಒಂದೇ ಆಕ್ಷೇಪಣೆಯೆಂದರೆ ಅರೆನಗ್ನ ಸ್ಥಿತಿ ಯನ್ನು ಮತ್ತು ದಾಳಿಗೀಡಾದವರ ಮುಖಗಳಮರೆಮಾಚಿ ತೋರಿಸಬಹುದಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಚಡ್ಡಿಗಳ ತುತ್ತೂರಿ ಆಗಿರುವ ಹೊಸದಿಗಂತ ಪತ್ರಿಕೆ ಬದ್ಧತೆ ಮರೆತು ಪುಂಡರನ್ನು ಸಮರ್ಥಿಸುವ ಧಾಟಿಯಲ್ಲಿ ವರದಿಗಳನ್ನು ಪ್ರಕಟಿಸುತ್ತಿರುವುದು ಮಾಧ್ಯಮ ಲೋಕದ ದುರಂತದ ಸಂಗತಿ. ಸಾಮಾಜಿಕ ಬದ್ಧತೆ ಉಳ್ಳ ಯಾವ ಪೋಷಕರಾದರೂ ತಮ್ಮ ಹೆಣ್ಣು ಮಕ್ಕಳನ್ನು ಹೊರವಲಯದ ಪಾರ್ಟಿಗಳಿಗೆ ಹೋಗಿ ಬಿಯರ್ ಕುಡೀರಿ, ಅರೆನಗ್ನ ಬಟ್ಟೆ ಧರಿಸಿ ಬೇಕಾದಂತೆ ನಡೆದುಕೊಳ್ಳಿ ಹುಟ್ಟುಹಬ್ಬ ಆಚರಿಸಿಕೊಳ್ಳಿ ಎನ್ನುವುದಿಲ್ಲ, ಅದು ನೈತಿಕ ನೆಲೆಗಟ್ಟಿನ ಸಂಗತಿಯೂ ಅಲ್ಲ. ಘಟನೆ ನಡೆಯುತ್ತಿದ್ದಂತೆ ಘಟನೆಯ ಒಮ್ಮುಖವನ್ನು ಮಾತ್ರ ಖಂಡಿಸಿ ಬೀದಿಗಿಳಿಯುವುದು ಸರಿಯಲ್ಲ ಪ್ರಚಾರವನ್ನೆ ಮುಖ್ಯವಾಗಿರಿಸಿಕೊಂಡು ಹೊರಟಾಗ ಇಂತಹ ಎಡವಟ್ಟುಗಳಾಗುತ್ತವೆ ಎಂಬುದನ್ನು ಸಂಘಟನೆಗಳು ಮತ್ತು ಮುಖಂಡರು ಅರಿಯಬೇಕು. ಪ್ರಕರಣವೊಂದನ್ನೇ ಗುರಿಯಾಗಿಸಿಕೊಂಡು ಅಸಹನೆಯನ್ನು ಪ್ರದರ್ಶಿಸುವಾಗ ಅನೈತಿಕತೆಯನ್ನು ಪೋಷಿಸಬಾರದಲ್ಲವೇ? 

Sunday, June 24, 2012

ಕನ್ನಡ ಅನ್ನದ ಭಾಷೆಯಾಗದಿದ್ದರೆ... ಹೀಗೆ!


ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಸಂಧರ್ಭದಲ್ಲೇ,ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಆರಂಭಿಸಬಾರದೆಂದು ಕನ್ನಡ ಸಾಹಿತ್ಯ ಪರಿಷತ್ತು ನಿರ್ಣಯ ಕೈಗೊಂಡಿದೆ. ಈ ನಡುವೆ ಪರ-ವಿರೋಧದ ಚಟುವಟಿಕೆಗಳು ಚಾಲ್ತಿಗೆ ಬಂದಿವೆ.ಆದರೆ ಬದಲಾದ ಕಾಲಘಟ್ಟದಲ್ಲಿ ಆಂಗ್ಲ ಮಾಧ್ಯಮ ಎಷ್ಟು ಪ್ರಸ್ತುತ ಮತ್ತು ಅಪ್ರಸ್ತುತ ಇದರಿಂದ ಯಾರಿಗೆ ಅನುಕೂಲ ಮತ್ತು ಅನಾನುಕೂಲ ? ಈ ನಡುವೆ ಕನ್ನಡ ಅನ್ನದ ಭಾಷೆಯಾಗಲು ಇರುವ ಅಡ್ಡಿ ಏನು ಎಂಬುದರ ವಿಸ್ತೃತ ಚರ್ಚೆ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಪರವೂ ಅಲ್ಲದ ವಿರೋಧವೂ ಅಲ್ಲದ ವಸ್ತು ನಿಷ್ಠವಾದ ವಿಚಾರದ ಅವಲೋಕನದ ಅಗತ್ಯತೆ ಇದೆ.
ಪ್ರಾಥಮಿಕ ಶಾಲಾ ಹಂತದಲ್ಲಿ ಆಂಗ್ಲ ಭಾಷಾ ಕಲಿಕೆಗೆ ಒತ್ತು ನೀಡಿದ ಸರ್ಕಾರ ಇದೀಗ ಆಂಗ್ಲ ಮಾಧ್ಯಮ ಆರಂಭಿಸುವ ಉತ್ಸಾಹದಲ್ಲಿದೆ. ರಾಜ್ಯದಲ್ಲಿ ಕಳೆದ 3-4ವರ್ಷಗಳಲ್ಲಿ 10000ಕ್ಕೂ ಹೆಚ್ಚು ಕನ್ನಡ ಶಾಲೆಗಳು ಕಣ್ಮುಚ್ಚಿವೆ ಈ ಕುರಿತು ಸಾಹಿತಿಗಳು ಮತ್ತು ಚಿಂತಕರು ಆಂಧೋಲನವನ್ನೇ ಆರಂಬಿಸಿದ್ದಾರೆ ಹೀಗಿರುವಾಗ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಬಿಸಿದರೆ ಕನ್ನಡ ಶಾಲೆಗಳ ಕತ್ತು ಹಿಸುಕಿದಂತಾಗುತ್ತದೆ ಅಲ್ಲವೇ, ಕನ್ನಡ ಭಾಷೆಗೆ ಆಧ್ಯತೆ ಕೊಡಬೇಕಾದ ಸರ್ಕಾರವೇ ಮುಂದಾಗಿ ಕನ್ನಡ ಶಾಲೆಗಳನ್ನು ಕೊಲ್ಲುವ ಕೆಲಸ ಯಾಕೆ ಮಾಡುತ್ತಿದೆ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಕನ್ನಡ ಅತ್ಯಂತ ಪ್ರಾಚೀನ ಭಾಷೆ ಅದಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ ಮೊಗೆದಷ್ಟು ಉಕ್ಕುವ ಉತ್ಸಾಹವೂ ಇದೆ, ಆದರೆ ಕಾಲ ಬದಲಾದಂತೆ ಜನರ ಮನಸ್ಥಿತಿಗಳು ಮತ್ತು ಆಧ್ಯತೆಗಳು ಬದಲಾಗುತ್ತಿವೆ. ಬದಲಾದ ಸಂಸ್ಕೃತಿ ಮತ್ತು ಆರ್ಥಿಕತೆ, ಬದುಕಿನ ಸ್ಥಿರತೆಗಾಗಿ ಕನ್ನಡದ ಆಯ್ಕೆಯ ಬದಲಿಗೆ ಇಂಗ್ಲೀಷ್ ಮಾಧ್ಯಮದೆಡೆಗೆ ಆಕರ್ಷಿಸುವಂತೆ ಮಾಡಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ, ಅನುಷ್ಠಾನದ ಹಂತದಲ್ಲಿದೆ, ಅದಕ್ಕಾಗಿ ಸಮ್ಮೇಳನಗಳು ಮತ್ತು ನಿರ್ಣಯಗಳು , ಕನ್ನಡ ಹಬ್ಬಗಳು, ಚಳುವಳಿಗಳು ನಡೆಯುತ್ತಿವೆ ಆದರೆ ಬದುಕನ್ನು ಕಟ್ಟಿಕೊಡುವ ಭಾಷೆಯನ್ನಾಗಿ ಕನ್ನಡವನ್ನು ರೂಪಿಸುವಲ್ಲಿ ಅಡ್ಡಿ ಉಂಟಾಗಿದೆ. ಅದಕ್ಕೆ ಸ್ಥಳಿಯ ಕಾರಣಗಳು ಇಲ್ಲವಾದರೂ ಜಾಗತಿಕ ಮಟ್ಟದ ನಿರ್ಣಯಗಳು ಅನಿವಾರ್ಯವೆನಿಸುವ ಅಭಿವೃದ್ದಿ ಪ್ರಕ್ರಿಯೆಗಳು ಕನ್ನಡದ ಬದುಕು ಕಟ್ಟಲು ನಮ್ಮ ನೆಲದಲ್ಲಿಯೇ ತಡೆವೊಡ್ಡಿರುವುದು ವಿಷಾಧನೀಯಕರ ಸಂಗತಿ. 
ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ಮಾತನಾಡಲ್ಪಡುವ 40ಭಾಷೆಗಳ ಪೈಕಿ ಕನ್ನಡಕ್ಕೂ ಒಂದು ಸ್ಥಾನವಿದೆ ಎಂಬುದನ್ನು ಮರೆಯುವಂತಿಲ್ಲ, ಜಗತ್ತಿನಾಧ್ಯಂತ 38ಮಿಲಿಯನ್ ಮಂದಿ ಕನ್ನಡ ಭಾಷಿಕರಿದ್ದಾರೆಂಬುದು ಅಷ್ಟೆ ಸಂತಸದಾಯಕವಾದ ವಿಚಾರ. 5ನೇ ಶತಮಾನದಲ್ಲಿ ಕನ್ನಡ ಭಾಷೆಯ ಬೆಳವಣಿಗೆಯನ್ನು ಕಾಣಬಹುದು, ಇವತ್ತು ರಾಜ್ಯದಲ್ಲಿ ಪ್ರತೀ 20ಕಿ.ಮಿಗೆ ಕನ್ನಡದ ಭಾಷೆಯ ವೈವಿದ್ಯವನ್ನು ಕಾಣಬಹುದು ರಾಜ್ಯಾದಾಧ್ಯಂತ 22ಕ್ಕೂ ಹೆಚ್ಚು ರೀತಿಯ ವಿಭಿನ್ನ ಶೈಲಿಯ ಕನ್ನಡ ಭಾಷೆ ಮಾತನಾಡುವುದನ್ನು ಕಾಣಬಹುದು. ಭಾವನೆಗಳ ಹಂಚಿಕೆಗೆ ಮತ್ತು ಚಿಂತನಾಕ್ರಮಕ್ಕೆ ಸಾಥ್ ನೀಡುವ ಕನ್ನಡದ ಕೃತಿಗಳು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲೂ ತನ್ನ ಛಾಪನ್ನು ಮೂಡಿಸಿವೆ. ಸಾಹಿತ್ಯ, ಸಿನಿಮಾ, ಕಾರ್ಪೋರೇಟ್ ಕ್ಷೇತ್ರ ಹಾಗೂ ರಾಜಕೀಯ, ಸಾಪ್ಟ್ ವೇರ್ ಉದ್ಯಮ ಎಲ್ಲೆಡೆಯೂ ಕನ್ನಡಿಗರ ಕೀರ್ತಿ ಪತಾಕೆ ಇದೆ ಆದರೆ ಅದು ವ್ಯಕ್ತಿಗತವಾಗಿ ಅವರು ಕನ್ನಡಿಗರು ಎಂಬಷ್ಟಕ್ಕೆ ಮಾತ್ರ ಸೀಮಿತವಾಗಿದೆ. ಪರಿಮಿತ ವಲಯವನ್ನು ಮೀರಿ ಜಾಗತಿಕ ಸ್ಥಾನ ಗಳಿಸಿಕೊಳ್ಳುವಲ್ಲಿ ಸ್ಥಾನಿಕ ಭಾಷೆ ಕನ್ನಡಕ್ಕೆ ಸಾಧ್ಯವಾಗಿಲ್ಲ ಬಹುಶ ಈ ಕಾರಣಕ್ಕೆ ಅನೇಕ ಮಂದಿ ಆಂಗ್ಲ ಮಾಧ್ಯಮದೆಡೆಗೆ ತಮ್ಮ ಒಲವು ತೋರಿಸಲಾರಂಬಿಸಿದ್ದಾರೆ. 
ಒಂದೆಡೆ ಖಾಸಗಿ ಲಾಬಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವುದಕ್ಕೆ ಅಡ್ಡಿಯಾಗಿದ್ದರೆ ಮತ್ತೊಂದೆಡೆ ದೇಶದಲ್ಲಿ ಜಾರಿಯಲ್ಲಿರುವ ಆರ್ಥಿಕ ಉದಾರೀಕರಣ ನೀತಿ ನಮ್ಮ ಮೂಲ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುತ್ತಿರುವುದಲ್ಲದೇ ಭಾಷೆಯ ಬೆಳವಣಿಗೆಯ ಮೇಲೂ ಅಡ್ಡ ಪರಿಣಾಮ ಬೀರಿದೆ, ಹಾಗಾಗಿ ಕನ್ನಡ ಭಾಷಿಕರಿಗೆ ಅಲ್ಲಿ ಅವಕಾಶಗಳು ಕಡಿಮೆಯಾಗಿವೆ. ಈ ಆಧುನಿಕ ಜಗತ್ತಿನಲ್ಲಿ ಬದುಕಲು ಹಣದ ಹಿಂದೆ ಓಡಬೇಕಾದ ಅನಿವಾರ್ಯ ಸ್ಥಿತಿ ಸೃಷ್ಠಿಯಾಗಿರುವುದು ಕನ್ನಡದ ತೀವ್ರೆತೆಯನ್ನು ಕಡಿಮೆ ಮಾಡಿದೆ ಎನ್ನಲಡ್ಡಿಯಿಲ್ಲ ಅಲ್ಲವೇ. ಒಬ್ಬ ಕೂಲಿ ಕಾರ್ಮಿಕನ ಮಗನೂ ಸಹಾ ಕೂಡಿಟ್ಟ ಜೋಳಿಗೆಯನ್ನು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಲು ವೆಚ್ಚ ಮಾಡುತ್ತಾನೆಂದರೆ ಆತನ ಮನಸ್ಥಿತಿ ಹೇಗಿದೆ? ತನ್ನ ತಲೆಮಾರಿಗೆ ಶ್ರಮದ ದುಸ್ಥಿತಿಯ ಜೀವನ ಸಾಕು ತನ್ನ ಮಕ್ಕಳಾದರೂ ಉನ್ನತ ಸ್ಥಾನಗಳನ್ನು ಗಳಿಸಲಿ ದುಡಿದು ಬದುಕಲಿ ಎಂಬ ಅಪೇಕ್ಷೆ ಹೊಂದುವುದು ಅದಕ್ಕೆ ಕಾರಣವಿರಬಹುದು. ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದಾಗ ಶ್ರಮಿಕ ವರ್ಗಕ್ಕೆ, ಕಾರ್ಮಿಕ ವರ್ಗಕ್ಕೆ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ಅಂದರೆ ಕನ್ನಡದಲ್ಲಿ ಶಿಕ್ಷಣದ ಗುಣಮಟ್ಟವಿಲ್ಲವೆ ಎಂಬ ಪ್ರಶ್ನೆ ಏಳಬಹುದು? ಕನ್ನಡದ ಗುಣಾತ್ಮಕತೆ ಇದ್ದರೂ ಅದು ಅನ್ನದ ಭಾಷೆ ಆಗಬೇಕಲ್ಲವೇ ? ಅದು ಅನ್ನದ ಭಾಷೆಯಾಗ ಬೇಕಾದರೆ ಪೂರಕ ವಾತಾವರಣ ಬೇಕಲ್ಲವೇ ಅದೇ ಇಲ್ಲದ ಮೇಲೆ ಯಾವ ಗುಣಾತ್ಮಕ ಶಿಕ್ಷಣ ನೀಡಿದರೂ ಪ್ರಯೋಜನವೇನು? ಇಂಗ್ಲೀಷ್ ಜಾಗತಿಕ ಭಾಷೆ, ಅದರ ವಿಸ್ತೃತತೆ ಜಾಗತಿಕವಾಗಿ ಎಲ್ಲಾ ಆಯಾಮಗಳನ್ನು ಮೀರಿ ಸಾಗಿದೆ ಹೀಗಿರುವಾಗ ಅದನ್ನು ಅನಿವಾರ್ಯವೆನ್ನುವಂತೆ ಅಪ್ಪಿಕೊಂಡರು ಕನ್ನಡತನಕ್ಕೆ ಧಕ್ಕೆಯಾಗದಂತೆ ವೈಯುಕ್ತಿಕ ನೆಲೆಗಟ್ಟಿನಲ್ಲಿ ಕಾಪಾಡಿಕೊಂಡಲ್ಲಿ ಸೂಕ್ತ ವಾಗಬಹುದೇನೋ.
ಈ ಲೇಖನವನ್ನು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪತ್ರಕರ್ತ ಮಿತ್ರರಾದ ಪ್ರಿಯ ಚಾಮರಾಜಸವಡಿ ಯವರು ಪ್ರಕಟಿಸಿದ್ದಾರೆ ಅದನ್ನು ಈ ಲಿಂಕ್ ನಲ್ಲಿ ನೋಡಬಹುದು ಅವರಿಗೆ ಧನ್ಯವಾದಗಳು
http://www.rediffmail.com/cgi-bin/red.cgi?red=http%3A%2F%2Fepaper%2Esamyukthakarnataka%2Ecom%2F44198%2FSamyuktha%2DKarnataka%2Fjune%2D26%2D2012%2DHU%23page%2F13%2F1&isImage=0&BlockImage=0&rediffng=0

Tuesday, June 5, 2012

ಆಚಾರವಿಲ್ಲದ ನಾಲಿಗೆ ನಿನ್ನ ನೀಚಬುದ್ದಿಯ.....!

ಳೆದ ಕೆಲವು ತಿಂಗಳುಗಳಿಂದ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಕೆಲವು ಮಂದಿ ಮನಬಂದಂತೆ ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗದ ಮಾತುಗಳನ್ನು ಸ್ಥಾನದ ಘನತೆಯನ್ನು ಮೀರಿ ಆಡುತ್ತಿದ್ದಾರೆ. ಸಮಾಜದ ವಿವಿಧ ಸ್ಥರಗಳಲ್ಲಿರುವ ಜನರ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಮತ್ತು ಸಂಘರ್ಷಮಯ ವಾತಾವರಣವನ್ನು ಸೃಷ್ಟಿಸುತ್ತಿದೆ. ಸೈದ್ಧಾಂತಿಕ ತಳಹದಿಯ ಮೇಲೆ ಆಚಾರ-ವಿಚಾರಗಳು ಸಮಾನಂತರದಲ್ಲಿದ್ದರೆ ಮಾತ್ರ ಅದಕ್ಕೆ ಮನ್ನಣೆ ಇಲ್ಲದಿದ್ದರೆ ಸಾಮಾಜಿಕ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲವಾಗುವುದು ಖಚಿತ. ಅಂತಹ ಪ್ರಮುಖ ವಿದ್ಯಮಾನಗಳತ್ತ ಒಂದು ಮೆಲುಕು ನೋಟ ಇಲ್ಲಿದೆ.
ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ನಕ್ಸಲೈಟರಾಗುತ್ತಾರೆ ಎಂದು ಈಗ್ಯೆ ಕೆಲ ತಿಂಗಳ ಹಿಂದೆ ಅಪ್ಪಣೆ ಕೊಡಿಸಿದ್ದು ರವಿಶಂಕರ್ ಗುರೂಜಿ ಎಂಬ ಹೆಣ್ಣು ಕಂಠದ ಸ್ವಾಮೀಜಿ. ಧಾರ್ಮಿಕ ಪ್ರವಚನಗಳ ಮೂಲಕ ಹೆಸರು ಮಾಡಿರುವ ಈತ ಆಧ್ಯಾತ್ಮಿಕ ವಿಚಾರಗಳ ಜೊತೆಗೆ ವ್ಯಾಯಾಮವನ್ನು ಮಾಡಿಸುವುದುಂಟು. ಕಾರ್ಪೋರೇಟ್ ಶಕ್ತಿಗಳ ಮೂಲಕ ಆಧ್ಯಾತ್ಮಿಕ ಶಿಬಿರಗಳನ್ನು ನಡೆಸುವ ರವಿಶಂಕರ್ ಗುರೂಜಿ ತನ್ನದೇ ಆದ ಶಕ್ತಿ ವಲಯವನ್ನು ಪ್ರತಿಷ್ಠಾಪಿಸಿಕೊಂಡಿರುವಾತ. ಅನೇಕ ಗಣ್ಯರ ನಡುವೆ ಇವರಿಗೂ ಆಧ್ಯತೆ ಉಂಟು. ನಮ್ಮಲ್ಲಿ 'ಮಠಾಧೀಶರು' ಗಳನ್ನು ಬಾಬಾ ಗಳನ್ನು ನಂಬುವ ಮತ್ತು ಆರಾಧಿಸುವ ಮೂಡಸಂಸ್ಕೃತಿ ಇನ್ನೂ ಜಾರಿಯಲ್ಲಿರುವುದರಿಂದ (ಈ ಪೈಕಿ ಸುಶಿಕ್ಷಿತರೆನಿಸಿಕೊಂಡ ಪ್ರಜ್ಞಾವಂತರೇ ಹೆಚ್ಚು ಎನ್ನುವುದು ಇನ್ನೂ ದುರಂತದ ಸಂಗತಿಯೇ ಹೌದು!) ಇವರು ಹೇಳಿದ್ದನ್ನೆ ಸತ್ಯವೆಂದು ನಂಬುವ ಸಮೂಹವೇ ಇದೆ. ಹೀಗಿರುವಾಗ ಅದ್ಯಾವ ದೃಷ್ಟಿಕೋನದಲ್ಲಿ ಈ ಸ್ವಾಮೀಜಿ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ನಕ್ಸಲೈಟರು ಗಳಾಗುತ್ತಾರೆ ಎಂದರೋ ತಿಳಿಯದು. ಕಾರ್ಪೋರೇಟ್ ಶಕ್ತಿಗಳ ಮುಖವಾಡವಾಗಿರುವ ಈತ ಖಾಸಗಿ ಶಿಕ್ಷಣದ ಅಡ್ಡೆಗಳನ್ನು ಪ್ರೋತ್ಸಾಹಿಸಲು ಈ ಮಾತನ್ನು ಆಡಿದಂತಿದೆಯಲ್ಲವೇ?
            ನಡೆದಾಡುವ ದೇವಮಾನವ ಎಂಬ ಬಿರುದಿಗೆ ಪಾತ್ರರಾಗಿರುವ ತುಮಕೂರು ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿ ಸಮಾಜೋದ್ದಾರಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವ ಅರ್ಪಣಾ ಭಾವ, ಸಾಧನೆ ಯಾವತ್ತಿಗೂ ನೆನಪಿನಲ್ಲಿಡುವಂತಹದ್ದು. ಸ್ವಾಮಿಗಳು ಶಿಸ್ತಿನ ಮತ್ತು ನ್ಯಾಯದ ಪ್ರತೀಕ ಹಾಗೆಯೇ ಧಾರ್ಮಿಕ ಕೈಂಕರ್ಯದಲ್ಲೂ ಆರಾಧಿಸ ಬಹುದಾದ ವ್ಯಕ್ತಿತ್ವ ಹೊಂದಿದವರು. ಇಂತಹ ಸ್ವಾಮೀಜಿ, ಮುಖ್ಯ ಮಂತ್ರಿ ಸದಾನಂದ ಗೌಡ ತುಮಕೂರಿಗೆ ತೆರಳಿ ಮಠದ ಆವರಣದಲ್ಲಿ ಕೋಟಿ ಲಿಂಗ ಸ್ಥಾಪನೆಗೆ ಕಾರ್ಯಕ್ರಮ ನೆರವೇರಿಸಿ ಹೋದ ಮರುದಿನಕ್ಕೆ ಅದನ್ನು ನಿರಾಕರಿಸಿದ್ದು ಅವರ ವ್ಯಕ್ತಿತ್ವಕ್ಕೆ ಘನತೆ ತರುವಂತಹದ್ದೇ? ಆರೋಪಿಯಾಗಿ ಆಸ್ಪತ್ರೆಯ ಜೈಲಿನಲ್ಲಿದ್ದ ಮಾಜಿ ಸಿಎಂ ಬಿಎಸ್ ವೈ ಯನ್ನು ಖುದ್ದಾಗಿ ಹೋಗಿ ಆಶೀರ್ವದಿಸಿ ಬಂದದ್ದು ಶೋಭೆ ತರುವ ವಿಷಯವೇ? ಸಿಎಂ ಸದಾನಂದ ಗೌಡ ತನ್ನ ಹುಟ್ಟುಹಬ್ಬದ ದಿನದಂದು ಮಠಕ್ಕೆ ಹೋಗಿ ಆಶೀರ್ವಾದ ಬೇಡಿದರೆ ಮೌನವಾಗಿ ಕುಳಿತದ್ದು ಸಾರ್ವತ್ರಿಕ ವಲಯದಲ್ಲಿ ಸ್ವಾಮೀಜಿಯವರ ಬಗೆಗೆ ಎಂತಹ ಭಾವನೆಯನ್ನು ಮೂಡಿಸುತ್ತದೆ ಅಲ್ಲವೇ?
ಮೊನ್ನೆ ಮೊನ್ನೆ ಹಾಸನದಲ್ಲಿ ನಡೆದ ಜಾತಿ ಸಮಾರಂಭವೊಂದಕ್ಕೆ ಆಗಮಿಸಿದ್ದ ಊರಗುಂಡ ಪೆದ್ದಲಿಂಗನೆಂಬ ವಿಚಿತ್ರ ಹೆಸರಿನ ಸ್ವಾಮೀಜಿಯೊಬ್ಬ ಸಾರ್ವಜನಿಕ ವೇದಿಕೆಯಲ್ಲಿ ನಿಂತು ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಹಳಿಯುವ ಭರದಲ್ಲಿ ಭಾರತ ನೀಚ ದೇಶ ಎಂದು ಜರಿದನಲ್ಲಾ ಆತ ಜನಿಸಿದ್ದು ಮತ್ತು ಸಂಸ್ಕಾರ ಪಡೆದದ್ದು ವಿದೇಶದಲ್ಲಾ? ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ದೇಶದ ಸಾಂವಿಧಾನಿಕ ವ್ಯವಸ್ಥೆಯನ್ನು ಗೌರವಿಸುವ ಬದಲಿಗೆ ವರ್ಣ ವ್ಯವಸ್ಥೆಯ ಸಲುವಾಗಿ ದೇಶವನ್ನು ಜರಿಯಲು ನಿಂತವನ ವಿರುದ್ದ ಜಿಲ್ಲಾಡಳಿತ ತುಟಿಪಿಟಕ್ಕೆನ್ನದೇ ಹೋದದ್ದು ಮಾತ್ರ ಮತ್ತೂ ದುರಂತ ಅಲ್ಲವೇ? ಯೋಗಾಸನ ಮಾಡಿಸುವ ಬಾಬಾ ರಾಮದೇವ ತನ್ನದೇ ಒಡೆತನದ ಸಂಸ್ಥೆಗಳಲ್ಲಿ ನಡೆಯುವ ವಂಚನೆ ಮತ್ತು ಶೋಷಣೆಗಳನ್ನು ಇಟ್ಟುಕೊಂಡು ಭ್ರಷ್ಟಾಚಾರದ ವಿರುದ್ದ ಸೆಣಸಲು ನಿಂತು ಬಿಡುತ್ತಾರೆ, ಸಮಯಕ್ಕೆ ತಕ್ಕಂತೆ ಮತೀಯ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಿಡುತ್ತಾರೆ ಒಂದು ವರ್ಗದ ಜನ ಅವರ ಬೆಂಬಲಕ್ಕೆ ನಿಂತು ಬಿಡುತ್ತಾರೆ. ಇಂತಹ ಬಾಬಾಗಳಿಂದ ಅದೆಂತಹ ನಾಯಕತ್ವ ಸಿಕ್ಕೀತು ಈ ದೇಶದ ಪ್ರಮುಖ ಹೋರಾಟಕ್ಕೆ ? ದೇಶದ ಸಮುಷ್ಠಿಯೇ ಬೆನ್ನಿಗೆ ನಿಂತು ಬೆಂಬಲಿಸಿದರೆ ಅಣ್ಣಾ ಹಜಾರೆಯಂತಹ ಗಾಂಧೀವಾದಿ ಹೋರಾಟಗಾರ ಸ್ವಾಸ್ಥ್ಯ ಕಳೆದುಕೊಂಡವನಂತೆ ಒಂದು ಹಂತದಲ್ಲಿ ಕಾಂಗ್ರೆಸ್ ಅನ್ನು ತಿರಸ್ಕರಿಸಿ, ಕುಡುಕರಿಗೆ ಹೊಡೆಯಿರಿ ಎಂದು ಬೊಬ್ಬೆ ಇಟ್ಟರೆ ನಂಬಿ ಹಿಂದೆ ಬಂದ ಸಮುದಾಯ ಮತ್ತು ಅವರ ಭಾವನೆಗಳಿಗೆ ಕಿಮ್ಮತ್ತು ಸಿಗೋದಾದರೂ ಹೇಗೆ? ಲೋಕಪಾಲ್ ಬಿಲ್ ಅಣ್ಣಾ ಹಜಾರೆ ಹೇಳಿದಂತೆ ಆಗಬೇಕೆನ್ನುವುದಕ್ಕೆ ಬಿಜೆಪಿ ಪಕ್ಷವೂ ಸಹಾ ಸಂಸತ್ ನಲ್ಲಿ ವ್ಯಾಪಕ ವಿರೋದ ವ್ಯಕ್ತಪಡಿಸಿದೆ ಹೀಗಿರುವಾಗ ಬರಿಯ ಕಾಂಗ್ರೆಸ್ ಏಕೆ ಬಿಜೆಪಿಯನ್ನು ತಿರಸ್ಕರಿಸಲು ಅಣ್ಣಾ ಹಜಾರೆ ಮತ್ತು ತಂಡ ಕರೆ ನೀಡಬೇಕಲ್ಲವೇ? ತನ್ನ ಪ್ರಾಮಾಣಕತೆಗೆ ಮತ್ತು ಸುಧಾರಣೆಗಳಿಗೆ ಹೆಸರು ವಾಸಿಯಾದ ಮಾಜಿ ಪೋಲೀಸ್ ಅಧಿಕಾರಿ ಕಿರಣ್ ಬೇಡಿ ದೇಶದ ಪಾವಿತ್ರ್ಯತೆಯ ಸಂಕೇತವಾಗಿರುವ ಸಂಸತ್ ನ ಸದಸ್ಯರ ಕುರಿತು (ಎಲ್ಲರನ್ನೂ ಸೇರಿಸಿಕೊಂಡು) ಅವಹೇಳನಕಾರಿಯಾದ ಮಾತುಗಳನ್ನಾಡುವುದು ಹೊಣೆಯರಿತವರ ಲಕ್ಷಣವೇ?
           ಇನ್ನು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಉಡುಪಿಯ ಪೇಜಾವರ ಶ್ರೀಗಳು, ಮೊನ್ನೆ ವಿಪ್ರ ಸಮಾವೇಶದಲ್ಲಿ ಪಂಕ್ತಿ ಸಹಬೋಜನ ವಿರೋಧಿಸಿ ನೀಡಿದರೆನ್ನಲಾದ ಹೇಳಿಕೆ ಮತ್ತು ಅದರ ಕುರಿತು ನಡೆಯುತ್ತಿರುವ ಪರ-ವಿರೋಧದ ಚರ್ಚೆಗಳು ವ್ಯಕ್ತಿಗತವಾಗಿ ನಡೆಯುತ್ತಿವೆ. ಉಡುಪಿಯ ಪೇಜಾವರರ ಮನಸ್ಥಿತಿ ಯಾರಿಗೂ ತಿಳಿಯದ್ದೇನಲ್ಲ, ಅವರ ಜಾತೀಯ ಮನೋಭಾವಕ್ಕೆ ಶಿವಮೊಗ್ಗದ ಭಾಷಣದ ಆಧಾರವೇ ಬೇಕಿಲ್ಲ, ಇದಕ್ಕೂ ಮುನ್ನ ಶ್ರೀಗಳು ತಮ್ಮ ಶ್ರೇಷ್ಠತೆಗೆ ಕುಂದುಂಟು ಬರುವ ರೀತಿಯಲ್ಲೇ ಹಲವು ಸಂಧರ್ಭಗಳಲ್ಲಿ ನಡೆದುಕೊಂಡಿದ್ದಾರೆ. ದಲಿತ ಕೇರಿಯ ಸಹಭೋಜನಕ್ಕೆ ಕರೆದಾಗ ಕಣ್ಮರೆಯಾಗುತ್ತಾರೆ, ಮಾಂಸ ಹಾರಿಗಳ ಜೊತೆ ಸಹಪಂಕ್ತಿ ಭೋಜನ ಮಾಡಬೇಡಿ ಎನ್ನುತ್ತಾರೆ ಹಾಗಾದರೆ ಹಿಂದೆಲ್ಲಾ ಅದನ್ನು ರೂಡಿಸಿಕೊಂಡಿದ್ದವರು ಯಾರು ಎಂಬ ಪ್ರಶ್ನೆಯನ್ನು ಯತಿಗಳು ಕೇಳಿಕೊಂಡರೆ ಒಳ್ಳೆಯದು. ಹೋಗಲಿ ಹಸುವಿನ ಹಾಲು ಮಾಂಸಜನ್ಯವಾದ ಪದಾರ್ಥವಲ್ಲವೇ? ಸಕ್ಕರೆಯಲ್ಲಿ ಮೂಳೆಯ ಅಂಶವಿಲ್ಲವೇ? ಡಾಲ್ಡಾದಲ್ಲಿ ಏನು ಬಳಕೆಯಾಗುತ್ತದೆಂದು ತಿಳಿದಿಲ್ಲವೇ? ಕಾಲ ಬದಲಾಗಿದೆ ಜನ ವಿಚಾರ ಮಾಡುವ ಶಕ್ತಿ ಬೆಳೆಸಿಕೊಂಡಿದ್ದಾರೆ ತಮ್ಮ ಬೇಳೆ ಹೆಚ್ಚು ದಿನ ಬೇಯದು , ತಾವು ಹೇಳಿದ್ದೆಲ್ಲ ವೇದವಾಕ್ಯ ಎಂಬ ಹುಂಬತನವನ್ನು ಬಿಡದಿದ್ದರೆ ಮುಂದೊಂದು ದಿನ ಜನರೇ ಸರಿಯಾದ ಪಾಠ ಕಲಿಸುವರು ಅಲ್ಲವೇ? ಆಚಾರವಿಲ್ಲದ ನಾಲಿಗೆಗೆ ಕಡಿವಾಣ ಬೀಳದಿದ್ದರೆ ಪ್ರತಿಷ್ಠೆಗಳು ಮುರಿದು ಬೀಳುತ್ತವೆನ್ನುವುದನ್ನು ನೆನಪಿಡಬೇಕಷ್ಟೇ.



Wednesday, May 30, 2012

ಕನಸುಗಾರ ನಾ, ನಿಮಗೆ ಇನ್ನು ನಾ...?

ಕನ್ನಡ ಚಿತ್ರರಂಗ 70ರದಶಕದಲ್ಲಿ ಭಾರತೀಯ ಚಿತ್ರರಂಗಕ್ಕೆ ಹೊಸ ಅಲೆಯ ಚಿತ್ರಗಳನ್ನು ಕೊಡುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ವಿಜೃಂಬಿಸಿತ್ತು. ಸಿನಿಮಾ ಗಳೆಂದರೆ ಕನ್ನಡ ಸಿನಿಮಾಗಳಂತಿರಬೇಕು ಎಂಬ ಹಾಗೆ ಇದ್ದ ಕಾಲವದು. ಪ್ರಯೋಗಶೀಲತೆಗೆ ಹೆಸರುವಾಸಿಯಾಗಿದ್ದ ಸ್ಯಾಂಡಲ್ ವುಡ್ ನಲ್ಲಿ ಆ ವೇಳೆಗಾಗಲೇ 'ರಾಜಣ್ಣ' ಹೆಮ್ಮರವಾಗಿ ಬೆಳೆದುನಿಂತಿದ್ದರು ಶಂಕರ್ ನಾಗ್ ರಂತ ವರ್ಕಾಲಿಕ್ ನಟ-ನಿರ್ದೇಶಕ, ವಿಷ್ಣುವರ್ಧನ್ ರಂತಹ ಮೇರು ನಟರು,ಮಂಡ್ಯದ ಗಂಡು ಅಂಬರೀಷ್ ಉದಯವಾಗಿದ್ದರು.80ರ ದಶಕದ ಆರಂಬದಲ್ಲಿ ಇವರಿಗೆ ಜೊತೆಯಾಗಿದ್ದು ಟೈಗರ್ ಪ್ರಭಾಕರ್ ಇಂತಹ ದಿಗ್ಗಜರುಗಳ ಅಬ್ಬರದ ನಡುವೆಯೇ ಅದ್ದೂರಿ ಕಮರ್ಷಿಯಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಸಾರ್ವಕಾಲಿಕ ಸೂಪರ್ ಡೂಪರ್ ಚಿತ್ರ ಕೊಡುವ ಮೂಲಕ ಇಡೀ ದೇಶದ ಚಿತ್ರ ಪ್ರೇಮಿಗಳು ನಿಬ್ಬೆರಗಾಗಿ ಸ್ಯಾಂಡಲ್ ವುಡ್ ನತ್ತ ನೋಡುವಂತೆ ಮಾಡಿದ ಸಾಹಸಿ ಯುವಕನೇ ವಿ ರವಿಚಂದ್ರನ್! ಯುವಪೀಳಿಗೆಯಲ್ಲಿ ಮತ್ತು ಲಲನಾ ಮಣಿಯರ ನಡುವೆ ರವಿಚಂದ್ರನ್ ಎನ್ನುವ ಹೆಸರೇ ರೋಮಾಂಚನ ಉಂಟು ಮಾಡುವಂತದ್ದು. ರವಿ  ಈಗ 51 ತುಂಬಿ 52ವರ್ಷಕ್ಕೆ ಕಾಲಿಟ್ಟಿದ್ದಾರೆ, ಈ ಸಂಧರ್ಭದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸತನದ ಟ್ರೆಂಡ್ ಸೃಷ್ಟಿಸಿದ ಕನಸುಗಾರ ರವಿಯ ಕುರಿತು ಅವಲೋಕಿಸುವುದು ಸೂಕ್ತವಾಗಬಹುದು.
           ರವಿಚಂದ್ರನ್ ಹೆಸರು ಕೇಳಿದರೆ ಇವತ್ತಿಗೂ ಮೈ ಪುಳಕಗೊಳ್ಳುವವರು ಎಷ್ಟೋ ಮಂದಿ ಇದ್ದಾರೆ! ಅಂತಹ ಮಾಂತ್ರಿಕ ಶಕ್ತಿಯನ್ನು ರವಿ ತನ್ನ ಚಿತ್ರಗಳ ಮೂಲಕ ಪಡೆದುಕೊಂಡ ಹೆಗ್ಗಳಿಕೆ ಪಡೆದಿದ್ದಾರೆ. ಪ್ರಯೋಗಶೀಲತೆ ಮತ್ತು ಕಲಾತ್ಮಕ ಚಿತ್ರಗಳ ಕಾಲಘಟ್ಟದ ನಂತರ ಕನ್ನಡದಲ್ಲಿ ಹೊಸಅಲೆಯ ಕಮರ್ಷಿಯಲ್ ಚಿತ್ರ ನೀಡುವ ಮೂಲಕ ಚಲನಚಿತ್ರದಲ್ಲಿ ಹೊಸ ಸಂಗೀತದ ಪರಿಚಯವನ್ನು, ಸಾಹಿತ್ಯದ ಕಸುವನ್ನು, ಹಂಸಲೇಖರಂತಹ ರತ್ನವನ್ನು ಕನ್ನಡದ ಜನತೆಗೆ ಪರಿಚಯಿಸಿದ್ದು ಒನ್ಸ್ ಎಗೇನ್ ಇದೇ ರವಿಚಂದ್ರನ್. ತಂದೆ ವೀರಾಸ್ವಾಮಿ ಚಿತ್ರ ನಿರ್ಮಾಪಕರಾಗಿದ್ದರೂ ಸಹಾ ಅವರ ಛಾಯೆಯಿಲ್ಲದೇ ಗಾಡ್ ಫಾದರ್ ಗಳ ನೆರವಿಲ್ಲದೇ ದಿಗ್ಗನೆ ಎದ್ದು ನಿಂತದ್ದು ರವಿಚಂದ್ರನ್.  1984ರಲ್ಲಿ ಪ್ರಳಯಾಂತಕ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಎಂಟ್ರಿ ಪಡೆದ ರವಿ ಖಳನಾಗಿ ಅಭಿನಯಿಸಿದ್ದರು ಅದೂ ಮಾತಿಲ್ಲದ ಪಾತ್ರದಲ್ಲಿ ! ಪೂರ್ಣ ಪ್ರಮಾಣದ ಹೀರೋ ಆಗಿ ಅವತರಿಸಿದ್ದು 'ನಾನೇರಾಜ' ಚಿತ್ರದ ಮೂಲಕ. ಅಲ್ಲಿಂದ ಮುಂದೆ ಬಂದ ಹಲವು ಚಿತ್ರಗಳಲ್ಲಿ ಸೈಕಲ್ ಹೊಡೆದರು, ದೊಡ್ಡ ಬ್ರೇಕ್ ನೀಡಿದ್ದು ಮಾತ್ರ 1987ರಲ್ಲಿ ರವಿ ಆಲ್ ಇನ್ ಒನ್ ಆಗಿ ನಟಿಸಿ ನಿರ್ದೇಶಿಸಿ ನಿರ್ಮಿಸಿದ 'ಪ್ರೇಮಲೋಕ'ಚಿತ್ರ. ಹಲವು ಹೊಸತನಗಳಿಗೆ ಹೊಸಪ್ರತಿಭೆಗಳಿಗೆ ನಾಂದಿ ಹಾಡಿದ ಈ ಚಿತ್ರದ ನಂತರ ರವಿಚಂದ್ರನ್ ನಟಿಸಿದ ರಣದೀರ, ಶಾಂತಿಕ್ರಾಂತಿ, ಯುದ್ದಕಾಂಡ, ಅಂಜದಗಂಡು ಹೀಗೆ ಒಂದೇ ಎರಡೇ ಸಾಲು ಸಾಲಾಗಿ ಯಶಸ್ವಿ ಚಿತ್ರಗಳನ್ನು ಕೊಟ್ಟರು. ಯುವಜನತೆ ರವಿಚಂದ್ರನ್ ಸಿನಿಮಾಗಳೆಂದರೆ ಕಾದು ಕೂರುವಂತ ಪರಿಸ್ಥಿತಿ ಸೃಷ್ಟಿಯಾಯಿತು, ಎಲ್ಲ ವರ್ಗದ ಜನರಿಗೂ ರವಿ ಇಷ್ಟವಾಗುವಂತಹ ಪಾತ್ರಗಳಲ್ಲಿ ಬಂದು ಹೋದರು. ನಿಜ ಹೇಳಬೇಕೆಂದರೆ 80ರ ದಶಕದಲ್ಲಿ ಉತ್ತುಂಗದಲ್ಲಿದ್ದ ಅಂಬಿ ಮತ್ತು ವಿಷ್ಣು ಜೊತೆಗೆ ಸರಿಸಮನಾಗಿ ಮತ್ತು ವಿಭಿನ್ನವಾದ ಇಮೇಜ್ ಸೃಷ್ಟಿಸಿಕೊಂಡರು. ಜನರಿಗೆ ಹೊಸ ನೋಟದ ಸವಿಯನ್ನು ಉಣಬಡಿಸಿದರು. ರವಿ ಚಿತ್ರಗಳ ಹಾಡುಗಳು, ಅದ್ದೂರಿತನ, ಕಲಾತ್ಮಕತೆ, ತಾಂತ್ರಿಕ ನೈಪುಣ್ಯತೆ, ಕಲ್ಪನೆ ಗಳನ್ನು ಬೇರೆಯವರ ಸಿನಿಮಾಗಳಲ್ಲಿ ಕಾಣಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ರವಿ ಬೆಳೆದು ನಿಂತರು. ಏಕಾಂಗಿ ಎಂಬ ಚಿತ್ರವನ್ನು ಮಹತ್ವಾಕಾಂಕ್ಷೆಯಿಂದ ನಿರ್ಮಿಸಿದರಾದರೂ ಗಲ್ಲಾ ಪೆಟ್ಟಿಗೆಯಲ್ಲಿ ಅದು ಯಶಸ್ಸು ಕಾಣದಿದ್ದುದರಿಂದ ಮಂಕಾದ ರವಿ ನಂತರದ ದಿನಗಳಲ್ಲಿ ಸೋಲುಗಳನ್ನು ಕಂಡರು. ಈ ನಡುವೆ ವಿವಾದಗಳು ರವಿಯನ್ನು ಅರಸಿಕೊಂಡು ಬಂದವು, ಹಳ್ಳಿಮೇಷ್ಟ್ರು ಸಿನಿಮಾ ನಾಯಕಿಯಾಗಿದ್ದ ಬಿಂದಿಯಾ, ರವಿ ಮೇಲೆ ಮಾಡಿದ ಆರೋಪ ಇಮೇಜ್ ಕೆಡಿಸದಿದ್ದರೂ ವಿವಾದಕ್ಕೆ ತಾನೇನೂ ಹೊರತಲ್ಲ ಎಂಬುದನ್ನು ಸಾಬೀತು ಪಡಿಸಿತು. ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಹೆಸರು ಮಾಡಿದ ಜೂಹಿಚಾವ್ಲಾ ಮತ್ತು ಖುಷ್ ಬೂ ಗೆ ಮೊದಲ ಅವಕಾಶ ನೀಡಿ ಬೆಳ್ಳಿತೆರೆಗೆ ಪರಿಚಯಿಸಿದ ರವಿಚಂದ್ರನ್ ಅನೇಕ ಹೊಸ ಮುಖಗಳನ್ನು ಕನ್ನಡಕ್ಕೆ ತಂದಿದ್ದಾರೆ. 
          ಹೀಗಿರುವಾಗಲೇ ಇತ್ತೀಚಿನ 'ನರಸಿಂಹ', ದಶಮುಖ ದಂತಹ ಪ್ಲಾಪ್ ಚಿತ್ರಗಳ ಸೋಲಿನ ನಡುವೆಯ ಕನಸಿನ ಮಂಜಿನ ಹನಿ ಎಂಬ ಚಿತ್ರವನ್ನು 3-4ವರ್ಷಗಳಿಂದ ನಿರ್ಮಿಸುತ್ತಲೇ ಇದ್ದಾರೆ. ಅದು ತಾನಂದುಕೊಂಡಂತೆ ಬಂದಿಲ್ಲ ಮತ್ತೆ ಮೂರನೇ ಬಾರಿಗೆ ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ, ಆ ಚಿತ್ರ ಬರುವ ತನಕ ತನ್ನ ಹುಟ್ಟ ಹಬ್ಬದ ಸಂಭ್ರಮ ಇಲ್ಲ ಎಂದು ಘೋಷಿಸಿದ್ದರು.ಆದರೆ ಅಭಿಮಾನಿಗಳ ಒತ್ತಡಕ್ಕೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ರವಿ ಕಾಲಿರಿಸಿ 26ವರ್ಷಗಳು ಸಂದಿವೆ. ಈಗ ಅವರ ಅಭಿನಯದ ಕ್ರೇಜಿ ಲೋಕ ತೆರೆಗೆ ಬರಲು ಸಜ್ಜಾಗಿದೆ. ರಾಜ್ಯದಲ್ಲಿ ಹಾಲಿವುಡ್ ಮಾದರಿಯ ಸಿನಿಮಾ ನಿರ್ಮಾಣಕ್ಕೆ ಎಲ್ಲಾ ಸೌಲಭ್ಯಗಳಿರುವ ಅತ್ಯಾಧುನಿಕ ಸಿನಿ ನಗರವನ್ನು 350ಕೋಟಿ ವೆಚ್ಚದಲ್ಲಿ ನಿರ್ಮಿಸುವ ಮಹತ್ವಕಾಂಕ್ಷೆಯನ್ನು ಕನಸುಗಾರ ವ್ಯಕ್ತಪಡಿಸುತ್ತಾರೆ. ಅದಕ್ಕಾಗಿ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ತಮ್ಮ ಪುತ್ರನನ್ನು ನಾಯಕನನ್ನಾಗಿಸಿ ಚಿತ್ರ ತಂದ ನಂತರ ರವಿಯ ಕನಸಿನ  ಕ್ರೇಜೀಸ್ಟಾರ್ ಸಿನಿಮಾ ಬರಲಿದೆ. ಈಗ ಕನ್ನಡ ಸಿನಿಮಾಗಳಲ್ಲಿ ಹೊಸತನ ಬಂದಿದೆ, ಹೊಸಬರ ಆಗಮನವಾಗಿದೆ ಅಭಿಮಾನಿಗಳು ಮೊದಲಿನಂತಿಲ್ಲ ಬದಲಾವಣೆ ಬಯಸುತ್ತಾರೆ ಈ ಎಲ್ಲಾ ವೈರುದ್ಯಗಳ ನಡುವೆ ಕನಸುಗಾರ ಮತ್ತೊಮ್ಮೆ ಎದ್ದು ಬರುವನೇ ಕಾದು ನೋಡೋಣ..

Monday, May 7, 2012

ಕನ್ನಡ ಕಟ್ಟಾಳು ಅನಕೃ ನೆನಪಾಗ್ತಾರೇನ್ರೀ??



ಮೊನ್ನೆ  ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಅಸಲಿಗೆ ಕನ್ನಡ ಸೇವೆ ಮಾಡುವ, ಕನ್ನಡ ಪರ ಚಿಂತನೆಗಳನ್ನಿಟ್ಟುಕೊಂಡ, ಕನ್ನಡಿಗರ ಭಾವನೆಗಳಿಗೆ ಸ್ಪಂದಿಸುವ ಮನೋಭಾವದ ಜನ ಎಷ್ಟು ಮಂದಿ ಆಯ್ಕೆಯಾಗಿದ್ದರೋ ಗೊತ್ತಿಲ್ಲ. ಆದರೆ ಕನ್ನಡ ತೇರು ಎಳೆಯುವ ಸಾರಥಿಗಳಿಗೆ ಮತ್ತು ಕನ್ನಡಿಗರಿಗೆ ಸದಾ ಕಾಲಕ್ಕೂ ನೆನಪಾಗ ಬೇಕಾದುದು ಮಾತ್ರ ಅರಕಲಗೂಡು ನರಸಿಂಗ ಕೃಷ್ಣರಾಯರು(ಅನಕೃ). ಇವತ್ತು ಕನ್ನಡಿಗರ ಹಿತಾಸಕ್ತಿಗಳಿಗೆ ಧಕ್ಕೆ ತರುವಂತಹ ಹಲವು ಪ್ರಕ್ರಿಯೆಗಳು ಜಾರಿಯಲ್ಲಿವೆ ಇಂತಹವುಗಳ ವಿರುದ್ದ ಮೊದಲ ಬಾರಿಗೆ ಸೆಟೆದು ನಿಂತದ್ದು ಮತ್ತು ಸಮಸ್ತ ಕನ್ನಡಿಗರನ್ನು ಒಗ್ಗೂಡಿಸಿದ ಕೀರ್ತಿ ಮಾತ್ರ ಅನಕೃ ಅವರಿಗೆ ಸಲ್ಲುತ್ತದೆ. ಇದೇ ಮೇ 9ಕ್ಕೆ ಅನಕೃ ಅವರ 104ನೇ ಜನ್ಮಜಯಂತಿ. ಪ್ರಸಕ್ತ ಸಂಧರ್ಭದಲ್ಲಿ ಅನಕೃ ಅವರ ವಿಚಾರ ಮಂಥನ ಹಾಗೂ ಕನ್ನಡದ ಹೋರಾಟಕ್ಕೆ, ತುಡಿತಕ್ಕೆ ಇನ್ನೂ ಹೆಚ್ಚಿನ ಶಕ್ತಿ ತುಂಬ ಬಲ್ಲದು.
ಅನಕೃ ಹುಟ್ಟಿದ್ದು 9ನೇ ಮೇ 1908ರಂದು. ಅವರ ಮೂಲ ಕೋಲಾರ, ಆದರೆ ಅವರ ಅಜ್ಜ ಮತ್ತು ತಂದೆ ನರಸಿಂಗರಾಯ, ತಾಯಿ ಅನ್ನಪೂರ್ಣಮ್ಮ ನೆಲೆಸಿದ್ದು ಹಾಸನ ಜಿಲ್ಲೆಯ ಅರಕಲಗೂಡು. ಉದ್ಯೋಗ ನಿಮಿತ್ತ ನೆಲೆಯಾಗಿದ್ದ ಪೋಷಕರೊಂದಿಗೆ ಬಾಲ್ಯವನ್ನು ಅರಕಲಗೂಡಿನಲ್ಲೇ ಕೆಲ ಕಾಲ ಕಳೆದ ಅನಕೃ ಪ್ರೈಮರಿ ಹಂತದ ಶಿಕ್ಷಣವನ್ನು ಸಹಾ ಇಲ್ಲಿಯೆ ಪೂರೈಸಿದರು.. ಮತ್ತು ಆ ಕಾರಣಕ್ಕಾಗಿಯೇ ತಮ್ಮ ಹೆಸರಿನ ಮುಂದೆ ವಾತ್ಸಲ್ಯದಿಂದ ಅರಕಲಗೂಡು ಎಂದು ಸೇರ್ಪಡೆ ಮಾಡಿಕೊಂಡಿದ್ದರು. ಅದೇ ಕಾರಣಕ್ಕಾಗಿ ಇವತ್ತಿಗೂ ಅನಕೃ ಎಂದೊಡನೆ ನೆನಪಾಗುವುದು ಅರಕಲಗೂಡು ಆಗಿದೆ. ಯಾರೂ ಅವರನ್ನು ಕೋಲಾರ ಜಿಲ್ಲೆಯವರೆಂದು ಹೇಳಲಾರರು. ಇಷ್ಟೇ ಯಾಕೆ ಅನಕೃ ನೆಲೆಯಾಗಿದ್ದ ವಾಸದ ಮನೆ ಇವತ್ತಿಗೂ ಅರಕಲಗೂಡಿನ ಬ್ರಾಹ್ಮಣರ ಬೀದಿಯಲ್ಲಿದೆ. ಆದರೆ ಅವರ ಸಂಬಂಧಿಗಳು ಯಾರೂ ಅಲ್ಲಿಲ್ಲ, ಅದನ್ನು ಬಹಳ ಹಿಂದೆಯೇ ಬೇರೆಯವರಿಗೆ ಮಾರಾಟ ಮಾಡಲಾಗಿದೆ! ಅವರ ಮಕ್ಕಳು ಅನಕೃ ಟ್ರಸ್ಟ್ ಮಾಡಿಕೊಂಡು ರಾಜಧಾನಿ ಬೆಂಗಳೂರಿನಲ್ಲಿ ಸ್ಮರಣೆ ಕಾರ್ಯಕ್ರಮ ಮಾಡುತ್ತಾರೆಯೇ ವಿನಹ ಅರಕಲಗೂಡಿನೆಡೆಗೆ ತಿರುಗಿ ನೋಡಿಲ್ಲ. ಆದರೆ ಅನಕೃ ನೆನಪಿಸಲು ಅರಕಲಗೂಡು ಪಟ್ಟಣದ ಪ್ರಮುಖ ವೃತ್ತಕ್ಕೆ ಅವರ ಹೆಸರನ್ನಿಡಲಾಗಿದೆಯಲ್ಲದೇ ಸುಂದರ ಮೂರ್ತಿಯನ್ನು ಮಂಟಪ ಕಟ್ಟಿ ಇರಿಸಲಾಗಿದೆ. ಪಟ್ಟಣದ ಗ್ರಂಥಾಲಯಕ್ಕೂ ಅನಕೃ ಸ್ಮಾರಕ ಗ್ರಂಥಾಲಯವೆಂದು ಹೆಸರಿಡಲಾಗಿದೆ. ವರ್ಷಕ್ಕೊಮ್ಮೆ ಅವರ ಕುರಿತ ಕಾರ್ಯಕ್ರಮಗಳು ಸ್ಥಳೀಯರ ಆಸಕ್ತಿಯ ಮೇರೆಗೆ ಏರ್ಪಾಡಾಗುತ್ತವೆಯಷ್ಟೇ. ಇರಲಿ ಅನಕೃ ಪ್ರವರ್ಧಮಾನಕ್ಕೆ ಬಂದುದು ಕಥಾಮಂಜರಿ ಹಾಗೂ ವಿಶ್ವವಾಣಿ ಎಂಬ ಪತ್ರಿಕೆಗಳನ್ನು ಸಂಪಾದಿಸುವ ಮೂಲಕ,ಆದರೆ ಸಾರ್ವಜನಿಕವಾಗಿ ಅಧಿಕೃತವಾಗಿ ಪರಿಚಯಗೊಂಡಿದ್ದು ಕನ್ನಡದ ಆಸ್ತಿ ಎಂದೇ ಪರಿಗಣಿತವಾಗಿರುವ ಮಾಸ್ತಿವೆಂಕಟೇಶ ಅಯ್ಯಂಗಾರ್ ಅವರ ಮೂಲಕ. ಅನಕೃ ಅವರ ಸಾಹಿತ್ಯ ಪ್ರೇಮ ಮತ್ತು ವಿದ್ವತ್ತನ್ನು ಗ್ರಹಿಸಿದ್ದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ತುಂಬಿದ ಸಭೆಯೊಂದರಲ್ಲಿ "ನಾನು ತಮಿಳು ಕನ್ನಡಿಗ, ಸರ್ ಮಿರ್ಜಾ ಇಸ್ಮಾಯಿಲ್ ಮುಸ್ಲಿಂ ಕನ್ನಡಿಗ ಆದರೆ ನಿಮ್ಮ ನಡುವೆ ನಿಮಗೆ ತಿಳಿಯದಂತೆ ಇರುವ ಈ ಯುವಕ ಅನಕೃ ಮಾತ್ರ 'ಅಚ್ಚ ಕನ್ನಡಿಗ" ಎಂದು ಪರಿಚಯಿಸಿದಾಗ ಕಿವಿಗಡಚುಕ್ಕುವ ಕರತಾಡನ ಮೊರೆಯಿತು. ಹೀಗೆ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಗೊಂಡ ಅನಕೃ ಬ್ರಿಟೀಷ್ ಆಡಳಿತದಲ್ಲಿ ಕಂಗೆಟ್ಟು ಹೋಗಿದ್ದ ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸುವ ಕೆಲಸವನ್ನು ಸಾಹಿತ್ಯದ ಪರಿಚಾರಿಕೆ ಮಾಡುವ ಮೂಲಕ ಆರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್ ಆರಂಭಿಸಿದ "ಕನ್ನಡ ನುಡಿ"ಗೆ ಸಂಪಾದಕರಾಗಿ ಇವರು ಮಾಡಿದ ಸೇವೆ ಅವಿಸ್ಮರಣೀಯವಾದುದು, ಒಮ್ಮೆ 1929ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಆರ್ ಆರ್ ದಿವಾಕರ್ಅವರ ಹಿಂದಿ ಬಾಷಾ ನೀತಿಯ ನಿಲುವುಗಳನ್ನು ಖಂಡಿಸಿ ಪರಿಷತ್ ಹೊರತರುತ್ತಿದ್ದ ಕನ್ನಡ ನುಡಿಯಲ್ಲಿ ಟೀಕಾತ್ಮಕ ಲೇಖನ ಬರೆದು ಪ್ರತಿಭಟಿಸಿದರು. ಕಡೆಗೆ ಪ್ರತಿಭಟನೆಯ ಭಾಗವಾಗಿ ತನ್ನ ಸಿದ್ದಾಂತವನ್ನು ಬಿಡದೇ ಕನ್ನಡ ನುಡಿಯ ಸಂಪಾದಕ ಹುದ್ದೆಯನ್ನೆ ತ್ಯಜಿಸಿ ಹೋದರು. ಆ ದಿನಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಮೊಟ್ಟ ಮೊದಲ ಬಾರಿಗೆ ಸಂಘಟಿಸಿ ಕನ್ನಡಿಗರ ಹಿತಕ್ಕೆ ಧಕ್ಕೆಯಾಗದಂತೆ ಧ್ವನಿಯೆತ್ತಿದ ಕನ್ನಡದ ಕಟ್ಟಾಳು ಈ ಅನಕೃ.
ಸತತವಾಗ 4ದಶಕಗಳ ಕಾಲ ಅಂದರೆ 40ವರ್ಷಗಳ ಕಾಲ ಸಾಹಿತ್ಯ ಕೃಷಿ ನಡೆಸಿದ ಅನಕೃ ಬರೆದ ಮೊದಲ ಕಾದಂಬರಿ "ಜೀವನಯಾತ್ರೆ", ಹೀಗೆ ಆರಂಭವಾದ ಸಾಹಿತ್ಯ ಸೇವೆಯಲ್ಲಿ 100ಕ್ಕೂ ಹೆಚ್ಚು ಕಾದಂಬರಿಗಳು, ಕಥೆಗಳು, ನಾಟಕಗಳು, ವಿಮರ್ಶೆಗಳು, ಲೇಖನಗಳು ಸಂಪಾದಿತ ಕೃತಿಗಳನ್ನು ಅನಕೃ ರಚಿಸಿದ್ದಾರೆ. ಕನ್ನಡ ಸಾರಸ್ವತ ಲೋಕದಲ್ಲಿ ಅನಕೃ ಬರೆದಷ್ಟು ವೈವಿಧ್ಯಮಯ ಸಾಹಿತ್ಯವನ್ನು ಕನ್ನಡದ ಯಾವ ಸಾಹಿತಿಯೂ ಬರೆದಿಲ್ಲ ಎಂಬುದು ಗಮನಾರ್ಹ. ಅಷ್ಟೇ ಏಕೆ ದೇಶದ ಸಾಹಿತ್ಯ ಲೋಕದಲ್ಲಿ ಇವರಷ್ಟು ಸಂಖ್ಯೆಯ ಕಾದಂಬರಿಗಳನ್ನೂ ಯಾರೂ ಬರೆದಿರಲಾರರು. ಅವರ ಕಾದಂಬರಿಗಳು ಹಾಗೆಯೇ ಕಪೋಲ ಕಲ್ಪಿತವಲ್ಲ, ವಾಸ್ತವಕ್ಕೆ ಹತ್ತಿರವಾದ ಮತ್ತು ಜನಸಾಮಾನ್ಯರ ನಡುವಣ ಕಥಾನಕಗಳೇ ಕಾದಂಬರಿಯ ವಸ್ತುಗಳಾಗಿ ಪಾತ್ರಗಳಾಗಿ ರೂಪು ತಳೆದಿವೆ. ಆಳವಾದ ಅಧ್ಯಯನ ಶೀಲತೆ ಮತ್ತು ಅದನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಅಕ್ಷರ ರೂಪದಲ್ಲಿ ಉಣಬಡಿಸುತ್ತಿದ್ದ ರೀತಿ ಸಾಹಿತ್ಯ ಪ್ರಿಯರಿಗೆ ಹಬ್ಬದೂಟವಾಗುತ್ತಿತ್ತು!
      ನವೋದಯ ಸಾಹಿತ್ಯದ ಆರಂಭದ ದಿನಗಳಲ್ಲಿ ಸಾಹಿತ್ಯ ಸೇವೆ ನಡೆಸಿದ ಅನಕೃ ಸತ್ಯ ಮತ್ತು ವಾಸ್ತವ ಅಂಶಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರಲ್ಲದೇ ಪ್ರಗತಿಶೀಲ ಸಾಹಿತ್ಯ ಚಳುವಳಿಯನ್ನು ತಮ್ಮ ಕೃತಿಗಳ ಮೂಲಕ ಆರಂಭಿಸಿಯೆ ಬಿಟ್ಟರು. ಇದು ಅಂದಿನ ದಿನಗಳಲ್ಲಿ ಬಹು ಚರ್ಚಿತ ವಿಷಯವಾಗಿತ್ತು. ಆ ಕಾಲಕ್ಕೆ ಪ್ರಗತಿ ಶೀಲ ಸಾಹಿತ್ಯದ ಪರಿಣಾಮ ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಯಿತು, ತ.ರಾ ಸುಬ್ಬರಾಯರು, ಬಸವರಾಜ ಕಟ್ಟಿಮನಿ ಮತ್ತು ನಿರಂಜನ ಪ್ರಗತಿಶೀಲ ಸಾಹಿತ್ಯದ ಮೂಲಕ ಅನಕೃ ಅವರನ್ನು ಹಿಂಬಾಲಿಸಿದರು. ಆ ಮೂಲಕ ಒಂದು ಹೊಸ ಶಕೆಯೇ ಸೃಷ್ಟಿಯಾಯಿತು. ಆ ಅನಕೃ ದಿನಗಳಲ್ಲಿ ಬರೆದ ನಗ್ನಸತ್ಯ, ಸಂಜೆಗತ್ತಲು ಹಾಗೂ ಶನಿಸಂತಾನ ಕೃತಿಗಳು ವೇಶ್ಯಾವೃತ್ತಿಯ ವಿಷಯವನ್ನು ವಿಷಧ ಪಡಿಸಿದ್ದು ಅದೊಂದು ಅಶ್ಲೀಲ ಸಾಹಿತ್ಯ ಎಂದು ಟೀಕೆಗಳು ವ್ಯಕ್ತವಾದವು, ಆದರೆ ಅದಕ್ಕೆ ಪ್ರತ್ಯುತ್ತರವಾಗಿ ಸಾಹಿತ್ಯ ಮತ್ತು ಕಾಮಪ್ರಚೋದನೆ ಎಂಬ ಪುಸ್ತಕ ಬರೆದು ವಿರೋಧಿಗಳಿಗೆ ಸಮರ್ಪಕವಾಗಿ ಉತ್ತರಿಸಿದ ಅನಕೃ ಪ್ರಶಂಸೆಗೂ ಪಾತ್ರರಾದರು. ಅನಕೃ ರಚಿಸಿದ ಹೆಚ್ಚು ಪ್ರಸಿದ್ದಿ ಪಡೆದ ಕಾದಂಬರಿ ಸಂಧ್ಯಾರಾಗ ಕನ್ನಡದಲ್ಲಿ ಸಿನಿಮಾ ಆಗಿಯೂ ಹೊರಬಂತು. ನಾಟಕ ರಚನೆಯಲ್ಲಿ ಜೀವನ್ಮುಖಿ ಪಾತ್ರಗಳನ್ನು ಸೃಷ್ಟಿಸುತ್ತಿದ್ದ ಅನಕೃ ಆ ಪಾತ್ರಗಳ ಮೂಲಕ ಪರಿಣಾಮಕಾರಿ ಸಂಭಾಷಣೆಗಳನ್ನು ಕಟ್ಟಿಕೊಡುತ್ತಿದ್ದರು ಇದು ಅವರ ಜನಪ್ರಿಯತೆಯನ್ನು ಮತ್ತಷ್ಟು ಇಮ್ಮುಡಿಗೊಳಿಸಿತ್ತು. ಮಣಿಪಾಲದಲ್ಲಿ ನಡೆದ 43ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಅನಕೃ ಅವರಿಗೆ ಗೌರವಾರ್ಥವಾಗಿ ಮೈಸೂರು ವಿವಿಯು ಕೂಡ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಅವರ ಕೃತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರಕ್ಕೂ ಕಾರಣವಾಗಿವೆ.
ಇಂತಹ ಅನಕೃ ಗೋಕಾಕ್ ಚಳುವಳಿಯನ್ನು ಸಂಘಟಿಸುವ ಮೂಲಕ ಕನ್ನಡಿಗರ ಹಿತಕ್ಕೆ ಧಕ್ಕೆ ತರುವ ವಿವಿಧ ಆಯಾಮಗಳ ವಿರುದ್ದ ಸ್ಪಷ್ಟ ಸಂದೇಶ ಸಾರಿದ್ದರು. ಇವತ್ತು ನಡೆಯುತ್ತಿರುವ ಕನ್ನಡ ಚಿತ್ರಗಳ ಡಬ್ಬಿಂಗ್ ವಿವಾದ ಇರಬಹುದು. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ಆಡಳಿತದಲ್ಲಿ ಕನ್ನಡ ಭಾಷೆ, ನದಿ ನೀರಿನ ಹಂಚಿಕೆ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಹಲವು ಕನ್ನಡ ಪರ ಹೋರಾಟಕ್ಕೆ ಮತ್ತು ಚಿಂತನೆಗೆ ಒತ್ತಾಸೆಯಾಗಿ ನಾಯಕತ್ವ ನೀಡಿದ್ದು ಇದೇ ಅನಕೃ. ಆದರೆ ಇವತ್ತಿನಕನ್ನಡ ಚಳುವಳಿಯ ಮಂಚೂಣಿಯಲ್ಲಿ ನಿಂತವರ ಮನಸ್ಥಿತಿ ಹಾಗಿಲ್ಲ ಬದಲಿಗೆ ಕನ್ನಡದ ಹೆಸರಿನಲ್ಲಿ ಮೆರೆಯುವ, ದುಡ್ಡು ದೋಚುವ, ಪ್ರತಿಷ್ಟೆಗಾಗಿ ಹವಣಿಸುವ, ವಿವಿಧ ಅವಕಾಶಗಳಿಗಾಗಿ ಕನ್ನಡದ ಹೆಸರನ್ನು ಬಳಸುವ ಜನರೇ ಹೆಚ್ಚು. ಸಧ್ಯ ರಾಜ್ಯ ಕಸಾಪ ಕ್ಕೆ ಆಯ್ಕೆಯಾಗಿರುವ ಪುಂಡಲಿಕ ಹಾಲಂಬಿ ಆ ನಿಟ್ಟಿನಲ್ಲಿ ಸಜ್ಜನರು ಹಾಗೂ ಬದ್ದತೆ ಪ್ರದರ್ಶಿಸುವ ಮನೋಭಾವದವರು. ಇವರು ಸಹಾ ಹುಟ್ಟಿದ್ದು ಮತ್ತು ಪ್ರೌಢಶಾಲ ಹಂತದ ಶಿಕ್ಷಣ ಪೂರೈಸಿದ್ದು ಅರಕಲಗೂಡಿನಲ್ಲೇ, ಕನ್ನಡ ಜಾನಪದ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ಡಾ ಎಚ್ ಜೆ ಲಕ್ಕಪ್ಪ ಗೌಡ ಕೂಡ ಅರಕಲಗೂಡಿನವರೇ ಆಗಿದ್ದಾರೆ. ಇಂಥಹವರ ಮಾರ್ಗದರ್ಶನದಲ್ಲಿ ಅನಕೃ ಜನ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮತ್ತು ಕನ್ನಡ ಚಳುವಳಿಗೆ ಶಕ್ತಿ ತುಂಬುವ ಕೆಲಸ ಆಗಬೇಕಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...